ಚೆನ್ನೈಯ ಮೊಸಳೆ ಪಾರ್ಕ್
ಅದ್ಭುತವೆನ್ನುವ ಪರಿಯಲ್ಲಿ ನಮ್ಮೆದುರಿಗೆ ಬಿಚ್ಚಿಕೊಂಡಿತ್ತು ದೈತ್ಯ ಮೊಸಳೆಗಳ ಪಾರ್ಕ್. ಪ್ರಥಮ ನೋಟದಲ್ಲಿ ಹೆದರಿಕೆಯಿಂದ ಮೈ ಜುಂ ಎಂದಿತ್ತು.ಒಂದೆರಡಾ? 700 ದಾಟಿದ ಮೊಸಳೆಗಳು. ಅದೇ ರೀತಿ ಹಾವುಗಳು ಕೂಡಾ.ಪ್ರವೇಶದ್ವಾರದಿಂದ ಒಳಗೆ ಕಾಲಿಟ್ಟ ಹಾಗೆ ವಿವಿಧ ವಿಭಾಗಗಳಿವೆ. ನಿಶ್ಚಲವಾಗಿ ಬಿದ್ದುಕೊಂಡಿರುವ ರಾಕ್ಷಸ ಗಾತ್ರದ ಇವುಗಳ ದರ್ಶನವಾದಾಗ ನಾಭಿಯಾಳದಲ್ಲಿ ನಡುಕ ಹುಟ್ಟುತ್ತದೆ. ತರಗೆಲೆಗಳು ಬಿದ್ದು ಕೊಳೆತ ನೀರಿನಲ್ಲಿ ಇವುಗಳ ವಾಸ. ಮೇಲುಭಾಗದಲ್ಲಿ ಇಳಿಜಾರು . ಮರಳಿನ ಲ್ಲಿ ಕರಿ ಮೊಸಳೆಗಳು ವಿಶ್ರಾಂತ ಸುಖದಲ್ಲಿದ್ದವು. ಜೊತೆಗೆ ಧಾರಾಳವಾಗಿ ಮರದ ನೆರಳು. ಹಾದಿಯ ಇಕ್ಕೆಲದಲ್ಲೂ ಮಡುಗಳು; ಅದರ ತುಂಬ ಭೀಕರ ಗಾತ್ರದ ಮೊಸಳೆಗಳು.
ಹಾದಿಯಲ್ಲಿ ಅವನ್ನು ನೋಡನೋಡುತ್ತ ಉದ್ದಕ್ಕೆ ಹೋದಂತೆ ಹೊಟ್ಟೆಯಲ್ಲಿ ಸಂಕಟವಾಗುತ್ತಿತ್ತು. ದೈತ್ಯಗಾತ್ರ, ಅಸಾಮಾನ್ಯ ಬಲ,ಚಾಲಾಕಿತನ ಇವೆಲ್ಲ ಇರುವ ಈ ಪ್ರಾಣಿಗಳು ಪುಟ್ಟ ಮೆದುಳಿನ ಐದಾರಡಿ ಎತ್ತರದ ಮಾನವರ ಕೈಗೆ ಸಿಲುಕಿ ಇಲ್ಲಿ ಬಲು ಕಮ್ಮಿ ನೀರಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತದೆ. ಅದನ್ನು ಕಾಣುವಾಗ ಶಾರೀರಿಕ ಬಲಕ್ಕಿಂತ ಬುದ್ಧಿ ಬಲ ಮೇಲು ಅನ್ನುವುದು ಗೊತ್ತಾಗುತ್ತದೆ. ಎಸೆದ ಆಹಾರ ತಿಂದು ಇಡೀ ದಿನ ಸೋಮಾರಿಗಳಾಗಿ ಬಿದ್ದುಕೊಂಡಿರುವ ಇವು ಅತ್ಯಂತ ಅಪಾಯಕಾರಿ ಎಂದನ್ನಿಸುವುದೇ ಇಲ್ಲ.
ಮರಳಿನಲ್ಲಿ ಬಿಸಿಲು ಕಾಯಿಸುವ ಇವು ಫಕ್ಕನೆ ಅರಿವಿಗೆ ಬಾರದು .ಏಕೆ ಅಂದರೆ ಅವುಗಳ ಮೈ ಬಣ್ಣ ಮತ್ತು ಮರಳ ಬಣ್ಣಕ್ಕೆ ವ್ಯತ್ಯಾಸವಿಲ್ಲ. ಪುಟ್ಟಮರಿಗಳಿಂದ ಹಿಡಿದು ಅಜ್ಜ, ಅಜ್ಜಿ, ಸಂಬಂಧಿಕರೆಲ್ಲ ಆಲಸ್ಯಭರಿತವಾಗಿ ತೆಪ್ಪಗೆ ಅಡ್ಡಲಾಗಿತ್ತು. ಸುತ್ತಲೂ ಕಬ್ಬಿಣದ ಬೇಲಿ ಇದೆ ನಿಜ ,ಆದರೆ ಪ್ರವಾಸಿಗಳು ಆ ಕಟಕಟೆ ಹತ್ತಿ ನಿಂತು ಬಾಗುತ್ತಾರೆ. ಬಿದ್ದರೆ ಕಾಪಾಡಲು ಸಾಧ್ಯವೇ ಇಲ್ಲ. ವಿಪರೀತ ಉದ್ದ, ಗಾತ್ರದ ಅತಿಕ್ರೂರಿ ಪ್ರಾಣಿಗಳು ಬಿಟ್ಟಾವೇ? ಯಾಕೆ ಪ್ರವಾಸಿಗರು ಜೀವದ ಜೊತೆ ಆಟವಾಡುತ್ತರೋ ಅರಿಯೆ. ವಿಸ್ತಾರವಾದ ಮೊಸಳೆ ಪಾರ್ಕಲ್ಲಿ ಸುತ್ತಾಡಿ ಹೊರಬರುವಾಗ ವಾಂತಿ. ಅವರ ನಿಶ್ಚಲ ದೇಹ, ಬಣ್ಣ, ಅಲ್ಲಿ ಬಿದ್ದ ತರಗೆಲೆಗಳ ಕೊಳೆತ ವಾಸನೆ, ಮೊಸಳೆಗಳ ಶರೀರದ ದುರ್ವಾಸನೆ ಎಲ್ಲ ಒಟ್ಟಾಗಿ ಒಮ್ಮೆ ಹೊರಗೆ ಬಂದರೆ ಸಾಕು ಅನ್ನಿಸಿತ್ತು.
.
– ಕೃಷ್ಣವೇಣಿ ಕಿದೂರು
:O :O
“ಮಾನವರ ಕೈಗೆ ಸಿಲುಕಿ ಇಲ್ಲಿ ಬಲು ಕಮ್ಮಿ ನೀರಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತದೆ.”- ಈ ಸಾಲು ಅಕ್ಷರಶ: ನಿಜ. ಮೈಸೂರಿನ ಮೃಗಾಲಯಕ್ಕೆ ಹೋದಾಗ , ಅಲ್ಲಿ ಬಂಧನದಲ್ಲಿರುವ ಬಲಿಷ್ಠ ಪ್ರಾಣಿಗಳನ್ನು ಕಂಡಾಗ ನನಗೆ ಬೇಸರವಾಗಿತ್ತು.