ಪುಸ್ತಕ ನೋಟ : ತ.ರಾ.ಸು ಅವರ ‘ಶ್ರೀ ಚಕ್ರೇಶ್ವರಿ’
ಶ್ರಾವಣ ಮಾಸ ಆಗಮನದ ನಿರೀಕ್ಷಣೆಯಲ್ಲಿರುವ ನನಗೆ ಸಾಹಿತ್ಯಾಭಿರುಚಿ ಇರುವ ನನ್ನ ಆಪ್ತ ಸ್ನೇಹಿತೆಯೊಬ್ಬಳು ವಾರದ ರಜೆಯನ್ನು ಸದ್ವಿನಿಯೋಗ ಮಾಡಿಕೋ ಎಂದು ಒಂದು ಪುಸ್ತಕವನ್ನು ಎರವಲು ಕೊಟ್ಟಳು. ಸಂಪ್ರದಾಯವೇ ಆಗಿಹೋಗಿರುವ ವಾರಕ್ಕೊಂದು ಪುಸ್ತಕದ ಅಧ್ಯಯನ ವೆಂಬಂತೆ ನಾನು ಆ ಪುಸ್ತಕವನ್ನುಕಣ್ಣಿಗೆ ಒತ್ತಿ ಓದಲು ಪ್ರಾರಂಭಿಸಿದೆ . ಪುಸ್ತಕವೋ ಎಂತಹದು!
ಹಿರಿಯರೊಬ್ಬರು ಹೇಳಿದ, ಶ್ರೀ ಚಕ್ರೋಪಾಸಕರ ಜೀವನದ ಘಟನೆಯನ್ನು ಅವಲಂಬಿಸಿ ಹೆಣೆದ ಕಾದಂಬರಿ ತ.ರಾ.ಸು.ರವರ ಅಖರ್ವ ಕೃತಿ “ಶ್ರೀ ಚಕ್ರೇಶ್ವರಿ”. ಪುಸ್ತಕದ ಶ್ರೀರ್ಷಿಕೆಯೇ ನನ್ನ ಹೃದಯದ ಉಸಿರಾಟದ ಗತಿಯನ್ನು ಬುಡಮೇಲು ಮಾಡಿತು. ಮಾನವ ಮಂಗಳ ಗ್ರಹಕ್ಕೆ ಹೆಜ್ಜೆ ಇಟ್ಟ ಈ ಸಂದರ್ಭದಲ್ಲಿ ಈ ಕಾದಂಬರಿಯ ಕಥಾ ವಸ್ತು ಎಷ್ಟರ ಮಟ್ಟಿಗೆ ನನ್ನ ಮನಸ್ಸಿನಲ್ಲಿ ನಿಲ್ಲುತ್ತದೆ ಎಂಬ ಜಿಜ್ಞಾಸೆಯೊಂದಿಗೆ ನನ್ನ ಓದು ಪ್ರಾರಂಭವಾಯಿತು. ಆಧುನಿಕ ವಿಜ್ಞಾನದಲ್ಲಿ ನಂಬಿಕೆಯುಳ್ಳ ನನಗೆ ಭಾರತೀಯ ಧಾರ್ಮಿಕ ವಿಚಾರಗಳಲ್ಲಿ ಕುರುಡು ನಂಬಿಕೆ ಇಲ್ಲ. ಹಾಗೆಂದು, ನಾನೇನು ಸಂಪೂರ್ಣ ನಾಸ್ತಿಕಳಲ್ಲ. ಈ ಕಾದಂಬರಿಯ ಮೂಲ ಕಥಾ ವಸ್ತುವಾದ ಮಾತೃ ದೇವತೋಪಾಸನೆಯ ಬಗ್ಗೆ ನನಗೆ ಕುತೂಹಲವಿತ್ತು. ಧಾರ್ಮಿಕ ವಿಚಾರಗಳು ಅಸತ್ಯ-ವೈಜ್ಞಾನಿಕ ವಿಚಾರಗಳು ಪರಮ ಸತ್ಯವೆಂಬ ವರ್ಗಕ್ಕೆ ಸೇರಿದವಳಂತೂ ನಾನಲ್ಲ. ನನಗಾದ ಅನುಭವಗಳು ಇದನ್ನು ಕಲಿಸಿವೆ. ಒಮ್ಮೊಮ್ಮೆ, ಈ ಭಾವವು ನನ್ನನ್ನು ದ್ವಂದ್ವ ಚಿತ್ತಕ್ಕೆ ಎಡೆಮಾಡಿ ಭಾದಿಸುವುದುಂಟು. ಒಟ್ಟಿನಲ್ಲಿ, ಸತ್ಯಶೋಧನೆ ಮಾಡುವಷ್ಟು ಶಕ್ತಿ ನನ್ನಲ್ಲಿಲ್ಲ ಎಂದು, ಏನಿದ್ದರೂ, ತುಲನಾತ್ಮಕವಾಗಿ ನಿರ್ಧಾರಕ್ಕೆ ಬರುವವಳು ನಾನೆಂದು ಹೇಳಬಲ್ಲೆನಷ್ಟೇ.
ರಾಯಲಸೀಮೆಯ ಬಿಸಿಗಾಳಿಯ ಅನುಭವವಿರದ ಲೇಖಕರು ಒಮ್ಮೆ ಆಪ್ತ ಗೆಳೆಯ ಸಾಂಬಮೂರ್ತಿಯ ಒತ್ತಾಯಕ್ಕೆ ಮಣಿದು ಅನಂತಪುರ ಜಿಲ್ಲೆಯ ಚಕ್ರಪಲ್ಲಿಗೆ ಹೋಗಲು ನಿರ್ಧರಿಸುತ್ತಾರೆ. ಇದಕ್ಕೆ ಬಲವಾದ ಕಾರಣ ಸಾಂಬಾಮೂರ್ತಿ ತನ್ನ ಹುಟ್ಟೂರಿನ ಬಗ್ಗೆ ಕೊಟ್ಟ ವ್ಯಾಖ್ಯಾನ.ಚಕ್ರಪಲ್ಲಿ, ವಿಜಯನಗರ ಕಾಲದ ಹಿರಿಮೆಯನ್ನು ಉಳಿಸಿಕೊಂಡಿದೆ. ಸಾಕ್ಷಾತ್ ವಿದ್ಯಾರಣ್ಯರಿಗೆ ಭುವನೇಶ್ವರಿಯ ಸಾಕ್ಷಾತ್ಕಾರವಾದ ಪುಣ್ಯಭೂಮಿ. ಅವರೇ ಪ್ರತಿಷ್ಠಾಪಿಸಿದ ಶ್ರೀಚಕ್ರ ಅಲ್ಲದೆ, ಅವರು ಅಮ್ಮನವರ ಅನುಗ್ರಹಕ್ಕಾಗಿ ದಿನವೂ ಸ್ನಾನ ಮಾಡುತ್ತಿದ್ದ ‘ಅಮ್ಮವಾರಿ ಚರುವು’ ಇವೆ. ಇದನ್ನು ನಾನು ಸಂಶೋಧನೆ ಮಾಡಿ ನೋಡಿದ್ದೇನೆ, ಇದಕ್ಕೆ ಆಧಾರವಾಗಿ ಶಾಸನಗಳಿವೆ ಎಂದೆಲ್ಲಾ ಅರುಹಿದ ಮೇಲೆ ಕರ್ನಾಟಕದ ಗತ ಇತಿಹಾಸವೆಂದರೆ ಪಂಚಪ್ರಾಣವಿಟ್ಟುಕೊಂಡ ಲೇಖಕರು ಹೋಗಿ ಅದನ್ನೆಲ್ಲಾ ಜತನ ಮಾಡಿಕೊಂಡೇ ಬರಬೇಕೆಂದು ಹೇಳುವ ಸಂಧರ್ಭ ಯಾವ ಓದುಗನಲ್ಲೂ ಕನ್ನಡತನ, ಇತಿಹಾಸ ವೈಭವ ಜನ್ಯವಾಗುವುದು ಸತ್ಯ. ಇಲ್ಲಿ ಬರಹಗಾರರ ಕನ್ನಡ ಪ್ರೇಮ, ಇತಿಹಾಸದ ಒಲವು, ಹುಟ್ಟೂರಿನ ಬಗ್ಗೆ ಅಭಿಮಾನ ವೇದ್ಯವಾಗುತ್ತದೆ. ಈ ಭಾವನೆ ಸಮಸ್ತ ನಾಡಿನ ಜನತೆಗೆ ಬಂದಲ್ಲಿ ದೇಶ ಸಂಪದ್ಭರಿತವಾಗುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಇತಿಹಾಸದ ಬಗ್ಗೆ ವಿಪರೀತ ಒಲವು ಇರುವ ಲೇಖಕರಿಗೆ ಚಕ್ರಪಲ್ಲಿಯ ಬಿಸಿಲ ಬೇಗೆ ಹೈರಾಣು ಮಾಡಿದ ಬಗ್ಗೆಯ ವಿವರಣೆ ಓದುಗನನ್ನು ನಗೆಗಡಲಿನಲ್ಲಿ ಮೀಯಿಸುತ್ತದೆ. ಬಿಸಿಲಿಗಿಂತ ಭೀಕರ ಭಾಷಣ ಮಾಡಿದ ಸಾಂಬಾಮೂರ್ತಿಯ ಮಾತಿಗೆ ಶರಣಾದ ಲೇಖಕರು “ಬಿಸಿಲೊ, ಬೆಂಕಿನೊ, ಭೂತವೋ-ಬಂದ್ದದ್ದೆಲ್ಲ ಅನುಭವಿಸಿ, ನೋಡಬೇಕಾದುದನೆಲ್ಲಾ ನೋಡ್ತೀನಿ ಎಂಬ ನಿರ್ಧಾರಕ್ಕೆ ಬರುವ ಸನ್ನಿವೇಶ ತುಂಬಾ ಸೊಗಸಾಗಿ ಮೂಡಿದೆ.
ಆ ಕುದಿಬೇಗೆಯಲ್ಲಿ ನಿದ್ರೆ ಬಾರದೆ ಲೇಖಕರು ಗೆಳೆಯನ ನಿದ್ರೆಗೆ ಲೋಪಬಾರದಂತೆ ಚಕ್ರಪಲ್ಲಿಯ ಇತ್ತ ಹಳ್ಳಿಯು ಅಲ್ಲದ, ಅತ್ತ ಪಟ್ಟಣವೂ ಅಲ್ಲದ ಊರಿನ ದರ್ಶನ ಮಾಡಲೊಸುಗ ಮದ್ಯರಾತ್ರಿಯಲ್ಲೇ ಹೊರಟ ಸಂಧರ್ಭದ ಸನ್ನಿವೇಶ ತುಂಬಾ ವರ್ಣನೀಯವಾಗಿ ಮೂಡಿದೆ. ಹುಣ್ಣಿಮೆ ಚಂದ್ರಕಾಂತಿ, ತೆಳು ತಂಗಾಳಿ, ಮುಕ್ಕಾಲು ಜನ ಬೀದಿಯಲ್ಲೇ ಮಲಗಿರುವ ಜನ-ಈ ವಿಹಾರವನ್ನು ಚಂದ್ರಿಕಾವಿಹಾರವೆಂದು ಬಣ್ಣಿಸಿರುವ ಕವಿ ಹೃದಯ ನನ್ನಲ್ಲೂ ಮಾದಕತೆಯನ್ನು ಮೂಡಿಸಿತು. ಈ ಮಾರ್ದವತೆಯನ್ನು ಸವಿಯುತ್ತಾ ಸಾಗಿದ ಲೇಖಕರಿಗೆ ಮಲ್ಲಿಗೆಯ ನರುಗಂಪು, ಮಧುರ ಪರಿಮಳ ಗ್ರಾಹ್ಯವಾಗತೊಡಗಿ ಅದನ್ನು ಆಸ್ವಾದಿಸಿ ಯಾವುದೋ ಸ್ವಪ್ನಲೋಕಕ್ಕೆ ಪ್ರವೇಶಿಸಿದ ಅನುಭವದ ಒಕ್ಕಣೆ ನನ್ನನ್ನು ಆಕರ್ಷಿಸಿತು. ಈ ಮ್ಲಾನ ಮೌನದ ನಡುವೆ ಮಧ್ಯ ಗಂಭೀರ ಧ್ವನಿಯಲ್ಲಿ ಅಸ್ಪಷ್ಟ ಮಂತ್ರ, ನಂತರ ಗೋಟುವಾದ್ಯ ಹೋಲುವಂತ ಗಂಡಸು ಧ್ವನಿಯಲ್ಲಿ ಬರುತ್ತಿದ್ದ ಲಲಿತಾಸಹಸ್ರನಾಮದ ವಾಚನ, ನಡು ರಾತ್ರಿಯ ನೀರವತೆಯನ್ನೇ ವೀಣೆಯ ಪಕ್ಕವಾದ್ಯವನ್ನಾಗಿ ಮಾಡಿಕೊಂಡು ಹೊರಸೂಸುತ್ತಿದ್ದ ನಾದ ಮಾಧುರ್ಯಕ್ಕೆ ಕಂಪನ ಮೂಡಿಸದೆ ಇರದು. ಬೆಳದಿಂಗಳು-ಮಲ್ಲಿಗೆಯ ಪರಿಮಳ-ಮಧುರ ನಾದಸ್ವರದ ಮಧ್ಯೆ ಪಂಜರದಲ್ಲಿ ಬಂದಿಯಾಗಿದ್ದ ಲೇಖಕರಿಗೆ ಒಮ್ಮೆಲೇ ಸಿಡಿಲಿನಿಂದ ಸೀಳಿದ ಹಾಗೆ ಹೆಣ್ಣು ಧ್ವನಿ ತಾರಸ್ವರದಲ್ಲಿ ಚಿಟಾರನೆ ಚೀರಿದ ಸದ್ದು ಕೇಳಿ ನರನರವೂ ಅಲಗಿದಂತೆ ಭಾಸವಾದದ್ದನ್ನು ವಿವರಿಸಿದ ಬಗೆ ಓದುಗನಲ್ಲಿ ಭಯ ಹುಟ್ಟಿಸದೆ ಇರದು.
ಎದೆಯನ್ನು ಹತ್ತಿ ತುಳಿಯುತ್ತಿದ್ದ ಭಯ, ಒಂಟಿತನದ ಭೀತಿಗ್ರಸ್ತ ಅನುಭವವದ ಸುಳಿಯನ್ನು ಪತ್ತೆ ಹಚ್ಚಿದ ಸಾಂಬಾಮೂರ್ತಿಯ ತಂದೆಗೆ ಎಲ್ಲವೂ ಸ್ಪಷ್ಟವಾಗಿ ಅರ್ಥವಾಯಿತು. ಅವರ ಪಾಲಿನ ದೇವರೇ ಲೇಖಕರನ್ನು ಕಾಪಾಡಿದ ಬಗ್ಗೆ ಸಮಾಧಾನ ಪಟ್ಟು,ಇನ್ನೇನೂ ಭಯವಿಲ್ಲ, ಹಾಯಾಗಿ ನಿದ್ರೆ ಮಾಡು.ಹುಣ್ಣಿಮೆಯ ಹಿಂದಿನ ದಿನದ ಕೌತುಕತೆಯ ಸೂಕ್ಷ್ಮತೆಯನ್ನು ಉಲ್ಲೇ ಖಿಸಿದ ಬಗೆ ನನ್ನಲ್ಲೂ ಕುತೂಹಲ ಕೆರಳಿತು. ನಿದ್ರೆಯೆಂಬ ಕುದುರೆಗೆ ಕುತೂಹಲವೆಂಬ ಕಡಿವಾಣಕ್ಕೆ ಸಿಲುಕಿದ ಬರಹಗಾರರ ಸ್ಥಿತಿಯೇ ನನಗೂ ಆಗಿತ್ತು. ಮರುದಿನ, ಸಾಂಬಾಮೂರ್ತಿಯ ತಂದೆ ಶೇಷಶಾಸ್ತ್ರೀಯ ಅಣತಿಯಂತೆ ಊರಿನ ವಿಶೇಷ ಸ್ಥಳಗಳಾದ ಶ್ರೀ ಪರ್ವತ ಎಂಬ ಹೆಸರಿನ ಕಲ್ಲಿನ ಮೇಲೆ ಕಲ್ಲು ಪೇರಿಸಿದ ಸಣ್ಣ ಬೆಟ್ಟ, ಮೂರು ಕಡೆ ಹುಟ್ಟು ಬಂಡೆಗಳು, ಒಂದು ಕಡೆ ಮಾತ್ರ ಇಳಿಯುವ ಮೆಟ್ಟಿಲುಗಳು ಇದ್ದ ಒಂದು ದೇವಿಯ ಕೊಳದ ವಿಶೇಷತೆ, ಸನಿಹದ ದೇವಾಲಯದ ಮಹಿಮೆಯ ವಿವರಣೆ ಎಂತಹವರನ್ನು ಮೂಕವಿಸ್ಮಿತ ಗೊಳಿಸದೆ ಇರದು. ತಾಯಿ ತ್ರಿಪುರಸುಂದರಿದೇವಿಯ ಸೌಂದರ್ಯ ವರ್ಣನೆ ಕಲಾ ಕುಂಚಕ್ಕೆ ಒಂದು ಸವಾಲು. ಆ ದೇವಿಯ ಇತಿಹಾಸವೇ ಸೋಜಿಗ.
ವಿದ್ಯಾರಣ್ಯರು ತಾಯಿ ರಾಜರಾಜೇಶ್ವರಿಯ ಅನುಗ್ರಹ ಪಡೆಯಲು ತಪಸ್ಸು ಮಾಡಿ, ತಾಯಿಯ ಆಣತಿಯಂತೆ ಈ ಸ್ಥಳವನ್ನು ಹುಡುಕಿಕೊಂಡು, ಕ್ರಷ್ಣಶಿಲೆಯನ್ನೇ ಪೂಜೆ ಮಾಡಿ, ರಾಜ್ಯ ಸ್ಥಾಪನ ಸಾಮರ್ಥ್ಯಾದ ಅನುಗ್ರಹ ಪಡೆದು, ಭರತ ಭೂಮಿಯ ಸಕಲರಿಗೂ ಅನುಗ್ರಹವಾಗಲೆಂದು ನಿರ್ಮಿಸಿದ ದೇವಾಲಯದ ಕಥೆ ತುಂಬಾ ಮಾರ್ಮಿಕವಾಗಿ ಮೂಡಿದೆ. ಕೊಳದ ಸಮೀಪ ನಿರ್ಮಿಸಿದ ವಿದ್ಯಾಶಂಕರ ಶಾಸ್ತ್ರಿಗಳ ಸಮಾಧಿಯ ಪರಿಚಯ, ಬರಹಗಾರನ ಮೇಧಾವಿತನ ಕಾಣುತ್ತದೆ.
ಶ್ರೀಚಕ್ರದ ಸರ್ಪಗಾವಲು ಇರುವ ಶಂಕರ ಶಾಸ್ತ್ರಿಗಳ ಮನೆಯ ವಿವರಣೆ, ಶಾಸ್ತ್ರಿಗಳು ಭೂಸ್ತಾಪನೆ ಮಾಡಿದ ಶ್ರೀಚಕ್ರದ ಆವರಣ, ಅದನ್ನು ಹಾರೆಯಿಂದ ಹೊಡೆದು ಮಾಡಿದ ಸಣ್ಣಗುಳಿ, ಮನೆಯ ಅವಶೇಷಗಳ ಚಿತ್ರಣ-ನಿಜಕ್ಕೂ ನನ್ನನ್ನು ಅಯಸ್ಕಅಂತದಂತೆ ಸೆಳೆಯಿತು.ಈ ಸ್ವಾರಸ್ಯಮಯವಾದ ಕಥೆಯನ್ನು ಭಾರವಾದ ಧ್ವನಿಯಲ್ಲಿ ಶೇಷಶಾಸ್ತ್ರಿಗಳು ಹೇಳಲಾರಂಭಿಸಿದ ರೀತಿ ಅವರ್ಣನೀಯ. ಕೊಂಡಪಳ್ಳಿ ಅಥವಾ ಬೆಟ್ಟದ ಹಳ್ಳಿಯ ಪರಿಚಯ, ಶಂಕರಶಾಸ್ತ್ರಿಗಳ ಕಾಲದಿಂದ ಚಕ್ರವಾರಿಪಲ್ಲಿಯಾದ ಇತಿಹಾಸ ಓದುಗನಲ್ಲಿ ಮೈನವಿರೇಳುವಂತೆ ಮಾಡುತ್ತದೆ.ಅವರ ಪೂರ್ವಿಕರು ಪಾಳೆಯಗಾರರ ಆಸ್ಥಾನದಲ್ಲಿ ಪುರೋಹಿತರು. ಅವರಿಗೂ, ದೇವಸ್ಥಾನಕ್ಕೂ ನೇರ ಸಂಬಂಧ ವಿರದಿದ್ದರೂ ಶುಕ್ರವಾರ, ಮಂಗಳವಾರ, ವಸಂತನವರಾತ್ರಿ, ಶರನ್ನವರಾತ್ರಿ, ಲಲಿತಪಂಚಮಿ, ಪೂರ್ಣಿಮೆ, ಅಮಾವಾಸ್ಯೆಯಂದು ವಿಶೇಷ ಸೇವೆ ಮಾಡುತ್ತ ಬಂದ ಬಗೆ, ದೇವಿಯ ಸೇವೆಗೆ ಬರುತ್ತಿದ್ದ ಸಾಧು-ಸಂತರು ಜನರ ಕಣ್ಣಿಗೆ ಬೀಳದೆ ಜಪತಪಗಳಲ್ಲಿ ನಿರತರಾಗಿರುವುದು, ಶಂಕರಶಾಸ್ತ್ರಿಗಳ ತಂದೆ ವಿರೂಪಾಕ್ಷಶಾಸ್ತ್ರಿಗಳ ಕಾಲದಲ್ಲಿ ಬಂದ ಒಬ್ಬ ಸಾಧು ಇತರರಂತೆ ಸಾಮಾನ್ಯನಾಗಿರದೆ ವಿಶೇಷ ಸಿದ್ಧಿಗಳು ಅವನಿಗೆ ಸಿದ್ಧಿಸಿವೆ ಎಂಬ ಮಾತು ಜನಜನಿತವಾಯಿತು. ಅವರ ಸೇವೆಯಲ್ಲಿ ವಿರುಪಾಕ್ಷಶಾಸ್ತ್ರಿಗಳೂ ತೊಡಗಿದರು. ಇಲ್ಲಿ ಅಂದಿನ ಕಾಲಘಟ್ಟದ ಸಾಧುಗಳನ್ನು ನಡೆದಾಡುವ ದೇವರೆಂದು ನಂಬಿರುವ ಸಂಗತಿ ತಿಳಿಸಿದ ರೀತಿ ನನ್ನನ್ನು ಭಕ್ತಿಕಡಲಿನಲ್ಲಿ ಮಿಂದ ಹಾಗೆ ಭಾಸವಾಯಿತು.ಧರ್ಮದ ಕಾಲವಾಗಿತ್ತು, ಸುಭಿಕ್ಷದ ಕಾಲವಾಗಿತ್ತು ಎಂದು ನೆನಪಿಸಿದ ಲೇಖಕರಿಗೆ ನನ್ನ ಪ್ರಣಾಮಗಳು. ನಮ್ಮದೂ ಕೃಪಣದ ಕಾಲವಾಗಿದೆ ಎಂದು ಹೇಳುವ ಮನಸು ತುಂಬಾ ವಿಷದ.
ಸಾಧುವಿನ ವಿಶೇಷ ವಿದ್ಯೆಯಾದ ಶ್ರೀಚಕ್ರಪೂಜೆಯನ್ನು ತನಗೆ ದಯಪಾಲಿಸಬೇಕೆಂಬ ಕೋರಿಕೆಯನ್ನು ಸಾಧುವಲ್ಲಿ ವಿನಂತಿಸಲು ಅಳುಕಾಗಿ ಅವರ ನಾಲಿಗೆಯನ್ನು ತಡೆಹಿಡಿದಿತ್ತು. ತಾವು ಲಲಿತಾಮಂತ್ರೋಪದೇಶಕ್ಕೆಅರ್ಹರೇ, ಅದಕ್ಕೆ ತನ್ನಲ್ಲಿ ನಿಷ್ಠೆ, ಶಕ್ತಿ ಇದೆಯೇ ಎಂದು ಹಲವಾರು ಬಾರಿ ಪರೀಕ್ಷಿಸಿಕೊಂಡ ಬಗೆ.ಮುಖ ಸಾಮುದ್ರಿಕೆವಿದ್ಯೆಯಿಂದ ಅರಿತ ಸಾಧು ಊರನ್ನು ಬಿಟ್ಟು ಹೋಗುವ ನಿರ್ಧಾರ ಮಾಡಿದ್ದು, ಇದರಿಂದ ವಿಚಲಿನಾದ ವಿರೂಪಾಕ್ಷಶಾಸ್ತ್ರಿ ತನ್ನ ಬೇಡಿಕೆಯನ್ನು ಸಾಧುವಿನಲ್ಲಿ ಅರಹಿದಾಗ, ಸಾಧು ತಾಯಿಯ ಅನುಗ್ರಹದಿಂದ ಆ ವಿದ್ಯೆ ಒದಗಿ ಬರುತ್ತದೆ, ಆದರೆ ನಿಮ್ಮ ಕಾಲಕ್ಕಲ್ಲ, ನಿಮ್ಮ ಮಗನ ಕಾಲಕ್ಕೆ, ಹೇಗೆ ಬರುತ್ತಾಳೆ, ಏಕೆ ಬರುತ್ತಾಳೆ, ಎಲ್ಲ ಆಕೆಯ ಲೀಲೆ ಎಂದು ಕುಂಕುಮ ಪ್ರಸಾದ ಕೊಟ್ಟು ನಿರ್ಗಮಿಸುವ ಸನ್ನಿವೇಶ ಮನಕಲಕುವಂತಿದೆ. ಅದಕ್ಕೆ ಗುರುಗಳ ಅವಶ್ಯಕತೆ ಇದೆಯೆಂದು ಹೇಳಿ ತೆರಳಿದ ನಂತರ ಸಾಧುವಿನ ಮಾತಿನಿಂದ ಸಮಾಧಾನಗೊಂಡ ವಿರೂಪಾಕ್ಷಶಾಸ್ತ್ರಿಗಳ ಮನಸ್ಥಿತಿಯನ್ನು ಬಿಂಬಿಸಿದ ರೀತಿ ಬಹಳ ಸೊಗಸಾಗಿದೆ. ಎಲ್ಲಾ ವ್ಯಾಮೋಹಗಳ ಹಣೆಬರಹವೂ ಅಷ್ಟೇ, ಎಂದ್ದಿದ್ದರೂ ಕಣ್ಣೀರಾಗಿ ಕರಗಬೇಕಷ್ಠೆ ಎಂದು, ತರ್ಕ ಏಣಿ ಇದ್ದ ಹಾಗೆ ಎಂದು ಸಮೀಕರಿಸುವ ಲೇಖಕರ ಜೀವನ ದರ್ಶನ ಅಮೋಘ.
ಸಮಾಜವಾದದ ಯುಗದಲ್ಲಿ “ಕೂಡಿಕೊಂಡು ದುಡಿ-ಹಂಚಿಕೊಂಡು ತಿನ್ನು “ಎನ್ನುವುದು ವಾಸ್ತವದಲ್ಲಿ ರೆಕ್ಕೆ ಪುಕ್ಕವಿಲ್ಲದ ಗರುಡದಂತೆ ಎಂದು ಈಗಿನ ವಸ್ತುಸ್ಥಿತಿಯನ್ನು ನೆನಪಿಸುವ ಲೇಖಕರ ಕಾಳಜಿ ಹಿರಿದಾಗಿ ಕಾಣುತ್ತದೆ. ಅತೃಪ್ತಿಗಿಂತ ಧಾರುಣವಾದ ಬಡತನ ಯಾವುದಿದೆ?ಎಂದು ಮರುಗುವ ಮನಸ್ಸು ಎಷ್ಟು ಜನರಿಗೆ ಇದೆ? ಈ ಕಕ್ಕುಲಾತಿ ನನ್ನನ್ನು ಕಾಡುವಂತಿದೆ. ದೇವರು, ಧರ್ಮ, ಪ್ರೀತಿ-ವಿಶ್ವಾಸ ಎಂದು ತಲೆಬಾಗುತ್ತಿದ್ದ ಕಾಲದಲ್ಲಿ ಬಂದಷ್ಟೇ ಸಾಕು ಎಂಬ ತೃಪ್ತಿಯ ಅಕ್ಷಯಪಾತ್ರೆಯಂತೆ ಇದ್ದ ವಿರೂಪಾಕ್ಷ ಶಾಸ್ತ್ರಿಗಳದ್ದು ಕುಬೇರ ಸಂಸಾರವೇ ಎಂದು ಹೇಳುವಲ್ಲಿ ಲೇಖಕರ ವಿಶ್ವಾಸ ವ್ಯಕ್ತವಾಗುತ್ತದೆ. ಪೂವಪಲ್ಲಿ ರಾಮರೆಡ್ಡಿಯವರ ಸ್ನೇಹದ ವ್ಯಾಪ್ತಿ ನಿಜಕ್ಕೂ ಶ್ಲಾಘನೀಯ. ವಿಶ್ವಾಸವೆಂಬ ಮಾವಿನ ಮರಕ್ಕೆ, ಸ್ನೇಹ-ಸಲಿಗೆಯ ಮಲ್ಲಿಗೆ ಬಳ್ಳಿ-ಆಹಾ!ಎಂತಹ ಹೋಲಿಕೆ. ನಿಜಕ್ಕೂ ಮನಸೋತೆ ನಾನು ಈ ಒಕ್ಕಣೆಯ ಬರಹಕ್ಕೆ. ಪಂಚಕಲ್ಯಾಣಿ ಹಸುವಿನ ವರ್ಣನೆ ಬಲು ಸೊಗಸು.
ಶಾಸ್ತ್ರಾನುಸಾರವಾಗಿ ತಮ್ಮ ಮಗ ಶಂಕರಶಾಸ್ತ್ರೀಗೆ ಮುಂಜಿ, ಗಾಯತ್ರಿ ಉಪದೇಶಮಾಡಿದ ವಿರೂಪಾಕ್ಷಶಾಸ್ತ್ರೀಗೆ ಮಗನ ಶಾಸ್ತ್ರಜ್ಞಾನದ ಬಗ್ಗೆ ಹೆಮ್ಮೆ. ಅಮರಕೋಶದ ಬಾಯಿಪಾಠದಿಂದ ಆರಂಭವಾಗಿ ಪೌರೋಹಿತ್ಯ, ಜ್ಯೋತಿಷ್ಯಶಾಸ್ತ್ರದಲ್ಲಿ ನೈಪುಣ್ಯತೆ ಹೊಂದಿದ ಶಂಕರಶಾಸ್ತ್ರಿಗಳ ನಾಲಗೆ ‘ಓಂಕಾರ ಘಂಟೆ”ಇದ್ದ ಹಾಗೆ. ಗುಣದಲ್ಲಿ ಅನ್ನಪೂರ್ಣೆ-ರೂಪದಲ್ಲಿ ಸ್ವರ್ಣಗೌರಿಯಾಗಿದ್ದ ಅನ್ನಪೂರ್ಣೆ ಶಂಕರಶಾಸ್ತ್ರಿಗಳ ಜೀವನದಲ್ಲಿ ಒಂದು ಅದ್ಭುತ ಬಿಂದು. ಮಗನ ಕಾಲಕ್ಕೆ ದೇವಿ ನಿಮ್ಮ ಮನೆಗೆ ಬರುತ್ತಾಳೆ ಎಂದು ಸಾಧು ಹೇಳಿದ್ದ ದಿನದಿಂದ ವಿರುಪಾಕ್ಷಶಾಸ್ತ್ರಿಗಳು ಮಗನಿಗೆ ಲಲಿತಾಂಬಿಕೆಯ ಸಮಗ್ರ ಜ್ಞಾನ ಕೊಡಲು ಯತ್ನಿಸುವ ಚಿತ್ರಣ ತುಂಬಾ ಕಾಡುತ್ತದೆ. ಷೋಡಶಾಕ್ಷರಿ ಮಂತ್ರೋಪದೇಶ ಕೊಡುವ ಅರ್ಹತೆ ಅವರಿಗೆ ಇರಲಿಲ್ಲವಾದ್ದರಿಂದ , ಅದರ ಬಗ್ಗೆ ಜ್ಞಾನವನ್ನು ಕೊಡುವ ದೃಷ್ಟಿಯಿಂದ ಮಗನಿಗೆ “ದೇವ ಭಾಗವತ”ವನ್ನು ತರಲು ಪ್ರೇರೇಪಿಸಿದ, ನವರಾತ್ರಿಯ ಸರಸ್ವತಿ ಪೂಜೆಯ ದಿನದಂದೇ ಪಾರಾಯಣ ಮಾಡತಕ್ಕ ಪವಿತ್ರ ಗ್ರಂಥವಾದ ಇದನ್ನು ಕಣ್ಣಿಗೊತ್ತಿ , ಪ್ರಣಾಮ ಸಲ್ಲಿಸಿ, ತಾಯಿ, ಅಪ್ಪಣೆ ಕೊಡು ಎಂದು ಬೇಡುವ ಸಂಧರ್ಭ, ವಿಗ್ರಹದ ಬಲ ಭಾಗದಿಂದ ಕೆಳಗೆ ಉರುಳಿದ ಹೂವು, ಅದನ್ನು ಕಂಡು ಆನಂದಾತಿರೇಕದಿಂದ ಮೈ ಮರೆತು “ಶಂಕರಾ, ನೀನಿನ್ನು ಉದ್ಧಾರವಾದೆ, ತಾಯಿ ನಿನ್ನನ್ನು ಅನುಗ್ರಹಿಸಿದಳು” ಎನ್ನುವ ತಂದೆ, ಇತ್ತ ಮಗನ ಮೈಯಲ್ಲಿ ಮಿಂಚು ಸಂಚರಿಸಿದಂತಾಗುವ ಸನ್ನಿವೇಶದ ವರ್ಣನೆ ತುಂಬಾ ಚೆನ್ನಾಗಿದೆ. ಲಲಿತಾ ತ್ರಿಪುರಸುಂದರಿಯ ಉಪಾಸನೆ, ಉಪಾಸಕರ ಬಗ್ಗೆ ತಿಳಿಯದ ಎಷ್ಟೋ ವಿಷಯಗಳು ನನ್ನ ಅರಿವಿಗೆ ಬಂತು.
ತಾಯಿ ತಾನು ಒಲಿದವರಿಗೆ ಹೂವಿನ ಸರದಷ್ಟು ಹಗುರವಾಗಿ ಬರುವ ತಾಯಿ, ಲಭ್ಯವಿಲ್ಲದವರು ಆಕೆಯತ್ತಾ ಕಣ್ಣು ಹೊರಳಿಸಿದಾಗ ಕಾಲಿಂಗಸರ್ಪದಂತೆ ಮುನಿದು ಅವರು ರಕ್ತ ಕಾರಿ ಸತ್ತು, ಹುಚ್ಚು ಹಿಡಿದು, ಮೂಕರಾಗಿ, ಪಾರ್ಶ್ವವಾಯು ಬಡಿದ ನಿರ್ಭಾಗ್ಯ ಉಪಾಸಕರ ಕಥೆಗಳು ಇಲ್ಲಿ ಸೂಚ್ಯಂಕವಾಗಿದೆ. ಧ್ಯಾನಶ್ಲೋಕ ಹೇಳುತ್ತಾ ಅದರ ವರ್ಣನೆಯಂತೆ ಅದೇ ರೂಪು, ಅದೇ ಬಣ್ಣ, ಅದೇ ಆಯುಧಗಳನ್ನು ಹಿಡಿದ ದೇವಿ ಕಾಣುಸಿಕೊಂಡಳು ಎಂದು ಶಂಕರಶಾಸ್ತ್ರಿ ಹೇಳಿದಾಗ ವಿರೂಪಾಕ್ಷಶಾಸ್ತ್ರಿಗಳ ಮನಸಿನ ಬೇಗುದಿ, ಬೆರಗು ತಾಯಿಯಲ್ಲಿ ಅಪರಾಧ ಪ್ರಾಯಶ್ಚಿತ್ತ, ಮಗನಿಗೆ ಸಾಕ್ಷಾತ್ ದೇವಿ ದರ್ಶನ ಕೊಟ್ಟ ಸೌಭಾಗ್ಯ, ಆಕೆಯನ್ನು ಒಲಿಸಿಕೊಳ್ಳುವ ಶ್ರೀ ಷೋಡಶಾಕ್ಷರಿ ಮಂತ್ರೋಪದೇಶವನ್ನು ತಾನಾಗಿ ಒಲಿದು ನೀಡುವ ಗುರುವು ಬರುವವರಿಗೂ ಕಾಯಿ, ಆ ಅರ್ಹತೆಯನ್ನು ಸಂಪಾದಿಸು ಎಂದು ಮಗನಿಗೆ ಆಶೀರ್ವಚನ ನೀಡುವ ಸಂಧರ್ಭ ರೋಮಾಂಚನಗೊಳಿಸುತ್ತದೆ. ಇಲ್ಲಿ ತಂದೆ-ಮಗನ ಸಂಬಂಧ ಎಷ್ಟು ಪಾವಿತ್ರ್ಯ ಎಂಬುದು ಬಿಂಬಿತವಾಗಿದೆ. ಗುರುಕರುಣೆಯ ಸೂರ್ಯೋದಯಕ್ಕೆ ಕಾಯುವ ಶಂಕರಶಾಸ್ತ್ರಿಗಳ ಅನುಭವವೇ ಅವಿಸ್ಮರಣೀಯ.
ವಿರೂಪಾಕ್ಷಶಾಸ್ತ್ರಿಗಳು ಇಚ್ಛಮರಣೀ ಎಂಬಂತೆ ಅವರ ಮರಣ ಪ್ರಸಂಗ ಯಾರನ್ನಾದರೂ ವಿಮುಖಗೊಳಿಸದೆ ಇರದು. ಸಾವಿನಲ್ಲೂ ಇಷ್ಟೊಂದು ಸಂಭ್ರಮವಿರುತ್ತದೆಯೇ ಎನ್ನಿಸದು. ರಾಮರೆಡ್ಡಿಯ ರೋಧನೆ ಊರಿನವರ ಹೊಗಳಿಕೆಗೆ ಪಾತ್ರರಾದ ವಿರೂಪಕ್ಷಶಾಸ್ತ್ರಿಗಳೂ ಜೀವಂತ ನಿದರ್ಶನವಾಗುತ್ತಾರೆ. ಗೋಪುರದ ಕಲಶವಾಗಿ, ಗುರುವಿನ ಅನುಗ್ರಹ ಪಡೆದು, ಷೋಡಶಾಕ್ಷರಿ ಮಂತ್ರ ವಿದ್ಯೆಯನ್ನುಪಡೆದು ತಂದೆಯ ಆತ್ಮಕ್ಕೆ ತೃಪ್ತಿ ಕೊಡಬೇಕೆಂಬ ಉದ್ದೇಶದಿಂದ ಬಾಳಿನ ರಥ ಸಾಗಿತ್ತು. ವಿದ್ಯಾಶಂಕರ ಶಾಸ್ತ್ರಿಗಳ ಭೇಟಿ, ಅವರ ಜ್ಞಾನ ಸಂಪತ್ತಿಗೆ ಶರಣಾದ ಶಂಕರಶಾಸ್ತ್ರಿಗಳು ತನ್ನ ತಂದೆಯ ಬಯಕೆ ತಿಳಿಸುವ ಅವಕಾಶ, “ಆ ಸಾಧು ಹೇಳಿದ ಮಾತು, ತಂದೆಯ ಬಯಕೆ, ನಿನ್ನ ಹಾರೈಕೆ ಎಲ್ಲವೂ ನಡೆಯುತ್ತದೆ, ಆ ಕಾಲವೂ ಹತ್ತಿರವಾಗಿದೆ” ಎಂದಾಗ ತನ್ನ ಜನ್ಮ ಸಾರ್ಥಕವಾಯಿತು ಎಂದು ನಿಟ್ಟುಸಿರು ಪಡುವಶಾಸ್ತ್ರಿಗಳು, ವಿದ್ಯಾಶಂಕರಶಾಸ್ತ್ರಿಗಳಿಗೆ ತಮ್ಮ ಮನೆಯಲ್ಲೇ ಆಶ್ರಯ ಕೊಡಲು ಮುಂದಾಗುವ ಸನ್ನಿವೇಶ ಭಾವ ಪರವಶತೆಗೆ ಅಣಿ ಮಾಡುವಂತಿದೆ.
ತಾಯಿ ಅಪ್ಪಣೆ ಕೊಟ್ಟ ಸಂಧರ್ಭದಲ್ಕಿ ವಿದ್ಯಾಶಂಕರ ಶಾಸ್ತ್ರಿಗಳು ಅನುಭವಿಸಿದ ನೋವಿನ ವಿವರಣೆ ಅನನ್ಯ.ವಿದ್ಯಾಶಂಕರಶಾಸ್ತ್ರಿಗಳ ಆಗಮನದ ಪೂರ್ವದಲ್ಲಿ ಆನ್ನಪೂರ್ಣೆಅನುಭವಿಸಿದ ಅಸ್ಪಷ್ಟ ಭಾವನೆ, ಉದ್ವಿಗ್ನತೆ, ಯಾವುದು ಸ್ಥಾಯಿ, ಯಾವುದು ಸಂಚಾರಿ?ಎಂಬ ಭಾವದ ವರ್ಣನೆ ಕೆಡುಕಾಗುವ ಸೂಚನೆಯೊ, ಒಳ್ಳೆಯದಾಗುವ ಸಂಭವವೋ-ಅರಿಯದಾದಳು ಅನ್ನಪೂರ್ಣ.ತಾನೇ ತಾಯಿಯಾಗದವನು, ತಾಯಿಯ ಪೂಜೆ ಮಾಡಲಾರ, ತಾಯಿಯ ಮೂಲ ಸ್ವರೂಪವನ್ನು ಅರ್ಥ ಮಾಡಿಕೊಳ್ಳದ ಅರ್ಚನೆ, ಸಾಧನೆ ಯಾವುದೂ ಸಫಲವಾಗುವುದಿಲ್ಲ. ಆದ್ದರಿಂದ ತಾಯಿಯ ಸೇವೆ ಮಾಡಬೇಕೆನ್ನುವವರು ತಾನು ತಾಯಿಯಾಗಬೇಕು. ಪ್ರಪಂಚಕ್ಕೆ ತಾಯಿಯಾದವರು ತಮ್ಮ ಹೆಂಡತಿ ಮಕ್ಕಳಿಗೂ ತಾವು ಅದೇ ಅಂತ ತಿಳಿದುಕೊಬೇಕು.ಲೋಕವನ್ನೆಲ್ಲಾ ಮಕ್ಕಳಂತೆ ಕಂಡು ಮನೆ-ಮಡದಿ-ಮಕ್ಕಳನ್ನು ಪರಕೀಯರಂತೆ ಕಂಡರೆ ನಾವು ಪೂಜಿಸುವ ತಾಯಿಗೆ ಮಾಡಿದ ಅಪಚಾರ ಎಂದು ಬಾಳಿನ ಅರ್ಥವನ್ನು ಹೇಳಿದ ಪರಿ ತುಂಬಾ ಮನಸಿಗೆ ಹತ್ತಿರವಾಯಿತು. ಪ್ರಾಪಂಚಿಕ ಸುಖ ಅನುಭವಿಸಲು ಶಂಕರಶಾಸ್ತ್ರೀಯ ಹೆಂಡತಿ ಹಾಗೂ ಮಗುವನ್ನು ನೀನೇ ನೋಡಿಕೊ ಎಂದು ರಾಮರೆಡ್ಡಿಗೆ ಹೇಳುವ, ಅದರ ಅರ್ಥವನ್ನಿರಿಯಾದ ರಾಮರೆಡ್ಡಿಯ ಸಂಘರ್ಷ ನಿಜಕ್ಕೂ ವಿವರಣೆಗೆ ಮೀರಿದ್ದು.
ಶಂಕರಶಾಸ್ತ್ರಿಗಳು ವಿದ್ಯಾಶಂಕರಶಾಸ್ತ್ರಿಗಳಲ್ಲಿ, ತಮ್ಮ ಮಾರ್ಗದಲ್ಲಿ ಮುನ್ನಡೆಸುವ ಗುರುವನ್ನು ಕಂಡರೆ, ಅನ್ನಪೂರ್ಣಮ್ಮ ಅವರಲ್ಲಿ ತನ್ನ ಇಲ್ಲವಾದ ತಂದೆ, ಅಭಿಮಾನಪಡುತ್ತಿದ್ದ ಮಾವನನ್ನು ಕಂಡುಕೊಳ್ಳುತ್ತಿದ್ದಳು ಎನ್ನುವಲ್ಲಿ ಎಂಥಹ ಅವಿನಾಭಾವ ಸಂಬಂಧ. ದೇವತಾ ರಹಸ್ಯಗಳು ಮನುಷ್ಯನಿಗೆ ಅರ್ಥವಾಗುವ ಪರಿಯನ್ನು ಚೇಳು ಕುಟುಕಿದ ಪ್ರಸಂಗದಿಂದ ವಿವರಿಸಿರುವ ರೀತಿ ತುಂಬಾ ಅರ್ಥಗರ್ಭಿತವಾಗಿದೆ.ಅಹಂಕಾರಕ್ಕೆ ಆಶ್ರಯವಾದದ್ದು ಹೋದಮೇಲೆ ಅಹಂಕಾರವು ಹೋಗುತ್ತದೆ. ಕಾಮ, ಕ್ರೋಧ, ಲೋಭ, ಮೋಹ-ಇವೆಲ್ಲವೂ ಅಹಂಕಾರದ ಬಳ್ಳಿಯಲ್ಲಿ ಬಿಟ್ಟ ಕಾಡು ಹೂಗಳು-ಎಂಬ ಬದುಕಿನ ಪಾಠವನ್ನು ಚೆನ್ನಾಗಿ ತಿಳಿಯಪಡಿಸಿದ್ದಾರೆ. ಇಂದ್ರಿಯ ನಿಗ್ರಹವನ್ನು ಸತತ ಅಭ್ಯಾಸದ ಮೂಲಕ ಸಾಧಿಸಬೇಕು. ಅನ್ನಪೂರ್ಣೆಗೆ ಮಾತಿಗಿಂತ ಮೌನವೇ ಲೇಸು, ಅಜ್ಞಾನಕ್ಕಿಂತ ಅರಿವು ಅಪಾಯಕಾರಿ ಎಂದು ಎಚ್ಚರಿಸುವ ಪರಿ ಸೊಗಸಾಗಿದೆ. ಶಾಸ್ತ್ರಿಗಳ ಒಗಟಿನ ಉತ್ತರ ಅವಳನ್ನು ಭಾದಿಸುವ ರೀತಿ ಚಿಂತಾಜನಕ. ಆ ಮನೆಗೆ ದೇವಿಯ ಅಪ್ರಸನ್ನ ಕಟಾಕ್ಷದಿಂದ ಒದಗಬಹುದಾದ ವಿಪತನ್ನು ಮನಗಂಡ ವಿದ್ಯಾಶಂಕರ ಶಾಸ್ತ್ರಿಗಳು ತಾಯಿಯ ಪೂಜೆಯನ್ನು ತಾವೇ ಮಾಡಿ, ಸಂಕಲ್ಪದೊಂದಿಗೆ ಬೆಟ್ಟದ ದೇವಿಯ ದರ್ಶನ ಮಾಡಲು ತೆರಳಿದರು.ಅವರ ಸಂಕಲ್ಪವನ್ನು ಅಹಂಕಾರದ ರೂಪವಾಗಿ ನೋಡಿದ ತಾಯಿ ಇಂದಿಗೆ ನಿನ್ನ ಪೂಜಾಭಂದನವು ಮುಗಿಯಿತು ಎಂದು ಪರೋಕ್ಷವಾಗಿ ಸೂಚಿಸಿದ್ದಳು. ವಿದ್ಯಾಶಂಕರಶಾಸ್ತ್ರಿಗಳು ಇಚ್ಚಾಶಕ್ತಿ-ಜ್ಞಾನಾಶಕ್ತಿ-ಕ್ರಿಯಾಶಕ್ತಿ ಸ್ವರೂಪಿಣಿ ಎಂಬುದನ್ನು ಅರಿತು ನಿನ್ನ ಇಚ್ಛೆಗೆ ಇದಿರುಹೋದ ನನ್ನ ಅಪರಾಧವನ್ನು ಕ್ಷಮಿಸು ಎಂದು ತಾಯಿಯಲ್ಲಿ ಮೊರೆಹೋಗಿಶುದ್ಧ ಸ್ಪಟಿಕ ಮೂರ್ತಿಯಂತೆ ನಿರ್ಗಮಿಸುವ ಮುನ್ನ ಶಂಕರಶಾಸ್ತ್ರಿಗಳಿಗೆ ಶ್ರೀ ಚಕ್ರ ಸ್ವರೂಪಿಣಿಯಾದ ತಾಯಿಯ ಸೇವೆ ಮಾಡು ಎಂದು ನಿರ್ಭಾವ ಸ್ವರದಲ್ಲಿ ಆಶೀರ್ವದಿಸಿ ಸಮಾಧಿ ಸ್ಥಿತಿಗೆ ಒಳಗಾದ ಸಂಧರ್ಭ ತುಂಬಾ ಚೆನ್ನಾಗಿದೆ. ಇತ್ತ ತನ್ನ ಗಂಡ ಹಾಗೂ ಗುರುಗಳು ಬಾರದಿದ್ದುದು ಅನ್ನಪೂರ್ಣೆಗೆ ದಿಗಿಲಾಗಿ ರಾಮರೆಡ್ಡಿಯ ಮೂಲಕ ಗುರುಗಳ ದೇಹತ್ಯಾಗದ ವಿಷಯ ತಿಳಿದಾಗ ಶರಣರ ಬದುಕು ಮರಣದಲ್ಲಿ ಕಾಣು ಎಂಬಂತೆ ಗದ್ಗತಿತರಾದರು. ಅವರು ದೇಹತ್ಯಾಗ ಮಾಡಿದ ಸ್ಥಳದಲ್ಲೇ ಬೃಂದಾವನದ ನಿರ್ಮಿತವಾಯಿತು ಎಂದು ಹೇಳುವಲ್ಲಿ ಲೇಖಕರ ಧನ್ಯತಾಭಾವ ಕಾಣುತ್ತದೆ.
ಪ್ರಥಮಾಹುತಿ ಅಧ್ಯಾಯದಲ್ಲಿ ಶಂಕರಶಾಸ್ತ್ರಿಗಳ ಪೂಜಾ ಸಮರ್ಪಣೆಯನ್ನು ವರ್ಣಿಸಿರುವ ರೀತಿ ಅಮೋಘ.ತಾಯಿಯನ್ನು ಒಲಿಸಿ ಕೊಂಡೆ ಎಂಬ ಧನ್ಯತಾ ಭಾವ, ತಾನೇ ತಾಯಿಯಾಗದವನು ತಾಯಿಯ ಪೂಜೆ ಮಾಡಲಾರೆ ಎಂಬ ಮಾತು ಅವರಲ್ಲಿ ಮಾರ್ದನಿಸಿ, ತಾಯಿ ತನ್ನನ್ನು ಪರೀಕ್ಷಿಸುವ ವಿಧಾನ ಎಂದು ದೇವರ ಕೋಣೆಗೆ ಬಂದ ತನ್ನ ಮಗುವನ್ನು ಮಮಕಾರ ಜಾಗ್ರತ ಮಾಡಿ ಕೂಗಿ ಕರೆದಿತ್ತು ಎನ್ನುವಾಗ ತಂದೆಯ ಮಮತೆ ಉಕ್ಕಿ ಹರಿಯುವಂತೆ ವರ್ಣಿಸಿದ್ದಾರೆ. ಗುರಿ ಸಾಧನೆಗೆ ಅಗತ್ಯವಾದ ಷೋಡಶಾಕ್ಷರಿ ಮಂತ್ರ, ಶ್ರೀಚಕ್ರ ಅರ್ಚನೆಯ ಮಹಾ ಭಾಗ್ಯವೂ ಶಂಕರಶಾಸ್ತ್ರಿಗಳಿಗೆ ಲಭಿಸಿತ್ತು. ಅವರಿಗೆಂದೂ ಅವರ ಸಂಸಾರ ಉಪಾಧಿಯಾಗಿ ಕಾಡಲಿಲ್ಲ ಎಂಬುದು ಸತ್ಯ. ಎಲ್ಲೋ ಮನದಾಳದೊಳಗೆ ಹುಡುಗಿದ್ದ ಹೆಂಡತಿಯ ಲಾವಣ್ಯ ಕಾಡಲು ಶುರುವಾಯಿತು.ಕಾಮಭಾವನೆಯನ್ನು ಗೆದ್ದೇ ಎಂದುಕೊಳ್ಳದ್ದಿದ್ದರೂ ಪಾರಾದೆ ಎಂದು ನಿಟ್ಟುಸಿರುಬಿಡುತ್ತಿದ್ದರು.
ರಾಮರೆಡ್ಡಿ ಮನೆಗೆ ಧನಲಕ್ಷ್ಮೀ ಪೂಜೆಗೆ ಹೋದ ಶಾಸ್ತ್ರಿಗಳಿಗೆ ಮಾಧುರ್ಯಭರಿತ ಮಲ್ಲಿಗೆ ಹೂಗಳು ಪೂಜೆಗೆ ಸಿಕ್ಕಿದ್ದು, ಅದನ್ನು ರಾಮರೆಡ್ಡಿ ಶಾಸ್ತ್ರಿಗಳ ಮನೆಯ
ಮುಂದೆ ಬಳ್ಳಿ ಹಬ್ಬಿಸಿ, ಶಾಸ್ತ್ರಿಗಳ ಆಸೆಯಂತೆ ಮಲ್ಲಿಗೆಯ ಹೂಗಳಿಂದ ತಾಯಿಯ ಸೇವೆ ಮಾಡುವ ಯೋಗ ಬಂದಿತು.ತಾಯಿಯ ಸೇವೆ ನಿರಾತಂಕವಾಗಿ ಸಾಗುತ್ತಿದ್ದರೂ ಶಾಸ್ತ್ರಿಗಳು ಅನ್ಯಮನಸ್ಕರಾಗಿ ಚಿಂತೆಗೆ ಒಳಗಾಗುವುದನ್ನು ಅರಿತ ಅನ್ನಪೂರ್ಣೆ ಚಿಂತೆಗೆ ಕಾರಣವೇನೆಂದು ವಿಚಾರಿಸಲಾಗಿ ನೀವು ಏನಾದರೂ ಸಾಧನೆ ಮಾಡಿ, ನಾನು ನಿಮ್ಮ ಹೆಂಡತಿ ಅನ್ನೋದನ್ನ ಮಾತ್ರ ಮರಿಬೇಡಿ ಎಂದು ಆರ್ತತೆಯಿಂದ ಕೇಳಿದಾಗ ಶಾಸ್ತ್ರಿಗಳು ಅವಳಿಗೆ ಸಾಂತ್ವನ ಮಾಡುವ ಪರಿ ಅವಳ ಹೃದಯಕ್ಕೆ ಹಾಲೆರೆದಂತಾಗುತ್ತದೆ. ವರಮಹಾಲಕ್ಷ್ಮಿಯ ದಿನದಂದು ಪೂಜೆಗೆ ಸಕಲ ಸಿದ್ಧತೆ ಮಾಡಿ ಪೂಜೆಗೆ ಅಣಿಯಾಗತೊಡಗಿದ ಶಾಸ್ತ್ರಿಗಳಿಗೆ ಅನ್ನಪೂರ್ಣ ನೈವೇದ್ಯದ ಪಾತ್ರೆ ಇಡುವಾಗ ಬೆನ್ನ ಮೇಲಿನ ಸೆರಗು ಜಾರಿ, ಕೆಳಗೆ ಬಿದ್ದು, ಅವಳ ಲಾವಣ್ಯ ಸುಧೆಯನ್ನು ಕಣ್ಣುಗಳು ಹೀರಿದ್ದು, ಆ ನಂತರ ಅದುವರೆಗೆ ಮನದ ಮೂಲೆಯಲ್ಲಿ ಹುದುಗಿದ್ದ ಕಾಮ ಕೆರಳಿತು .ಕಾಮವನ್ನು ಗೆದ್ದೇ ಎಂಬ ಹುಸಿ ಆಟ್ಟಹಾಸಕ್ಕಿಂತ ಸೋತು ಗೆಲ್ಲುವುದೇ ವಿಹಿತ ಮಾರ್ಗವೆಂದು ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದು ಈ ಸುಖಸಾಧನೆಯಲ್ಲಿ ಸರ್ವಸ್ವವನ್ನು ಮರೆತರು. ಹೆಂಡತಿಯನ್ನು ಕಂಡು ತಾಯಿಯೆಂದು ಕಾಣಲಾಗದೆ ಹೋಯಿತಲ್ಲ, ತನ್ನ ತಂದೆ ಅಪಾರ ಕನಸು ಕಂಡದ್ದು ಇಷ್ಟಕ್ಕೆ? ವಿದ್ಯಾಶಂಕರ ಶಾಸ್ತ್ರಿಗಳು ತಮ್ಮಲ್ಲಿದ್ದುದನ್ನು ನಿನಗೆ ಕೊಟ್ಟಿದ್ದು ಇದಕ್ಕೆ? ಎಂದು ಕಠೋರವಾಗಿ ಪ್ರಶ್ನಿಸಿದ ಸನ್ನಿವೇಶ ಬಹಳ ಮನ ಮುಟ್ಟುತ್ತದೆ.
ನಂತರ ಅವರಲ್ಲಾದ ಬದಲಾವಣೆ ಹೆಂಡತಿಯನ್ನು ತಾಯಿಯಾಗಿ ಕಾಣಬೇಕೆಂದು ನಿರ್ಧರಿಸಿ ಇನ್ನು ನನ್ನನ್ನು ಮಗ ಎಂದು ಪರಿಭಾವಿಸು. ನಾನು ಮೇಲೆರಲು ನಿನ್ನ ಸಹಕಾರ ಬೇಕು ಎಂದು ಕೇಳುವ ಸನ್ನಿವೇಶ. ಅದಕ್ಕೆ ತನ್ನ ಸಮ್ಮತಿ ಇದೆಯೆಂದು ಸೂಚಿಸುವ ಅನ್ನಪೂರ್ಣಳಿಗೆ ಮಾನವ ಪೂಜೆಯನ್ನು ಸಲ್ಲಿಸಿದರು. ಕಾಣುವುದೆಲ್ಲವೂ ತಾಯಿ ಎಂದು ಕಾಣುವ ಸಾಧನೆಯ ಹಾದಿಯಲ್ಲಿ ಮೊದಲ ಹೆಜ್ಜೆಯಿಟ್ಟ ಶಾಸ್ತ್ರಿಗಳು ತಮ್ಮ ಹೆಂಡತಿಯನ್ನೇ ಮಾತೃಸ್ಥಾನದಲ್ಲಿ ಕೂಡಿಸಿ ಪೂಜಿಸಿ, ಆ ಪೂಜೆ ಫಲಪ್ರದವಾಯಿತು ಎಂಬಂತೆ ನೆಮ್ಮದಿಯಾಗಿ ಮಲಗಿದರು. ಆದರೆ ಅನ್ನಪೂರ್ಣಳ ಮನಸಿನಲ್ಲಿ ಮುಂದೆ ಎಂದಾದರೂ ತನ್ನಿಂದ ಮತ್ತೆ ಆಯಾಚಿತವಾಗಿಯೋ ಘಟನೆ ಮತ್ತೆ ಮರುಕಳಿಸಿ ಅವರ ಚಿತ್ತಕ್ಷೋಭೆಗೆ ತಾನು ಕಾರಣವಾದರೆ ಎಂದು ಆತ್ಮಹತ್ಯೆಗೆ ಶರಣಾದ ಸನ್ನಿವೇಶ ಮನಕಲುಕುತ್ತದೆ. ಒಟ್ಟಿನಲ್ಲಿ ಶಾಸ್ತ್ರಿಗಳ ಶ್ರೀ ಚಕ್ರೋಪಾಸನೆಯ ಆತ್ಮಯಜ್ಞಕ್ಕೆ ಅನ್ನಪೂರ್ಣೆ ಪ್ರಥಮ ಆಹುತಿಯಾದಳು.
ತಾಯಿಯನ್ನು ಕಳೆದುಕೊಂಡ ವಿರೂಪಾಕ್ಷನಿಗೆ ಎದೆಯೊಳಗಿನ ಬೇಗೆಯನ್ನು ಕಕ್ಕಲು ತಿಳಿಯದಾಯಿತು.ಬದುಕಿದ್ದಾಗ ಒಂದು ಸದ್ದು ಗದ್ದಲವಿಲ್ಲದೆ ಗಂಡನಿಗೆ ಅನುಕೂಲಸತಿಯಾಗಿ ಇದ್ದು ಇಲ್ಲದಂತಿದ್ದ ಅನ್ನಪೂರ್ಣ ಈಗ ಶಾಸ್ತ್ರಿಗಳ ಬಾಳಿನಲ್ಲಿ ಸರ್ವವ್ಯಾಪಿಯಾದದ್ದು ಸತ್ಯ. ಅನ್ನಪೂರ್ಣೆಯನ್ನು ಕೊಂದದ್ದು ತಾನೇ, ನನ್ನ ಪೂಜೆ ಕೊಂದಿತು ಎಂದು ಅನಿಸಿದರೂ, ತಾಯಿಯ ಇಚ್ಛಾನುವರ್ತಿಯಾಗಿ ಬಾಳು ಸವೆಸುವುದು ಎಂಬ ಖಚಿತ ನಿರ್ಧಾರಕ್ಕೆ ಬರುತ್ತಾರೆ. ಅವಳನ್ನು ಕಳೆದುಕೊಂಡ ನಾನು ನಿನ್ನನ್ನು ಸೇರದೆ ಬದುಕಲಾರೆ, ಇನ್ನು ನಿನ್ನ ಸೇರುವುದೇ ನನ್ನ ಗುರಿ, ಇದಕ್ಕೆ ನನ್ನ ಬಾಳು ಮೀಸಲು ಎಂದು ಶಪಥತೊಟ್ಟ ಶಂಕರಶಾಸ್ತ್ರಿ ನನ್ನ ಮನಸ್ಸಿಗೆ ಹತ್ತಿರವಾದದ್ದು ನಿಜ.
ನಂತರ ವಿರೂಪಾಕ್ಷ ಶಂಕರ ಶಾಸ್ತ್ರಿಗಳ ತಂಗಿಯ ಆಸರೆಯಲ್ಲಿ ಬೆಳೆಯುತ್ತಾನೆ .ರಾಮರೆಡ್ಡಿ ವಿದ್ಯಾಶಂಕರಶಾಸ್ತ್ರಿಗಳ ಮಾತನ್ನು ಪೂರೈಸುತ್ತಾರೆ. ಈಗ ಹೆಂಡತಿ-ಮಗು ದೂರವಾಗಿ ಅವರ ಹಾದಿ ನಿರೂಪಾಧಿಕವಾಗಿತ್ತು. ಅವರುಗಳ ನೆನಪಾಗಿ ತಾಯಿಯ ಶ್ರೀಪಾದದಲ್ಲಿ ಕೇಂದ್ರೀಕರಿಸುವುದು ಸವಾಲಾಗಿತ್ತು. ಕುಂಡಲಿನಿ ಜಾಗ್ರತವಾಗಿ ಶಾಸ್ತ್ರಿಗಳ ಮೈಯಲ್ಲಿ ಹಿತವಾದ ಕಾವು ಕಾಣಿಸುವ ವಿಷಯವನ್ನು ಬೈರಾಗಿಯ ಬಾಯಲ್ಲಿ ಕೇಳಿ, ಸಾಧನೆ ಮುಂದುವರಿಸಿ, ಕುಂಡಲಿನಿಯನ್ನು ಸಹಸ್ರಾರಕ್ಕೆ ಸೇರಿಸಿ, ಜನ್ಮ ಸಾರ್ಥಕ ಮಾಡಿಕೊಳ್ಳಿ, ಆದರೆ ಎಚ್ಚರವಿರಲಿ ಎಂದು ಹೇಳಿದ ಬೈರಾಗಿಯ ಮಾತುಗಳು ಶಾಸ್ತ್ರೀಯ ವರಿಗೆ ಅಪ್ಯಾಯಮಾನವಾಗಿ ಸರ್ವ ಸಿದ್ಧಿಗಳನ್ನು ಸಂಪಾದಿಸಿದರು. ಆದರೂ ತಾಯಿಯ ಕೃಪೆಯಾಗಲಿಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದರು. ಸಂಸಾರದ ಬಂಧನದಿಂದ ದೂರವಾಗಿ ಲೋಕದ ಸಂಭಂಧವನ್ನೇ ಕಡಿದುಕೊಳ್ಳುವ ಪ್ರಯತ್ನದಲ್ಲಿದ್ದ ಶಾಸ್ತ್ರಿಗಳಿಗೆ ಲೋಕವೇ ಬಂಧನವಾಯಿತು. ಶುದ್ಧ ಸಾತ್ವಿಕರಾದ ಶಾಸ್ತ್ರಿಗಳು ತಮ್ಮ ಶಕ್ತಿ ಸಂಪತ್ತನ್ನೆಲ್ಲಾ ತಮಗೆ ಗೊತ್ತಿಲ್ಲದಂತೆ ಧಾರೆ ಎರೆದು ಶಕ್ತಿಪಾತವಾಗಿ ಜರಡಿಯಂತಾದರು. ಕುಂಡಲಿನಿಶಕ್ತಿಯನ್ನು ಸಹಸ್ರಾರಕ್ಕೆ ಸೇರಿಸುವ ಸಾಹಸ ಮಾಡಿ ಅದರ ಫಲವಾಗಿ ಬುದ್ಧಿ ವಿಕಲ್ಪಕ್ಕೆ ಒಳಗಾದರು. ಇತ್ತ ವಿರೂಪಾಕ್ಷ ವಿಲಾಸಿ ಜೀವನಕ್ಕೆ ಮಾರುಹೋಗಿ, ತನ್ನ ತಾಯಿಯ ಸಾವಿಗೆ, ತನ್ನ ಸ್ಥಿತಿಗೆ ತಂದೆಯ ಪೂಜೆ, ಆಚಾರ ವಿಚಾರಗಳೆಲ್ಲಾ ಕೆಲಸಕ್ಕೆ ಬಾರದ ಹಳೆಯ ಕಂದಾಚಾರದಂತೆ ಕಂಡಿತು. ಹಿರಿಯರ ಪುಣ್ಯದ ಫಲವೋ, ಅವನಿಗೆ ಗುಮಾಸ್ತನಾಗಿ ಕೆಲಸ ಸಿಕ್ಕಿ, ನಂತರ ಹತ್ತಿರದ ಸಂಬಂಧಿಗಳ ಮಗಳಾದ ಮಾಲತಿಯೊಂದಿಗೆ ವಿವಾಹವಾಯಿತು.
ಶ್ರೀಚಕ್ರವನ್ನು ತಬ್ಬಿಕೊಂಡು, ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ಶಾಸ್ತ್ರಿಗಳು ರಾಮರೆಡ್ಡಿಯ ಸಹಾಯದಿಂದ ಒಂದು ಮೂಲೆಯಲ್ಲಿ ಒಂದು ಗುಳಿ ತೋಡಿಸಿ ಶ್ರೀಚಕ್ರವನ್ನು ಭೂಸ್ತಾಪನೆ ಮಾಡಿದರು. ಯಾವುದೋ ಧ್ಯಾನದಲ್ಲಿ ಮಗ್ನರಾಗಿ ಕುಳಿತಂತಿದ್ದ ಶಾಸ್ತ್ರಿಗಳ ಮೈ ಮಂಜುಗಡ್ಡೆಯಂತಾಗಿತ್ತು ಎಂದು ವಿವರಿಸಿರುವ ಸನ್ನಿವೇಶ ನನ್ನ ಮೈ ಜುಮ್ಮೆನ್ನುವಂತೆ ಮಾಡಿತು.ತಂದೆಯ ಸಾವಿನ ಸುದ್ದಿ ಕೇಳಿ ಅಪರ ಕರ್ಮಕ್ಕೆಂದು ಬಂದಿದ್ದ ವಿರೂಪಾಕ್ಷ ಬಂಧುಬಾಂಧವರ ಒತ್ತಾಯಕ್ಕೆ ಮಣಿದು ಬಂiದಿದ್ದ. ಮಧ್ಯರಾತ್ರಿ ನಿದ್ದೆಯಿಂದ ಎಚ್ಚರವಾದ ಮಾಲತಿ ದೇವರಕೋಣೆಯತ್ತ ಇಣುಕಿ ನೋಡಿದಳು.
ಶಂಕರಶಾಸ್ತ್ರಿಗಳು ಮಂದ್ರಸ್ವರದಲ್ಲಿ ಶ್ರೀಲಲಿತಾಸಹಸ್ರನಾಮ ಹೇಳುತ್ತಾ ಶ್ರೀ ಚಕ್ರೋಪಾಸನೆಯಲ್ಲಿ ನಿರತರಾಗಿದ್ದಾರೆ. ಚಿಟ್ಟನೆ ಚೀರಿದ ಮಾಲತಿ ವಿಧಿವಶವಾದಳು. ತನ್ನ ತಾಯಿಯ ಆತ್ಮಹತ್ಯೆ, ತಂದೆಯ ಮತಿಭ್ರಮಣೆ ಕೈ ಹಿಡಿದ ಹೆಂಡತಿಯ ದುರ್ಮರಣ-ಎಲ್ಲಕ್ಕೂ ಶ್ರೀಚಕ್ರ ತಮ್ಮ ಮನೆಗೆ ಬಂದದ್ದೇ ಕಾರಣ ಎಂದು ಕೈಗೆ ಸಿಕ್ಕ ಹಾರೆಯನ್ನು ಹಿಡಿದು ದೇವರ ಮನೆಯತ್ತ ಧಾವಿಸಿ ಸಿಕ್ಕ ಕಡೆಯಲ್ಲಿ ಏಟು ಹಾಕಿದ.ಆ ವೇಗಕ್ಕೆಕಲ್ಲನ್ನು ತಾಕಿದ ಹಾರೆ ಪುಟಿದೆದ್ದು ವಿರೂಪಾಕ್ಷನ ತಲೆ ಸೀಳಿತು. ಇಡೀ ವಂಶ ನಿರ್ವಂಶವಾಯಿತು.
ಹೀಗಾಗಬಾರದಿತ್ತು ಎಂದು ಲೇಖಕರು ಸಾಂಬಮೂರ್ತಿಯ ತಂದೆಯಲ್ಲಿ ಹೇಳಿದಾಗ ಅವರ ದಾರ್ಶನಿಕ ಉತ್ತರ ಇದಾಗಿತ್ತು-ಹೀಗಾಗಬಾರದಿತ್ತು ಎಂದು ಹೇಳುವುದಕ್ಕೆ ನಾವು ಯಾರು?ಯಾವುದು ಹೇಗಾಗಬೇಕೋ ಹಾಗೇ ಆಗುತ್ತದೆ.ಸುಮ್ಮನೆ ಚಪಲದ ಮಾತು ಆಡುತ್ತೇವೆ. ನಮ್ಮ ಇಚ್ಚೆಯಲ್ಲೇ ದೋಷವಿದ್ದರೆ ಯಾರೇನು ಮಾಡಲು ಸಾಧ್ಯ? ವಿರೂಪಾಕ್ಷಶಾಸ್ತ್ರಿಗಳ ಬಯಕೆಯಲ್ಲಿನ ದೋಷದಿಂದ ಶಂಕರಶಾಸ್ತ್ರಿಗಳಿಗೆ ತಾಯಿ ಒಲಿದು ಬಂದಳು – ಹೂವಾಗಿ ಅಲ್ಲ, ಸಿಡಿಲಾಗಿ! ಇದಕ್ಕೆಯಾರು ಹೊಣೆ?
ಇದೆ ಬದುಕಿನ ಆಟವಲ್ಲವೇ?
-ವತ್ಸಲ ಹೆಬ್ಬಾಲೆ.
ಸೊಗಸಾಗಿದೆ ಪುಸ್ತಕ ಪರಿಚಯ
ನಾನು ಸಾಮಾನ್ಯವಾಗಿ ತಾ.ರಾ.ಸು.ಅವರ ಬಹುತೇಕ ಪುಸ್ತಕ ಗಳನ್ನು ಓದಿದ್ದೇನೆ ಈ ಪುಸ್ತಕ ವಾಚನಾಲಯ ದಿಲ್ಲಿ ಸಿಕ್ಕಾಗ ಮೇಲಿನ ಮುಖಪುಟ ನೋಡಿ ಅಲ್ಲಿ ಮೇ ಇಡುತ್ತಿದ್ದೆ.ನೀವು ಅದೇ ಪುಸ್ತಕ ದ ಪರಿಚಯ ಮಾಡಿಕೊಟ್ಟರು ವುದನ್ನು ಓದಿದ ನನಗೆ ಓದಬೇಕೆನಿಸಿದೆ.ಅಷ್ಟು ಚೆನ್ನಾಗಿ ಆಕಥೆ ಸನ್ನಿವೇಶ ವನ್ನು ಕಟ್ಟಿಕೊಟ್ಟಿದ್ದೀರಿ ಧನ್ಯವಾದಗಳು ಮೇಡಂ.
ನಮ್ಮ ಇಚ್ಚೆಯಲ್ಲೇ ದೋಷವಿದ್ದರೆ ಯಾರೇನು ಮಾಡಲು ಸಾಧ್ಯ?! – ಗಮನಿಸ ಬೇಕಾದ ವಿಷಯ.
ಅಬ್ಬಾ, ಮೈನವಿರೇಳಿಸುವ ಕಥಾವಸ್ತು. ಅದರ ಸಾರಾಂಶವನ್ನು ಸುಂದರವಾಗಿ ಭಟ್ಟಿ ಇಳಿಸಿ ಕೊಟ್ಟಿರುವ ನಿಮ್ಮ ಪುಸ್ತಕಾವಲೋಕನ, ಪುಸ್ತಕ ಓದಲು ಪ್ರೇರೇಪಿಸುತ್ತದೆ. ಚಂದದ ಪುಸ್ತಕ ಪರಿಚಯ.
ಕಾದಂಬರಿ ಓದುತ್ತಿದ್ದ ಸಮಯದಲ್ಲಿ ತ.ರಾ.ಸು. ಅವರ ಐತಿಹಾಸಿಕ ಕಾದಂಬರಿಗಳೆಂದರೆ ಅದೇನೋ ಸೆಳೆತ.. ಅತ್ಯದ್ಭುತ ನಿರೂಪಣೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ! ಅಂತಹದೇ ಅವರ ಪುಸ್ತಕವೊಂದರ ಪುಟ್ಟ ವಿಮರ್ಶಾ ಸಹಿತ ಪರಿಚಯ ಮಾಡಿಸಿರುವಿರಿ…ಧನ್ಯವಾದಗಳು ಮೇಡಂ.