ಪ್ರವಾಸ

ಪ್ರವಾಸ ಕಥನ: ಸ್ಪಿಟಿ-ಸ್ಥಿತಿ-ಗತಿ- ಭಾಗ 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನಾಕೋಸ್ತೂಪ,  ನಾಕೋ ಸರೋವರ

ನಮ್ಮ ಪ್ರಯಾಣ  ಮುಂದುವರಿದು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ   ‘ನಾಕೊ‘ ಹಳ್ಳಿಗೆ  ತಲಪಿದೆವು. ಇದು ಸಮುದ್ರ ಮಟ್ಟದಿಂದ 11890 ಅಡಿ ಎತ್ತರದಲ್ಲಿದೆ. ಆಗ ಮಧ್ಯಾಹ್ನದ ಸಮಯ.  ವಾತಾವರಣ ಹಿತವಾಗಿತ್ತು.   ಇಲ್ಲಿ ಬೌದ್ಧ ಧರ್ಮ ಮತ್ತು ಇಂಡೋ-ಟಿಬೆಟಿಯನ್ ಸಂಸ್ಕೃತಿ ದಟ್ಟವಾಗಿದೆ.  ಇಲ್ಲಿರುವ ಸುಂದರವಾದ   ‘ನಾಕೋ ಸ್ತೂಪ’,   ಬೌದ್ಧ ಮಠ ಮತ್ತು ಸ್ತೂಪಗಳನ್ನು ಕ್ರಿ.ಶ. 11ನೇ ಶತಮಾನದಲ್ಲಿ  ಪ್ರಸಿದ್ಧ ಬೌದ್ಧ ವಿದ್ವಾಂಸ  ರಿಂಚೆನ್ ಜಾಂಗ್ಪೋ ಅವರು ನಿರ್ಮಿಸಿದರು ಎಂದು ನಂಬಲಾಗಿದೆ. ನಾವು ಗಮನಿಸಿದಂತೆ, ಹಿಮಾಲಯದಲ್ಲಿರುವ ಬೌದ್ಧರ ಸ್ತೂಪಗಳು  ಮತ್ತು ಮೊನಾಸ್ಟ್ರಿಗಳು ಬಹುತೇಕ  ‘ವಜ್ರಯಾನ’  ಬೌದ್ಧಪಂಥದವರಾಗಿದ್ದುವು, ಹೆಚ್ಚಿನ ಮೊನಾಸ್ಟ್ರಿಗಳನ್ನು ಸ್ಥಳೀಯವಾಗಿ ಲಭಿಸುವ ಮಣ್ಣು, ಕಲ್ಲುಚಪ್ಪಡಿ ಮತ್ತು ಮರದ ಕಂಬಗಳಿಂದ ಕಟ್ಟಲಾಗಿದ್ದುವು.  ಮಠದ ಆವರಣದಲ್ಲಿ  ಪಟಪಟಿಸುವ ಬಣ್ಣಬಣ್ಣದ ಪತಾಕೆಗಳು,  ‘ಧರ್ಮಚಕ್ರಗಳು’ ಇದ್ದುವು.  ಬಹುತೇಕ ನಿಶ್ಶಬ್ದ ವಾತಾವರಣದ ಮಠದಲ್ಲಿ ಕೆಲವೆಡೆ ಮಂತ್ರ ಪಠಿಸುವ ಆರಾಧಕರೂ ಕಾಣಸಿಕ್ಕಿದ್ದರು.  

ನಾಕೋ  ಮೊನಾಸ್ಟ್ರಿಯಲ್ಲಿ  ದೊಡ್ಡ ಸಭಾಂಗಣಗಳಿವೆ.  ಬೌದ್ಧಧರ್ಮದ ಪ್ರಮುಖರಿಗೆ ಸಂಬಂಧಿಸಿದ ಸೊಗಸಾದ ಕಲಾಕೃತಿಗಳಿವೆ.  ಇಲ್ಲಿಗೆ ಗುರು ಪದ್ಮಸಂಭವ ಬಂದಿದ್ದರು ಎಂಬ ನಂಬಿಕೆಯಿದೆ.   ಮಠದಿಂದ  ಸ್ವಲ್ಪ ದೂರದಲ್ಲಿ   ನಾಕೋ ಸರೋವರ (Nako Lake) ಇದ್ದು, ಇದರ ಬಳಿ ಗುರು ಪದ್ಮಸಂಭವರ ಪಾದದ ಗುರುತು ಇದೆ ಎಂಬ ಪ್ರತೀತಿಯೂ ಇದೆ. ಈ ಸರೋವರದ ಹಸಿರಿನ ಹಿನ್ನೆಲೆಯ ನೀರಿನಲ್ಲಿ  ಆಕಾಶದ ನೀಲಿ ಬಣ್ಣವು   ಪ್ರತಿಫಲಿಸಿ ಬಹಳ ಸೊಗಸಾಗಿ ಕಾಣಿಸುತ್ತಿತ್ತು.

ನಾಕೋ  ಹಳ್ಳಿಯ ಮನೆಗೆಳು ಬಹುತೇಕ ಲಡಾಕ್  ನ ಮನೆಗಳನ್ನು ಹೋಲುತ್ತಿದ್ದುವು.  ಮಣ್ಣಿನಿಂದ ಕಟ್ಟಿದ ಮನೆಗಳಿಗೆ , ಕೆಂಪು ಬಣ್ಣದ ಅಥವಾ ಹಸಿರು ಬಣ್ಣದ  ಛಾವಣಿ ಹೊದಿಸಿದ್ದ ಮನೆಗಳು ಪರ್ವತಗಳ ಹಿನ್ನೆಲೆಯಲ್ಲಿ ಸೊಗಸಾಗಿ ಕಾಣಿಸುತ್ತಿದ್ದುವು. ಅತಿ ಕಡಿಮೆ ಭೂಭಾಗ ಇರುವಲ್ಲಿ ಕೂಡಾ ಸೇಬು,ಆಪ್ರಿಕೋಟ್  ಮರಗಳಿದ್ದುವು.  ಅಲ್ಲಲ್ಲಿ ಕಾಣಿಸಿದ ಸ್ಥಳೀಯರು ‘ಜೂಲೇ’ ಎಂದು ಮುಗುಳ್ನಕ್ಕರು. ಇದು ಲಡಾಕ್ ಪ್ರದೇಶದಲ್ಲಿ ‘ನಮಸ್ತೆ’ ಎಂಬುದಕ್ಕೆ ಬಳಸುವ ಪದವಾಗಿದೆ.  ನೆಲದಲ್ಲಿ   ನಾಲ್ಕಾರು ಅಡಿ  ಉದ್ದ-ಅಗಲದ  ಹಳ್ಳ ಮಾಡಿ ಅದರಲ್ಲಿ ಜಾನುವಾರುಗಳನ್ನು ಕಟ್ಟಿರುವುದನ್ನೂ ಗಮನಿಸಿದೆವು. 

ದಾರಿಯಲ್ಲಿ ಡಾಬಾ ಒಂದರಲ್ಲಿ ಊಟದ ವ್ಯವಸ್ಥೆಯಾಯಿತು. ಸ್ಥಳೀಯ ಆಹಾರದ ರುಚಿ ನೋಡೋಣ ಎಂದು ‘ಮೋಮೋ’ ತರಿಸಿಕೊಂಡೆವಾದರೂ, ಯಾಕೋ   ಆ ಡಾಬಾದಲ್ಲಿ ಕೊಡಲಾದ  ಊಟ ಮತ್ತು ಮೋಮೋಗಳ ರುಚಿ ಹೆಚ್ಚಿನವರಿಗೆ  ಇಷ್ಟವಾಗಲಿಲ್ಲ. ಬಿಳಿ-ಕೆಂಪು ಬಣ್ಣದ ಮುದ್ದಾದ ಪುಟ್ಟ ಗಂಡುಮಗುವೊಂದು ತನ್ನ ಪೋಷಕರ ಜೊತೆಗೆ ಕೈಜೋಡಿಸುತ್ತಾ  ‘ರೋಟಿ’ ತಂದು  ಕೊಡುತ್ತಿದ್ದುದು ನಮಗೆ ಮುದ ಕೊಟ್ಟಿತು. ಆ ಮಗುವಿಗೆ ಚಾಕೋಲೇಟ್ ಕೊಟ್ಟು ಫೊಟೊ ಕ್ಲಿಕ್ಕಿಸಿದೆವು.

ಗ್ಯೂ ಮೊನಾಸ್ಟ್ರಿ /ಸ್ತೂಪ (Gue Stupa / Gue Mummy) 

ನಮ್ಮ ತಂಡದಲ್ಲಿದ್ದ ಉತ್ಸಾಹಿ ಮಹಿಳೆ  ಗೀತಾ ಶಾಸ್ತ್ರಿ ಅವರು ನಮ್ಮ ಬಳಿ  “ಟಾಬೋಗೆ  ಹೋಗುವ ದಾರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ‘ ಗ್ಯೂ  ಮೊನಾಸ್ಟ್ರಿ’ ಗೆ ಭೇಟಿ ಕೊಡೋಣವೇ? ಅಲ್ಲಿ 500 ವರ್ಷಗಳಷ್ಟು ಹಿಂದಿನ ಬೌದ್ದ ಸನ್ಯಾಸಿ ಒಬ್ಬರ ಸಂರಕ್ಷಿಸಲ್ಪಟ್ಟ ಶರೀರವಿದೆಯಂತೆ. ಇದು ನಮ್ಮ ಪ್ಲಾನ್ ನಲ್ಲಿ ಇಲ್ಲ, ಅಂದಾಜು 40  ಕಿಮೀ ದೂರ ಹೆಚ್ಚುವರಿ ಪ್ರಯಾಣವಾಗುತ್ತಿದೆ , ಎರಡು ಗಂಟೆ ಬೇಕಾಗಬಹುದು ಎಂದು ಡ್ರೈವರ್ ಅಂದರು, ಎಲ್ಲರಿಗೂ ಒಪ್ಪಿಗೆಯಾದರೆ  ಬಾಲಕೃಷ್ಣ ಅವರಿಗೆ ವಿನಂತಿಸಿಕೊಳ್ಳೋಣ”  ಎಂದರು. ನಾವೆಲ್ಲರೂ ಒಕ್ಕೊರಲಿನಿಂದ  ‘ಜೈ ಹೋ’ ಎಂದೆವು.  ಹೀಗೆ,  ಅವರ  ಮುಂದಾಳುತನದಲ್ಲಿ , ಈ ಪ್ರಯಾಣವನ್ನೂ ಸೇರಿಸಿಕೊಂಡು  ಎರಡೂ  ಟೆಂಪೋಗಳು  ‘ಗ್ಯೂ ಮೊನಾಸ್ಟ್ರಿ’ಯ ಕಡೆಗೆ ಹೊರಟುವು.

ಕಿರಿದಾದ ರಸ್ತೆಯಲ್ಲಿ ಟೆಂಪೋ  ಪ್ರಯಾಣಿಸುತ್ತಿದ್ದ ಟೆಂಪೋ ಇದ್ದಕ್ಕಿದ್ದಂತೆ ನಿಂತಿತು. ಏನಾಗಿರಬಹುದು ಎಂದು  ಮಾತನಾಡಿಕೊಳ್ಳುವಾಗ ಡ್ರೈವರ್ ರೋಹಿತ್ ಅಂದರು ‘ ಉಧರ್  ಗಾಬೂ ಹೈ, ವೋ ದೌಡ್ ನೇ ಸೆ ಗಾಡಿ ಮೆ  ಪತ್ಥರ್ ಜೊರ್ ಜಾಯೇಗಾ” ಎಂದರು.    ಆಮೇಲೆ ಸ್ಥಳೀಯರನ್ನು ಕೇಳಿದಾಗ ಗೊತ್ತಾದುದೇನೆಂದರೆ ‘ ಗಾಬೂ’ ಎಂದ  ಹಿಮಾಲಯದ  ಎತ್ತರದ ಪ್ರದೇಶದಲ್ಲಿ ವಾಸಿಸುವ ಒಂದು ವಿಧದ  ‘ವನ್ಯ ಆಡು’. ಇದು ಹಿಮದಲ್ಲಿಯೂ ಬದುಕುತ್ತದೆ. ಕಡಿದಾದ ಬೆಟ್ಟಪ್ರದೇಶದಲ್ಲಿಯೂ ಏರುವಾಗ ಅದರ ಗೊರಸಿನ  ತುಳಿತದಿಂದ ಕಲ್ಲುಗಳು ಬೀಳುತ್ತವೆ. ಐದು ನಿಮಿಷ ಕಾದು ಅಲ್ಲಿಂದ   ಹೊರಟೆವು.  ಸ್ವಲ್ಪ ದೂರ ಹೋದ ಮೇಲೆ , ಬೆಟ್ಟದ ಕಡೆಯಿಂದ ಯಾರೋ ಎಸೆದಂತೆ.  ವಾಹನದ ಮೇಲ್ಭಾಗಕ್ಕೆ ಕಲ್ಲು ಬಿದ್ದ ಸದ್ದು ಕೇಳಿಸಿತು.  ಇಲ್ಲಿಯೂ  ‘ಗಾಬೂ’ ಇದ್ದಿರಬೇಕು ಅಂದುಕೊಂಡೆವು.

ಸುಮಾರು ಒಂದು ಗಂಟೆಯ ಪ್ರಯಾಣದ ನಂತರ, ಭಾರತದ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯಲ್ಲಿ ,ಇಂಡೋ-ಟಿಬೆಟಿಯನ್ ಗಡಿಯ ಸಮೀಪರುವ , ಬೌದ್ಧ ಧರ್ಮದ ಪ್ರಮುಖ ಕ್ಷೇತ್ರವಾದ  “ಗ್ಯೂ ಹಳ್ಳಿ” ತಲಪಿದೆವು. ಇದು ಸರಾಸರಿ  12000  ಅಡಿ  ಎತ್ತರದಲ್ಲಿರುವ ಗ್ರಾಮವಾಗಿದೆ.  ಮಣ್ಣು ಮತ್ತು ಕಲ್ಲಿನಿಂದ ಕಟ್ಟಲಾದ,  ಸುಮಾರು 60  ಚಿಕ್ಕ ಮನೆಗಳನ್ನು ಹೊಂದಿರಬಹುದಾದ ಈ ಚಿಕ್ಕ ಗ್ರಾಮವಿದು.   ವರ್ಷದ ಬಹುತೇಕ ಸಮಯ ಅತಿಯಾದ  ಚಳಿ, ಗಾಳಿ ಇರುವ ಇಲ್ಲಿ  ಮೂಲ ಸೌಕರ್ಯಗಳು ಬಲು ಕಡಿಮೆ.  ಅಲ್ಲಿ ಸ್ಥಾಪಿಸಲಾಗಿದ್ದ  ಫಲಕವೊಂದರಲ್ಲಿ ,  1962 ರಲ್ಲಿ ನಡೆದ  ಇಂಡೋ-ಚೈನಾ ಯುದ್ಧದ ಸಮಯದಲ್ಲಿ ಇಲ್ಲಿ ವಾಸವಾಗಿದ್ದ  ಕಡಿಮೆ ಸಂಖ್ಯೆಯಲ್ಲಿದ್ದ  ಸ್ಠಳೀಯರು,  ತಮ್ಮ ಶೌರ್ಯ ಹಾಗೂ ಚಾತುರ್ಯದಿಂದ   ಚೀನಾ ಪಡೆಗಳನ್ನು ದಾರಿ ತಪ್ಪಿಸುವಲ್ಲಿ ಮತ್ತು ಭಾರತದ ಸೇನೆಗೆ ಮಾಹಿತಿ ಒದಗಿಸುವಲ್ಲಿ ಸಫಲರಾದರು ಎಂದು ಬರೆಯಲಾಗಿದೆ. ಆದರೆ ಈ ಸ್ಥಳೀಯ  ‘ಅನ್ ಸಂಗ್ ಹೀರೋ’ ಗಳ ಶ್ರಮ ಮತ್ತು ತ್ಯಾಗಕ್ಕೆ ಸಲ್ಲಬೇಕಾದ ಗೌರವವು ಚರಿತ್ರೆಯ ಪುಟಗಳಲ್ಲಿ ದಾಖಲಾಗಿಲ್ಲ ಎಂದೂ ಬರೆಯಲಾಗಿದೆ.

ಗ್ಯೂ ಮೊನಾಸ್ಟ್ರಿ , ಹಿಮಾಚಲ ಪ್ರದೇಶ

ಕೆಂಪು ಹಳದಿ ಬಣ್ಣಗಳಿಂದ ಶೋಭಿಸುವ  ಮೂರು ಅಂತಸ್ತುಗಳುಳ್ಳ  ” ಗ್ಯೂ ಮೊನಾಸ್ಟ್ರಿ’ . ಇದು ಭಾರತೀಯ ಸೇನೆಯ ಸುಪರ್ದಿನಲ್ಲಿದೆ.   ಮಂದಿರದ  ಒಳಗೆ ಸುಂದರವಾದ  ಪದ್ಮಸಂಭವನ  ಮೂರ್ತಿಯಿದೆ.  ಈ ಆವರಣದಲ್ಲಿ, ಪ್ರತ್ಯೇಕ ಗುಡಿಯಲ್ಲಿ  500 ವರ್ಷಗಳ  ಹಿಂದೆ ಬದುಕಿದ್ದ  ಲಾಮಾ ಸಂಘ ತೇಂಜಿನ್ (Lama Sangha Tenzin) ಅವರ , ನೈಸರ್ಗಿಕವಾಗಿ  ಸಂರಕ್ಷಿಸಲ್ಪಟ್ಟ ಶರೀರವಿದೆ.  1975 ರಲ್ಲಿ ಈ ಪ್ರದೇಶದಲ್ಲಿ ಭೂಕಂಪವಾಗಿದ್ದಾಗ, ಕುಸಿದ ಸ್ತೂಪವೊಂದರಲ್ಲಿ ಅವರ ಶರೀರ ಪತ್ತೆಯಾಗಿತ್ತಂತೆ.  ಪ್ರಸ್ತುತ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾದ ಅವರ ಶರೀರದಲ್ಲಿ ಈಗಲೂ  ಉಗುರು ಮತ್ತು  ಹಲ್ಲುಗಳು ಸ್ಪಷ್ಟವಾಗಿ ಕಾಣಿಸುತ್ತದೆ.    ಬೌದ್ಧ ಸನ್ಯಾಸಿಗಳ ವಿಶಿಷ್ಟವಾದ ಒಂದು ವಿಧದ ಧ್ಯಾನ ಭಂಗಿಯಲ್ಲಿ ಇರುವ ಈ ಶರೀರ ಮತ್ತು ಅದರ ಕತ್ತಿನ ಸುತ್ತಲು ಇರುವ ವಿಶಿಷ್ಟ ಬಟ್ಟೆಯ ತುಣುಕು ಅವರು ಸ್ವಯಂ ಇಚ್ಛೆಯ ಮೇರೆಗೆ,  ಲೋಕೋಪಕಾರಕ್ಕಾಗಿ  ದೇಹತ್ಯಾಗ ಮಾಡಿದ್ದರೆಂದು ಅಂದಾಜಿಸಲಾಗಿದೆ.

ಲಾಮಾ ಸಂಘ ತೇಂಜಿನ್ (Lama Sangha Tenzin) ಅವರ ಸಂರಕ್ಷಿಸಲ್ಪಟ್ಟ ಶರೀರ

ಇದಕ್ಕೆ ಹಿನ್ನೆಲೆಯಾಗಿ ಇರುವ  ದಂತಕತೆಯೇನೆಂದರೆ , ಮೊದಲು ಈ ಹಳ್ಳಿಯಲ್ಲಿ ಅತಿಯಾಗಿ  ಚೇಳುಗಳ ಕಾಟವಿದ್ದು, ಅದರಿಂದಾಗಿ ಜನರಿಗೆ ಆರೋಗ್ಯ ಸಮಸ್ಯೆಗಳಾಗುತ್ತಿದ್ದುವಂತೆ. ಆಗ  45 ವರ್ಷದವರಾಗಿದ್ದ   ತೇಂಜಿನ್ ಅವರ  ಜನರ ಹಿತಕ್ಕಾಗಿ   ಆಮರಣಾಂತ ಧ್ಯಾನ ಮಾಡಲು ಉದ್ದೇಶಿಸಿ, ತನ್ನ ಸುತ್ತಲೂ ಸ್ತೂಪ ಕಟ್ಟಲು ತಿಳಿಸಿದ್ದರಂತೆ. ಆಶ್ಚರ್ಯವೆಂಬಂತೆ ಅವರ ಪ್ರಾಣ ಹೋದ ದಿನ ಆಕಾಶದಲ್ಲಿ ಕಾಮನಬಿಲ್ಲು ಕಾಣಿಸಿಕೊಂಡಿತಂತೆ ಹಾಗೂ  ಈಗಲೂ ಗ್ಯೂ ಹಳಿಯಲ್ಲಿ ಚೇಳಿನ ಕಾಟ ಇಲ್ಲವಂತೆ.   ಗ್ಯೂ ಮೊನಾಸ್ಟ್ರಿಗೆ ಭೇಟಿ ಕೊಟ್ಟು ,ಅಲ್ಲಿದ್ದ  ಯೋಧರ ಬಳಿ ಸ್ವಲ್ಪ ಮಾತನಾಡಿ  ಟಾಬೋ ಕಡೆಗೆ ಪ್ರಯಾಣಿಸಿದೆವು.   ಟಾಬೋದಲ್ಲಿ ‘ ಹೋಟೆಲ್  ಹುನ್ಪೋ ಹೌಸ್’ ಎಂಬಲ್ಲಿ ನಮ್ಮ ವಾಸ್ತವ್ಯವಿತ್ತು. ಸಂಜೆಯ ಚಹಾ, ಪಕೋಡ ಸೇವನೆ ಆದ ಮೇಲೆ  ನಮ್ಮ ತಂಡದ ಸದಸ್ಯರೆಲ್ಲರೂ  ಪರಸ್ಪರ ಪರಿಚಯ ಮಾಡಿಕೊಳ್ಳುವ ಕಾರ್ಯಕ್ರಮವಿತ್ತು. ಅದಾದ ಮೇಲೆ ದರ್ಶನ್ ಅವರ ಅಡುಗೆ ಮತ್ತು ಸ್ಥಳೀಯ ಅಡುಗೆಯೊಂದಿಗೆ ರುಚಿಕಟ್ಟಾದ  ಭೋಜನವಾಗಿ , ವಿಶ್ರಾಂತಿ.     

ಈ ಪ್ರವಾಸಕಥನದ ಹಿಂದಿನ ಭಾಗ ಇಲ್ಲಿದೆ: https://surahonne.com/?p=46228

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *