ಪ್ರವಾಸ

ಪ್ರವಾಸ ಕಥನ: ಸ್ಪಿಟಿ-ಸ್ಥಿತಿ-ಗತಿ- ಭಾಗ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕಮ್ರು ಕೋಟೆ ( Kamru Fort)

ಚಿತ್ಕುಲ್ ನಿಂದ ಸುಮಾರು 25 ಕಿಮೀ ದೂರದಲ್ಲಿ, ಸಾಂಗ್ಲಾ ಕಣಿವೆಯಲ್ಲಿರುವ ಕಮ್ರು ಕೋಟೆಯತ್ತ ನಮ್ಮ ಪಯಣ ಮುಂದುವರಿಯಿತು.  ಇದು ಸಾಂಗ್ಲಾ ಪಟ್ಟಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಪ್ರವಾಸಿ ಆಕರ್ಷಣಾ ಸ್ಥಳವಾಗಿದೆ.   ವಾಹನ ನಿಲುಗಡೆ  ಪ್ರದೇಶದಿಂದ ಸುಮಾರು  ಹತ್ತು ನಿಮಿಷ  ಸೇಬು ತೋಟಗಳ ನಡುವಿನ ಕಾಲುದಾರಿಯಲ್ಲಿ ನಡೆದಾಗ  ಪುರಾತನವಾದ  ಕೋಟೆ ಕಾಣಿಸುತ್ತದೆ.

ಕಮ್ರು ಕೋಟೆಯ ಬಗ್ಗೆ ಸ್ಥಳೀಯರಿಗೆ ಧಾರ್ಮಿಕ ಗೌರವ ಭಾವನೆಯಿದೆ. ಕೋಟೆಯನ್ನು ಪ್ರವೇಶಿಸಲು ಸಭ್ಯ ವಸ್ತ್ರಸಂಹಿತೆಯಿದೆ. ಚಪ್ಪಲಿ ಧರಿಸಬಾರದು, ಪ್ರಾಣಿಜನ್ಯ ವಸ್ತುಗಳಾದ ಪರ್ಸ್ , ಬೆಲ್ಟ್ ಇತ್ಯಾದಿಗಳನ್ನು ಹೊಂದಿರಬಾರದು, ಮಾಂಸಾಹಾರ ಸೇವಿಸಿರಬಾರದು. ನಮ್ಮ ತಲೆಗೆ ಹಾಕಿಕೊಳ್ಳಲು ಸಾಂಪ್ರದಾಯಿಕ  ‘ಕಿನ್ನೌರಿ ಟೋಪಿ’  ಮತ್ತು ಸೊಂಟಕ್ಕೆ  ಕಟ್ಟುವ  ‘ಕಮ್ರು ಬಂದ್’ ಎಂದು ಕರೆಯಲಾಗುವ ಬಟ್ಟೆಯ ದಾರವನ್ನು ಕೊಡುತ್ತಾರೆ.  ಹೀಗೆ ನಾವು  ಅವರ ವಸ್ತ್ರ ಸಂಹಿತೆಯನ್ನು ಪಾಲಿಸಿ , ಕಮ್ರು  ಕೋಟೆಯ ದರ್ಶನ ಮಾಡಿದೆವು.

ಕಮ್ರು ಕೋಟೆ

ಕಲ್ಲುಗಳು ಮತ್ತು ದೇವದಾರು ಮರಗಳ  ದಿಮ್ಮಿಗಳಿಂದ ಕಟ್ಟಲಾದ ಕಮ್ರು ಕೋಟೆಗೆ ಸಾವಿರಾರು ವರ್ಷಗಳ  ಇತಿಹಾಸವಿದೆ.   ಸಾಂಪ್ರದಾಯಿಕ ಕಿನ್ನೌರಿ ಶೈಲಿಯ ಈ ಕೋಟೆಯಲ್ಲಿ 15ನೇ ಶತಮಾನಕ್ಕೆ ಸೇರಿದ ಬದರಿನಾಥ್ ದೇವಸ್ಥಾನವಿದೆ. 55 ಚದರ ಅಡಿ ವಿಸ್ಟೀರ್ಣದ ಕಲ್ಲಿನ ತಳಪಾಯದ ಮೇಲೆ ಕಟ್ಟಲಾದ ಐದು ಅಂತಸ್ತುಗಳನ್ನು ಹೊಂದಿದ   ಇನ್ನೊಂದು ಪುರಾತನ ಗೋಪುರವಿದೆ. ಶಿಥಿಲವಾಗಿರುವ  ಈ ಮಂದಿರವನ್ನು ನವೀಕರಿಸಿ ಸಂರಕ್ಷಿಸಿದ್ದಾರೆ.  ಹಿಂದೆ ಕಮರಾಪುರ್ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶವನ್ನು ಮೂಲ ಕೇಂದ್ರವಾಗಿರಿಸಿಕೊಂಡು,  ಹಿಮಾಚಲ ಪ್ರದೇಶದ ಬುಷಹರ್ ವಂಶದ ರಾಜರುಗಳು  ಆಳುತ್ತಿದರಂತೆ.   ಆ ವಂಶದ ರಾಜರು  ಗೌಹಾಟಿಯಿಂದ  ಕಾಮಾಖ್ಯ ದೇವಿಯ ಮೂಲವಿಗ್ರಹವನ್ನು ತಂದು ಇಲ್ಲಿ ಮಂದಿರದ ಮೂರನೆಯ ಅಂತಸ್ತಿನಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂದು ಸ್ಥಳೀಯರು ತಿಳಿಸುತ್ತಾರೆ.   

ಕರ್ಚಮ್- ರೋಲಾ ಕ್ಲಿಫ಼್’- ರೋಗಿ ಹಳ್ಳಿ

ಕಮ್ರು ಕೋಟೆಗೆ ಭೇಟಿ ಕೊಟ್ಟು , ಆದಿನ ನಾವು ಉಳಕೊಳ್ಳಲಿದ್ದ ‘ಕಲ್ಪ’ ದ ಕಡೆಗೆ  ಪ್ರಯಾಣ ಮುಂದುವರಿಸಿದೆವು. ಹಿಮಾಲಯದ  ಅಗಲ ಕಿರಿದಾದ ರಸ್ತೆಗಳಲ್ಲಿ ಬಸ್ಸುಗಳು ಹೋಗಲು ಸಾಧ್ಯವಾಗದ ಕಾರಣ,  21 ಜನರಿದ್ದ ನಮ್ಮ ತಂಡಕ್ಕಾಗಿ ಎರಡು ಟೆಂಪೋ ಟ್ರಾವೆಲರ್ಸ್ ಗಳಿದ್ದುವು.  ನಮ್ಮ ವಾಹನದಲ್ಲಿ  ಡಾ.ಪ್ರಹ್ಲಾದ ರಾವ್ ಅವರ ಹಾಡುಗಾರಿಕೆ, ಮೊಬೈಲ್ ನಲ್ಲಿ  ಹಾಡು ಕೇಳುವುದು, ಗಣೇಶ್ ಗಟ್ಟಿ ಅಥವಾ ಬಾಲಕೃಷ್ಣ ಅವರು ಸ್ಥಳ ವಿಶೇಷತೆಗಳನ್ನು  ತಿಳಿಸುವುದು ಇತ್ಯಾದಿ  ಉಪಕಾರ್ಯಕ್ರಮಗಳಿದ್ದುವು.  ಇತರ ಸಮಯ ಮಾತುಕತೆ, ಹೊರಗಡೆ ನೋಡುವುದು ಅಥವಾ ತೂಕಡಿಕೆ ಸಾಗಿತ್ತು.   ತಂಡದ  ಕೆಲವರು ತಂದಿದ್ದ  ಕುರುಕುಲು ತಿನಿಸು, ಚಾಕೋಲೇಟ್, ಸಿಹಿ ಇತ್ಯಾದಿಗಳ  ಹಂಚುವಿಕೆಯೂ  ನೆರವೇರಿತು.

ಹಿಮಾಚಲ ಪ್ರದೇಶದ  ಈ ದಾರಿಯಲ್ಲಿ ಕಾಣಸಿಕ್ಕಿದ ಕೆಲವು ಊರಿನ ಹೆಸರುಗಳು ‘ನಾಲಿಗೆ ತೊದಲುವಿಕೆಗೆ’ ಸೂಕ್ತವಾಗಿದ್ದುವು.  ಉದಾ: ಜ್ಯೊರಿ (Jeori), ತಪ್ರಿ (Tapri), ಕರ್ಚಮ್ (Karcham), ವಾಂಗ್ಟೋ (Wangtoo),  ಕಿನ್ನೌರ್ (Kinnaur) ವ್ಯಾಲಿ ಇತ್ಯಾದಿ.   2005-2011 ರ ಅವಧಿಯಲ್ಲಿ  ಕರ್ಚಮ್  ಮತ್ತು ವಾಂಗ್ಟೂ ಹಳ್ಳಿಗಳ ಮಧ್ಯೆ , ಸಟ್ಲೆಜ್ ನದಿಗೆ ಅಣೆಕಟ್ಟು ಕಟ್ಟಲಾಗಿದ್ದು, ಇದು  ಹಿಮಾಚಲ ಪ್ರದೇಶದಲ್ಲಿರುವ ಪ್ರಮುಖ ಜಲವಿದ್ಯುತ್ ಉತ್ಪಾದನಾ ಘಟಕವನ್ನು ಹೊಂದಿದೆ.

ಕರ್ಚಮ್ ನಿಂದ   ಸುಮಾರು ಒಂದು ಗಂಟೆ ಪ್ರಯಾಣಿಸಿದಾಗ   ‘ರೋಗಿ’ (Roghi) ಎಂಬ ಅಪ್ಪಟ ಹಿಮಾಚಲಿ ಹಳ್ಳಿ ಸಿಗುತ್ತದೆ. ಇಲ್ಲಿಗೆ ಬರುವ  ದಾರಿಯಲ್ಲಿ   ‘ ರೋಲಾ ಕ್ಲಿಫ಼್’  (Rolla Cliff) ಎಂಬ ಕಡಿದಾದ  ಸ್ಥಳವನ್ನು ‘ಸುಸೈಡ್ ಪಾಯಿಂಟ್’ ಎಂದು ಕರೆಯುತ್ತಾರೆ.  ಇಲ್ಲಿ 90 ಡಿಗ್ರಿ ಕಡಿದಾದ  ಪ್ರಪಾತವಿದ್ದು, ತಳದಲ್ಲಿ ಸಟ್ಲೆಜ್ ನದಿ ಹರಿಯುತ್ತದೆ.   ‘ಇದು ನಂದಿ ಬೆಟ್ಟದ ಟಿಪ್ಪು ಡ್ರಾಪ್ ಗಿಂತ ಮೂರು ಪಟ್ಟು ಆಳ ಇರಬಹುದು’  ‘ಶಿವಗಂಗೆ ಬೆಟ್ಟ ನೆನಪಾಗುತ್ತಿದೆ’ ಎನ್ನುತ್ತಾ ಅಚ್ಚರಿ ಪಟ್ಟೆವು.

ನಮ್ಮ  ವಾಹನದಲ್ಲಿ ಡಾ.ಪ್ರಹ್ಲಾದ ರಾವ್ ಮತ್ತು ಡಾ.ಬಾಲಸುಬ್ರಹ್ಮಣ್ಯ  ಭಟ್ ಇದ್ದರು, ಕಳೆದ ಮೂರು-ನಾಲ್ಕು ದಿನಗಳಿಂದ  ‘ರೋಗಿ’ಗಳಿಲ್ಲದೆ ಅವರಿಗೆ ಕೆಲಸವಿರಲಿಲ್ಲವಷ್ಟೆ. ಇಲ್ಲಿ ‘ರೋಗಿ’ಗಳು ಸಿಗುತ್ತಾರೋ ನೋಡೋಣ ಎಂದು ಹಾಸ್ಯ ಮಾಡುತ್ತಾ  ಆ ಹಳ್ಳಿಯಲ್ಲಿ ಸುತ್ತಾಡಿದೆವು.  ಕಿನ್ನೌರಿ  ಜನವಸತಿ ವಲಯದಲ್ಲಿ,  ಸಮುದ್ರ ಮಟ್ಟದಿಂದ  9000 ಅಡಿ ಎತ್ತರದಲ್ಲಿರುವ ಹಳೆಯ  ಹಳ್ಳಿ ‘ರೋಗಿ’ .  ಮರ ಹಾಗೂ ಕಲ್ಲಿನ ಚಪ್ಪಡಿಗಳನ್ನು  ಬಳಸಿ ಕಟ್ಟಿದ , ಬಳಪದ ಕಲ್ಲಿನ ಹೆಂಚನ್ನು ಹೊದಿಸಿದ  ಸಣ್ಣ ಮನೆಗಳು,  ತಂಗಾಳಿಗೆ ಪಟಪಟಿಸುವ ಬೌದ್ಧ ಧರ್ಮೀಯರ ಬಣ್ಣಬಣ್ಣದ ಪತಾಕೆಗಳು,  ಮರದ ಸುಂದರವಾದ ಕೆತ್ತನೆಯುಳ್ಳ  ‘ನಾರಾಯಣ  ಮಂದಿರ್ ‘, ಸೇಬು-ಆಪ್ರಿಕೋಟ್ ಹಣ್ಣಿನ ಮರಗಳು,  ನವೀಕರಣಗೊಳ್ಳುತ್ತಿರುವ ಕೆಲವು ಕಟ್ಟಡಗಳು, ಬೀಸಿ ಬರುವ ಚಳಿಗಾಳಿ, ವರ್ಷದ ಆರು ತಿಂಗಳು ಹಿಮಪಾತ……..ಇಂತಿಪ್ಪ ಪರಿಸರದಲ್ಲಿ ಬೆಟ್ಟದ ಮೇಲೆ  ಜೀವನ ಕಟ್ಟಿಕೊಂಡಿರುವ ಕಷ್ಟಸಹಿಷ್ಣು ಜನರ ಜೀವನ ಶೈಲಿಯ ಕಿರುಪರಿಚಯ ನಮಗಾಯಿತು.

ನಾರಾಯಣ  ಮಂದಿರ್, ‘ರೋಗಿ’ ಹಳ್ಳಿ

‘ರೋಗಿ’ ಹಳ್ಳಿಗೆ  ಭೇಟಿಯ ನಂತರ  ‘ಕಲ್ಪ’ ಎಂಬಲ್ಲಿ ನಾವು ಉಳಕೊಳ್ಳಲಿರುವ ಹೋಟೆಲ್ ಶೀತಲ್ ಗೆ ಬಂದೆವು. ಅದಾಗಲೇ ರಾತ್ರಿಯಾಗಿತ್ತು,  ಟ್ರಾವೆಲ್ ಫಾರ್ ಯು ತಂಡದಿಂದ ಬಂದಿದ್ದ   ದರ್ಶನ್   ನಮ್ಮೊಡನೆ ಬಂದಿದ್ದರೂ, ಅದ್ಯಾವುದೋ ಮಾಯೆಯಲ್ಲಿ ಹೋಟೆಲ್ ನ ಅಡುಗೆ ಮನೆ ಸೇರಿ, ತಮ್ಮ ಪಾಕ ಕೌಶಲ ಆರಂಭಿಸುತ್ತಿದ್ದರು.  ಇವರು,  ನಮ್ಮ ಪ್ರವಾಸದ ಸಂದರ್ಭದಲ್ಲಿ ಅವಕಾಶವಿದ್ದ ರೆಸ್ಟಾರೆಂಟ್ ಗಳಲ್ಲಿ,  ಅತಿ ಕಡಿಮೆ ಸಮಯದಲ್ಲಿ, ಸಂದರ್ಭಕ್ಕೆ ತಕ್ಕಂತೆ  ಉಪ್ಪಿಟ್ಟು, ಕೇಸರಿಭಾತ್,  ಅವಲಕ್ಕಿ,  ಸಾಂಬಾರು, ಪಾಯಸ, ಪಕೋಡ, ಕಡಲೆಬೇಳೆ ವಡೆ, ಉದ್ದಿನ ವಡೆ ಮೊದಲಾದುವುಗಳನ್ನು  ತಯಾರಿಸಿ ನಮಗೆ ಬಡಿಸಿದ್ದರು.  ಇವರು ತಯಾರಿಸಿದ ವಡೆಗಳಂತೂ  ಹಿಮಾಲಯದ ಚಳಿಯ ವಾತಾವರಣಕ್ಕೆ  “ಅಹಾ  ಸೂಪರ್ ” ಎನಿಸುತ್ತಿದ್ದುವು.     ಹೀಗೆ ಸ್ಥಳೀಯ ಬಫೆ ಉಪಾಹಾರ/ಊಟದ ಜೊತೆಗೆ ‘ದರ್ಶನ್  ಸ್ಪೆಷಲ್’ ಅಡುಗೆಯೂ ನಮಗೆ ಲಭಿಸುತ್ತಿತ್ತು. ತಾನೂ ಸಿದ್ಧರಾಗಿ ಹೊರಡಬೇಕಾಗಿದ್ದ ಕಾರಣ, ಕೆಲವು ಬಾರಿ ಈ ಗಡಿಬಿಡಿಯಲ್ಲಿ ಅವರಿಗೆ ತನ್ನ ಊಟ-ತಿಂಡಿ ಮಾಡಿಕೊಳ್ಳಲು ಸಮಯ ಸಿಗುತ್ತಿರಲಿಲ್ಲ ಎಂದೂ ಗೊತ್ತಾಯಿತು. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಈ ಪ್ರವಾಸಕಥನದ ಹಿಂದಿನ ಭಾಗ ಇಲ್ಲಿದೆ: https://surahonne.com/?p=46124

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *