ನಕ್ಕು ಹಗುರಾಗಬೇಕು ನಾವಿಲ್ಲಿ
ಬಿಕ್ಕಿ ಬರಿದಾಗಬೇಕು ಜಗದಲ್ಲಿ
ನಮ್ಮೊಳಗಿನ ನೋವುಗಳನ್ನೆಲ್ಲ
ಹೊರಹಾಕಿ ಹೊಸದಾಗಬೇಕಿಲ್ಲಿ
ಒಳಗೊಳಗೆ ನೋವ ಇಟ್ಟುಕೊಂಡು
ಸುಮ್ಮನೆ ನೊಂದುಕೊಳ್ಳುವುದೇಕೆ
ಎಲ್ಲವನ್ನೂ ಹೊರಗೆ ನೂಕಿಕೊಂಡು
ಖುಷಿ ಖುಷಿಯಾಗಿ ಇರಬಾರದೇಕೆ
ಅಳುತ ಕುಳಿತರೆ ಅಳಿಸುವುದು
ನಕ್ಕರೆ ನಲಿವೇ ಗೆಲುವಾಗುವುದು
ಸುತ್ತ_ಮುತ್ತಲೂ ಬದಲಾಗುವುದು
ಬದುಕು ಅರಳಿ ನಲಿವಾಗುವುದು
ಬಾಳಪುಟದಲ್ಲಿ ಬೆಳಕು ಮೂಡುವುದು
ವಿಷಾದ ಭಾವ ದೂರ ಸಾಗುವುದು
ಕನಸುಗಳು ಮನದಿ ಗರಿಗೆದರುವುದು
ಭವ್ಯತೆಯ ನೋಟ ನಮ್ಮದಾಗುವುದು
ಬದುಕಿನಲ್ಲಿ ಮೂಡಬೇಕು ಗೆಲುವಿನ ಸಾಂಗತ್ಯ
ಅರಿವ ಮೂಡಿಸುವುದು ನಮ್ಮಯ ಸಾಹಿತ್ಯ
ಹೊಂದಿಕೊಂಡು ಹೋಗುವುದು ಬದುಕಿನ ಅಗತ್ಯ
ನೋಟ ಬದಲಾದರೆ ಬದಲಾಗುವುದು ಸತ್ಯ
ನಮ್ಮಯ ಬದುಕು ಅರಳಬೇಕು ದಿನನಿತ್ಯ
–ನಾಗರಾಜ್ ಜಿ. ಎನ್. ಬಾಡ, ಕುಮಟ
