ಪ್ರಾಣಾಯಾಮ-ಒಂದು ನೋಟ : ಭಾಗ 4
ಬೇಧನ ಪ್ರಾಣಾಯಾಮಗಳು:
ಬೇಧನೆ ವಿಧಾನವು ಮೂಗಿನ ಒಂದು ಭಾಗದಿಂದ ಪೂರಕ ಮಾಡಿ ಇನ್ನೊಂದು ಭಾಗದಿಂದ ರೇಚಕ ಮಾಡುವುದಾಗಿದೆ.
ಇಲ್ಲಿಯೂ ಕೂಡಾ ಎರಡೂ ವಿಧಾನಗಳನ್ನು ಕೆಳಗೆ ಹೇಳಿದಂತೆ ಕುಳಿತು ಮಾಡಬೇಕು.
– ಪದ್ಮಾಸನ/ವಜ್ರಾಸನ/ಸುಖಾಸನದಲ್ಲಿ ಕುಳಿತುಕೊಳ್ಳಿ.
– ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ಹುಬ್ಬುಗಳು ಸಡಿಲವಾಗಿರಲಿ, ಮುಖದಲ್ಲಿ ಮಂದಹಾಸವಿರಲಿ.
– ಬಲಗೈಯಿಂದ ಮೃಗೀಯ ಮುದ್ರೆಯನ್ನು ಹಾಕಿ.
– ಎಡಗೈ ಚಿನ್ ಮುದ್ರೆಯಲ್ಲಿರಲಿ
– ನಂತರ ಸೂರ್ಯ ಬೇಧನ ಹಾಗೂ ಚಂದ್ರ ಬೇಧನವನ್ನು ಒಂದಾದ ಮೇಲೆ ಇನ್ನೊಂದರಂತೆ ಕನಿಷ್ಠ ೯ ಬಾರಿ ಆವರ್ತಿಸಿರಿ.
ಸೂಚನೆ: ಹೃದಯ, ಮೆದುಳಿನ ಶಸ್ತ್ರಕ್ರಿಯೆಗೆ ಒಳಪಟ್ಟವರು ವೈದ್ಯರ ಸೂಚನೆಯನ್ನು ಪಡೆದುಕೊಂಡು ಮಾತ್ರ ಮಾಡಬೇಕು.
೩) ಸೂರ್ಯ ಬೇಧನ:
ಇಲ್ಲಿ ಬಲ ಹೊಳ್ಳೆ ಮೂಲಕ ಮಾಡುವ ಉಚ್ವಾಸ(ಪೂರಕ), ಎಡ ಹೊಳ್ಳೆಯಿಂದ ನಿಶ್ವಾಸ (ರೇಚಕ)ಮಾಡುವುದು ಕ್ರಮ. ಬಲಭಾಗದಿಂದ ಮಾಡುವ ಉಸಿರಾಟ(ಪಿಂಗಳ) ಅನೇಕ ಮುಖ್ಯವಾದ ಚಯಾಪಚಯ ಪ್ರಕ್ರಿಯೆಗಳಿಗೆ ಸಂಬಂಧಪಟ್ಟುದಾಗಿದೆ. ಬಲ ಹೊಳ್ಳೆಯ ಮೂಲಕದ ಉಸಿರಾಟ ನರಮಂಡಲದ, ವಿಶೇಷವಾಗಿ ಅನುವೇದನಾ ನರವ್ಯೂಹದ ಹಾಗೂ ಜೀರ್ಣಾಂಗ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ವಿಧಾನ:
– ಬಲ ಹೊಳ್ಳೆಯಿಂದ ೪ ಸೆಕೆಂಡ್ ಗಳ ಕಾಲ ಪೂರಕ ಮಾಡಿ (ಎಡ ಹೊಳ್ಳೆ ಕಿರು ಬೆರಳಿನಿಂದ ಮೃದುವಾಗಿ ಒತ್ತಿ ಹಿಡಿದಿರಬೇಕು)
– ಎಡ ಹೊಳ್ಳೆಯಿಂದ ೬ ಸೆಕೆಂಡ್ ಗಳ ಕಾಲ ರೇಚಕ ಮಾಡಿ. (ಬಲ ಹೊಳ್ಳೆ ಹೆಬ್ಬೆರಳಿನಿಂದ ಮೃದುವಾಗಿ ಒತ್ತಿರಿ)
ಉಪಯೋಗಗಳು:
ಇದು ದೇಹದ ಉಷ್ಣಾಂಶ ಹೆಚ್ಚಿಸಿ ಕಫದ ಅಸಮತೋಲನ ನಿವಾರಣೆ ಮಾದುತ್ತದೆ. ಮಾತ್ರವಲ್ಲ, ನಿಯಮಿತ ಅಭ್ಯಾಸ ಶರೀರ ತೂಕದ ನಷ್ಟಕ್ಕೂ ಸಹಕಾರಿ, ಖಿನ್ನತೆ, ಒತ್ತಡಗಳನ್ನು ಕಡಿಮೆಗೊಳಿಸುತ್ತದೆ.
೪) ಚಂದ್ರ ಬೇಧನ:
ಚಂದ್ರ ಬೇಧನವು ಎಡ ಹೊಳ್ಳೆಯಿಂದ(ಇಡ/ಚಂದ್ರ ನಾಡಿಯಿಂದ) ಪೂರಕ ಮಾಡಿ ಬಲಗಡೆಯಿಂದ(ಸೂರ್ಯ ನಾಡಿ/ಪಿಂಗಳ) ರೇಚಕ ಮಾಡುವಂಥಹ ಕ್ರಮ.
ವಿಧಾನ:
– ಎಡ ಹೊಳ್ಳೆಯಿಂದ ೪ ಸೆಕೆಂಡ್ ಗಳ ಕಾಲ ಪೂರಕ ಮಾಡಿ (ಬಲ ಹೊಳ್ಳೆ ಹೆಬ್ಬೆರಳಿನಿಂದ ಮೃದುವಾಗಿ ಒತ್ತಿರಿ)
– ಬಲ ಹೊಳ್ಳೆಯಿಂದ ೬ ಸೆಕೆಂಡ್ ಗಳ ಕಾಲ ರೇಚಕ ಮಾಡಿ. (ಎಡ ಹೊಳ್ಳೆ ಕಿರು ಬೆರಳಿನಿಂದ ಮೃದುವಾಗಿ ಒತ್ತಿ ಹಿಡಿದಿರಬೇಕು)
ಉಪಯೋಗಗಳು:
ದೇಹದ ಶಾಖ ಕಡಿಮೆ ಮಾಡುತ್ತದೆ, ರಕ್ತದೊತ್ತಡ ಮತ್ತು ಸೋಮಾರಿತನ ಪರಿಹಾರ.
೫) ನಾಡಿ ಶೋಧನ ಪ್ರಾಣಾಯಾಮ:
ನಾಡಿ ಶೋಧನ ಒಂದು ಒಳ್ಳೆಯ ಉಸಿರಾಟ ತಂತ್ರ. ಇದರ ಕೆಲವೇ ನಿಮಿಷಗಳ ಅಭ್ಯಾಸ ಮನಸ್ಸನ್ನು ಖುಷಿಯಿಂದ ಹಾಗೂ ಶಾಂತವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಒತ್ತಡ ಮತ್ತು ಆಯಾಸಗಳ ಬಿಡುಗಡೆಗೆ ಕೂಡಾ ಸಹಕಾರಿ. ಇದನ್ನು ’ಅನುಲೋಮ-ವಿಲೋಮ’ ಪ್ರಾಣಾಯಾಮ ಎಂದೂ ಕರೆಯಲಾಗುತ್ತದೆ.
(ನಾಡಿ = ಸೂಕ್ಷ್ಮ ಶಕ್ತಿ ಪ್ರವಾಹಿ; ಶೋಧನೆ = ಶುದ್ಧೀಕರಣ)
ವಿಧಾನ :
– ಪದ್ಮಾಸನ/ವಜ್ರಾಸನ/ಸುಖಾಸನದಲ್ಲಿ ಕುಳಿತುಕೊಳ್ಳಿ.
– ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ಹುಬ್ಬುಗಳು ಸಡಿಲವಾಗಿರಲಿ, ಮುಖದಲ್ಲಿ ಮಂದಹಾಸವಿರಲಿ.
– ಬಲಗೈಯಿಂದ ಮೃಗೀಯ ಮುದ್ರೆಯನ್ನು ಹಾಕಿ.
– ಎಡಗೈ ಚಿನ್ ಮುದ್ರೆಯಲ್ಲಿರಲಿ
೧ ಸುತ್ತು ನಾಡಿ ಶೋಧನ ಎಂದರೆ,
– ಎಡ ಹೊಳ್ಳೆಯಿಂದ ಪೂರಕ
– ಬಲಹೊಳ್ಳೆಯಿಂದ ರೇಚಕ
– ಬಲಹೊಳ್ಳೆಯಿಂಡ ಪೂರಕ
– ಎಡ ಹೊಳ್ಳೆಯಿಂದ ರೇಚಕ
(ಪೂರಕ – ೪ ಸೆಕೆಂಡ್, ರೇಚಕ – ೬ ಸೆಕೆಂಡ್)
ಇಲ್ಲಿ ಕುಂಭಕ ಸಹಿತವಾಗಿಯೂ ಮಾಡಬಹುದು. ಪ್ರತಿ ಪೂರಕ/ರೇಚಕದ ನಂತರ ತಲಾ ೩ ಸೆಕೆಂಡ್ ಕುಂಭಕ ಮಾಡುತ್ತಾ ಬರಬೇಕು. ಕನಿಷ್ಠ ೫ ಸುತ್ತು ನಾಡಿ ಶೋಧನ ಮಾಡಬೇಕು.
(ಮುಂದುವರೆಯುವುದು..)
ಪ್ರಾಣಾಯಾಮ-ಒಂದು ನೋಟ : ಭಾಗ 1
ಪ್ರಾಣಾಯಾಮ-ಒಂದು ನೋಟ : ಭಾಗ 2
ಪ್ರಾಣಾಯಾಮ-ಒಂದು ನೋಟ : ಭಾಗ 3
– ಶ್ರುತಿ ಶರ್ಮಾ, ಕಾಸರಗೋಡು.
ಉಪಯುಕ್ತ !!!!!!
Yoga kuritu hecchagi tilisi