ಏನೇ ಆಗಲಿ ನೀ ನಮ್ಮವನು…
ಕಾವಿಯ ಕಾನದಿ ಅಡಗಿಸಿಟ್ಟೆವು,
ಮಂತ್ರದ ಬೇಲಿಯ ಹಾಕಿಬಿಟ್ಟೆವು,
ಗುಡಿಯ ಗೋಡೆಯಲಿ ಕೂಡಿಹಾಕಿದೆವು,
ಏನೇ ಆಗಲಿ ನೀ ನಮ್ಮವನು…
ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು,
ಭಾರಿ ಕೋರಿಕೆಗೆ ಮಹಲಿರಬೇಕು,
ಬಳಿಯಲಿ ಕಾಣಲು ಅನುಮತಿಬೇಕು,
ಜೇಬಿನ ತುಂಬಾ ನೋಟಿರಬೇಕು
ಆದರೂ ಬರುವೆವು … ಏಕೆ.. ಏನೇ ಆಗಲಿ ನೀ ನಮ್ಮವನು…
ನೀನಾರೆಂದೇ ತಿಳಿದಿಲ್ಲ,
ನಿನ್ನ ಅಭಿಪ್ರಾಯವೂ ಗೊತ್ತಿಲ್ಲ,
ಅವನ ಹೊಡೆದು, ಇವನ ಕಡಿದು
ನಿನ್ನ ಹೆಸರನೇ ನುಡಿಯುವೆವು,
ಏಕೆ … ಏನೇ ಆಗಲಿ ನೀ ನಮ್ಮವನು…
ತಿಲಕ ಇಟ್ಟರೆ ಹಿಂದೂ ನಾನು
ಟೋಪಿ ಹಾಕಿದೊಡೆ ಮುಸ್ಲಿಮನು ,
ಕೊರಳಿಗೆ ಶಿಲುಬೆ ಬೀಳುತ್ತಲೇ
ನಾ ಈಸಾಯಿಯಾಗಿಬಿಡುವೆನು,
ನನಗೆ ನಾನಾರೆಂದೂ ತಿಳಿದಿಲ್ಲ
ಆದರೂ ನಿನ್ನನಂತೂ ನಾ ಬಿಡಲೊಲ್ಲೆ,
ಏಕೆ… ಏನೇ ಆಗಲಿ ನೀ ನಮ್ಮವನು…
– ಆದರ್ಶ ಬಿ ವಸಿಷ್ಠ
Very true ..nice poem.
Very nice. Such a social message.
ಉತ್ತಮವಾದ ಕವನ.
ಅಭಿನಂದನೆಗಳು 🙂