ಎಲ್ಲವನು ಹೇಳಿಯೂ ಏನನೂ ಹೇಳಿದಂತಾಗದ ಅತೃಪ್ತಿಯೇ ಕಾವ್ಯ! ಏಕೆಂದರೆ ಇದು ದೊರಕಿಸಿ ಕೊಡುವ ಖಾಸಗೀತನವು ಉಳಿದ ಪ್ರಕಾರಗಳಲ್ಲಿ ಇಲ್ಲ. ಈ ಸೌಲಭ್ಯಾನುಕೂಲವೇ ಕವಿಗಳನ್ನಾಗಿಸುವ ಗುಟ್ಟು. ಎರಡು ಸಾಲುಗಳಿಂದ ಹಿಡಿದು ಎರಡು ಲಕ್ಷ ಶ್ಲೋಕಗಳಿರುವ ಮಹಾಕಾವ್ಯದವರೆಗೆ ಇದು ದಿಟ. ಕಾವ್ಯದಲ್ಲಿ ಕತೆಯಿರಲಿ, ಇಲ್ಲದಿರಲಿ ಅದು ಮುಖ್ಯವಲ್ಲ! ಮುಖ್ಯವೆನಿಸುವುದು ಏನನ್ನು ಹೇಗೆ ಅಭಿವ್ಯಕ್ತಿಸಿದ್ದಾರೆ? ಎಂಬುದು. ಈ ಪ್ರಕಾರದಲ್ಲಿ ಕತೆ ಹುಡುಕುವುದು ಮತ್ತು ಕತೆಯನ್ನು ಕುರಿತು ವಿವರಿಸುವುದು ಸುಲಭ; ಅದಕಾಗಿಯೇ ನಾವು ಕವಿತೆಯ ವಸ್ತುವಿಗೆ ಗಮನ ಕೊಡುತ್ತೇವೆ; ಅದರ ರೂಪನಿರೂಪಕ್ಕೆ ಹೆಚ್ಚು ಗಮನ ಕೊಡುವುದಿಲ್ಲ. ನಿದರ್ಶನಕ್ಕೆ ಹೆಣ್ಣಿನ ಶೋಷಣೆಯನ್ನು ಚಿತ್ರಿಸಿ, ಇದು ನಿಲ್ಲಬೇಕು ಎಂಬ ಆಶಯದೊಂದಿಗೆ ಬರೆದ ಕವನವನ್ನು ನಾವು ನೋಡುವಾಗ ಅದರ ವಸ್ತುವಿಗೆ ಗಮನ ಕೊಟ್ಟು, ಸಕಾಲಿಕ ಸ್ಪಂದನ ಮತ್ತು ಕವಯಿತ್ರಿಯ ಅನಿಸಿಕೆ ಸರಿ ಎಂದು ತೀರ್ಪಿಡುತ್ತೇವೆ. ಕವಿತೆಯ ರೂಪ ಅಥವಾ ಅಭಿವ್ಯಕ್ತಿವಿಧಾನದತ್ತ ಒಂದು ಮಾತೂ ಹೇಳುವುದಿಲ್ಲ! ಅಂದರೆ ಕಾವ್ಯವನ್ನು ನೋಡುವ ಅಥವಾ ಓದುವ ದೃಷ್ಟಿಕೋನವು ಬದಲಾಗಬೇಕು. ಸರಳವಾದ ಮಾತುಗಳಲ್ಲಿ ‘ಸ್ತ್ರೀ ಶೋಷಣೆ ತಪ್ಪು, ಇದು ತಪ್ಪಬೇಕು’ ಎಂದು ಘೋಷವಾಕ್ಯ ತಂದಮಾತ್ರಕೇ ಅದು ಕವಿತೆಯಾಗುವುದಿಲ್ಲ. ಕೇವಲ ಘೋಷಣೆ ಅಥವಾ ವರದಿಯ ಗದ್ಯತುಣುಕಾಗುತ್ತದಷ್ಟೇ. ಕವಿತೆಯಾಗಲು ಇನ್ನೇನೋ ಬೇಕಾಗುತ್ತದೆ. ಸಂಕೇತ, ಪ್ರತಿಮೆ ಮತ್ತು ಪ್ರತೀಕಗಳು ಬಳಕೆಯಾಗಬೇಕಾಗುತ್ತದೆ. ಇನ್ನೂ ನೇರವಾಗಿ ಹೇಳುವುದಾದರೆ ಶೋಷಣೆ, ದಬ್ಬಾಳಿಕೆ, ಬಂಡಾಯ, ಪ್ರತಿಭಟನೆ ಎಂಬಂಥ ಪದಗಳನ್ನು ಕವಿತೆಯಲ್ಲಿ ತರದೇ ಅಂಥ ಭಾವಗಳು ಸ್ಫುರಿಸುವಂತಿರಬೇಕು. ಗುಲಾಬಿ, ಚಂದ್ರ, ತಾರೆ, ಪ್ರೀತಿ ಪದಗಳನ್ನು ತರದೆಯೇ ಹೆಣ್ಣಿನ ಚೆಲುವನ್ನು ವರ್ಣಿಸುವಂತಿರಬೇಕು. ಇದು ಕಷ್ಟಸಾಧ್ಯ. ಅದಕಾಗಿಯೇ ನಾವು ಸರಳಮಾರ್ಗವನ್ನು ಅನುಸರಿಸುವುದು. ಇಷ್ಟು ಹೇಳಿದ ಮೇಲೆಯೂ ಕವಿತೆಯೆಂದರೇನೆಂದು ವ್ಯಾಖ್ಯಾನಿಸುವುದು ಕಷ್ಟ. ಉತ್ತಮ ಕವಿತೆಯು ಈಗಾಗಲೇ ಸ್ಥಾಪಿತವಾದ ಸತ್ಯಗಳನ್ನು ಮೀರಿ ಅರಳುವಂಥದು; ಕವಿತೆಯನ್ನು ಕುರಿತ ಏನೆಲ್ಲ ಹೇಳಿಕೆಗಳನ್ನು ದಾಟಿ ಇನ್ನೇನೋ ಹೊಸದಾಗುವುದು.
‘ಹರಿವ ನದಿಗೆ ಮೈಯೆಲ್ಲಾ ಕಾಲು, ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ, ಬೀಸುವ ಗಾಳಿಗೆ ಮೈಯೆಲ್ಲಾ ಕೈ’ ಎಂದು ಹಾಡುವ ಅಲ್ಲಮಪ್ರಭುಗಳು ತಮ್ಮ ವಚನವನ್ನು ಮುಕ್ತಾಯಗೊಳಿಸುವುದು ಹೀಗೆ: ‘ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗ!’ ಎಂದು. ಪ್ರಕೃತಿಯಿಂದ ಅಧ್ಯಾತ್ಮಕ್ಕೆ ಹಾರುವ ಈ ಪರಿಯ ಕಾವ್ಯಭಾಷೆಯು ಸೋಜಿಗ. ನದಿಯ ಹರಿವನ್ನು ಅದರ ಮೈಯನ್ನು ಕವಿಯು ನಮ್ಮ ದೇಹದ ಒಂದಂಗವಾದ ಕಾಲಿಗೆ ಜೋಡಿಸುವರು; ಹೋಲಿಸುವುದಿಲ್ಲ. ಉರಿವ ಕಿಚ್ಚನ್ನು ನಾಲಗೆ ಎಂದೂ ಬೀಸುವ ಗಾಳಿಯನ್ನು ಕೈಯೆಂದು ಹೇಳಿದ ಧಾಟಿ ಗಮನಿಸಬೇಕು. ಎಲ್ಲವನ್ನೂ ನುಂಗಿ ನೊಣೆಯುವ ಅಗ್ನಿಯು ನಾಲಗೆಯೇ ಆಗಿದೆ. ನಾಲಗೆಯೂ ಇದೇ ಕೆಲಸ ಮಾಡುವುದು. ಬಾಯೊಳಗೆ ಆವರಿಸಿಕೊಳ್ಳುವ ಇದರ ಹೊರಳುವಿಕೆಯು ಎಲ್ಲವನೂ ನುಂಗಿ ನೊಣೆಯುವುದು. ನದಿಯ ನಡೆಯನ್ನೂ ಬೆಂಕಿಯ ಸರ್ವವ್ಯಾಪಕತೆಯನ್ನೂ ಗಾಳಿಯಾಡುವ ದಿಕ್ಕನ್ನೂ ಕವಿ ಹಿಡಿದಿಟ್ಟ ಬಗೆಯಿದು. ಈ ಎಲ್ಲವೂ ಇಲ್ಲಿಗೇ ನಿಂತುಬಿಡುವುದಿಲ್ಲ. ಇದಕ್ಕೊಂದು ತಿರುವಿದೆ. ಅದೇ ಶರಣರ ದಾರ್ಶನಿಕ ಸ್ವರೂಪ. ಅವರು ಲಿಂಗ ಕಟ್ಟಿಕೊಂಡು ಶರಣರಾದವರಲ್ಲ; ಸಾಕ್ಷಾತ್ ಗುಹೇಶ್ವರನನ್ನು ಅರಿತವರು. ಅವರ ಸರ್ವಾಂಗವೂ ಲಿಂಗಮಯ. ಶರಣರ ಮಹಿಮೆಯನ್ನು ಅಲ್ಲಮರು ಕೀರ್ತಿಸುವುದು ಹೀಗೆ. ಹೀಗೆ ಕವಿತೆಯೊಂದು ಏಕಕಾಲಕ್ಕೆ ಭಕ್ತಿಯನ್ನೂ ಶಕ್ತಿಯನ್ನೂ ಉದ್ಬೋಧಗೊಳಿಸುವಂಥದು. ಏನೋ ವಿಶೇಷವನ್ನು ಹೇಳುವಂಥದು. ಸಮ್‌ಥಿಂಗ್ ಸ್ಪೆಷಲ್ ಎಂಬುದು ಸಮ್‌ಥಿಂಗ್ ಡಿವೈನ್ ಆದಾಗ ಪರಮನೆಲೆಗೆ ತಲಪಿ, ಕಾಲದೇಶಗಳನ್ನು ಮೀರಿ, ಅರ್ಥವನ್ನು ಅನುರಣನಗೊಳಿಸುತ್ತಲೇ ಇರುತ್ತದೆ. ದೇಹದ ಅಂಗಗಳನ್ನು ಪಂಚಭೂತಗಳಿಗೆ ಅನ್ವಯಿಸಿ, ಜೀವವೂ ಶಿವವೂ ಒಂದೇ ಎಂಬ ಅದ್ವೈತವನ್ನು ಪ್ರತಿಪಾದಿಸುವ ಅಲ್ಲಮನ ಅದ್ಭುತ ಪ್ರತಿಭೆಯ ಪರಿಚಯವಾಗುವುದು.
‘ಬಾರೆ ನನ್ನ ದೀಪಿಕಾ’ ಎಂದು ಶುರುವಾಗುವ ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರ ಭಾವಗೀತೆಯೊಂದು ಜನ್ಮಾಂತರ ಸ್ನೇಹವನ್ನು ನಿನದಿಸುವ ಅನುಮೋದಿಸುವ ಮಟ್ಟಕ್ಕೆ ಬೆಳೆದು ಬಿಡುತ್ತದೆ; ಕೇವಲ ಎರಡು ಸಾಲುಗಳಲ್ಲಿ. ‘ಬಾರೆ ನನ್ನ ದೀಪಿಕಾ, ಮಧುರ ಕಾವ್ಯ ರೂಪಕ, ಕಣ್ಣಮುಂದೆ ಸುಳಿಯೆ ನೀನು, ಕಾಲದಾ ತೆರೆ ಸರಿದು ತಾನು, ಜನುಮ ಜನುಮ ಜ್ಞಾಪಕ!’ ಬಬ್ರುವಾಹನ ಚಲನಚಿತ್ರದ ಗೀತೆಯ ಸಾಲೊಂದರ ಗುನುಗು ಹೀಗಿದೆ: ‘ಸೋಲನೆಂದು ಕಾಣದಂಥ ವೀರಪಾರ್ಥನು, ನಿನ್ನ ಕಣ್ಣಬಾಣದಿಂದ ಸೋತುಹೋದನು’ ಇದರ ಧ್ವನಿರಮ್ಯಗುಣವನ್ನು ಹಾಡಿನ ಒಟ್ಟಂದದಲ್ಲಿಟ್ಟೇ ಸವಿಯಬೇಕು. ಚಿ. ಉದಯಶಂಕರರು ಇಂಥಲ್ಲಿ ಕವಿಯೇ ಆಗಿಬಿಡುತ್ತಾರೆ; ಪ್ರೇಮವನ್ನು ಅಮರಗೊಳಿಸುತ್ತಾರೆ. ಕವಿಯಾದವರಿಗೆ ಹೇಗೆ ಹೊಳೆಯುತ್ತದೆ ಇವೆಲ್ಲಾ? ಎಂಬುದು ಸಖೇದಾಶ್ಚರ್ಯ. ಇದನ್ನೇ ಪ್ರತಿಭೆ ಎನ್ನುವುದು. ಹೊಸದನ್ನು ಕಾಣುವುದು ಮತ್ತು ಕಟ್ಟುವುದು ನಿರಂತರ. ‘ವ್ಯಾಸೋಚ್ಛಿಷ್ಟಂ ಜಗತ್ಸರ್ವಂ’ ಎಂದರೆ ಜಗತ್ತಿನ ಎಲ್ಲವೂ ವ್ಯಾಸಮಹರ್ಷಿಗಳ ಎಂಜಲು ಎಂದು. ಇದನ್ನು ಪ್ರತೀಮಾತ್ಮಕವಾಗಿ ತೆಗೆದುಕೊಳ್ಳಬೇಕು. ರಾಮಾಯಣ, ಮಹಾಭಾರತಗಳಲ್ಲಿ ಈಗಾಗಲೇ ಎಲ್ಲವೂ ಬಂದಿದೆ. ಅದನ್ನು ಮುಂದೆ ಬಂದ ಕವಿಗಳು ತಮಗೆ ಬೇಕಾದ ಹಾಗೆ ವ್ಯಾಖ್ಯಾನ ಮಾಡಿದರು. ಪಂಪನಿಗೆ ಅರ್ಜುನನು ನಾಯಕನೆನಿಸಿದರೆ, ರನ್ನಕವಿಗೆ ಭೀಮನು. ಕುಮಾರವ್ಯಾಸನಿಗಾದರೋ ಅದು ಮಹಾಭಾರತವಲ್ಲ; ಕೃಷ್ಣಕತೆ. ‘ತಿಳಿಯ ಹೇಳುವೆ ಕೃಷ್ಣಕತೆಯನು, ಇಳೆಯ ಜಾಣರು ಮೆಚ್ಚುವಂದದಿ’ ಎಂದಿದ್ದಾನೆ. ಪಂಪನು ತನಗೆ ಆಶ್ರಯ ಕೊಟ್ಟ ಚಾಲುಕ್ಯರ ಅರಿಕೇಸರಿ ದೊರೆಯನ್ನು ಅರ್ಜುನನಿಗೆ ಸಮೀಕರಿಸಿ ವಿಕ್ರಮಾರ್ಜುನವಿಜಯವನ್ನು ಬರೆದನು. ಅದೇ ರನ್ನನು ತನ್ನ ಆಶ್ರಯದಾತ ರಾಷ್ಟ್ರಕೂಟರ ದೊರೆ ಇರಿವಬೆಡಂಗ ಸತ್ಯಾಶ್ರಯನನ್ನು ಭೀಮನಿಗೆ ಸಮೀಕರಿಸಿ, ಸಾಹಸಭೀಮವಿಜಯವನ್ನು ರಚಿಸಿದನು. ಇಲ್ಲಿ ಪಂಪಮಹಾಕವಿಯು ಪ್ರಾರಂಭದಲ್ಲೇ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದನು. ಒಂದು ಇತಿಹಾಸದ ಲೌಕಿಕ ಕಥನ, ಇನ್ನೊಂದು ಜೈನಧರ್ಮದ ಆಗಮಿಕ ಕಥನ. ಇದನ್ನು ಮುಂದೆ ಬಂದ ಜೈನಕವಿಗಳು ಅನುಸರಿಸಿದರು. ಒಂದರ್ಥದಲ್ಲಿ ಇದು ಕೃತಕ ವಿಂಗಡಣೆ. ಲೌಕಿಕ ಕಥನದಲ್ಲಿ ಲೋಕೋತ್ತರವೂ ಧಾರ್ಮಿಕ ಕಥನದಲ್ಲಿ ಲೋಕದ ವ್ಯಥೆಯೂ ಜೊತೆಗೂಡಿದೆ. ಒಂದು ಸಾವಿರ ವರುಷಗಳ ಆಯುಷ್ಯ ಹೊಂದಿದ್ದ ಆದಿನಾಥ ವೃಷಭದೇವನು ತನ್ನ ಗಡ್ಡದಲ್ಲಿ ನರೆಗೂದಲು ಕಂಡು ಚಿಂತಾಕ್ರಾಂತನಾಗುತ್ತಾನೆ. ರಾಜ್ಯಭಾರ ತ್ಯಜಿಸಿ ವಾನಪ್ರಸ್ಥಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಲೌಕಿಕ ಸುಖಭೋಗಗಳನ್ನು ತ್ಯಜಿಸಲು ಇದು ಅವನಿಗೆ ನೆಪವಾಗುತ್ತದೆ. ಇದನ್ನು ಪಾಠ ಮಾಡುತ್ತಿದ್ದ ನನ್ನ ವಿದ್ಯಾಗುರುಗಳಾದ ಡಾ. ಸಿಪಿಕೆ ಅವರು ‘ನಾವೂ ತ್ಯಜಿಸುತ್ತೇವೆ’ ಎಂದು ನಿಧಾನವಾಗಿ ಹೇಳಿ, ಕೊನೆಯಲ್ಲಿ ‘ಕನ್ನಡಿಯನ್ನ!’ ಎಂದರು. ಈ ಜೋಕು ಬಹಳ ಮಂದಿ ಸಹಪಾಠಿಗಳಿಗೆ ತಲಪಲೇ ಇಲ್ಲ. ವೃಷಭದೇವನು ಬಿಳಿಗೂದಲು ಕಾಣಿಸಿಕೊಂಡಿತೆಂದು ಜುಗುಪ್ಸಿತನಾಗಿ ಲೋಕದ ಸುಖಗಳ ಕ್ಷಣಿಕತೆಯನ್ನು ಮನಗಂಡು ರಾಜ್ಯಭಾರವನ್ನು ತ್ಯಜಿಸುವುದು ಅವನ ಪಕ್ವತೆ; ಅದೇ ನಮ್ಮಂಥ ಕಡುಲೌಕಿಕರು ಗಡ್ಡದಲಿ ನರೆ ಕಾಣಿಸಿಕೊಂಡರೆ ಕನ್ನಡಿ ನೋಡುವುದನ್ನೇ ಬಿಡುತ್ತೇವೆಂಬುದು ಒಳಮರ್ಮ. ಇಂಥ ಮಿಂಚುಗಾಣ್ಕೆಗಳು ಕೂಡ ಪ್ರತಿಭೆಯ ಲಕ್ಷಣ. ನೀಲಾಂಜನೆಯು ನೃತ್ಯ ಮಾಡುವಾಗ ಅರ್ಧದಲ್ಲೇ ಅವಳ ಆಯುಷ್ಯ ಮುಗಿದದ್ದು ಆದಿನಾಥನಿಗೆ ಗೊತ್ತಾಗಿದ್ದೂ ಇದಕ್ಕೆ ಪೂರಕ.
ಬದುಕಿನ ತುಂಬು ಅನುಭವಗಳನ್ನು ಸೂಕ್ಷ್ಮ ಸಂವೇದನಾಶೀಲತ್ವದಿಂದ ಗ್ರಹಿಸುತ್ತಾ ವಿಶೇಷ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸುತ್ತಿದ್ದರೆ ಇಂಥವು ಮಾತಿನಲ್ಲಿ ಬರೆಹದಲ್ಲಿ ಕೂಡಿಕೊಳ್ಳುತ್ತವೆ. ಅದಕ್ಕೇ ಹೇಳುವುದು: ಏನಾದರೂ ವಿಶೇಷವಾದದ್ದನ್ನು ಕುರಿತು ಮಾತಾಡಬೇಕು ಮತ್ತು ಬರೆಯಬೇಕು. ಅದರಲ್ಲೂ ಕವಿತೆ ಎಂದ ಮೇಲೆ ಏನಾದರೊಂದು ಟ್ವಿಸ್ಟು (ಅರ್ಥವಿಶೇಷದ ಹೊರಳಿಕೆ) ಇದ್ದರೆ ಓದುಗರನ್ನು ತಕ್ಷಣ ಸೆಳೆಯುತ್ತದೆ. ಹೇಳುವುದನ್ನು ಲೋಕದ ಮಾಮೂಲೀ ಧಾಟಿಯಲ್ಲಿ ಇಡದೇ, ವಿಭಿನ್ನವಾಗಿ ನಿರೂಪಿಸಿದರೆ ಸಾಹಿತ್ಯಕ್ಕೊಂದು ಭೂಷಣ; ಇಲ್ಲದಿದ್ದರೆ ಕೇವಲ ವರದಿ. ಸುಯೋಧನನ ಅವಸಾನವನ್ನು ರನ್ನಕವಿಯು ವಿಷಾದದಿಂದ ಹೇಳುವುದು ಹೀಗೆ: ‘ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮೆಯ್ದಿದರ್!’ ಕುರುಕುಲದ ಸೂರ್ಯನೂ ಸಂಜೆಯ ಸೂರ್ಯನೂ ಒಟ್ಟಿಗೆ ಮುಳುಗಿದರು ಎಂದಿದರ ಭಾವ.
ಆಲಂಕಾರಿಕ ಭಾಷೆಯೇ ಎಲ್ಲ ಸಂದರ್ಭದಲ್ಲೂ ಬೇಕೆಂದಿಲ್ಲ; ಸ್ವಭಾವೋಕ್ತಿಯೂ ಒಂದು ಅಲಂಕಾರವೇ ಎಂಬುದಾಗಿ ದಂಡಿ ಎಂಬ ಕಾಳಿದಾಸನ ಸಮಕಾಲೀನ ಕವಿ ಮತ್ತು ಕಾವ್ಯ ಮೀಮಾಂಸಕನು ಅಭಿಪ್ರಾಯಿಸುತ್ತಾನೆ. ‘ಗತೋಸ್ತಮರ್ಕೋ ಭಾತೀಂದುಃ ಯಾಂತಿ ವಾಸಾಯ ಪಕ್ಷಿಣಃ; ಇತ್ಯೇವಮಾದಿ ಕಿಂ ಕಾವ್ಯಂ ವಾರ್ತಾಮೇನಾಂ ಪ್ರಚಕ್ಷತೇ’ ಸೂರ‍್ಯನು ಮುಳುಗಿದನು, ಚಂದಿರ ಬಂದನು, ಹಕ್ಕಿಗಳು ಗೂಡು ಸೇರಿದವು ಎಂಬುದು ಸಹ ಕಾವ್ಯದಲ್ಲಿ ಕತೆಯ ಭಾಗವಾಗಿ ಬರಬಹುದು. ಆದರೆ ಮುಂದೆ ಅವುಗಳಿಗೆ ವಿಶೇಷವಾದ ಅರ್ಥವು ಜೊತೆಯಾಗಬೇಕು ಮತ್ತು ಅಂಥವು ಅನಗತ್ಯ ಸಾಲಾಗಿ ಉಳಿಯಬಾರದು. ಒಂದು ರೀತಿಯಲ್ಲಿ ಯಾವ ಅಲಂಕಾರಗಳು ಇಲ್ಲದಿದ್ದರೂ ನಿರಾಭರಣ ಸುಂದರಿಯಾಗಿ ಶೋಭಿತಳಾಗುವ ಲಾವಣ್ಯವತಿಯಂತೆ ಸ್ವಭಾವೋಕ್ತಿಯೂ ಹೊಳೆಯುತ್ತದೆ. ಇದು ಅಪರೂಪ. ‘ಬಾಳೆಯ ಹಣ್ಣನು ತಿಂದೆಸೆದರು ಸಿಪ್ಪೆಯ ಬೀದಿಯ ಕೊನೆಗೆ; ಕಾಣದೆ ಕಾಲಿಟ್ಟು ಜಾರಿದರನ್ಯರು ಕಷ್ಟವು ಬರುವುದೆ ಹೀಗೆ’ ಎಂದೊಂದು ಪದ್ಯ ಬರೆದಿದ್ದಾರೆ ಎಸ್ ವಿ ಪರಮೇಶ್ವರ ಭಟ್ಟರು. ಸಾಮಾನ್ಯರಾದ ನಮಗೂ ಕವಿಗೂ ಇರುವ ವ್ಯತ್ಯಾಸವೇ ಇದು. ಇದರಲ್ಲಿ ಯಾವ ಅಲಂಕಾರ, ಪ್ರತೀಕಗಳಿಲ್ಲ. ಬಾಳುವೆಯ ಆಕಸ್ಮಿಕ ದುಃಖ ದುಮ್ಮಾನಗಳನ್ನು ಸಾಮಾನ್ಯವಾದ ವಿದ್ಯಮಾನವೊಂದಕ್ಕೆ ಲಗತ್ತಿಸಿ, ಅನನ್ವಯಾರ್ಥವನ್ನು ಕವಿಯು ಕಂಡರಿಸಿದ್ದಾರೆ. ‘ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿಹ ಕಾಗೆ; ತಪ್ಪು ಮಾಡದ ವ್ಯಕ್ತಿ ಶಿಕ್ಷೆ ಪಡೆಯುವ ಹಾಗೆ!’ ಎಂಬ ಸಾಲು ಬರುತ್ತದೆ ಸಿಪಿಕೆಯವರ ‘ಪಕ್ಷಪಾತ’ ಎಂಬ ಕವಿತೆಯಲ್ಲಿ. ನಾವೆಲ್ಲ ನಿತ್ಯ ನೋಡುವ ಸಂದರ್ಭ ಸನ್ನಿವೇಶಗಳನ್ನು ಕವಿಯ ಮೂರನೆಯ ಕಣ್ಣೆನಿಸುವ ಪ್ರತಿಭಾವಂತಿಕೆಯು ಹೀಗೆ ಒಂದನ್ನು ಇನ್ನೊಂದಕ್ಕೆ ಕನೆಕ್ಟ್ ಮಾಡುತ್ತದೆ. ಇಂಥದೊಂದು ಸಂಪರ್ಕಸೇತು ಕವಿತೆಯೆಂಬ ನಿಗೂಢ.
ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು
ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರ ಬಿಟ್ಟಳು
ಸೆರಗು ಜಾರುತಿರಲು ಕೆಳಗೆ ಬಾನು ಭೂಮಿ ಮೇಲೆ ಕೆಳಗೆ
ಅದುರುತಿರುವ ಅಧರಗಳಿಗೆ ಬೆಳ್ಳಿ ಹಾಲು ಬಟ್ಟಲು !
ಇವು ಸುಕವಿ ಎಚ್ ಎಸ್ ವೆಂಕಟೇಶಮೂರ್ತಿಯವರ ‘ತೂಗುಮಂಚ’ ಕವನದ ಮೊದಲೆರಡು ಪದ್ಯಪಾದಗಳು. ಕವಿಗಳಿಗೂ ಕವಿತೆಯ ಓದುಗರಿಗೂ ಇಲ್ಲಿ ತಿಳಿಯಬೇಕಾದ ಹಲವು ಸುಸಂಗತಿಗಳಿವೆ. ಇದು ಕತೆಯುಳ್ಳ ಕವನ ಅಲ್ಲ; ಕಥನವುಳ್ಳ ಕವನ! ಕತೆಗೂ ಕಥನಕ್ಕೂ ಇರುವ ವ್ಯತ್ಯಾಸವನ್ನು ನಾವು ಗಮನಿಸಬೇಕು. ಕತೆಯಲ್ಲಿ ಕಾಲವು ಭೂತ, ವರ್ತಮಾನ ಮತ್ತು ಭವಿತವ್ಯಗಳೆಂಬ ಕಟ್ಟಳೆಗೆ ಒಳಪಟ್ಟಿರುತ್ತದೆ. ಆದರೆ ಕಥನದಲ್ಲಿ ಹಾಗಲ್ಲ. ಅದು ಎಲ್ಲಿಂದ ಎಲ್ಲಿಗೆ ಬೇಕಾದರೂ ಜಿಗಿಯಬಲ್ಲದು. ಕಥನದಲ್ಲಿ ಕಾಲವು ಸರಳರೇಖೆಯಲ್ಲ; ದುಂಡುವೃತ್ತ. ಈ ಕವಿತೆಯಲ್ಲಿ ಕತೆಯಿದೆ; ಆದರೆ ಕವಿಯು ಅದನ್ನು ಗದ್ಯದಲ್ಲಿರಿಸಿಲ್ಲ; ಕಾವ್ಯದಲ್ಲಿ ಹುದುಗಿಸಿಟ್ಟಿದ್ದಾರೆ. ರಾಧೆಯೇ ಇಲ್ಲಿ ಪ್ರಮುಖ ಪಾತ್ರ. ಆದರೆ ಅದು ಶ್ಯಾಮನನ್ನು ಅವಲಂಬಿಸಿ ಬಳ್ಳಿಯೊಂದು ಮರವ ತಬ್ಬಿದಂತೆ ಆಲಂಗಿಸಿ ಬೆಳೆದಿದೆ. ರಾಧಾಮಾಧವರ ಏಕಾಂತವನ್ನು ಕವಿಯು ಹೆಣ್ಣಿನ ಕಣ್ಣಿನಲ್ಲಿ ಅವಳ ಹೃದಯದ ತುಮುಲದ ಮೂಲಕ ಚಿತ್ರಿಸ ಹೊರಡುವರು. ಮಾತಿನ ಕ್ರಿಯೆಗಿಂತ ತುಂಟತನದ ಚರ್ಯೆಯು ಮೇಲುಗೈ ಸಾಧಿಸಿದೆ; ವಾಚ್ಯವನು ಧ್ವನಿಯು ಸದೆಬಡಿದಿದೆ! ಬರೀ ಧ್ವನಿಯಲ್ಲ; ಧ್ವನಿಯ ಅನುರಣನವೇ ಗಡಣವಾಗಿದೆ. ಕೇವಲ ರಾಧೆ ಮತ್ತು ಶ್ಯಾಮ ಎಂಬೆರಡು ಪದಗಳು ಮಾಡುವ ಮೋಡಿಯನ್ನು ನಾವು ಗಮನಿಸಬೇಕು. ಇದರಿಂದಾಗಿ ಆಯಾಚಿತವಾಗಿ ಅನಾಯಾಸವಾಗಿ ಕವಿಯು ನಮ್ಮ ಪರಂಪರೆಯಲ್ಲಿ ಭದ್ರಸ್ಥಾನ ಪಡೆದ ಕೃಷ್ಣೋಪಖ್ಯಾನದ ಆಯಾಮವನ್ನು ನೆನಪಿಸಿ ಕೊಡುತ್ತಾರೆ. ಇನ್ನವರಿಗೆ ಕೆಲಸ ಸಲೀಸು. ಇತಿಹಾಸ, ಪುರಾಣ, ಐತಿಹ್ಯಗಳನ್ನು ಕವಿಯ ಪ್ರತಿಭೆಯು ಬಳಸಿಕೊಳ್ಳುವ ಬಗೆ ಹೀಗೆ; ಜೊತೆಗೆ ಸಮಕಾಲೀನಗೊಳಿಸುವ ಬಗೆಯೂ. ಶೃಂಗಾರರಸವು ಅಶ್ಲೀಲವಾಗದ ಹಾಗೆ ನೋಡಿಕೊಳ್ಳುವ ಭಾರ ಕವಿಯ ಮೇಲಿರುತ್ತದೆ. ಅದನ್ನು ಅನುರಾಗವಾಗಿಸುವ ತಂತ್ರವೂ ಕವಿಯಾದವರಿಗೆ ಗೊತ್ತಿರಬೇಕು. ಸುಮ್ಮನೆ ವಾಚ್ಯ ಮಾಡಿದರೆ ಅದರ ಸೊಗಸೂ ಸೌಂದರ್ಯವೂ ಹಾಳಾಗುವುದು. ನಲ್ಲ ನಲ್ಲೆಯರ ಚೇಷ್ಟೆಯೂ ಇದಲ್ಲ. ಏಕೆಂದರೆ ಇಲ್ಲಿ ತೂಗುವ ಉಯ್ಯಾಲೆಯಲಿ ಶ್ಯಾಮನು ರಾಧೆಗೆ ಆತುಕೊಂಡು ಕೂತಿದ್ದಾನೆ ಮತ್ತು ಏನೋ ಮಾತಾಡಿದ್ದಾನೆ. ಆ ಮಾತು ಏನೆಂದು ಓದುಗರು ಕೇಳಬಾರದು. ಅದು ಅಧ್ಯಾಹಾರ. ಅಂದರೆ ಊಹಿಸಿಕೊಂಡು ಅರ್ಥ ಮಾಡಿಕೊಳ್ಳಬೇಕು. ಹೆಣ್ಣು ನಾಚುವಂಥದು. ಅಂಥ ಊಹನೆಯು ಸಂದರ್ಭೋಚಿತವಾಗಿರಬೇಕು. ಆ ಮಾತಿನ ಪರಿಣಾಮವೇನಾಯಿತೆಂಬುದನ್ನು ರಾಧೆಯ ಮೂಲಕವೇ ಕವಿತೆಯು ಚಿತ್ರಿಸ ಹೊರಟಿದೆ. ಆಕೆಯು ನಾಚಿದ್ದರ ಪರಿಣಾಮ: ಕೈಯ ಬೆರಳುಗಳು ಸೆರಗನ್ನೂ ಜಡೆಯ ತುದಿಯನ್ನೂ ಸುರುಳಿ ಸುತ್ತುತ್ತಿದೆ. ಅಷ್ಟೇ ಅಲ್ಲ, ಒಲುಮೆಯು ಶಿಖರವೇರಿದ ವರ್ತನೆಗೆ ಅದು ಸಂಕೇತವೂ. ನಾಚಿಕೆಯ ಪರಿಣಾಮಗಳು ಹೀಗೆಯೇ ಆಗಬೇಕೆಂದಿಲ್ಲ. ಸ್ತ್ರೀ ಸಹಜವಾಗಿರಬೇಕಷ್ಟೇ. ಅವಳು ಸೀರೆಯುಟ್ಟಿದ್ದರಿಂದ ಸೆರಗಿನ ತುದಿಯು ಕೈಯ ಬೆರಳುಗಳಿಗೆ ಸಿಕ್ಕಿಕೊಂಡಿದೆ. ನೀಲವೇಣಿಯೂ ಆಗಿರುವುದರಿಂದ ಜಡೆಯ ತುದಿಯೂ ಅವಳ ಕೈಗೆ ಸಿಗುವಷ್ಟಿದೆ. ಅವಳೇ ಮುಂದಾಗಿದ್ದಾಳೆ; ಮುಂದೊಡಗಿದ್ದಾಳೆ. ಸೆರಗೆಂಬ ಅರಿವೆ ಜಾರುತ್ತಿರುವ ಪರಿವೆ ಅವಳಲ್ಲಿದ್ದರೂ ಅದು ಆ ಕ್ಷಣಕ್ಕೆ ನಿರ್ಲಕ್ಷಿತ; ಬಾನೂ ಭುವಿಯೂ ಒಂದಾದ ಗಳಿಗೆಗಿದು ಸಂಕೇತ. ಅಧರ ಅದುರುತ್ತಿದೆ; ಅಮೃತಕ್ಕಾಗಿ ಹಾತೊರೆಯುತ್ತಿದೆ. ಒಂದು ಚುಂಬನ ಕದಿವ ಕತೆಯನ್ನು ಕವಿಯು ‘ಬೆಳ್ಳಿ ಹಾಲ ಬಟ್ಟಲು’ ಎಂದು ವ್ಯಾಖ್ಯಾನಿಸುತ್ತಾರೆ. ಈ ಕಳವು ಸಾಮಾನ್ಯದ್ದಲ್ಲ. ಬಲು ಮೋಹಕವಾದುದು ಮತ್ತು ಕೇವಲ ಅನುಭವವೇದ್ಯವಾದುದು. ವಿವರಿಸಿ, ವಿಶ್ಲೇಷಿಸಿ, ವ್ಯಾಖ್ಯಾನಿಸಿ, ವಾಚ್ಯವಾಗಿಸಿ ಅದರ ಗತ್ತು ಮತ್ತು ಗಮ್ಮತ್ತನ್ನು ಹಾಳುಮಾಡಬಾರದು. ಎಲ್ಲ ಉತ್ತಮ ಕವಿತೆಯ ಲಕ್ಷಣವಿದು. ಕಾವ್ಯವೆಂದರೆ ಅನುಭವ. ಅದು ರಸಾನುಭವ. ಉಳಿದ ಪ್ರಕಾರಗಳು ಹಾಗಲ್ಲ. ಅದರಲ್ಲಿ ಇಷ್ಟು ಸೂಕ್ಷ್ಮತೆಯಿಲ್ಲ. ಆದರೆ ಕಾವ್ಯಭಾಷೆಯನ್ನು ಯಾವ ಪ್ರಕಾರದಲ್ಲಾದರೂ ಬಳಸಬಹುದು; ಗದ್ಯವೂ ಪದ್ಯವಾಗುವ ಬಗೆಯಿದು. ಒಟ್ಟಂದದಲ್ಲಿ ಹೇಳುವುದಾದರೆ ಕಾವ್ಯ ಎಂಬುದು ವಿಶಾಲಾರ್ಥದಲ್ಲಿ ಅನುಭವವೇದ್ಯ ಅಭಿವ್ಯಕ್ತಿ. ಅದು ಭಾಷೆಯ ಉತ್ತುಂಗ. ಮಾತು ಸೋತಾಗ ಅಥವಾ ಸುಸ್ತಾದಾಗ ಮತಿಯು ಹೃದಯ-ಕರುಳಿನಲ್ಲಿ ನೆಲೆ ನಿಂತಾಗ ಹೊರಬರುವ ಲಯವಿನ್ಯಾಸ. ಹಾಗಾಗಿ ಕಾವ್ಯಕ್ಕೆ ಇಂಥದೇ ಎಂಬ ವ್ಯಾಖ್ಯೆ ವಿವರವಿಲ್ಲ. ಏನು ವಿವರಣೆ ಕೊಟ್ಟರೂ ಅದನ್ನು ಮೀರಿ ಬೆಳೆವ ಮಿಂಚಿನಬಳ್ಳಿ. ಎಲ್ಲವನು ಹೇಳಿಯೂ ಇನ್ನೂ ಏನನೋ ಉಳಿಸಿಕೊಂಡಿಹ ರಹಸ್ಯ ವಿಶ್ವ. ಶಬ್ದಾರ್ಥವನು ಮೀರಿ ಮಹತ್ತಾದುದನು ಸಾಧಿಸುವ ತಂತ್ರ ಮತ್ತು ಮಂತ್ರ. ‘ನಾದಬೇಕು ನಾದ ಬೇಕು; ನಾದಾನ ನಾದಬೇಕು’ ಎಂದ ಬೇಂದ್ರೆಯವರ ನುಡಿಗಟ್ಟು: ‘ರುಮುಜುಮು ಜುಮುಜುಮು ನಾದದ ನದಿಯೊಂದು ನಡೆದ್ಹಾಂಗ’ ಎಂಬಂತೆ ಕಾವ್ಯವು ‘ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರು’ ಮಹೋನ್ನತ ಪವಿತ್ರ ಗಂಗಾಜಲ.
ಕವಿತೆ ಬರೆಯುವುದು ಹೇಗೆ ಶಿಸ್ತೋ ಅದೇ ರೀತಿಯಾಗಿ ಅದನ್ನು ಓದಿಕೊಳ್ಳುವುದೂ ಶಿಸ್ತೇ. ಇಷ್ಟಕೂ ಕವಿತೆ ಇರುವುದು ಅನುಭವಿಸಲಿಕ್ಕೇ, ವಿವರಿಸುವುದಕ್ಕಲ್ಲ ಎಂದೆನಲ್ಲ ಅದೇ ಇದರ ಪ್ರಾಥಮಿಕ ಶಿಸ್ತು. ನಂನಮ್ಮ ಜೀವಿತದ ಅನುಭವ, ತಿಳಿವು ಮತ್ತು ಗ್ರಹಿಕೆಯ ಮಟ್ಟ ಎಷ್ಟೋ ಅದರಂತೆ ಅದು ಅರ್ಥ ಬಿಟ್ಟುಕೊಳ್ಳುತ್ತಾ ಹೋಗುತ್ತದೆ. ಒಂದು ಸಲ ಓದಿ ಸುಮ್ಮನಾಗುವುದಲ್ಲ; ಏಕಾಂತಕೂ ಲೋಕಾಂತಕೂ ಕವಿತೆಯೇ ಸೂಕ್ತ. ಹತ್ತೂ ಮಂದಿ ಸಹೃದಯರು ಒಂದೆಡೆ ಕುಳಿತು ಒಂದೇ ಪದ್ಯವನ್ನು ಹತ್ತೂ ರೀತಿಯಾಗಿ ಓದಿಕೊಂಡು ಸುಖ ಪಡಬಹುದು. ಒಂದೇ ಪದ್ಯವನ್ನು ಬೇರೆ ಬೇರೆ ಸಮಯದಲ್ಲಿ ಒಬ್ಬರೇ ಓದಿಕೊಂಡರೂ ವಿಭಿನ್ನ ಅರ್ಥಸ್ತರಗಳಲ್ಲಿ ಅನುಭವಕ್ಕೆ ಸಿಗಬಹುದು. ಒಂದು ರೀತಿಯಲ್ಲಿ ಕಾವ್ಯಾಸಕ್ತರಿಗೆ ಕವಿತೆಯೇ ದೇವರು. ಅವರವರ ಭಾವಕ್ಕೆ ಅವರವರ ಬಕುತಿಗೆ ತಕ್ಕಂತೆ ಅರ್ಥೈಸಿಕೊಳ್ವುದು. ಅರ್ಥವೆ ಆಗಬೇಕೆಂದೇನಿಲ್ಲ ಅಥವಾ ಅರ್ಥವಾಗುವುದು ಒಂದು ಬಗೆಯಷ್ಟೆ. ಸಂಗೀತದೊಂದಿಗೆ ಸೇರಿಕೊಂಡಾಗ ಅದರ ರಸ-ಧ್ವನಿ-ಅಲಂಕಾರಗಳು ಇನ್ನಷ್ಟು ಮೆರುಗು ಪಡೆಯಬಹುದು. ಕವಿತೆಯ ಲಯ, ನಾದ, ಛಂದಸ್ಸು, ಭಾಷಾ ಬಳಕೆ, ನಿರೂಪಿತ ಕ್ರಮ, ವಸ್ತು ವಿನ್ಯಾಸ, ವಸ್ತು ನಿರ್ವಹಣೆ, ರೂಪಕ-ಪ್ರತೀಕಗಳ ಬಳಕೆ, ಪದವೊಂದು ಇನ್ನೊಂದು ಪದವನ್ನು ಕೂಡಿಕೊಂಡು ಆದ ಆಹ್ಲಾದಮೋದ, ಚಕ್ಕನೆ ಹೊರಳಿದ ವಿಷಯವಸ್ತು ಹೀಗೆ ಕವಿತೆಯಲ್ಲಿ ಹಲವು ಅಂಗಗಳು. ಈ ಎಲ್ಲ ಅಂಗೋಪಾಂಗಗಳತ್ತ ಗಮನ ಕೊಟ್ಟು ಅಭ್ಯಾಸ ಮಾಡಿದರೆ ಸಮಯವೇ ಸಾಲುವುದಿಲ್ಲ. ರಚಿಸಿದ ಅದೇ ಕವಿಯ ಬೇರೆ ಕವಿತೆಗಳು ಮತ್ತು ಅದೇ ರೀತಿಯ ಬೇರೆ ಬೇರೆ ಕವಿಗಳ ರಚನೆಗಳನ್ನು ಹೋಲಿಸಿ, ಅಭ್ಯಾಸ ಮಾಡುವುದೂ ಒಂದು ಬಗೆಯ ಬಹುಮುಖೀ ಅಧ್ಯಯನ. ಪಾಠ, ಪರೀಕ್ಷೆ, ಮೌಲ್ಯಮಾಪನಗಳ ಕಾರಣವಾಗಿ ಕವಿತೆಯನ್ನು ವಿವರಿಸಿಕೊಡುವ ಅನಿವಾರ್ಯ ಇರುತ್ತದೆಯೇ ವಿನಾ ಮಿಕ್ಕಂತೆ ಕವಿತೆಯನ್ನು ವಿವರಿಸುವುದೆಂದರೆ ಅದು ಹೆಡ್ಡತನದ ಪರಮಾವಧಿ. ಉಳಿದ ಸಾಹಿತ್ಯ ಪ್ರಕಾರಗಳಂತೆ, ಕವಿತೆಯು ಅರ್ಥವಾಗಲಿಲ್ಲ ಎಂಬ ದೂರು ಅನ್ವಯವಾಗದು. ಉಳಿದ ಸಾಹಿತ್ಯ ಪ್ರಕಾರಗಳು ಅಂದರೆ ಗದ್ಯಪ್ರಧಾನವಾದವುಗಳು ಓದುಗರ ಬೇರೆ ಬೇರೆ ಶಿಸ್ತುಗಳನ್ನು ಬೇಡುತ್ತದೆ. ಕವಿತೆಯು ಹಾಗಲ್ಲ. ಅದು ಸಾಕಷ್ಟು ಸಿದ್ಧತೆಯನ್ನು ಕೇಳುತ್ತದೆ. ಎಷ್ಟು ಓದಿಕೊಂಡಿರುತ್ತೇವೆಯೋ ಎಷ್ಟು ವಿಭಿನ್ನ ಬಗೆಯ ಚಿಂತನೆಗಳಿರುತ್ತವೆಯೋ ಅಷ್ಟೂ ಪ್ರಮಾಣದಲ್ಲಿ ಕವಿತೆಯು ನಮ್ಮ ಅನುಭವಕ್ಕೆ ಪಕ್ಕಾಗಲು ಕಾಯುತ್ತಿರುತ್ತದೆ. ‘ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ; ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ನನಗೆ’ ಎನ್ನುತ್ತಾರೆ ಶಬ್ದ ಗಾರುಡಿಗ ಕವಿ ಬೇಂದ್ರೆಯವರು. ಉತ್ತಮ ಕವಿತೆಯೊಂದು ಬೆಳದಿಂಗಳಿದ್ದ ಹಾಗೆ; ಅದೆಷ್ಟು ವಕ್ರವಾದ (ಇಲ್ಲಿ ವಕ್ರ ಎಂದರೆ ಬಾಗಿದ ಎಂದರ್ಥ ಮಾಡಬೇಕು. ಇದನ್ನು ಕುರಿತಂತೆ ಕುಂತಕನೆಂಬ ಕಾವ್ಯ ಮೀಮಾಂಸಕನು ವಕ್ರೋಕ್ತಿ ಜೀವಿತ ಎಂಬ ಕೃತಿಯನ್ನೇ ಬರೆದಿದ್ದಾನೆ) ಪದಪುಂಜಗಳನ್ನು ಬಳಸಿದರೂ ಅಂತಿಮ ಪರಿಣಾಮ ಮಾತ್ರ ತಂಪೆನಿಸುವ ಸೊಗಸು. ಬೇಂದ್ರೆಯವರೇ ಹೇಳಿಲ್ಲವೇ: ‘ಬಿದಿಗೆ ಚಂದ್ರಮ ಡೊಂಕು; ಬೆಳದಿಂಗಳದು ಡೊಂಕೆ; ರಸಿಕ ಪೇಳೋ!?’

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ


