ತಸ್ಮೈ ಶ್ರೀಗುರುವೇ ನಮಃ
ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ:
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮ;
ಶ್ರೀ ಗುರುಗಳಲ್ಲಿ ಬ್ರಹ್ಮನನ್ನೂ,ವಿಷ್ಣುವನ್ನೂ,ಮಹೇಶ್ವರನನ್ನೂ ಕಾಣುವುದರೊಂದಿಗೆ ಗುರುವಿಗೆ ಶಾಶ್ವತವಾದ [ಪರಬ್ರಹ್ಮ] ಸ್ಥಾನವನ್ನೂ ಸ್ಥಾಪಿಸಿದ ಸುಸಂಸ್ಕೃತಿ ನಮ್ಮದು. ತ್ರಿಮೂರ್ತಿಗಳಿಗಾದರೋ ಅವರವರಿಗೆ ನಿಯಮಿತವಾದ ಸೃಷ್ಟಿ, ಸ್ಥಿತಿ,ಲಯಗಳ ಕೆಲಸವಾದರೆ, ಶ್ರೀಗುರುವು ಮೂವರು ದೇವರ್ಕಳ ಕೆಲಸವನ್ನೂ ಮಾಡಬೇಕಾಗುತ್ತದೆ. ಒಳ್ಳೆಯ ಶಿಷ್ಯ ಕೋಟಿಯನ್ನು ಸೄಷ್ಟಿಸುವುದು, ಅವರಿಗೆಲ್ಲ ಉತ್ತಮವಾಗಿ ಬದುಕಲು ಕಲಿಸುವುದು,ಹಾಗೆಯೇ ಮಹೇಶ್ವರನಿಗೆ ಸಂಬಂಧ ಪಟ್ಟಂತೆ ಹೇಳುವುದಾದರೆ, ಶಿಷ್ಯರಲ್ಲಿರುವ ದುರ್ಗುಣ, ದುಶ್ಚಟ, ದುರ್ನೀತಿಗಳನ್ನು ಲಯವಾಗಿಸಲು ಅಹರ್ನಿಷ ಪ್ರಯತ್ನಿಸುವುದೇ ಆಗಿದೆ ಎಂದು ಅರ್ಥೈಸಬಹುದು.
“ಗುರು” ಎಂಬ ಶಬ್ಧದ ಅರ್ಥವ್ಯಾಪ್ತಿ ವಿಶಾಲವಾಗಿದ್ದು ನಮ್ಮ ಬದುಕಿನಲ್ಲಿ ಹಾದುಹೋಗುವ ಸಂಬಂಧವನ್ನು ಗುರುಸ್ಥಾನಕೊಟ್ಟು, ಗೌರವಿಸಲು ಪೂರ್ವಜರು ನಿರೂಪಿಸುವುದು ಹೀಗೆ:
- ಆಚಾರ್ಯ[ಶಿಕ್ಷಣನೀಡುವವ, ಪುರೋಹಿತ]
- ತಂದೆ-ತಾಯಿ
- ಜೇಷ್ಠ ಸಹೋದರ
- ರಾಜ
- ಸೋದರಮಾವ
- ಶ್ವಶುರ[ಪತಿಯ ತಂದೆ ಅಥವಾ ಪತ್ನಿಯ ತಂದೆ]
- ರಕ್ಷಣೆ ನೀಡುವವನು
- ಮಾತಾಮಹ
- ಪಿತಾಮಹ
- ವರ್ಣಜೇಷ್ಟ [ಕುಟುಂಬದಲ್ಲಿ ಹಿರಿಯ]
- ಪಿತೃವ್ಯ[ತಂದೆಯ ಸಹೋದರ]
ವಾಹ್…,ಎಷ್ಟೊಂದು ಸಂಬಂಧಗಳಿವೆ ಗುರು ಸ್ಥಾನದಲ್ಲಿ ನಿಂತು ನಮ್ಮನ್ನು ಕಾಪಾಡುವುದಕ್ಕೆ! ಈ ಕುರಿತಾದ ಚಿಂತನೆ ನಮ್ಮ ಸಕಲ ಶ್ರೇಯೋಭಿವೃದ್ದಿಗೆ ಖಂಡಿತ ಪೂರಕವಾಗಬಹುದಲ್ಲ!! ಇವರುಗಳೊಂದಿಗೆ ಮಾತನಾಡುವಾಗ ಗುರುಮುಖವನ್ನು ಕಂಡಿದ್ದಾದಲ್ಲಿ ನಾವು ವಿನೀತರಾಗುತ್ತೇವೆ ತಾನೇ?! ಹಾಗಿರುವಾಗ ಅಲ್ಲಿ ವೈಮನಸ್ಯಕ್ಕೋ ಜಗಳಕ್ಕೋ ಎಡೆಯುಂಟೇ? ಎಂತಹಾ ಅದ್ಭುತ ಸಮಾಜ ಸ್ವಾಸ್ಥ್ಯ ಕಾಪಾಡುವ ಯೋಚನೆ ನಮ್ಮ ಸನಾತನೀಯ ಕಟ್ಟಳೆಯಲ್ಲಿ!
ದೇವಾಸುರರಿಗೂ ಗುರುನೆಲೆಯಿತ್ತು. ದೇವಗುರು ಬೃಹಸ್ಪತಾಚಾರ್ಯರಾದರೆ, ಅಸುರಗುರು ಶುಕ್ರಾಚಾರ್ಯ. ಪುರಾತನದಲ್ಲೇ ಗುರುವಿಗೂ ಶಿಷ್ಯನಿಗೂ ಅವಿನಾಭಾವ ಸಂಬಂಧವಿತ್ತು. ಶಿಷ್ಯನಿಗೆ ಗುರುವಿನಮೇಲೆ ಪೂಜ್ಯತಾಭಾವ ಇದ್ದಂತೆಯೇ ಗುರುವಿಗೂ ಶಿಷ್ಯನಲ್ಲಿ ಅತೀವ ಕಕ್ಕುಲಾತಿ ಇತ್ತು.ಎಂಬುದಕ್ಕೆ.., ಉದಾಹರಣೆಯಾಗಿ, ಶುಕ್ರರು ಹಾಗೂ ಬಲಿಚಕ್ರವರ್ತಿಯ ಕತೆ ನಮ್ಮ ಮುಂದಿದೆ. ಶಿಷ್ಯನ ಹಿತ ಕಾಯುವುದಕ್ಕೆ ಹೋಗಿ ಶುಕ್ರರು ತಮ್ಮ ಕಣ್ಣನ್ನೇ ತ್ಯಾಗ ಮಾಡಬೇಕಾಗಿ ಬಂತಲ್ಲವೇ?. ಹಾಗೆಯೇ ಬೃಹಸ್ಪತಿಯು ದೇವತೆಗಳನ್ನು ಕಾಪಾಡುವುದಕ್ಕಾಗಿ, ತನ್ನ ಮಗ ‘ಕಚ’ನನ್ನು ಮೃತಸಂಜೀವಿನಿ ಕಲಿತಿದ್ದ ಶುಕ್ರಾಚಾರ್ಯರಲ್ಲಿಗೆ ಕಳುಹಿಸುವುದು, ಅವನು ಶುಕ್ರರ ಮಗಳು ದೇವಯಾನಿಯನ್ನು ಪ್ರೀತಿಸಿ ತನ್ನ ಕಾರ್ಯ ಸಾಧಿಸಿಕೊಂಡು ಹಿಂದಿರುಗುವುದು, ಇದೆಲ್ಲನಮಗೆ ಪುರಾಣಗಳಿಂದ ವೇದ್ಯ. ಮನುಜನ ಬದುಕಿನಲ್ಲಿ, ಗುರುವಿಗೊಂದು ಶ್ರೇಷ್ಟನೆಲೆ ಇದೆ ಎಂಬುದು ನಿರ್ವಿವಾದ. ಒಂದುವೇಳೆ ಆ ನೆಲೆ ಇಲ್ಲದೆ ಹೋದರೆ……? ” ಗುರು ನೆಲೆ ಇಲ್ಲಾದೊರು ನೆಲೆ ಇಲ್ಲ.” ಎಂಬುದಾಗಿ ಮಲೆಯಾಳದಲ್ಲೊಂದು ನಾಣ್ಣುಡಿಯೂ ಇದೆ. ಹಾಗೆಯೇ ಗುರುಸ್ಥಾನಗಳಿಗೆ ಏನಾದರೂ ದ್ರೋಹ ಬಗೆದರೆ, ಅಪಚಾರವಾದರೆ, ಆಗಬಾರದ್ದು ಆಗಿಹೋದರೆ, “ಗುರುಕೋಪ” ಎಂಬ ದೋಷ ಆ ವ್ಯಕ್ತಿಗೆ ಭಾಧಿಸುವುದೂ ಸುಳ್ಳಲ್ಲ. ಅತ್ಯಂತ ಮೌಲ್ಯಯುತವಾದ ವಸ್ತುಗಳನ್ನು ಎಷ್ಟು ಜಾಗ್ರತೆಯಿಂದ ಜತನ ಮಾಡುತ್ತೇವೆಯೋ ಅಂತೆಯೇ ನಮ್ಮ ಗುರುಸ್ಥಾನವನ್ನೂ ನೇಮ ನಿಷ್ಟೆಯಿಂದ ಕಾಯ್ದುಕೊಂಡಿದ್ದಾದಲ್ಲಿ ಸಕಲ ಶ್ರೇಯಸ್ಸು ಎಂದಾಯಿತು. ನಮ್ಮ ಪೀಠಾಧಿಪತಿಗಳಾದ ಶ್ರೀಗುರುಗಳ ವಚನದಂತೆ “ಮಾಡಬೇಕಾದ್ದು ಮಾಡಿದರೆ ಆಗಬೇಕಾದ್ದು ಆಗುತ್ತದೆ. ಮಾಡಬೇಕಾದ್ದು ಮಾಡದಿದ್ದರೆ, ಆಗಬೇಕಾದ್ದು ಆಗುವುದೂ ಇಲ್ಲ.” ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬಹುದು. .
ನವಗ್ರಹಗಳಲ್ಲೂ ಗುರು ಗ್ರಹಕ್ಕೆ ಆದ್ಯತೆ. ಯಾವುದೇಪ್ರಮುಖ [ಮದುವೆ, ಬ್ರಹ್ಮೋಪದೇಶ, ಗೃಹಪ್ರವೇಶ,] ಶುಭ ಕಾರ್ಯಗಳಿಗೆ, ಕರ್ತನ ಜಾತಕದಲ್ಲಿ ಗುರುಬಲವಿಲ್ಲದೆ ಹೋದರೆ, ಮಾಡುವುದಕ್ಕೆ ಕಾಲ ಸೂಕ್ತವಲ್ಲ ಎಂಬುದು ಮುಹೂರ್ತಿಕರ ನಿರ್ಣಯ. ಹಾಗೆಯೇ ಕಾಲಕ್ಕೆ ಗುರು ಮೌಢ್ಯ ಒದಗಿದರೂ ಸರ್ವತ್ರ ಗುರುಬಲವಿಲ್ಲ ಎಂಬುದು ಜ್ಯೋತಿಷ್ಯಶಾಸ್ತ್ರ. ನಮ್ಮಲ್ಲಿ ಯಾವುದಾದರೂ ಉನ್ನತ ನಿರ್ಣಯಕ್ಕೆ, ವಿಶೇಷ ಕಾರ್ಯಕ್ರಮಕ್ಕೆ ,”ಗುರುಹಿರಿಯರಿದ್ದು “ನಿರ್ಣ್ಯಯಿಸಿರುತ್ತೇವೆ.” ಎಂಬುದೂ “ಗುರುದೇವತಾನುಗ್ರಹದಿಂದ” ಎಂಬುದಾಗಿ ನಿರೂಪಿಸುವುದೂ ಗುರುಕಾಣಿಕೆ ಇಡುವಂತಾದ್ದು, ಎಲ್ಲವೂ ಶ್ರೀಗುರುಪೀಠವನ್ನು ಅನವರತ ಸ್ಮರಿಸಿಕೊಳ್ಳುವ ಸನಾತನ ನಂಬಿಕೆ .
– ವಿಜಯಾಸುಬ್ರಹ್ಮಣ್ಯ,ಕುಂಬಳೆ,