ಪುಸ್ತಕ-ನೋಟ

ಪುಸ್ತಕ ಅವಲೋಕನ: ಚೋಮನ ದುಡಿ

Share Button

ಪುಸ್ತಕ : ಚೋಮನ ದುಡಿ
ಲೇಖಕರು : ಡಾ.ಕೆ.ಶಿವರಾಮ ಕಾರಂತ
ಬೆಲೆ : 65
ಪುಟ : 120 +viii
ಪ್ರಕಾಶನ : ಸಪ್ನಾ‌ ಬುಕ್ ಹೌಸ್

ಹಿಂದಿನ ಜಾತಿ ಪದ್ಧತಿ,ಅಂದಿನ ಬಡತನ,ಒಂದು ತೊತ್ತು ಅನ್ನಕ್ಕಾಗಿ ಪಡಬೇಕಾದ ಕಷ್ಟ,ಅದನ್ನು ಸಂಪಾದಿಸಲು ಮಾಡಬೇಕಾಗಿದ್ದ ಕೆಲಸಕಾರ್ಯ, ಕೆಲಸ ಮಾಡಿ ಸುಸ್ತನ್ನು ಮರೆಯಲು ಸಾರಾಯಿ ಅಂಗಡಿ‌ಗೆ
ದೌಡಾಯಿಸುವುದು, ಗಳಿಸದ್ದರಲ್ಲಿ ಜಾಸ್ತಿ ಪಾಲು ಸಾರಾಯಿಗಾಗೇ ಖರ್ಚು ಮಾಡಿ, ಮನೆಯಲ್ಲಿರುವವರಿಗೆ ಅರ್ಧ ಹೊಟ್ಟೆ, ಹೀಗೆ ಅಂದಿನ ಬದುಕಿನ ಚಿತ್ರಣ ಕೊಡುತ್ತಾ ‘ಚೋಮ’ನೆಂಬ ಒಬ್ಬ ಮನೆಯ ಆಳು, ಆಳೆಂದರೆ ಅವರ ಹಿರಿಯರ ಕಾಲದಿಂದ ಒಡೆಯರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು,ಅವರು ಹೆಸರಿಡಿದು ಕೂಗಿದ ತಕ್ಷಣ ಅವರ ಮುಂದೆ ಹಾಜರಾಗಿ,ಅವರು ಹೇಳಿದ ಕೆಲಸ ಮಾಡಿಕೊಡುವಷ್ಟು.

ಮಕ್ಕಳಿರಲವ್ವಾ ಮನೆ ತುಂಬಾ ಎಂದು ಹಿರಿಯರು ಹೇಳಿರುವಂತೆ ಅವನ ಮಗಳು ಬೆಳ್ಳಿಗೆ, ಇಬ್ಬರು ಅಣ್ಣಂದಿರು, ಇಬ್ಬರು ತಮ್ಮಂದಿರು. ತಾಯಿಯನ್ನು ಕಳೆದುಕೊಂಡ ಬೆಳ್ಳಿ, ಮನೆಯನ್ನು
ನಡೆಸುವುದರಲ್ಲಿ ನಿಸ್ಸೀಮಳು, ಒಡೆಯರ ಮನೆಯಲ್ಲಿ ಬೆಳಿಗ್ಗೆ ಸೊಪ್ಪು ಒಟ್ಟು ಮಾಡಿ ಕೊಟ್ಟು ಬಂದರೆ ಮನೆಯಲ್ಲಿ ಗಂಜಿ ಬೇಯಿಸಿ, ಮಕ್ಕಳಿಗೆ ಉಣಬಡಿಸುವ, ಮನೆಯಲ್ಲಿರುವ ಎರಡು ಎತ್ತುಗಳ
ಚಾಕರಿ, ಹೀಗೆ ಅವಳಿಗೆ ಕೆಲಸವೋ‌ ಕೆಲಸ. ಸಣ್ಣ ತಮ್ಮಂದಿರ ಆರೈಕೆಯೂ ಅವಳ ಪಾಲಿನದು. ನಡುನಡುವೆ ಮನೆಯಲ್ಲಿ ಜ್ವರ,ಖಾಯಿಲೆ ಬರುವುದು ಅವರ ಆರೈಕೆ, ಔಷಧಿ ನೀಡುವ ಹಿರಿಯನೊಬ್ಬನ ಬಳಿ ಮಂತ್ರ ಕಟ್ಟಿಸಿ ತರುವುದು ಹೀಗೆ ಅಂದಿನ ಪರಿಸರದಲ್ಲಿ ಖಾಯಿಲೆಗಳಿಗೆ ಹೆದರದೇ ಔಷಧಿ, ಉಪಚಾರಗಳಿಲ್ಲದೇ, ಸ್ವಲ್ಪ ಸುಧಾರಿಸಿಕೊಂಡಂತೆ ಕೆಲಸಕಾರ್ಯ ಮಾಡಿಕೊಂಡು ಬದುಕುತ್ತಿದ್ದ
ರೀತಿ ನಮಗೆ ಕಾಣಸಿಗುತ್ತದೆ.

ಚೋಮನ ‘ದುಡಿ’ಗೆ ಸುಖ-ದುಃಖಗಳೆಲ್ಲ ಒಂದೇ.ಸಂತೋಷವಾದರೂ ದುಡಿ ಬಾರಿಸುತ್ತಾನೆ, ದುಃಖವಾದರೂ ಬಾರಿಸುತ್ತಾನೆ.ಹಗಲು-ರಾತ್ರಿಗಳ ಬೇಧವೂ ಅದಕ್ಕೂ ಇಲ್ಲ,ಅವನಿಗೂ ಇಲ್ಲ.ಸಂಜೆ ಸಾರಾಯಿ
ಅಂಗಡಿಗೆ ಹೋಗಿ ಕುಡಿದು ಬಂದು ಅವನ ಮನಸೋ ಇಚ್ಛೆ ದುಡಿ ಬಾರಿಸಿ, ಅದಕ್ಕೆ ಬೆಳ್ಳಿಯ ಗಾಯನದ ಸಾಥ್ ಬೇರೆ! ಒಮ್ಮೆ ತೀರ ಅಸ್ವಸ್ಥ ಮನಸ್ಸಿನಲ್ಲಿ ಮಲಗಿರುವ ಸಣ್ಣ ಮಕ್ಕಳನ್ನೂ ಎಬ್ಬಿಸಿ
ಕುಣಿತಾಯಿರೋ ಎಂಬ ಆಜ್ಞಾಪನೆ ಬೇರೆ! ಜ್ವರ ಬಂದರೂ ದುಡಿಗೆ ಜ್ವರವೆಂಬುದಿಲ್ಲವಲ್ಲ.

ಬೇಸಾಯಗಾರನಾಗಬೇಕೆಂಬ ಕನಸು ಮೊದಲಿನಿಂದ ಕೊನೆಯವರೆಗೂ ಅವನನ್ನು ಕಾಡುತ್ತಿದ್ದರೂ, ಒಡೆಯರ ಬಳಿ ಅದರ ಬಗ್ಗೆ ಕೇಳಿ ತುಂಡು ಭೂಮಿಯಾದರೂ ಕೊಡಿ ಎಂದು ಕೇಳಿದ ಚೋಮನಿಗೆ ಒಡೆಯರ ಅಮ್ಮ ಅವರೇ ಮಾತೇ ಶಾಸನವೆಂಬಂತೆ ಜಾತಿಪ್ರಶ್ನೆಯನ್ನು ಎತ್ತಿ ಅವನಿಗೆ ಕೊಡಲು ಮಗನಿಗೆ ಅನುಮತಿ ನೀಡಲಾರದೇ, ಅವನಿಗೆ ಭೂಮಿಗಾಗಿ ಬೇರೆ ಧರ್ಮಕ್ಕೆ ಸೇರಿದರೆ, ಅವರು ಭೂಮಿ ಕೊಡುವ ಭರವಸೆ ಸಿಕ್ಕರೆ ಧರ್ಮ ಬದಲಾಯಿಸಬಹುದೇ? ಆ ಧರ್ಮಕ್ಕೆ ಸೇರಿದರೆ ರೈತನಾಗುವ ಕನಸು ನನಸಾಗುವುದಾದರೆ ಯಾಕೆ ಆಗಬಾರದು ಎಂಬ ಪ್ರಶ್ನೆ.

ತೋಟದ ಕೆಲಸದಲ್ಲಿ ಅವನು ಮಾಡಿದ ಸಾಲ, ಬಡ್ಡಿ ಸೇರಿ ದೊಡ್ಡದಾಗಿ ಬೆಳೆಯಲು,ಬೆಳೆದ ಎರಡು ಗಂಡು ಮಕ್ಕಳನ್ನು ಸಾಲ ತೀರಿಸಲು ಕರೆದುಕೊಂಡು ಹೋದರೆ ಮನೆಯಲ್ಲಿ ದುಡಿಯುವ ಕೈ
ಕಡಿಮೆಯಾದೀತು. ಎತ್ತು ಮಾರಿ ಸಾಲ ತೀರಿಸಿದರೆ ಅವನ ರೈತನಾಗುವ ಕನಸು ನನಸಾದೀತೆ ?ತೋಟದ ಕೆಲಸಕ್ಕೆ ಹೋದವರು ಇದುವರೆಗೂ ಸಾಲ ತೀರಿಸಿದ ಮಾಹಿತಿ ಇಲ್ಲ ಎನ್ನುವರು ಕೆಲವರು, ಆ ಸಾಲ
ಬೆಳೆಯುತ್ತಲೇ ಸಾಗುವುದಂತೆ, ಕೆಲಸದ ನಂತರ ಹಣವೆಲ್ಲ ಸಾರಾಯಿ ಪಾಲಾದರೆ ಎಲ್ಲಿಯ ಹಣ?ಎಲ್ಲಿಯ ಸಾಲ ತೀರಿಸಲಾದೀತು ಅಲ್ಲವೇ? ಹೀಗೆ ಬಡವನ ಬೆವರ ಹನಿಯೋ? ರಕ್ತದ ಹನಿಯೋ ಹರಿದಷ್ಟು ಇನ್ನೂ ಅದಕ್ಕೆ ಬೆಲೆ ಇಲ್ಲವೇನೋ? ಎಂಬಂತ್ತಿದ್ದ ಅಂದಿನ ಪರಿಸ್ಥಿತಿಯನ್ನು ಚೆನ್ನಾಗಿ ನಮ್ಮ ಮುಂದೆ ಕಟ್ಟಿ ಕೊಟ್ಟ ಶಿವರಾಮ ಕಾರಂತರ ‘ಚೋಮನ ದುಡಿ’ ಓದಿದರೆ ಓದುತ್ತಾ ಕುಳಿತುಕೊಳ್ಳುವುದರಲ್ಲಿ ಸಂಶಯವಿಲ್ಲ.

ಮನೆಗೆ ಬಂದ ನೆಂಟರಿಗೆ ಮಾಡುವ ಉಪಚಾರ, ಅವರೊಂದಿಗೆ ಮಾಡಿದ ಬೇಟೆ, ಇನ್ನೂ ಅವುಗಳ ಭಕ್ಷಣೆ ಮಾಡುವಾಗ ಅದರೊಂದಿಗೆ ಕುಡಿಯಲು ಬೇಕೆಂದು ಅದನ್ನು ತರುವ ಸಾಹಸ, ಹೀಗೆ ಅತಿಥಿ ಸತ್ಕಾರ ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಇನ್ನೂ ಅಡಿಗೆಗೆ ಎಲ್ಲರೂ ಒಟ್ಟಾಗಿ ಸೇರಿ ಅಡುಗೆ ಮಾಡುವ ಬಾಂಧವ್ಯ, ಒಂದು ಕಡೆ. ಅವರ ಹೊಟ್ಟೆ ತುಂಬಿಸಲು ಅಕ್ಕಿ ಮಳೆಗಾಲಕ್ಕೆಂದು
ಬೆಳ್ಳಿ ಕಾಯ್ದಿರಿಸಿದ್ದ ಅಕ್ಕಿ ಎಂದು ಅವಳಿಗಷ್ಟೇ ಗೊತ್ತು. ಅದನ್ನು ಕಳೆದುಕೊಂಡು ಮಳೆಗಾಲದಲ್ಲಿ ಅವರ ಗತಿಯೇನು ಆ ಭಗವಂತನೇ ಬಲ್ಲ.

ಅಂದಿನ ಜಾತ್ರೆಯ ಚಿತ್ರಣ, ಜಾತ್ರೆಗೆ ಹೋಗುವ ಸಂಭ್ರಮ, ಆಸೆ ಪಟ್ಟಂತೆ ತಮ್ಮಂದಿರನ್ನು ಕಳುಹಿ ನಾವು ಹಿಂದಿನಿಂದ ಬರುತ್ತೇವೆ ಎಂದು ಮಕ್ಕಳನ್ನು ಕಳಿಸಿದರೆ ಅಣ್ಣನಿಗೆ ಜ್ವರ, ಬೆಳ್ಳಿಗೆ ಜಾತ್ರೆಗೆ ಹೋಗಲಾಗಲಿಲ್ಲ. ಈಗಿನ ದಿನಗಳಲ್ಲಾದರೆ ಮಕ್ಕಳೊಬ್ಬರನ್ನೇ ಜಾತ್ರೆಗೆ ಕಳಿಸುವ ಧೈರ್ಯ ನಮ್ಮಲ್ಲಿದೆಯೇ? ಜಾತ್ರೆಯ ಸುತ್ತಾ ತಿರುಗಾಡಿ ಮಕ್ಕಳು ತಾವಾಗೇ ವಾಪಾಸು ಕೂಡ ಬರುವರು. ಇಂದಿನ ದಿನಗಳಲ್ಲಿ ದೊಡ್ಡವರಿಗೇ ಜಾತ್ರೆಯ ಪೇಟೆಯಲ್ಲಿ ತಿರುಗಿ , ದಾರಿ‌ಹುಡುಕಿ ಬರಲು ಕಷ್ಟವಾದೀತು.

ಒಡೆಯರು ಮನಸು ಮಾಡಿ ತುಂಡು ಭೂಮಿ ಕೊಟ್ಟರೆ ಚೋಮ ರೈತನಾಗುತ್ತಿದ್ದನೆ? ಅಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದನೆ? ಅಲ್ಲಿಯೂ ದುಡಿಯ ಬಾರಿಸಿ ಕುಳಿತುಕೊಳ್ಳುತ್ತಿದ್ದನೋ? ಬೆಳ್ಳಿಗೆ ಒಳ್ಳೆಯ ಸಂಬಂಧ ಹುಡುಕಿ ಮದುವೆ ಮಾಡುತ್ತಿದ್ದನೇನೋ? ಹೀಗೆ ನೂರಾರು ಕನಸುಗಳು ಕನಸುಗಳಾಗಿಯೇ ಚೋಮನೊಂದಿಗೆ ಸೇರಿದವೇನೋ?

ಸಾವಿತ್ರಿ ಶ್ಯಾನುಭಾಗ, ಕುಂದಾಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *