(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭಾಗ-8 ಇನ್ವೆ೦ಟಿವ್- ಇಟಲಿ
ದಿನ 13
ಈ ದಿನ ನಮ್ಮ ಪ್ರವಾಸ ಇಟಲಿ ದೇಶಕ್ಕೆ. .ಇನ್ಸ್ ಬ್ರಕ್ ದಿಂದ ದಕ್ಷಿಣ ದಿಕ್ಕಿನಲ್ಲಿ 350 ಕಿ ಮಿ ದೂರದ ಪಡೋವಾ (Padova) ಗೆ 4 ಗ೦ಟೆಗಳ ಪ್ರಯಾಣ. ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ವೆನಿಸ್ ನಗರಕ್ಕೆ ಬಂದೆವು. ಪಡೋವಾದಿಂದ ವೆನಿಸ್ ನಗರ -40 ಕಿ ಮಿ , ಅರ್ಧ- ಗಂಟೆಯ ಪ್ರಯಾಣ. ವೆನ್ನಿಸ್ ನಮ್ಮ ಕನಸಿನ ನಗರ. ಚಿಕ್ಕಂದಿನಲ್ಲಿ ಶೇಕ್ಸ್ ಪಿಯರನ ಮರ್ಚೆಂಟ್ ಆಫ್ ವೆನ್ನಿಸ್ ಓದಿದ ನೆನಪು. ಆ ನೆನಪಿನಲ್ಲೇ ವೆನ್ನಿಸ್ ನಗರ ಪ್ರವೇಶಿಸಿದೆವು.
ಉತ್ತರ ಇಟಲಿ ಯಲ್ಲಿ ಏಡ್ರಿಯಾಟಿಕ್ ಸಮುದ್ರದ ನೂರಕ್ಕೂ ಹೆಚ್ಚು ದ್ವೀಪಗಳಲ್ಲಿ ಹರಡಿರುವ ವೆನಿಸ್ ಒ೦ದು ತೇಲುವ ನಗರ. ಅಲ್ಲಿ ನೆಲಕ್ಕಿಂತಲೂ ಹೆಚ್ಚಾಗಿ ನೀರೇ ಕಾಣಿಸುತ್ತಿತ್ತು. ನೆಲದ ಮೇಲೆ ಓಡಾಡುವ ವಾಹನಗಳಿಗಿಂತಲೂ ನೀರ ಮೇಲೆ ಓಡಾಡುವ ಹಡಗು ದೋಣಿ ಗೊಂಡಾಲಗಳೇ ಕಾಣಿಸುತ್ತಿದ್ದವು. ನೀರಿನ ಆಚೆ ಬದಿಯಲ್ಲಿ ಅತ್ಯಂತ ಸುಂದರ ಕಟ್ಟಡಗಳು ಕಾಣುತ್ತಿದ್ದವು. ಒಂದು ಕಡೆ ಪೋರ್ಟ್ ಆಫ್ ವೆನಿಸ್ ಎ೦ದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದು ಕಾಣುತ್ತಿತ್ತು. ಬಸ್ ನಿಂದ ಇಳಿದು ಅಲ್ಲೇ ಇದ್ದ ಅಂಗಡಿಗಳಲ್ಲಿ ಶಾಪಿಂಗ್, ಕೆಲವರು ವಿ೦ಡೋ ಶಾಪಿಂಗ್ ಮಾಡುತ್ತಿದ್ದರು. , ಸುಮಾರು ಅರ್ಧ ಗಂಟೆ ನಂತರ ನಮ್ಮ ಗೈಡ್ ನಮ್ಮನ್ನೆಲ್ಲಾ ಒಂದು ಬೋಟ್ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ನಮ್ಮನ್ನೆಲ್ಲ ಕುಳಿತುಕೊಳ್ಳಲು ಹೇಳಿದರು. ನಂತರ ಆ ದೋಣಿ ಚಲಿಸಲು ಪ್ರಾರಂಭಿಸಿತು. ಸುಮಾರು ಅರ್ಧ ಗಂಟೆ ನಂತರ ನಾವು ಇನ್ನೊಂದು ದಡ ಮುಟ್ಟಿದೆವು. ಅಲ್ಲಿ ಬೋಟ್ ನಿಂದ ಇಳಿದು ಹೊರ ಬಂದು ಸುಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಾದ ಬೆಲ್ ಟವರ್, ಕ್ಲಾಕ್ ಟವರ್, ಸೈ೦ಟ್ ಮಾರ್ಕ್ಸ್ ಸ್ಕ್ವೆಯರ್, ಸೈ೦ಟ್ ಮಾರ್ಕ್ಸ್ ಬೆಸಿಲಿಕ, ಬ್ರಿಡ್ಜ್ ಆಫ್ ಸೈಹ್ ನೋಡಿ ಅತ್ಯ೦ತ ಸು೦ದರ ಗೊ೦ಡಾಲ ರೈಡ್ ಮುಗಿಸಿ ವಾಪಾಸು ಅದೇ ದೋಣಿಯಲ್ಲಿ ಪಿಯರ್ ಗೆ ಬ೦ದೆವು.
ವೆನ್ನಿಸ್ ನ ಡೋಗೆ ಅರಮನೆ (Doge’s Palace) ಯಲ್ಲಿ ವಿಚಾರಣಾಧೀನ ಖೈದಿ ಗಳನ್ನು ಸೆರೆಮನೆಯಿಂದ ವಿಚಾರಣಾ ಕೊಠಡಿಗೆ ಕೊಂಡೊಯ್ಯುವಾಗ ಈ ಸೇತುವೆ ಮೇಲೆ ಕರೆದೊಯುತ್ತಿದ್ದರು. ಆಗ ಖೈದಿಗಳು ಹೊರಗಿನ ಪ್ರಪಂಚ, ವೆನಿಸ್ ನಗರ, ಸಮುದ್ರ, ನೋಡಿ ಓಹ್ ಎಂದು ನಿಟ್ಟಿಸಿರು ಬಿಡುತ್ತಿದ್ದರಂತೆ. ಆದ್ದರಿಂದ ಇದನ್ನು ಬ್ರಿಡ್ಜ್ ಆಫ್ ಸೈ (Bridge of Sighs (Ponte dei Sospiri) ಎಂದು ಕರೆಯುತ್ತಾರೆ.
ಗೊ೦ಡಾಲ ರೈಡ್ ಗೆ ಹೋಗುವಾಗ ನಮ್ಮ ಗೈಡ್, ಒ೦ದೊ೦ದು ದೋಣಿಯಲ್ಲಿ 5 ಜನರು ಹೋಗಬಹುದೆ೦ದೂ, ಆದ್ದರಿ೦ದ ಐದೈದು ಜನರು ಒ೦ದೊ೦ದು ಗು೦ಪಾಗಿ ಬರಬೇಕೆ೦ದು ಹೇಳಿದ್ದರು. ಆದರೆ ಅಲ್ಲಿ ಹೋದ ಮೇಲೆ ತಮ್ಮ ಕುಟು೦ಬ ಸದಸ್ಯರನ್ನು ಬಿಟ್ಟು ಹೋಗಲು ತಯಾರಿಲ್ಲದಿದ್ದಾಗ (ಎಲ್ಲರೂ 2,4,6, ಹೀಗೇ ಸರಿ ಸ೦ಖೈ ಯಲ್ಲಿ ಇದ್ದವರು.) ನಮಗೂ ಗೈಡ್ ಗೂ ಮನಸ್ತಾಪ ವಾಯಿತು. ಅದು ಕ೦ಪನಿಯವರು ಹಣ ಉಳಿಸಲು ಮಾಡಿದ ತ೦ತ್ರ. ನಾಲ್ಕು ನಾಲ್ಕು ಜನ ಅ೦ದಿದ್ದರೆ ಯಾವ ಸಮಸ್ಯೆಯೇ ಇರುತ್ತಿರಲಿಲ್ಲ. ಅಲ್ಲಿ೦ದ ಪಡೋವಾ ಗೆ ಬ೦ದು ರಾತ್ರಿಯ ಊಟ ಮತ್ತು ನಿದ್ದೆ ಮಾಡಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44868
–ಟಿ.ವಿ.ಬಿ.ರಾಜನ್ , ಬೆಂಗಳೂರು


