ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 34

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅವಳು ಕ್ಯಾಂಪಸ್ ಬಿಟ್ಟಾಗ ಆರು ಗಂಟೆಯಾಗಿತ್ತು. ದಾರಿಯಲ್ಲಿ ಬಕುಳಾಳ ಬಲವಂತಕ್ಕೆ ಎಳನೀರು ಕುಡಿದಳು. ಮನೆ ತಲುಪುತ್ತಿದ್ದಂತೆ ಕುಸಿದುಬಿದ್ದಳು. ಅಲ್ಲಿದ್ದ ಚಂದ್ರಾವತಿ, ಬಕುಳಾ ಅವಳನ್ನು ಕೂಡಿಸಿದರು.
“ಆಂಟಿ ತುಂಬಾ ಸುಸ್ತಾಗುತ್ತಿದೆ. ವಾಮಿಟ್ ಆಗುವ ಹಾಗೆ ಆಗ್ತಿದೆ.”

ಅಷ್ಟರಲ್ಲಿ ಮಲ್ಲಿ ಬಂದಳು.
ಮಲ್ಲಿ, ಬಕುಳಾ ಅವಳನ್ನು ಬಾತ್‌ರೂಂಗೆ ಕರೆದೊಯ್ದರು. ಅಲ್ಲಿಂದ ವಾಪಸ್ಸು ಬರುವಾಗ ಬಿದ್ದುಬಿಟ್ಟಳು. ಜ್ಞಾನಹೋಗಿತ್ತು. ಚಂದ್ರಾವತಿ ಆರ್.ಜಿ.ಗೆ ಫೋನ್ ಮಾಡಿದರು. ಅವನು ಅವಳ ಸ್ಥಿತಿ ನೋಡಿ ಗಾಬರಿಯಾದ.
“ಆಂಟಿ ನರ್ಸಿಂಗ್ ಹೋಂಗೆ ಸೇರಿಸೋಣ. ನಂಗೆ ಗಾಬರಿಯಾಗ್ತಿದೆ.”
“ಹಾಗೇ ಮಾಡಪ್ಪ.”
ಶಾರದಾಳನ್ನು ಮಲ್ಲಿ ಜೊತೆ ಬಿಟ್ಟು ಚಂದ್ರಾವತಿ ಸೀರೆ ಬದಲಿಸಿದರು. ನಂತರ ಎಲ್ಲರೂ ಸೇರಿ ವಾರುಣಿಯನ್ನು ಕಾರು ಹತ್ತಿಸಿದರು. ಸರಸ್ವತಿ ನರ್ಸಿಂಗ್ ಹೋಂ ತಲುಪಿದೊಡನೆ ಬಕುಳಾ ಹೋಗಿ ಸ್ಟೆçಚರ್ ತೆಗಿಸಿಕೊಂಡು ಬಂದಳು. ಚಂದ್ರಾವತಿಗೆ ಪರಿಚಯವಿದ್ದ ಡಾ|| ಪದ್ಮಿನಿ ಟ್ರೀಟ್‌ಮೆಂಟ್ ಆರಂಭಿಸಿದರು. ಒಂದು ಇಂಜೆಕ್ಷನ್ ಕೊಟ್ಟು ಡ್ರಿಪ್ಸ್ ಹಾಕಿದರು.

“ಪೇಷೆಂಟ್ ತುಂಬಾ ಸುಸ್ತಾಗಿದ್ದಾರೆ. ನಾಳೇನೂ ಡ್ರಿಪ್ಸ್ ಹಾಕಬೇಕಾಗಬಹುದು.”
“ಮತ್ತೇನೂ ತೊಂದರೆ ಇಲ್ವಾ?”
“ಇಲ್ಲ. ಊಟ, ತಿಂಡಿ ಸರಿಯಾಗಿ ಮಾಡದೆ ನಿದ್ರೆಗೆಟ್ಟು ಆಯಾಸಮಾಡಿಕೊಂಡಿದ್ದಾರೆ……”
“ಪ್ರಯಾಣ ಮಾಡಬಹುದಾ?”
“ಬೇಡ. ಅವರು ಪ್ರಯಾಣ ತಡೆಯುವ ಸ್ಥಿತಿಯಲ್ಲಿಲ್ಲ.”
ಚಂದ್ರಾವತಿ ನೆಮ್ಮದಿಯಿಂದ ಉಸಿರೆಳೆದುಕೊಂಡರು.

“ಆರ್.ಜಿ. ನೀನು ನಾಳೆ ಬೆಳಿಗ್ಗೆ ಊರಿಗೆ ಹೊರಡು.”
“ಬಕುಳಾ ಬನ್ನಿ. ನಿಮ್ಮನ್ನು ಬಸ್ಟಾಪ್‌ಗೆ ಬಿಡ್ತೀನಿ.”
“ಬೇಡ. ನಮ್ಮ ಪರಿಚಯದ ಆಟೋದವರಿಗೆ ಫೋನ್ ಮಾಡಿದರೆ ರ‍್ತಾರೆ. ನೀವು ಹೋಗಿ. ನಾನು ಆಂಟಿ ನೋಡಿಕೊಳ್ತೇವೆ.”
“ನೀವು ಹೊರಡೀಂತ ಹೇಳಿದ್ನಲ್ಲಾ?” ಅವನು ಧ್ವನಿ ಏರಿಸಿದ. ಬಕುಳಾ ಮರುಮಾತಾಡದೆ ಹೊರಟಳು.
“ಆರ್.ಜಿ…….”
“ವಾರುಣಿ ಡಿಸ್ಚಾರ್ಜ್ ಆಗುವವರೆಗೂ ನಾನು ಊರಿಗೆ ಹೊರಡಲ್ಲ. ಈಗ ತೇಜಸ್ವಿ ಇರ‍್ತಾನೆ. ನೀವು ಮನೆಗೆ ಹೋಗಿ.”
“ಹಾಗಲ್ಲಪ್ಪ.”
“ಆಂಟಿ ವಾರುಣಿ ಹೀಗೆ ಮಲಗಿರುವಾಗ ನಾನು ಹೇಗೆ ಹೊರಡಲಿ? ನನಗೆ ಡ್ರೈವ್ ಮಾಡಕ್ಕಾಗತ್ತಾ?” ಅವನ ಕಣ್ಣುಗಳು ಹನಿಗೂಡಿದವು.
“ನಾನು ರಾತ್ರಿ ಇರ‍್ತೀನಿ. ತೇಜಸ್ವಿ……..”
“ಆಯ್ತಪ್ಪ. ಹೊರಡ್ತೀನಿ.”

ರಾತ್ರಿ ಪೂರ್ತಿ ಆರ್.ಜಿ. ಎಚ್ಚರವಾಗಿದ್ದ. ವಾರುಣಿ ನಿದ್ರೆಯ ಮಂಪರಿನಲ್ಲಿದ್ದಳು.
ಬೆಳಿಗ್ಗೆ ಸುಮಾರು ೭ ಗಂಟೆಯ ಹೊತ್ತಿಗೆ ವಾರುಣಿಗೆ ಎಚ್ಚರವಾಯಿತು.
“ನಾನೆಲ್ಲಿದ್ದೀನಿ?”
ನರ್ಸ್ ಅವಳಿಗೆ ಪರಿಸ್ಥಿತಿ ವಿವರಿಸಿದಳು.
“ನನ್ನ ಜೊತೆ ಯಾರಿದ್ದಾರೆ?”
“ನಿಮ್ಮ ಫ್ರೆಂಡ್ ಇದ್ದಾರೆ. ರಾತ್ರಿಯೆಲ್ಲಾ ಅವರು ಒಂದು ಕ್ಷಣ ಕಣ್ಮಿಚ್ಚಲಿಲ್ಲ. ಅವರು…….”
“ಅವರೀಗ ಎಲ್ಲಿ?”
“ನಿಮಗೆ ಕಾಫಿ ತರಲು ಹೋಗಿರಬಹುದು.”
ಅಷ್ಟರಲ್ಲಿ ಆರ್.ಜಿ. ಕಾಣಿಸಿದ. ಅವನ ಕೈಯಲ್ಲಿ ಫ್ಲಾಸ್ಕ್ ಇತ್ತು.

“ರಾತ್ರಿ ನೀವಿದ್ರಾ?”
“ಯಾಕೆ ಇರಬಾರದಿತ್ತಾ?”
“ನೀವು ಯಾಕೆ ತೊಂದರೆ ತೆಗೆದುಕೊಂಡ್ರಿ? ಅಣ್ಣನ ಮದುವೆ ಇರುವಾಗ………”
“ನಿಮ್ಮ ತಂಗಿಯ ಮದುವೆಯೂ ಇದೆ ಅಲ್ವಾ?”
“ಒಟ್ಟಿನಲ್ಲಿ ನನ್ನಿಂದ ಯಾರಿಗೂ ಸುಖವಿಲ್ಲ………”
ಅವನು ಅವಳ ಕೈ ಹಿಡಿದು ಹೇಳಿದ. “ನೀವು ಮಲಗಿರುವಾಗ ಆಂಟಿ ಮೇಲೆ ಜವಾಬ್ಧಾರಿ ಬಿಟ್ಟು ನಾನು ಹೋಗಕ್ಕಾಗುತ್ತದಾ? ನೀವು ಡಿಸ್ಚಾರ್ಜ್ ಆಗಿ ಮನೆಗೆ ಬಂದು ಒಂದು ತುತ್ತು ಅನ್ನ ತಿನ್ನಿ. ನಾನಾಗ ಸಮಾಧಾನದಿಂದ ಹೊರಡ್ತೇನೆ.”
ಡಾ|| ಪದ್ಮಿನಿ ಡಿಸ್ಚಾರ್ಜ್ ಮಾಡಲು ಒಪ್ಪಿದರು.

“ಒಂದು ವೇಳೆ ಮತ್ತೆ ಸುಸ್ತಾದರೆ ಇವತ್ತೇ ಫೋನ್ ಮಾಡಲು ಚಂದ್ರಾಗೆ ಹೇಳಿ. ಡ್ರಿಪ್ಸ್ ಹಾಕಲು ನಾನು ನರ್ಸನ್ನು ಕಳಿಸಿಕೊಡ್ತೀನಿ.”
ಹನ್ನೊಂದು ಗಂಟೆಯ ಹೊತ್ತಿಗೆ ವರು ಡಿಸ್ಚಾರ್ಜ್ ಆಗಿ ಮನೆಗೆ ಬಂದಳು. ಚಂದ್ರಾವತಿ ತಾವೇ ಅನ್ನ, ಸಾರು ಮಾಡಿದ್ದರು.
“ಮಲ್ಲಿ ನೀರು ತೋಡಿಕೊಡು. ವರು ಸ್ನಾನ ಮಾಡಿ ಬರಲಿ.”
ವಾರುಣಿ ಸ್ನಾನಕ್ಕೆ ಹೋದಳು.
“ಆರ್.ಜಿ. ನಿನ್ನ ಬಟ್ಟೆಗಳು ಇಲ್ಲೇ ಇವೆ………”
“ಇಲ್ಲಾಂಟಿ, ನಾನು ಮನೆಗೆ ಹೋಗಿ ಸ್ನಾನ ಮಾಡಿ ಲಗೇಜ್ ತೆಗೆದುಕೊಂಡು ಬರ‍್ತೀನಿ. ಇಲ್ಲೇ ಊಟ ಮಾಡಿಕೊಂಡು ಹೊರಡ್ತೀನಿ.”
“ನಿನ್ನ ಜೊತೆ ನಾನೂ ಬರ‍್ತಿದ್ದೀನಲ್ಲಾ?”
“ಅಯ್ಯೋ ನೀವು ಬಂದ್ರೆ ವಾರುಣಿಯನ್ನು ಯಾರು ನೋಡಿಕೊಳ್ತಾರೆ?”
ಚಂದ್ರಾವತಿ ಜೋರಾಗಿ ನಕ್ಕರು. ಅವನು ನಾಚಿಕೊಂಡು ಎದ್ದುಹೋದ.

ಅವನು ವಾಪಸ್ಸು ಬರುವ ವೇಳೆಗೆ ವಾರುಣಿ ಊಟ ಮುಗಿಸಿದ್ದಳು. ಅವನು ಊಟ ಮಾಡಿಕೊಂಡು ಹೊರಟ.
“ನೀವು ಗಾಬರಿಯಾಗಬೇಡಿ. ನಿಮ್ಮ ತಂದೆ-ತಾಯಿಗೆ ಕನ್‌ವಿನ್ಸ್ ಆಗುವ ಹಾಗೆ ನಾನು ಹೇಳ್ತೀನಿ.”
“ಓ.ಕೆ. ಥ್ಯಾಂಕ್ ಯು.”
ಅವನು ಹೊರಟಕೂಡಲೇ ಚಂದ್ರಾವತಿ ಹೇಳಿದರು. “ರಾತ್ರಿಯೆಲ್ಲಾ ನಿದ್ರೆ ಮಾಡದೆ ನಿನ್ನ ನೋಡ್ಕೊಂಡನಂತೆ. ಡಾ|| ಪದ್ಮಿನಿ ಹೇಳಿದರು.”
“ಅವರೇ ಡ್ರೈವ್ ಮಾಡ್ತಾರಾ?”
“ಅವನು ನಾನೇ ಡ್ರೈವ್ ಮಾಡ್ತೀನಿ ಅಂದ. ನಾನು ಬೈದು ನಮ್ಮ ಡ್ರೈವರ್‌ನ ಕಳಿಸಿದೆ. ಸಮಾಧಾನವಾಯಿತಾ?”
ಅವಳು ಕಿರುನಗೆ ಬೀರಿದಳು.
“ಒಟ್ಟಿನಲ್ಲಿ ಆರ್.ಜಿ ನಿನ್ನ ತುಂಬಾ ಹಚ್ಚಿಕೊಂಡಿದ್ದಾನೆ ಅನ್ನಿಸಿತು.”
ಅವಳು ‘ಆ ಮಾತಿಗೆ ಸಿಡುಕದೆ ಮುಗುಳ್ನಗೆ ಬೀರಿದಾಗ ಹುಡುಗಿ ಬದಲಾಗುತ್ತಿದ್ದಾಳೆ’ ಅನ್ನಿಸಿತು.


ಆರ್.ಜಿ. ತಾವರೆಕಟ್ಟೆ ತಲುಪಿದಾಗ ೭.೩೦ ಯಾಗಿತ್ತು.
“ಯಾಕೋ ಯಾರೂ ಫೋನ್ ಎತ್ತಲಿಲ್ಲ? ಕೊನೆಗೆ ಶರು ತಾಯಿ ಮಲ್ಲಿಗೆ ಫೋನ್ ಮಾಡಿದರು. ಅವಳು ಎಲ್ಲರೂ ಹೊರಟಿದ್ದಾರೆ” ಅಂದಳು. ನೀನೊಬ್ಬನೇ ಬಂದಿದ್ದೀಯ.
“ಎಲ್ಲಾ ಹೊರಟಿದ್ದೆವು. ಅನಿರೀಕ್ಷಿತ ಘಟನೆಗಳಿಂದ ಏನೇನೋ ಆಗಿಹೋಯ್ತು.”
“ಏನಾಯ್ತು?”
ಆರ್.ಜಿ. ಹೇಳಿದ.

“ಈಗ ಹೇಗಿದ್ದಾಳಪ್ಪಾ?” ಶಕುಂತಲಾ ಅಳುತ್ತಾ ಕೇಳಿದರು.
“ನೀವು ಹೆದರುತ್ತೀರಾಂತಾನೇ ಎಲ್ಲಾ ವೀಡಿಯೋ ಮಾಡಿದ್ದೀನಿ. ನೋಡಿ ಬೆಳಿಗ್ಗೆ ಅವರು ಡಿಸ್ಚಾರ್ಜ್ ಆಗಿ ಊಟ ಮಾಡಿದ ಮೇಲೆ ನಾನು ಹೊರಟಿದ್ದು. ಒಂದು ವಾರ ಅವರು ಕಾಲೇಜ್ ಕಡೆ ಸುಳಿಯುವಂತಿಲ್ಲ. ಅವರನ್ನು ನೋಡಿಕೊಳ್ಳಲು ಚಂದ್ರಾವತಿ ಆಂಟಿ ಉಳಿದುಕೊಳ್ಳಬೇಕಾಯಿತು.”
“ಆ ಹುಡುಗಿ ಮೊದಲು ಹುಷಾರಾಗಲಿ ಗೋಪಿ. ಈಗೇನಾದ್ರೂ ತೊಂದರೆ ಆದರೆ ಆಂಟಿ ಒಬ್ಬರೇ ನಿಭಾಯಿಸುತ್ತಾರಾ?”
“ಮನೆ ಹತ್ತಿರ ಅವರ ತಮ್ಮ ಇದ್ದಾರೆ. ನರ್ಸಿಂಗ್ ಹೋಂ ಡಾಕ್ಟರ್ ಆಂಟಿ ಫ್ರೆಂಡ್. ಏನೂ ಯೋಚನೆಯಿಲ್ಲ.”
“ವರು ತಂಗಿ ಮದುವೆಗೆ ಬರಕ್ಕಾಗಲಿಲ್ಲವಲ್ಲಾಂತ ಬೇಜಾರಾಗ್ತಿದೆ” ಶೋಭಾ ಹೇಳಿದರು.

ಅಲ್ಲೇ ಇದ್ದ ದೇವಕಿ ಶರು ಇದ್ದ ರೂಮ್‌ಗೆ ಹೋಗಿ ಸುದ್ದಿ ಮುಟ್ಟಿಸಿದರು. ವರಪೂಜೆಗೆ ರೆಡಿಯಾಗುತ್ತಿದ್ದ ಶರು ಸೀರೆ ಸರಿಮಾಡಿಕೊಳ್ಳುತ್ತಾ ಹೇಳಿದಳು “ಅವಳು ಬರಲ್ಲಾಂತ ನನಗೆ ಗೊತ್ತಿತ್ತು.”
“ಯಾಕೆ ಹಾಗಂತೀಯಾ?”
“ಅವಳಿಗೆ ನಾನು ಅವಳಿಗಿಂತ ಮೊದಲು ಮದುವೆಯಾಗ್ತಿದ್ದೀನಲ್ಲಾ…… ಅದಕ್ಕೆ ಹೊಟ್ಟೆಕಿಚ್ಚು. ನಾನು ಇಷ್ಟು ಒಳ್ಳೆಯ ಮನೆ ಸರ‍್ತಿದ್ದೀನಲ್ಲಾಂತ ಹೊಟ್ಟೆ ಉರಿ……..”
ಚಂದ್ರಾವತಿ ಕಳುಹಿಸಿದ್ದ ಉಡುಗೊರೆ ಕೊಡಲು ಬಂದಿದ್ದ ಆರ್.ಜಿ.ಗೆ ಶರುವಿನ ಮಾತುಗಳು ಕಿವಿಗೆ ಬಿದ್ದವು. ಅವನು ಉಕ್ಕಿ ಬಂದ ತನ್ನ ಕೋಪ ತಡೆದುಕೊಂಡ.
“ಒಳಗೆ ಬರಬಹುದಾ?”
“ಬನ್ನಿ ಬನ್ನಿ” ದೇವಕಿ ಕರೆದಳು.
“ಚಂದ್ರಾವತಿ ಆಂಟಿ ನಿಮಗೆ ಉಡುಗೊರೆ ಕಳಿಸಿದ್ದಾರೆ” ಅವನು ಒಂದು ಗಿಫ್ಟ್ ಪ್ಯಾಕೆಟ್ ಕೈಗಿತ್ತು ಹೇಳಿದ.

“ಅವರು, ವರು ಅಕ್ಕ ಬರಲಿಲ್ಲಾಂತ ನನಗೆ ತುಂಬಾ ಬೇಜಾರಾಗ್ತಿದೆ. ನಾನು ದೇವಕಿ ಅತ್ತೆ ಹತ್ತಿರ ಅದೇ ಹೇಳ್ತಿದ್ದೆ.”
“ನೀವು ಏನು ಹೇಳ್ತಿದ್ದರೋ ಅದನ್ನು ನಾನು ಕೇಳಿಸಿಕೊಂಡೆ. ವಾರುಣಿಯಂತಹ ಸಂಸ್ಕಾರವಂತ ಅಕ್ಕನಿಗೆ ನೀವು ಸರಿಯಾದ ತಂಗಿಯಲ್ಲಾಂತ ಬೇಜಾರಾಗ್ತಿದೆ. ಈ ವೀಡಿಯೋ ನೋಡಿ ನಿಮ್ಮಕ್ಕನಿಗೆ ಹುಷಾರಿರಲಿಲ್ಲವೋ ಇತ್ತೋ ಅಂತ ಗೊತ್ತಾಗುತ್ತದೆ……….”
ಶರು ಪೆಚ್ಚಾದಳು.

“ಚಿಕ್ಕ ಹುಡುಗಿ. ಅಕ್ಕ ಬರಲಿಲ್ಲವಲ್ಲಾಂತ ಬೇಜಾರಿನಿಂದ ಏನೋ ಹೇಳಿದಳು. ನೀವಿದನ್ನು ಸೀರಿಯಸ್ಸಾಗಿ ತೊಗೋಬೇಡಿ.”
“ಆಂಟಿ ಒಂದು ಮೊಬೈಲ್ ನಂಬರ್ ಕೊಡ್ತೇನೆ. ಸೇವ್ ಮಾಡಿಕೊಳ್ಳಿ.”
“ಯಾರ ನಂಬರ್?”
ಡಾ|| ಪದ್ಮಿನಿಯವರದು. ಅವರ ನರ್ಸಿಂಗ್‌ಹೋಂಗೇ ನಾವು ಸೇರಿಸಿದ್ದಿದ್ದು. ವಾರುಣಿ ನಾಟಕ ಆಡ್ತಿದ್ದಾರೆ ಅನ್ನಿಸಿದರೆ ಫೋನ್ ಮಾಡಿ ವಿಚಾರಿಸಲು ಇವರಿಗೆ ಹೇಳಿ”. ಅವನು ಅವರ ಉತ್ತರಕ್ಕೂ ಕಾಯದೆ ಬಾಗಿಲು ದಾಟಿದ.
“ಬಾಯಿ ಮುಚ್ಚಿಕೊಂಡು ಇರಕ್ಕಾಗಲ್ವಾ ನಿನಗೆ? ವರು ಯಾವತ್ತಾದರೂ ಹೊಟ್ಟೆಕಿಚ್ಚಿ ಪಟ್ಟಿದ್ದಾಳಾ? ನಿನಗೆ ಅಹಂಕಾರ ಬಂದಿದೆ. ಆರ್.ಜಿ. ಹೋಗಿ ಕೀರ್ತಿ ಹತ್ತಿರ ಹೇಳಿದರೆ ಏನ್ಮಾಡ್ತೀಯಾ?” ಅಲ್ಲೇ ಇದ್ದ ಜಾನಕಿ ಕೇಳಿದಳು.
“ನಂಗೆ ಗೊತ್ತಾಗಲಿಲ್ಲ ಚಿಕ್ಕಮ್ಮ.”
“ತುಂಬಿದ ಮನೆಗೆ ಸೇರಿದ್ದೀಯ. ತುಂಬಿದ ಮನಸ್ಸು ಇರಬೇಕು. ನಾವು ಗಮನಿಸಿದ ಹಾಗೆ ಇಲ್ಲಿ ಅಣ್ಣತಮ್ಮಂದಿರು ತುಂಬಾ ಹೊಂದಿಕೊಂಡು ಇದ್ದಾರೆ. ಏನೇನೋ ಮಾತಾಡಿ ಜೀವನ ಹಾಳ್ಮಾಡಿಕೊಳ್ಳಬೇಡ” ದೇವಕಿ ಬುದ್ಧಿ ಹೇಳಿದಳು.


ಪಾರ್ವತಿ ಅತ್ತೆ ಮಗ-ಸೊಸೆ, ಮಗಳ ಜೊತೆ ಬಂದಿದ್ದರು. ನಟು ಮದುವೆಗೆ ಬರಲು ಒಪ್ಪಿರಲಿಲ್ಲ. ಅವರು ರೇಖಾ ಬಳಿ “ನೀನಾದರೂ ಅವನಿಗೆ ಬುದ್ಧಿ ಹೇಳಮ್ಮ” ಎಂದು ಕೇಳಿದ್ದರು.
“ನಟು ಬುದ್ಧಿವಂತ ಆಗ್ತಿದ್ದಾನೆ. ತಂಗಿ ಜೊತೆ ದಿನಾ ವಾಕಿಂಗ್ ಹೋಗ್ತಿದ್ದಾನೆ. ಕೆಲಸ ಮಾಡಬೇಕು ಅನ್ನುವ ಛಲ ಬಂದಿದೆ. ತನ್ನನ್ನು ಬೇಡ ಅಂದ ಹುಡುಗಿ ಮದುವೆಗೆ ಅವನು ಯಾಕೆ ಬರಬೇಕು?”
“ನೀನು ಹೇಳುವುದೂ ಸರಿಯಾಗಿದೆ ಬಿಡು” ಎಂದಿದ್ದರು.
ಶರು ಮದುವೆಗೆ ಬಂದ ನಂತರ ಗಂಡಿನ ಕಡೆಯವರಾದ ರೇಣುಕಮ್ಮ ಅವರಿಗೆ ಪರಿಚಯವಾಗಿದ್ದರು.

“ನಿಮಗೆ ಎಷ್ಟೊಂದು ಶಾಸ್ತ್ರ ಸಂಪ್ರದಾಯ ತಿಳಿದಿದೆ. ಪಾರ್ವತಮ್ಮ ನಿಮ್ಮಂತಹ ಹಿರಿಯರೊಬ್ಬರು ಮನೆಯಲ್ಲಿರಬೇಕು. ನಿಮ್ಮ ಮಾರ್ಗದರ್ಶನ ಬೇಕು. ನೀವೇ ನಿಂತು ಮದುವೆ ನಡೆಸಿಕೊಡಿ” ಎಂದರು. ಪಾರ್ವತಿಗೆ ಖುಷಿಯಾಗಿತ್ತು. ಪುರೋಹಿತರಿಗೂ ಅವರು ಹೇಳಿದ್ದೆಲ್ಲಾ ಸರಿಯಾಗಿದೆ ಅನ್ನಿಸಿತ್ತು.
“ಯಾವ ಶಾಸ್ತ್ರ, ಸಂಪ್ರದಾಯಗಳಿಗೂ ಚ್ಯುತಿ ಬಾರದಂತೆ ನಡೆಸಿಕೊಡಿ” ಎಂದು ಆರ್.ಜಿ. ದೊಡ್ಡಪ್ಪಂದಿರು ಬಂದು ಕೇಳಿದ್ದು ಅವರಿಗೆ ಕೋಡು ಬಂದಂತಾಗಿತ್ತು. ವರಪೂಜೆ ಕಾರ್ಯಕ್ರಮ ಮುಗಿದು ಎಲ್ಲರೂ ಹರಟುತ್ತಾ ಕುಳಿತಿದ್ದರು. ರೇಣುಕಮ್ಮ ಕೇಳಿದರು “ಹುಡುಗಿಗೆ ಒಬ್ಬಳು ಅಕ್ಕ ಇದಾಳಂತೆ.”
“ಹುಂ. ಮೈಸೂರಲ್ಲಿ ಎಂ.ಎ. ಓದ್ತಿದ್ದಾಳೆ. ನೀವು ಗೋಪಿ ಅಂತೀರಲ್ಲಾ ಅವನ ಕ್ಲಾಸ್‌ಮೇಟ್.”
“ಅವಳಿಗೆ ಮದುವೆ ಮಾಡದೆ ಇವಳಿಗೆ ಯಾಕೆ ಮದುವೆ ಮಾಡ್ತಿದ್ದಾರೆ?”
“ಅವಳದು ಆಶ್ಲೇಷ ನಕ್ಷತ್ರ. ಅತ್ತೆ ಇಲ್ಲದ ಮನೆ ಆಗಬೇಕು. ಹುಡುಗ ಸಿಗ್ತಿಲ್ಲ. ಅವಳಿಗೆ ಹೆಚ್ಚು ಓದಿರುವ ಹುಡುಗ ಬೇಕು. ಇದನ್ನೆಲ್ಲಾ ನೋಡಿ ನಾನೇ ಕೇಳಿದ್ದೆ. `ಮನೆ ಮನೆಯವರಲ್ಲಿ ಜಾತಕ ನೋಡುವ ಅವಶ್ಯಕತೆಯಿಲ್ಲ.’ ನನ್ನ ಮಗನಿಗೆ ನಿನ್ನ ಮಗಳನ್ನು ಕೊಡೂಂತ. ನನ್ನ ತಮ್ಮ ಒಪ್ಪಿದ್ದ. ಆದರೆ ಅವನ ಮಗಳು ಒಪ್ಪಲಿಲ್ಲ.”
“ನಿಮ್ಮ ಮಗನಿಗೆ ಮದುವೆ ಆಯ್ತಾ?”
“ಹುಂ. ಹುಡುಗಿ ಕಾಲೇಜು ಲೆಕ್ಚರರ್. ತುಂಬಾ ಅನುಕೂಲಸ್ಥರು. ನನ್ನ ಮಗ ಫ್ಯಾಕ್ಟರಿ ಕೆಲಸದಲ್ಲಿದ್ದಾನೆ. ಕೆಲಸ ಬಿಡಿಸಿ ಏನಾದರೂ ಬಿಸಿನೆಸ್ ಮಾಡಲು ಸಹಾಯ ಮಾಡಬೇಕೂಂತ ಇದ್ದಾರೆ. ಅವನ ಅತ್ತೆಯ ಮನೆಯವರು.”
“ನಿಮ್ಮ ಹುಡುಗ ಪುಣ್ಯ ಮಾಡಿದ್ದ.”
“ಹೌದಮ್ಮ” ಎಂದರು ಪಾರ್ವತಮ್ಮ.

ಅಲ್ಲೇ ಇದ್ದ ರೇಖಾ ಅತ್ತೆಯ ಮಾತು ಕೇಳಿಸಿಕೊಂಡಿದ್ದಳು. ಅವಳು ಸೀದಾ ಶಕುಂತಲಾ ಬಳಿ ಹೋಗಿ ಹೇಳಿದಳು. “ಬರ‍್ತೀರ ನಿಮ್ಮ ಜೊತೆ ಮಾತಾಡಬೇಕು ಆಂಟಿ.”
ಶಕುಂತಲಾ ಅವಳ ಜೊತೆ ಬಂದರು.
“ಆಂಟಿ ನಾನು ಹೀಗೆ ಹೇಳ್ತೀನೀಂತ ಬೇಜಾರುಮಾಡಿಕೊಳ್ಳಬೇಡಿ.”
“ಇಲ್ಲ ಹೇಳಮ್ಮ.”
“ನಮ್ಮತ್ತೆ ವರೂ ಬಗ್ಗೆ ಕೆಟ್ಟದಾಗಿ ಮಾತಾಡ್ತಿದ್ದಾರೆ. ನಂಗೆ ತುಂಬಾ ಸಂಕಟವಾಯ್ತು.”
“ಅತ್ತಿಗೆ ಏನು ಹೇಳಿದರು?”
ರೇಖಾ ಹೇಳಿದಳು.
“ವರು ಹುಷಾರಿಲ್ಲಾಂತ ಬರದೇ ಇರುವುದಕ್ಕೆ ಇವರು ಉಪ್ಪು, ಖಾರ ಹಚ್ಚಿ `ವರೂಗೆ ದೊಡ್ಡ ಖಾಯಿಲೇಂತ ಸುದ್ದಿ ಹಬ್ಬಿಸಿದರೂ ಆಶ್ಚರ್ಯವಿಲ್ಲ.’ ದಯವಿಟ್ಟು ನೀವು ಅವರನ್ನು ಕಂಟ್ರೋಲ್ ಮಾಡಿ.”
“ಆಗಲೀಮ್ಮ” ಎಂದ ಶಕುಂತಲಾ ಶೋಭಾ ಬಳಿ ¨ ಬಂದು ವಿಷಯ ಹೇಳಿದರು.
“ಅಕ್ಕ ನೀವು ಶರೂ ರೂಂನಲ್ಲಿರಿ. ನಾನು ಅತ್ತಿಗೇನ್ನ ಕರೆದುಕೊಂಡು ಬರ‍್ತೀನಿ.”
“ಆಗಲಿ ಕರೆದುಕೊಂಡು ಬಾ.”
ಶಕುಂತಲಾ ಶರು ರೂಮ್‌ಗೆ ಹೋಗಿ ಕುಳಿತರು. ಹತ್ತು ನಿಮಿಷಗಳಲ್ಲಿ ಶೋಭಾ ಅತ್ತಿಗೆ ಜೊತೆ ಬಂದಳು.

“ಶೋಭಾ ಒಳಗೆ ಬಂದು ಬಾಗಿಲು ಹಾಕು.”
“ಯಾಕೆ ಏನಾಯ್ತು ಶಕ್ಕು?”
“ಅತ್ತಿಗೆ ನಮ್ಮ ವರು ನಕ್ಷತ್ರ ಯಾವುದು?”
“ವರು ನಕ್ಷತ್ರದ ಬಗ್ಗೆ ನನಗೇನು ಗೊತ್ತಮ್ಮ?”
“ಹಾಗಿದ್ದರೆ ಆ ರೇಣುಕಮ್ಮನ ಹತ್ತಿರ ಇಲ್ಲಸಲ್ಲದ್ದು ಯಾಕೆ ಹೇಳಿದ್ರಿ? ನಮ್ಮ ವರೂದು ಆಶ್ಲೇಷ ನಕ್ಷತ್ರಾನಾ? ಅವಳಿಗೆ ಅಹಂಕಾರಾನಾ? ಅವಳು ಯಾಕೆ ಇಷ್ಟು ಬೇಗ ಮದುವೆ ಆಗಲ್ಲಾಂದಳೂಂತ ನಿಮಗೆ ಗೊತ್ತಿಲ್ವಾ?”
“ಇದೆಲ್ಲಾ ಯಾಕೆ ಕೇಳ್ತಿದ್ದೀಯ?”
“ನನ್ನ ಮಗಳ ಮದುವೆಗೆ ನೀವು ಮಾಡ್ತಿರುವ ಸಹಾಯ ಸಾಕು, ನಾಗರಾಜಂಗೆ ಹೇಳ್ತೀನಿ. ನೀವು ವಾಪಸ್ಸು ಹೋಗಿ.”
“ಯಾಕೆ ಹೀಗಂತಿದ್ದೀಯಾ?”
“ನಾಟಕ ಆಡಬೇಡಿ. ನೀವು ವರೂ ಬಗ್ಗೆ ಏನು ಹೇಳಿದ್ರಿ ಅನ್ನುವುದು ನನಗೆ ಗೊತ್ತಾಗಿದೆ. ಅವಳು ಮದುವೆಗೆ ಬಾರದೇ ಇರುವುದಕ್ಕೆ ನಿಮ್ಮದೇ ಕಾರಣ ಹುಟ್ಟಿಸಿ ಹೇಳ್ತಿದ್ದೀರ. ಹೀಗೆ ಬಿಟ್ಟರೆ ನೀವು ನಾಳೆ ವರೂಗೆ ಕ್ಯಾನ್ಸರ್ ಅಂತ ಸುದ್ದಿ ಹಬ್ಬಿಸಿದರೂ ಆಶ್ಚರ್ಯವಿಲ್ಲ. ನಿಮಗೆ ಬೇರೆಯವರ ಮನೆ ಹೆಣ್ಣುಮಕ್ಕಳ ಬಗ್ಗೆ ಮಾತಾಡದಿದ್ರೆ ತಿಂದ ಅನ್ನ ಜೀರ್ಣವಾಗಲ್ವಾ?”
“ತಪ್ಪಾಯ್ತು. ಕ್ಷಮಿಸಿಬಿಡಮ್ಮ.”

“ನೀವು ಇದುವರೆಗೂ ನನ್ನ ಶಾಂತಸ್ವಭಾವ ನೋಡಿದ್ದೀರ. ನನ್ನ ಮಕ್ಕಳ ತಂಟೆಗೆ ಬಂದರೆ ನಾನು ಕಾಳಿಯಾಗಿಬಿಡ್ತೇನೆ. ಹುಷಾರಾಗಿರಿ.” ಶಕುಂತಲಾ ಎಚ್ಚರಿಕೆ ನೀಡಿದರು.
“ಅತ್ತಿಗೆ ನೀವು ಈ ರೀತಿ ಮಾತಾಡಿರುವ ವಿಚಾರ ನಿಮ್ಮ ಮಗ-ಸೊಸೆ ಅಥವಾ ನಿಮ್ಮ ತಮ್ಮಂದಿರಿಗೆ ಗೊತ್ತಾದರೆ ಏನಾಗುತ್ತದೆ ಗೊತ್ತಿದೆಯಾ?” ಶೋಭಾ ಕೇಳಿದಳು.
“ಅತ್ತಿಗೆ ನೀವು ದೊಡ್ಡವರೂಂತ ಬೀಗರ ಮನೆಯಲ್ಲಿ ತುಂಬಾ ಮರ್ಯಾದೆ ಕೊಡ್ತಿದ್ದಾರೆ. ಆ ಮರ್ಯಾದೆ ಉಳಿಸಿಕೊಳ್ಳಿ.”
ಪಾರ್ವತಿ ಮಾತಾಡಲಿಲ್ಲ.
“ಇನ್ನೊಂದು ವಿಷಯ. ನಮ್ಮ ಮೇಲಿನ ಕೋಪಕ್ಕೆ ನೀವೇನಾದರೂ ಶರುಗೆ ಇಲ್ಲದ್ದು ಹೇಳಿ ತಲೆಕೆಡಿಸಿದರೆ ನಾನು ಸುಮ್ಮನಿರಲ್ಲ.”
ಪಾರ್ವತಿ ದುರ್ದಾನ ತೆಗೆದುಕೊಂಡವರಂತೆ ಎದ್ದು ಹೋದರು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44883
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *