ಪರಾಗ

ಬಾರದು ಬಪ್ಪದು – ಬಪ್ಪದು ತಪ್ಪದು

Share Button

ಮಂಚದ ಮೇಲೊಂದು ಪುಟ್ಟ ಸ್ಟೂಲ್ಲನ್ನು ಇಟ್ಟು ಅದರ ಮೇಲೆ ನಿಂತಿದ್ದಳು, ಇಪ್ಪತ್ತೊಂಬತ್ತು ವಯಸ್ಸಿನ ನಾಲ್ಕು ತಿಂಗಳ ಗರ್ಭಿಣಿ ವೈದೇಹಿ. ತಾನೇ ಮೇಲಿನ ಫ್ಯಾನಿಗೆ ಸಿಕ್ಕಿಸಿದ್ದ ಸೀರೆಯ ಕುಣಿಕೆಗೆ ಕೊರಳೊಡ್ಡಿ, ನಿಂತಿದ್ದ ಸ್ಟೂಲನ್ನು ಜೋರಾಗೊಮ್ಮೆ ಒದ್ದು, ಜೀವನವನ್ನು ಕೊನೆಗಾಣಿಸಿಕೊಳ್ಳುವ ಮುಂಚೆ, ಕಣ್ಣುಗಳ ಮುಚ್ಚಿ ಸ್ವಗತದಲ್ಲಿ ಹೇಳಿಕೊಂಡಳು –

ಹೌದು, ಆತ್ಮಹತ್ಯೆ ಮಹಾಪಾಪ ಎಂದು ಗೊತ್ತಿದೆ, ಆದರೇನು ಮಾಡಲಿ, ಜೀವನ ಮಹಾನರಕವಾದಾಗ, ಬದುಕಲು ದಾರಿಯೇ ಕಾಣದೆ ಬಂಡೆಕಲ್ಲ ಮುಂದೆ ನಿಂತಾಗ, ನರಕವನ್ನು ಅನುಭವಿಸುವ ಶಕ್ತಿ ಕುಗ್ಗಿ ಹೋದಾಗ ಬೇರೇನೂ ತೋಚುತ್ತಿಲ್ಲ, ನಾನೇನೋ ನನ್ನ ಸಾತ್ವಿಕ ಆಸೆ ಆಕಾಂಕ್ಷೆಗಳೊಡನೆ ಬದುಕಲಾಗದ್ದಕ್ಕೆ ಈ ನಿರ್ಧಾರ ತಗೆದುಕೊಂಡೆ ಎಂದುಕೊಂಡರೂ, ತೀವ್ರ ದುಖಃವಾಗುತ್ತಿರುವುದು ಹೊರಗಿನ ಕೋಣೆಯಲ್ಲಿ, ಒಳ್ಳೆಯ ನಿದ್ರೆ ಬಂದುಬಿಡಲೆಂದು ತಾನೇ ಕೈಯಾರ ಹೆಚ್ಚಾದ ಗಸಗಸೆ ಹಾಕಿ ಮಾಡಿದ ಪಾಯಸವನ್ನು ತೃಪ್ತಯಿಂದ ಕುಡಿದು ತುಟಿಯಂಚಿನಲ್ಲಿ ನಸುನಗೆಯರಳಿಸಿ ಗಾಢ ನಿದ್ರೆಗೆ ಜಾರಿರುವ ನಾಲ್ಕು ವರ್ಷದ ನನ್ನ ಕಂದಮ್ಮ ಹರ್ಷನ ಜೀವನವನ್ನು ನರಕವಾಗಿಸಿ ಈ ಭುವಿಯಲ್ಲಿ ಒಂದೇ ಮಗುವನ್ನು ಬಿಟ್ಟು ಹೋಗುತ್ತಿರುವುದೂ ಒಂದು ರೀತಿಯಲ್ಲಿ ಕೊಲೆಗೆ ಸಮಾನವಾದುದೇ ಅಲ್ಲವೇ , ಅಲ್ಲದೆ ಹೊಟ್ಟೆಯೊಳಗಿರುವ ಮತ್ತೊಂದು ಕುಡಿ, ಈ ರಾತ್ರಿ ಮೂರು ಮೂರು ಜೀವಾತ್ಮಗಳ ಸಾವಿಗೆ ನಾನೇ ಕಾರಣ . . . ., ಹೌದು ನಾನೇ ಕಾರಣ . . . ಎಂದುಕೊಳ್ಳುತ್ತಾ, ಇನ್ನು ಹೆಚ್ಚು ಯೋಚಿಸಿದರೆ ಹಲವಾರು ದಿನಗಳು ಯೋಚಿಸಿ, ಬೇರೆ ದಾರಿ ಕಾಣದೆ, ವಿಧಿಯಿಲ್ಲ ಎಂದಾದಾಗ ತಾಗೆದುಕೊಂಡ ನಿರ್ಧಾರ ಬದಲಾಗಿಬಿಡಬಹುದು, ಬೇಡ… ಬೇಡ …, ಎಂದುಕೊಳ್ಳುತ್ತಾ ಕಾಲ ಕೆಳಗಿನ ಸ್ಟೂಲನ್ನು ಝಾಡಿಸಿ ಒದೆಯುವ ಮುಂದೊಮ್ಮೆ ದೊಡ್ಡದಾಗಿ ಕಣ್ಣುಗಳನ್ನು ಅರಳಿಸಿ ತನ್ನ ಮನೆ, ಈ ಜಗವನ್ನೊಮ್ಮೆ ನೋಡೋಣ – ಎಂದೆಂದುಕೊಳ್ಳುತ್ತಾ ನೀರು ತುಂಬಿದ್ದ ಕಣ್ಣುಗಳನ್ನು ನಿಧಾನವಾಗಿ ಬಿಟ್ಟು ಸುತ್ತಲೂ ನೋಡುತ್ತಿರಲು, ಕಾಲ ಬಳಿಯ ನೆರಿಗೆಯನ್ನು ಜಗ್ಗಿದಂತಾಯಿತು –

ಕೆಳಗೆ ನೋಡಿದರೆ, ಮಂಚದ ಬಳಿ ಬಂದು ನಿಂತಿದ್ದ ಹರ್ಷ ಸೀರೆಯನ್ನು ಜಗ್ಗುತ್ತಿತ್ತು, ಮುಗ್ದತೆಯ ಪ್ರತಿರೂಪವಾದ ಕಣ್ಣುಗಳಲ್ಲಿ ʼಈ ಸಾವು ನ್ಯಾಯವೇ . .?ʼ ಎಂದು ಕೇಳುವಂತಿತ್ತು. ಬಾಯಲ್ಲಿ ʼಅಮ್ಮಾ . . . ಅಮ್ಮಾ . . .ʼ ಎನ್ನುತಿತ್ತು.

ವೈದೇಹಿಯ ನಿರ್ಧಾರವೆಲ್ಲಾ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ಸೀರೆಯ ಕುಣಿಕೆಯನ್ನು ಕತ್ತಿನಿಂದ ತೆಗೆದು ಬಿಸುಟು ಕೆಳಗಿಳಿದು ಹರ್ಷನನ್ನು ಎದೆಗಪ್ಪಿ, ತನ್ನ ನಿರ್ಧಾರಕ್ಕೆ ಕ್ಷಮೆ ಯಾಚಿಸುವ ಪರಿಯಲ್ಲಿ ಲೊಚಲೊಚನೆ ಮುತ್ತಿಟ್ಟು, ಅಡುಗೆ ಮನೆಯಲ್ಲಿಟ್ಟ ದೇವರ ಪಟದೆದಿರು ಬಂದು ನಿಂತು ಕೈ ಮುಗಿದಳು – ನನಗೇ ಬಾಳ ಸಾಗಿಸುವುದು ಕಷ್ಟ ಎಂದಾದಾಗ, ಇನ್ನು ಈ ಕಂದನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವ, ಗರ್ಭದಲ್ಲಿರುವ ಕೂಸಿನ ಜೀವನವನ್ನೂ ನನ್ನೊಂದಿಗೇ ಕೊನೆಗಾಣಿಸಿಕೊಳ್ಳುವ ನಿರ್ಧಾರಕ್ಕೆ ತಿಲಾಂಜಲಿ ಬಿಟ್ಟೆ ದೇವರೇ, ಬಾಳ ಸಾಗಿಸುವ ಪರಿಯನ್ನರಹು, ನನ್ನ ಕಂದಮ್ಮಗಳ ಬಿಟ್ಟು ನಾ ಹೋಗಲಾರೆ, ಎಂದು ಪ್ರಾರ್ಥಿಸಿ, ಒಂದು ದೊಡ್ಡ ಲೋಟದ ತುಂಬಾ ತಣ್ಣನೆಯ ನೀರನ್ನು ಗಟಗಟನೆ ಕುಡಿದಾಗಲೊಮ್ಮೆ ಮನಸ್ಸು ನಿರಾಳವಾದಂತೆನಿಸಿತು, ದೇವರ ಪಟದ ಶ್ರೀಸತ್ಯನಾರಾಯಣನ ಅಭಯ ಹಸ್ತ ತನ್ನ ತಲೆಯ ಮೇಲೇ ಬಂದು ಮೆಲ್ಲನೆ ಸವರಿದಂತೆನಿಸಿತು. ನಾಲ್ಕಾರು ದಿನಗಳಿಂದ ಯೋಚನೆಯ ಕೂಪದಲ್ಲಿ ಬಿದ್ದು ನರಳಿ ಬೆಂಡಾಗಿದ್ದ ಮನಕ್ಕೆ ತೀವ್ರತರವಾದ ಆಯಾಸವಾದಂತೆನಿಸಿ ಏನೂ ತೋಚದಂತಾಗಿ, ತನ್ನೆಲ್ಲಾ ಕಷ್ಟಗಳನ್ನೂ ಹರಿಯ ಪಾದಗಳಿಗರ್ಪಿಸಿ, ಹರ್ಷನನ್ನು ಬಿಗಿದಪ್ಪಿ ಮಲಗಿದಳು. ಹರ್ಷನೂ ಅಮ್ಮನ ಕೊರಳನ್ನು ತನ್ನ ಪುಟ್ಟ ಪುಟ್ಟ ಕೈಗಳಿಂದ ಬಳಸಿತು. ಇಬ್ಬರೂ ಗಾಢ ನಿದ್ರೆಗೆ ಜಾರಿದರು.

ನಾಲ್ಕೈದು ಗಂಟೆಗಳ ಒಳ್ಳೆಯ ನಿದ್ರೆಯಿಂದ ದೇಹದ ಆಯಾಸ ಕೊಂಚ ಹರಿದಂತಾಗಿ ಎಚ್ಚರವಾದಾಗ ವೈದೇಹಿಗೆ ತನ್ನ ಬಾಳು ನಡೆದು ಬಂದ ಹಾದಿಯ ಪಕ್ಷಿನೋಟ ಕಣ್ಣಮುಂದೆ ಕಂಡಂತಾಯಿತು.
ಚಿಕ್ಕಂದಿನಿಂದಲೂ ವೈದೇಹಿ, ತನ್ನಬಾಳು ಹೀಗೆಯೇ ಇರಬೇಕು, ಹಾಗೆಯೇ ಇರಬೇಕು ಎಂದು ಕನಸುಗಳನ್ನು ಕಂಡುಕೊಂಡೇ ಬೆಳೆದವಳು. ಅಪ್ಪನ ಮನೆಯಲ್ಲಿ ಕಡು ಬಡತನ ಎಂದಿಲ್ಲದಿದ್ದರೂ, ತಲೆಗೆ ಹೊದ್ದರೆ ಕಾಲಿಗಿಲ್ಲ, ಕಾಲಿಗಿದ್ದರೆ ತಲೆಗಿಲ್ಲ ಎಂಬಂತಹದೇ ಪರಿಸ್ಥಿತಿ. ದುಡಿಯುವ ಕೈ ಒಂದಾದರೆ ಉಣ್ಣುವ ಕೈಗಳು ಹಲವಾರು. ತಂದೆ ಶ್ರೀನಿವಾಸರಾಯರು ಹೃದಯ ಶ್ರೀಮಂತಿಕೆಯುಳ್ಳ ಸಂಸ್ಕಾರವಂತ ವ್ಯಕ್ತಿ. ಪ್ರೈಮರಿ ಸ್ಕೂಲ್‌ ಮಾಸ್ಟರ್‌ ಆಗಿದ್ದರವರು. ತಂದೆ ತಾಯಿ, ತಮ್ಮ ತಂಗಿ, ಹೆಂಡತಿ, ಮಕ್ಕಳು ವೈದೇಹಿ ಮತ್ತು ಅವಳ ಒಡಹುಟ್ಟಿದ ಮೂರು ಮಕ್ಕಳಿಗೆ ಇರುವ ಸ್ವಂತ ಮನೆ, ನಾಲ್ಕಾರು ತೆಂಗು, ಕಂಗು, ಮಾವು, ಹಲಸಿನ ಮರಗಳಿದ್ದ ಎರಡೆಕರೆಯ ತೋಟ ಮತ್ತು ಮಾಸ್ಟರಿಕೆಯಷ್ಟೇ ಆದಾಯದ ಮೂಲ. ಅಪ್ಪ ಹೇಳುತ್ತಿದ್ದ ಮಾತು – ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆ ಹೊದ್ದರೆ ತಲೆಗಿಲ್ಲ ಎಂದು ಕೈ ಚೆಲ್ಲಿ ಕುಳಿತುಕೊಳ್ಳಬಾರದು, ಕೈಕಾಲುಗಳನ್ನು ಮುದುರಿ ಮಲಗಿ ನಿದ್ದೆಯ ಸುಖವನ್ನು ಅನುಭವಿಸಬೇಕು, ಹಾಗೇ ಜೀವನದಲ್ಲೂ ಅಗತ್ಯಗಳನ್ನು ಕಮ್ಮಿ ಮಾಡಿಕೊಂಡು ಬದುಕ ಸಾಗಿಸಬೇಕು – ಎಂಬ ಮಾತುಗಳನ್ನು ಚಾಚೂ ತಪ್ಪದಂತೆ ಅನುಷ್ಟಾನಕ್ಕೆ ತಂದು ಸಂಸಾರ ರಥವನ್ನು ಎಳೆಯುತ್ತಿದ್ದವರು.

ಬೆಳೆಯುತ್ತಿದ್ದ ವೈದೇಹಿಯ ಕಾಣ್ಣ ಮುಂದೆ ಕನಸುಗಳ ರಾಶಿಯೇ ಕುಣಿಯುತಿತ್ತು. ದೂರ ಬೆಟ್ಟದಲ್ಲಿ ದೊಡ್ಡ ಮಹಲಿನಂತ ಮನೆಯಿರಬೇಕು, ಮನೆಯ ಸುತ್ತ ಹೂವ ರಾಶಿ ಹಾಕಿರಬೇಕು . . . . ಎಂಬಂತೆ, ದೊಡ್ಡ ಮನೆ ಸೇರಬೇಕು, ಶ್ರೀಮಂತ ಜೀವನ ನಡೆಸಬೇಕು . . ಹಾಗೇ, ಹೀಗೇ . . . ಎಂದು ಕನಸ ಕಟ್ಟಿದಳವಳು.

ವಿಧಿ ಘೋರ ನಾಟಕವಾಡಿಬಿಟ್ಟಿತ್ತು.

ಸುರದ್ರೂಪಿ ಯುವಕ ತಾನಾಗಿಯೇ ಕೇಳಿಕೊಂಡು ಬಂದು ಮದುವೆಯ ಪ್ರಸ್ತಾಪ ಮುಂದಿಟ್ಟಾಗ ಬೇಡ ಎನ್ನಲಾಗಲಿಲ್ಲ. ಅವನ ವಾಕ್ಚಾತುರ್ಯುಕ್ಕೆ, ಬಣ್ಣ ಬಣ್ಣದ ಮಾತುಗಳಿಗೆ, ಅಂಗೈಯಲ್ಲಿ ಆಕಾಶವನ್ನೂ ನಕ್ಷತ್ರಗಳನ್ನೂ ಚಂದಿರನನ್ನೂ ನಿನಗೆ ಕೊಡಲೆಂದೇ ಹಿಡಿದಿಟ್ಟಿದ್ದೇನೆಂದು ಮುಷ್ಠಿ ಬಿಗಿ ಹಿಡಿದು ಆಡಿದ ರಸಿಕ ಮಾತುಗಳಿಗೆ ಮನಸ್ಸು ಸೋತುಬಿಟ್ಟಿತು. ಮನೆಯವರುಗಳನ್ನು ಒಪ್ಪಿಸಿ ಸರಳವಾಗಿ ಮದುವೆಯೂ ನಡೆಯಿತು. ನಂತರವೇ ತಿಳಿದದ್ದು. ಹಿಡಿದಿಟ್ಟ ಆಕಾಶ, ನಕ್ಷತ್ರ, ಚಂದ್ರ ಎಲ್ಲವೂ ಕತ್ತಲಲ್ಲಿ ಕಾಣುವ ಕನಸುಗಳು ಮಾತ್ರ, ದಿನಕರನ ಬೆಳಕಿನ ಕಿರಣದ ಸೋಂಕೂ ಇಲ್ಲದಂತ ಜೀವನ ಎಂಬ ಗಾಡಾಂಧಕಾರದ ಗವಿಯೊಳಗೆ ಬೇಜವಾಬ್ದಾರಿ, ಬೌದ್ಧಿಕ ಪ್ರೌಢಿಮೆಯಿಲ್ಲದ ವ್ಯಕ್ತಿಯೊಂದಿಗೆ ಕಾಲಿಟ್ಟಿದ್ದಾಯಿತೆಂಬ ಕಹಿ ಸತ್ಯ.

ಒಟ್ಟಿಗಿದ್ದ ನಾಲ್ಕೈದು ವರ್ಷಗಳಲ್ಲಿ ಇರಬಾರದ ಚಟಗಳೆಲ್ಲಾ ಇದ್ದ ಪತಿ ನಾಗೇಶ ತೋರಬಾರದ ನರಕವನ್ನೆಲ್ಲಾ ತೋರಿಸಿ, ಕಂಡ ಕನಸುಗಳನ್ನೆಲ್ಲಾ ನುಚ್ಚು ನೂರಾಗಿಸಿ ಹಿಂದಿರುಗಿ ಬಾರದ ಲೋಕಕ್ಕೆ ನಡೆದಾಗ ವೈದೇಹಿಗೆ ಉಳಿದ್ದದ್ದು ಇರುವುದೊಂದು ಮುರುಕಲು ಮನೆ, ಬಗಲಲ್ಲಿ ನಾಲ್ಕು ವರ್ಷದ ಹರ್ಷ, ಹೊಟ್ಟೆಯಲ್ಲಿ ಒಂದೂವರೆ ತಿಂಗಳ ಗರ್ಭವಷ್ಟೇ. ಮೂರ್ನಾಲ್ಕು ತಿಂಗಳು ಕಳೆಯಲು ಸಾಧ್ಯವೇ ಆಗದಿದ್ದಾಗ ತೆಗೆದುಕೊಂಡ ನಿರ್ಧಾರವೇ ಹಿಂದಿನ ರಾತ್ರಿಯ ಘಟನೆ.

ಕಿಟಕಿಯಾಚೆಯ ಸೂರ್ಯನ ಎಳೆಕಿರಣಗಳು ಪಕ್ಕದಲ್ಲಿ ಮಲಗಿದ್ದ ಹರ್ಷನ ಮೇಲಿನಿಂದ ಹಾಯ್ದು ವೈದೇಹಿಯನ್ನು ತಟ್ಟಿ ಎಬ್ಬಿಸಿತು. ಕೊರಳೀಗೆ ಹಾರವಾಗಿದ್ದ ಎಳೆಯ ಕೈಗಳನ್ನು ಮೆಲ್ಲನೆ ಬಿಡಿಸಿ ಮೇಲೆದ್ದು ಸೊಂಟಕ್ಕೆ ಸೆರಳ ಸಿಕ್ಕಿಸಿ ಹೊರಬಂದವಳಿಗೆ ಅನ್ನಿಸಿದ್ದು, ಈ ವಿಶಾಲವಾದ ಪ್ರಪಂಚದಲ್ಲಿ ನನಗೆ, ನನ್ನೀ ಮಕ್ಕಳಿಗೆ ಸ್ಥಾನವಿಲ್ಲವೇ, ಹುಡುಕಿಯೇ ಕೊಳ್ಳುತ್ತೀನೆಂಬ ಆತ್ಮ ವಿಶ್ವಾಸ. ಮೆಲ್ಲನೆ ಹೊಟ್ಟೆಯನ್ನು ಸವರಿಕೊಂಡಳು. ಮಗು ಕೈಕಾಲುಗಳನ್ನಾಡಿಸಿ ಅವರ್ಚನೀಯವಾದ ಆನಂದವನ್ನು ನೀಡಿತು.

ಅಂಗಳದ ಪುರುಳೆಗಳನ್ನಾರಿಸಿ ನೀರೊಲೆಗೆ ಒಟ್ಟು ಬಿಸಿನೀರ ಕಾಯಿಸಿ, ಮನೆಯನ್ನೆಲ್ಲಾ ಶುಚಿಗೊಳಿಸಿ ಸ್ನಾನ ಮಾಡಿ, ದೇವರಿಗೊಂದು ದೀಪ ಹಚ್ಚಿ, ಮನೆಯಂಗಳದಲ್ಲಿಯೇ ಅರಳಿದ ದಾಸವಾಳ, ಮಲ್ಲಿಗೆಯ ಹೂವುಗಳನ್ನೇರಿಸಿ, ಹರ್ಷ ಏಳುವುದರೊಳಗೇ ಅಡುಗೆ ಮನೆಗೆ ಹೋಗಿ ಇದ್ದುದರಲ್ಲೇ ಸಾವರಿಸಿ, ಇಬ್ಬರಿಗೂ ಒಂದೊಂದರಂತೆ, ಹರ್ಷನಿಗಿಷ್ಟವಾದ ಅಕ್ಕಿರೊಟ್ಟಿಗಳೆರಡನ್ನು ಮಾಡಿಟ್ಟು, ತಾನೊಂದು ಕಪ್‌ ಕಾಫಿ ಮಾಡಿಕೊಂಡು ಕುಡಿದು ಮುಂದಿನ ದಾರಿಯ ಬಗ್ಗೆ ಯೋಚಿಸಿದಳು.

ಹಿಂದಿನ ಮಾತುಕತೆಗಳು ನೆನಪಿಗೆ ಬಂದಿತು.

ನಾಗೇಶ ಹೇಳಿದ್ದ, ಪಕ್ಕದ ಬಡಾವಣೆಯಲ್ಲಿದ್ದ ತನ್ನ ದೊಡ್ಡಪ್ಪನ ಮಗ ದಿವಾಕರ ದೊಡ್ಡ ಶ್ರೀಮಂತ. ರಾಜಕಾರಣಿ, ಫ್ಯಾಕ್ಟರಿಯೊಂದರ ಮಾಲೀಕ, ಹಲವಾರು ಶಾಲಾ ಕಾಲೇಜುಗಳ ಒಡೆಯ. ಮದುವೆಗೆ ಮುಂಚೆ ಅಂಗೈಯಲ್ಲಿ ತೋರಿಸಿದ್ದ ಆಕಾಶದಲ್ಲಿ ಆ ದೊಡ್ಡ ಮನುಷ್ಯ ತಮ್ಮ ಹತ್ತಿರದ ನೆಂಟನೆಂಬುದೂ ಒಂದು ನಕ್ಷತ್ರವಾದರೆ, ಮದುವೆಯ ನಂತರ ತೋರಿದ ನರಕದಲ್ಲಿ, – ಅವನು ಚಿಕ್ಕಂದಿನಿಂದ ನನಗೆ ಬದ್ಧ ವೈರಿ, ಎಷ್ಟೇ ಕಷ್ಟ ಬಂದರೂ ಜೀವನದಲ್ಲಿ ಅವನ ಬಳಿ ಮಾತ್ರ ತಾನೂ, ತನ್ನ ಕುಟುಂಬವೂ ಹೋಗಬಾರದು, ಅವನು ಆಸ್ತಿ ಅಂತಸ್ತುಗಳನ್ನು ಸಂಪಾದಿಸಿರುವ ರಸ್ತೆ ಸರಿಯಾದುದಲ್ಲ – ಎಂದು ಹೇಳಿದ್ದ.

ಈಗ ವೈದೇಹಿ ಯೋಚಿಸಿದಳು. ಈಗ ನಾಗೇಶ ಇಲ್ಲ. ನನಗೀಗ ಸಹಾಯ ಮಾಡುವ ಸ್ಥಿತಿ ತೌರಿಗೂ ಇಲ್ಲ, ಮುಳುಗುವವನಿಗೆ ಹುಲ್ಲು ಕಡ್ಡಿಯೇ ಆಸರೆ, ಎಂದು ಯೋಚಿಸಿ, ಹರ್ಷ ಮೇಲೆದ್ದ ಮೇಲೆ ಅವನನ್ನು ಕರೆದುಕೊಂಡು ದಿವಾಕರನ ಮನೆಯೆಡೆಗೆ ನಡೆದಳು, ತನ್ನ ಬಾಲ್ಯದ ಕನಸು, ಕಲ್ಪನೆಗಳನ್ನು ನುಚ್ಚು ನೂರಾಗಿಸಿಕೊಂಡು.

ಆದರಿಲ್ಲಿ ಸಿಕ್ಕ ಸ್ವಾಗತವೇ ಬೇರೆಯಾಗಿತ್ತು. ಇವಳೆಡೆಗೆ ತೀವ್ರವಾದ ಅನುಕಂಪ ತೋರಿದ ದಿವಾಕರ ಮತ್ತು ಕುಟುಂಬ ಸಹಾಯ ಹಸ್ತ ಚಾಚುವ ಅಭಯವಿತ್ತಿತು.

ದಿವಾಕರ ಹೇಳಿದ – ನಾಗೇಶ ಏಕೆ ನನ್ನನ್ನು ದ್ವೇಷ ಮಾಡುತ್ತಿದ್ದನೋ ತಿಳಿಯದು. ನೀವು ನಮ್ಮ ಕುಟುಂಬಕ್ಕೆ ಸೇರಿದವರು. ಅಪ್ಪ ಮತ್ತು ಚಿಕ್ಕಪ್ಪ ಕೂಡ ಜಗಳವಾಡಿಕೊಂಡು ಬೇರೆಯಾದವರಂತೆ. ಅದ್ಯಾಕೆ ಹಾಗೆ ಆಯಿತೋ ತಿಳಿಯದು. ನಿಮ್ಮ ಆತ್ಮ ಗೌರವಕ್ಕೆ ಧಕ್ಕೆ ಬಾರದಂತೆ, ನಿಮ್ಮ ಮಕ್ಕಳು ಬೆಳೆಯುವಂತೆ ನಾನು ನೋಡಿಕೊಳ್ಳುವೆ. ನನ್ನ ವ್ಯವಹಾರಕ್ಕೆ ನೀವು ತಲೆ ಹಾಕಬಾರದು.

ವೈದೇಹಿ ತಲೆಯಾಡಿಸಿದಳು. ಮುಂದಿನದೆಲ್ಲಾ ತನಗೆ ತಾನೇ ನಡೆದುಕೊಂಡು ಹೋಯಿತು. ಯೋಚಿಸುವುದನ್ನು ಬಿಟ್ಟ ವೈದೇಹಿ ಜೀವನ ಬಂದಂತೆ ಸ್ವೀಕರಿಸುವ ಪರಿಯನ್ನು ಬೆಳೆಸಿಕೊಂಡಳು.
ದಿವಾಕರ ಮುರುಕಲು ಮನೆಯನ್ನು ರಿಪೇರಿ ಮಾಡಿಸಿ ವಾಸಿಸಲು ಯೋಗ್ಯವನ್ನಾಗಿ ಮಾಡಿದ. ಅವನಿಗೂ ಮನಸ್ಸಿನ ನೆಮ್ಮದಿಗಾಗಿ ತನ್ನ ರಾಜಕಾರಣದಲ್ಲಿ, ಇನ್ನಿತರ ವ್ಯವಹಾರಗಳಿಂದ ಸಂಪಾದಿಸಿದ್ದ ಹಣದಲ್ಲಿ ದಾನ, ಧರ್ಮ, ಸತ್ಕಾರ್ಯಗಳನ್ನು ಮಾಡುವ ಅಗತ್ಯತೆ ಬಹಳವಾಗಿತ್ತು. ಚಿಕ್ಕಪ್ಪ ಮತ್ತು ನಾಗೇಶ ಮುಂಚಿನಿಂದಲೂ ತಾನು ಜೀವನದಲ್ಲಿ ಅಭಿವೃದ್ಧಿ ಹೊಂದಿರುವುದೇ ಮಹಾಪಾಪ ಎಂಬಂತೆ ನೋಡಿದ್ದರಿಂದ ಅವರೊಂದಿಗೆ ಸಂಬಂಧವನ್ನೇ ಕಡಿದು ಕೊಂಡಿದ್ದವನಿಗೆ, ಈಗ ಅವರ ಮನೆ ಸೊಸೆ ತಾನಾಗಿಯೇ ಸಹಾಯ ಬಯಸಿ ಬಂದದ್ದು ಒಂದು ರೀತಿಯಲ್ಲಿ ಸಮಾಧಾನವನ್ನೇ ತಂದಿತ್ತು. ಗರ್ಭಿಣಿ ವೈದೇಹಿಯನ್ನು ನೋಡಿಕೊಳ್ಳಲು, ಮುಂದಿನ ಬಾಣಂತನ ಮುಂತಾದ ಕೆಲಸಗಳಿಗೆ ಒಬ್ಬ ಮಧ್ಯ ವಯಸ್ಕ ಹೆಂಗಸನ್ನು ನೇಮಿಸಿದ.

ಎರಡನೆಯ ಮಗುವೂ ಗಂಡಾಯಿತು. ಬಾಣಂತನವೂ ಸರಳವಾಗಿ ನಡೆಯಿತು.

ಒಮ್ಮೆ ದಿವಾಕರ ಹೇಳಿದ – ನೀವು ಇಚ್ಛೆಪಟ್ಟರೆ, ನಮ್ಮ ಶಾಲೆಯೊಂದರಲ್ಲೇ ನೌಕರಿಗೆ ಸೇರಬಹುದು.
ಮತ್ತೊಮ್ಮೆ ತಲೆಯಾಡಿಸಿದಳು ವೈದೇಹಿ. ನಂತರದ ದಿನಗಳು ಯಾವ ಏರು ಪೇರುಗಳಿಲ್ಲದೆ, ದುಖಃ ದುಮ್ಮಾನಗಳೂ ಇಲ್ಲದಂತೆ ಸಾಗಿತು.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೇವಲ ಮನಸ್ಸಿನ ಸಮಾಧಾನಕ್ಕಾಗಿ, ತಮ್ಮ ಮನೆಯ ಹೆಣ್ಣು ಮಗಳು ಎಂಬ ಬಾಂಧವ್ಯಕ್ಕಾಗಿ, ವೈದೇಹಿಯ ಆತ್ಮ ಗೌರವಕ್ಕೆ ಧಕ್ಕೆ ಬರದಂತೆ ದಿವಾಕರ ಮಾಡಿದ ಸಹಾಯ ಫಲ ನೀಡತೊಡಗಿತು.

ವೈದೇಹಿಯೂ ದಿವಾಕರನೆಡೆಗೆ ಕೃತಜ್ಞತಾ ಭಾವ ಬೆಳೆಸಿಕೊಂಡು ಶಾಲೆಯಲ್ಲಿ ಸಂಪೂರ್ಣ ಮನದಿಂದ ಕೆಲಸ ಮಾಡುತ್ತಾ ಯಾರಿಗೂ ಜಾಸ್ತಿ ಹೊರೆಯಾಗದಂತೆ ನಡೆದುಕೊಂಡಳು.

ಮಕ್ಕಳು ಹರ್ಷ ಮತ್ತು ಸಂತೋಷ್‌ ಹುಣ್ಣಿಮೆಯ ಚಂದ್ರನಂತೆ ಬೆಳೆದರು. ಉನ್ನತ ವ್ಯಾಸಂಗ ಮಾಡಿ ಒಳೊಳ್ಳೆಯ ಪದವಿಗಳಿಗೇರಿದರು.

ದಿವಾಕರ ಕಾಲವಾದಾಗ ಮೂವರೂ ಹೋಗಿ ಮೌನವಾಗಿ ಅಶ್ರು ತರ್ಪಣ ಅರ್ಪಿಸಿ ಬಂದರು.

ಮಕ್ಕಳಿಬ್ಬರೂ ತಂತಮ್ಮ ಮನಮೆಚ್ಚಿದ ಹುಡುಗಿಯರನ್ನು ಮದುವೆಯಾಗಿ ಒಂದೇ ಅಪಾರ್ಟಮೆಂಟಿನ ಮೇಲೆ ಮತ್ತು ಕೆಳಗಿನ ಮನೆಗಳಲ್ಲಿ ಇರತೊಡಗಿದರು. ವೈದೇಹಿ ಎರಡೂ ಮನೆಗೆ ಹಿರಿಯಳಾಗಿ ಮಕ್ಕಳು ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಬಾಳು ಬಾಳತೊಡಗಿದಳು.

ತಾನು ಚಿಕ್ಕಂದಿನಲ್ಲಿ ಕಂಡಿದ್ದ ವೈಭವದ, ನೆಮ್ಮದಿಯ, ಸಂತಸದ, ಸಕಲೈಶ್ವರ್ಯದ ಬಾಳು ಈಗ ಲಭಿಸಿತ್ತು. ಅಪ್ಪ ಹೇಳುತ್ತಿದ್ದ – ದೇವರೇ ಎಷ್ಟೇ ಕಷ್ಟಗಳಿದ್ದರೂ ವಯಸ್ಸು ಕಾಲದಲ್ಲಿ ಅವುಗಳನ್ನು ಕೊಟ್ಟು ಬಿಡು, ಹಾಗೆಯೇ ಅದನ್ನೆದುರಿಸುವ ಶಕ್ತಿಯನ್ನೂ ಕರುಣಿಸಿ, ಕೊನೆಗಾಲಕ್ಕೆ ನೆಮ್ಮದಿಯನ್ನು ನೀಡು – ಎನ್ನುತ್ತಿದ್ದ ಮಾತುಗಳೂ, ಅಮ್ಮ ಹೇಳುತ್ತಿದ್ದ – ಜಾಸ್ತಿ ಕನಸು ಕಾಣಬಾರದು ವೈದೇಹಿ, ಯಾವ್ಯಾವಾಗ ಏನೇನು ಆಗಬೇಕೋ ಅದೇ ಆಗುವುದು. ಬಾರದು ಬಪ್ಪದು, ಬಪ್ಪದು ತಪ್ಪದು – ಎಂಬ ಮಾತುಗಳೂ ವೈದೇಹಿಗೆ ನೆನಪಿಗೆ ಬರುತ್ತಲೇ ಇದ್ದವು. ಆಗೆಲ್ಲಾ ಎಷ್ಟು ಅನುಭವದ ಮಾತುಗಳಿವು ಎಂದೆನಿಸುತಿತ್ತು.
ವೈದೇಹಿಗೆ ಈಗ ಕಾಲು ಮತ್ತು ತಲೆಗಳೆರಕ್ಕೂ ಹೊದ್ದಿಕೊಂಡು, ಬೇಕಿದ್ದರೆ ಅಗತ್ಯವಿದ್ದವರಿಗೂ ನೀಡುವಷ್ಟು ಎಲ್ಲವನ್ನೂ ದಯಪಾಲಿಸಿದ್ದ, ಅಂದು ತಲೆಯ ಮೇಲೆ ಕೈಯಿರಿಸಿದ್ದ ಶ್ರೀ ಸತ್ಯನಾರಾಯಣ.

ಪದ್ಮಾ ಆನಂದ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *