ಲಹರಿ

ಕಾಫಿ ಪುರಾಣ

Share Button
Shruthi
ಶ್ರುತಿ ಶರ್ಮಾ, ಮೈಸೂರು

 

“Round Canteen.. Coffee.. After this class” ಪಕ್ಕ  ಕುಳಿತ  ಯಾರೇ  ಆಗಲಿ,  ಇಂತಹುದೇನಾದರೂ ಕೀವರ್ಡ್ ಗಳನ್ನು ನನ್ನ ಏಕಮಾತ್ರ ಪುಸ್ತಕದ ತೆರೆದಿಟ್ಟ ಪುಟದ ತುದಿಯಲ್ಲಿ ಬರೆದರೆ, ಬರೆದವರು ಪೆನ್ನು ಮೇಲೆತ್ತುವ ಮೊದಲೇ “Done..!” ಅಂತ ಗೀಚುವುದು ನನ್ನ ಅಭ್ಯಾಸ..! ನಿಜಕ್ಕೂ ಮಂಡೆ ಬಿಸಿ ಆಗಿಸುತ್ತಿದ್ದ ಘನ ಗಂಭೀರ ತರಗತಿಗಳು ಪ್ರತಿಬಾರಿಯೂ ಕ್ಲಾಸಿನ  “ವಾನರಪಡೆ”ಯನ್ನು ಕಟ್ಟಿಕೊಂಡು ರೌಂಡ್ ಕ್ಯಾಂಟೀನ್ ಕಾಫಿ ಸವಿಯಲು ಒಂದು ನೆಪ ಅಷ್ಟೆ!

ರುಚಿರುಚಿಯಾಗಿ ಉಣ್ಣಲು ತಿನ್ನಲು ಮೈಸೂರಿನ ಜನ ಒಂದು ಕೈ ಮೇಲೆ. ಮೈಸೂರು ಪಾಕ್, ಮೈಸೂರು ಮಸಾಲೆ ದೋಸೆ, ಮೈಸೂರು ಸ್ಪೆಷಲ್ ಚುರುಮುರಿ, ಕೊಬ್ಬರಿ ಮಿಠಾಯಿ, ಒಬ್ಬಟ್ಟು, ಮೊಸರನ್ನ, ಬಿಸಿಬೇಳೆ ಭಾತ್, ರೈಸ್ ಭಾತ್, ಕಾಫಿ…. ಹೀಗೆ ಇನ್ನೂ ಹಲವಾರು ತಿನಿಸು-ಪೇಯಗಳಿಗೆ ಖ್ಯಾತವಾದ ಮೈಸೂರಿನಲ್ಲಿ ಭಕ್ಷ್ಯಗಳನ್ನು ಸವಿಯುವುದೇ ಒಂದು ವಿಶೇಷ ಅನುಭವ!

Round canteen

ಮೈಸೂರು ಯುನಿವರ್ಸಿಟಿ ಹೇಗೆ ವರ್ಲ್ಡ್ ಫೇಮಸ್ಸೋ ಅಷ್ಟೇ ಅಲ್ಲಿನ ಕ್ಯಾಂಟೀನ್ ಕೂಡಾ ಮೈಸೂರಿನಲ್ಲಿ ’ವರ್ಲ್ಡ್ ಫ಼ೇಮಸ್ಸು’. ಕಟ್ಟಡದ ಗುಂಡಗಿನ ಆಕಾರದಿಂದಲೋ ಏನೋ ಯೂನಿವರ್ಸಿಟಿ ಕ್ಯಾಂಟೀನ್ ಗೆ ’ರೌಂಡ್’ ಕ್ಯಾಂಟೀನ್ ಎಂಬ ನಾಮಧೇಯ. ಬಹಳ ಹಿಂದಿನಿಂದಲೇ ಯಾರೆಂದರವರು ಮುಗಿ ಬೀಳುತ್ತಿದ್ದರಂತೆ ರೌಂಡ್ ಕ್ಯಾಂಟೀನ್ ದೋಸೆಯ ಸವಿಗೆ. ಈಗಲೂ ಈ ವಿಷಯದಲ್ಲಿ ಯಾವುದೇ ಕುಂದುಂಟಾಗದಂತೆ ಮೈಸೂರು ವಿವಿ ವಿದ್ಯಾರ್ಥಿಗಳು ಮಾತ್ರವಲ್ಲ, ಹೊರಗಿನ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಉಳಿದವರು ಬಂದು ’ಮೆನು-ಬೋರ್ಡ್’ ಮುಂದೆ ಹೊತ್ತಾನುಗಟ್ಟಳೆ ಏನು ಆರ್ಡರ್ ಮಾಡಬೇಕೆಂದು ಹೊಂಚುವುದುಂಟು. ರುಚಿಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ರಾಜಿ ಮಾಡಿಕೊಳ್ಳದೇ ಪ್ರತಿನಿತ್ಯ ಹಳೆ-ಹೊಸ ಮುಖಗಳನ್ನು ನೋಡುತ್ತಾ ಬಂದಿರುವ ರೌಂಡ್ ಕ್ಯಾಂಟೀನ್ ನಮ್ಮೆಲ್ಲರ ಫ಼ೇವರಿಟ್ ಅಡ್ಡಾ!

ಅದೆಷ್ಟೇ ರಷ್ ಇರಲಿ, ’ನಮ್ಮದೇ ಯೂನಿವರ್ಸಿಟಿ(?!!), ನಮ್ಮ ಸ್ವಂತ ಕ್ಯಾಂಟೀನ್(?!!)’ ಎಂಬ ಹಕ್ಕು ಚಲಾವಣಾ ರೀತಿಯಿಂದ ನುಗ್ಗಿ ಕಾಫಿ ಆರ್ಡರ್ ಮಾಡುವ ನಮ್ಮ ಎಂ.ಟೆಕ್ ಗ್ಯಾಂಗ್  ಗಂಟೆಗಟ್ಟಳೆ ಅಲ್ಲೇ ಹರಟೆ ಹೊಡೆಯುವುದುಂಟು. ಮಾತು, ಕತೆ, ಹರಟೆ, ನಗು, ಅಳು, ಗಾಸಿಪ್, ಪರದೂಷಣೆ ಎಲ್ಲದಕ್ಕೂ ಸಾಕ್ಷಿ ಅಲ್ಲಿನ ಗಾಜಿನ ಕಾಫಿ ಲೋಟಗಳು.  ಬೆಳಬೆಳಗ್ಗೆಯೇ ಒಂದು ಕಾಫಿ ಆರ್ಡರ್ ಮಾಡಿ ಅಲ್ಲೇ ಮರಗಳ ಕೆಳಗಿನ ಸೀಟು ಹಿಡಿದು ಕುಳಿತು ಕಾಲೇಜ್ ಕೆಲಸಗಳನ್ನು ಶುರು ಹಚ್ಚಿಕೊಂಡರೆ  ಮಧ್ಯಾಹ್ನ ಮೊಸರನ್ನ, ಬಿಸಿಬೇಳೆ ಭಾತ್ ಮಿಕ್ಸ್ ಊಟದೊಂದಿಗೆ ಸಂಪನ್ನಗೊಳ್ಳುತ್ತವೆ. ಇದು ಮಾತ್ರವಲ್ಲ, ಆಗಾಗ ಸಣ್ಣ ಪುಟ್ಟ ಟ್ರೀಟ್ ಗಳು ಬೇರೆ.

Coffee

ಥರಗುಟ್ಟಿಸುವ ಛಳಿಯಲ್ಲೂ ತರಗತಿಯೊಳಗೆ ಫ್ಯಾನ್ ಬೇಕೇಬೇಕಾದ ಭೂಪರಿಂದಾಗಿ ಕಟ ಕಟನೆ ಹಲ್ಲು ಕಡಿಯುತ್ತಾ ಹೊರಬಂದು ಯಾವಾಗಲೂ ಯೂನಿವರ್ಸಿಟಿಯ ಹುಣಸೆಮರಗಳ ಕೆಳಗೆ ಪ್ರೇತಗಳಂತೆ ಅಲೆಯುವ ನಮ್ಮ ಗುಂಪು ರೌಂಡ್ ಕ್ಯಾಂಟೀನ್ನತ್ತ ಸವಾರಿ ಬಿಡುವುದು.

ಕಾಫಿ ಕೌಂಟರ್ ನಲ್ಲಿ ನಮ್ಮ ಕಣ್ಣ ಮುಂದೆಯೇ ಕಾಫಿ ಬೆರೆಸಲಾಗುತ್ತದೆ. ಪ್ರತಿ ಬಾರಿಯೂ ಕಾಫಿ ಮಾಡುವ ಹುಡುಗ ರುಚಿ ಹೆಚ್ಚಿಸಲು ಅದೇನನ್ನಾದರೂ ಬೆರೆಸುತ್ತಾನೆಯೇ, ಎಷ್ಟು ಪುಡಿ ಸೇರಿಸುತ್ತಾನೆ ಇತ್ಯಾದಿಗಳನ್ನು ಅರೆಕ್ಷಣವೂ ಕಣ್ಣು ಮುಚ್ಚದೆ ನೋಡಿ ರೆಕಾರ್ಡ್ ಮಾಡಿ ಒಮ್ಮೆ ಮನಸ್ಸಿನೊಳಗೆ ರಿವೈಂಡ್ ಬಟನ್ ಒತ್ತಿ ಕಾಫಿ ಹೀರುತ್ತಾ ಕುಳಿತರೆ ಆ ಕಾಫಿಗೂ ಕಾಫಿ ಕಂಡು ಹಿಡಿದ ಪುಣ್ಯಾತ್ಮರಿಗೂ ಸಲಾಂ ಹೊಡೆಯಬೇಕೆನಿಸುವುದು ನಿಜ! 🙂

 

– ಶ್ರುತಿ ಶರ್ಮಾ, ಮೈಸೂರು

 

10 Comments on “ಕಾಫಿ ಪುರಾಣ

  1. ಸೂಪರ್!
    ಇದೇ ಖುಷಿಗೆ ನಾಳೆ ನಿಮ್ಮದೇ ಟ್ರೀಟ್ 😛

  2. ಕಾಫಿ ನನ್ನ ಪಾಲಿನ ‘ಜ್ಞಾನ ತೀರ್ಥ’ ಎಂದರೆ ತಾಪ್ಪಾಗಲಾರದೇನೋ. ಏಕೆಂದರೆ, ಬೆಳಗ್ಗೆ ಎದ್ದೊಡನೆ ಕಾಫಿ ಹೊಟ್ಟೆಗೆ ಬೀಳದೆ ತಲೆಯೇ ಓದುವುದಿಲ್ಲ. ಈಗಂತೂ ಊರಿಂದ ಹೊರಗೆ ಬಂಡ ಮೇಲೆ ಕಾಫಿಯನ್ನು ಬಹಳವಾಗಿ miss ಮಾಡ್ಕೊತ ಇದೀನಿ. ಲೇಖನದಲ್ಲೇ ಕಾಫಿ ಕುಡಿಸಿದ ನಿಮಗೆ ಧನ್ಯವಾದಗಳು. ಸರಳ-ಸುಂದರವಾಗಿ ಬರೆದಿದ್ದೀರಿ.

  3. Round canteen ge nanoo chira runi.drishya nodid mele nenapayitu.yeega saviraaru mili duradallidru drishya, nenapugalu matra hattira kareyuttave.

  4. ಪ.ರಾಮಚಂದ್ರ , ದುಬೈ -ಸಂಯುಕ್ತ ಅರಬ್ ಸಂಸ್ಥಾನ says:

    ಶ್ರುತಿ ಶರ್ಮಾ ಮೈಸೂರು ಅವರ ಯುನಿವರ್ಸಿಟಿ ಕ್ಯಾಂಟೀನ್ ನ ಸವಿನೆನಪುಗಳ ಸುಂದರ ಲೇಖನವನ್ನು ನಾಡಿನ ಜನತೆಯ ಮುಂದಿಟ್ಟ ‘ಸುರಗಿ – ಸುರಹೊನ್ನೆ’ ವೃಂದಕ್ಕೆ ವಂದನೆಗಳು.

  5. ಮೈಸೂರಿನ ಹವಾ ಕಾಫಿ ಪ್ರೇಮಿಗಳಿಗೆ ಹೇಳಿದಂತಿರುತ್ತದೆ. ನಮ್ಮೂರಿನ ಉರಿಬಿಸಿಲಲ್ಲೂ ಕಾಫಿಯ ಸುಗಂಧ ತೇಲಿ ಬಂತು…

  6. ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ವಂದನೆಗಳು.. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *