ಎಲ್ಲಾ ಬಯಲಿಲ್ಲಿ..
ಈ ಬದುಕಿನ ಪರಿಯೆ ವಿಚಿತ್ರ. ಬದಲಾವಣೆ ಬದುಕಿನ ಸಹಜ ನಿಯಮ ಎಂದು ಹೇಳುತ್ತಲೆ ಇರುತ್ತಾರೆ, ನಾವು ಕೇಳುತ್ತಲೆ ಇರುತ್ತೇವೆ. ಆದರೆ ತೀರಾ ಇತ್ತೀಚಿನವರೆಗು ನಮ್ಮ ತೀರಾ ಖಾಸಗಿ ಬದುಕಿಗು, ಅದೇ ಬದುಕಿನ ಸಾರ್ವಜನಿಕ ಮುಖವಾಡಕ್ಕು ಒಂದು ತೆಳು ಪರದೆ ಅಡ್ಡವಿರುತ್ತಿತ್ತು. ಪ್ರತಿಯೊಬ್ಬರಿಗು ಒಂದು ರೀತಿಯ ಆಯ್ಕೆಯ ಸ್ವೇಚ್ಛೆಯಿತ್ತು – ಎಷ್ಟು ಖಾಸಗಿಯಿರಬೇಕು, ಮಿಕ್ಕೆಷ್ಟು ಸಾರ್ವತ್ರಿಕವಿರಬೇಕು ಎಂದು ನಿರ್ಧರಿಸಿಕೊಳ್ಳಲು.
ಆದರೀಗ ನೋಡಿ – ತಂತ್ರಜ್ಞಾನದ ಕ್ರಾಂತಿಯೊ, ಹೊಸ ಸಾಧ್ಯತೆಗಳ ತೆರೆದಿಟ್ಟ ಶರಧಿಯೊ – ಹೆಚ್ಚೆಚ್ಚಾಗಿ ಎಲ್ಲವು ಬಯಲಿಗೆ ಬಂದು ಬೀಳುವ ಪರಿ. ಅದೇನು ಪ್ರಜ್ಞಾಪೂರ್ವಕವಾಗಿ ಬಂದು ಬೀಳುವ ಸರಕೊ, ಮುಗ್ದತೆಯ ಅರೆಬರೆ ಅರಿವಿನ ದೆಸೆಯಿಂದ ಬಯಲಾಗುತ್ತಿರುವ ತುಣುಕೊ ಹೇಳುವುದು ಕಷ್ಟ. ಬಹುಶಃ ಎರಡರ ಮಿಶ್ರಣವೆಂದೆ ಹೇಳಬಹುದು. ಆದರೆ ಫಲಿತಾಂಶ ಮಾತ್ರ ಒಂದೆಡೆ ದಿಗಿಲು ಹುಟ್ಟಿಸುವಂತದ್ದು, ಮತ್ತೊಂದೆಡೆ ಮುಗಿಲು ಮುಟ್ಟಿಸುವಂತಾದ್ದು. ಏನು, ಎಷ್ಟು, ಹೇಗೆ, ಏಕೆ ಎಂಬುದರ ಅರಿವು ಪರಿವೆಯಿದ್ದೊ ಇಲ್ಲದೆಯೊ ಹೆಚ್ಚೆಚ್ಚು ಖಾಸಗಿತನ ಬಯಲಿಗೆ ಬಂದು ಬೀಳುತ್ತಿರುವುದಂತು ಸತ್ಯ..
ಇದನ್ನೆ ನಮ್ಮ ಸಾಂಸ್ಕೃತಿಕ ಪರಿಸರದ ಆವರಣದಲ್ಲಿ ನೋಡಿದಾಗ ಇದೆ ಬಗೆಯ ದ್ವಂದ್ವ ತೆರೆದುಕೊಳ್ಳುತ್ತದೆ. ಹೇಳದೆ ಕೇಳದೆ ಹೋಗುವ ಮಕ್ಕಳೆಲ್ಲಿ ಹೋದರೆಂದು ತಲೆ ಚಚ್ಚಿಕೊಳ್ಳುವ ಅಪ್ಪ ಅಮ್ಮಂದಿರು, ತುಸು ತಂತ್ರ’ಜ್ಞಾನಿ’ಗಳಾದರೆ ಅವರ ಫೇಸ್ಬುಕ್, ಟ್ವಿಟ್ಟರುಗಳ ಜಾಡು ಹಿಡಿದು ಅವರ ಮರಳಿನ ಹೆಜ್ಜೆಗಳನ್ನು ಶೋಧಿಸಬಹುದು.. ಅವರ ಯೂ ಟ್ಯೂಬ್, ವಾಟ್ಸಪ್ಪಿನಂತಹ ಗದ್ದಲದ ನಾಡಿನಲ್ಲಿ ಅವರೇನು ಮಾಡುತ್ತಿದ್ದಾರೆಂದು ಖಚಿತ ಪಡಿಸಿಕೊಳ್ಳಬಹುದು. ಅದೇ ರೀತಿ ಆ ಮಕ್ಕಳದೇನು ಕಡಿಮೆಯ ಸ್ತರದ್ದಲ್ಲ – ಹೇಳಿಕೊಳ್ಳಲಾಗದ ಎಷ್ಟೊ ವಿಷಯಗಳಿರುತ್ತವೆ. ಅವನ್ನೆಲ್ಲ ಎಲ್ಲಾದರೊಂದು ಕಡೆ ಹರಿಯಬಿಟ್ಟರೆ ಬಾಯ್ಬಿಡದೆ ನೀವೇದಿಸಿಕೊಂಡಂತಾಗುತ್ತದೆ.. ಗುಟ್ಟಾಗಿಡುವಂತದ್ದನ್ನು ಆಪ್ತ ವಲಯದಲಷ್ಟೆ ಹಂಚಿಕೊಳ್ಳುವ ಹುಷಾರಿತನ ತೋರಿಸಿದರೆ ಸಾಕು..
ಅದೆ ಕತ್ತಿಯ ಮತ್ತೊಂದು ಅಲುಗಿನ ತುದಿಯೆಂಬಂತೆ ಆ ತರತರದಾಟದಲ್ಲೆ, ತಮ್ಮರಿವಿಲ್ಲದಂತೆಯೆ ಖಾಸಗಿತನದ ಅಂಶಗಳನ್ನು ಬಯಲಿಗಿಡಿಸಿಬಿಡುತ್ತದೆ ಅದೇ ತಂತ್ರಜ್ಞಾನ. ಅದರ ಸಾಧಕ ಬಾಧಕ ಸತ್ಪರಿಮಾಣ, ದುಷ್ಪರಿಮಾಣಗಳು ಸುಲಭದ ಎಟುಕಿಗೆ ನಿಲುಕದ ಕಾರಣಕ್ಕೊ ಏನೊ ಅದರ ಕುರಿತು ತಲೆ ಕೆಡಿಸಿಕೊಳ್ಳುವವರೂ ಕಮ್ಮಿಯೆ.
ಅದೇನೆ ಆದರು ಒಂದು ರೀತಿಯ ಕನಿಷ್ಠ ಜಾಗೃತಾವಸ್ಥೆಯಲ್ಲಿರುವಂತೆ ನೋಡಿಕೊಳ್ಳುವುದು ಸೂಕ್ತ ಮುಂಜಾಗರೂಕತಾ ಕ್ರಮವೆಂದೆ ಹೇಳಬಹುದು – ತೀರಾ ರಿಸ್ಕಿಗೊಡ್ಡಿಕೊಳ್ಳುವ ಮಟ್ಟಕ್ಕಿಳಿಯದೆ. ಈ ಮೇಲಿನ ಮಾತಿಗೆಲ್ಲ ಸಂವಾದಿಯಾಗಿರುವಂತೆ ಇಲ್ಲೊಂದು ಪುಟ್ಟ ಪದ್ಯ – ಲಘು ಲಹರಿಯಲ್ಲಿ 🙂
ಹೊರಡಬೇಕಿದೆ ಎಲ್ಲಿಗೊ
ತೊಳೆದುಕೊಬೇಕು ‘ಫೇಸ್’ಬುಕ್
ಮುಖ ತಾನೆ ಕನ್ನಡಿ ?
ಪುಸ್ತಕದಂತೆ ಮುನ್ನುಡಿ ||
ಹೇಳದೆ ಹೋಗುವುದೆಂತು
ಹಾಕೆರಡು ಸಾಲು ಟ್ವಿಟ್ಟರು
ಹೇಳದೆ ಹೋದರೆ ಬೈದು
ಕಾಡುವಳಮ್ಮ ನೊಂದು ||
ಹೇಳಬೇಕೇನೇನೊ ಜಗಕೆ
ದೃಶ್ಯ ವೈವಿಧ್ಯ ಯೂ ಟ್ಯೂಬಲಿ
ಏರಿಸಿಬಿಡಷ್ಟು ತುಣುಕು
ಹೇಳದ ಮಾತ ಸಂಕೋಚದಲಿ ||
ಮಾತಿಲ್ಲದುಂಟೆ ಬದುಕು
ಕೇಳಬೇಕಲ್ಲಾ ‘ವಾಟ್ಸ್ ಅಪ್ ?’
ಸೇರಿಸಿಕೊ ನಿನದೆ ಗುಂಪು
ಗ್ಯಾಂಗಲಿ ತಾನೆ ‘ವೀ ಚಾಟ್’ ||
ಕಳುವಾಗುವ ಚಿಂತೆ ಬೇಡ
ಹುಡುಕಾಡುವರು ಗೂಗಲ್ಲಲಿ
ಸಿಕ್ಕಿ ಬಿದ್ದೆ ಬೀಳುವೆ ಒಂದೊಮ್ಮೆ
ಈಗಿನ ಬದುಕೆ ಬಟ್ಟ ಬಯಲಲಿ ||
– ನಾಗೇಶ್ ಎಮ್. ಎನ್.