ಪ್ರವಾಸ

ಪ್ರವಾಸ ಕಥನ: ಸ್ಪಿಟಿ-ಸ್ಥಿತಿ-ಗತಿ ..ಭಾಗ 1

Share Button

ಒಮ್ಮೆ ಹಿಮಾಲಯದ ನೆಲದಲ್ಲಿ ಕಾಲಿಟ್ಟರೆ, ಆಮೇಲೆ ಹಿಮಾಲಯವೇ ನಮ್ಮನ್ನು ಪುನ: ಪುನ: ಕರೆಸಿಕೊಳ್ಳುತ್ತದೆ ಎಂಬ ಪ್ರತೀತಿಯಿದೆ. ಇದೆಷ್ಟು ನಿಜವೋ ಗೊತ್ತಿಲ್ಲ, ನನ್ನ ಮಟ್ಟಿಗಂತೂ ಅಗಾಧ ಹಿಮಾಲಯವು ಸದಾ ಸೋಜಿಗ . ಇದುವರೆಗೆ ಕನಿಷ್ಟ ಹತ್ತು ಬಾರಿ ಹಿಮಾಲಯವು ನನ್ನನ್ನು ಕರೆಸಿಕೊಂಡಿದೆ ಎನ್ನಲು ಸಂತಸವಾಗುತ್ತದೆ.

‘ಅಲ್ಲೇನಿದೆ, ಬೆಟ್ಟ, ಗುಡ್ಡ , ಮರಗಳು , ನದಿಗಳು ನಮ್ಮೂರಿನಲ್ಲಿಯೇ ಇಲ್ಲವೇ? ಅವುಗಳನ್ನು ನೋಡಲು ಹಣ ಖರ್ಚು ಮಾಡಿಕೊಂಡು ಹಿಮಾಲಯಕ್ಕೆ ಹೋಗಬೇಕೆ?’ ಎನ್ನುವವರೂ ಇದ್ದಾರೆ. ಜನರೇಕೆ ಪದೇ ಪದೇ ಹಿಮಾಲಯದ ಕಡೆಗೆ ಆಕರ್ಷಿತರಾಗುತ್ತಾರೆ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತಿರುತ್ತದೆ. ಹಿಮಾಲಯವೆಂದರೆ ದೇವಭೂಮಿ ಎಂಬ ಪೂಜ್ಯ ಭಾವನೆ, ಎತ್ತರಕ್ಕೆ ಏರುತ್ತಿದ್ದಂತೆ ಬದಲಾಗುತ್ತಾ ಹೋಗುವ ವೈವಿಧ್ಯಮಯ ಪ್ರಕೃತಿ ಸೌಂದರ್ಯ, ತೀರ್ಥಯಾತ್ರಾಸಕ್ತರಿಗೆ ಪ್ರಸಿದ್ಧ ದೇವಧಾಮಗಳು, ಸಾಹಸ ಪ್ರಿಯರಿಗೆ ಹಲವಾರು ಕ್ರೀಡೆಗಳು, ಚಾರಣದ ತಾಣಗಳು, ಶೀತ ಮರುಭೂಮಿ, ಹಿಮ ಹೊದ್ದ ಬೆಟ್ಟದ ಶಿಖರಗಳು, ಪವಿತ್ರ ನದಿಗಳು, ಜಲಪ್ತಾಗಳು, ಮೈಲುಗಟ್ಟಲೆ ಹಬ್ಬಿರುವ ಆಧುನಿಕ ಸುರಂಗರಸ್ತೆಗಳು, ಬಯಲು ಸೀಮೆಗಿಂತ ವಿಭಿನ್ನವಾದ ಪಹಾಡಿ ಜನರ ಆಹಾರ-ವಿಹಾರ , ದಕ್ಷಿಣ ಭಾರತದಲ್ಲಿ ಕಾಣಸಿಗದ ಆಪಲ್, ಆಪ್ರಿಕೋಟ್, ಬಾರ್ಲಿ ಮೊದಲಾದ ಕೃಷಿ, ಬೌದ್ಧರ ಮೊನಾಸ್ಟ್ರಿಗಳು, ನಮ್ಮ ದೇಶದ ಭಾಗವಾಗಿದ್ದರೂ ಬಹುತೇಕ ಟಿಬೆಟ್ ನ ಸಂಸ್ಕೃತಿಯನ್ನು ನೆಚ್ಚಿಕೊಂಡಿರುವ ಸ್ಥಳೀಯ ಜನಜೀವನದ ಅವಲೋಕನ…..ಹೀಗೆ ಪಟ್ಟಿ ಉದ್ದಕ್ಕೆ ಬೆಳೆಯುತ್ತದೆ. ನನ್ನ ಮಟ್ಟಿಗೆ ಹಿಮಾಲಯವು ಅಗಾಧತೆಯ ಪ್ರತೀಕ. ಮೊಗೆದಷ್ಟೂ ಮುಗಿಯದ ಕುತೂಹಲದ ನಾಡು. ಪ್ರಕೃತಿಯ ಮುಂದೆ ನಾವೆಷ್ಟು ಕುಬ್ಜರು ಎಂದು ಅರಿವಾಗಲು ಹಿಮಾಲಯಕ್ಕಿಂತ ಉತ್ತಮವಾದ ತಾಣ ಬೇರೆ ಇಲ್ಲ.

ಇಂತಿಪ್ಪ ಹಿಮಾಲಯದ ಪರ್ವತ ಶ್ರೇಣಿಯಲ್ಲಿರುವ, ಹಿಮಾಚಲ ಪ್ರದೇಶ ರಾಜ್ಯದ ‘ಸ್ಪಿಟಿ ಕಣಿವೆಗೆ’ ಪ್ರವಾಸ ಹೋಗೋಣವೇ ಎಂದು ಗೆಳತಿ ರುಕ್ಮಿಣಿಮಾಲಾ ಸೂಚಿಸಿದಾಗ ಥಟ್ಟಂತ ಒಪ್ಪಿಕೊಂಡೆ. ಅವರ ಮುಂದಾಳುತನದಲ್ಲಿ , ಸಮಾನಾಸಕ್ತರೊಂದಿಗೆ ಮಾಹಿತಿ ವಿನಿಮಯ, ಬೆಂಗಳೂರಿನ ‘ಟ್ರಾವೆಲ್ ಫಾರ್ ಯು’ ಸಂಸ್ಥೆಯೊಂದಿಗೆ ಮಾತುಕತೆ, ಪೂರ್ವಭಾವಿ ಸಭೆ, ಪ್ರಯಾಣಕ್ಕೆ ತಯಾರಿ ಇವೆಲ್ಲಾ ಸಾಂಗವಾಗಿ ನೆರವೇರಿ, ಆಗಸ್ಟ್ 05-13, 2026 ರ ವರೆಗಿನ ಪ್ರವಾಸದ ರೂಪುರೇಷೆ ಸಿದ್ಧವಾಯಿತು. ‘ಸ್ಪಿಟಿ ಕಣಿವೆ’ಗೆ ಭೇಟಿ ಕೊಡಲು ಉತ್ಸುಕರಾಗಿದ್ದ 20 ಜನರು ಆಗಸ್ಟ್ 04, 2026 ರ ರಾತ್ರಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೇರಿದ್ದೆವು. ತಂಡದ ಇನ್ನೊಬ್ಬ ಪ್ರವಾಸಿ ಶ್ರೀಮತಿ ಹೀರಾ , ಪೂನಾದಿಂದ ಬರುವವರಿದ್ದರು. ನನಗೆ ವೈಯುಕ್ತಿಕವಾಗಿ ಪ್ರವಾಸದ ಗುರಿ ತಲಪುವುದು ಮಾತ್ರ ಮುಖ್ಯ ಅನಿಸುವುದಿಲ್ಲ. ಪ್ರವಾಸದ ಪೂರ್ವತಯಾರಿ, ಸ್ನೇಹಿತೆಯರೊಂದಿಗೆ ಮಾತುಕತೆ, ಪ್ರಯಾಣ ಅವಧಿ, ಹಿಂತಿರುಗಿ ಬಂದ ಮೇಲೆ ದಾಖಲೀಕರಣ , ಇವೆಲ್ಲವನ್ನೂ ನಾನು ಸಮಾನವಾಗಿ ಇಷ್ಟಪಡುತ್ತೇನೆ. ಹಾಗಾಗಿ, ನಮ್ಮ ಪ್ರವಾಸದ ಅವಧಿ 9 ದಿನಗಳದ್ದಾದರೂ ಹೊರಡುವ ಮುನ್ನ ಮತ್ತು ಹಿಂತಿರುಗಿದ ನಂತರದ ದಿನಗಳನ್ನೂ ಸೇರಿಸಿ ಸುಮಾರು ಎರಡು-ಮೂರು ತಿಂಗಳು ಅದೇ ಗುಂಗಿನಲ್ಲಿರುತ್ತೇನೆ!

ಹಿಮಾಚಲ ಪ್ರದೇಶ ರಾಜ್ಯದ ಈಶಾನ್ಯ ಭಾಗದಲ್ಲಿ , ಸಮುದ್ರ ಮಟ್ಟದಿಂದ ಸುಮಾರು 12,500 ಅಡಿಗಳಿಗೂ ಅಧಿಕ ಎತ್ತರದಲ್ಲಿರುವ ‘ಸ್ಪಿಟಿ ಕಣಿವೆ’ಯು ಹಸುರಿಲ್ಲದ ಒಣ ಪರ್ವತಗಳು, ಪ್ರಾಚೀನ ಬೌದ್ಧ ಮಠಗಳು ಮತ್ತು ವಿಶಿಷ್ಟ ಟಿಬೆಟಿಯನ್ ಸಂಸ್ಕೃತಿಯನ್ನು ಒಳಗೊಂಡಿದೆ. ‘ಸ್ಪಿಟಿ’ ಎಂದರೆ ಮಧ್ಯದಲ್ಲಿರುವ ಭೂಮಿ ಎಂಬ ಅರ್ಥವಂತೆ. ನಮ್ಮ ತಂಡವು ಬೆಂಗಳೂರಿನಿಂದ ಚಂಡೀಗಢ್ ತಲಪಿ, ಅಲ್ಲಿಂದ ಶಿಮ್ಲಾ ಮೂಲಕವಾಗಿ ರಸ್ತೆ ಮಾರ್ಗದಲ್ಲಿ ‘ಸ್ಪಿಟಿ’ ತಲಪುವಂತೆ ಪ್ರವಾಸವನ್ನು ಆಯೋಜಿಸಿದ್ದರು .

ಆಗಸ್ಟ್ 05,2026 ರ ಮುಂಜಾನೆ ಬೆಂಗಳೂರಿನಿಂದ ಹೊರಟ ಇಂಡಿಗೋ ಸಂಸ್ಥೆಯ ವಿಮಾನ ನಮ್ಮನ್ನು ಚಂಡೀಗಢ್ ವಿಮಾನ ನಿಲ್ದಾಣ ತಲಪಿದಾಗ ಬೆಳಗ್ಗೆ 07: 45 ಗಂಟೆ ಆಗಿತ್ತು .

ಪ್ರಯಾಣ, ಪ್ರವಾಸ ಮಾಡುವುದರಲ್ಲಿ ಹಲವಾರು ವಿಧಗಳಿವೆ.   ಮನೆಯಿಂದ ಹೊರಡುವ ಮೊದಲೇ ಪೂರ್ವತಯಾರಿಯನ್ನು ತಾವೇ ಮಾಡಿಕೊಂಡು,  ಏಕಾಂಗಿಯಾಗಿ ಅಥವಾ ಸೀಮಿತ  ಮಂದಿ ತಮ್ಮದೇ ವ್ಯವಸ್ಥೆಯಲ್ಲಿ ಸುತ್ತಾಡುವುದು  ಒಂದು ವಿಧವಾದರೆ ಸಕಲ ಜವಾಬ್ದಾರಿಯನ್ನು ಸೂಕ್ತ ಪ್ರವಾಸಿ ಸಂಸ್ಥೆಯ ಹೆಗಲಿಗೇರಿಸಿ,  ಅವರ   ಉಸ್ತುವಾರಿಯಲ್ಲಿ ನಿಶ್ಚಿಂತೆಯಿಂದ ಪ್ರಯಣಿಸುವುದು ಇನ್ನೊಂದು ವಿಧ.  ಎರಡೂ ವಿಧಗಳಲ್ಲಿಯೂ ಅವುಗಳದ್ದೇ ಆದ ಅನುಕೂಲತೆ-ಅನಾನುಕೂಲತೆ ಇರುತ್ತದೆ.   ನಮ್ಮ ವಯಸ್ಸು, ಆರೋಗ್ಯ, ಆಸಕ್ತಿಗೆ ಯಾವುದು ಸೂಕ್ತವೋ ಅದನ್ನು ಆರಿಸಿಕೊಂಡರಾಯಿತು. ನಮ್ಮ ಈ ಪ್ರವಾಸದಲ್ಲಿ  ಬೆಂಗಳೂರಿನ ‘ಟ್ರಾವೆಲ್ಸ್ ಫಾರ್ ಯು’ ಸಂಸ್ಥೆಯ,   ಶ್ರೀ ಬಾಲಕೃಷ್ಣ, ಶ್ರೀ ಗಣೇಶ್ ಗಟ್ಟಿ ಹಾಗೂ ಶ್ರೀ ದರ್ಶನ್ ಇದ್ದರು.  ಹಾಗಾಗಿ,  ನಾನಂತೂ ‘ಅವರು  ಹೇಳಿದಂತೆ ಕೇಳಿದರಾಯಿತು, ನಾವೇನೂ  ಜವಾಬ್ದಾರಿ ಹೊರಬೇಕಾಗಿಲ್ಲ’ ಎಂಬ  ನಿರಾತಂಕವಾದ    ‘ಬ್ರೈನ್ ಸ್ವಿಚ್ ಆಫ್ ಮೋಡ್’ ನಲ್ಲಿ ಇದ್ದೆ.

ನಮಗೆ ಆ ದಿನ  ಚಂಡೀಗಢ್  ನಲ್ಲಿ ಉಪಾಹಾರ ಸೇವಿಸಿ, ಪ್ರಯಾಣ ಮುಂದುವರಿಸುವುದಷ್ಟೇ ಇದ್ದ ಕಾರಣ ಹೋಟೆಲ್ ವಾಸ್ತವ್ಯ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿಯೇ ಫ್ರೆಷ್ ಅಪ್ ಆದೆವು.  ಚಂಡೀಗಢ್ ವಿಮಾನ ನಿಲ್ದಾಣದಲ್ಲಿ  ಸಣ್ಣ ಫೋಟೊ ಸೆಶನ್ ಆಗಿ  ಲಗೇಜು ಸಮೇತ ಹೊರ ಬಂದೆವು. ನಮಗಾಗಿ  ಕಾಯ್ದಿರಿಸಿದ್ದ ಎರಡು ಟೆಂಪೋ ಟ್ರಾವೆಲರ್ ಗಳಲ್ಲಿ ಪ್ರಯಾಣಿಸಿ , ದಕ್ಷಿಣ ಭಾರತೀಯ ಶೈಲಿಯ  ಆಹಾರ ಒದಗಿಸುವ  ‘ಅವಿನ್ ಕಾರ್ತಿಕ್’ ಎಂಬ  ರೆಸ್ಟಾರೆಂಟ್ ಗೆ  ತಲಪಿದೆವು. ಅಲ್ಲಿ ಆಗ ಲಭ್ಯವಿದ್ದ ದೋಸೆ-ಇಡ್ಲಿ-ಉತ್ತಪ್ಪ ಇತ್ಯಾದಿ ವೈವಿಧ್ಯ ತಿನಿಸುಗಳಲ್ಲಿ ಅವರವರಿಗೆ ಬೇಕಾದುದನ್ನು ತರಿಸಿ ತಿಂದಿದ್ದಾಯಿತು. ಉಪಾಹಾರ ಚೆನ್ನಾಗಿತ್ತು. ಆದರೆ ಚಹಾ ಕೇಳಿದವರಿಗೆ ನಿರಾಸೆಯಾಗಿತ್ತು.  ಯಾಕೆಂದರೆ ಅಲ್ಲಿ ಚಹಾ ಇರಲಿಲ್ಲ, ಕಾಫಿ ಇತ್ತು. ‘ಚಾಯ್ ವಾಲಾ’ ಪ್ರಧಾನಿಯಾಗಿರುವ ಹೆಗ್ಗಳಿಕೆಯ ನಮ್ಮ ದೇಶದಲ್ಲಿ, ಚಿಕ್ಕ ಗಲ್ಲಿಯಿಂದ ಹಿಡಿದು ದೊಡ್ಡ ರೆಸ್ಟಾರೆಂಟ್ ಗಳಲ್ಲಿಯೂ ‘ಚಾಯ್’ ಲಭಿಸುತ್ತದೆಯೆಂಬ ನಮ್ಮ ತಿಳಿವಳಿಕೆಯ ಹಿನ್ನೆಲೆಯಲ್ಲಿ,  ಉತ್ತರಭಾರತದಲ್ಲಿರುವ ದಕ್ಷಿಣಭಾರತ ಶೈಲಿಯ  ರೆಸ್ಟಾರೆಂಟ್ ನಲ್ಲಿ ‘ಚಾಯ್’ ಸಿಗದಿರುವುದೇ ಹಾಸ್ಯದ ವಿಷಯವಾಯಿತು!

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *