ಪೂರ್ವ ಸಿದ್ದತೆ
ಬಾಲ್ಯದಿಂದಲೂ, ಅಮೇರಿಕಾ ನಮಗೆ ಒಂದು ಅಪೂರ್ವ ಕಿನ್ನರ ಲೋಕ. ಅಲ್ಲಿ ಹಾಗಂತೆ, ಹೀಗಂತೆ ಕಾರು ರಿಪೇರಿಗೆ ಬಂದರೆ ಅಲ್ಲೇ ರೋಡ್ ಪಕ್ಕದಲ್ಲೇ ಬಿಟ್ಟು ಹೊಸದೇ ಖರೀದಿಸುತ್ತಾರ೦ತೆ. ಕಾರಲ್ಲಿ ಹೋಗುವಾಗ ಅದೇನೋ ಹಾಕಿದರೆ ಎಡಕ್ಕೆ ಹೋಗಿ, ಬಲಕ್ಕೆ ಹೋಗಿ, ಸೀದಾ ಹೋಗಿ, ಅ೦ತಾ ಹೇಳುತ್ತ೦ತೆ, ಅಲ್ಲಿ ಎಲ್ಲಾ ತುಂಬಾ ಚೊಕ್ಕಟವಂತೆ, ಒಂದು ಪೇಪರ್ ಪೀಸ್ ಕೂಡ ಎಲ್ಲೂ ಕಾಣುವುದಿಲ್ಲವಂತೆ. ಹೀಗೆ ಆಗಿನಿಂದಲೂ ಕೇಳಿದ ಅ೦ತೆ ಕ೦ತೆ ಗಳಿ೦ದ ಪ್ರಭಾವಿತನಾಗಿ, ಅಮೆರಿಕ ನೋಡಬೇಕೆಂಬ ಹಂಬಲ ಉತ್ಕಟವಾಗಿತ್ತು. . ಆದರೆ ನಾನಾ ಕಾರಣಗಳಿಂದ (ಹಣಕಾಸಿನ ತೊಂದರೆ, ಸಮಯದ ಅಭಾವ, ಇಚ್ಛಾ ಶಕ್ತಿಯ ಕೊರತೆ) ಅದು ಕೈಗೂಡಿರಲಿಲ್ಲ. ಈಗ ನೌಕರಿಯಿ೦ದ ನಿವೃತ್ತನಾದ ಮೇಲೆ, ಅಲ್ಲಿರುವ ನಾದಿನಿ ಮತ್ತು ಶಡ್ಡುಕ ಆಹ್ವಾನಿಸಿದಾಗ, ಹೇಗಾದರೂ ಮಾಡಿ ಹೋಗೇ ಬಿಡಬೇಕೆಂಬ ಆಸೆ ಉಂಟಾಗಿ, ಪ್ರವಾಸಿ ಆಯೋಜಕ ಸಂಸ್ಥೆ ಥಾಮಸ್ ಕುಕ್ನಲ್ಲಿ ವಿಚಾರಿಸಿದಾಗ, ಅಮೆರಿಕದ ವೀಸಾ ಇದ್ದರೆ ಮಾತ್ರ ಸಾಧ್ಯ ಇಲ್ಲದಿದ್ದರೆ ಸಾಧ್ಯವಿಲ್ಲ, ಈಗ ಯಾರಿಗೂ ವೀಸಾ ಸಿಗುತ್ತಿಲ್ಲವೆಂದು ತಿಳಿಸಿದರು, “ಗಾಳಿ ಬಿಟ್ಟ ಬಲೂನಿನಂತೆ” ಉತ್ಸಾಹವೆಲ್ಲ ಇಳಿದು ಹೋಯಿತು. ಆಗ ಕೆಲವರು ಅಮೇರಿಕಾ ಗಿ೦ತ ಯುರೋಪ್ ಪ್ರವಾಸ ಚೆನ್ನಾಗಿರುತ್ತದೆ. ಅಮೆರಿಕದಲ್ಲಿ ನಯಾಗರ ಫಾಲ್ಸ್, ಗ್ರಾಂಡ್ ಕ್ಯನ್ಯೆನ್ ಬಿಟ್ಟರೆ ಬೇರೇನೂ ಇಲ್ಲ. ಬರೀ ಮಾನವ ನಿರ್ಮಿತ ಕಟ್ಟಡಗಳು. ಆದರೆ ಯುರೋಪ್ ನಲ್ಲಿ ನಿಸರ್ಗ ಸೌಂದರ್ಯದ ಜೊತೆಗೆ, ಐತಿಹಾಸಿಕ ಸ್ಥಳಗಳನ್ನೂ ನೋಡಬಹುದು ಎಂದು ತಿಳಿಸಿದರು. “ಸಿಗದ ದ್ರಾಕ್ಷಿ ಹುಳಿ” ಎಂದ ನರಿಯ ಹಾಗೆ, ಅಮೇರಿಕಾ ಪ್ರವಾಸದ ಆಸೆ ಬಿಟ್ಟು, ಯುರೋಪ್ ಪ್ರವಾಸಕ್ಕೆ ಹೋಗುವ ಆಲೋಚನೆ ತಲೆಯಲ್ಲಿ ಬಂತು. ಕಡೇ ಪಕ್ಷ ಮುಂದಿನ ವರ್ಷ 2026 ರಲ್ಲಿ ಪ್ರವಾಸ ಕೈಗೊಳ್ಳುವ ಉದ್ದೇಶದಿಂದ ಅನುಭವಿಗಳಿ೦ದ ಸಲಹೆ, ಸೂಚನೆ, ಮಾರ್ಗದರ್ಶನ, ಪಡೆಯಲು ನಮ್ಮ ಕೃಷಿ ಗೆಳೆಯರ ಅಗ್ರಿ 77 ಗುಂಪಿನಲ್ಲಿ ನನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ. ಸೂಕ್ತ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೆ. ಅದೇ ಸಮಯದಲ್ಲಿ ಗೆಳೆಯ ಗುರುಪ್ರಸಾದ್ ಇದೇ ಏಪ್ರಿಲ್ 27ರಂದು ಯೂರೋಪ್ ಪ್ರವಾಸ ಹೊರಟಿರುವುದಾಗಿ ತಿಳಿಸಿದಾಗ, ಮುಂದಿನ ವರ್ಷದವರೆಗೆ ಯಾಕೆ ಕಾಯುವುದು, ನಾಳೆ ಮಾಡುವ ಕೆಲಸ ಇಂದೇ ಮಾಡು ಎನ್ನುವಂತೆ ತಕ್ಷಣ ಕಾರ್ಯಪ್ರವೃತ್ತನಾದೆ.
ವಿವರಗಳನ್ನು ಕೇಳಿದಾಗ ಅವರು ಸಂಬಂಧ ಪಟ್ಟ ಆಯೋಜಕ ಸಂಸ್ಥೆಯನ್ನು ಸಂಪರ್ಕ ಮಾಡಲು ತಿಳಿಸಿ, ಅವರ ಫೋನ್ ನಂಬರ್ ಕೊಟ್ಟರು. ಆ ವ್ಯಕ್ತಿಯನ್ನು ಸಂಪರ್ಕಿಸಿದಾಗ ಸಂಸ್ಥೆಯ ಹೆಸರು ಟ್ರಿಪ್ ಫ್ಯಾಕ್ಟರಿ ಎಂದೂ, ಅವರ ಕಛೇರಿ ಕೊಡಿಗೆಹಳ್ಳಿ ಗೇಟ್ ಬಳಿ ಇರುವುದಾಗಿಯೂ ಗೊತ್ತಾಯಿತು. ಬೆಂಗಳೂರಿನಲ್ಲಿ “ಟಿನ್ ಫ್ಯಾಕ್ಟರಿ” ಕೇಳಿದ್ದೇವೆ ಇದ್ಯಾವುದಪ್ಪ “ಟ್ರಿಪ್ ಫ್ಯಾಕ್ಟರಿ” ಎನ್ನುವ ಆಶ್ಚರ್ಯದೊಂದಿಗೆ, ಆ ಸ೦ಸ್ಥೆಯನ್ನು ಸ೦ಪರ್ಕಿಸಿ ನಮ್ಮ ಇಚ್ಛೆಯನ್ನು ತಿಳಿಸಿ, ಗುರುಪ್ರಸಾದ್ ರವರ ತಂಡದಲ್ಲೇ ನಮ್ಮನ್ನೂ ಸೇರಿಸಿಕೊಳ್ಳಲು ಕೋರಿದೆವು. ಆಗ ಅವರು ಒಬ್ಬೊಬ್ಬರಿಗೆ ರೂ. 5000 ಹಣ ಪಾವತಿಸಿ ನೊಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. ಇದಾದ ನಂತರ ಪ್ರವಾಸದ ವಿವರಗಳನ್ನು ಕೊಟ್ಟರು, 16 ದಿನ 15 ರಾತ್ರಿ ಗಳ ಪ್ರವಾಸ. ಲ೦ಡನ್ ಸೇರಿಸಿ ಒಟ್ಟು 9 ದೇಶ ಗಳಿಗೆ ಭೇಟಿ ಎ೦ದು ಗೊತ್ತಾಯಿತು. ನಮ್ಮ ಎಲ್ಲಾ ಪ್ರವಾಸಗಳಿಗೆ ಜೊತೆಯಾಗಿದ್ದ ತ೦ಗಿ ಮತ್ತು ಭಾವನವರಿಗೆ ವಿಷಯ ತಿಳಿಸಿದಾಗ ಅವರೂ ಬರಲು ಒಪ್ಪಿದರು. ಒಟ್ಟು ಒಬ್ಬೊಬ್ಬರಿಗೆ 4.05 ಲಕ್ಷ. ವೀಸಾ ಗೆ ಮತ್ತು ವಿಮಾನದ ಟಿಕೆಟ್ಗೆ ತಕ್ಷಣ ಸ್ವಲ್ಪ ಹಣ ಕೊಡಬೇಕೆ೦ದೂ, ಉಳಿದಿದ್ದನ್ನು ಪ್ರವಾಸದ 20 ದಿನ ಮು೦ಚಿತವಾಗಿ ಕೊಡಬೇಕೆ೦ದೂ ತಿಳಿಸಿದರು. ಈ ಸ್ವಲ್ಪ ಹಣ ಪಾವತಿಸಿದ ನ೦ತರ, ಒಂದು ದಿನ ಯು ಕೆ ವೀಸಾಗೆ ಬಯೋಮೆಟ್ರಿಕ್ ಮತ್ತು ಡಾಕ್ಯುಮೆಂಟೇಶನ್ಸ್ ಅಡ್ಮಿಶನ್ ಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ವಿ ಎಫ್ ಎಸ್ ಗ್ಲೋಬಲ್ ಗೆ ಹೋಗಬೇಕೆಂದೂ, ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹೋಗಬೇಕೆಂದೂ, ಆದಾಯ ಮತ್ತು ಪ್ರವಾಸಕ್ಕೆ ಬೇಕಾದ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕೆಂದು ತಿಳಿಸಲಾಯಿತು. ಅದರಂತೆ ಬೆಂಗಳೂರಿನ ಟ್ರಾಫಿಕ್ ನಂಬಲಾಗುವುದಿಲ್ಲವೆಂದು ಮೂರು ಗಂಟೆ ಮುಂಚಿತವಾಗಿಯೇ ಮನೆಯಿಂದ ಹೊರಟು, ಗೋಪಾಲನ್ ಮಾಲ್ ನಲ್ಲಿರುವ ವಿ ಎಫ್ ಎಸ್ ಗ್ಲೋಬಲ್ ಕಚೇರಿಯನ್ನು ಎರಡು ಗಂಟೆ ಮುಂಚಿತವಾಗಿ ಮುಟ್ಟಿದೆವು. ನಮ್ಮ ಸರದಿ ಬಂದಾಗ ಅಲ್ಲಿ ಸುರಕ್ಷತಾ ಪ್ರಕ್ರಿಯೆಗಳನ್ನು ಮುಗಿಸಿ ಒಳಗೆ ಹೋದ ಮೇಲೆ ಒಂದೆರಡು ಕೌಂಟರ್ ಗಳನ್ನು ದಾಟಿ ಮತ್ತೆ ಕುಳಿತುಕೊ೦ಡೆವು. ನಂತರ ನಮ್ಮ ಐದು ಬೆರಳುಗಳ ಗುರುತು, ಕಣ್ಣಿನ ಪಾಪೆಯ ಗುರುತು, ತೆಗೆದುಕೊಂಡು ಒಂದು ಭಾವಚಿತ್ರವನ್ನು ತೆಗೆದುಕೊಂಡು, ನಂತರ ನಾವು ಕೊಟ್ಟ ದಾಖಲೆಗಳನ್ನು ಯಥಾವತ್ತಾಗಿ ಅಪ್ಲೋಡ್ ಮಾಡಿ ತಲಾ ಮೂರು ಸಾವಿರ ತೆಗೆದುಕೊಂಡು , ಪಾಸ್ಪೋರ್ಟ್ ಮನೆಗೆ ಕಳುಹಿಸುವುದಾಗಿ ತಿಳಿಸಿದರು. ಕೇವಲ ವೀಸಾ ಕೊಡುವ ಪೂರ್ವದಲ್ಲಿ ಮಾಡುವ ಪ್ರಕ್ರಿಯೆಗಳನ್ನು ಇವರು ಮಾಡುತ್ತಾರೆ ಎಂದು ನಂತರ ತಿಳಿಯಿತು. ನಾವು ಕೊಟ್ಟ ದಾಖಲೆಗಳನ್ನು ಆನ್ಲೈನ್ ನಲ್ಲಿ ಯು ಕೆ ಕಾನ್ಸುಲೇಟ್ ಕಚೇರಿಗೆ ಕಳಿಸುತ್ತಾರೆ, ಅಲ್ಲಿ ನಮ್ಮ ವೀಸಾ ಹಣೆ ಬರಹ ಗೊತ್ತಾಗುವುದು, ಎಂದು ಗೊತ್ತಾಯಿತು. ಇವರು ಮಾಡೋದು ಕೇವಲ ಪೋಸ್ಟ್ ಆಫೀಸ್ ಕೆಲಸ. ಅದಕ್ಕೆ ಅಷ್ಟೊಂದು ಬಿಲ್ದಪ್ ಕೊಟ್ಟಿದ್ದು ಏಕೆ ಎ೦ದು ಗೊತ್ತಾಗಲಿಲ್ಲ. ಇದಾದ 15 ದಿನಕ್ಕೆ ಸರಿಯಾಗಿ ನಮ್ಮ ಮನೆ ಬಾಗಿಲಿಗೆ ವೀಸಾ ಹೊತ್ತ ಪಾಸ್ ಪೋರ್ಟ್ ತಲುಪಿದಾಗ, ಮೊದಲನೇ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿ.. ಇದಾದ 10 ದಿನಕ್ಕೆ ಯೂರೋಪ್ ವೀಸಾ ಗಾಗಿ ನಮ್ಮನ್ನು ಅದೇ ದಾಖಲೆಗಳೊಂದಿಗೆ ಟ್ರಿಪ್ ಫ್ಯಾಕ್ಟರಿ ಆಫೀಸ್ ಗೆ ಬರಬೇಕೆಂದು ತಿಳಿಸಿದರು. ಅಲ್ಲಿಗೆ ಯೂರೋಪ್ ವೀಸಾ ಕೊಡಲು ಬೇಕಾದ ಪೂರ್ವಭಾವಿ ಕೆಲಸ ಮಾಡುವ ಕಛೇರಿ ಅಧಿಕಾರಿಗಳೇ ಬಂದಿದ್ದರಿಂದ, ವಿ ಎಫ್ಎಸ್ ಗ್ಲೋಬಲ್ನವರು ಮಾಡಿದ ಕೆಲಸವನ್ನು ಇಲ್ಲೇ ಮಾಡಿದರು. ಇದಾದ ಎಂಟು ದಿನಗಳಲ್ಲಿ ಯೂರೋಪ್ ವೀಸಾ ಹೊತ್ತ ನಮ್ಮ ಪಾಸ್ ಪೋರ್ಟ್ ನಮ್ಮನ್ನು ತಲುಪಿತು. ಅಲ್ಲಿಗೆ ಲಂಡನ್ ಸೇರಿ ಯೂರೋಪ್ರಾಷ್ಟ್ರಗಳ ನಮ್ಮ ಪ್ರವಾಸಕ್ಕೆ ಬೇಕಾದ ಪೂರ್ವ ಅನುಮತಿ ಸಿಕ್ಕು ನಮ್ಮ ಪ್ರವಾಸ ಖಚಿತವಾಯಿತು. ಯೂರೋಪ್ ಜೊತೆಗೆ ಲ೦ಡನ್ ಕೂಡ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಯಿತು.
ಈ ಪ್ರವಾಸದಲ್ಲಿ ಲಂಡನ್ ಭೇಟಿ ಇದ್ದಿದ್ದರಿಂದ ಯುಕೆ ವೀಸಾ ತೆಗೆದುಕೊಳ್ಳಬೇಕು. ಯೂರೋಪ್ನ ಬಹುತೇಕ ರಾಷ್ತ್ರಗಳು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಎಲ್ಲಾ ರಾಷ್ಟ್ರಗಳಿಗೂ ಅನ್ವಯವಾಗುವಂಥ ಒಂದೇ ವೀಸಾ ಸಾಕು ಎಂಬ ನಿರ್ಣಯಕ್ಕೆ ಬಂದರು. ಈ ನಿರ್ಣಯ ಶೆ೦ಜೆನ್ ಎನ್ನುವ ಸ್ಥಳದಲ್ಲಿ ತೆಗೆದುಕೊಂಡಿದ್ದರಿಂದ ಇದನ್ನು ಶೆ೦ಜೆನ್ ವೀಸಾ ಎ೦ದು ಕರೆಯುತ್ತಾರೆ. ಹೀಗೆ ನಮ್ಮ ವಿದೇಶೀ ಪ್ರವಾಸಕ್ಕೆ ಎರಡೆರಡು ವೀಸಾ ತೆಗೆದುಕೊಳ್ಳ ಬೇಕಾಯಿತು. ಇದಾದ ನಂತರ ಬಾಕಿ ಇರುವ ಎಲ್ಲಾ ಹಣವನ್ನು ಪಾವತಿ ಮಾಡಿಸಿಕೊಂಡು ಪ್ರಯಾಣಕ್ಕೆ 8 ದಿನ ಮು೦ಚಿತವಾಗಿ ವಿಮಾನ ಪ್ರಯಾಣದ ಟಿಕೆಟ್ಗಳನ್ನು ಕಳುಹಿಸುವುದಾಗಿ ತಿಳಿಸಿದರು. ಆದರೆ ನಮ್ಮ ಪ್ರಯಾಣ ಇನ್ನು 6 ದಿನ ಇರುವಾಗಲೂ ಟಿಕೆಟ್ ಗಳನ್ನು ಕಳುಹಿಸಲಿಲ್ಲ. ಮೇಲಿಂದ ಮೇಲೆ ಫೋನಾಯಿಸಿದ ನಂತರ ನಮ್ಮ ಪ್ರಯಾಣದ ಟಿಕೆಟುಗಳನ್ನು ನಮ್ಮ ಮೊಬೈಲ್ ಫೋನ್ ಗೆ ಕಳಿಸಿದರು. ಟಿಕೆಟ್ಗಳ ಪ್ರಿ೦ಟ್ತೆಗೆದು ನಮ್ಮ ಪ್ರಯಾಣದ ವಿವರಗಳನ್ನು ಕೂಲ೦ಕುಶವಾಗಿ ಪರಿಶೀಲಿಸಲಾಗಿ ಒಮನ್ ಏರ್ ವೇಸ್ ವಿಮಾನದಲ್ಲಿ ಬೆ೦ಗಳೂರನ್ನು ಬೆಳಗ್ಗೆ 10.00 ಗ೦ಟೆಗೆ ಬಿಡುವುದೆ೦ದೂ ಮಸ್ಕಟ್ನ್ನು ಮಧ್ಯಾನ್ಹ 2.00 ಗ೦ಟೆಗೆ ಮುಟ್ಟುವುದೆ೦ದೂ ಅಲ್ಲಿ೦ದ ಮತ್ತೆ 4.00 ಗ೦ಟೆಗೆ ಹೊರಟು ರಾತ್ರಿ 8.00 ಗ೦ಟೆಗೆ ಲ೦ಡನ್ ತಲುಪುವುದೆ೦ದೂ ಗೊತ್ತಾಗಿ, ಅದನ್ನು ನಮ್ಮ ಜೊತೆ ಬರುವ ಸ್ನೇಹಿತ ಗುರುಪ್ರಸಾದ್ ರವರಿಗೆ ತಿಳಿಸಿದಾಗ ಅವರು, ಅವರಿಗೆ ಕಳುಹಿಸಿರುವ ಟಿಕೆಟ್ಗಳ ಪ್ರಕಾರ ಬೆಳಗ್ಗೆ 8.30 ಕ್ಕೆ ಬೆ೦ಗಳೂರಿನಿ೦ದ ಹೊರಡುವುದು ಎ೦ದು, ತಿಳಿಸಿದರು. ನಾವು ಗೂಗಲ್ ಸರ್ಚ್ ಮಾಡಿ ನೋಡಿದರೆ 8.30 ಕ್ಕೆ ಇರುವುದು ಖಚಿತವಾಯಿತು. ಟ್ರಿಪ್ ಫ್ಯಾಕ್ಟರಿ ಸಿಬ್ಬ೦ದಿಯನ್ನು ಕೇಳಿದಾಗ ಅವರು ನಮಗೆ ಕಳುಹಿಸಿದ ಮಾಹಿತಿಯಲ್ಲಿ ತಪ್ಪಾಗಿದೆ ಎಂದು ಸರಿಯಾದ ವಿಮಾನ ಪ್ರಯಾಣದ ಟಿಕೆಟ್ ಅನ್ನು ಕಳುಹಿಸಿದರು. ನಾವು ಎಚ್ಚರವಹಿಸಿ, ವಿಚಾರಿಸದೆ ಇದ್ದಿದ್ದರೆ, ವಿಮಾನ ಹೋದ ಮೇಲೆ, ನಾವು ವಿಮಾನ ನಿಲ್ದಾಣ ತಲುಪುತ್ತಿದ್ದೆವು. ಅದೇ ರೀತಿ ವಾಪಸ್ ಬರುವ ವಿಮಾನ ಪ್ರಯಾಣದ ಟಿಕೆಟ್ ಗಳನ್ನೂ ಸಹ ತಪ್ಪಾಗಿ ಕಳುಹಿಸಿ, ಮತ್ತೆ ಸರಿಯಾದ ಟಿಕೆಟ್ಗಳನ್ನು ಕಳಿಸಿದರು. ಇಂಥ ಅಂತರಾಷ್ಟ್ರೀಯ ಪ್ರವಾಸ ದ ಆಯೋಜನೆ ಮಾಡುವ ಒಂದು ಸಂಸ್ಥೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಕಂಡು ಆಶ್ಚರ್ಯವೂ, ಬೇಜಾರು ಕೂಡ ಆಯಿತು. ಪ್ರವಾಸ ಹೋಗಲೇ ಬೇಕಾಗಿದ್ದುದರಿಂದ ತಾಳ್ಮೆಯನ್ನು ಪ್ರದರ್ಶಿಸಬೇಕಾಯಿತು.
ಪ್ರವಾಸದ ಒಟ್ಟು ಖರ್ಚು, 3.90 ಲಕ್ಷ ಎಂದು ಹೇಳಿ ನಮಗೆ ರಿಯಾಯಿತಿ ದರದಲ್ಲಿ ಅಂದರೆ 3.85 ಲಕ್ಷ ಎಂದು ತಿಳಿಸಿದ್ದರು. ಇದರ ಜೊತೆ ತೆರಿಗೆ 0.20 ಲಕ್ಷ ಒಟ್ಟು 4.05 ಲಕ್ಷ. ನಂತರ ವಿಚಾರಿಸಿದಾಗ ಅವರಿಗೆ (ಗುರುಪ್ರಸಾದ್) ಟ್ಯಾಕ್ಸ್ ಸೇರಿ 3.90 ಲಕ್ಷ ನಮಗೆ ಟ್ಯಾಕ್ಸ್ ಬಿಟ್ಟು 3.85 ಲಕ್ಷ. ತೆರಿಗೆ ಹಣವನ್ನು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ ರಿಫ೦ಡ್ ಪಡೆಯಬಹುದು ಆಗ ನಮಗೆ 3.85 ಲಕ್ಷ ವೆಚ್ಚ (ಒಬ್ಬರಿಗೆ) ತಗಲುವುದೆಂದು ಸಮಾಧಾನ ಮಾಡಿಕೊಂಡು, ಮುಂದಿನ ತಯಾರಿ ಮಾಡಿಕೊ೦ಡೆವು. ಕಲಿತ ಪಾಠವೇನೆ೦ದರೆ ಹೇಳಿದ್ದನ್ನು ಕಣ್ಣು ಮುಚ್ಚಿ ನ೦ಬದೆ , ಮಾಹಿತಿಯನ್ನು ಕೂಲ೦ಕುಶವಾಗಿ ಪರಾಮರ್ಶಿಸಿ ನೋಡಬೇಕು .
ನಮಗೆ ನಮ್ಮ ಪ್ರವಾಸದ ಅವಧಿಯಲ್ಲಿ ಏನೂ ಶಾಪಿಂಗ್ ಮಾಡುವ ಆಲೋಚನೆ ಇಲ್ಲದಿದ್ದರೂ, ನಾವು ಭೇಟಿ ಕೊಟ್ಟ ಜಾಗಗಳ, ದೇಶಗಳ, ನೆನಪಿನಾರ್ಥವಾಗಿ, ಏನಾದರೂ ಸ್ಮರಣಿಕೆಗಳನ್ನು ಕೊಳ್ಳಲು ಮತ್ತು ಪ್ರಯಾಣದ ಸ೦ದರ್ಭದಲ್ಲಿ, ಪ್ಯಾಕೇಜ್ ನಲ್ಲಿ ಇಲ್ಲದೆ ಇರುವ, ಪ್ರೋಗ್ರಾ೦ ಗಳಿದ್ದರೆ , ಪ್ರವೇಶ ಶುಲ್ಕ ಕೊಡಲು ಹೀಗೆ ಹಲವಾರು ಕಾರಣಕ್ಕೆ ಅಲ್ಲಿಯ ಸ್ಥಳೀಯ ಕರೆನ್ಸಿ ಅಗತ್ಯ ಇರುವುದನ್ನು ಕಂಡುಕೊಂಡೆವು. ಈ ಉದ್ದೇಶಕ್ಕೆ ಬೇಕಾದಷ್ಟು ಏಜೆನ್ಸಿಗಳಿದ್ದರೂ ಸಹ ನಮ್ಮನ್ನು ಅಂಡಮಾನ್ ಟ್ರಿಪ್ ಗೆ ಕರೆದುಕೊಂಡು ಹೋಗಿದ್ದ ಗಂಗಾ ನಗರ ದಲ್ಲಿರುವ ಸುಶೀಲ್ ಟ್ರಾವಲ್ಸ್ ನ ಶಿವಣ್ಣ ಮತ್ತು ಪುಣ್ಯ ಪಟೇಲ್ ರವರನ್ನು, ನಮ್ಮ ಸ್ನೇಹಿತ ಮೂರ್ತಿ ಅವರ ಮೂಲಕ ಭೇಟಿ ಮಾಡಿದೆವು. , . ಸುಶೀಲ್ ಟ್ರಾವೆಲ್ಸ್ ನವರು ಕರೆನ್ಸಿ ಬದಲು ಫಾರೆಕ್ಸ್ ಕಾರ್ಡ್ ಸಹ ಲಭ್ಯ ಇರುವುದು ತಿಳಿಸಿ, ಅದಕ್ಕೆ ಕಮಿಷನ್ ಸ್ವಲ್ಪ ಕಡಿಮೆಯಾಗುವುದಾಗಿ ತಿಳಿಸಿದರು. ಅದೇ ರೀತಿ, ಹೆಚ್ ಡಿ ಎಫ್ ಸಿ ಬ್ಯಾಂಕ್, ಕೆನರಾ ಬ್ಯಾಂಕ್, ಐಸಿಐಸಿಐ, ಎಸ್ಬಿಐ, ಎಚ್ಎಸ್ಬಿಸಿ, ಬ್ಯಾಂಕುಗಳಲ್ಲೂ ಸಹ ಫಾರೆಕ್ಸ್ ಕಾರ್ಡುಗಳು ದೊರೆಯುವ ಮಾಹಿತಿ ಸಿಕ್ಕಿತ್ತು. ಆದರೆ ನೆಟ್ವರ್ಕ್ ಸಮಸ್ಯೆ, ಹ್ಯಾಕ್ ಮಾಡೋ ಸಮಸ್ಯೆ ಮತ್ತು ತೀರ ಚಿಕ್ಕ ಚಿಕ್ಕ ಖರ್ಚುಗಳಿಗೆ ಕಾರ್ಡ್ ಸರಿ ಹೋಗುವುದಿಲ್ಲವೆನ್ನುವ ಅಭಿಪ್ರಾಯ ಪಟ್ಟು, ಕರೆನ್ಸಿಯನ್ನೇ ತೆಗೆದುಕೊಂಡು ಹೋಗುವುದೆ೦ದು ತೀರ್ಮಾನಿಸಿ, ಅವರ ಸಲಹೆ ಮೇರೆಗೆ ಸುಮಾರು ಒಂದು ಲಕ್ಷ ರೂಪಾಯಿಗಳಿಗೆ ವಿದೇಶಿ ಕರೆನ್ಸಿ ಪಡೆದುಕೊಂಡೆವು. 200 ಪೌಂಡು, 150 ಸ್ವಿಸ್ ಫ್ರೈಾ೦ಕ್ಸ್, 500ಯೂರೋ ಮತ್ತು 150 ಯೂ ಎಸ್ಡಾಲರ್ ಗಳನ್ನು ತೆಗೆದುಕೊ೦ಡೆವು. ಇದಕ್ಕೆ ಸುಮಾರು 1500 ರೂಪಾಯಿ ಕಮಿಷನ್ ಕೊಡಬೇಕಾಯಿತು. ಆದರೆ ಅಲ್ಲಿಗೆ ಹೋದ ನಂತರ ತಿಳಿದು ಬ೦ದದ್ದೇನೆ೦ದರೆ ನಗದಿಗಿ೦ತಲೂ ಕಾರ್ಡ್ ಪೇಮೆಂಟ್ ಅನ್ನು ಹೆಚ್ಚಾಗಿ ಬಳಸುತ್ತಾರೆ ಎನ್ನುವ ವಿಚಾರ. ಹೀಗೆ ಪಡೆದ ವಿದೇಶಿ ಕರೆನ್ಸಿ ಯಲ್ಲಿ ಉಳಿದ ಹಣವನ್ನು ವಾಪಸ್ ಬಂದ ನಂತರ ಭಾರತದಲ್ಲಿ ನಮ್ಮ ರೂಪಾಯಿಗೆ ಬದಲಾವಣೆ ಮಾಡಿದಾಗ ಕೂಡ ಮತ್ತೆ ಕಮಿಷನ್ ಕೊಡಬೇಕಾಯಿತು. ಹೀಗೆ ವಿದೇಶಿ ವಿನಿಮಯದಲ್ಲಿ, ಕೊಳ್ಳಲು ಕಮಿಷನ್, ಮಾರಲು ಕಮಿಷನ್. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಹಣ ಗಳಿಸುವ ರೀತಿಯೇ ಹೀಗೆ. ಡಿಡಿ ಕೊಡಲು ಕಮಿಷನ್, ಡಿಡಿ ಕ್ಯಾನ್ಸಲ್ ಮಾಡಲು ಕಮಿಷನ್, ಬಾಯಿ ತೆರೆಯಲು ಕಮಿಷನ್, ತೆರೆದಿರುವ ಬಾಯನ್ನು ಮುಚ್ಚಲು ಕಮಿಷನ್. ಒಟ್ಟು ಸುಮಾರು 3000 ರೂಪಾಯಿಗಳನ್ನು ಕಮಿಷನ್ ರೂಪದಲ್ಲಿ ತೆರಬೇಕಾಯಿತು ಇಂತಹ ಖರ್ಚು, ವಿದೇಶ ಪ್ರವಾಸದಲ್ಲಿ ಅನಿವಾರ್ಯ.
ಪ್ರವಾಸದ ಒಂದೆರಡು ದಿನ ಮುಂಚೆ ಟ್ರಿಪ್ ಫ್ಯಾಕ್ಟರಿ ಯಿಂದ ನಮ್ಮ ಪ್ರವಾಸದ ಪೂರ್ಣ ವಿವರಗಳು, ಅಂದರೆ, ನಾವು ಪ್ರತಿ ದಿನ ಯಾವ ಸಮಯಕ್ಕೆ ಹೊರಡುವುದು, ಎಲ್ಲಿಗೆ ಹೊರಡುವುದು, ಅಲ್ಲಿ ಭೇಟಿ ಕೊಡುವ ಪ್ರೇಕ್ಷಣೀಯ ಸ್ಥಳಗಳ ವಿವರ, ಮುಟ್ಟುವ ಸಮಯ, ಊಟದ ಸಮಯ, ಊಟದ ಸ್ಥಳ, ಮತ್ತು ರಾತ್ರಿ ತಂಗುವ ಸ್ಥಳದ ವಿವರಗಳನ್ನು ಸಹ ಕೊಟ್ಟಿದ್ದರು. ಜೊತೆಗೆ ಸಲಹಾ ರೂಪದ ಮಾಹಿತಿಯನ್ನು ಸಹ ಕೊಟ್ಟಿದ್ದರು. ಅಂದರೆ ನಾವು ಪ್ರವಾಸದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ಮತ್ತು ಪಾಲಿಸ ಬೇಕಾದ ನಿಯಮಗಳ ಮಾಹಿತಿ ನೀಡಿದ್ದರು. ಟ್ರಿಪ್ ಫ್ಯಾಕ್ಟರಿನವರು ಕೊಟ್ಟ ಮಾರ್ಗಸೂಚಿಯಲ್ಲಿ, ನಾವು ಬೇರೆ ಬೇರೆ ದೇಶಗಳಿಗೆ ಭೇಟಿ ಕೊಡುವುದರಿಂದ, ಕೆಲವೊಂದು ದೇಶಗಳ ಗಡಿ ಭಾಗಗಳಲ್ಲಿ ಪೋಲೀಸಿನವರು ಅಥವಾ ಅಧಿಕಾರಿಗಳು, ನಮ್ಮಲ್ಲಿ ವೀಸಾ ಇದ್ದರೂ ಸಹ, ವೀಸಾ ಪಡೆಯಲು ಕೊಟ್ಟ ದಾಖಲೆಗಳ ಪ್ರತಿಗಳನ್ನು ಕೇಳಿದಾಗ ತೋರಿಸಬೇಕಾಗುತ್ತದೆ ಎಂದು ತಿಳಿಸಿದ್ದರಿಂದ, ನೂರಾರು ಪುಟಗಳ ಬ್ಯಾಂಕ್ ಸ್ಟೇಟ್ಮೆಂಟ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಇನ್ನಿತರ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಮಾಡಿಕೊಂಡು ರೆಡಿಯಾದೆವು. ಬಹುಶಃ ನಮ್ಮ ಪ್ರವಾಸದ ಎರಡನೇ ಅತಿ ದೊಡ್ಡ ಖರ್ಚೆ೦ದರೆ ಇದೇ(ಝೆರಾಕ್ಸ್) ಇರಬಹುದು.
ಒಂದೆರಡು ದಿನ ಮುಂಚೆ ನಮ್ಮ ತಂಗಿ ಮತ್ತು ಭಾವನವರು ಸಹ ಬಂದು ನಮ್ಮನ್ನು ಸೇರಿದರು. ಪ್ರವಾಸದ ಪೂರ್ವಭಾವಿ ತಯಾರಿ ಮಾಡಿಕೊಳ್ಳುವ ಸಲುವಾಗಿ ನಾನು ಹೊಸ ಟಿ-ಶರ್ಟ್ ಗಳು, ಹೊಸ ಪ್ಯಾಂಟ್ ಗಳು, ಹೊಸ ಶ್ಯೂಗಳನ್ನು, ತೆಗೆದುಕೊಂಡು, ಚಳಿಗೆ ಬೇಕಾದಂತಹ ಸ್ವೆಟರ್, ಜರ್ಕಿನ್, ಸ್ಕಾರ್ಫ್, ಇವುಗಳನ್ನೆಲ್ಲ ಜೋಡಿಸಿಕೊಂಡು 15 ದಿನಕ್ಕೆ ಬೇಕಾಗುವಷ್ಟು ಬಟ್ಟೆಗಳನ್ನು ಜೋಡಿಸಿಕೊಂಡೆವು. ನಂತರ ಪ್ಯಾಕೇಜಿನ ಊಟ, ಲಂಡನ್ ತಲುಪಿದ ನಂತರ ಇದ್ದಿದ್ದರಿಂದ ಪೂರ್ತಿ ಒಂದು ದಿನದ ಊಟ ಮತ್ತು ತಿಂಡಿಗಾಗಿ ಉಪ್ಪಿಟ್ಟು, ಚಪಾತಿ, ಅವಲಕ್ಕಿ ಖಾರ, ಮಂಡಕ್ಕಿ ಖಾರ, ಚಕ್ಕುಲಿ, ಬಿಸ್ಕೆಟ್, ಚಾಕ್ಲೆಟ್ ಇಂತಹ ತಿನಿಸುಗಳನ್ನು ಜೋಡಿಸಿಕೊಂಡು ತಯಾರಾದೆವು.
(ಮುಂದುವರಿಯುವುದು)

ಟಿ.ವಿ.ಬಿ.ರಾಜನ್ , ಬೆಂಗಳೂರು

