ಪರಾಗ

ವಿಚ್ಛೇದನ…?

Share Button

ಆ ರಾತ್ರಿ ಊಟಮಾಡಿ ಮಲಗಲು ಮುಂದಾಗಿದ್ದಾಗ ಮುನ್ನುಡಿಯ ಎದೆಬಡಿತ ನಗಾರಿಯಂತಾಗಿತ್ತು. ಎದೆಯಲ್ಲಿ ಏನೋ ಒಂಥರ ಆತಂಕ, ತವಕ, ತಳಮಳ ಸಂಕಟ. ಕರುಳನ್ನೇ ಕಿವುಚಿದ ಅನುಭವವಾಗುತ್ತಿದೆ. ಹಿಂಗ್ಯಾಕೆ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲವಲ್ಲ…? ಮಧ್ಯಾಹ್ನ ವಕೀಲರು ಫೋನಲ್ಲಿ,ನಾಳೆ ದಾವೆಯ ಅಂತಿಮ ತೀರ್ಪು ಬರಲಿದೆ…’ ಎಂದು ಹೇಳಿದಾಗಿನಿಂದ ಹೀಗಾಗುತ್ತಿದೆಯಲ್ಲ…?’ ಎಂದಂದುಕೊಳ್ಳುತ್ತಾ ಮುನ್ನುಡಿ ನಿದ್ರಾದೇವಿಯನ್ನು ತಬ್ಬಿಕೊಂಡು ಮಲಗಲು ಮುಂದಾದಳು.

ರಾತ್ರಿ ಒಂದು ಹೊತ್ತಿನಲ್ಲಿ ಮುನ್ನುಡಿ ದಿಗ್ಗನೆದ್ದು ಕುಳಿತಳು. ಮೈ ನಡುಗುತ್ತಿತ್ತು. ಮುಖದ ಮೇಲೆ ಇಳಿಯುತ್ತಿದ್ದ ಬೆವರನ್ನು ಪಕ್ಕದಲ್ಲಿದ್ದ ವಸ್ತ್ರದಿಂದ ಒರೆಸಿಕೊಳ್ಳತೊಡಗಿದಳು. ಸುನಾಮಿಗೆ ಸಿಲುಕಿದ ಸಮುದ್ರದಲೆಗಳಂತೆ ಎದೆ ಏರಿಳಿಯತೊಡಗಿತ್ತು. ನಡುಗುತ್ತಿದ್ದ ಕೈಗಳಿಂದ ತಡಬಡಾಯಿಸಿ ಮೊಬೈಲನ್ನೆತ್ತಿಕೊಂಡು ಸಮಯ ನೋಡಿದಳು. ಬೆಳಗಿನ ಜಾವ ಮೂರು ಗಂಟೆಯಾಗಿತ್ತು. ಪಕ್ಕದ ಟೀಪಾಯ್ ಮೇಲಿದ್ದ ಫ್ಲಾಸ್ಕನ್ನೆತ್ತಿಕೊಂಡು ಗಟಗಟನೇ ಒಂದಿಷ್ಟು ನೀರು ಕುಡಿದು ಎದೆಯನ್ನು ನೀವಿಕೊಳ್ಳತೊಡಗಿದಳು. ಹೀಗೇಕಾಗುತ್ತಿದೆ…?’ ಎಂದಂದುಕೊಳ್ಳುವಷ್ಟರಲ್ಲಿ ಎದೆಯಲ್ಲಿ ಕೋಲ್ಮಿಂಚು ಸುಳಿದಂತಾಯಿತು. ಗುಡುಗು, ಸಿಡಿಲು ಝಳಪಿಸಿದ ಅನುಭವ.ಅಬ್ಬಾ…! ಎಂಥಹ ಭಯಾನಕ ಕನಸು…? ನೆನೆಸಿಕೊಂಡರೆ ಎದೆ ಝಲ್ಲೆನ್ನುತ್ತಿದೆ…’ ಎಂದಂದುಕೊಳ್ಳುವಷ್ಟರಲ್ಲಿ ಮುನ್ನುಡಿಯ ಮನಸ್ಸು ಕನಸಿನಲ್ಲಿ ಕಂಡಿದ್ದನ್ನು ಗೇನಿಸಿಕೊಳ್ಳತೊಡಗಿತು

ಮುನ್ನುಡಿ ಸಹೋದ್ಯೋಗಿಗಳ ಜೊತೆಗೆ ಟ್ರೆಕ್ಕಿಂಗ್‌ಗೆಂದು ಶಿವಗಂಗಾ ಬೆಟ್ಟಕ್ಕೆ ಹೋಗಿದ್ದಳು. ಶ್ರೇಷ್ಠ ಸಾಹಿತಿ ಕೆ ವಿ ಅಯ್ಯರ್‌ ರವರ ಶಾಂತಲಾ ಕಾದಂಬರಿ ಓದಿದಾಗಿನಿಂದ ಶಿವಗಂಗಾ ಬೆಟ್ಟಕ್ಕೆ ಹೋಗಿಬರಬೇಕೆಂಬ ಕುತೂಹಲವಿತ್ತು. ಸಮಾನ ಮನಸ್ಕ, ಸಮಾನ ವಯಸ್ಕ ಸಹೋದ್ಯೋಗಿಗಳು ಜೊತೆಗೂಡಿದ್ದರು. ಬಿಸಿಲೇರುವುದಕ್ಕೆ ಮುಂಚೇನೇ ಶಿವಗಂಗೆಯ ಪದತಲದಲ್ಲಿದ್ದರು ಕಡಿದಾದ ಬೆಟ್ಟವೇರಲು. ಎಲ್ಲರೂ ಟ್ರೆಕ್ಕಿಂಗ್ ಶೂಜ್‌ಗಳನ್ನು ಧರಿಸಿಕೊಂಡೇ ಬಂದಿದ್ದರು. ಸ್ಥಳೀಯ ಗೈಡ್ ಒಬ್ಬರ ಸಹಾಯ ಪಡೆದುಕೊಂಡು ಅವರ ಮಾರ್ಗದರ್ಶನದಲ್ಲಿ ನಿಧಾನವಾಗಿ ಬೆಟ್ಟವೇರಲು ಪ್ರಾರಂಭಿಸಿದರು. ಪ್ರಯಾಸದಿಂದ ಬೆಟ್ಟದ ತುದಿಮುಟ್ಟಿದಾಗ ಕೇಕೆಹಾಕುತ್ತಾ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಕೆಳಗಿನ ಹಳ್ಳಿಯ ಮನೆಗಳು ಪುಟ್ಟ ಪುಟ್ಟ ಬೊಂಬೆಗಳಂತೆ, ಜನರು ಚನ್ನಪಟ್ಟಣದ ಬೊಂಬೆಗಳಂತೆ ಕಾಣತೊಡಗಿದ್ದನ್ನು ಮನಸಾರೆ ವೀಕ್ಷಿಸಿ ಸಂತಸ ಅನುಭವಿಸಿ ಸಂಭ್ರಮಿಸಿದರು. ಮುನ್ನುಡಿ ಬೆಟ್ಟದ ತುದಿಯಲ್ಲಿದ್ದು ಕೆಳಗಿನ ರಮಣೀಯ, ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಂಡು ಆನಂದಿಸತೊಡಗಿದ್ದಳು. ಹುಷಾರು ಕಣೇ, ಹುಷಾರು…! ಸಮತೋಲನ ತಪ್ಪಿದರೆ ಕೆಳಗಿನ ಬಂಡೆಗೆ ಬೀಳಬಹುದು. ಅದರ ಪರಿಣಾಮ ಊಹಿಸಲು ಸಾಧ್ಯವೇ ಇಲ್ಲ. ಸ್ವಲ್ಪ ಹಿಂದೆ ಬಂದು ಖುಷಿಯನ್ನು ಅನುಭವಿಸುವುದು ಲೇಸು’ ಎಂದು ಸಹೋದ್ಯೋಗಿಗಳ, ಮಾರ್ಗದರ್ಶಿಯ ಹಿತವಚನ. ಆದರೂ ಅವಳ ಕುತೂಹಲಕ್ಕೆ ಕೊನೆ ಇರಲಿಲ್ಲ. ಇನ್ನೂ ಮುಂದೆ ಹೋಗಬೇಕೆನ್ನುವ ಹಂಬಲ ಅವಳಿಗೆ. ಅಷ್ಟರಲ್ಲಿ ಅವ್ಯಕ್ತ ವ್ಯಕ್ತಿಯ ಧ್ವನಿ ಅನುರಣಿಸತೊಡಗಿತು ಮುನ್ನುಡಿಯ ಕಿವಿಯಲ್ಲಿ.ಮುನ್ನುಡಿ, ತುಂಬಾ ಡೇಂಜರಸ್ ಸ್ಪಾಟ್ ಇದು. ನಾಟ್ಯರಾಣಿ ಶಾಂತಲಾ ಅವರು ಅದೇ ಸ್ಪಾಟ್‌ನಿಂದ ಕೆಳಗೆ ಬಿದ್ದು ಪ್ರಾಣ ತ್ಯಾಗ ಮಾಡಿದ್ದು. ಭಂಡ ಪ್ರಯತ್ನ ಬೇಡ. ಸುಮ್ಮನೇ ಈ ಕಡೆಗೆ ಜರುಗು…’ ಎಂಬ ಮಾತುಗಳು ಮುನ್ನುಡಿಯ ಕಿವಿಗೆ ಬಿದ್ದಾಗ ಧ್ವನಿ ಬಂದ ಕಡೆಗೆ ನೋಡಿದಾಗ ವೃಷಾಂಕ ತನ್ನೆಡೆಗೆ ಓಡೋಡುತ್ತಾ ಬರುತ್ತಿರುವುದು ಕಂಡಿತು. ಅಷ್ಟರಲ್ಲಿ ಅವಳ ಕಾಲು ಜಾರಿತ್ತು. ಏಕಾಯೇಕಿ ಕೆಳಗುರುಳಿದಳು. ನೂರಡಿಯ ಬಂಡೆಗೆ ಬಿದ್ದು ಅಪ್ಪಚ್ಚಿಯಾಗುವ ಭಯದಲ್ಲಿದ್ದಾಗ ಥಟ್ಟಂತ ಎಚ್ಚರವಾಗಿತ್ತು.

`ಗಾಡ್ ಈಜ್ ಗ್ರೇಟ್. ನಾನು ಕಂಡಿದ್ದು ಕನಸಲ್ಲವೇ? ತುಂಬಾ ಭೀಕರ ಕನಸು. ಕೊಲ್ಲುವವನಿಗಿಂತ ಕಾಯುವವನು ಮೇಲು ಎಂದು ಇದಕ್ಕೇ ಹೇಳುತ್ತಾರೇನೋ? ಕನಸಲ್ಲಿ ನನಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ ವೃಷಾಂಕನ ಮಾತಿನಲ್ಲಿ ಮಾತೃ ಹೃದಯದ ಮಾನವೀಯ ಕಳಕಳಿ ಇತ್ತಲ್ಲವೇ? ನನಗೇನೂ ಅವಘಡ ಸಂಭವಿಸಬಾರದೆಂಬ ನಿವೇದನೆ ಇತ್ತಲ್ಲವೇ? ನನ್ನ ವೃಷಾಂಕನಿಗೆ ಈಗಲೂ ನನ್ನ ಬಗ್ಗೆ ಅದೆಷ್ಟು ಕಾಳಜಿ…? ಇರಲಿ, ನಾನೀಗ ಭಯಬೀಳುವ ಅವಶ್ಯಕತೆ ಇಲ್ಲ. ಕನಸು ಎಷ್ಟಾದರೂ ಕನಸೇ ಅಲ್ಲವೇ?’ ಕನಸಿನ ಭೀತಿಯಿಂದ ಹೊರಬಂದ ಮುನ್ನುಡಿ ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡಿಕೊಂಡು ಮಲಗಲು ಮುಂದಾದಳು. ಆದರೂ ಅವಳಿಗೆ ಸಂಪು ನಿದ್ದೆಯಾಗಲಿಲ್ಲ. ನಾಳಿನ ಕೇಸಿನ ನೆನಪು ಮೇಲಿಂದ ಮೇಲೆ ಮುನ್ನುಡಿಯ ಮನದಲ್ಲಿ ಸುಳಿದಾಡುತ್ತಿದ್ದುದರಿಂದ ಇಷ್ಟಿಷ್ಟಕ್ಕೇ ಎಚ್ಚರವಾಗುತ್ತಿತ್ತು.


ಮರುದಿನ ಬೆಳಗ್ಗೆಯಿಂದ ಮುನ್ನುಡಿ ತುಂಬಾ ಉತ್ಸುಕಳಾಗಿದ್ದಳು. ಏನೋ ಹೊಸ ಹುರುಪು, ಉಲ್ಲಾಸ ಮನದಲ್ಲಿ ಸುಳಿದಾಡುತ್ತಿತ್ತು. ತನ್ನ ಪರ ನ್ಯಾಯವಾದಿ ಹೇಳಿದಂತೆ ಹತ್ತೂವರೆಗೆಲ್ಲಾ ನ್ಯಾಯಲಯದಲ್ಲಿದ್ದಳು. ತವರಿನ ಕಡೆಯಿಂದ ಅವಳ ಅಣ್ಣ-ಅತ್ತಿಗೆ, ನಾದಿನಿ ಬಂದಿದ್ದರು. ನ್ಯಾಯವಾದಿ ನಂಜುಂಡಪ್ಪನವರು ಹೇಳಿದಂತೆ ನ್ಯಾಯಾಧೀಶರು ಒಂದು ಗಂಟೆಗೆ ಕೇಸಿನ ಫೈಲನ್ನು ಕೈಗೆತ್ತಿಕೊಂಡರು. ತೀರ್ಪನ್ನು ಓದಿದರು. ನಿರೀಕ್ಷಿಸಿದಂತೆ ಮುನ್ನುಡಿಗೆ ವಿಚ್ಛೇದನ ಸಿಕ್ಕಿತು. ಜೊತೆಗೆ ಹತ್ತು ಲಕ್ಷಗಳ ಪರಿಹಾರ ಧನವನ್ನೂ ಗಂಡ ವೃಷಾಂಕ ಮುಂದಿನ ಆರು ತಿಂಗಳೊಳಗೆ ಮುನ್ನುಡಿಗೆ ಕೊಡಬೇಕೆಂದು ತೀರ್ಪಿತ್ತರು. ಮಾಸಾಶನ ಮಂಜೂರಿಯಾಗಲಿಲ್ಲ. ಆದರೂ ಮುನ್ನುಡಿ ಗೆಲುವಾದಳು. ವೃಷಾಂಕ ಸಪ್ಪಗೆ ಇದ್ದ. ಅವನು ಅವಳನ್ನೇ ದಿಟ್ಟಿಸುತ್ತಿದ್ದರೂ ಅವಳು ಮಾತ್ರ ಅವನ ಕಣ್ಣಿಗೆ ಕಣ್ಣು ಸೇರಿಸುವ ಸೌಜನ್ಯತೆ ತೋರಿಸಲಿಲ್ಲ. ವೃಷಾಂಕ ಒಂಥರ ನಿರ್ಜೀವ ವಸ್ತುವಂತೆ ಕಾಣುತ್ತಿದ್ದ. ವಕೀಲರಿಗೆ ಧನ್ಯವಾದ ಹೇಳುತ್ತಾ ಮುನ್ನುಡಿ ತನ್ನ ತವರಿನ ಬಳಗದವರ ಜೊತೆಗೆ ನ್ಯಾಯಾಲಯದ ಆವರಣದಿಂದ ಹೊರಗೆ ಹೋಗುವ ಮುನ್ನ ಅಲ್ಲೇ ಮರವೊಂದರ ಕೆಳಗೆ ಮ್ಲಾನವದನನಾಗಿ ನಿಂತಿದ್ದ ವೃಷಾಂಕನ ಕಡೆಗೆ ಗೆಲುವಿನ ನಗೆಬೀರಿ ಧೀರೋದಾತ್ತ ಹೆಜ್ಜೆಹಾಕಿದಳು. ಪಾಪ…! ಅವನು ಅಳುವುದೊಂದೇ ಬಾಕಿ ಇತ್ತು.

ಪರಿಚಯವೇ ಇಲ್ಲದವಳಂತೆ ಈ ಮುನ್ನುಡಿ ಒಂಥರ ವಿಕಟ ನಗೆ ಬೀರುತ್ತಾ ನಡೆದಳಲ್ಲ? ಯುದ್ಧದಲ್ಲಿ ಗೆದ್ದವರಂತೆ ಜಂಬದ ಭಾವವಿತ್ತಲ್ಲ ಅವಳ ಮೊಗದಲ್ಲಿ? ತಾನಾಗಿ ನನ್ನ ಮೈಮೇಲೆ ಬಿದ್ದು ಪ್ರೀತಿಸಿ ಈಗ ನನ್ನೆದೆಗೆ ಒದ್ದು ಹೋಗುತ್ತಿರವಳಲ್ಲ, ಇದು ನ್ಯಾಯವೇ…? ನಾನೇನಂಥಹ ಕೆಟ್ಟದ್ದನ್ನು ಮಾಡಿರುವೆ ಇವಳಿಗೆ…? ಇವಳೇ ನನ್ನ ಜೀವ ಎಂದಂದುಕೊಂಡಿದ್ದೆನಲ್ಲ?’ ಎಂದು ವೃಷಾಂಕ ಮನದಲ್ಲಿ ಅಂದುಕೊಳ್ಳುವಷ್ಟರಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾದ.ಅತ್ತು ನ್ಯಾಯಾಲಯದ ಆವರಣದಲ್ಲಿ ಸೀನ್ ಹುಟ್ಟುಹಾಕುವುದು ಬೇಡವೆಂದುಕೊಂಡು ಒತ್ತರಿಸಿಕೊಂಡು ಬರುತ್ತಿದ್ದ ಅಳುವನ್ನು ಹೇಗೋ ಹತ್ತಿಕ್ಕಿದ. ಕರವಸ್ತ್ರದಿಂದ ಮುಖಮುಚ್ಚಿಕೊಂಡು ಸೊರ ಸೊರ ಎನ್ನುತ್ತಿದ್ದ ಮೂಗು, ಒಸರುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು ತನ್ನ ಬೈಕ್ ಏರಿ ಮನೆಯ ಕಡೆಗೆ ನಿಧಾನವಾಗಿ ಓಡಿಸಿದ.

“ತಂಗೀ, ಇನ್ನು ಮುಂದೆ ನೀನೊಬ್ಬಳೇ ಪಿಜಿಯಲ್ಲಿ ಹಾಳು-ಮೂಳು ತಿನ್ನುತ್ತಾ ಇರುವುದು ಬೇಡ. ನಮ್ಮ ಜೊತೆಗಿದ್ದುಬಿಡು. ಪ್ರೀತಿಯ ನಾಟಕವಾಡಿ ನಿನ್ನ ಜೀವನದ ಸುಂದರ ಚಿತ್ರವನ್ನು ಕೆಡಿಸಿ ಹೋದ ಆ ನಯವಂಚಕ ವೃಷಾಂಕ. ನೀನು ಅವನನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗಲೇ ನಾವು, `ಇಂಥಹ ಅಯೋಗ್ಯನನ್ನು ನಂಬಿ ಜೀವನ ಹಾಳುಮಾಡಿಕೊಳ್ಳಬೇಡವೆಂದು ಗಿಣಿಗೆ ಹೇಳಿದಂತೆ ಹೇಳಿದೆವು. ಆದರೆ ಪ್ರೀತಿ… ಪ್ರೀತಿ… ಅಂತ ಪ್ರೀತಿ ಎಂಬ ನಶೆಯ ಮಾಯೆಯಲ್ಲಿದ್ದ ನಿನಗೆ ನಮ್ಮ ಮಾತು ರುಚಿಸಲಿಲ್ಲ. ಇಷ್ಟು ಬೇಗ ನಿನ್ನ ಪ್ರೀತಿಯ ಒರತೆ ಬತ್ತಿ ಹೋಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನನಗಿರುವವಳು ನೀನೊಬ್ಬಳೇ ತಂಗಿ. ನಿನ್ನ ಸುಖೀ ಜೀವನವೇ ನಮ್ಮ ಕುಟುಂಬದ ಆದ್ಯ ಕರ್ತವ್ಯ. ಇರಲಿ, ಏನಾಗಬೇಕಿತ್ತೋ ಅದು ಆಗಿದೆ. ಪಶ್ಚಾತ್ತಾಪ ಪಟ್ಟರೆ ಪ್ರಯೋಜನವಿಲ್ಲ. ಆಗಿದ್ದು ಒಂದು ಕೆಟ್ಟ ಕನಸು ಎಂದು ಮರೆತು ಆದಷ್ಟು ಬೇಗನೇ ಹೊಸಬಾಳನ್ನು ಕಟ್ಟಿಕೊಂಡು ನಗುನಗುತ್ತಾ ಇರಬೇಕೆಂಬುದು ನಮ್ಮ ಆಶಯ. ಸದ್ಯ ವೃಷಾಂಕನ ಬಗ್ಗೆ ಹೆಚ್ಚಿಗೆ ಮಾತಾಡುವುದು ಬೇಡ. ಪೀಡೆ ತೊಲಗಿತಲ್ಲ, ಚಿಂತಿಸಬೇಡ” ಎಂದು ಹೇಳುತ್ತಾ ಮುನ್ನುಡಿಯ ಅಣ್ಣ ಮನೋಜ್ ತಂಗಿಯನ್ನು ತಬ್ಬಿಕೊಂಡು ಸಮಾಧಾನಮಾಡಿ ಸಂತೈಸಲು ಮುಂದಾದ.

“ಅಣ್ಣಾ, ನಿಮಗೇಕೆ ತ್ರಾಸು…? ನನ್ನ ಪಾಡಿಗೆ ನಾನಿರುತ್ತೇನೆ” ಎಂದು ಮುನ್ನುಡಿ ತುದಿನಾಲಿಗೆಯ ಮೇಲಿನ ಮಾತು ಹೇಳಿದಳಾದರೂ ತನಗೆ ಮಾರಲ್ ಸಪೋರ್ಟ್ ಅವಶ್ಯಕತೆ ಇದೆ ಎಂಬುದನ್ನು ಮನಗಂಡಿದ್ದಳು.
“ಮುನ್ನುಡಿ, ಈ ಹೊತ್ತಿನಲ್ಲಿ ನೀನು ಒಬ್ಬಳೇ ಇರುವುದು ಬೇಡವೇ ಬೇಡ. ನಾವೆಲ್ಲಾ ಇರುವಾಗ ನೀನೊಬ್ಬಳೇ ಇರುವುದಾದರೂ ಏಕೆ…? ಒಬ್ಬಳೇ ಇರುವುದಕ್ಕೆ ನೀನೇನು ಪರದೇಶಿಯಾ…?” ಅತ್ತಿಗೆ ರಂಜನಿಯೂ ಮುನ್ನುಡಿಯನ್ನು ಬಿಗಿದಪ್ಪಿಕೊಂಡು ಸಮಾಧಾನ ಮಾಡುತ್ತಾ ಅಭಯ ಹಸ್ತ ಚಾಚಿದಳು.
“ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಭಾವುಕಳಾಗಿರುವೆ. ನಿಮ್ಮ ಮಾತಿನಂತೆಯೇ ನಡೆಯುವೆ.” ಮುನ್ನುಡಿ ಅಣ್ಣನ ಕಾರನ್ನೇರಿದಳು.


ಅಣ್ಣನ ಮನೆಯಲ್ಲಿ ಮುನ್ನುಡಿಯ ಬಾಳ ರಥ ನಿಧಾನವಾಗಿ ಲಯ ಕಂಡುಕೊಳ್ಳತೊಡಗಿತು. ಮನೆಯಲ್ಲಿ ಅಣ್ಣ, ಅತ್ತಿಗೆ, ಅವರ ಇಬ್ಬರು ಮಕ್ಕಳು, ಅತ್ತಿಗೆಯ ತಾಯಿ, ಅತ್ತಿಗೆಯ ಮದುವೆಯಾಗದ ತಂಗಿಯೂ ಇದ್ದಳು. ಅಪ್ಪ, ಅಮ್ಮ ಎರಡು ವರ್ಷಗಳ ಹಿಂದೇನೇ ಸ್ವರ್ಗಸ್ಥರಾಗಿದ್ದರು. ಅಣ್ಣನ ಮನೆಯಲ್ಲಿ ರಾಜೋಪಚಾರವೇ ಸಿಗತೊಡಗಿತು. ಗಂಡನಿಗೆ ಸೋಡಾಚೀಟಿ ಕೊಟ್ಟು ಬಂದವಳೆಂದು ಎಲ್ಲರೂ ಅನುಕಂಪ ತೋರಿಸತೊಡಗಿದರು. ಅತ್ತಿಗೆಯ ತಂಗಿಯ ಕೋಣೆಯಲ್ಲಿ ಇದ್ದುಕೊಂಡು ಹೇಗೋ ಹೊಂದಿಕೊಂಡು ಹೋಗತೊಡಗಿದಳು. ವರ್ಕ ಫ್ರಮ್ ಹೋಮ್ ಮಾಡಲು ಪ್ರೈವಸಿ ಇಲ್ಲದ್ದರಿಂದ ಆಫೀಸಿಗೇ ಹೋಗಿ ಕೆಲಸಮಾಡತೊಡಗಿದಳು. ಹೀಗೆ ಎರಡು ತಿಂಗಳ ಪಯಣ ಸುಲಲಿತವಾಗಿ ಸಾಗಿತು. ಎರಡು ತಿಂಗಳ ನಂತರ ಮನೆಯಲ್ಲಿ ಒಬ್ಬೊಬ್ಬರ ವರಸೆ ಒಂದೊಂದು ರೀತಿಯಾಗತೊಡಗಿತು.

“ನಿನ್ನಣ್ಣನ ಸಂಪಾದನೆ ಮನೆ ಖರ್ಚಿಗೆ ಸಾಕಾಗುವುದಿಲ್ಲ. ನಿನ್ನ ತಿಂಗಳ ಸಂಬಳ ಅವನ ಕೈಗೆ ಹಾಕಿಬಿಡು ಇಲ್ಲವೇ ನನ್ನ ಕೈಗೆ ಕೊಡು. ನಾನು ನಿನ್ನತ್ತಿಗೆಯ ಕೈಗೆ ಇಲ್ಲವೇ ನಿನ್ನಣ್ಣನಿಗೆ ಕೊಡುವೆ. ಹೇಗೂ ನೀನು ಒಬ್ಬಳೇ ಇದ್ದರೂ ಖರ್ಚೇನು ಕಡಿಮೆಯಾಗುತ್ತಿರಲಿಲ್ಲವಲ್ಲ…?” ಎಂದು ಅತ್ತಿಗೆಯ ತಾಯಿ ಮುನ್ನುಡಿಗೆ ದುಂಬಾಲು ಬಿದ್ದು ಅವಳಿಂದ ಹಣವನ್ನು ಪೀಕಿಸತೊಡಗಿದಳು.
“ಮುನ್ನುಡಿ, ನನ್ನ ಮಕ್ಕಳಿಗೆ ಹೊಸ ಬಟ್ಟೆ ತಂದುಕೊಡು. ಹಾಗೇ ಆಫೀಸಿನಿಂದ ಬರುವಾಗ ಈ ಕಿರಾಣಿ ಸಾಮಾನು ತೆಗೆದುಕೊಂಡು ಬಾ, ಆ ಕಿರಾಣಿ ಸಾಮಾನು ತೆಗೆದುಕೊಂಡು ಬಾ. ಈ ಮನೆ ಬಳಕೆಯ ಸಾಮಾನುಗಳನ್ನು ಆನ್ ಲೈನ್ ಮೂಲಕ ತರಿಸಿಬಿಡು. ಹಾಗೇ ಮುಂಬರುವ ಹಬ್ಬಕ್ಕೆ ನನಗೆ ಒಂದು ಒಳ್ಳೆಯ ರೇಶಿಮೆಯನ್ನು ತಂದುಕೊಡಬೇಕು ನೀನು” ಎಂದು ಅವಳ ಅತ್ತಿಗೆ ಕರಾರುವಾಕ್ಕಾಗಿ ಹೇಳತೊಡಗಿದಳು.

“ಮುನ್ನುಡಿ ಅಕ್ಕಾ, ನನಗೆ ಮೂರ‍್ನಾಲ್ಕು ಲೇಟೆಸ್ಟ್ ಟ್ರೆಂಡಿನ ಲೆಗ್ಗಿನ್ಸ್, ಕುರ್ತಾ ಬೇಕು. ಹಾಗೇ ಒಂದೆರಡು ಜೀನ್ಸ್ ಕೂಡಾ. ಈ ವೀಕೆಂಡಿನಲ್ಲಿ ನನಗೆ ಕೊಡಿಸಬೇಕು. ಅಣ್ಣನಿಗೆ ಹೇಳಿದರೆ ತಂದು ಕೊಡುತ್ತಿಲ್ಲ. `ಸದ್ಯ ಕೈಯಲ್ಲಿ ದುಡ್ಡಿಲ್ಲ. ಸಂಬಳವಾದ ನಂತರ ತರುತ್ತೇನೆ’ ಅಂತ ಹೇಳುತ್ತಿರುವನಾದರೂ ತಿಂಗಳ ಸಂಬಳವಾದಾಗಲೂ ತರುತ್ತಿಲ್ಲ. ಪೀಡಿಸಿ ಕೇಳಿದರೆ ಏನೇನೋ ಸಬೂಬು ಹೇಳುತ್ತಾನೆ. ಅದಕ್ಕೇ ಪ್ಲೀಜ್ ಅಕ್ಕಾ, ನೀನೇ ತಂದುಕೊಡು. ಹಾಗೇ ವೀಕೆಂಡ್‌ನಲ್ಲಿ ನನ್ನನ್ನು ಹೊರಗೆ ಕರೆದುಕೊಂಡು ಹೋಗಿ ಚಾಟ್ಸ್ ಕೊಡಿಸಬೇಕು” ಎಂದು ಅತ್ತಿಗೆಯ ತಂಗಿ ಗೋಗರೆಯತೊಡಗಿದಳು.

“ಅತ್ತೆ, ವಾರಕ್ಕೊಮ್ಮೆಯಾದರೂ ನಮಗೆ ಪಾನಿ ಪೂರಿ, ಗೋಬಿ ಮಂಚೂರಿ, ಕ್ಯಾಡ್‌ಬರೀಜ್ ಚಾಕ್ಲೇಟ್ಸ್, ಐಸ್‌ಕ್ರೀಮ್ ತಿನ್ನಿಸಬೇಕು. ಅಪ್ಪ, ಅಮ್ಮ ಕೊಡಿಸುವುದೇ ಇಲ್ಲ. ನಮ್ಮ ಪಕ್ಕದ ಮನೆಯ ಮಕ್ಕಳು ವಾರಕ್ಕೆರಡು ಸಾರೆ ಚಾಟ್ಸ್ ತಿನ್ನುತ್ತಾರೆ. ಅಪ್ಪ ಭಾರೀ ಕಂಜೂಸ್ ಅದಾನ” ಅಂತ ಅಣ್ಣನ ಮಕ್ಕಳು ಮುನ್ನುಡಿಗೆ ತಮ್ಮ ಡಿಮ್ಯಾಂಡ್ ಲಿಸ್ಟ್ ಕೊಡುತ್ತಾರೆ.

“ಮುನ್ನುಡೀ, ನಿನಗೆ ಬರುವ ಪರಿಹಾರ ಧನ ಹತ್ತು ಲಕ್ಷ ರೂಪಾಯಿಗಳನ್ನು ನನಗೇ ಕೊಡು. ಕೈಗಡ ಕೊಟ್ಟಿರುವ ಪಾರ್ಟಿ ನನಗೆ ದಿನಾಲೂ ಟಾರ್ಚರ್ ಮಾಡುತ್ತಿದ್ದಾನೆ. ಹಾಗೇ ತಿಂಗಳ ತಿಂಗಳ ಮನೆ ಖರ್ಚಿಗೆಂದು ಒಂದಿಷ್ಟು ದುಡ್ಡನ್ನು ನನಗೆ ಫೋನ್ ಪೇ ಮಾಡಿಬಿಡು. ತಪ್ಪಿಸಬೇಡ ಪುಟ್ಟಾ. ನಾನು ತುಂಬಾ ಸಂಕಟದಲ್ಲಿದ್ದೇನೆ” ಅಂತ ಮುನ್ನುಡಿಯ ಅಣ್ಣ ತನ್ನ ಅಹವಾಲನ್ನು ತಿಳಿಸುತ್ತಾನೆ.

ಅಯ್ಯೋ, ಇದೇನಪ್ಪಾ, ಊದೋದನ್ನು ಕೊಟ್ಟು ಬರ‍್ಸೋದನ್ನು ತೆಗೆದುಕೊಂಡಂಗಾತಲ್ಲ…? ಇವರೆಲ್ಲರೂ ನನ್ನವರೆನ್ನುವ ಭ್ರಮೆಯಿತ್ತು. ಆದರೆ…? ವೃಷಾಂಕ್ ಯಾವತ್ತೂ ನನಗೆ ಹಣ ಕೊಡು ಎಂದು ಕೇಳುತ್ತಿರಲಿಲ್ಲ. ಇಲ್ಲಿ ನೋಡಿದರೆ ಒಬ್ಬೊಬ್ಬರ ನಡೆ, ಒಬ್ಬೊಬ್ಬರ ನುಡಿ, ಒಬ್ಬೊಬ್ಬರ ಡಿಮ್ಯಾಂಡ್ ಒಂದೊಂದು ಥರಹ ಇದೆ. ಯಾರದೂ ರಿಕ್ವೆಸ್ಟಿಂಗ್ ನೇಚರ್ ಇಲ್ಲ. ಎಲ್ಲರೂ ಆರ್ಡರ್ ಮಾಡುವ ತರಹ ಆದೇಶಿಸುತ್ತಿದ್ದಾರೆ. ಈಗೇನಪ್ಪ ಮಾಡುವುದು…? ನನ್ನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಅಡಕೊತ್ತಿನಲ್ಲಿ ಸಿಕ್ಕ ಅಡಕೆಯಂತಾಗುತ್ತಿದೆಯಲ್ಲ…? ಇಲ್ಲಿ ಎಲ್ಲಾ ರೀತಿಯಿಂದಲೂ ನನಗೆ ಶೋಷಣೆಯಾಗುತ್ತಿದೆ. ಅತ್ತಿಗೆಯ ಅಮ್ಮನಂತೂ ದಬ್ಬಾಳಿಕೆ ಮಾಡತೊಡಗಿದ್ದಾಳೆ. ಈಗ ನಾನೊಂಥರ ದಬ್ಬಾಳಿಕೆ, ಶೋಷಣೆಗಳ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದೇನೆ ಎಂದೆನಿಸುತ್ತಿದೆ.’ ಮುನ್ನುಡಿ ತಳಮಳಿಸತೊಡಗಿದಳು.ಅಬ್ಬಾ…! ಇಂಥಹ ಶೋಷಣೆಯಲ್ಲಿ ನಾನು ಸಿಲುಕಿಕೊಳ್ಳುತ್ತೇನೆ ಎಂದು ಕನಸು-ಮನಸಿನಲ್ಲಿ ಭಾವಿಸಿಯೇ ಇರಲಿಲ್ಲವಲ್ಲ…? ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನಿಂದ ದುಡ್ಡನ್ನು ಪೀಕಿಸಲು ಇವರೆಲ್ಲರೂ ಮೊದಲೇ ಪ್ರಿಪ್ಲಾನ್ ಮಾಡಿಕೊಂಡು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಂತಿದೆ. ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ನನ್ನ ಪರಿಸ್ಥಿತಿ. ಇದಕ್ಕೆ ನಾನೇ ಕಾರಣವಲ್ಲವೇ? ಆದರೂ ಈ ನನ್ನ ಪರಿಸ್ಥಿತಿಗೆ ತಕ್ಷಣ ಒಂದು ಪರಿಹಾರ ಕಂಡುಕೊಳ್ಳಲೇ ಬೇಕು. ಇಲ್ಲವಾದರೆ ನಾನೀ ವಿಷವರ್ತುಲದಲ್ಲಿ ಬೆಂದು ಹೋಗುತ್ತೇನೆ. ಪ್ರೀತಿ, ವಿಶ್ವಾಸ, ಆದರಗಳಿಲ್ಲದ ವ್ಯಕ್ತಿ ಸುವಾಸನೆಯಿಲ್ಲದ ಹೂವಿನಂತೆ ಎಂದು ಅನುಭಾವಿಗಳು ಹೇಳಿದ್ದು ನನಗೇ ಅನ್ವಯಿಸುತ್ತದೆಯಲ್ಲವೇ…?’ ಹೀಗೆ ಏನೇನೋ ವಿಚಾರಗಳು ಮುನ್ನುಡಿಯ ಮನದಲ್ಲಿ ಸುಳಿದಾಡಿದವು.


ಆ ರಾತ್ರಿ ಮುನ್ನುಡಿ ಕಣ್ಣಿಗೆ ಕಣ್ಣು ಹಚ್ಚಲಿಲ್ಲ. ವೃಷಾಂಕ್ ಆವಾಗಾವಾಗ ಹೇಳುತ್ತಿದ್ದ, ನಿರೀಕ್ಷೆ ಬಿಟ್ಟು ನೋಡು, ನೆಮ್ಮದಿ ಸಿಗುತ್ತೆ. ಹಠಬಿಟ್ಟು ನೋಡು, ಎಲ್ಲರೂ ಸಿಗುತ್ತಾರೆ’ ಎಂಬ ದಾರ್ಶನಿಕರ ಮಾತು ಅವಳ ಮನದಲ್ಲಿ ಗಿರಕಿ ಹೊಡೆಯತೊಡಗಿತು.ನಾನೇ ಅಲ್ಲವೇ ಮೇಲೆ ಬಿದ್ದು ವೃಷಾಂಕನನ್ನು ಪ್ರೀತಿಸಿದ್ದು…?’ ಈ ಮಾತು ಮುನ್ನುಡಿಯ ಮನದಲ್ಲಿ ಮಿಂಚಿದಾಗ ಅವಳ ಮನಸ್ಸು ಇತಿಹಾಸದ ಪುಟಗಳನ್ನು ತಿರುವಿ ಹಾಕತೊಡಗಿತು.

ಬಿಇ ನಂತರ ಮುನ್ನುಡಿ, ಫ್ಯೂಚರ್ ಸಾಫ್ಟ್ವೇರ್ಸ್ ಕಂಪನಿ’ಯಲ್ಲಿ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿದ್ದವು. ಅವಳ ಕಂಪನಿಯ ಪಕ್ಕದ ಮಲ್ಟಿಸ್ಟೋರೀಡ್ ಕಟ್ಟಡಗಳಲ್ಲಿ ಇನ್ನೂ ಹಲವಾರು ಸಾಫ್ಟ್ವೇರ್ ಕಂಪನಿಗಳೂ ಕೆಲಸ ನಿರ್ವಹಿಸುತ್ತಿದ್ದವು. ಪಕ್ಕದಭಾರತ್ ಸಾಫ್ಟ್ವೇರ್ಸ್ ಕಂಪನಿ’ಯಲ್ಲಿ ಕೆಲಸ ಮಾಡುತ್ತಿದ್ದ ವೃಷಾಂಕ್ ಅವಳ ಮನಸೆಳೆದಿದ್ದ. ಕಂಪನಿಯ ಹೈದರಾಬಾದ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ವೃಷಾಂಕ್ ಬೆಂಗಳೂರು ಆಫೀಸಿಗೆ ವರ್ಗವಾಗಿ ಬಂದಿದ್ದ. ಸಾಫ್ಟ್ವೇರ್ ಕಂಪನಿಗಳ ಬಹುತೇಕ ಉದ್ಯೋಗಿಗಳು ನೆಲಮಹಡಿಯಲ್ಲಿದ್ದ ಮೆಸ್ಸಿನಲ್ಲಿ ಊಟಮಾಡುತ್ತಿದ್ದರು. ಮುಗ್ಧ ಮುಖದ ಹ್ಯಾಂಡ್ಸಮ್ ಹುಡುಗ ವೃಷಾಂಕನನ್ನು ಅದೊಂದು ದಿನ ಮೆಸ್ಸಲ್ಲಿ ಊಟಮಾಡುವಾಗ, ತಾನೇ ಪರಿಚಯ ಮಾಡಿಕೊಂಡಿದ್ದಳು. ಹಾಯ್, ಬಾಯ್‌ಗಳಾದವು. ಇಬ್ಬರೂ ಸ್ನೇಹಿತರಾದರು. ನಿಧಾನವಾಗಿ ವೃಷಾಂಕ್ ಮುನ್ನುಡಿಯ ಎದೆಯಲ್ಲಿ ಪ್ರೀತಿಯ ಮುನ್ನುಡಿ ಬರೆಯಲು ಮುಂದಾಗಿದ್ದ. ಅವಳ ಮನಸ್ಸನ್ನು ತುಂಬತೊಡಗಿದ್ದ. ಆದರೆ ವೃಷಾಂಕನಿಗೆ ಮುನ್ನುಡಿ, ದಿ ಬೆಸ್ಟ್ ಫ್ರೆಂಡ್’ ಅಷ್ಟೇ ಆಗಿದ್ದಳು. ಮುನ್ನುಡಿಯ ಎದೆಯಲ್ಲಿ ಪ್ರೀತಿಯ ಸೆಲೆ ತುಂಬಿ ಹರಿಯಲು ಮುಂದಾದಾಗ,ವೃಷಾಂಕ್, ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ನಾವಿಬ್ಬರೂ ಪವಿತ್ರ ಮದುವೆಯ ಬಂಧನದಲ್ಲಿ ಸಿಲುಕಿ ಜೊತೆಯಾಗಿ ಬಾಳ ದೋಣಿ ಏರೋಣ’ ಎಂದು ಹೇಳಿಯೂಬಿಟ್ಟಳು. ವೃಷಾಂಕ್ ಅವಳೆಡೆಗೆ ನೋಡುತ್ತಾ ತುಸು ಹೊತ್ತು ಸುಮ್ಮನಿದ್ದ. `ವೃಷಭಾರೂಢನೇ, ಮಾತುಗಳೇ ಹೊರಡುತ್ತಿಲ್ಲವಲ್ಲ…? ಪ್ರೀತಿ ಎಂಬ ಶಬ್ದವನ್ನು ಕೇಳಿಸಿಕೊಂಡ ತಕ್ಷಣ ಮೂಕನಾಗಿಬಿಟ್ಟೆಯಾ…? ಅಥವಾ ಸಂತೋಷದ ಪರಾಕಾಷ್ಠೆಯಲ್ಲಿ ಮಿಂದು ಮೀಯುತ್ತಿರುವಿಯಾ…?’ ಮುನ್ನುಡಿ ಪಟಪಟ ಅಂತ ವಟಗುಡತೊಡಗಿದಳು.

“ಮುನ್ನುಡಿ, ಹಾಗೇನಿಲ್ಲ. ನಾನು ಪ್ರೀತಿಯೆಂಬ ಮಾಯೆಯ ಜಾಲದಲ್ಲಿ ನಿಜವಾಗಿಯೂ ಸಿಲುಕಿಲ್ಲ. ಅದೇಕೆಂದರೆ ನೀನೋ ತುಂಬಾ ಹೈಫೈ ಫೆಮಿಲಿಯಿಂದ ಬಂದಂಥಹ ಹೈಫೈ ಹುಡುಗಿ ಅಂತ ಅನಿಸುತ್ತಿದೆ. ನಾನೋ ಒಂಥರ ಹಳ್ಳಿಯ ಗಮಾರ. ಜೊತೆಗೆ ಕುಟುಂಬದ ಜವಾಬ್ದಾರಿಯ ನೊಗಕ್ಕೆ ಹೆಗಲು ಕೊಟ್ಟಿರುವವನು. ಇಳಿ ವಯಸ್ಸಿನ ಹೆತ್ತವರು ನನ್ನನ್ನು ಅವಲಂಬಿಸಿದ್ದಾರೆ. ಜೊತೆಗೆ ಒಬ್ಬ ತಮ್ಮ, ಒಬ್ಬ ತಂಗಿಯ ವಿದ್ಯಾಭ್ಯಾಸ ನಂತರ ಅವರ ಮದುವೆಯ ಜವಾಬ್ದಾರಿಯೂ ನನ್ನ ಹೆಗಲಿಗಿದೆ. ಈ ಕೆಳ ಮಧ್ಯಮ ವರ್ಗದ ಜನರು ಜವಾಬ್ದಾರಿಗಳನ್ನು ಹಾಸಿ-ಹೊದ್ದುಕೊಂಡು ಮಲಗುವುದು ಅನಿವಾರ್ಯವೇ. ಅಂಥಹುದರಲ್ಲಿ ಸದ್ಯ ಈ ಪ್ರೀತಿಯ ಉಸಾಬರಿ ಏಕೆ ಈ ಹಳ್ಳಿಯ ಗಮಾರನಿಗೆ ಎಂಬ ಲೆಕ್ಕಾಚಾರ ನನ್ನದು. ಮೇಲಾಗಿ ಈಗಿನ ಹುಡುಗಿಯರಿಗೆ ಭಾವೀ ಜೀವನದ ಬಗ್ಗೆ ನೂರೆಂಟು ಕನಸುಗಳು. ಅದಕ್ಕೇ ಈ ವೃಷಭಾರೂಢನನ್ನು ನಿನ್ನ ಮನಸ್ಸಿನಿಂದ ತೆಗೆದುಹಾಕಿ ನಿನಗೆ ಸೂಕ್ತವೆನಿಸುವ ಹುಡುಗನನ್ನು ನಿನ್ನವನನ್ನಾಗಿ ಮಾಡಿಕೊಂಡು ಆರಾಮದಿಂದ ಇರು ಎಂಬುದು ನನ್ನ ಕಳಕಳಿಯ ನಿವೇದನೆ ಅಷ್ಟೇ.” ವೃಷಾಂಕ್ ತನ್ನ ಕುಟುಂಬದ ಒಳ-ಹೊರಗುಗಳನ್ನು ತೆರೆದಿಟ್ಟ. ಆಗ ಮುನ್ನುಡಿ ನಿಜವಾಗಿಯೂ ಮೂಕಿಯಾದಳು. ಮಾತುಗಳೇ ಹೊರಡಲಿಲ್ಲ ತಕ್ಷಣ. ಯೋಚನೆಯ ಸುಳಿಯಲ್ಲಿ ವಿಲವಿಲ ಅಂತ ಒದ್ದಾಡತೊಡಗಿದಳು.

“ಮುನ್ನುಡಿ, ಯು ಗೋ ಅಹೆಡ್ ವಿಥ್ ಯುವರ್ ಪ್ಲಾನ್ ಆಫ್ ಲವ್.” ಮೌನಗೌರಿಯಾಗಿದ್ದ ಮುನ್ನುಡಿಗೆ ವೃಷಾಂಕ ಧೈರ್ಯ ತುಂಬಲು ಮುಂದಾಗಿದ್ದ.
“ವೃಷಾಂಕ್, ನಾನು ನಿನ್ನೊಂದಿಗೇ ನನ್ನ ಬಾಳನ್ನು ಹಂಚಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ನಾನೂ ನಿನ್ನ ಜೊತೆಗಿದ್ದು ನಿನ್ನ ಜವಾಬ್ದಾರಿಯ ಭಾರವನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕೆಂದಿದ್ದೇನೆ. ನನಗೆ ನೀನು ಬೇಕು ಅಷ್ಟೇ.”
“ಮುನ್ನುಡಿ, ಚೆನ್ನಾಗಿ ಯೋಚಿಸಿ ನೋಡು. ಅವಸರದ ನಿರ್ಧಾರ ಬೇಡ. ಆಮೇಲೆ ನೀನಂದುಕೊಂಡ ಜೀವನ ಸಿಗಲಿಲ್ಲವೆಂದು ಭ್ರಮನಿರಸನವಾಗುವುದು ಬೇಡ.” ವೃಷಾಂಕ ಮುನ್ನುಡಿಗೆ ತಿಳಿಸಿಹೇಳಲು ಮುಂದಾದ.
“ನನ್ನ ನಿರ್ಧಾರ ಅಚಲವಾದದ್ದು. ಈ ಮುನ್ನುಡಿಗೆ ವೃಷಾಂಕನೆಂಬ ಶಿವನೇ ಬೇಕು.” ಕೊನೆಗೆ ಮುನ್ನುಡಿಯ ಹಟವೇ ಗೆದ್ದಿತು. ಮುನ್ನುಡಿ-ವೃಷಾಂಕ ಸತಿಪತಿಗಳಾದರು.


ಜೀವನ ಐಷಾರಾಮವಾಗಿಲ್ಲದಿದ್ದರೂ ಮುನ್ನುಡಿ ವೃಷಾಂಕನ ಮನೆಯಲ್ಲಿ ಮಹಾರಾಣಿಯಂತೆಯೇ ಇದ್ದಳು. ಮನೆಯವರೆಲ್ಲರ ಪ್ರೀತಿಯ ಒಡನಾಟದಲ್ಲಿ ಎರಡು ವರ್ಷಗಳು ಸರಿದಿದ್ದೇ ಗೊತ್ತಾಗಲಿಲ್ಲ. ಅತ್ತೆ-ಮಾವನವರು ಮುನ್ನುಡಿಯನ್ನು ಮಗಳಂತೆಯೇ ನೋಡಿಕೊಳ್ಳತೊಡಗಿದ್ದರು. ವೃಷಾಂಕನ ತಮ್ಮ ಅಭಿಷೇಕ್, ತಂಗಿ ಮಹಾನಂದಾ ಅವರಿಗೆ ಅತ್ತಿಗೆ ಎಂದರೆ ತುಂಬಾನೇ ಪ್ರೀತಿ, ಅಭಿಮಾನ. ಮನೆಯಲ್ಲಿ ಅವಳಿಗೆ ಯಾವುದೇ ಕೆಲಸವನ್ನು ಹಚ್ಚುತ್ತಿರಲಿಲ್ಲ. ಅವಳಿಗೆ ಯಾವುದೇ ಬೇಡಿಕೆಯನ್ನು ಇಡುತ್ತಿರಲಿಲ್ಲ. ತುಂಬಾನೇ ರೆಸ್ಪೆಕ್ಟ್ ಸಹ ಕೊಡುತ್ತಿದ್ದರು. ಅದೇನಂದರೆ ಅವರ ಮನೆಯಲ್ಲಿ ಐಷಾರಾಮಿ ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ಕಾರು ಇರಲಿಲ್ಲ. ಹೀಗೇ ಸಂಕ್ರಾಂತಿಗೆಂದು ತವರಿಗೆ ಹೋದಾಗ ಅವಳ ಅತ್ತಿಗೆ, `ಏನೇ ಮುನ್ನುಡಿ, ನೀನು, ನಿನ್ನ ಗಂಡ ಇಬ್ಬರೂ ಕೈತುಂಬಾ ಸಂಪಾದನೆ ಮಾಡುತ್ತಿರುವಿರಿ. ಆದರೂ ನೀವಿನ್ನೂ ಬಸ್ಸಲ್ಲೇ ಆಫೀಸಿಗೆ ಓಡಾಡುತ್ತಿರುವಿರಿ. ಕಾರನ್ನು ಖರೀದಿಸಲೇನು ಧಾಡಿ…? ಬೇಗ ಕಾರೊಂದನ್ನು ಖರೀದಿಮಾಡಿರಿ. ಮತ್ತೆ ಸ್ವಂತ ಮನೆಯೊಂದನ್ನು ಮಾಡಿಕೊಳ್ಳುವುದರ ಬಗ್ಗೆಯೂ ಯೋಚಿಸು. ಹಾಗೇ ನಿಮ್ಮ ಮನೆಯಲ್ಲಿ ಓಬೀರಾಯನ ಕಾಲದ ಸೋಫಾಸೆಟ್, ಡೈನಿಂಗ್ ಟೇಬಲ್‌ಗಳಿವೆ. ಅವುಗಳನ್ನೆಲ್ಲಾ ಗುಜರಿಗೆ ಹಾಕಿ ಲೇಟೆಸ್ಟ್ ಮಾಡೆಲ್ಲಿನ ಪೀಠೋಪಕರಣಗಳನ್ನು ಖರೀದಿಸಿರಲ್ಲ? ವೀಕೆಂಡ್‌ಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಜಮ್ಮಂತ ಹೊರಗಡೆ ಅಡ್ಡಾಡಿರಿ. ದುಡಿದಿದ್ದೆಲ್ಲವನ್ನು ಬರೀ ಅತ್ತೆ-ಮಾವನವರಿಗೆ, ಮೈದುನ, ನಾದಿನಿಯರಿಗೆ ಖರ್ಚುಮಾಡುತ್ತಾ ಕುಳಿತರೆ ನೀವು ಲೈಫ್ ಎಂಜಾಯ್ ಮಾಡೋದು ಯಾವಾಗ…? ನೀವು ಅವರಿಗಾಗಿ ದುಡಿಯೋ ಜೀವಗಳಾಗಬೇಡಿರಿ. ಅವರು ತಮ್ಮದನ್ನು ತಾವು ನೋಡಿಕೊಳ್ಳಲಿ’ ಎಂದು ಮುನ್ನುಡಿಯ ಮನದಲ್ಲಿ ಸ್ವಾರ್ಥದ ಕಿಡಿ ಹೊತ್ತಿಸಿದಳು. ತವರಿನಿಂದ ಬಂದ ಮುನ್ನುಡಿ ವೃಷಾಂಕನಿಗೆ ದುಂಬಾಲು ಬಿದ್ದಳು.

“ಮುನ್ನುಡಿ ಎಲ್ಲವನ್ನೂ ತರೋಣ. ಸ್ವಂತ ಸೂರನ್ನೂ ಮಾಡಿಕೊಳ್ಳೋಣ. ಇನ್ನೇನು ನಾಲ್ಕೈದು ವರ್ಷಗಳು ಅಷ್ಟೇ. ಅಭಿಷೇಕ್, ಮಹಾನಂದಾ ಉದ್ಯೋಗ ಹಿಡಿಯುತ್ತಾರೆ. ಅವರ ಮದುವೆಯೊಂದು ಮುಗಿದರೆ ನಾವು ಫ್ರೀಬರ್ಡ್ಸ್ . ಅಲ್ಲಿಯವರೆಗೆ ಸಹನೆ ಇರಲಿ. ಒಂದೊಂದೇ ಜವಾಬ್ದಾರಿ ತಾನಾಗಿಯೇ ಕಡಿಮೆಯಾಗುತ್ತವೆ. ಇಲ್ಲಿಯವರೆಗೆ ನಿನ್ನ ಒಳ್ಳೆಯತನದಿಂದ ಎಲ್ಲರ ಮನಸ್ಸುಗಳನ್ನು ಗೆದ್ದಿರುವಿ. ಅದು ಹೀಗೇ ಮುಂದುವರಿಯಲಿ.” ವೃಷಾಂಕ ಮುನ್ನುಡಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ. ಆದರೆ ಅವನ ಚೆನ್ನುಡಿಗಳು ಅವಳ ಕಿವಿಗೆ ಹೋಗಲೇ ಇಲ್ಲ. ಗಂಡ, ಹೆಂಡತಿಯರ ಪ್ರೀತಿಯ ಗೋಡೆಯಲ್ಲಿ ಬಿರುಕು ಮೂಡತೊಡಗಿತು. ಮೈದುನ, ನಾದಿನಿ ಮೊದಲಿನಂತೆಯೇ ಗೌರವ, ಪ್ರೀತಿ ತೋರಿಸುತ್ತಿದ್ದರೂ ಮುನ್ನುಡಿ ಅವರ ಮಾತುಗಳಲ್ಲಿ ತಪ್ಪು ಹುಡುಕತೊಡಗಿದಳು. ಅತ್ತೆ-ಮಾವನವರ ನಡೆಯಲ್ಲೂ ಅಪಾರ್ಥ ಕಂಡುಕೊಳ್ಳತೊಡಗಿದಳು. ಎಲ್ಲರೂ ಅವಳಿಗೆ ಬೇಡವಾಗತೊಡಗಿದರು. ಮೂರನೇ ವರ್ಷದ ಮದುವೆ ವಾರ್ಷಿಕೋತ್ಸವದಲ್ಲಿ ಉತ್ಸಾಹ, ಸಂಭ್ರಮವಿರಲಿಲ್ಲ.

“ವೃಷಾಂಕ, ಈ ಉಸಿರುಗಟ್ಟುವ ವಾತಾವರಣದಲ್ಲಿ ನನಗೆ ಇರಲಿಕ್ಕೆ ಸಾಧ್ಯವಿಲ್ಲ. ನಿನಗೆ ನಿನ್ನ ಹೆತ್ತವರು, ಒಡಹುಟ್ಟಿದವರೇ ಬೇಕಾದರೆ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು.”
“ಮುನ್ನುಡಿ, ಇನ್ನೇನು ಅಭಿಷೇಕನ ಪದವಿ ಕೆಲವೇ ದಿನಗಳಲ್ಲಿ ಮುಗಿಯುತ್ತದೆ. ಆಗಲೇ ಕ್ಯಾಂಪಸ್ ಸಿಲೆಕ್ಷನ್‌ದಲ್ಲಿ ಕೆಲಸವೂ ಸಿಕ್ಕಿದೆ. ಮಹಾನಂದಳ ಪದವಿಯೂ ಮುಂದಿನ ವರ್ಷ ಮುಗಿಯುತ್ತದೆ. ಅವಳೂ ತನ್ನ ಕಾಲಮೇಲೆ ನಿಂತುಕೊಳ್ಳುತ್ತಾಳೆ. ನೀನ್ಯಾಕೆ ಇಷ್ಟು ಟೆನ್ಸ್ ಆಗುತ್ತಿರುವಿಯೋ ಏನೋ…? ಶೋ ಕೈಂಡ್ನೆಸ್.”
“ನೀನು ಇವರ ಜೊತೆಗೆ ಇರುವುದಾದರೆ ಇರು. ಆದರೆ ನನಗೆ ಬಿಡುಗಡೆ ಬೇಕು. ಇಂಥಹ ಜಿಡ್ಡುಗಟ್ಟಿದ ವಾತಾವರಣದಲ್ಲಿ ನಾನಿರಲಾರೆ.”
“ಮುನ್ನುಡಿ, ನೀನೀಗ ಮೊದಲಿನ ಮುನ್ನುಡಿಯಂತೆ ಕಾಣುತ್ತಿಲ್ಲ. ತುಂಬಾನೇ ಸೆಲ್ಫ್ ಸೆಂಟರ್ಡ ಆಗುತ್ತಿರುವಿ. ಬೇಡ ಮುನ್ನುಡಿ, ಬೇಡ. ಸ್ವಾರ್ಥಿಯಾದರೆ ಜೀವನಕ್ಕೇ ಅರ್ಥವಿರುವುದಿಲ್ಲ. ಇನ್ನೊಬ್ಬರ ಏಳಿಗೆಯಲ್ಲಿ ನಾವು ಸುಖ-ಸಂತೋಷ ಕಂಡಾಗಲೇ ಜೀವನಕ್ಕೊಂದು ಅರ್ಥವಿರುತ್ತದೆ. ನೀನು ಪ್ರಬುದ್ಧಳಿರುವಿ, ಸರಿಯಾದ ದಿಶೆಯಲ್ಲಿ ಆಲೋಚಿಸು.”
“ನಿನ್ನ ಗೊಡ್ಡು ಪುರಾಣ ನನಗೆ ಬೇಡ. ನಾನು ವಿಚ್ಛೇದನಕ್ಕೆ ಅಪ್ಲೈ ಮಾಡುವೆ.” ಪ್ರಬಲ ಬಾಂಬ್ ಸಿಡಿಸಿದಳು ಮುನ್ನುಡಿ. ವೃಷಾಂಕ ಮೌನಕ್ಕೆ ಶರಣಾದ.

“ನೀನು ನನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ ದಿನವೇ ನಾನು ನನ್ನ ಬಗ್ಗೆ ಯಾವುದನ್ನೂ ಮುಚ್ಚಿಡದೇ ಎಲ್ಲವನ್ನೂ ಸ್ಪಷ್ಟವಾಗಿ ತಿಳಿಸಿದ್ದೆ. ನಿನಗೆ ಭ್ರಮನಿರಸನವಾಗುವುದೂ ಬೇಡವೆಂದಿದ್ದೆ. ಆದರೆ ನಿನ್ನ ಇಷ್ಟಾರ್ಥದಂತೆ ನಾವಿಬ್ಬರೂ ಜೊತೆಯಾದೆವು. ಈಗ ನೀನು ಆಗಿನ ಮಾತುಗಳೆಲ್ಲವನ್ನೂ ಮರೆತಿರುವ ಹಾಗಿದೆ. ಈಗಲೂ ನಿನ್ನಿಷ್ಟದಂತೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನನದೇನೂ ಅಭ್ಯಂತರವಿಲ್ಲ. ಮಾನವ ಚಂದ್ರನ ಮೇಲೆ ನಡೆದಾಡಿದ್ದಾನೆ; ಪಕ್ಷಿಗಳ ತರಹ ಆಕಾಶದಲ್ಲಿ ಹಾರಾಡುತ್ತಿದ್ದಾನೆ; ಮೀನುಗಳ ತರಹ ನೀರಿನಲ್ಲಿ ಈಜಾಡುತ್ತಿದ್ದಾನೆ. ಆದರೆ ಭೂಮಿ ಮೇಲೆ ಹೇಗೆ ಜೀವಿಸಬೇಕು ಅಂತ ಅನ್ನೋದನ್ನು ಕಲಿತಿಲ್ಲ ಎಂದು ನಮ್ಮ ದೇಶದ ಹೆಮ್ಮೆಯ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದ ಮಾತುಗಳು ಸರ್ವಕಾಲಕ್ಕೂ ಸತ್ಯವಾದವುಗಳೇ” ಎಂದ ವೃಷಾಂಕ ಮ್ಲಾನವದನನಾದ.

ಹೀಗೆ ಮುನ್ನುಡಿ, ವೃಷಾಂಕನ ನಡುವೆ ಮಾತುಕತೆಗಳಾದ ಮಾರನೇ ತಿಂಗಳು ಮುನ್ನುಡಿ ವೃಷಾಂಕನಿದ ದೂರಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಯೂಬಿಟ್ಟಳು. ವಿಚ್ಛೇದನವೂ ಸಿಕ್ಕಿತು. ತವರು ಸೇರಿಕೊಂಡಳು. ಅಲ್ಲಿಯ ಶೋಷಣೆಯ ವಾತಾವರಣದಿಂದ ತುಂಬಾನೇ ನೊಂದುಕೊಂಡಳು. ವಿಚ್ಛೇದನ ಪಡೆದ ಕೆಲವೇ ತಿಂಗಳುಗಳಲ್ಲಿ ಅವಳಿಗೆ ವೃಷಾಂಕ ಬೇಕೆನಿಸತೊಡಗಿತು. `ಅವನದು ನಿಜವಾಗಿಯೂ ಸಾರ್ಥಕ ಜೀವನ. ಒಡಹುಟ್ಟಿದವರನ್ನು ಒಂದು ದಾರಿಗೆ ತಂದು ಹಚ್ಚಿರುವ ಸಾರ್ಥಕಭಾವ ಅವನ ಪ್ರತಿನಡೆಯಲ್ಲೂ ಕಾಣುತ್ತಿದೆ. ಅತ್ತೆ-ಮಾವ, ಮೈದುನ, ನಾದಿನಿ ನನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದರಲ್ಲವೇ…? ಅವರ ನಡೆಯಲ್ಲಿ ಒಂಚೂರೂ ನಾಟಕೀಯತೆ ಇರಲಿಲ್ಲ. ಅವರೆಲ್ಲರನ್ನೂ ನಾನೀಗ ತುಂಬಾ ಮಿಸ್‌ಮಾಡಿಕೊಳ್ಳುತ್ತಿರುವುದು ನನ್ನ ಹೃದಯದರಿವಿಗೆ ಬರತೊಡಗಿದೆ. ನನ್ನಣ್ಣ, ನನ್ನಣ್ಣನ ಮನೆಯಲ್ಲಿರುವವರೆಲ್ಲರೂ ನನ್ನ ಅಸಹಾಯಕತೆಯನ್ನು ಎಕ್ಸ್ಪ್ಲೊಯ್ಟ್ ಮಾಡಲು ಹವಣಿಸುತ್ತಿದ್ದಾರೆ. ಅವರಿಗೆ ನನ್ನ ಬಗ್ಗೆ ಎಳ್ಳಷ್ಟೂ ಪ್ರೀತಿ ಇಲ್ಲ. ಅವರಿಗೆ ನಾನು ಬೇಕಿಲ್ಲ. ಬರೀ ನನ್ನ ದುಡ್ಡು ಬೇಕು ಅಷ್ಟೇ. ಹಾಗಾದರೆ ನನ್ನವರೆಂದರೆ ಯಾರು…? ಹೌದೌದು, ಗೊತ್ತಾಯಿತು. ನಾನೀ ವಿಷ ವರ್ತುಲದಿಂದ ಹೊರಗೆ ಬರಬೇಕು. ಪಾಪ…! ನನ್ನ ವಿಚಿತ್ರ ನಡೆಯಿಂದ ವೃಷಾಂಕ ಅದೆಷ್ಟು ನೊಂದುಕೊಂಡಿರುವನೋ ಏನೋ…? ಹೌದು, ನನಗೀಗ ನನ್ನ ವೃಷಾಂಕ ಬೇಕು. ಅವನ ಪ್ರೀತಿಯ ಮಾತುಗಳನ್ನು ಆಲಿಸುತ್ತಾ ಹಾಗೇ ಹೆಂಗರುಳಿನ ಅವನೆದೆಯಲ್ಲಿ ನಾನು ಕರಗಬೇಕು.’ ಮುನ್ನುಡಿ ಚಡಪಡಿಸಿದಳು. ತಕ್ಷಣ ಫೋನಾಯಿಸಿದಳು.

“ಹಲೋ ವೃಷಾಂಕ, ನಾನು ಮುನ್ನುಡಿ. ನನಗೆ ನನ್ನ ತಪ್ಪಿನ ಅರಿವಾಗಿದೆ. ಕ್ಷಮಿಸಿಬಿಡು. ನೀನು, ನಿನ್ನ ಪ್ರೀತಿಯ ರಕ್ಷಣಾತ್ಮಕ ಅಪ್ಪುಗೆ ನನಗೆ ಬೇಕು. ನಾನು ಈಗಲೇ ಬರುವೆ. ಸ್ವಾಗತಿಸುವಿಯಾ…?” ಬಡಬಡಿಸುವಷ್ಟರಲ್ಲಿ ಭಾವುಕಳಾಗಿ ಹನಿಗಣ್ಣವಳಾದಳು.
“ಮುನ್ನುಡಿ, ನಿನ್ನ ಮಾತುಗಳನ್ನು ಕೇಳಿಸಿಕೊಂಡು ನನ್ನೆದೆಯಲ್ಲಿ ಸವಿಜೇನು ಸುರಿದ ಅನುಭವವಾಗತೊಡಗಿದೆ. ತೆರೆದ ತೋಳುಗಳಿಂದ ನಿನ್ನನ್ನು ಸ್ವಾಗತಿಸುವೆ. ತಕ್ಷಣವೇ ಬಂದುಬಿಡು. ನಾನು ಎಂದೆಂದೂ ನಿನ್ನವನೇ, ನೀನು ನನ್ನವಳೇ… ಮನಸಿಗಿಂತ ದೊಡ್ಡ ನ್ಯಾಯಾಲಯವಿಲ್ಲ, ಮನಸ್ಸಾಕ್ಷಿಗಿಂತ ದೊಡ್ಡ ನ್ಯಾಯಾಲಯವಿಲ್ಲವೆಂದು ಇದಕ್ಕೇ ಹೇಳುತ್ತಾರೇನೋ?” ವೃಷಾಂಕನೂ ಭಾವುಕನಾಗಿ ಹನಿಗಣ್ಣವನಾದನು.

ಶೇಖರಗೌಡ ವೀ ಸರನಾಡಗೌಡರ್, ಕೊಪ್ಪಳ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *