ಕಣ್ಣೀರು ಅದೆಷ್ಟೊಂದು ಭಾರ
ಕೆಳಗೆ ಜಾರಿದಾಗಲೇ ಗೊತ್ತಾಗಿದ್ದು
ನೋವುಗಳ ಹೊತ್ತುಕೊಳ್ಳಬಾರದಿಲ್ಲಿ
ಎಲ್ಲವೂ ಸರಾಗವಾಗಿ ಸಾಗುತ್ತಿರಬೇಕಿಲ್ಲಿ
ಭಾವನೆಗಳ ಸಂತೆಯಲ್ಲಿ ಕಳೆದು ಹೋದರೆ
ಎದ್ದು ಮತ್ತೆ ಮೇಲೆ ಬರುವುದು ಕಷ್ಟ
ಜೋಪಾನವಾಗಿ ಇದ್ದುಬಿಡು ಮನಸೆ
ಬದುಕು ಸಾಗುವುದಿಲ್ಲ ನಮ್ಮಿಷ್ಟದಂತೆ
ಬರುವುದು ಬರಲಿ ಹೋಗುವುದು ಹೋಗಲಿ
ಎಷ್ಟು ನೀರು ಬಂದು ಸೇರಿದರೂ
ಬದಲಾಗದು ಸಾಗರದ ಗಾತ್ರ ಪಾತ್ರ
ಅಲೆಗೆ ಸಿಕ್ಕಂತಾಗಬಾರದು ಜೀವನ ಸೂತ್ರ
ಸಾಗರವು ಇಟ್ಟುಕೊಳ್ಳದು ಯಾವುದೇ
ಕಸವನ್ನು ಎಂದೂ ತನ್ನ ಒಡಲೊಳಗೆ
ಎಲ್ಲವನ್ನು ತಂದೆಸೆಯುವುದು ದಡದ ಬಳಿಗೆ
ಸ್ವಚ್ಛಂದವಾಗಿರಲು ತಾನು ತನ್ನೊಳಗೇ
ಬೇಡದ ವಿಷಯವ ಒಳಗಡೆ ತುಂಬಿಕೊಳ್ಳದೆ
ಎಲ್ಲವನ್ನು ನೂಕಿ ಹಾಕಿಬಿಡಬೇಕು ಹೊರಗೆ
ನಿಷ್ಕಲ್ಮಶ ಭಾವನೆಗಳನ್ನು ಹೊಂದಬೇಕು
ಅನಗತ್ಯ ಭಾವನೆಗಳ ತುಂಬಿಕೊಳ್ಳದೆ ಮನದೊಳಗೆ
ಸುರಿಸಿದ ಕಣ್ಣೀರು ನೋವಿನಭಾರ ಇಳಿಸುವುದು
ನೊಂದ ಮನಸ್ಸಿಗೆ ಹೊಸ ಚೈತನ್ಯ ತುಂಬುವುದು
ಯಾವುದೇ ಹೊರೆಯನ್ನು ಹೆಚ್ಚು ಕಾಲ ಹೊತ್ತುಕೊಳ್ಳಬಾರದಿಲ್ಲಿ
ಎಲ್ಲವನ್ನೂ ಅಲ್ಲಲ್ಲೇ ಇಳಿಸಿ ಹಗುರಾಗಬೇಕಿಲ್ಲಿ
ನೆಮ್ಮದಿಯ ಭಾವವನ್ನು ಉಳಿಸಿಕೊಳ್ಳಬೇಕಿಲ್ಲಿ
ನಾಗರಾಜ್ ಜಿ.ಎನ್.ಬಾಡ,ಕುಮಟ

