ಲಹರಿ

ಮರೆವು: ನಿವೃತ್ತಿ ಜೀವನದ ನನ್ನ ಸಂಗಾತಿ

Share Button

ಅದೊಂದು ದಿನ, ಬೆಳಗ್ಗಿನ ಎಲ್ಲಾ ಕೆಲಸಗಳನ್ನು ಮುಗಿಸಿ ಹೊರಗೆ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುತ್ತಿದ್ದೆ. ಮಗಳು ಕರೆದಂತಾಯಿತು. “ಅಮ್ಮಾ, ಕಿಚನ್‌ನಲ್ಲಿ ಗ್ಯಾಸ್ ಒಲೆ ಉರಿತಾ ಇದೆ” ಎಂದಳು. ನನಗೆ ಆಶ್ಚರ್ಯವಾಗಿ, ಕೂಡಲೇ ಒಳ ಬಂದು ನೋಡುವಾಗ, ಗ್ಯಾಸ್ ಒಲೆ ಸಣ್ಣದಾಗಿ ಉರಿಯುತ್ತಿತ್ತು. “ಹೌದಲ್ಲವೇ? ಗ್ಯಾಸ್ ಸ್ವಿಚ್ ಆಫ್ ಮಾಡಲಿಲ್ಲ. ಛೇ! ಏನಾಯಿತು ನನಗೆ” ಎಂದು ತುಂಬಾ ನೊಂದು ಬಿಟ್ಟೆ. ನಿವೃತ್ತಿಯ ಬಳಿಕ ನನ್ನ ನೆನಪಿನ ಶಕ್ತಿ ಬಹಳಷ್ಟು ಕುಂದಿರುವುದು ನನಗೆ ಅರಿವಾಗಿತ್ತು. ಆದರೆ ಈ ಒಂದು ಪ್ರಸಂಗ ನನ್ನನ್ನು ಆತಂಕಕ್ಕೆ ಒಳ ಪಡಿಸಿತು. ಕಳೆದ ಕೆಲವು ದಿವಸಗಳಿಂದ ಈ ಮರೆವಿನ ಕಾಯಿಲೆ ನನ್ನನ್ನು ಕಾಡುತ್ತಿತ್ತು. ನಾನು ಪ್ರತಿದಿನ ಥೈರಾಯಿಡ್ ಮಾತ್ರೆ ತೆಗೆದುಕೊಳ್ಳಬೇಕು. ಒಮ್ಮೊಮ್ಮೆ ಮಾತ್ರೆ ತೆಗೆದುಕೊಂಡಿದ್ದೇನೆಯೇ? ಇಲ್ಲವೇ? ಎಂದು ಸಂದೇಹ ಕಾಡಿ, ಎರಡು ಸಲ ಉಪಯೋಗಿಸಿದ್ದೂ ಉಂಟು. ಕನ್ನಡಕ ಎಲ್ಲಿಟ್ಟೆ?, ಮನೆಯ ಬೀಗದ ಕೈ ಇಟ್ಟ ಜಾಗ, ಅದರಲ್ಲೂ ಕೆಲವೊಮ್ಮೆ ಯಾವ ದಿನ, ಯಾವ ವಾರ ಎಂಬುದೂ ನೆನಪಾಗುತ್ತಿರಲಿಲ್ಲ. ನಾನು ಕರ್ತವ್ಯದಲ್ಲಿರುವಾಗ, ಉತ್ತಮ ನೆನಪು ಶಕ್ತಿ ಹೊಂದಿದ್ದೆ. ಹೆಚ್ಚಿನ ವಿದ್ಯಾರ್ಥಿಗಳ ಹೆಸರು ನೆನಪಿರುತ್ತಿತ್ತು. ಇತ್ತೀಚಿಗೆ ಪರಿಚಿತರನ್ನು ಭೇಟಿಯಾದರೆ ತುಂಬಾ ಆತ್ಮೀಯತೆಯಿಂದ ಮಾತಾನಾಡಿಸುತ್ತೇನೆ. ಮನೆಗೆ ಬಂದ ಮೇಲೆ, ಅವರ ಹೆಸರು ನೆನಪಿಗೆ ಬರದೆ ಬೇಸರಿಸುತ್ತೇನೆ. ಫೋನ್ ಕರೆ ಮಾಡಿ ಮುಖ್ಯವಾದ ವಿಷಯ ಹೇಳಲಿಕ್ಕೆ ಮರೆತು ಬಿಡುತ್ತೇನೆ. ಕೆಲವೊಮ್ಮೆ ಪದೇ ಪದೇ ಹೇಳಿದ್ದನ್ನೇ ಹೇಳುವ ಅಭ್ಯಾಸ, ಮಗಳು, ಅಣ್ಣ, ತಂಗಿಯರಿಗೆ ಫೋನ್ ಮಾಡುವಾಗಲೆಲ್ಲಾ, “ಈ ವಿಷಯ ನೀನು ಮೊನ್ನೆ ಹೇಳಿದಿಯಲ್ಲಾ” ಅನ್ನುತ್ತಿದ್ದರು. ನನಗೇ ಗೊತ್ತೇ ಆಗುತ್ತಿರಲಿಲ್ಲ. ೬೦ರ ನಂತರ ದೈಹಿಕ ಶಕ್ತಿಯ ಜೊತೆಗೆ ನೆನಪಿನ ಶಕ್ತಿಯೂ ಕ್ಷೀಣಗೊಳ್ಳುತ್ತದೆ ಎಂದು ನನಗೆ ಖಚಿತವಾಯಿತು. ವಯಸ್ಸಾದ ಬಳಿಕ ಬರುವ ಅನೇಕ ಕಾಯಿಲೆಗಳಲ್ಲಿ ಮರೆವು ಕೂಡ ಒಂದು. ಮೆದುಳು ಸಕ್ರಿಯವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಅದರ ಸಾಮರ್ಥ್ಯ ಕುಂಠಿತವಾಗುತ್ತದೆ.

ಆದರೆ ಮರೆಯಲೇಬೇಕು ಎಂದು ಅಂದುಕೊಳ್ಳುವ ಕೆಲವು ಸಂಗತಿಗಳು, ಪದೇ ಪದೇ ನೆನಪಾಗಿ ಮನಸ್ಸಿಗೆ ನೋವು ಮಾಡುತ್ತಲೇ ಇರುತ್ತವೆ. ಹೇಳುವುದಾದರೆ, ನನ್ನ ಬಾಲ್ಯದ ದಿನಗಳು ನೆನಪಾಗುತ್ತವೆ. ನನ್ನ ಹಣೆ ತುಂಬಾ ಅಗಲವಿದ್ದ ಕಾರಣ, ಎಲ್ಲರೂ ನನಗೆ, “ನಿನ್ನ ಹಣೆ ದೊಡ್ಡದು. ಅದಕ್ಕೆ ನಿನಗೆ ಮೆಮೊರಿ ಜಾಸ್ತಿ.” ಎನ್ನುತ್ತಿದ್ದರು. ಇದು ಒಂದು ತಪ್ಪು ಕಲ್ಪನೆಯೆಂದು ಚಿಕ್ಕದಿರುವಾಗ ನನಗೆ ಗೊತ್ತಿರಲಿಲ್ಲ. ನನಗೆ ಆಗ ಬಾಬ್ ಕಟ್ ಇತ್ತು. ಕೂದಲು ಕತ್ತರಿಸಿ ಬಂದಾಗಲೆಲ್ಲಾ, ನಿನ್ನ ತಲೆ ಬೊಂಡ (ಎಳನೀರು) ಕೆತ್ತಿದ ಹಾಗೆ ಆಗಿದೆ, ಎಂದು ಸಂಬಂಧಿಕರು ತಮಾಷೆ ಮಾಡುತ್ತಿದ್ದರು. ನನ್ನನ್ನು ಕಂಡಾಗಲೆಲ್ಲಾ, ನಿನ್ನ ಮೂಗು ದೊಡ್ಡದು, ನೆತ್ತಿಯಲ್ಲಿ ಕೂದಲೇ ಇಲ್ಲಾ ಎಂದೆಲ್ಲಾ ಗೇಲಿ ಮಾಡುತ್ತಿದ್ದರು. ಬಾಡಿಶೇಮ್ ಮಾಡುವ ಈ ಬಂಧುಗಳು ನನ್ನ ಆತ್ಮ ವಿಶ್ವಾಸವನ್ನೇ ಕಸಿದುಕೊಂಡಿದ್ದರು. ಪಾಠದಲ್ಲಿ ಮುಂದಿದ್ದರೂ, ಸ್ಟೇಜ್‌ಗೆ ಹತ್ತಿ ಮಾತನಾಡಲು ಧೈರ್ಯ ಸಾಲುತ್ತಿರಲಿಲ್ಲ. ನನ್ನ ಮುಖ ನೋಡಿ ನಗಾಡಿಯಾರು, ನನ್ನ ರೂಪದ ಬಗ್ಗೆ ಕೀಳರಿಮೆ ಮೂಡಿತ್ತು. ಆದರೆ ನನ್ನ ಹೆತ್ತವರು ಒಮ್ಮೆಯೂ ನಮ್ಮನ್ನು ಅಣಕಿಸಲಿಲ್ಲ. ಟೀಕಿಸಲೂ ಇಲ್ಲ. ಬದಲಿಗೆ ಆತ್ಮಸ್ಥೈರ್ಯವನ್ನು ತುಂಬಿ, ಚುರುಕಾಗಲು ಹುರಿದುಂಬಿಸುತ್ತಿದ್ದರು. ಕಾಲೇಜು ಮೆಟ್ಟಲು ಹತ್ತುವಾಗ, ನಾನು ಮಾನಸಿಕವಾಗಿ ಬಲಿಷ್ಠಳಾದೆ. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ನನ್ನನ್ನು ಅಣಕಿಸಿದ ಸಂಬಂಧಿಕರು ಈಗ ಯಾರೂ ಇಲ್ಲ. ಆದರೆ ನನ್ನ ಬಾಲ್ಯದ ನೆನಪುಗಳು ಮತ್ತು ಅನುಭವಗಳು ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಆಶ್ಚರ್ಯದ ಸಂಗತಿ ಎಂದರೆ, ನಿನ್ನೆಯ ವಿಷಯ ಇಂದು ನೆನಪಿಲ್ಲ. ಮನೆಯವರು, ಸ್ನೇಹಿತರು ಏನಾದರೂ ತರಲು ಹೇಳಿದಾಗ ಮರುದಿನ ನೆನಪೇ ಇರುವುದಿಲ್ಲ. ನಂತರ ನೆನಪಾಗುತ್ತದೆ. ಇದರಿಂದಾಗಿ ನಾನು ಬಹುವಾಗಿ ನೊಂದುಕೊಳ್ಳುತ್ತೇನೆ.

ನನ್ನ ನೆನಪಿನ ಸಾಮರ್ಥ್ಯದಲ್ಲಿ ಏನೋ ಬದಲಾವಣೆ ಆಗಿದೆ ಎಂದು ನನಗೆ ಅನಿಸುತ್ತದೆ. ಬಹುಶ: ಮೆದುಳಿನ ಒಂದು ಭಾಗವೇ ದುರ್ಬಲವಾದ ಹಾಗೆ ಭಾಸವಾಗುತ್ತದೆ. ಇತ್ತೀಚೆಗೆ ಕೆಲವು ಮುಖ್ಯ ವಿಷಯಗಳನ್ನು ಮರೆತುಹೋಗುವುದನ್ನು ಗಮನಿಸಿದಾಗ, ಮುಂದೆ ಮರೆವಿನ ಕಾಯಿಲೆ (ಡಿಮೆನ್ಷಿಯಾ) ಯಾಗಿ ಬದಲಾಗಬಹುದೇ ಎಂಬ ಆತಂಕ ಕಾಡಲು ತೊಡಗಿದೆ. ಈಗ ನಾನು ಪ್ರತಿಯೊಂದು ವಿಷಯವನ್ನು ಬರೆದಿಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ಹಿಂದಿನ ದಿನವೇ ಮರುದಿನದ ಕೆಲಸಗಳ ಪಟ್ಟಿ, ದಿನ, ತಾರೀಕು, ಏನು ಮಾಡಬೇಕು, ಬ್ಯಾಂಕ್, ಮಾರ್ಕೆಟ್, ದಿನಸಿ ಸಾಮಗ್ರಿ, ಮುಂತಾದ ಪಟ್ಟಿಯನ್ನೇ ಮಾಡಿದ್ದೇನೆ. ಮೊಬೈಲ್‌ನಲ್ಲಿ ಪದಬಂಧ, ಕ್ರಾಸ್ ವರ್ಡ್ ಫಜûಲ್ ಬಿಡಿಸುವ ಹವ್ಯಾಸ ಬೆಳೆಸಿದ್ದೇನೆ. ನೆನಪಿನ ಶಕ್ತಿಯನ್ನು ಸುಧಾರಿಸಲು ನನ್ನಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇನೆ. ಪುಸ್ತಕಗಳನ್ನು ಓದಿದಾಗಲೂ ಒಂದೆರಡು ವಾರದಲ್ಲಿಯೇ ಮರೆತುಹೋಗುತ್ತಿತ್ತು. ಅದಕ್ಕಾಗಿಯೇ ಒಂದು ನೋಟ್ ಪುಸ್ತಕವನ್ನು ಇಟ್ಟು, ಅದರಲ್ಲಿ ಮುಖ್ಯ ಅಂಶಗಳನ್ನು ಬರೆದಿಡುತ್ತಿದ್ದೇನೆ. ಮನೆಯಿಂದ ಹೊರಗೆ ಹೋಗುವಾಗ ಎಲ್ಲಾ ದೀಪಗಳನ್ನು ಆರಿಸಿದ್ದೇನೆ, ಗ್ಯಾಸ್ ಬಂದ್ ಮಾಡಿದ್ದೇನೆ, ಹಿಂದಿನ ಬಾಗಿಲು ಭದ್ರ ಪಡಿಸಿದ್ದೇನೆ, ಮುಂದಿನ ಬೀಗ ಹಾಕಿ, ಸರಿಯಾಗಿ ಒಮ್ಮೆ ಎಳೆದು ನೋಡಿದ್ದೇನೆ, ಎಂದೆಲ್ಲಾ ಖಾತ್ರಿ ಮಾಡಿ ನನ್ನ ಚೆಕ್ ಲಿಸ್ಟ್ನ್ನು ಪರಿಶೀಲಿಸುತ್ತೇನೆ. ದಿನಚರಿ ಪುಸ್ತಕ ಮತ್ತು ಟು-ಡು-ಲಿಸ್ಟ್ ನನ್ನ ಬಳಿ ಯಾವತ್ತೂ ಇರುತ್ತದೆ. ಆಯಾಯ ದಿವಸದ ಮಾಡಬೇಕಾದ ಎಲ್ಲಾ ಕೆಲಸಗಳ ಪಟ್ಟಿಯನ್ನು ಹಿಂದಿನ ದಿನವೇ ಬರೆದಿಟ್ಟು ಕೊಳ್ಳುತ್ತೇನೆ. ಕೆಲಸಗಳು ಮುಗಿದ ಬಳಿಕ, ಅದರ ಮುಂದೊAದು ‘ಟಿಕ್ ಮಾರ್ಕ್’. ಈ ಬರೆಯುವ ಅಭ್ಯಾಸವು ನನ್ನ ಸ್ಮರಣಶಕ್ತಿ ವೃದ್ಧಿಸಲು ತುಂಬಾ ಸಹಕಾರಿಯಾಗಿದೆ.

ಇಂಥಾ ಮರೆವಿನ ಸಮಸ್ಯೆಗಳು ವಯೋಸಹಜ ಆಗಿದ್ದರೂ, ಮೆದುಳನ್ನು ಚುರುಕಾಗಿ ಇಡುವುದು ಅತ್ಯವಶ್ಯಕ. ದೇಹದ ಎಲ್ಲಾ ಭಾಗಗಳಿಗೆ ಪ್ರಾಮುಖ್ಯತೆ ಕೊಟ್ಟಂತೆ, ಮೆದುಳಿನ ಆರೋಗ್ಯವನ್ನು ನಿರ್ಲಕ್ಷಿಸುವಂತಿಲ್ಲ. ಉತ್ತಮ ಜೀವನ ಶೈಲಿ, ಧ್ಯಾನ, ವ್ಯಾಯಾಮ, ಮಾನಸಿಕ ಚಟುವಟಿಕೆ, ಪೌಷ್ಟಿಕಾಂಶ ಆಹಾರ, ಆದಷ್ಟು ಜನರೊಡನೆ ಬೆರೆಯುವಂತೆ ನೋಡುವುದು, ಸರಿಯಾದ ನಿದ್ರೆ, ಒತ್ತಡ ರಹಿತ ಬದುಕು- ಇವೆಲ್ಲಾ ಮೆದುಳಿಗೆ ಉತ್ತಮ ಪರಿಣಾಮ ಬೀರುತ್ತದೆ. ವಯಸ್ಸಾಗುತ್ತಿದ್ದಂತೆ ಮರೆವು ಸರ್ವೇ ಸಾಮಾನ್ಯವಾದಾರೂ, ಅದೊಂದು ಕಾಯಿಲೆ, ದುರ್ಬಲತೆ, ಅಥವಾ ಗಂಭೀರ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಅಗತ್ಯ. ನೆನಪು ಹಾಗೂ ಮರೆವು ಒಂದೇ ನಾಣ್ಯದ ಎರಡು ಮುಖಗಳು ಎಂದು ನರತಜ್ಞರು ಅಭಿಪ್ರಾಯ ಪಡುತ್ತಾರೆ. ಅಪ್ರಸ್ತುತ, ಅಸಂಬದ್ಧ ವಿಷಯಗಳನ್ನು ಮರೆತಾಗ ಮೆದುಳು ಅರ್ಥಪೂರ್ಣ ವಿಷಯಗಳನ್ನು ನೆನಪಿಸುತ್ತವೆ, ಎಂದು ಓದಿದ ನೆನಪು. ಸ್ಮರಣೆ ಶಕ್ತಿ ಎನ್ನುವುದು ನಮಗೆ ದೇವರು ಕೊಟ್ಟ ವರದಾನ. ಹಾಗೆಯೇ ಮರೆವು ಪ್ರಕೃತಿದತ್ತವಾಗಿ ನಮಗೆ ದೊರಕಿದ ನಿಶ್ಯಬ್ದ ಆಶೀರ್ವಾದ ಎನ್ನುತ್ತಾರೆಯಾದರೂ, ಮರೆವು ಒಂದು ರೀತಿಯಲ್ಲಿ ಶಾಪವೂ ಹೌದು.

ಇಂದು ಮರೆವು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆಯೆAದೇ ಹೇಳಬಹುದು. ಆದರೆ ಇದು ನನ್ನ ದೌರ್ಬಲ್ಯವಲ್ಲ. ನನ್ನನ್ನು ಹೆಚ್ಚು ಜಾಗರೂಕಳನ್ನಾಗಿ ಮಾಡಿದೆ ಎಂದು ನನಗನಿಸಿದೆ. ಪ್ರತಿಯೊಂದೂ ಕೆಲಸವನ್ನು ಶ್ರದ್ಧೆಯಿಂದ ಮತ್ತು ಏಕಾಗ್ರತೆಯಿಂದ ಮಾಡುವುದರ ಜೊತೆಗೆ, ವಸ್ತುಗಳನ್ನು ಸರಿಯಾಗಿ ನಿಗದಿತ ಜಾಗದಲ್ಲಿಯೇ ಇಡುವ ಪರಿಪಾಠ ಬೆಳೆಸಿಕೊಂಡಿದ್ದೇನೆ. ಒಟ್ಟಿನಲ್ಲಿ, ಈ ಮರೆಗುಳಿತನ ನನ್ನ ಮುಂದಿನ ಬದುಕಿನ ಮೇಲೆ ಯಾವುದೇ ರೀತಿಯ ಅಪಾಯ ಬೀರದಿರಲಿ ಎಂದು ಶಕ್ತಿ ಮೀರಿ ಪಯತ್ನಿಸುತ್ತಿದ್ದೆನೆ. ಮೆದುಳನ್ನು ಚುರುಕಾಗಿಡುವ ಉತ್ತಮ ಅಭ್ಯಾಸಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿದ್ದಲ್ಲಿ, ಮುಂದಕ್ಕೆ ಉಂಟಾಗುವ ಡಿಮೆನ್ಷಿಯಾ ಅಥವಾ ಆಲ್ಜೆöÊಮರ್ ಎಂಬ ಗಂಭೀರ ಸಮಸ್ಯೆಯಿಂದ ಪಾರಾಗಬಹುದು. ಪ್ರತೀ ವರ್ಷ ಸೆಪ್ಟೆಂಬರ್ ೨೧ರಂದು ಸಾರ್ವಜನಿಕರಲ್ಲಿ ಮತ್ತು ಅತೀ ಮುಖ್ಯವಾಗಿ ಹಿರಿಯ ನಾಗರಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ‘ವಿಶ್ವ ಆಲ್ಜೆöÊಮರ್ಸ್ ದಿನ’ವನ್ನು ಆಚರಿಸಲಾಗುತ್ತದೆ. ಮರೆವು ಒಂದು ಖಾಯಿಲೆ ಅಲ್ಲ. ಪ್ರೀತಿ ಮತ್ತು ಕಾಳಜಿಯಿಂದ ಖಂಡಿತವಾಗಿಯೂ ವೃದ್ಧಾಪ್ಯದಲ್ಲಿ ಕುಟುಂಬದವರೊಡನೆ ಸಂತೋಷದ ಬದುಕನ್ನು ನಡೆಸಲು ಸಾಧ್ಯ ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತದೆ.

ಶೈಲಾರಾಣಿ ಬೋಳಾರ್, ಮಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *