ದಯವಿರಬೇಕು ಸಕಲ ಪ್ರಾಣಿಗಳಲ್ಲಿ.
ಬದುಕು ಮೂರಕ್ಷರದಷ್ಟೆ ಚಿಕ್ಕದು ಇಲ್ಲಿ ಬಂದ ನಾವೂ ಅನುಭವಿಸಬೇಕಾದ ನೋವು ನಲಿವು ಹಲವು. ಮನುಷ್ಯ ಸಂಘಜೀವಿ ಆತ ಮನುಷ್ಯರೊಂದಿಗಾಗಲಿ ಪ್ರಾಣಿ ಪಕ್ಕಿಗಳೊಂದಿಗಾಗಲಿ ಹೊಂದಾಣಿಕೆಯಿಂದ ಬದುಕಿ ಬಾಳಬಲ್ಲ.ಇದೇನಿದು ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಮನುಷ್ಯನ ಬಗ್ಗೆ ಹೇಳುತ್ತಿದ್ದಾನೆ ಎಂದುಕೊಂಡಿರಾ ಬನ್ನಿ…….
ರೈತರು ತಮ್ಮ ಹೊಲಗದ್ದೆ ಕಣ ಕಟ್ಟೆ ಮನೆಯ ಕಾವಲಿಗೆ ಮತ್ತು ಪ್ರೀತಿಗೆ ನಾಯಿ ಸಾಕುವದು ಸಹಜ ಹಂತಹ ನಿಯತ್ತಿನ ನಾಯಿಗಳ ಪೈಕಿನನ್ನ ಮೂರುದಶಕದಲ್ಲಿ ನಾಕಂಡ ನಮ್ಮ ಮನೆಯ ಮೂರು ನಾಯಿಯ ಬಗ್ಗೆ ಹಂಚಿಕೊಳ್ಳಬೇಕೆನಿಸಿತು.
ನಾನು ಉತ್ತರ ಕರ್ನಾಟಕದ ಒಂದು ಹಳ್ಳಿಯ ರೈತನ ಮಗ ಹಾಗಿದ್ದ ಮೇಲೆ ನಮಗೂ ಆ ರೈತನ ಗತ್ತು ರಕ್ತದಲ್ಲೆ ಬಂದುಬಿಟ್ಟಿತು.ಹೀಗೆ ಬೆಳೆದಂತೆ ದನ ಹಸು ಕರು ಹೋರಿ ಎಂದು ಪ್ರಾಣಿಗಳೊಂದಿಗೆ ಸಹ ಅವಿನಾಬಾವ ಸಂಬಂದೊಂದಿಗೆ ಬೆಳೆದುಬಿಟ್ಟೆ.ಮುಖ್ಯವಾಗಿ ನಾಯಿ ಎಂದರೆ ಮನೆಯ ಎಲ್ಲರ ಮುದ್ದಿನ ಪ್ರಾಣಿ ನಾಯಿ ಚಿಕ್ಕವರಿದ್ದಾಗಿನಿಂದಲೂ ನಾಯಿಯನ್ನೂ ಸಹ ದೇವರು ಎಂದೆ ಹೇಳಿಕೊಟ್ಟ ಹಾಗೆ ಅದು ಹಾಗೆಯೇ ಮನದಲ್ಲಿ ಊಳಿಯಿತು.ಒಂದು ನಾಯಿ ಹತ್ತು ಆಳಿಗೆ ಸಮ ಎಂಬ ನಮ್ಮ ಅಜ್ಜಿಯವರ ಮಾತು ನಮ್ಮ ನಾಯಿ ರಾಜನ ನಿಯತ್ತಿನ ಕಾಯಕ ಕಂಡಾಗಲೆ ಹೌದೆನಿಸಿದ್ದು.
ನನ್ನ ಬಾಲ್ಯದ ಸಮಯ ನಮ್ಮ ಚಿಕ್ಕಪ್ಪ ಒಂದು ನಾಯಿಯನ್ನು ತಂದು ಸಾಕಿದರೂ.ಅಂದು ಇಟ್ಟ ರಾಜಾ ಎಂಬ ಹೆಸರು ಇಂದಿಗೂ ನಮ್ಮ ಮನೆಯ ನಾಯಿಯ ಹೆಸರು ರಾಜನೆ.ಹೆಸರಿಗೆ ತಕ್ಕಂತೆ ರಾಜನ ಹಾಗಿದ್ದ ನಾಯಿಗೆ ನಮ್ಮ ತಂದೆಯವರಿಂದ ಚಿಕ್ಕದಿರುವಾಗಿಂದಲೆ ತರಬೇತಿ ಕಾಲಕ್ಕೆ ತಕ್ಕಂತೆ ಅದರ ಕೆಲಸಗಳ ಬಗ್ಗೆ ತಿಳವಳಿಕೆ ನಾಲ್ಕು ದಿಕ್ಕಿನಲ್ಲಿರುವ ಎಲ್ಲ ಹೊಲಗಳ ಬೆಳಗಿನ ಗಸ್ತು ಹೀಗೆ ಹತ್ತು ಹಲವಾರು ತರಬೇತಿ ಅದಕ್ಕೆ.ಶೇಂಗಾದ ಒಂದು ಸೀಜನ್ನಿನಲ್ಲಿ ಹೊಲದಲ್ಲಿ ರಾತ್ರಿ ನಮ್ಮ ಅಜ್ಜನವರು ಶೇಂಗಾದ ರಾಶಿಗೆ ಕಾವಲು ಇರುತ್ತದ್ದರು.ಮರುದಿನ ಮುಂಜಾನೆ ಬಿಸಿಲು ಬಿದ್ದ ಮೇಲೆ ರಾಶಿಯ ಮೇಲಿನ ಹೊದಿಕೆಯ ತೆಗೆದು ಹಳ್ಳದ ಕಡೆ ಬಹಿರ್ದೆಶೆಗೆ ಹೋಗಿದ್ದಾಗ ಪಕ್ಕದ ಹೊಲದವ ಬಂದು ಶೇಂಗಾ ಒಣಗಿವೇಯೆ ಇಲ್ಲ ನೋಡಲು ರಾಶಿಗೆ ಕೈ ಹಾಕಿ ತೆಗೆದುಕೊಳ್ಳುವಷ್ಟರಲ್ಲಿ ಗುಡಸಲಲಿದ್ದ ನಾಯಿ ಅವನ ಕೈಗೆ ಬಾಯಿ ಹಾಕಿ ಹಿಡಿದಿತ್ತಂತೆ ಅವರ ಕೂಗು ಕೇಳಿ ಅಜ್ಜ ಬಂದು ‘ಬಿಡು’ ಎಂದಾಗ ಬಿಟ್ಟಿತಂತೆ. ಆದರೆ ಅದರ ಒಂದು ಹಲ್ಲು ಸಹ ಅವನ ಕೈಗೆ ಚುಚ್ಚದಂತೆ ಹಿಡಿದ ಅದರ ಜಾಣತನ ಅವರ ಬಾಯಿಯಿಂದಲೆ ಕೇಳಿದ್ದೇನೆ.
ನಮ್ಮ ಕಡೆ ಬೆಳೆ ತುಂಬಿದ ಹೊಲಗಳನ್ನು ಕಳ್ಳರಿಂದ ಕಾಯುವದು ಕಷ್ಟದ ಕೆಲಸ. ಶೇಂಗಾ ಬೆಳ್ಳೂಳ್ಳಿ,ಈರುಳ್ಳಿ, ಮೆಣಸಿನಕಾಯಿ ಹತ್ತಿಯಂತ ವಾಣಿಜ್ಯ ಬೆಳೆ ಕಾಯೋದು ಅಷ್ಟು ಸುಲಭವಲ್ಲ.ಅದಕ್ಕೆ ನಾಯಿಗೆ ಸರಿಯಾದ ತರಬೇತಿ ನಾಯಿ ಹೊಲಗಳಿಗೆ ಗಸ್ತು ಹೋಗುತ್ತದೆ ಎಂದರೆ ಹೊಲದಲ್ಲಿ ನಾಯಿ ಕಂಡರೆ ಕಳ್ಳರಿಗೆ ಹೊಲದ ಮಾಲಿಕ ಬಂದಿರಬಹುದೆಂಬ ಭೀತಿ.ಹನ್ನೆರಡು-ಹದಿಮೂರು ವರ್ಷ ತನ್ನ ಕಾಯಕ ಮುಗಿಸಿ ಇಹ ಲೋಕ ತ್ಯಜಿಸಿತು ಒಂದು ನಾಯಿ…….
ನನ್ನ ಎಂಟನೆ ತರಗತಿಯ ವೇಳೆಗೆ ನಾನೊಂದು ಸಾಕಿ ಬೆಳೆಸಿದೆ ಹೆಚ್ಚು ಕಡಿಮೆ ಮೊದಲಿನ ನಾಯಿಯಂತೆಯೇ ಇದು ಹದಿನಾಲ್ಕು ವರ್ಷ ನಿಯತ್ತಾಗಿ ಯಾರಿಗೂ ಕಚ್ಚದೆಯೇ ಎಲ್ಲರನ್ನೂ ಹೆದರಿಸಿಕೊಂಡು ಹೆಸರಿಗೆ ತಕ್ಕಂತೆ ನಮ್ಮ ಮನೆಯಲ್ಲಿ ರಾಜನಂತೆ ದುಡಿದು ತನ್ನ ಹೆಸರನ್ನು ಉಳಿಸಿಕೊಂಡಿತು.ಕಪ್ಪು ಬಣ್ಣದ ಈ ನಾಯಿ ಕತ್ತಲಲ್ಲಿ ಎಲ್ಲಿದೆಯೋ ಕಾಣದೇ ತುಂಬಾ ಸಾರಿ ಮೆಣಸಿನಕಾಯಿ ಕಣದಲ್ಲಿ ಕಳ್ಳರನ್ನೂ ಹಿಡಿಯಲು ಸಹಕರಿಸಿತ್ತು.ಮತ್ತು ಸುಮ್ಮನೇ ಬೊಗಳುವ ನಾಯಿಯೆ ಅಲ್ಲ. ಹೊಸ ಮನುಷ್ಯರ ವಾಸನೆ ತಿಳಿದಾಗ ಅದರ ಚಾತುರ್ಯತೆಯನ್ನು ಗಮನಿಸಿದ್ದೆನೆ.ತುಂಬಾ ಒಳ್ಳೆಯ ನಾಯಿಯಾಗಿ ಎಲ್ಲರ ಪ್ರಿತಿಗೆ ಪಾತ್ರವಾಗಿ ತನ್ನ ಹದಿನಾಲ್ಕನೆ ವಯಸ್ಸಿಗೆ ಇಹಲೊಕವನ್ನು ತ್ಯಜಿಸಿತು.
ಬಹಳ ಕಡಿಮೆ ಅವಧಿ ಜೀವಿಸಿದರೂ ಮೂರನೇ ರಾಜ ನನ್ನ ಜೀವ ಇರುವ ವರೆಗೂ ಮರೆಯಲಾರದವ.ಬೆಂಗಳೂರಿಂದ ಕೆಲ ದಿನಗಳ ಕಾಲ ರಜೆಯ ಮೇಲೆ ಬಂದು ಎರಡು ತಿಂಗಳು ಊರಿನಲ್ಲಿದ್ದೆ .ಆ ಸಮಯದಲ್ಲಿ ನಮ್ಮ ಕಣದಲ್ಲೆ ಮರಿಹಾಕಿದ ನಾಯಿಯ ಮರಿಯೊಂದ ನನ್ನ ತಮ್ಮ ತಂದಾಗ ಅದು ಮೊದಲಬಾರಿಗೆ ಕಣ್ಣುಬಿಟ್ಟಿ ನೋಡಿದ್ದು ನಮ್ಮ ಮನೆಯನ್ನೆ. ಅತಿ ಸುಂದರ ಕೆಂದು ಬಿಳಿ ಮಿಶ್ರಿತ ಬಣ್ಣದ ಚಂದದ ನಾಯಿ ಈ ರಾಜಾ.ಹಾಗೇಯೆ ನಮ್ಮ ತಂದೆಯವರು ಬೆಳೆಸಿದ ಹಳೆ ನಾಯಿಯ ಬೆಳೆಸಿದ ರೀತಿ ಬೆಳೆಸಿದೆ, ತುಂಬಾ ದಷ್ಟಪುಷ್ಟವಾಗಿ ಬೆಳೆಯಿತು.,ಎರಡೆ ತಿಂಗಳಿಗೆ ಮತ್ತೆ ನಾನು ಬೆಂಗಳೂರಿಗೆ ಹೋದೆ.
ದಿನಕಳೆದಂತೆ ನಾಯಿ ಬೆಳೆಯುತ್ತಾ ತರಬೇತಿಯೊಂದಿಗೆ ತಯಾರಾಗಿತ್ತು.ಮೂರು ತಿಂಗಳ ನಂತರ ಊರಿಗೆ ಬಂದರೆ ಅದರ ಸ್ವಾಗತ ಹೇಗಿತ್ತೆಂದರೆ ಹೇಳಲಾಗದು ಗಾಡಿಯಿಂದಿಳಿದೊಡನೆ ಎದೆಗೆ ಕಾಲು ಕೊಟ್ಟು ಬೊವ್ ಬೊವ್ ಎಂದು ಬೋಗಳಿದ ಶಬ್ದಕ್ಕೆ ನಾನೆ ಹೆದರಿದ್ದೆ. ಜೊತೆ ಬಂದ ನಮ್ಮ ಮಾವನಂತು ನನ್ನನ್ನು ಕಚ್ಚಿಯೇಬಿಟ್ಟಿತು ಎಂದು ಕೂಗಿದ್ದ. ಆದರೆ ಅದರ ಪ್ರೀತಿ ಮಾತ್ರ ಹೇಳಲಾಗದು ಹಾಕಿದ ನನ್ನ ಬಿಳಿ ಶರ್ಟ ಗುರುತ ಸಿಗದಷ್ಟು ಕೆಸರಾಗಿತ್ತು. ಹೀಗೆಯೇ ದಿನ ದಿನದಿಂದ ದಿನಕ್ಕೆ ತನ್ನ ಜವಾಬ್ದಾರಿ ಅರಿತ ರಾಜ ಮನೆಯವರಿಗೆ ಬಹಳ ಪ್ರೀತಿ ಕಳ್ಳರಿಗೆ ಅವನ ಭೀತಿ.ಮನೆಯ ಹೆಣ್ಣುಮಕ್ಕಳು ಹೊರಗಡೆ ಹೋದರೆ ಅಚ್ಚುಕಟ್ಟಾಗಿ ಅವರಿಗೆ ತನ್ನ ಸೆಕ್ಯುರಿಟಿ ಒದಗಿಸುವದ ಕಂಡ ಅಕ್ಕ ಪಕ್ಕದ ಮನೆಯವರು ಇದೆಲ್ಲಾ ಹೇಗೆ ಕಲಿಯಿತು ಎಂದು ಕೇಳುವ ಹಾಗೆ ಇರುತ್ತಿತ್ತು.
ಬೆಳಗಾಗುವ ಹೊತ್ತಿಗೆ ಸರಿಯಾಗಿ ತಾನೆ ಹೊಲಗಳ ಗಸ್ತು ಹೊಡೆಯುವದು ಮುಂಜಾನೆ ಮನೆಗೆ ಬಂದ ತಕ್ಷಣ ರೊಟ್ಟಿ ಇಲ್ಲವೇ ಅಂಬಲಿಗೆ ಹಾಲು ಇಲ್ಲವೆ ಮಜ್ಜಿಗೆ ಕಲಿಸಿ ಕೊಡದಿದ್ದರೆ ನನ್ನ ಚಿಕ್ಕಮ್ಮನೆ ಕೋಪದಿಂದ ಕೂಗುವದು. ಅವರು ಅದನ್ನು ಹಾಗೆ ನೋಡಿಕೊಳ್ಳುತ್ತಿದ್ದರೆ ಒಮ್ಮೆ ರಾಜನಿಗೆ ಕೇಸರಿಬಾತು ತಿನಿಸದಿದ್ದಕ್ಕೆ ನಮ್ಮ ಚಿಕ್ಕಮ್ಮನೊಂದಿಗಿನ ಜಗಳ ನನಗೆ ಬೆಂಗಳೂರಿಗೆ ದೂರಿನ ಕರೆ ಬಂದಿದ್ದು ಉಂಟು.
ನಾನು ಹೊರದೇಶಕ್ಕೆ ಬರುವಾಗ ಅದು ನನಗೆ ಬೀಳ್ಕೊಟ್ಟ ಪರಿ ನಾನು ಅಕ್ಷರದಿಂದ ವರ್ಣಿಸಲಾಗದು. ಅದಕ್ಕೆನೂ ತಿಳಿದಿತ್ತೊ ಅಂದು ಸಂಜೆ ನಾ ಹೊರಟಾಗ ಸುಮಾರು ಒಂದು ಕೀಲೊಮಿಟರ ದೂರದಷ್ಟು ನಮ್ಮ ವಾಹನವನ್ನು ಹಿಂಬಾಲಿಸಿತ್ತು.ಕೊನೆಗೆ ನಮ್ಮದೆ ಹೊಲದ ಮುಂದೆ ಗಾಡಿ ನಿಲ್ಲಿಸಿ ರಾಜನನ್ನು ಸಮಾದಾನಿಸಿ ಮನೆಗೆ ಕಳಿಸಿ ಹೊರಟಿದ್ದೆ ಅದೇ ಕೊನೆಯ ಭೇಟಿಯಾಯಿತು ನನ್ನದು ನನ್ನ ರಾಜನದು.
ಹೀಗೆಯೇ ಎಲ್ಲರ ಪ್ರೀತಿಗೆ ಪಾತ್ರನಾದ ರಾಜಾ 2014 ರ ಮಹಾನವಮೀ ಹಬ್ಬದ ಮುರುದಿದ ಮೊದಲು. ಕೆಟ್ಟ ಮನಸಿನ ದುಷ್ಟ ದುರುಳ ಧೂರ್ತರ ವಿಷಕ್ಕೆ ತುತ್ತಾದ ಸುದ್ದಿ ತಿಳಿದ ನನಗೆ ಬಹಳ ನೋವುಂಟು ಮಾಡಿತ್ತು. ಹೇಳಲಾರೆ ಆ ನೋವ.ಮೂರು ತಿಂಗಳ ನಂತರದ ಭೇಟಿಗೆ ಹಾಗೆಲ್ಲ ಸ್ವಾಗತಿಸಿದ ರಾಜ ವರ್ಷದ ನಂತರ ಹೇಗೆ ಸ್ವಾಗತಿಸಬಹುದು ಎಂದು ಏನೆಲ್ಲಾ ಕನಸು ಕಟ್ಟಿದ್ದೆ ಆ ಕನಸು ಕನಸಾಗಿಯೇ ಉಳಿಯಿತು.
ಊರಿಗೆ ಹೋದಾಗ ಕಣ್ಣೀ ರಾಗಿ ಅದರ ಗೋರಿಯ ಮುಂದೆ ಬಂದಿತ್ತು ನಮ್ಮ ಹೊಲದಲ್ಲಿ ನನಗೆ. ನಿಮ್ಮಲ್ಲಿಯು ಇಂತಾ ನಾಯಿಗಳ ಸಾಕಿರಬಹುದು .ಅವುಗಳೊಂದಿಗೆ ಸಂಬಂಧ ಹೀಗೆಲ್ಲ ಇದ್ದಿರಬಹುದು .
– ಬಸವರಾಜ ಜೋತಿಬಾ ಜಗತಾಪ
ಚೆಂದದ ಬರಹ! ನಮ್ಮನೆಯಲ್ಲಿದ್ದ ಹುಲಿಯಂತಹ ನಾಯಿ ಮೋತಿಯ ನೆನಪಾಯಿತು.. ನನ್ನ ಬಾಲ್ಯದ ಆಪ್ತ ಸ್ನೇಹಿತ ಮೋತಿ.. ಬುದ್ಧಿವಂತಿಕೆಯೂ ಅಪಾರ ಅವನಿಗೆ… ತುಂಬಾ ಸಣ್ಣವಳಿದ್ದಾಗ ಮೋತಿಯ ಬಾಯಲ್ಲಿ ನನ್ನ ಕೈ ಇಟ್ಟು ವಾಕಿಂಗ್ ಹೋಗಿ ಎಲ್ಲರನ್ನೂ ಗಾಬರಿಗೊಳಿಸಿದುದಿದೆ..
ದನ್ಯವಾದಗಳು ನೀಮಗೆ. ನೀಮ್ಮ ಮೋತಿಯ ನೆನಪಾದದ್ದು ನನಗೆ ಸಂತೋಷ.
ಚಂದದ ಬರಹ
ದನ್ಯವಾದಗಳು ಸವಕಾರರೇ.
Good article