ಅನುರಾಗ ಸಿಂಚನ
ನಾ ಭುವಿಯಾದೆ, ನೀ ಮುಗಿಲಾದೆ
ಒಂದಾಗಿಸಿದೆ ನಮ್ಮಿಬ್ಬರ, ಈ ಪ್ರೀತಿಯಾ ಸೋನೆ ಮಳೆ.
ಮಳೆಯ ಹನಿಯ ಸಿಂಚನ ಚಿಗುರಿಸಿದೆ ಹೊಸ ಚೇತನವ
ರಮಿಸಿದೆ ಒಣಗಿದ್ದ ಬರಡು ನೆಲವ.
ಎದೆಯ ಬಾಗಿಲಿಗೆ ಹನಿ ಬಿದ್ದ ಸದ್ದು,
ಹಿತವಾಗಿದೆ, ಸುಖವೆನಿಸಿದೆ.
ಮಧ್ಯರಾತ್ರಿಯ ಮೌನವ ಸೀಳಿದ ಆ ಹನಿಯ ಸದ್ದು,
ನುಡಿಸುತ್ತಿದೆ ಅನುರಾಗದ ಸ್ವರಗಳ, ಮತ್ತೆ ಬಿದ್ದು.
ಎದೆಯೊಳಗಣ ತುಂಬಿತುಳುಕುವ ಪ್ರೀತಿಯ ತರಂಗಗಳೊಳಗೊಂದು ಪ್ರೇಮಕಾವ್ಯ,
ಮಧುರ ಕಾವ್ಯಕ್ಕೊಂದು ಹೊಸ ರಾಗ ತಾಳ.
ಇಳೆಯ ಕೆನ್ನೆಯ ತುಂಬಾ ಮುಗಿಲು ಸುರಿಸಿದ ಮುತ್ತಿನಾ ಹನಿಗಳು
ರೆಪ್ಪೆಯ ಅಂಚಿನಿಂದ ಜಾರಿ, ಕೆನ್ನೆಯಾ ಗುಳಿಯೊಳು
ಪವಡಿಸಿದಾ ನಗುವಿನಾ ಸ್ಪಟಿಕಗಳು.
ಚಂದಿರನೂ ಮಂಕಾಗಿ ಕುಳಿತಿರಲು,
ಮಳೆ ಸುರಿವ ನೆಪವಿರಲು,
ಮಧುರ ಮೌನವೇ ಹಿತವೆನಿಸದಿರು.
ಕೋಪ-ತಾಪ, ದುಗುಡ ದುಮ್ಮಾನ ನೀರ ಸೆರೆಯೊಳು
ನಿನ್ನ ಪ್ರೀತಿಯ ಹರಿವಿಗೆ ಮತ್ತೆ ಮರೆಯೊಳು
ನೈದಿಲೆಯು ಬಿರಿದು ನಗುವ ಸದ್ದು ಕಾರಿರುಳು.
ಪ್ರೀತಿಯ ಮಳೆಯ ಸ್ಪರ್ಶಕೆ ಇಳೆಯು,
ಭಾವದಾ ಕಡಲೊಳೊಂದಾಗಿ ಬೆರೆತು,
ಬರೆದಿದೆ ಅಮರಪ್ರೇಮಕ್ಕೊಂದು ಹೊಸ ಭಾಷ್ಯವಿಂದು.
–ಸಹನಾ ಪುಂಡಿಕಾಯಿ
ಪ್ರೇಮ ಕಾವ್ಯ ದ ಧಾರೆ ಹೀಗೆ ಸದಾ ಹರಿಯುತ್ತಿರಲಿ..ಕವಿತೆ ಹಿತವಾಗಿದೆ
ಧನ್ಯವಾದಗಳು…ಸರ್….