ಬಾರೆ ನನ್ನ ಉಗಾದಿ
ಹೊಸತನವ ಚಿಮ್ಮುತ//ಪ//
ತೋರುನಿನ್ನ ಮೊಗವನು
ಶಾಂತಿ ಸಹನೆ ಹೊಮ್ಮುತ //ಅ.ಪ//
ಬಾಳು ಹಸಿರು ತೋರಣ
ಸಿಹಿ ಕಹಿಯ ಹೂರಣ
ಜೀವ ಜಗವೆ ಕಾರಣ
ಸೃಷ್ಟಿ ಚೆಲುವೆ ಪ್ರೇರಣ//ಪ//
ಹೊಂಗೆ ನೆರಳ ತಂಪಲಿ
ದುಂಬಿ ರಾಗದಿಂಪಲಿ
ಮೊಳೆದ ಚಿಗುರ ಸೊಂಪಲಿ
ಸುಮಸೌರಭದ ಕಂಪಲಿ//ಪ//
ಸ್ವಾರ್ಥ ಕ್ರೋಧವಳಿಸುತ
ಮೋಸ ಕಪಟ ಬಿಗಿಯುತ
ಸಮತೆ ತ್ಯಾಗ ಉಳಿಸುತ
ಸುಗುಣ ಭಾವ ಬೆಳೆಸುತ//ಪ//
ಕಾಡು ಮೇಡಿನಡಿಯಿಂದ
ಗಿರಿ ಶಿಖರದ ತುದಿಯಿಂದ
ಬಾನುಬುವಿಯ ಮೇಲಿನಿಂದ
ಜಲ ಸೆಲೆಗಳ ಒಳಗಿನಿಂದ//ಪ//
ಮನದ ಕ್ಷೋಭೆ ನೀಗಿಸೆ
ತನುವ ದಣಿವ ಹೋಗಿಸೆ
ಹೃದಯ ಕದವ ತೆರೆಯಿಸೆ
ಒಡಲ ನುಡಿಯ ಆಲಿಸೆ//ಪ//
ಚಿಂತೆ ಚಿತೆಯ ಆರಿಸಲು
ದುಃಖ ದುಗುಡ ಮರೆಸಲು
ಜಡವ ದೂರ ಸರಿಸಲು
ಚೈತನ್ಯವನು ತುಂಬಲು//ಪ//
ನಳನಳಿಸು ಹಸಿರನು
ತುಂಬಿಹರಿಸು ಉಸಿರನು
ನೀಡು ಜಗಕೆ ಬದುಕನು
ನೀಗು ಇಳೆಯ ಬವಣೆಯನು//ಪ//

ಶುಭಲಕ್ಷ್ಮಿ ಆರ್ ನಾಯಕ

