ವಿಶೇಷ ದಿನ

ಮಾವೂ ಬೇವೂ ನಾವೂ !

Share Button

ನಮಗಿನ್ನೊಂದು ಯುಗಾದಿ ಬಂತು; ಹಳತು ಹೊಸತು ಎಲ್ಲದರ ನೆನಪೂ ತಂತು. ‘ಇಂಥ ಕಾಲದಲಿ ನೇಸರನ ಯೌವನದ ಬಿಸಿಯುಸಿರಲಿ ಇದು ಯುಗಾದಿಯಲ್ಲ; ಲೋಕದೊಡಲ ಕಿಚ್ಚದು ಬೇಗುದಿ’ ಎಂದು ನೆಗಟೀವಾಗಿ ನೋವನುಸುರಿದರೂ ಏನೆಲ್ಲ ಹತಾಶೆ ಮತ್ತು ನಿರಾಶೆಗಳ ಮಾತಾಡಿದರೂ ಹಬ್ಬವನ್ನಾಚರಿಸದೇ ಬಿಡೆವು! ಇದೇ ನಮ್ಮ ಭರತಖಂಡದ ವಿಶಿಷ್ಟತೆ ಮತ್ತು ಅರ್ಥಪೂರ್ಣತೆ! ನಿಸರ್ಗವನ್ನು ಅರ್ಥವತ್ತಾಗಿ ಅರಿತು ಆಚರಿಸುವುದರಲ್ಲಿ ನಮ್ಮ ಹಿಂದಿನವರು ಪ್ರಜ್ಞಾವಂತರು; ಯುಗಾದಿಯಲ್ಲಂತೂ ಇದು ಅನುಭವಕ್ಕೆ ಬರುವ ಸತ್ಯ. ಹಳತರ ಜೊತೆಗೆ ಹೊಸದು ಕೂಡಬೇಕು; ಹಾಗಿದ್ದರೇನೇ ಬಾಳುವೆಗೊಂದು ಸಮರ್ಪಕತೆ. ಹೊಸತು ಹಳತಾಗುವುದು; ಹಳತು ಹೊಸತಾಗುವುದು- ಇದೇ ಸೃಷ್ಟಿಯ ಚೋದ್ಯ. ಭವಲೋಕದ ಚಕ್ರ ಸುತ್ತುತ್ತಲೇ ಇರುವುದು. ಮೇಲೇರಿದ್ದು ಕೆಳಗೆ ಬರುವುದು; ಕೆಳಗಿದ್ದುದು ಮೇಲೇರುವುದು. ಎಲೆಯುದುರಿಸಿದ ಮರವು ಮತ್ತೆ ಚಿಗುರಲು ಏನೆಲ್ಲ ಪ್ರೋಸೆಸು. ಬೋಳು ಬೋಳಾದ ಜೀವನ ಮತ್ತೆ ಮೈ ಕೊಡವಿ ಎದ್ದು, ಹರುಷ ಪಡಲು ಇಂಥ ಹಬ್ಬದಾಚರಣೆಗಳ ಥೀಸಿಸು! ಹೊಸದು ಎಂದರೆ ಪೂರ್ಣ ಹೊಸದಲ್ಲ; ಹಳತು ಎಂದ ಮಾತ್ರಕೆ ಹಳಸಿದ್ದಲ್ಲ. ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂದು ಡಿವಿಜಿಯವರ ಮಂಕುತಿಮ್ಮ ಉದ್ಗರಿಸಿಲ್ಲವೇ ಹಾಗೆ! ಹಳೆಯದರೊಡನೆ ಹೊಸತು ಕೂಡಿದರೇನೇ ಅರ್ಥಪೂರ್ಣ; ಇಲ್ಲದಿರೆ ಅದು ಆ ಮಟ್ಟಿಗೆ ಅಂಗವೂನ. ಅತಿ ಹಳೆಯದೂ ನಿತ್ಯ ಹೊಸದೂ ಆದುದು ನಿಸರ್ಗದಲಿ ಬೇಕಾದಷ್ಟಿದೆ. ಸಾಗರ ಅಂಥದೊಂದು. ಪ್ರತಿನಿತ್ಯ ಹೊಸ ನೀರು ಸೇರುವುದರಿಂದ ಅದು ನಿತ್ಯ ನವೀನ. ಸಮುದ್ರವೋ ಜಗದಲಿ ಅತಿ ಪ್ರಾಚೀನ! ಪಂಪಕವಿಯು ಕವಿತ್ವವನು ಇಂಥದಕೆ ಹೋಲಿಸುತಾನೆ: ‘ನಿಚ್ಚಂ ಪೊಸತು ಅರ್ಣವಂಬೋಲ್ ಅತಿ ಗಂಭೀರಂ ಕವಿತ್ವಂ’ ಎನ್ನುತಾನೆ.

ಹೊಸ ವರುಷವೆಂಬುದು ದಿನಸೂಚಿಯಲ್ಲೋ ಅಂಕೆಸಂಖ್ಯೆಯಲ್ಲೋ ಅಡಗಿರುವುದಿಲ್ಲ. ಅದೇನಿದ್ದರೂ ಸಾಂಕೇತಿಕ ಮತ್ತು ವ್ಯಾವಹಾರಿಕ ಅನುಕೂಲ. ಕ್ಯಾಲೆಂಡರ್ ನಿರ್ಮಿಸಿದ ಮನುಷ್ಯನ ಮನಸಿನಲಿ ‘ಹ್ಯಾಪಿ ನ್ಯೂ ಇಯರ್’ ಅಡಗಿದೆ. ಆದರೆ ನಿಸರ್ಗದ ಹ್ಯಾಪಿ ನ್ಯೂ ಇಯರ್ ಇರುವುದು ನಮ್ಮ ಯುಗಾದಿಯಲ್ಲಿ. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನ’ ಎನ್ನುತಾರೆ ಕವಿ ಬೇಂದ್ರೆ. ಹಾಗಾಗಿ ಹೊಸ ವರುಷ ಜನವರಿಯೊಂದರಲೇ ಇರಲಿ; ಆದರೆ ನಿಸರ್ಗಕೆ ಹೊಸ ವರುಷ ಯುಗಾದಿಯ ಹಬ್ಬವೇ ಆಗಿರಲಿ. ಮನದೊಳಗೆ ಹೊಸತನದ ಚುಂಬಕಸ್ಪರ್ಶವಿಲ್ಲದಿದ್ದರೆ ಏನೂ ತಾಗದು; ಕಾಯ ಮಾಗದು! ಸಂತರು ಇನ್ನೂ ಮುಂದುವರೆದು ನಮ್ಮ ಉಚ್ಛ್ವಾಸ-ನಿಶ್ವಾಸಗಳೇ ಹೊಸ-ಹಳೆಯ ಸಮ್ಮಿಶ್ರಭಾವವೆಂದು ಬಗೆಯುವರು. ಪ್ರತಿ ಉಚ್ಛ್ವಾಸವೂ ವಿಶ್ವದ ಹೊಸದನ್ನು ಆವಾಹಿಸಿಕೊಳ್ಳುವ ಮಂತ್ರ; ಪ್ರತಿ ನಿಶ್ವಾಸವೂ ನನ್ನೊಳಗಿನ ಭಾವವನು ವಿಶ್ವದೊಂದಿಗೆ ಬೆರೆಸುವ ತಂತ್ರ! ಹಾಗಾಗಿ ಹೊಸದೆಂಬುದು ನಿತ್ಯನೂತನ ಮತ್ತು ನಿರಂತರ ಕ್ಷಣ; ಪ್ರತಿ ಕ್ಷಣ ನಾವು ವಿಶ್ವಕೆ ಹೊಸಬರಾಗುವ ಪವಾಡ.

ಜನವರಿಯೊಂದು ಪ್ರತಿ ವರ್ಷದ ಕ್ರೈಸ್ತ ವರ್ಷಾರಂಭ. ಜಗತ್ತಿನಲೊಂದು ಏಕರೂಪದ ವ್ಯವಹಾರವಿರಲೆಂದು ಸರ್ವತ್ರ ಒಪ್ಪಿಕೊಂಡ ಒಪ್ಪಂದ. ಶಾಲಿವಾಹನ ಶಕೆ, ವಿಕ್ರಮ ಶಕೆ, ಹಿಜಿರಾ ಶಕೆ ಮುಂತಾದುವೆಲ್ಲ ಹಿಂದೆ ಇದ್ದುದೇ. ಗ್ರೆಗರಿಯನ್ ಕ್ಯಾಲೆಂಡರಿನ ಕ್ರಿಸ್ತಶಕವನು ಒಪ್ಪಿಕೊಂಡ ಮೇಲೆ ಜನವರಿ ಒಂದು ಈಗ ನಮ್ಮ ಪಾಲಿಗೆ ಹೊಸ ವರುಷ. ಇದೊಂದು ಲೌಕಿಕ ಉಪಾಧಿ ಅಷ್ಟೇ. ಪ್ರಾಯೋಗಿಕ ರೂಪರೇಖೆಗೆ ಅವಶ್ಯವಾಗಿ ಬೇಕಾದ ಮಾನದಂಡ. ಇದು ಬೇಕು. ಜೊತೆಗೆ ಪ್ರಕೃತಿಯ ಹೊಸತನದ ಪ್ರತೀಕವಾಗಿರುವ ಹಿಂದೂ ಧಾರ್ಮಿಕ ಸಡಗರವೆನಿಸಿದ ದೊಡ್ಡ ಪರ್ವ ಯುಗಾದಿಯೂ ಬೇಕು. ಇದು ಯುಗದ ಆದಿ. ಯುಗ ಎಂದರೆ ವರ್ಷ. ವರ್ಷದ ಓಂ ಪ್ರಥಮವದು. ನಿಸರ್ಗದಲಿ ವಸಂತಋತುವಿನ ಚೈತ್ರ ಮಾಸದಾರಂಭ. ಗಿಡಮರಗಳು ಮೈ ಕೊಡವಿ ಚಿಗುರೊಡೆಯುವ ಕಾಲ. ವರ್ಷಾರಂಭದ ನಿಜಾತಿ ನಿಜವಿದು. ಯುಗಾದಿಯು ವೈಜ್ಞಾನಿಕವಾಗಿಯೂ ಪ್ರಾಕೃತಿಕವಾಗಿಯೂ ಧರ್ಮೋ ಸಾಂಸ್ಕೃತಿಕವಾಗಿಯೂ ವಿಶೇಷ ದಿನ; ವರ್ಷಾರಂಭ. ನಿಸರ್ಗವೇ ಸಂಭ್ರಮಿಸುವ ಸಂತೋಷವದು. ಯಾರು ಒಪ್ಪಲಿ ಬಿಡಲಿ, ಮಾವಿನ ಚಿಗುರು ತಿಂದು ಕೋಕಿಲ ಹಾಡಲಿ, ಹಾಡದಿರಲಿ……..ಯುಗಾದಿಯೇ ನವಚೈತನ್ಯ; ನವಯುಗ ಮತ್ತು ನವೋಲ್ಲಾಸ. ಚಿತ್ರ ಎಂಬುದರ ಭಾವನಾಮವೇ ಚೈತ್ರ. ಚೈತ್ರಮಾಸವು ಕಣ್ಣಿಗೆ ಹಬ್ಬ. ಪ್ರಕೃತಿಯ ಪ್ರತಿಕೃತಿಯನು ನೋಡುವುದೇ ಒಂದು ಅಂದ ಮತ್ತು ಆನಂದ. ಇದು ಸಂಭವಿಸುವುದು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲಿ. ಅಂದರೆ ನಾವು ಹ್ಯಾಪೀ ನ್ಯೂ ಇಯರ್ ಹೇಳಿ, ಎಪ್ಪತ್ತೇಳು ದಿವಸಗಳಾದ ಮೇಲೆ ಯುಗಾದಿ ಬಂದಿದೆ! ಇಷ್ಟು ದಿನಗಳಲ್ಲಿ ನಾವು ಬೆಂದು ಬಸವಳಿದಿದ್ದೇ ಹೆಚ್ಚು. ಈ ಬಾರಿಯ ರಣ ರಣ ಬಿಸಿಲಿಗೆ ಸಿಕ್ಕು ನಜ್ಜುಗುಜ್ಜಾಗಲು ಸಜ್ಜಾಗಬೇಕಿದೆ. ಸಂವತ್ಸರ ಬದಲಾದ ಮೇಲಾದರೂ ಮಳೆ ಬಂದು ನೆಲವನು ತಣಿಸಿ, ಸಕಲ ಜೀವಿಗಳ ಬದುಕಿಗೆ ಬಲ ತುಂಬುವುದೇ? ನಿರೀಕ್ಷೆ ಮತ್ತು ಅಪೇಕ್ಷೆ ಇಷ್ಟೇ. ‘ಸರ್ವೇ ಜನಾಃ ಸುಖಿನೋಭವಂತು’ ಎನ್ನುವವರು ನಾವು.

ಇಂದು ಅಭ್ಯಂಗಸ್ನಾನ, ಮನೆಗೆ ತೋರಣ, ಒಬ್ಬಟ್ಟಿನೂಟ, ಇದಕೂ ಮೊದಲು ದೇವರ ಪೂಜೆ, ಬೇವು ಬೆಲ್ಲ ಸ್ವೀಕಾರ, ಪಂಚಾಂಗ ಶ್ರವಣ. ಅಂದರೆ ನೂರು ಸಾವಿರ ವರುಷಗಳ ಹಿಂದೆಯೇ ನಮ್ಮವರು ಲೆಕ್ಕವಿಟ್ಟು ವಿವರಿಸಿರುವ ನಿಸರ್ಗದ ಅಖಂಡ ವಿಶ್ವದ ಗ್ರಹತಾರೆ ನಕ್ಷತ್ರಗಳ ಆ ಕಾಲದ ಜ್ಯೋತಿಷ್ಯಜ್ಞಾನದ ಪ್ರಕಾರ ಈ ವರುಷದ ಮಳೆ ಬೆಳೆ ವಿವರ ಕೇಳಲು ರೈತಾಪಿ ಸಮುದಾಯವು ಊರಿನಲ್ಲಿ ಒಂದು ಕಡೆ ಕುಳಿತು, ಕೇಳುತ್ತಿದ್ದ ನೋಟ ವಿಹಂಗಮ. ಯಾವ ಮೀಡಿಯಾಗಳೂ ಇಲ್ಲದಿದ್ದ ಕಾಲದಲ್ಲಿ ಪ್ರತಿ ಹಳ್ಳಿಯಲೂ ‘ಐನೋರು’ ಎನಿಸಿಕೊಂಡವರು ಹೀಗೆ ಪರಂಪರಾಗತವಾಗಿ ಬಂದ ದೇಸೀ ತಿಳಿವನ್ನು ಹಂಚುತ್ತಿದ್ದ ಸಂಗಮ. ಹಬ್ಬಕ್ಕೆ ಬಂದಿದ್ದ ನೆಂಟರಿಷ್ಟರಲ್ಲಿ ಹಿರಿಯರು ಮನೆಯ ಪಡಸಾಲೆಯಲ್ಲೋ ಜಗುಲಿಯಲ್ಲೋ ಚೌಕಾಬಾರ, ಹುಲಿಕುರಿಯಾಟ, ಅಳುಗುಳಿ (ಚೆನ್ನೆ)ಮಣೆ, ಬಳೆಗಾಜಿನಚೂರಾಟ, ಆಣೆಕಲ್ಲು, ಒಗಟುಗಳನ್ನು ಕೇಳುವ ಸವಾಲ್ ಕಾ ಜವಾಬುಗಳನ್ನು ಆಡಿದರೆ, ಬಾಲ ಸಮುದಾಯವು ಮನೆಯ ಹೊರಗಡೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆಗೆ ಹೊಡೆಯುವ ಸ್ಪರ್ಧೆ, ಪುಟ್ಪುಟ್ಟ ತೆಂಗಿನಕಾಯಿಗಳನ್ನು ಸಾಲಾಗಿ ಜೋಡಿಸಿ ದೂರದಿಂದ ಕಲ್ಲು ಹೊಡೆಯುವುದು, ಕಡ್ಡಿಯಾಟ, ಚಿನ್ನಿದಾಂಡು, ಮರಕೋತಿಯಾಟ, ಕುಂಟೋಬಿಲ್ಲೆ ಇತ್ಯಾದಿ ಹೊರಾಂಗಣಕ್ಕೆ ಸಜ್ಜಾಗುತ್ತಿದ್ದರು. ಇನ್ನು ಮದುವೆಯಾದ ಗೃಹಸ್ಥರಲ್ಲಿ ಮೋಜು ಮಸ್ತಿಯತ್ತ ಮನಸ್ಸಿದ್ದವರು ಹಣವನ್ನು ಪಣವಾಗಿಟ್ಟು, ಪಿಚ್ಚಿ, ಇಸ್ಪೀಟುಗಳೆಂಬ ಜೂಜನ್ನಾಡಿದರೆ, ಹೆಂಗಸರಲ್ಲಿ ಕೆಲವರು ಪಗಡೆಯಾಟವನ್ನಾಡುತ್ತಿದ್ದರು. ಆಟದಲಿ ಗಾಂಭೀರ್ಯ ತರಲು ಮತ್ತು ಮಜ ಬರಲೆಂದು ಹಣವನ್ನು ಬೆಟ್ ಕಟ್ಟುತಿದ್ದ ಹವ್ಯಾಸವು ಬೆಳೆದು ಹೆಮ್ಮರವಾಗಿ, ನಿತ್ಯಜೂಜಿನ ದುರಭ್ಯಾಸವಾಗಿ ಬದಲಾಗುವುದು ಇಂತಹುವುಗಳ ಸೈಡ್ ಎಫೆಕ್ಟು ಕೂಡ.

ಅಂದು ಜನ ಜಾನವಾರುಗಳಿಗೆ ಬಿಡುವು. ವರುಷದ ಮೊದಲ ದಿನವೇ ಹಬ್ಬವೆಂಬ ಸಂಭ್ರಮ-ಸಡಗರ. ಕಷ್ಟವೋ ಸುಖವೋ ಸಾಲ ಮಾಡಿಯಾದರೂ ಹೊಸ ಬಟ್ಟೆ ಧರಿಸಿ, ಸುಗ್ರಾಹ ಭೋಜನವನುಂಡು ಸಂತಸ ಪಡುವ ಕಾಲವಿದು. ಇಡೀ ವರುಷದಲ್ಲಿ ಸಾಕಷ್ಟು ಮಳೆಯಾಗಿ, ಬೆಳೆ ಕೈಗೂಡಿ, ಸಂತೃಪ್ತ ಜೀವನ ನಡೆಸಲು ಬೇಕಾದ ಎಲ್ಲ ಸಂಪನ್ಮೂಲಗಳೂ ಸಮೃದ್ಧಿಯಾಗಲೆಂಬ ಸದಾಶಯದ ಹಾರೈಕೆ. ಹೀಗೆ ಹಿಂದುಗಳ ಯುಗಾದಿಯೆಂಬುದು ಜಾತಿಭೇದವಿಲ್ಲದೇ ಸರ್ವತ್ರರನ್ನೂ ಒಗ್ಗೂಡಿಸುವ ಮಾಂತ್ರಿಕತೆಯನ್ನು ಹೊಂದಿದೆ. ‘ಉಂಡದ್ದೇ ಉಗಾದಿ; ಮಿಂದದ್ದೇ ದೀವಳಿಗೆ’ ಎಂಬ ಗಾದೆ ಮಾತಿನ ಪ್ರಕಾರ ಯುಗಾದಿ ಹಬ್ಬದಲ್ಲಿ ತಿಂಡಿ ತಿನಿಸುಗಳಿಗೇ ಪ್ರಥಮ ಪ್ರಾಧಾನ್ಯ. ಅದರಲ್ಲೂ ಪಂಚಾಂಗ ಶ್ರವಣ ಮಾಡಿ ಬೇವು ಬೆಲ್ಲ ತಿನ್ನುವಾಗ ಅದಕೆಂದೇ ಮುಡಿಪಾಗಿರುವ ಶ್ಲೋಕವೊಂದನ್ನು ಹೇಳಿಕೊಳ್ಳಬೇಕು: ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ |’ ನೂರು ವರುಷಗಳ ಕಾಲ ವಜ್ರದೇಹಿಯಾಗಿರಲು ಮತ್ತು ಸರ್ವ ಸಂಪತ್ತುಗಳನ್ನು ಪಡೆಯಲು ಹಾಗೂ ಸಕಲ ಅನಿಷ್ಟಗಳ ನಿವಾರಣೆಗಾಗಿಯೂ ಬೇವಿನ ಹೊಸ ಚಿಗುರನ್ನು ತಿನ್ನೋಣವೆಂಬುದೀ ಶ್ಲೋಕದ ಅರ್ಥ. ಮುಂಬರುವ ಸುಖ ದುಃಖಗಳನ್ನು ಸಮನಾಗಿ ತೆಗೆದುಕೊಂಡು, ಸುಖ ಬಂತೆಂದು ಹಿಗ್ಗದೆ, ದುಃಖ ಬಂತೆಂದು ಕುಗ್ಗದೆ ಸಮಚಿತ್ತವನ್ನು ಕಾಪಾಡಿಕೊಳ್ಳುತ್ತೇನೆಂಬುದೇ ಇದರ ಹಿಂದಿನ ಮರ್ಮ. ಹಿಂದೂ ಧರ್ಮದಲ್ಲಿ ಎಲ್ಲ ಹಬ್ಬಗಳೂ ಸಾಂಕೇತಿಕ ಮತ್ತು ನಿಸರ್ಗವನ್ನು ಅನುಸರಿಸಿದ ಪ್ರಾತಿನಿಧಿಕ. ಜನಸಾಮಾನ್ಯರಿಗಾಗಿ ಗಹನ ತತ್ತ್ವಗಳನ್ನು ಆಚರಣೆಯ ರೂಪದಲ್ಲಿ ಅರ್ಥ ಮಾಡಿಸುವ ಕಾಯಕ! ಇದು ಯುಗಾದಿಯಲ್ಲಿ ಬಹು ಚೆನ್ನಾಗಿ ವ್ಯಕ್ತ.

ಯುಗಾದಿ ಮುಂದೆ ತಗಾದಿ’ ಎಂಬ ಗಾದೆಯೊಂದಿದೆ: ಅಂದರೆ ನೂತನ ಸಂವತ್ಸರ ಬರುವ ಮುಂಚೆ ಸಹಿಸಲು ಅಸಾಧ್ಯವಾದ ಸೆಕೆ. ಇದು ಬಿಸಿಲಿನ ಪರಿಣಾಮ. ನಾವೆಲ್ಲ ಪುಟ್ಟವರಾಗಿದ್ದಾಗ ನಾಲ್ಕು ಹನಿ ಮಳೆ ಬಂದು ಭುವಿಯ ತಾಪಮಾನವನ್ನು ಹೆಚ್ಚು ಮಾಡುತಿತ್ತು; ಕಾದ ಬಾಣಲೆಗೆ ನೀರು ಚಿಮುಕಿಸಿದ ತೆರದಿ, ಝಳ ಜಾಸ್ತಿಯಾಗುತಿತ್ತು. ಯುಗಾದಿ ಕಳೆದ ಹತ್ತು ಹದಿನೈದು ದಿವಸಗಳ ನಂತರ ಮಳೆಯ ವಾತಾವರಣ ಮೂಡಿ, ತಂಪಾಗುತಿತ್ತು. ಈಗ ಹಾಗೆ ಹೇಳಲು ಬರುವುದಿಲ್ಲ. ನಿಸರ್ಗದ ಸಮತೋಲನ ತಪ್ಪಿದೆ; ನಮ್ಮ ಆಧುನಿಕ ಜೀವನಶೈಲಿಯು ಪ್ರಕೃತಿವಿರೋಧವಾಗಿದೆ. ಮನುಷ್ಯ ಕೇಂದ್ರಿತ ಚಿಂತನೆಯೇ ಆತನ ಸುಖಲೋಲುಪ ಸ್ವಾರ್ಥಮೂಲ ಅನುಷ್ಠಾನವೇ ಅಭಿವೃದ್ಧಿ ಎನಿಸಿಕೊಂಡಿದೆ. ವಾಣಿಜ್ಯವೇ ಮುಂದಾಗಿ ಸಾಯುಜ್ಯ ಹಿಂದಾಗಿದೆ. ನಾವು ಆಚರಣೆಯಲ್ಲಿ ವಿಜೃಂಭಿಸುತ್ತೇವೆ; ‘ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ’ ಎಂದು ಮರೆತು ಮುಂದಕ್ಕೆ ಹೋಗುತ್ತೇವೆ! ಅರಿತಿರಲಿ, ಅರಿಯದೇ ಇರಲಿ, ಅಂತಿಮವಾಗಿ ನಮ್ಮೆಲ್ಲ ಲೌಕಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಒಳಿತನ್ನು ಹರಡುವ ಮನೋಧರ್ಮ ಮತ್ತು ಈ ಬದುಕು ಅಶಾಶ್ವತವೆಂಬ ಅಧ್ಯಾತ್ಮ ಎರಡೂ ಮಿಳಿತಗೊಂಡಿವೆ.

ಹಳೆಯದೆಲ್ಲಾ ಶ್ರೇಷ್ಠವಲ್ಲ; ಹೊಸದೆಲ್ಲಾ ಅನುಕರಣೀಯವಲ್ಲ ಎಂಬುದೂ ಗೊತ್ತಿರಬೇಕು. ಈ ವಿವೇಕ ನಮ್ಮಲ್ಲಿದ್ದಷ್ಟು ಹೊತ್ತೂ ಹಳೆಬೇರು ಹೊಸ ಚಿಗುರಿನ ಸೃಷ್ಟಿಶಕ್ತಿಯ ಗಹನತೆ ನಮ್ಮ ಅನುಭವಕ್ಕೆ ಬರುತ್ತದೆ; ಆಗ ಇಂಥ ಹಬ್ಬ ಅರ್ಥಪೂರಣಗೊಳ್ಳುತ್ತದೆ. ನಿಸರ್ಗದಲ್ಲಿ ಹೊಸತು ಮೂಡುವ ಸಂದರ್ಭದಲ್ಲೇ ನಮ್ಮ ಬದುಕು ಮತ್ತೆ ಮೈ ಕೊಡವಿ, ಅದನ್ನು ಮೈಗೂಡಿಸಿಕೊಳ್ಳಲು ಹಾತೊರೆಯುತ್ತದೆ. ಇದು ಜಗತ್ತಿನ ನಿಯಾಮಕ ಗುಣ. ಸೌರವ್ಯೂಹದ ಗ್ರಹಗಳು ಮಾತ್ರವೇ ತಿರುಗುತ್ತಿಲ್ಲ; ಇವುಗಳೊಂದಿಗೆ ನಮ್ಮೆಲ್ಲ ಭವಚಕ್ರವೂ ಸುತ್ತುತಲೇ ಇರುತ್ತದೆ! ಒಂದು ವರುಷವೆಂಬುದು ಎಲ್ಲದರ ಅಳತೆಗೋಲು; ಮೌಲ್ಯಮಾಪನಕೆ ಬಳಸುವ ಸರ್ಕಲ್ಲು! ಹೊಸ ಸಂಕಲ್ಪಗಳನ್ನು ತೊಟ್ಟು, ಹಳೆಯ ತಪ್ಪುಗಳನ್ನು ನೆನಪಿಟ್ಟು, ರಿಪೀಟಾಗದಂತೆ ಎಚ್ಚರ ಪಟ್ಟು, ಹೊಸ ಬಗೆಯಲ್ಲಿ ಹೊಸ ಮನುಷ್ಯರಾಗಲು ಹೊರಡುವ ಸಂಕ್ರಮಣ ಸೊಲ್ಲು! ಮತ್ತೊಂದು ಯುಗಾದಿ ನಮ್ಮ ಪಾಲಿಗೆ ಬಂದಿದೆ. ‘ಬಂದ ಚೈತ್ರದ ಹಾದಿ ತೆರೆದಿದೆ, ಬಣ್ಣ-ಬೆಡಗಿನ ಮೋಡಿಗೆ. ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ. ಒಳಿತು ಕೆಡುಕೋ ಏನು ಬಂದರು ಇರಲಿ ಎಲ್ಲಕು ಸ್ವಾಗತ; ಸ್ಪರ್ಧೆಯಿಲ್ಲದ ಶ್ರದ್ದೆಯೊಂದೇ ಸ್ಫೂರ್ತಿಯಾಗಲಿ ಸತತ’ – ಎಂದ ಕವಿ ಜಿ ಎಸ್ ಶಿವರುದ್ರಪ್ಪನವರ ಭಾವಗೀತಕ್ಕೆ ದನಿಯಾಗೋಣ, ಗುನುಗುನಿಸೋಣ. ಆದರೆ ಹೊಸ ಸಂವತ್ಸರದ ಹೆಸರೇ ಪರಾಭವ! ಶಕ್ತಿ ರಾಜಕಾರಣದ ಜಿಯೋ ಪಾಲಿಟಿಕ್ಸು ಪ್ರತಿಷ್ಠೆಯನು ಪಣಕೊಡ್ಡಿ ಯುದ್ಧದ ಜಿದ್ದಿಗೆ ಬಿದ್ದಿದೆ; ಬೆಳಗಿನ ಹೊತ್ತೇ ಅಂಧಕಾರ ಕವಿದಿದೆ. ಇರುವುದೊಂದೇ ಭೂಮಿಯನು ಜೋಪಾನ ಮಾಡಿಕೊಳ್ಳುವುದನು ಬಿಟ್ಟು, ಮಾಲಿನ್ಯ ಮಾಡಿ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇಂಥ ಹೊತ್ತಲಿ ನಾವಲ್ಲ ಎಂದು ನುಣುಚಿಕೊಳ್ಳುವಂತಿಲ್ಲ; ಏಕೆಂದರೆ ಧರಣಿ ಮಂಡಲದ ಯಾವ ಮೂಲೆಯಲ್ಲಿ ಅನಾಹುತವಾದರೂ ಅದರ ಪರಿಣಾಮವನ್ನು ಹುಲುಮಾನವರಾದ ನಾವು ಎದುರಿಸಲೇಬೇಕು; ಅನುಭವಿಸಲೇಬೇಕು. ಇಂಥ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ಯುಗಾದಿಯ ಶುಭಾಶಯ ಹೇಳುವಂತಾಗಿರುವುದೇ ಇಂದಿನ ದಿನಮಾನದ ವಿಪರ್ಯಾಸವಾಗಿದೆ.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *