ಬೊಗ್ಗಿ ಬೇಟೆಗೆ ಹೋಗಳು, ಬರ್ಕ ಪಾಯಸ ತಿನ್ನಲಿಕ್ಕಿಲ್ಲ…!
ಇದೊಂದು ಜನಪದ ಕತೆ.ಒಂದೂರಿನಲ್ಲೊಬ್ಬ ರೈತನಿದ್ದ.ಅವನದು ನೆಮ್ಮದಿಯ ಬದುಕು.ಕೃಷಿ ಭೂಮಿಯಲ್ಲಿಯೇ ಅವನದೂ ದುಡಿಮೆ.ಕಷ್ಟಗಾರ ರೈತ.ಈಗಲೂ ಕೆಲವೆಡೆ ಇದೆ,ಹಿಂದೆ ಎಲ್ಲ ರೈತರೂ ಮಾಡುತ್ತಿದ್ದರು.ಅದೇನೆಂದರೆ ಮಣ್ಣು ಸುಡುವುದು, ಈ ಸುಟ್ಟ ಮಣ್ಣು ಗದ್ದೆಗೆ,ಇನ್ನಿತರ ಬೆಳೆಗಳಿಗೆ ಬಹು ಉಪಯುಕ್ತ ಗೊಬ್ಬರ.ರಾಸಾಯನಿಕ ಗೊಬ್ಬರಗಳಲ್ಲಿ ಸುಫಲ,ಪೊಟಾಶ್ ಹೇಗೋ ಹಾಗೆನೆ,ಅದಕ್ಕಿಂತಲೂ ಉತ್ತಮ ಗೊಬ್ಬರ.ಇಲ್ಲಿಯೂ ಕೂಡಾ ಉಪಯೊಗಿಸುವ ಮಣ್ಣು ಗಾರೆ ಇಟ್ಟಿಗೆ,ಗೋಡೆಗೆ ಉಪಯೋಗಿಸುವ ಮಣ್ಣಲ್ಲ ಬದಲಾಗಿ ಮರ,ಗಿಡಗಳ ಬುಡದಲ್ಲಿ ಇರುವ ಮೆತ್ತನೆಯ ಹಾಗೂ ಎಲೆಗಳು ಕೊಳೆತು ಕಪ್ಪಾದ ಮಣ್ಣು, ಅಲ್ಲದೆ ಹೆಚ್ಚು ಕಡೆ ಎರೆಹುಳುಗಳು ತಿಂದು ಕಾರಿದ ಕಪ್ಪು ಮಣ್ಣುಗಳೇ ಜಾಸ್ತಿ ಇರುತ್ತದೆ.ಅದಂತೂ ಬಹಳ ಉತ್ತಮ.
.
ಮಣ್ಣು ಸುಡುವುದು ಅಷ್ಟು ಸುಲಭದ ಕೆಲಸವಲ್ಲ.ಅದು ಸುಡುವುದಕ್ಕಾಗಿ ಸಾಕಷ್ಟು ಒಣ ಹಾಗೂ ಹಸಿ ಉರುವಲು ಬೇಕು.ಸೌದೆ ಕಟ್ಟಿಗೆ ಅಲ್ಲದೆ,ಮರದ ಗೆಲ್ಲುಗಳು,ಎತ್ತರಕ್ಕೆ ಬೆಳೆದ ಪೊದರು ಗಿಡಗಳು ಅವೆಲ್ಲವನ್ನು ಕಡಿದು ಬಿಸಿಲಿಗೆ ಹಾಕಲಾಗುತ್ತದೆ.ಮಣ್ಣಿನ ಪ್ರಮಾಣದಷ್ಟೇ ಉರುವಲು ಕೂಡಾ ಬೇಕು.ಒಟ್ಟಾರೆ ಸುಟ್ಟರೆ ಅದು ಕೆಡುತ್ತದೆ.ಫಲವತ್ತದೆ ಇರುವುದಿಲ್ಲ.ಮಣ್ಣು ಸುಟ್ಟು ಕೆಂಪುಕೆಂಪಾದರೆ ಪಾಕ ಹಾಳಾಯಿತೆಂದೇ ಅರ್ಥ.ಹೀಗೆ ಬಾರೀ ದೊಡ್ಡ ರಾಶಿ ಮಡಿ ಅದಕ್ಕೆ ಬೆಂಕಿ ಹಚ್ಚುತ್ತಾರೆ, ಅದು ರಾತ್ರಿಯಿಡೀ ಸುಡುತ್ತಿರುತ್ತದೆ.ಮತ್ತೆ ಮರುದಿನದಿಂದ ಬೆಂಕಿ ಎದ್ದು ಉರಿಯುವುದಿಲ್ಲ,ಮಣ್ಣಿನ ನಡುವೆ ಹುದುಗಿದ್ದವುಗಳು ಅಲ್ಲಿಂದಲ್ಲಿಗೇ ಉರಿಯುತ್ತ ಮಣ್ಣೂ ಸುಡುತ್ತದೆ.ಹೀಗೆ ಸುಡುವುದು ಮುಕ್ತಾಯವಾಗಲಿಕ್ಕೆ ತಿಂಗಳು ಬೇಕು. ಇಲ್ಲಿ ದಿನಾ ಕೆಲಸವೂ ಉಂಟು ಅದೇನೆಂದರೆ ಗೋಪುರದಾಕೃತಿಗೆ ಮಾಡಿದ ಮಣ್ಣಿನ ರಾಶಿಯನ್ನು ದಿನಾ ಬೆಳಿಗ್ಗೆ ಬುಡದಲ್ಲಿ ಸುತ್ತಲೂ ಹಾರೆಯಿಂದ ಮಣ್ಣನ್ನು ಬಿಡಿಸಬೇಕು.ಹೀಗೆ ದಿನಾ ಸ್ವಲ್ಪ ಸ್ವಲ್ಪ ಬಿಡಿಸುತ್ತ ಬರತ್ತಿದ್ದಂತೆ ರಾಶಿ ಸುಟ್ಟು ಮುಗಿಯುತ್ತದೆ..
.
ಈ ರೈತ ಬೆಳಿಗ್ಗೆ ಎದ್ದವನು ಗದ್ದೆ ಬದಿಗೆ ಹೋಗುತ್ತ ಸುಡುಮಣ್ಣಿನ ರಾಶಿ ಬಿಡಿಸಲಿಕ್ಕೆ ಆ ಕಡೆ ಹೋದನು.ಮಣ್ಣಿಗೆ ಬೆಂಕಿ ಹಾಕಿ ವಾರದಷ್ಟು ದಿನಗಳೇ ಆಗಿವೆ.ಬುಡ ಬಿಡಿಸಿದ್ದು ಕೂಡಾ ಅಗಲವಾಗುತ್ತ ಬಂದಿದೆ.ಹಾರೆಯೊಂದಿಗೆ ರಾಶಿ ಬುಡಕ್ಕೆ ಹೋದವನಿಗೆ ಕಣ್ಣಿಗೆ ಒಂದು ಪ್ರಾಣಿ ಸುಟ್ಟು ಕರಕಲಾಗಿರುವುದು ಗೋಚರಿಸುತ್ತದೆ. ಅದನ್ನು ತನ್ನತ್ತ ಜಾರಿಸಿ ಮುಂದಿನ ಕೆಲಸವನ್ನು ಮಾಡಿ ಮುಗಿಸಿದನು.ಇದು ಬರ್ಕ ಎಂಬ ಕಾಡು ಪ್ರಾಣಿಯಾಗಿರಬೇಕು.ಬಹುಶಃ ರಾತ್ರಿ ಚಳಿಗೆ ಎಂದು ಬಿಸಿ ಮಣ್ಣಿನಲ್ಲಿ ಮಲಗಿತ್ತು,ಬೆಂಕಿ ಬಿಸಿ ಒಮ್ಮೆಲೆ ಜಾಸ್ತಿಯಾಗಿ ಸತ್ತಿರಬೇಕು.ಇವತ್ತು ಒಂದು ಗಡದ್ದಿನ ಊಟ ಮಾಡಬಹುದು ಎನ್ನುತ್ತ ಅದನ್ನು ಕೈಯಲ್ಲಿ ನೇತಾಡಿಸಿಕೊಂಡು ಮನೆಗೆ ಬರುತ್ತಾನೆ.
.
ಕೈ ಕಾಲು ಮುಖ ಎಲ್ಲ ತೊಳೆದು ಮನೆಯೊಳಗೆ ಹೋಗುತ್ತಲೆ ಹೆಂಡತಿಯಲ್ಲಿ, ‘ಸುಡು ಮಣ್ಣಿನ ರಾಶಿಗೆ ಬರ್ಕ ಬಿದ್ದು ಕರಟಿದೆ,ಇವತ್ತು ಗಡದ್ದಾಗಿ ಊಟ ಮಾಡಬಹುದು’ ಎನ್ನುತ್ತ ಅಡುಗೆ ಕೋಣೆಯತ್ತಲೇ ಹೋಗಿ ಚಹಾ ತಿಂಡಿಗೆ ಕುಳಿತ.ಬರ್ಕ ಎಂದರೆ ಕಾಡು ಪ್ರಾಣಿ.ಸಣ್ಣ ನಾಯಿಷ್ಟೇ ಎತ್ತರಕ್ಕೆ ಬೆಳೆಯುತ್ತದೆ.ಬಹಳ ಸಾಧು ಸ್ವಭಾವದ ಪ್ರಾಣಿಯಾಗಿದ್ದು ಸೊಪ್ಪು ಹುಲ್ಲು ಕಾಯಿಗಳನ್ನು ತಿಂದು ಬದುಕುತ್ತದೆ.ಈ ಪ್ರಾಣಿಯ ಮಾಂಸವನ್ನು ಜನ ತಿನ್ನುತ್ತಾರೆ.ಬೇಟೆಗಾರರಂತೂ ಇದನ್ನು ಕಂಡಲ್ಲಿ ಬೇಟೆಯಾಡುತ್ತಾರೆ.ಕಾಡು ಕುರಿಯಂತೆಯೆ ಇದೂ ಕೂಡಾ ಓಂದು ಜಾತಿಯ ಸಾಧು ಪ್ರಾಣಿ.
.
ಎಲ್ಲಾ ಮುಗಿಸಿದ ನಂತರ ರೈತ ಈ ಪ್ರಾಣಿಯನ್ನು ಮಾಂಸ ಮಾಡಲಿಕ್ಕೆ ಸಿದ್ಧತೆ ಮಾಡಿಕೊಂಡನು. ಅದನ್ನು ಹೇಗೆ ಕತ್ತರಿಸಬೇಕೋ ಹಾಗೆ,ಇನ್ಯಾವ ರೀತಿಯಲ್ಲಿ ಮಾಡುವುದಕ್ಕಿದೆಯೋ ಹಾಗೆಲ್ಲ ಮಾಡುತ್ತ ಹೊಟ್ಟೆಯನ್ನು ಸೀಳಿದಾಗ ಅಲ್ಲಿ ಆಹಾರದ ಚೀಲದಲ್ಲಿ ಹಲಸಿನ ಹಣ್ಣಿನ ಪಾಯಸ ಕಂಡಿತು.ಹಿಂದಿನ ರಾತ್ರಿ ಮನೆಯಲ್ಲಿ ಅದೇ ಪಾಯಸ ಮಾಡಲಾಗಿತ್ತು.ಮನೆಯ ನಾಯಿ ಕೂಡಾ ಬೇಕಾದಷ್ಟು ಹಲಸಿನ ಪಾಯಸ ತಿಂದಿತ್ತು. ಅಷ್ಟರಲ್ಲಿ ರೈತನಿಗೆ ನಾಯಿಯ ನೆನಪಾಗಿ ನಾಯಿ ಎಲ್ಲಿದೆ ಎಂದು ಪ್ರಶ್ನಿಸಿದ.ಅದು ಹೆಣ್ಣು ನಾಯಿ.ಅದಕ್ಕೆ ಬೊಗ್ಗಿ ಎಂದು ಕರೆಯುವುದು. ಹಳ್ಳಿಗಳಲ್ಲಿ ಹೆಣ್ಣು ನಾಯಿಗೆ ಬೊಗ್ಗಿ ,ಗಂಡಿಗಾದರೆ ಬೊಗ್ರ ಎಂದು ಕರೆಯುವುದು ರೂಢಿ.’ಬೊಗ್ಗಿ ದುವೋ… ಬೊಗ್ಗಿ ದುವೋ’ ಎಂದು ಕೂಗಿ ಕರೆದರೂ ನಾಯಿ ಬರಲಿಲ್ಲ.(ದುವೋ =ಬಾ..). ಎಲ್ಲಿ ಸತ್ತಳಪ್ಪ..ಎಂದು ಗೊಣಗುತ್ತ ಮಾಂಸ ಸಜ್ಜು ಮಾಡಿ ಮುಗಿಸಿದ.
ದಿನವಿಡೀ ಉರುಳಿದರೂ ಬೊಗ್ಗಿ ಮನೆಗೆ ಬರಲಿಲ್ಲ.ಬಹುಶಃ ಬೊಗ್ರನವರ ಬೆನ್ನ ಹಿಂದೆ ಬೇಟೆ ಹೋಗಿರಬಹುದು ಎಂದು ಸಮಾಧಾನ ತಂದುಕೊಂಡರೂ ಸಹ,ಬರ್ಕನ ಹೊಟ್ಟೆಯಲ್ಲಿ ನಾವೇ ಮಾಡಿದ್ದ ಹಲಸಿನ ಪಾಯಸ ಇರುವುದಕ್ಕೆ ಹೇಗೆ ಸಾಧ್ಯವಾಗುತ್ತದೆ..? ಎಂತಲೂ ಯೋಚನೆ ಬರುತ್ತಿತ್ತು.ಕತ್ತಲಾಯಿತು ಬೊಗ್ಗಿ ಊಂಹೂಂ. ಅವಳು ಬೊಗ್ರನವರ ಬೇಟೆಗೆ ಹೋಗಿದ್ದಾಳೆ..ಬೇರೆಲ್ಲಿಗೆ ಹೋದರೂ ಕೂಡಲೇ ಮನೆಗೆ ಬರುತ್ತಾಳೆ.ನಾಳೆ ಬಂದಾಳು ಇಲ್ಲ, ರಾತ್ರಿ ಬರುವಳು..ಎನ್ನುತ್ತ ರಾತ್ರಿಯ ಊಟಕ್ಕೆ ತಯಾರಾದರು.
.
ಕುಚ್ಚಲು ಅಕ್ಕಿಯ ಬಿಸಿ ಅನ್ನವಷ್ಟೇ ಅಲ್ಲ,ಬೆಳ್ತಿಗೆ ಅಕ್ಕಿಯ ನೀರು ದೋಸೆ ಕೂಡಾ ಮಾಡಿದ್ದಾಳೆ.ಕಾಡು ಪ್ರಾಣಿಯ ಮಾಂಸವೆಂದರೆ ಸಾಮಾನ್ಯವೇ..?ಅದರ ರುಚಿಗೆ ಬೇರೆ ಯಾವುದೂ ಸಾಟಿಯಿಲ್ಲ.ತಟ್ಟೆಯಲ್ಲಿ ಹಾಕಿದ ಮಾಂಸದ ಪಲ್ಯವನ್ನು ಅನ್ನದ ಬಟ್ಟಲಿಗೆ ಹಾಕಿ ಊಟ ಮಾಡುವಾಗ,ಮಾಂಸದ ತುಂಡನ್ನು ಬಾಯೊಳಗಿಟ್ಟು ಜಗಿದು ನುಂಗಿದಾಗೆಲ್ಲ ಬೊಗ್ಗಿಯ ನೆನಪು ಕಾಡುವುದೇ ಆಯಿತು. “ಬೊಗ್ಗಿ ಬೇಟೆಗೆ ಹೋಗಳು,ಬರ್ಕ ಪಾಯಸ ತಿನ್ನದು”, “ಬೊಗ್ಗಿ ಬೇಟೆಗೆ ಹೋಗಳು,ಬರ್ಕ ಪಾಯಸ ತಿನ್ನದು”, ಹೀಗೆ ಪದೇ ಪದೇ ಮನಸಿನಲ್ಲಿ ಹೇಳಿಕೊಳ್ಳುತ್ತ,ಎದುರುಗಡೆ ಊಟಕ್ಕೆ ಕುಳಿತ ತನ್ನ ಪತ್ನಿಯೊಡನೆಯೂ ಹೇಳುತ್ತ ಊಟ ಮುಗಿಸಿದ ಬಡ ರೈತ.
.
ಹಿಂದಿನ ರಾತ್ರಿ ಹಲಸಿನ ಹಣ್ಣಿನ ಪಾಯಸ ಮಾಡಿದ್ದಳು ಮನೆಯೊಡತಿ.ತಿನ್ನುವುದಕ್ಕೆ ಬಹಳ ರುಚಿಯಾಗುವ (ಮಾಡುವ ರೀತಿಯಲ್ಲಿ ಮಾಡಿದರೆ) ಈ ಪಾಯಸವನ್ನು ಮನೆಯ ಬೊಗ್ಗಿ ನಾಯಿ ಕೂಡಾ ಚೆನ್ನಾಗಿ ತಿಂದು ಹೊಟ್ಟೆಯೂದಿಸಿಕೊಂಡಿತ್ತು. ರಾತ್ರಿ ಮನೆ ವಠಾರ ಸುತ್ತು ಬರುತ್ತ ಹೋದ ನಾಯಿಗೆ ಸುಡುಮಣ್ಣಿನ ಬೆಚ್ಚಗೆಯಲ್ಲಿ ಮಲಗಿ ನಿದ್ದೆ ಮಾಡುವ ಮನಸ್ಸಾಯಿತು.ಹದ ಬಿಸಿಯಿರುವ ಸ್ನಾನದ ಹಂಡೆಯ ಒಲೆ ಬೂದಿಯಲ್ಲೂ ನಾಯಿಗಳು ಮಲಗುವುದು ಉಂಟು,ಒಲೆಯಲ್ಲಿ ಮಲಗುವುದು ಅವುಗಳಿಗೆ ತುಂಬಾ ಇಷ್ಟ. ಹಾಗೆ ಮಲಗಿದ ಬೊಗ್ಗಿಗೆ ಪಾಯಸದ ಅಮಲಿನಿಂದ ನಿದ್ದೆ ಬಂದದ್ದೇ ತಡ ಆ ನಂತರ ಬಿಸಿಯೇರಿ ತಾನೇ ಸುಟ್ಟು ಕರಕಲಾಗಿದ್ದು ಕೂಡಾ ಅನುಭವಕ್ಕೆ ಬರಲಿಲ್ಲ.ಬೊಗ್ಗಿ ಸತ್ತು ಕರಟಿ ಹೋಗಿತ್ತು.!! “ಬೊಗ್ಗಿ ಬೇಟೆಗೆ ಹೋಗಳು,ಬರ್ಕ ಪಾಯಸ ತಿನ್ನದು”!!!
–
– ವಿ. ಕೆ. ವಾಲ್ಪಾಡಿ
.
ಒಂದು ಉತ್ತಮ ಕಥೆ ಇಲ್ಲಿ ಓದಿದೆ .
WONDERFUL
ಚೆಂದದ ಕಥೆ, ಸೊಗಸಾದ ನಿರೂಪಣೆ.. ! ಓದುತ್ತಾ ದೃಶ್ಯಗಳು ಕಣ್ಣಿಗೆ ಕಟ್ಟಿದಂತಾಯಿತು.. 🙂
ಅಂತು ಇಲ್ಲಿನ ಫಿಲಿಪಿನೊಗಳು ನಾಯಿ ಮಾಂಸ ತಿನ್ನುತ್ತಾರೆಂದು ತಿಳಿದು ವ್ಯಾ ಅನಿಸಿತ್ತು ಖತರ್ ಗೆ ಬಂದ ಮೇಲೆನೆ ಗೊತ್ತಾಗಿದ್ದು ಪಿಲಿಪಿನೊಸ್ ನಾಯಿ ತಿಂತಾರೆ ಅಂತ.ಅದಕ್ಕೆ ಕೈಯಲ್ಲಿ ಲಾಟಿನ್ ಹಿಡಕೊಂಡ ಹುಡಕಿದರೂ ಒಂದ ನಾಯಿ ಸಿಗಲ್ಲ ಇಲ್ಲಿ.
ಒಳ್ಳೆಯ ಕಥೆ .ಧನ್ಯವಾದಗಳು