ನವಿಲು ಕುಣಿಯುತಿದೆ

Share Button
Jayashree B

ಜಯಶ್ರೀ ಬಿ ಕದ್ರಿ

‘ನವಿಲು ಕುಣಿಯುತಿದೆ.. ನವಿಲು ಕುಣಿಯುತಿದೆ.. ನವಿ..ಲು.. ಕುಣಿಯುತಿದೆ’ ಹೀಗೆ ಕಾಳಿಂಗ ನಾವಡರು ಹಾಡುತ್ತಿದ್ದರೆ ಕೇಳುಗರಿಗೆಲ್ಲ ರೋಮಾಂಚನ. ಅದೇ ರೀತಿ ‘ನವಿಲೇ.. ಪಂಚರಂಗಿ ನವಿಲೇ ..’ ಎಂದು ‘ಯಜಮಾನ’ ಚಿತ್ರದಲ್ಲಿ ಹೀರೋಯಿನ್ ಜತೆ ಡ್ಯುಯೆಟ್ ಹಾಡುತ್ತಿದ್ದರೆ ಪ್ರೇಕ್ಶಕರೆಲ್ಲ ಫುಲ್ ಖುಶ್. ಸಣ್ಣ ಕ್ಲಾಸಿನಲ್ಲಿ ಸ್ಕೌಟ್ ಮಾಸ್ಟರ್ ‘ನವ್ವಾಲೆ ಬಂತವ್ವ ನವ್ವಾಲೆ’ ಎಂದು ಹಾಡು ಹೇಳಿಸುತ್ತಿದ್ದುದು ಅಸ್ಪಷ್ಟವಾಗಿ ನೆನಪಿದೆ. ಇನ್ನು ಚಿಕ್ಕವರಾಗಿದ್ದಾಗ ನವಿಲು ಗರಿಯನ್ನು ಪುಸ್ತಕದ ನಡುವಿನಲ್ಲಿಟ್ಟು ಅದು ಮರಿ ಹಾಕುತ್ತದೆಂಬ ಆಸೆಯಿಂದ ಕಾಯುತ್ತಿದ್ದುದು, ನವಿಲಿನ ಚಿತ್ರದಲ್ಲಿ ಏನಿಲ್ಲದಿದ್ದರೂ ಜುಟ್ಟು ಮತ್ತು ಉದ್ದನೆಯ ಗರಿಗಳನ್ನು ಬಿಡಿಸಿ ಅದಕ್ಕೊಂದು ಶೇಪ್ ಕೊಡುತ್ತಿದ್ದುದು.. ಹೀಗೆ ನೆನಪುಗಳ ನೋಟ ಹಸಿರು. ಕತ್ತು ಕೊಂಕಿಸಿ ವಯ್ಯಾರ ಮಾಡುವ ಸುಂದರಿಯರನ್ನು ‘ ಷಿ ಈಸ್ ದ ಪೀಕಾಕ್ ಆಫ಼್ ಅವರ್ ಕ್ಲಾಸ್’ ಎಂದು ಹೊಟ್ಟೆ ಉರಿದುಕೊಳ್ಳುತ್ತಿದ್ದುದೂ ನಾವೇ. ನಾವು ಓದುತ್ತಿದ್ದ ಹೆಚ್ಚಿನ ಜನಪ್ರಿಯ ಕಾದಂಬರಿಗಳಲ್ಲಿ ಅವಳು ಉಟ್ಟಿದ್ದ ನವಿಲು ಬಣ್ಣದ ರೇಶಿಮೆ ಸೀರೆ ಅವಳಿಗೆ ಚೆನ್ನಾಗಿ ಒಪ್ಪುತ್ತಿತ್ತು. ಹಾರುತ್ತಿರುವ ಮುಂಗುರುಳು. ಮೀನಾಕ್ಶಮ್ಮ ಅವಳಿಗೆ ಬಿಸಿ ಬಿಸಿ ಅವರೆಕಾಳು ಉಪ್ಪಿಟ್ಟು, ಆಂಬೊಡೆ ಬಡಿಸಿ ಅವಳನ್ನು ನೋಡಿ ಮುಗುಳ್ನಕ್ಕರು’. ಎಂದೆಲ್ಲ ವಿವರಗಳಿರುತ್ತಿದ್ದವು. ನನ್ನ ಮಗಳು ಪೀಕಾಕ್ ದ್ಯಾನ್ಸ್ ಮಾಡಿದಾಗ ಅತ್ಯಂತ ಹೆಚ್ಚು ಸಂಭ್ರಮಿಸಿದ್ದು ನಾನೇ. ನವಿಲು ಬಣ್ಣಕ್ಕೆ ಅದರದೇ ಆದ ಡಿಗ್ನಿಟಿ, ವ್ಯಕ್ತಿತ್ವ ಇದೆ.

ಹೀಗೆ ನನ್ನ ಭಾವ ವಲಯದಲ್ಲಿ ಗೌರವದ ಸ್ಥಾನ ಪಡೆದ ನವಿಲುಗಳು-ಒಂದಲ್ಲ ಎರಡಲ್ಲ ಏಳೆಂಟು ನವಿಲುಗಳು ನಮ್ಮೂರಿನಲ್ಲಿ, ಬಿರುಬೇಸಗೆಯ, ಕಡು ಸೆಕೆಯ ನಮ್ಮೂರಿನಲ್ಲಿ, ಅದೂ ಒಂದು ಗದ್ದೆಯಲ್ಲಿ ಕಂಡಾಗ ನನಗಾದ ಸಂಭ್ರಮಾಶ್ಚರ್ಯಗಳನ್ನು ಹೇಳತೀರದು. ಮೂಡಬಿದಿರೆಯಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ‘ಎಡಪದವು’ ಎಂದು ಒಂದು ಗ್ರಾಮವಿದೆ. ಅಲ್ಲಿನ ಗದ್ದೆಯೊಂದರಲ್ಲಿ, ಅಡಿಕೆ ತೋಟಗಳಲ್ಲಿ ನವಿಲುಗಳು ಕಂಡು ಬಂದವು. ಒಂದು ಮಿನಿ ಪತ್ರಕರ್ತೆಯ ಗೆಟಪ್ಪಿನಲ್ಲಿ ನಾನು ಮರುದಿವಸವೇ ನನ್ನ ಕೈಲಾದಷ್ಟು ಫೋಟೋ ಕ್ಲಿಕ್ಕಿಸಿ ಬಂದೆ.

Peacocks

ನವಿಲುಗಳು ಕಾಡು ಬಿಟ್ಟು ನಾಡಿನಲ್ಲಿ ಕಾಣ ಬರುವಂತಾದದ್ದು ಇತ್ತೀಚಿನ ವಿದ್ಯಮಾನ ಇರಬೇಕು. ಕೆಲವೊಮ್ಮೆ ನಮ್ಮ ಎಕ್ಸ್ ಪ್ರೆಸ್ ಬಸ್ಸು ಹೋಗುವಾಗ ಅವು ಅಡ್ಡಲಾಗಿ ಹಾರುತ್ತವೆ. ಅವುಗಳ ಉದ್ದನೆಯ ಪುಕ್ಕ ಕರೆಂಟ್ ವೈರಿಗೋ ಮತ್ತೊಂದಕ್ಕೋ ಸಿಕ್ಕರೆ ಎಂದೆನೆಸುತ್ತದೆ. ಇಷ್ಟಾಗಿ ನವಿಲುಗಳು ನಾವು ಅಂದುಕೊಂದಷ್ಟು ಪಾಪವೇನಲ್ಲವಂತೆ. ಕೆಲವೊಮ್ಮೆ ಕೊಕ್ಕಿನಿಂದ ಬಲವಾಗಿ ಕಚ್ಚುತ್ತವಂತೆ. ಇನ್ನು ನವಿಲುಗಳು ತಮ್ಮ ತರಕಾರಿ ಬೆಳೆಯನ್ನೆಲ್ಲ ಹಾಳುಗೆಡವುತ್ತವೆ ಎನ್ನುವುದು ರೈತರ ಅಳಲು. ‘ಇಕಾಲಜಿ’ ಎಂದೇನೇ ಹೇಳಲಿ ಬಡ ರೈತರಿಗೆ ಇದೊಂದು ಹೊಡೆತವೇ. ರಾಷ್ಟ್ರ ಪಕ್ಷಿಯಾದುದರಿಂದ ಅವನ್ನು ಕೊಲ್ಲುವಂತಿಲ್ಲ.

‘ಶಕುಂತ’ ಪಕ್ಷಿಗಳ ಜೊತೆ ಅಂದರೆ ನವಿಲುಗಳ ಜತೆಗೆ ಬೆಳೆದವಳಾದುದರಿಂದ ಶಕುಂತಲೆಗೆ ಆ ಹೆಸರು ಬಂತಂತೆ. ಹೇಳಿ ಕೇಳಿ ಆಕೆ ಸರ್ವದಮನ, ಅಂದರೆ ಭಾರತಕ್ಕೆ ಆ ಹೆಸರು ಬರಲು ಕಾರಣವಾದ ಭರತನ ತಾಯಿ, ಹೀಗಾಗಿ ಭರತ ಖಂಡದ ರಾಷ್ಟ್ರಪಕ್ಷಿ ನವಿಲು ಆಗಿರುವುದು ನ್ಯಾಯವೇ ಆಗಿದೆ. ಶಕುಂತಲೆ ನವಿಲಿನಿಂದ ನಡಿಗೆಯನ್ನು, ಕೋಗಿಲೆಯಿಂದ ಸ್ವರವನ್ನು, ಜಿಂಕೆಗಳಿಂದ ಚುರುಕುತನವನ್ನು ಕಲಿತಳೆಂದೇನೋ ಓದಿದ ನೆನಪು. ಕೋಗಿಲೆ ಸಮಾಧಾನ ಪಟ್ಟುಕೊಳ್ಳಲಿ ಎಂದೇನೋ ನವಿಲಿನ ಕೇಕೆ ಮಾತ್ರ ಕರ್ಕಶ.

Peacock

ನಗರದ ಫ಼್ಲಾಟ್ ಗಳಲ್ಲಿ ಜೀವಿಸುವ ನಮಗೆ ನವಿಲು, ಬೆಳ್ಳಕ್ಕಿಗಳನ್ನು ಕಂಡಾಗೆಲ್ಲ ಕಳೆದುಕೊಂಡ ಬಾಲ್ಯದ, ಮುಗ್ಧತೆಯ ನೆನಪು. ಈ ಧಾವಂತದ ಬದುಕಿನಲ್ಲಿ ಹಾಗೆ ಸುಮ್ಮನೆ ಹರಿಯುವ ನದಿಯನ್ನು, ಬೀಸುಗಾಳಿಯನ್ನು, ಗಾಳಿಗೆ ಸುಮ್ಮನೆ ತೊನೆದಾಡುವ ಭತ್ತದ ತೆನೆ ಹೊಮ್ಮಿಸುವ ಮಣ್ಣಿನ ಪರಿಮಳವನ್ನು, ತಿಳಿನೇರಳೆ ಬಣ್ಣದ ಹೆಸರಿರದ ಹೂವು ಅದರ ಪಾಡಿಗೆ ತಣ್ಣನೆ ನಗುತ್ತಿರುವುದು, ಎಳೆಯ ಬಾಳೆಯ ತಿಳಿ ಹಸಿರು, ಎಳೆಯ ಸೀಬೆ ಚಿಗುರಿನ ನಸುಕೆಂಪು, ಮುಳುಗುತ್ತಿರುವ ಸೂರ್ಯನ ಸುತ್ತ ಆವರಿಸುತ್ತಿರುವ ನಿಶೆಯ ನಿಧಾನ ಮೌನ, ಆಗಸ ಭೂಮಿಯನ್ನು ಸಂಧಿಸುವ ಕಡಲಿನ ನೀಲಿ… ಇವನ್ನೆಲ್ಲ ಅಸ್ವಾದಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಗಿದೆ.

 

– ಜಯಶ್ರೀ ಬಿ ಕದ್ರಿ

,

 

 

5 Responses

  1. Shruthi Sharma says:

    ನವಿಲಿನ ವರ್ಣನೆ ಓದಿ ಖುಷಿಯಾಯಿತು.. ತುಂಬಾ ಚೆನ್ನಾಗಿದೆ.. 🙂 ಕೆಲವು ವರ್ಷ ಹಿಂದೆ ಪರಿಚಿತರ ಮನೆಯ ನಾಯಿ ಹಾದಿ ತಪ್ಪಿ ಬಂದ ನವಿಲೊಂದನ್ನು ಕೆಣಕಲು ಹೋಗಿ ಅದರ ಕೊಕ್ಕ್ಕಿನಿಂದ ಕಣ್ಣಿಗೆ ಚುಚ್ಚಿಸಿಕೊಂಡು ಎರಡೂ ಕಣ್ಣುಗಳನ್ನು ಕಳೆದುಕೊಂಡಿತ್ತು..ಈ ಮೂಲಕ ನವಿಲು ಅದರದ್ದೇ ಆದ ರೀತಿಯಲ್ಲಿ ನಮಗೂ ಪಾಠ ಹೇಳಿತ್ತು.. 😉

  2. Savithri Ravindra Rao says:

    Nice article.. Navilayana!!!

  3. sangeetha raviraj says:

    ಲವಲವಿಕೆಯ ಬರಹ.. ಓದಲು ಖುಷಿ ಆಯಿತು . ನಮ್ಮ ಮನೆ ಹತ್ಹ್ರನು ಬರುತ್ತೆ ನವಿಲು kaadinda

  4. savithrisbhat says:

    ನವಿಲಿನ ಲೇಖನ ಚೆನ್ನಾಗಿದೆ .ಕೆಲವು ವರ್ಷ ಮೊದಲು ನಮ್ಮ ಮನೆ ಸಮೀಪ ವಿರುವ ಮಾವಿನ ತೋಪಿನಲ್ಲಿ ನವಿಲು ಇದ್ದರೆ ಎಷ್ಟು ಚೆನ್ನ ಎ೦ದು ನಾನು ಆಸೆ ಪಟ್ಟಿದ್ದೆ .ಆದರೆ ಈಗ ಆಗಾಗ ನಮ್ಮ ತೋಟದಲ್ಲಿ ನವಿಲು ಗಳು ಕಾಣ ಸಿಗುತ್ತವೆ .ಒಮ್ಮೊಮ್ಮೆ ಬಾಲ್ಕನಿಯಲ್ಲೂ ಮಾಡಿನ ಮೇಲೋ ಬ೦ದು ಕುಳಿತು ಕೊಳ್ಳುತ್ತವೆ .

  5. jayashree says:

    Thank you all for these nice responses.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: