ಪವಾಡ ಸಂಭವಿಸಬಹುದು..
ನೋವಿನ ಕೊಟ್ಟ ಕೊನೇಯ ಹನಿಯನ್ನೂ
ಅದು ಬಿಡದೇ ಕುಡಿದು ಬಂದಿತ್ತು.
ಹಾಗಂತ ಯಾರೂ ಕೇಳಲೂ ಇಲ್ಲ.ಅದೂ ಏನನ್ನೂ
ಬಾಯಿ ಬಡಕೊಂಡು ಹೇಳಲೂ ಇಲ್ಲ.
ತಿಳಿದವರಿಗೆ ಮಾತ್ರ ಗೊತ್ತಿತ್ತು.
ಹಿಂದೊಮ್ಮೆ ಅದು ಬೋಳು ಬರಡಾಗಿತ್ತು
ಆದರೂ ಸೂರ್ಯನಿಗೇ ಸೆಡ್ಡು ಹೊಡೆದು ಆಕಾಶಕ್ಕೇ
ಮುಖ ಮಾಡಿ ನಿಂತದ್ದು ನೋಡಿದರೆ ನಗು ತರಿಸುತ್ತಿತ್ತು.
ಕಾಯಿ ಮಾಗಿ ಹಣ್ಣಾಗುವ ಹೊತ್ತು.
ಈ ನಡುವಿನ ಮರೆವಿನ ತಾತ್ಸಾರದಲ್ಲಿ ಇಷ್ಟೊಂದು
ಸಂಭವಿಸಿದೆ.ಇದನ್ನು ಪವಾಡ ಎನ್ನಬಹುದೇ?
ಆದರ ಅನಾದರಗಳ ಅಳತೆಗೋಲಿಗಿಡದೆ ಸಾಗಿದರೆ
ಪವಾಡವೂ ಸಂಭವಿಸಬಹುದಲ್ಲ?
ಮತ್ತಷ್ಟೂ ಅದ್ಭುತವಾಗಿ…?!
ಈಗ ದಿಟ್ಟಿಸಿ ನೋಡಿದರೂ ನೋವಿನ ಕೊನೇ ಹನಿಯನ್ನೂ
ಹೀರಿ ಬಂದ ಯಾವ ಕುರುಹುಗಳೂ ಗೋಚರಿಸುತ್ತಿಲ್ಲ ಅಲ್ಲಿ.
ತಿರುಗಿ ನೋಡಿದರೆ ಬಂದು ಹೋದ ಒಂದು ಹಳೇ ಯಾತನೆಯನ್ನು
ಬಗಲಿಗೆ ಕಟ್ಟಿಕ್ಕೊಂಡು ತಿರುಗುತ್ತಿದ್ದೇವೆ ಇನ್ನೂ ಹೊಸತೆಂಬಂತೆ
ನಾವು ಇಲ್ಲಿ.
– ಸ್ಮಿತಾ ಅಮೃತರಾಜ್, ಸಂಪಾಜೆ
ಅರ್ಥಪೂರ್ಣ ಬರಹ.
ಅಭಿನಂದನೆಗಳು 🙂