ಮುತ್ತಿನ ಕೊಪ್ಪದಲ್ಲಿ ಚಳಿ ಕಾಡಿದ್ದು….
ಮುತ್ತಿನ ಕೊಪ್ಪ. ಆ ಊರಿಗೆ ನನ್ನದು ಹೊಸ ಪ್ರವೇಶವಾಗಿತ್ತು.ಅಲ್ಲಿಗೆ ತಲುಪುವಾಗಲೇ ಗಂಟೆ ಸಂಜೆ ಏಳು ದಾಟಿತ್ತು.ಕೈಮರದಿಂದ ಬಸ್ಸು ಹತ್ತಿದ್ದೇ ಒಂದು ನಿರ್ಧಾರದಲ್ಲಿ.ಅಷ್ಟೊಂದು ಪ್ರಯಾಣಿಕರನ್ನು ತುಂಬಿಸಲಾಗಿತ್ತು.ಅದನ್ನು ಬಿಟ್ಟರೆ ಮತ್ತೆ ಬಸ್ಸಿಲ್ಲವೆಂದು ಅಲ್ಲಿ ಹೇಳಿದರು.ನಾನು ಮತ್ತು ನನ್ನ ಆತ್ಮೀಯ ಮಿತ್ರ ಜಿನೇಶ್ ಪ್ರಸಾದ್ ಈ ಊರಿಗೆ ಹೊಸ ಅತಿಥಿಗಳಾಗಿ ಬಸ್ಸಿಂದಿಳಿದೆವು.ಬಸ್ಸಿನ ರಸ್ತೆಯಿಂದ ಸುಮಾರು ಒಂದು ಫರ್ಲಾಂಗಿನಷ್ಟು ದೂರ ನಡೆಯುವುದಕ್ಕಿತ್ತು.ಸೇರಬೇಕಾಗಿದ್ದ ಮನೆ ಮುಟ್ಟಿದ ಮೇಲೆ ಚಳಿಯ ಅನುಭವವೇ ಆಗಲಿಲ್ಲ. ಮೊದಲ ಉಪಚಾರವೇ ಬಿಸಿ ಕಾಫಿಯೆಂದ ಮೇಲೆ ಅದನ್ನು ಕುಡಿಯುವುದೇ ಖುಷಿ ಬೇರೆ.ಅಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿಯಿತ್ತು.ಇವಳು ನನ್ನ ಅಕ್ಕ,ಇವಳೂ ಕೂಡಾ ಅಕ್ಕ,ಇವಳೂ ಕೂಡಾ ಅಕ್ಕ..ಅಕ್ಕ ಕೊನೆಗೊಬ್ಬಳನ್ನು ಇವಳು ತಂಗಿ, ಬೆಂಗಳೂರಿನಲ್ಲಿ ಬಿ ಪಿ ಎಲ್‌ನಲ್ಲಿದ್ದಾಳೆ ಎಂದೇ ಹೊರತು ಗಂಡಸರನ್ನು ಪರಿಚಯಿಸಲಿಕ್ಕೇ ಇರಲಿಲ್ಲ.ಇದ್ದವರು ಒಬ್ಬರು ಅವರೆಲ್ಲರ ಪ್ರೀತಿಯ ತಂದೆ.ಅಮ್ಮ ಎಲ್ಲಿ ಎಂದು ಕೇಳುವುದಕ್ಕೆ ಅವಕಾಶವಿರಲಿಲ್ಲ,ಅವರು ದಿಢೀರಾಗಿ ತೀರಿಕೊಂಡಿದ್ದರು.ಇನ್ನು ಇದ್ದವರೆಲ್ಲ ಅಡುಗೆ ಚಪ್ಪರದಡಿಯಲ್ಲಿ ಓಡಾಡಬೇಕಾದವರು ಮಾತ್ರ.ಅವರಲ್ಲು ಕೂಡಾ ಸಂಬಂಧಿಕರು ಇದ್ದುದನ್ನು ಪರಿಚಯಿಸಿಯಾಯಿತು.
.
ಹೊಸ ವಾತಾವರಣ,ಹೊಸ ಜಾಗ, ಎಲ್ಲರೂ ಹೊಸಬರು.ಒಬ್ಬಳು ಹೊರತಾಗಿ ಉಳಿದವರೆಲ್ಲರೂ ಹೊಸಬರೆ.ಹಾಗಂತ ಅದೇನೊ ‘ಬೋರ್’ ಹೇಳುತ್ತಾರೆ, ಅದು ಆಗಲಿಲ್ಲ.ಜಿನೇಶ್ ಕೂಡಾ ಏನಾದರೂ ಹೊಸತನ್ನು ಹೆಕ್ಕಿ ಮಾತನಾಡುವವರು.ಹೊಸ ಜಾಗದಲ್ಲಿ ಅವರಿಗೆ ಹುಡುಕುವುದಕ್ಕೇ ಆಸಕ್ತಿ.ತೆಪ್ಪಗೆ ಕುಳಿತು ಕೊಳ್ಳಲಿಲ್ಲ ನಾಚಿಕೆ ಕೆಟ್ಟಾದರೂ ಎರಡು ಮೂರು ಸಲ ಕಾಫಿ ಕುಡಿದೆವು . ಮತ್ತೆ ಗಮನಿಸಿದಾಗ ಒಂದು ಹಂಡೆಯಲ್ಲಿಯೇ ಕಾಫಿ ಮಾಡಿಡಲಾಗಿತ್ತು. ಊಟವಾದ ಮೇಲೆ ಮಲಗುವುದೇ ನಮ್ಮ ಕೆಲಸ. ಆ ಮನೆಯ ಹಿಂದುಗಡೆಯೇ ಇರುವ ಮತ್ತೊಂದು ಮನೆಯಲ್ಲಿ ಮಲಗುವುದಕ್ಕೆ ಹೋಗಬೇಕಾಯಿತು. ಸರಿ, ಮಾಳಿಗೆಯಲ್ಲಿ ಮಲಗುವುದಕ್ಕೆ ಚಾಪೆ ಹಾಕಿದ್ದು,ಮೇಲೆ ಕರೆದುಕೊಂಡು ಹೋದರು.ಇಲ್ಲಿ ಚಳಿ ಜಾಸ್ತಿ ಇದೆ ಇದನ್ನು ಹೊದ್ದುಕೊಳ್ಳಿ ಅಂತ ರಗ್ಗು,ಕಂಬಳಿಯನ್ನು ಮೈಯುದ್ದಕ್ಕೆ ಹಾಸಿದರು.ಆ ನಡುವೆಯೂ ‘ನಮಗೇನು ಅಂಥ ಚಳಿ ಗೊತ್ತಾಗುತ್ತಿಲ್ಲ’ ಅನ್ನುವುದನ್ನೂ ಬಿಡಲಿಲ್ಲ.
.
ನಾವಿಲ್ಲಿಗ್ಯಾಕೆ ಬಂದೆವು ಅನ್ನೋದನ್ನು ಒಂದಿಷ್ಟು ಬರೆಯುತ್ತೇನೆ.ಒಬ್ಬಳು ಸಹೋದರಿಯ ಮದುವೆಗೆಂದು ಬಂದುದು.ಜಿನೇಶ್ ಅವರು ಛಾಯಾಗ್ರಾಹಕ. ಅವರನ್ನು ಫೋಟೋ ತೆಗೆಯಲ್ಲಿಕ್ಕಂತ ಜೊತೆಯಲ್ಲಿ ಬರಮಾಡಿಕೊಂಡದ್ದು ಹೊರತು ಅವರಿಗೇನು ಮದುವೆ ಆಮಂತ್ರಣವಿಲ್ಲ.ಮದುಮಗಳ ಹೆಸರು ಸುಮಂಗಲ.ಅವಳು ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ಗ್ರಂಥಾಲಯ ಸಹಾಯಕಿಯಾಗಿದ್ದವಳು.ದುಂಡು ಮುಖದಲ್ಲಿನ ಮುಗ್ಧತೆಯೊಂದು ಬಿಟ್ಟರೆ ಥಳುಕು ಬಳುಕಿನವಳಲ್ಲ.ಸ್ವಲ್ಪ ಮಟ್ಟಿಗೆ ಡುಮ್ಮಿ.ನಾನು ತುಂಬಾ ಸಲ ಹೇಳುತ್ತಿದ್ದೆ,ನೀನು ಸಪೂರವಾಗಲಿಕ್ಕೆ ಪ್ರಯತ್ನಿಸದಿದ್ದರೆ ಮುಂದೆ ಅಡ್ಡ ಅಗಲಕ್ಕೆ ಬೆಳೆಯುತ್ತಿ ಅಂತ. ಕೊರಳಿಗೊಂದು ಕಪ್ಪು ದಾರ ಮಾತ್ರ.ಹಾಗಂತ ಅದು ಅವಳಿಗೆ ಒಂದು ಒಳ್ಳೆಯ ಆಕರ್ಷಣೆಯನ್ನು ಕೊಡುತ್ತಿತ್ತು.ಮತ್ತಿನ್ನೇನೆನ್ನೆಲ್ಲ ಕೊರಳು ಕಿವಿ ಮೂಗಿಗೆ ಸಿಕ್ಕಿಸಿಕೊಂಡು ಬರುತ್ತಲೂ ಇರಲಿಲ್ಲ.ಮಾತು ಚೆಂದ,ಏನೇ ಮಾತಾಡಿದ್ರೂ ಬೆನ್ನಿಗೆ ಒಂದು ನಗುತ್ತಾಳೆ.ಅವಳು ಒಂದು ಜೋಕ್ ಹೇಳಿದ್ದು ನನಗೆ ದಿನಾ ಬೆಳಿಗ್ಗೆ ದಿನಪತ್ರಿಕೆ ಓದುವಾಗ ನೆನಪಾಗುತ್ತದೆ.ಅದೇನೆಂದರೆ ಆಕೆಯೇ ನನಗೆ ಕೇಳಿದ್ದು ,ಪೇಪರ್‌ನಲ್ಲಿ ಸಣ್ಣ ಸುದ್ದಿ ಪ್ರಕಟವಾದಾಗ ಕೊನಗೆ ಕಂಸದೊಳಗೆ ಸ್ವ.ಸು. ಅಂತ ಬರೆಯುತ್ತಾರಲ್ಲ, ಅದೇನು? ‘ ಸ್ವಂತ ಸುದ್ದಿ’ ಎಂದು ಉತ್ತರಿಸಿದ್ದಕ್ಕೆ ಅದು ತಪ್ಪು, ‘ಸ್ವಲ್ಪ ಸುಳ್ಳು’ ಎಂದಿದ್ದಳು. ಈಗ ಪತ್ರಿಕೆಗಳಲ್ಲಿ ಸ್ವ.ಸು. ಅಂತ ಸುದ್ದಿಯ ಕೊನೆಗೆ ಪ್ರಕಟವಾಗುವುದಿಲ್ಲ, ಯಾಕೆಂದರೆ ಎಲ್ಲವೂ ಸುಳ್ಳು!
.
ಮಲಗಿದವರಿಗೆ ನಿದ್ದೆಯೇನೋ ಬಂದಿತ್ತಾದರೂ ಅಪರರಾತ್ರಿಯಲ್ಲಿಯೇ ಎಚ್ಚರಿಸುವುದೇ? ಯಾರಂತೀರಾ..?ಚಳಿ ಮಹರಾಯ..! ಅದು ಎಂಥ ಚಳಿಯೆಂದರೆ ಮಡಿಕೇರಿ ಚಳಿಯನ್ನೂ ಮೀರಿತ್ತು. 1978 ರಲ್ಲಿ ನಾನು ಅಣ್ಣನೊಂದಿಗೆ ಮಡಿಕೇರಿಗೆ ಒಮ್ಮೆ ಹೋಗಿದ್ದೆ. ಮಂಗಳೂರಿನಿಂದ ಹೊರಟಿದ್ದ ಬಸ್ಸಿನಿಂದ ಮಡಿಕೇರಿ ನಿಲ್ದಾಣದಲ್ಲಿ ಇಳಿಯುವಾಗ ರಾತ್ರಿ ಹತ್ತು ಗಂಟೆ. ಘಾಟಿ ರಸ್ತೆ ಮುಗಿಸಿ ಜ|ಕಾರ್ಯಪ್ಪ ವೃತ್ತದಲ್ಲಿಗೆ ಬಸ್ಸು ಬಂದಾಗಲೇ ಮೈ ನಡುಕಕ್ಕೆ ಪ್ರಾರಂಭವಾಗಿತ್ತು.ಬಸ್ಸಿನಿಂದಿಳಿಯುವಾಗ ಸರಿಯಾಗಿ ಕಾಲೂರುವುದಕ್ಕೂ ಸಾಧ್ಯವಾಗುತ್ತಿಲ್ಲ.ಇಡೀ ಶರೀರವೇ ಆಯತಪ್ಪುವಂತೆ ನಡುಗುತಿತ್ತು.ಹಲ್ಲುಗಳಂತೂ ಟೈಪೆ ರೈಟರ್ ಸದ್ದು ಮಾಡುವ ಹಾಗೆ ಕಟಕಟವಾಗುತ್ತಿತ್ತು.ನಿಲ್ದಾಣ ಪಕ್ಕದಲ್ಲಿಯೇ ಇತ್ತು ಕಾವೇರಿ ಲಾಡ್ಜ್.ಆಗ ಮಡಿಕೇರಿಯಲ್ಲಿ ಇದ್ದ ಸುಸಜ್ಜಿತ ವಸತಿ ಗೃಹವೆಂದರೆ ಅದು ಮಾತ್ರ.ಅಲ್ಲಿ ಹೋಗಿ ಬಿಸಿ ನೀರಿಗೆ ಕೈಕಾಲು ಅದ್ದಿಸಿಕೊಂಡು, ಮತ್ತೆ ಸ್ನಾನ ಮುಗಿಸಿ ಉಣ್ಣೆಯ ರಗ್ಗು ಹೊದೆದು ಮಲಗಿದ ಮೇಲಷ್ಟೆ ಸಮಾಧಾನವಾಯಿತು.ವಿಪರೀತ ಚಳಿಯ ಅನುಭವ ಅದುವೇ ಮೊದಲು.
.
ಇಲ್ಲಿ ಮಧ್ಯ ರಾತ್ರಿಯೆ ಚಳಿಗೆ ಶುರುವಾಯಿತು.ಸ್ವಲ್ಪ ಸ್ವಲ್ಪ ಎಂದು ನಡುಕ ಜಾಸ್ತಿಯಾಗುತ್ತಲೇ ಹೋಯಿತು.ಉಪ್ಪರಿಗೆಯಲ್ಲಿ ಮಲಗಿದ್ದಕ್ಕೋ ಏನೋ ಮತ್ತಷ್ಟು ಚಳಿ. ಚಳಿಯ ಕಾಟ ಹೇಗಿತ್ತೆಂದರೆ ನಮ್ಮನ್ನು ಮೇಲಕ್ಕೆತ್ತಿ ಕೆಳಗೆ ಹಾಕುತ್ತಿತ್ತು.ಬಹುಶಃ ಮನೆಯ ಮಾಡು ಮಾತ್ರವೇ ನಮ್ಮನ್ನು ಮತ್ತೆ ಚಾಪೆಗೇ ಬೀಳುವಂತೆ ಮಾಡಿರಬಹುದು.ಮೈ ಮೇಲೆ ಹೊದ್ದ ರಗ್ಗು,ಕಂಬಳಿಗೆ ಆ ಚಳಿ ಕ್ಯಾರೇ ಅನ್ನಲಿಲ್ಲ.ಅದೇನಾದರೂ ನಮ್ಮನ್ನು ವಿಚಾರಿಸುವ ಪರಿಸ್ಥಿತಿಯಲ್ಲಿದ್ದಿದ್ದರೆ, ‘ನಾವು ಹೊರ ಜಿಲ್ಲೆಯವರು,ಈ ಮನೆಯಾಕೆಯೊಬ್ಬಳ ಮದುವೆಗೆ ಬಂದಿದ್ದೇವೆ,ನಮ್ಮದೇನೂ ತಪ್ಪುಗಳಿಲ್ಲ,ದಯವಿಟ್ಟು ನಮ್ಮನ್ನು ಬಿಟ್ಟು ಕೆಳಗೆ ಹೋಗು’ ಅಂತ ಬೇಡಿಕೊಳ್ಳುತ್ತಿದ್ದೆವು, ಖಂಡಿತ. ಮೈಮೇಲಿನ ರಗ್ಗು ಬಿಡಿ ದೇಹದಾಕಾರದ ಚಪ್ಪಡಿ ಕಲ್ಲನ್ನೆ ಹಾಸಿದ್ದರೂ ಎತ್ತಿ ಹಾಕುತ್ತಿತ್ತೋ ಏನೋ ,ಅಂಥ ಚಳಿ. ಎದ್ದು ಕೆಳಗೆ ಹೋಗಿ ಅಡುಗೆ ಚಪ್ಪರದಲ್ಲಿನ ಒಲೆಯ ಮುಂದುಗಡೆಯಾದರೂ ಕುಳಿತು ಬೆಳಕು ಮಾಡೋಣ ಅಂಥ ಅನಿಸಿತಾದರೂ ಮರ್ಯಾದೆಯ ಪ್ರಶ್ನೆಯಾಗಿತ್ತು.ಒಮ್ಮೆ ಬೆಳಕಾಗಿದ್ದರೆ ಸಾಕಪ್ಪಾ ಅಂತ ಯೋಚಿಸುತ್ತಲೇ ಚಳಿಗೆ ದೇಹವೊಡ್ಡಿ ಹೊಸ ಕ್ರಮದಲ್ಲಿನ ಯೋಗಾಭ್ಯಾಸದಂತೆ ನಡುಗುತ್ತ, ಚಾಪೆಯಿಂದ ಮೇಲಕ್ಕೆಸೆಯಲ್ಪಡುತ್ತ ರಾತ್ರಿ ಕಳೆದೆವು.ಮನೆಯವರೆಲ್ಲರೂ ಎದ್ದು ಆಚೀಚೆ ಓಡಾಡುತ್ತಿದ್ದಾರೆ ಅಂತ ಗಮನಕ್ಕೆ ಬಂದ ಕೂಡಲೆ ಎದ್ದು ಕೆಳಗಿಳಿದಾಗ ಇಡೀ ಅಂಗಳದಲ್ಲೇ ಬೆಂಕಿಯ ಹಬೆಯಾಡುತ್ತಿತ್ತು.ಅಡಿಕೆಯನ್ನು ಕತ್ತರಿಸಿ ಬೇಯಿಸುತ್ತಿದ್ದರು.ಕೆಲವು ಹೆಂಗಸರು ಬೆಂದ ಅಡಿಕೆಯನ್ನು ಗುಡಾಣದಿಂದ ತೆಗೆದು ಒಣಗಲಿಕ್ಕೆ ಹಾಕಿದರೆ,ಇನ್ನು ಕೆಲವರು ಬೇಯಿಸಲಿಕ್ಕಾಗಿ ಹಸಿ ಅಡಕೆಯನ್ನು ಕತ್ತರಿಸುತ್ತಿದ್ದರು.ನಮಗಂತೂ ಸ್ವರ್ಗಕ್ಕೆ ಇಳಿದಂತಾಯಿತು.ಇನ್ನೊಂದು ಕಡೆಯಲ್ಲಿ ಸ್ನಾನದ ನೀರು ಕೂಡಾ ಕೊತ ಕೊತ ಅನ್ನುತ್ತಲೇ ಇತ್ತು.ಮಲೆನಾಡಿನ ಸ್ನಾನದ ಬಿಸಿನೀರನ್ನು ಪುಸ್ತಕದಲ್ಲಿಯೇ ಮುಟ್ಟಿ ನೋಡಿದ್ದ ನನಗೆ ಈಗ ಸ್ಪಷ್ಟ ಗೊತ್ತಾಯಿತು.ಬೆಂಕಿಯ ಒಲೆ ಮುಂದೆ ಹೊತ್ತು ಕಳೆದು ಆ ನಂತರ ಬಿಸಿ ನೀರಿನ ಸ್ನಾನ ಮುಗಿಸಿ ಮನೆಯೊಳಗೆ ಹೋದದ್ದೇ ಲೋಟ ಕಾಫಿ ಕುಡಿಯಲಿಕ್ಕೆ.
.
ಬಿಸಿ ನೀರಿನ ಸ್ನಾನವಷ್ಟೇ ಅಲ್ಲ ಮಡಿಲ್ಲಲ್ಲಿ ಕೆಂಡವನ್ನೇ ಕಟ್ಟಿಕೊಂಡರೂ ಚಳಿಯನ್ನು ಒದ್ದೋಡಿಸಲಿಕ್ಕಾಗುತ್ತಿಲ್ಲ. ಆಗಾಗ್ಯೆ ಕಾಫಿ ಕುಡಿಯೋದು ಬಿಟ್ಟರೆ ಬೇರೇನಿಲ್ಲ.ಮಧ್ಯಾಹ್ನದ ಊಟಕ್ಕೆ ಮುಂಚೆಯೇ ಸುಮಾರು ಮೂವತ್ತು ಲೋಟ ಕಾಫಿ ಕುಡಿದಿರಬಹುದು.ಮೈ ನಡುಗಿಸದಿದ್ದರೂ ರಾತ್ರಿಯ ಚಳಿಯ ಭಯವೇ ಹಗಲಲ್ಲೂ ನೆನಪಿಸುತ್ತ ನಡುಗಿಸುತ್ತಿತ್ತು.
.
.
– ವಿ.ಕೆ.ವಾಲ್ಪಾಡಿ
.
.
Nice reading.. 🙂
Good writing..hilarious 🙂
Nice narration.Sir. Such a nice prose style.
ವಿ. ಕೆ .ವಾಲ್ಪಾಡಿ ಯವರು ಚಳಿಗಾಲದ ಬಿಸಿನೀರಿನ ಅಭ್ಯಂಜನದ ವರ್ಣನೆ ಮಾಡುವುದನ್ನು ಮರೆತಂತೆ ಕಾಣುತ್ತೆ .ಆದರೂ ತುಂಬಾ ಹಿಡಿಸಿತು .
ನಿಮ್ಮ ಪ್ರತಿಕ್ರಿಯೆ ತುಂಬಾ ತುಂಬ ಹಿಡಿಸಿದೆ.ಬರೆಯುವಲ್ಲಿನ ಅವಸರವನ್ನು ತಾವು ಗಮನಿಸಿದ್ದಿರಿ.ಮುಂದೆಗೆ ತುಂಬಾ ಸಹಕಾರಿಯಾಗಲಿದೆ.ಧನ್ಯವಾದಗಳು.
super
ಸೊಗಸಾದ ನಿರೂಪಣೆ ,ತಿಳಿ ಹಾಸ್ಯ ಇಷ್ಟ ವಾಯಿತು