ನಿತ್ಯ ಪಲ್ಲಕ್ಕಿಯಲ್ಲಿ ನನ್ನ ಮೆರವಣಿಗೆ..!
ತುಂಬಾ ಓದಿಕೊಂಡವಳೆಂಬ ಭಾವನೆಯಿಂದ ನಾನೊಂದು ದಿನ ಓರ್ವ ಮಹಿಳಾ ಕವಯತ್ರಿಯ ಮನೆಯ ಕದವ ತಟ್ಟಿದೆ, ನಿರೀಕ್ಷೆಯಂತೆ ನನ್ನನ್ನು ಸ್ವಾಗತಿಸಿಕೊಂಡು ತುಂಬಾ ಆತ್ಮಿಯರಾಗಿ ಮಾತನಾಡಿದರು. ನಾನೂ ಒರ್ವ ಕವಿಯಾಗಬೇಕೆಂಬ ಹಂಬಲದಿಂದ ಆಗಾಗ ಆ ಕವಯತ್ರಿಯ ಮನೆಗೆ ಎಡತಾಕುತ್ತಿದ್ದೆ. ಅದೊಂದು ದಿನ ಕವಯತ್ರಿ ನನಗೆ ಪೋನ ಮಾಡಿ ಅರ್ಜಂಟ್ ನಮ್ಮ ಮನೆಗೆ ಬಂದು ಹೋಗಿ ಎಂದರು. ಕೂಡಲೇ ನಾನು ಅವರ ಮನೆಯ ತಲುಪಿದೆ, ಸಹಜವಾಗಿ ಕವಯತ್ರಿ ನನಗೆ ಚಹಾ ಕೊಟ್ಟು ಹೀಗೆ ಮಾತಿಗಿಳಿದರು ‘ಗೌಡ್ರೆ ಆ ಧಾರವಾಡದ ಪರಿಮಳಬಾಯಿ ನಿನ್ನೆ ಪೋನ ಮಾಡಿ ಹಿಗ್ಗಾಮುಗ್ಗಾ ಬೈದುಬಿಟ್ಲು, ನನಗೀಗ ತುಂಬಾ ಭಯವಾಗುತ್ತಿದೆ. ಆದರೆ ನನ್ನ ಮೊಬೈಲ್ ನಂಬರ್ ಆಕೆಗೆ ಹೇಗೆ ಸಿಕ್ತು? ಮೋಸ್ಟ್ಲಿ ನೀವೇ ಏನಾದ್ರೂ ಕೊಟ್ಟಿರಬಹುದು ಅಂತಾ ನನಗನ್ನಸ್ತಾ ಇದೆ. ಯಾಕಂದ್ರೆ ಆಕೆಯ ಪರಿಚಯ ನಿಮಗೂ ಇದೆ. ಪ್ಲೀಜ್ ಹೇಳ್ರಿ ನೀವೇ ಕೊಟ್ಟಿದಿರಿ ತಾನೇ? ಅಂತಾ ಕೇಳಿದಾಗ ಮೆಡಮ್ ನಾನ್ಯಾಕೆ ಕೊಡ್ಲಿ, ಇಷ್ಟುಕ್ಕೂ ಆಕೆ ನಿಮ್ಮನ್ನು ಬೈಯಲು ಕಾರಣವಾದರೂ ಏನು? ನೀವೇನಾದರೂ ತಪ್ಪು ಮಾಡಿದಿರಾ? ಎಲ್ಲಕ್ಕಿಂತ ಮುಖ್ಯವಾಗಿ ಈ ಜಗತ್ತಿನಲ್ಲಿ ಹುಡುಕಿದ್ರೆ ಎಲ್ಲರ ನಂಬರೂ ಸಿಗ್ತಾವೆ. ಕವಯತ್ರಿ ಆಮೇಲೆ ನಡೆದ ವಿಷಯವನ್ನು ವಿಷಯಾಂತರ ಮಾಡಿದ್ರು.
ಇದಾದ ಮೇಲೆ ಆ ಕವಯತ್ರಿಯ ಮನೆಯ ಕಡೆ ನಾನು ಮುಖಮಾಡಿರಲಿಲ್ಲ. ತಿಂಗಳಾದ ಮೇಲೆ ಅವಳೆ ಪೋನ್‌ಮಾಡಿ ಮಾತನಾಡಿದಳು. ಕೆಲದಿನಗಳ ನಂತರ ಕವಯತ್ರಿಯ ಮನೆಗೆ ಗದುಗಿನ ನನ್ನೊರ್ವ ಗೆಳಯ ಮತ್ತು ಪ್ರಕಾಶಕ ಹೋಗಿ ಬರೋಣ ಬನ್ನಿ ಎಂದು ಕರೆದರು, ಹಳೆಯದನ್ನೆಲ್ಲಾ ಮರೆತು ಕವಯತ್ರಿಯ ಮನೆಗೆ ಒಲ್ಲದ ಮನಸ್ಸಿಂದ ಗೆಳೆಯನೊಂದಿಗೆ ಹೋದೆ. ಮೂವರು ಸುಮಾರು ಹೊತ್ತು ಸಾಹಿತ್ಯಿಕವಾಗಿ ಮಾತನಾಡಿದೆವು, ಎದ್ದು ಬರುವಾಗ ಕವಯತ್ರಿ ತನ್ನದೊಂದು ಹಸ್ತಪ್ರತಿಯೊಂದನ್ನು ನನ್ನ ಗೆಳೆಯ(ಪ್ರಕಾಶಕ)ನ ಕೈಗಿಟ್ಟು ದಯವಿಟ್ಟು ಇದನ್ನು ಪ್ರಕಟಮಾಡಿ ಎಂದು ವಿನಂತಿಸಿಕೊಂಡಳು. ಗೆಳೆಯನೂ ಪ್ರಕಟಿಸುವುದಾಗಿ ಆ ಕ್ಷಣಕ್ಕೆ ಒಪ್ಪಿಕೊಂಡು ಬಿಟ್ಟ. ಆದರೆ ಸುಮಾರ ವರ್ಷ ಗತಿಸಿದರೂ ಆ ಪುಸ್ತಕ ಪ್ರಕಟವಾಗಲ್ಲಿಲ್ಲ.
ಊರ ತುಂಬೇಲ್ಲಾ ಆ ಪುಸ್ತಕ ಪ್ರಕಟವಾಗದ್ದಕ್ಕೆ ನಾನೇ ಕಾರಣ ಅನ್ನೊ ಗುಲ್ಲೆಬ್ಬಿಸಿದಳು, ಆದರೂ ಮೌನವಾಗಿದ್ದೆ. ಇದಾದ ಸ್ವಲ್ಪ ದಿನದಲ್ಲಿಯೇ ಪುಸ್ತಕ ಪ್ರಕಟವಾಗಿರುವ ಸುದ್ದಿಯನ್ನು ಗೆಳೆಯ ದೂರವಾಣಿಯಲ್ಲಿ ತಿಳಿಸಿದ, ಮೊದ್ಲು ಆಕೆಗೆ ಹೇಳಬೇಕಿಲ್ಲೊ ಮಾರಾಯ ಅಂದೆ, ಪ್ರಕಟಣೆ ವಿಳಂಬವಾದುದಕ್ಕೆ ಆಕೆ ನನ್ನೊಂದಿಗೆ ಕಿತ್ತಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದಾಳೆ, ದಯವಿಟ್ಟು ಅವಳ ಗೌರವ ಪ್ರತಿಗಳನ್ನು ನಿನಗೆ ಕಳುಹಿಸಿರುವೆ ತಲುಪಿಸುವ ಜವಾಬ್ದಾರಿ ನಿನ್ನದು ಎಂದ.
ಗೆಳೆಯನ ಮಾತಿನಂತೆ ಆಕೆಯ ಗೌರವ ಪ್ರತಿಗಳನ್ನು ಎತ್ತಿಕೊಂಡು ಮನೆಗೆ ಅನಿವಾರ್ಯವಾಗಿ ಹೋದೆ, ಪುಸ್ತಕ ನೋಡಿದವಳೆ ಖುಷಿಯಾದಳು. ಮೊದಲ ಪುಟ ಓದಿದಾಕ್ಷಣ ಕಣ್ಣು ಕೆಂಪಾದವು, ಗೌಡ್ರೆ ನನ್ನೆಲ್ಲಾ ಕನಸಿಗೆ ಬೆಂಕಿ ಹಚ್ಚಿದ್ರಿ ಅಂದ್ಲು. ಮೆಡಮ್ ಏನಾಯ್ತು ಅಂದೆ? ನೋಡ್ರಿಲ್ಲಿ ಇದು ಅರ್ಪಣೆ ಇವರಿಗೆ ಆಗಬಾರ್‍ದು, ಅವರ್‍ಗೆ ಆಗಬೇಕಿತ್ತು ಇದನ್ನು ನೀವೇ ಮಾಡ್ಸಿದ್ದು ಅಂತಾ ನೇರವಾಗಿ ನನ್ಮೇಲೆ ಹರಿಹಾಯ್ದಳು. ನಾನೂ ಕೊಂಚ ತಾಳ್ಮೆ ಕಳೆದುಕೊಂಡು ಮೆಡಮ್ ‘ತೆರೆಯಲ್ಲೊಂದು ಮರೆಯಲ್ಲೊಂದು ಮಾಡುವ ಹಾದರದ ಬದುಕು ನನ್ನದಲ್ಲ’ ಎಂದು ಮುಖಕ್ಕೆ ಹೊಡೆದಹಾಗೆ ಹೇಳಿ ಅವಳ ಮನೆಯಿಂದ ಎದ್ದು ಬಂದೆ. ಅವತ್ತಿನಿಂದ ಇವತ್ತಿನ ತನಕವೂ ಆಕೆ ನನ್ನ ಉಸಾಬರಿಗೆ ಬಂದಿಲ್ಲ. ಅಕಸ್ಮಾತ ದಾರಿಯಲ್ಲಿ ಆ ಕವಯತ್ರಿ ಮೊನ್ನೆ ಎದುರಿಗೆ ಬಂದಾಗ, ನನ್ನ ದೇಹಭಾರವನ್ನೆಲ್ಲಾ ಹೊತ್ತು ಸಾಗುವ ನನ್ನೆರಡೂ ಚಪ್ಪಲಿಗಳೊಡನೆ ಅನುಸಂಧಾನ ಮಾಡುತ್ತಾ ಆ ಕೆಟ್ಟ ಸಂಶಯ ಚಟವುಳ್ಳ ಕವಯತ್ರಿಯನ್ನು ದಾಟಿ ನಿಟ್ಟುಸಿರುಬಿಟ್ಟೆ.
ಮನೆ ತಲುಪಿದ ಮೇಲೆ ನನ್ನ ಚಪ್ಪಲಿಗಳು ನನಗೆ ಹೀಗೆ ಹೇಳಿದವು ‘ಒಡೆಯಾ.. ತಡವಾಗಿಯಾದರೂ ಕೂಡಾ ನಮ್ಮನ್ನು ನೀವು ಅರ್ಥಮಾಡಿಕೊಂಡಿರಲ್ಲ, ನಮ್ಮ ಬದುಕು ಸಾರ್ಥಕವಾಗಲು ಇಷ್ಟು ಸಾಕು. ಮತ್ತಷ್ಟು ಖುಷಿಯಿಂದ ನಿಮ್ಮ ಪಾದಗಳನ್ನು ರಕ್ಷಿಸುತ್ತೇವೆ.’ ಎಂದವು. ಆಗ ನಾನೆಂದೆ ‘ಗೆಳೆಯರೆ.. ನೀವು ಕೇವಲ ನನ್ನ ಪಾದ ರಕ್ಷಕರಷ್ಟೆ ಅಲ್ಲ, ನಿತ್ಯವೂ ಹೊತ್ತು ಮೆರೆಸುವ ನೀವು ನನ್ನ ಪಾಲಿನ ಪಲ್ಲಕ್ಕಿಗಳು.’ ಅಡ್ಡಪಲ್ಲಕ್ಕಿ ಉತ್ಸವಗಳಿಗೆ ಅಡ್ಡಿಪಡಿಸುವವರಿದ್ದಾರೆ, ಆದರೆ ನನ್ನ ಪಲ್ಲಕ್ಕಿ ಉತ್ಸವ ನಿತ್ಯೋತ್ಸವ. ಹೀಗಂದಾಗ ಇರ್ವರ ಕಣ್ಣಂಚಲಿ ಆನಂದದ ಭಾಷ್ಪಗಳು;ಪುಷ್ಪಗಳ ಮೇಲಿನ ಇಬ್ಬನಿ ಹನಿಗಳಂತೆ ಗೋಚರಿಸಿದವು.
– ವೀರಲಿಂಗನಗೌಡ್ರ. ಬಾದಾಮಿ.
ಬರಹ ಚೆನ್ನಾಗಿದೆ!
CHENNAGIDE.