ಪೌರಾಣಿಕ ಕತೆ

ಕಾವ್ಯ ಭಾಗವತ 114 : ಭಾಗವತ ಧರ್ಮ

Share Button

ಏಕಾದಶ ಸ್ಕಂದ – ಅಧ್ಯಾಯ – 1
ಭಾಗವತ ಧರ್ಮ

ಜನಕರಾಜನ ಪ್ರಾರ್ಥನೆಗೆ ಉತ್ತರವಾಗಿ
ಒಂಭತ್ತು ಮಂದಿ ಮುನಿಯೋತ್ತಮರು ನೀಡಿದ
ಮನುಷ್ಯ ಜನ್ಮ ಸಾರ್ಥಕ್ಯಕೆ ಭಗವತ್‌ ಪ್ರಾಪ್ತಿಯ
ಪುರುಷಾರ್ಥಕೆ ಸಾಧನೋಪಾಯವೇ
ಭಾಗವತ ಧರ್ಮ

ಪ್ರಕೃತಿಯಿಂದ ನಿತ್ಯವೂ ವಿವಿಧ ಪರಿಣಾಮಗಳ
ಹೊಂದುತ್ತಿರುವ ಮನುಜ ದೇಹವೇ ತಾನೆಂದು
ಭ್ರಮಿಸುವುದೇ ಭಯಕೆ ಕಾರಣವು

ಭಗವಂತನ ಪಾದಾರವಿಂದಗಳ
ನಿರಂತರ ಸ್ವರಣೆಯೊಂದೇ
ಸರ್ವಭಯ ನಿವಾರಕ
ವೇದಶಾಸ್ತ್ರಾದಿಗಳ ಮೂಲಕ
ಆತ್ಮ ಪರಮಾತ್ಮ ವಿವೇಕವ ಹೊಂದಲಾರದ
ಅಜ್ಞ ಜನರಿಗೆ ತನ್ನ ಕಥಾಶ್ರವಣ ಸ್ವರಣೆಗಳ
ಪಂಚರತ್ನಾದಿ ಆಗಮಗಳ ಮೂಲಕ
ಸೂಚಿಸಿರ್ಪ ಉಪಾಯವೇ ಭಾಗವತ ಧರ್ಮ

ಈ ಭಾಗವತ ಧರ್ಮ ಮಾರ್ಗದಿ ನಡೆಯೆ
ಸಕಲ ಬಗೆಯ ವಿಘ್ನ ಪ್ರಮಾದಗಳ ಹೊಂದದೆ
ನಿರ್ಭಯನಾಗುವನು ಮನುಜ
ಮನುಜನು ತನ್ನ ಮನಸ್ಸು ವಾಕ್ಕು ಕಾಯ
ಎಂಬ ತ್ರಿಕರಣದಿಂದಾಗಲೀ
ಜ್ಞಾನೇಂದ್ರಿಯ ಕರ್ಮೇಂದ್ರಿಯಗಳಿಂದಾಗಲೀ
ಮನಸ್ಸು ಬುದ್ಧಿಗಳಿಂದಾಗಲೀ ನಡೆಸುವ
ಎಲ್ಲ ಲೌಕಿಕ ವೈದಿಕ ಕರ್ಮಗಳ
ಸರ್ವಭೂತಾಂತರಾತ್ಮ ಶ್ರೀಮನಾನರಾಯಣನಿಗೆ
ಅರ್ಪಿತವೆಂಬ ಭಾವದಿ ನಡೆಸಿದರಾಯಿತು

ಕೆಲ ಮಂದಮತಿಗಳು ತಾವೇ ಸ್ವತಂತ್ರವೆಂಬ ಭ್ರಮೆಯಲ್ಲಿರೆ
ಈ ಸ್ವಾತಂತ್ರಾಭಿಮಾನವೇ ಭಯ ಭ್ರಮೆಯುಂಟಾಗಿ ನರಳುವರು
ಚಂಚಲ ಮನವ ನಿಗ್ರಹಿಸಿ ಸ್ವಾಧೀನಕೆ ಪಡೆವ ಮಾರ್ಗ ಒಂದಿದೆ

ಭಗವಂತನು ಸರ್ವೋತ್ತಮನೆಂದು ತಿಳಿದು
ಅನೇಕಾನೇಕ ಅವತಾರಗಳಲ್ಲಿ
ಹರಿನಡೆಸಿದ ಅದ್ಭುತ ಕಾರ್ಯಗಳ
ಪುರಾಣೇತಿಹಾಸಗಳ ಕೇಳುತ
ಹರಿನಾಮ ಸಂಕೀರ್ತನೆಯಲಿ
ಸದಾ ಇರಲು ಮನ ಭಗವಂತನಲಿ
ಸುಸ್ಥಿರವಾಗಿ ನಿಲ್ಲುವುದು
ಚಂಚಲವೃತ್ತಿ ನೀಗುವುದು

ಆಕಾಶ ವಾಯು ಅಗ್ನಿ ಜಲ ಭೂಮಿ
ಜ್ಯೋತಿರ್ಗೋಳಗಳು ಚರಚರಾತ್ಮಕ ಪ್ರಾಣಿಗಳು
ವೃಕ್ಷ ನದಿಗಳು ಪರ್ವತಗಳಾದ ಸಕಲವೂ
ಅವುಗಳ ಅಂತರಾತ್ಮನಾದ ಭಗವಂತನ
ಸ್ಥೂಲ ದೇಹವೆಂಬ ಭಾವನೆಯಲಿ
ಭಗವಂತನ ಸರ್ವತಾ ಭಾವಿಸಲು
ಬಹುಸಹಾಯಕ ಉಪಾಯ

ಮನುಜನಾಯುಷ್ಯ ಅತ್ಯಲ್ಪ
ಅದಕಾಗಿ ಚಿಂತಿಸದೆ ಪ್ರತೀ ಕ್ಷಣದಲೂ
ಭಗವತ್‌ ಚಿಂತನೆಯಲಿ ಇದ್ದು
ಆಹಾರ ಸೇವಿಪ ಸಮಯದಿ ಪ್ರತಿ ತುತ್ತಲೂ
ಮನಸ್ತುಷ್ಟಿ, ದೇಹಪುಷ್ಟಿ ಹಸಿವಡಗುವಿಕೆ
ಹೇಗೆ ಏಕಕಾಲದಿ ಸಾಧಿಪುದೋ
ಹಾಗೆಯೇ ಭಗವಧ್ಯಾನದಿ
ತತ್ವಜ್ಞಾನ ಸಾಧನೆ ಭಕ್ತಿ ವಿಷಯವಿರಕ್ತಿ
ಕ್ರಮಕ್ರಮವಾಗಿ ಲಭಿಸುವುವು
ಅದರಿಂ ನಿರತಿಶಯ
ಶಾಂತಿ ಮೋಕ್ಷ ಲಭ್ಯವಾಗದೇ?

ಹೀಗೆ ಮೋಕ್ಷಯೋಗ್ಯ ಭಗವದ್ಭಕ್ತನು
ಸೂರ್ಯಕಿರಣಗಳು ಭೂಮಿಯ ಪಾವನಿಸುವ
ತೆರದಿ ತನ್ನ ಪಾದ ಸ್ಪರ್ಶದಿ ಲೋಕವ ಪಾವನಗೊಳಿಸುತ
ಪವಿತ್ರಾತ್ಮನಾಗಿ ಸಂಚರಿಪನು

ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=45843

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *