ಬಾಲ್ಯಕಾಲ ಸಖೀ…
ಕೇರಳ-ಕರ್ನಾಟಕದ ಗಡಿಭಾಗದಲ್ಲಿ ನಮ್ಮ ಪ್ರಾಥಮಿಕ ಶಾಲೆ. ದಿನಾ ಬೆಳಗ್ಗೆ ತಿಂಡಿ ಮುಗಿಸಿ ಚೀಲ ಹೆಗಲಿಗೆ ಹಾಕಿ ಹೊರಟರೆ ಹಾದಿಯ ಆಚೀಚೆಯ ಮರ, ಗಿಡ, ಬಳ್ಳಿಗಳ ಕಾಯಿ, ಹಣ್ಣುಗಳಿಗೆ ನಾವೇ ಹಕ್ಕುದಾರರು. ಹಾದಿಪಕ್ಕದ ಪುನರ್ಪುಳಿ(ಕೋಕಮ್) ಮರಕ್ಕೆ ಕಲ್ಲು ಬೀಸಿದರೆ ರಾಶಿ, ರಾಶಿ ಮೆರೂನ್ ಬಣ್ಣದ ಫ಼್ರೆಶ್ ಹಣ್ಣುಗಳನ್ನು ಉದುರಿಸುತ್ತಿತ್ತು. ಗೇರು ಮರಗಳ ಕೆಂಪು ಹಳದಿ ಹಣ್ಣುಗಳಿಗೆ ನಮ್ಮದೇ ಅಧಿಕಾರ, ಕಾಡುಮಾವಿನ ಮರಕ್ಕೆ ಕಲ್ಲೆಸೆದಾಗ ಉದುರುವ ಕಾಯಿಗಳಿಗೆ ಮೊದಲೇ ಚೀಲದಲ್ಲಿ ತಂದಿರುತ್ತಿದ್ದ ಹಸಿಮೆಣಸು, ಉಪ್ಪು ಸೇರಿಸಿ ಕಚ್ಚುತ್ತ, ಒಡೆದು ತಿನ್ನುತ್ತ, ಜೊತೆಗೆ ಅದರ ಬಣ್ಣ ಉಡುಪಿಗೆ ಬೀಳುತ್ತ ಶಾಲೆ ತಲಪಿದಾಗ ಭರ್ತಿ ಹತ್ತೂವರೆ ಗಂಟೆ. ಬಾಗಿಲಲ್ಲೇ ಉದ್ದ ಬೆತ್ತ ಹಿಡಿದು ಕಾಯುತ್ತ ನಿಂತ ಮೇಷ್ಟ್ರು ಬೆನ್ನಿಗೆರಡೆರಡು ಹಂಚಿಕೊಟ್ಟು ಒಳಗೆ ಕರೆಯುತ್ತಿದ್ದರು. ಊಟದ ಬಿಡುವಿನ ಮಧ್ಯಾಹ್ನ ತಂದ ನಾಲ್ಕೇ ತುತ್ತು ಮಜ್ಜಿಗೆ ಅನ್ನ ಉಂಡು ಸ್ನೇಹಿತೆಯರ ಜೊತೆ ಕಬಡ್ಡಿ ಆಟ. ಆ ಆಟದ ಮಜಾವೇ ಬೇರೆ. ಆಡಿದಷ್ಟೂ ಸಾಲದು. ಸಂಜೆ ಯಥಾಪ್ರಕಾರ ಮನೆಗೆ. ಶಾಲೆ ಇದ್ದಿದ್ದು ಕೇರಳದಲ್ಲಿ; ಮನೆ ಕರ್ನಾಟಕದಲ್ಲಿ. ದಿನಾ ಎರಡು ರಾಜ್ಯಗಳಲ್ಲಿ ಸಂಚಾರ ನಮ್ಮದು. ಅಕ್ಕಮ್ಮ, ನೆಬಿಸಾ, ರತ್ನಾ, ಜೈಶ್ರೀ, ಕುಸುಮ, ಶಾಂತ ನಮ್ಮದೇ ಒಂದು ಗುಂಪು. ನೆಬಿಸಾ ಅಪ್ಪನಿಗೆ ಅಂಗಡಿ; ಆಕೆ ಅಪರೂಪಕ್ಕೆ ತರುತ್ತಿದ್ದ ಖರ್ಜೂರ ನಮಗೆ ಪಂಚಪ್ರಾಣ.
ಕೇರಳದ ಶಾಲೆಗಳಲ್ಲಿ ಶನಿವಾರ,ರವಿವಾರ ಎರಡು ದಿನವೂ ರಜೆ. ಶುಕ್ರವಾರ ಮಧ್ಯಾಹ್ನ ಬಿಡುವಿನ ಅವಧಿ ಹೆಚ್ಚು. ಆ ದಿನ ಮಧ್ಯಾಹ್ನ ನಮ್ಮ ಮನೆಗೆ ಪಯಣ. ಅವರೆಲ್ಲರಿಗೂ ಮೊಸರು, ಉಪ್ಪಿನಕಾಯಿಯ ಊಟ ಅಂದರೆ ಬಲುಪ್ರೀತಿ. ಆದಿತ್ಯವಾರ ಜೈಶ್ರೀ ಮನೆಗೆ ಸವಾರಿ. ಅವರದು ಚಿಪ್ಪಾರು ಅರಮನೆಯೆಂದೇ ಹೆಸರಿನ ಮನೆ. ಪ್ರಸಿದ್ದ ಯಕ್ಷಗಾನದ ಮನೆತನ.ಅಲ್ಲಿ ಮನೆ ಯಜಮಾನ ಬಲ್ಲಾಳರದು ಆತ್ಮೀಯ ಸ್ವಾಗತ. ಮನೆ ಯಜಮಾಂತಿಯರೂ ಕಡಿಮೆ ಇಲ್ಲ. ಅಲ್ಲಿ ನಮ್ಮದು ಯಕ್ಷಗಾನದ ಪ್ರಾತ್ಯಕ್ಷಿಕೆ ನಡೆಯುತ್ತಿತ್ತು. ಡಬ್ಬ ಕವಚಿ ಹಾಕಿ ಚೆಂಡೆ, ಮದ್ದಳೆಗೆ ಅವಳ ತಮ್ಮಂದಿರು. ವಿಸ್ತಾರವಾದ ಆ ಮನೆಯಲ್ಲಿ ನಾವು ಹೇಗೆ ಕಿರುಚಿದರೂ ಕೇಳುವವರಿಲ್ಲ. ಹನ್ನೊಂದು ಗಂಟೆಗೆ ಬಾಯಾರಿಕೆಗೆ ಕುಡಿಯಲು ಬುಲಾವ್ ಬರುತ್ತಿತ್ತು. ಬಹುಶ ಅದಕ್ಕೆ ಕಾಯುತ್ತಿದ್ದೆವು ನಾವು.
ಹೊಸಾ ದೊಡ್ಡ ಸ್ಟೀಲ್ ಪಾತ್ರೆಯಲ್ಲಿ ದೊಡ್ಡ ಗಾತ್ರದ ಗೆಂದಾಳಿ ಬೊಂಡ(ಎಳನೀರು) ಕೊಚ್ಚಿ ಸುರಿಯುತ್ತಿದ್ದರು. ಜೊತೆಗೆ ಅದರ ಎಳೆ ತಿರುಳು ತೆಗೆದು ಎಳನೀರಿಗೆ ಬೆರೆಸುತ್ತಿದ್ದರು. ಅದರ ಮೇಲಿಂದ ನಸುಗೆಂಪು ಬಣ್ಣದ ಕಲ್ಲುಸಕ್ಕರೆ. ಕಿರಿ ಬಲ್ಲಾಳರು ಸೌಟು ಹಾಕಿ ಬೆರೆಸಿ ಸರಿಯಾಗಿ ಮಿಶ್ರ ಮಾಡುತ್ತಿದ್ದರು. ಆಗ ಯಜಮಾಂತಿ ಇಡಿಯಾಗಿರುವ ಬಾಳೆಗೊನೆ ತಂದಿಡುತ್ತಿದ್ದರು. ಅದರ ಹಳದಿ ಹಳದಿ ಬಣ್ಣದ ದೊಡ್ಡ ಗಾತ್ರದ ಹಣ್ಣು ಕಾಣುವಾಗಲೇ ಹಸಿವು. ನಾವು ತಿನ್ನಲು ಸಂಕೋಚಪಡಬಾರದು ಎಂದು ಆ ಕೋಣೆಯ ಬಾಗಿಲೆಳೆದುಕೊಂಡು ದೊಡ್ಡವರು ಹೊರಹೋಗುತ್ತಿದ್ದರು. ದೊಡ್ಡಸೈಜ಼ಿನ ಸ್ಟೀಲಿನ ಹೊಸ ಲೋಟಗಳು. ಅದರ ರುಚಿಗೆ ನಮ್ಮ ಸಂಕೋಚ ಎತ್ತ ಸವಾರಿ ಬಿಡುತ್ತಿತ್ತೋ? ಅದರ ಸವಿ ಹೇಳಲು ನಿಜಕ್ಕೂ ಶಬ್ದಗಳಿಲ್ಲ. ಆ ಪರಿಯ ಅಮೃತ. ಮತ್ತೆ ಇಡೀ ದಿನ ಆಟ, ಯಕ್ಷಗಾನ ಕುಣಿತ.
ಊಟಕ್ಕೆ ಹಸಿವೆ ಆಗದ ಹಾಗೆ ಎಳನೀರು, ಬಾಳೆಹಣ್ಣು. ಸಂಜೆಗೆ ಕಿರಿ ಬಲ್ಲಾಳರು ಕತ್ತಿ ಹಿಡಿದು ಕಬ್ಬಿನ ಗದ್ದೆಗೆ ಕರೆಯುತ್ತಿದ್ದರು.ಅಲ್ಲಿ ಸಿಹಿ ಕಬ್ಬು ಕತ್ತರಿಸಿ ಸಮರಾಧನೆ.; ಜೊತೆಗೆ ಮನೆಗೆ ಒಯ್ಯಲು ಕಬ್ಬು. ಕೊನೆಗೊಮ್ಮೆ ಒಲ್ಲದ ಮನಸ್ಸಿಂದ ನಮ್ಮ ನಮ್ಮ ಮನೆಗೆ ಹೊರಟಾಗ ಹಿರಿಬಲ್ಲಾಳರು ತಮ್ಮ ನೌಕರರನ್ನು ಕರೆದು ದೊಡ್ಡ ಗೋಣಿಚೀಲ ತುಂಬಿಸಿ ಹೊರೆಸಿ ನಮ್ಮಲ್ಲಿಗೆ ಕಳಿಸುತ್ತಿದ್ದರು. ಹಸನ್ಮುಖರಾಗಿ ನಮ್ಮನ್ನು ಕಳಿಸುತ್ತಿದ್ದರು ಮನೆಯ ಮಹಿಳೆಯರು, ಮನೆ ಯಜಮಾನರು. ಗೋಣಿಚೀಲದ ತುಂಬ ಅವರ ಮನೆಯಲ್ಲಿ ಬೆಳೆಸಿದ ತಾಜಾ ತರಕಾರಿಗಳು. ಮನೆ ತಲಪುವಾಗ ಕತ್ತಲು. ಮರುವಾರದ ಭಾನುವಾರ ಅದೇ ಗುಂಪು ನಮ್ಮಲ್ಲಿಗೆ. ಮಧ್ಯಾಹ್ನ ಎಲ್ಲರಿಗೂ ಕಡಲೆಬೇಳೆ ಪಾಯಸದ ಊಟ. ಒಂದೇ ಜೀವದ ಹಾಗಿದ್ದ ನಾವು ಪ್ರಾಥಮಿಕ ಶಾಲೆ ಮುಗಿಸಿ ಬೇರೆ ಬೇರೆ ಶಾಲೆಗಳಿಗೆ ಸೇರ್ಪಡೆಗೊಂಡಾಗ ಗಟ್ಟಿಯಾಗಿ ಅತ್ತಿದ್ದೆವು. ಕೊನೆಯದಿನ ಎಚ್.ಎಮ್.ರ ಹತ್ತಿರ ಹೋಗಿ ಕಾಲು ಮುಟ್ಟಿ ನಮಸ್ಕರಿಸಿ ಪ್ರಾಥಮಿಕ ಶಾಲೆಗೆ ವಿದಾಯ ಕೋರಿದ್ದೆವು ಒಲ್ಲದ ಮನಸ್ಸಿಂದ. ಬಹುಶ ಇಂದಿನ ಯಾವ ವಿದ್ಯಾರ್ಥಿಯೂ ಕಾಲು ಮುಟ್ಟಿ ನಮಸ್ಕರಿಸುವುದು ಅಪರೂಪದ ವಿಚಾರ.
ನಾನಾ ಊರುಗಳಲ್ಲಿ ಹಂಚಿಹೋದ ಸ್ನೇಹಿತೆಯರು ನಂತರ ಒಟ್ಟಾಗಿದ್ದು ಕಡಿಮೆ. ಆಗೀಗ ಒಬ್ಬೊಬ್ಬರು ಭೇಟಿಯಾಗುತ್ತಿದ್ದೆವು. ಮೊದಲಿನದೇ ಮಧುರ ಸ್ನೇಹ ಉಳಿದಿದೆ. ಕಳೆದ ಬಾರಿ ಜೈಶ್ರೀ ಇದ್ದ ಊರಿಗೆ ಕಾರ್ಯ ನಿಮಿತ್ತ ಎರಡುದಿನ ಹೋಗಲಿತ್ತು. ವಿಳಾಸ ,ಫೋನ್ ನಂಬರ್ ತೆಗೆದುಕೊಂಡು ಹೋಗಿದ್ದೆ. ಎರಡೂ ದಿನವೂ ಅಲ್ಲಿಯೇ ವಸತಿ. ಕಲಾ ಪರಂಪರೆಯ ಆ ಮನೆಯಲ್ಲಿ ಆಕೆಯ ಪತಿ, ಮಗ, ಮಗಳು, ಎಲ್ಲಕ್ಕೂ ಮಿಗಿಲಾಗಿ ಜೈಶ್ರೀ ಆದರಿಸಿದ ಉಪಚರಿಸಿದ ಬಗೆ ಮರೆಯಲು ಸಾಧ್ಯವಿಲ್ಲ. ಅಂದು ನಾಲ್ಕು ಅಡಿ ಉದ್ದವಿದ್ದ ಅವಳ ತಮ್ಮಂದಿರು ಇಂದು ಆರಡಿ ಎತ್ತರ ಬೆಳೆದು ಎದುರು ನಿಂತು ಅಂದಿನದೇ ಆತ್ಮೀಯತೆ, ಪ್ರೀತಿ , ಅಭಿಮಾನದಿಂದ ಮಾತಾಡುವಾಗ ನನ್ನ ಸ್ವಂತ ತಮ್ಮಂದಿರು ಎಂಬ ಪ್ರೀತಿ ಉಕ್ಕುತ್ತದೆ. ಎಲ್ಲಕ್ಕೂ ಮಿಗಿಲಾಗಿ ಪತ್ನಿಯೆಂದರೆ ಅಪಾರ ಪ್ರೀತಿ ಹೊಂದಿರುವ ಆಕೆಯ ಪತಿ, ಅವರ ಮನೆಯವರು, ರಕ್ತಸಂಬಂಧಕ್ಕಿಂತ ಈ ಸ್ನೇಹ ಸಂಬಂಧ ಗಟ್ಟಿ ಎಂದು ಕಾಣುತ್ತದೆ.
ನೆಬಿಸಾ ತೀರಿಕೊಂಡಿದ್ದು ಅವಳ ಹದಿನೈದರ ವಯಸ್ಸಿನಲ್ಲಿ. ಅಕ್ಕಮ್ಮ ಎಲ್ಲಿದ್ದಾಳೆಂದು ಗೊತ್ತಿಲ್ಲ. ಉಳಿದವರೆಲ್ಲ ಅದೇ ಆತ್ಮೀಯ ಸ್ನೇಹ ಉಳಿಸಿಕೊಂಡಿದ್ದೇವೆ. ಬಾಲ್ಯದ ಆ ಸ್ನೇಹ ಉಳಿದಂತೆ ನಂತರದ ಸ್ನೇಹಿತೆಯರ ಪ್ರಭಾವ ಉಳಿದಿಲ್ಲ ಎಂಬುದು ಸತ್ಯ. ಎಂಟು,ಹತ್ತರ ವಯಸ್ಸಿನಲ್ಲಿ ನಾವುಗಳು ಕಬಡ್ದಿ ಪ್ಲೇಯರ್ ಗಳು ಎಂದು ಹೇಳಿಕೊಳ್ಳಲು ಎಂದಿಗೂ ಸಂಕೋಚವಿಲ್ಲ.
– ಕೃಷ್ಣವೇಣಿ ಕಿದೂರು, ಕಾಸರಗೋಡು.
ನಿಮ್ಮ ಬಾಲ್ಯದ ಶಾಲಾ ದಿನಗಳ ಚಿತ್ರಪಟವನ್ನು ಇವತ್ತಿಗೂ ಚೆನ್ನಾಗಿ ಇಟ್ಟಿರೋದು ನೋಡಿ ಸಂತೋಷವಾಯಿತು.