ಪೌರಾಣಿಕ ಕತೆ

ಕಾವ್ಯ ಭಾಗವತ 87 : ಕಂಸವಧೆ

Share Button

ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 8
ಕಂಸವಧೆ

ಮಧುರೆಯ ರಾಜಬೀದಿಯಲಿ
ಸಂಚರಿಸುತ ರಾಮಕೃಷ್ಣರು
ರಜಕನೊಬ್ಬನು ಕಂಸರಾಜನ
ರಾಜಯೋಗ್ಯ ವಸ್ತ್ರಗಳ ಒಯ್ಯುತಿರೆ
ಅವನಿಂದ ರಾಜವಸ್ತ್ರಗಳ ಪಡೆದು
ಎಲ್ಲ ಗೋಪಾಲಕರಿಗೂ ಅದ ನೀಡಿ
ತಾವೂ ಧರಿಸಿದರು

ಗೂನುಬೆನ್ನಿನ ಚಿಕ್ಕ ಪ್ರಾಯದ
ತ್ರಿವಿಕ್ರೆಯ ಬಳಿಯಿದ್ದ ಗಂಧವ ಪಡೆದು
ಅದ ಲೇಪಿಸಿಕೊಂಡು ಸಂಭ್ರಮಿಸಿದ ಕೃಷ್ಣ
ತ್ರಿವಿಕ್ರೆಯ ಗೂನುಬೆನ್ನಿನ ವಕ್ರಭಾಗವ ನೀಗಿಸಿದ

ಮಾರ್ಗಮಧ್ಯದಿ ಧನುರ್ಶಾಲೆಯ ಬಳಿಬಂದು
ಕಾವಲಿನವರ ಅಡಚಣೆಗೆ ಲೆಕ್ಕಿಸದೆ
ಅಲ್ಲಿದ್ದ ಮಹಾಧನುಸ್ಸನ್ನು ಬಗ್ಗಿಸಲು
ಅದು ಘನಘೋರ ಶಬ್ಧ ಮಾಡುತ್ತಾ
ಎರಡು ತುಂಡಾಗಿ ಬಿದ್ದಿತು

ಮಾರನೆಯ ದಿನ
ಚಾಣೂರ ಮುಷ್ಠಿಕಾದಿ ಮಲ್ಲರು
ಮಲ್ಲಯುದ್ಧದಿ ಕೃಷ್ಣನ ಕೊಲ್ಲುವ
ಹುನ್ನಾರದಲಿ
ಮಲ್ಲಯುದ್ಧಕೆ ವೇದಿಕೆ ಅದ್ಧೂರಿಯಾಗಿ ಸಜ್ಜಾಗಿರಿಸೆ
ರಾಮಕೃಷ್ಣರು ರಂಗಸ್ಥಳಕೆ ಆಗಮಿಸಿರೆ
ದ್ವಾರದ ಬಳಿ ಕುವಲಯಾಪೀಡವೆಂಬ ಮದವೇರಿದಾನೆ
ಕೃಷ್ಣನ ಮೈಮೇಲೆ ತನ್ನ ಸೊಂಡಿಲನು ಸುತ್ತಿ ಆಕ್ರಮಿಸೆ
ಕೃಷ್ಣ ಉಪಾಯದಿ ಸೊಂಡಿಲ ತಿರುಚಿ ಆನೆಯ ವಧಿಸಿದ
ನಂತರದಿ ಕೃಷ್ಣ ಬಲರಾಮರಿಬ್ಬರೂ
ಒಂದೊಂದು ಗಜದಂತವ ಭುಜದ ಮೇಲಿಟ್ಟುಕೊಂಡು
ಮಲ್ಲರಂಗವ ಪ್ರವೇಶಿಸಿ
ಜಟ್ಟಿಗಳಿಗೆ ರೌದ್ರರಸವ
ನೆರೆದಿದ್ದ ಮಹಾಜನಕೆ ಅದ್ಭುತರಸವ
ಸೇರಿದ್ದ ಸ್ತ್ರೀ ಜನರಿಗೆ ಶೃಂಗಾರರಸವ
ದುಷ್ಟ ಕ್ಷತ್ರಿಯರಿಗೆ ವೀರರಸವ
ಕಂಸನಿಗೆ ಭಯಾನಕ ರಸದೊಂದಿಗೆ
ಅಜ್ಞಜನರಿಗೆ ಸಾಮಾನ್ಯ ಗೊಲ್ಲನಂತೆ
ಹಾಸ್ಯರಸವನ್ನೂ
ವಿವಿಧ ರೀತಿಯಲಿ ಪ್ರದರ್ಶಿಸುತ
ಸರ್ವರನು ವೀಕ್ಷಿಸಿದನು

ಕೃಷ್ಣನು ಚಾಣೂರ ಮಲ್ಲನೊಡನೆಯೂ
ಬಲರಾಮನು ಮುಷ್ಟಕನೊಡನೆಯೂ
ಮಲ್ಲಯುದ್ಧವ ಪ್ರಾರಂಭಿಸಿ
ಕೊಬ್ಬಿ ಬೆಳೆದಿದ್ದ ಮಹಾಕಾಯದ
ಜಟ್ಟಿಗಳೊಂದಿಗೆ
ಸುಕುಮಾರ ಶರೀರಿಗಳಾದ ಕೃಷ್ಣ ಬಲರಾಮರು
ಸೆಣೆಸುವುದ ಕಂಡು
ಪರಿತಪಿಸುತ್ತಿದ್ದ
ಸಮಸ್ತ ಜನಸಮೂಹದ ಕಾಳಜಿಗೆ
ಸೂಕ್ತ ಉತ್ತರವೆಂಬಂತೆ
ರಾಮ ಕೃಷ್ಣರು ಮಲ್ಲರ ವಧಿಸುದುದು
ಮತ್ತೊಂದು ಕೃಷ್ಣಲೀಲೆ

ಕಂಸನು ಬಹುಕಾಲದಿಂ ಬೆದರಿ
ಕನಸು ಮನಸಿನಲೂ
ಚಡಪಡಿಸುತಿರ್ಪ ಘಳಿಗೆ ಬಂದಾಗಿತ್ತು

ಅಶರೀರವಾಣಿಯೊಂದು ಮುನ್ಸೂಚನೆ
ಮುಂಬರುವ ಮೃತ್ಯುವಿನ ಸೂಚನೆ
ಯಾರಿಗುಂಟು ಈ ಭಾಗ್ಯ
ಕಂಸ ಆ ಮೃತ್ಯುವಿನ ನಿರೀಕ್ಷೆಯಲಿ
ನಿತ್ಯ ತನ್ನ ಮೃತ್ಯುದೇವನ ಜಪಮಾಡಿ
ಎದ್ದಾಗ ಕುಳಿತಾಗ ಮಲಗುವಾಗ ನಿದ್ರಿಸುವಾಗ
ಅವಿಚ್ಛಿನಭಾವದಿಂ ಭಗವಂತನ ಕಾಣುತ್ತ
ಪರಮಯೋಗಿಗೂ ದುಲರ್ಭವಾದ
ಭಗವತ್ಸಾರೂಪ್ಯವನು ಪಡೆದನು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
  https://surahonne.com/?p=44865

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *