ವಿಶೇಷ ದಿನ

ಸಾಧನೆಗೆ ಅಡ್ಡಿಯಾಗದ ವಿಕಲಾಂಗತೆ!

Share Button

ಆರೋಗ್ಯದ ಒಂದು ಹೊಸ ಚಿಂತನೆ! ಎಲ್ಲರಿಗೂ ಬೇಕಾಗಿರುವುದು ಶಾರೀರಿಕ ಹಾಗೂ ಮಾನಸಿಕ ಆರೋಗ್ಯ. ಆದರೆ ಇದರ ರಕ್ಷಣೆಗಾಗಿ ಪ್ರತಿಯೊಬ್ಬರೂ ಪ್ರತಿನಿತ್ಯ ಪ್ರಯತ್ನ ಮಾಡಬೇಕಾಗುತ್ತದೆ. ಎಲ್ಲ ಅಂಗಗಳು ಇಂದು ಚೆನ್ನಾಗಿವೆ, ಪ್ರಕೃತಿ ನಮಗೆ ಎಲ್ಲವನ್ನೂ ಚೆನ್ನಾಗಿ ಕೊಟ್ಟಿದೆ ಎಂದು, ಅವುಗಳನ್ನು ರಕ್ಷಿಸದೇ, ಅವುಗಳ ಸರಿಯಾದ ಬಳಕೆ ಮಾಡದೇ ಸೋಮಾರಿಯಾಗಿದ್ದರೆ ಶರೀರಕ್ಕೆ ಜಡತೆ, ಸೋಮಾರಿತನ ಆವರಿಸಿಕೊಳ್ಳುತ್ತವೆ. ಇನ್ನೊಂದು ದಿಕ್ಕಿನಿಂದ ನೋಡಿದಾಗ ಕೆಲವರಿಗೆ ಹುಟ್ಟಿನಿಂದ ಅಥವಾ ಮುಂದೆ ಅಪಘಾತ ಅಥವಾ ದುರಂತಗಳಿಂದ ಅಂಗವಿಕಲತೆ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ವಿಕಲಾಂಗತೆಯ ನಿರ್ವಹಣೆಯು ಒಂದು ಆರೋಗ್ಯ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಕಲಾಂಗರು, ಅವರ ಪಾಲಕರು ಹಾಗೂ ಅವರ ಕುಟುಂಬದವರು ಧೈರ್ಯ, ಛಲಗಳಿಂದ ಕಲಿಕೆ, ಉದ್ಯೋಗ ಮಾಡಬೇಕಾಗುತ್ತದೆ. ನಾನು ಕಂಡಿರುವಂತೆ, ವಿಕಲತೆ ದೇಹದಲ್ಲಿರದೇ ಮನಸ್ಸಿನ ಸ್ಥಿತಿಯಲ್ಲಿದೆ.

ಈ ಹಿನ್ನೆಲೆಯಲ್ಲಿ ಈ ಲೇಖನವನ್ನು ಓದಿ, ಓದುಗರೇ. ಎರಡೂ ಕಣ್ಣುಗಳಿಲ್ಲ, ಕಾಲುಗಳಿಲ್ಲ, ಕೈ ಇಲ್ಲ, ಮಾತು ಬರೋಲ್ಲ, ಕಿವಿ ಕೇಳೋಲ್ಲ, ಸೊಂಟವೇ ಇಲ್ಲ ಎಂದು ಭಿಕ್ಷೆಯ ಮೊರೆ ಹೋಗಿ, ನಮ್ಮ ಕರುಣೆ ಸಂಪಾದಿಸಲು ತಮ್ಮ ಅಂಗವಿಕಲತೆ ಪ್ರದರ್ಶಿಸುವ ಹಲವರ ಮಧ್ಯೆ, ತಮ್ಮ ಒಂದು ಅಂಗ ಇಲ್ಲದಿದ್ದರೂ, ಉಳಿದ ಅಂಗಗಳ ಸಹಾಯದಿಂದ, ನಾವೂ ಸ್ವತಂತ್ರವಾಗಿ ಸ್ವಾಭಿಮಾನದಿಂದ ನಮ್ಮ ಅನ್ನ ದುಡಿಯುತ್ತೇವೆ ಎನ್ನುವವರನ್ನು, ಮೆಚ್ಚಿ ಬೆಂಬಲಿಸಬೇಕಾಗಿದೆ ಇಂದು. 1992 ರಿಂದ, ಪ್ರತೀ ವರ್ಷ ಡಿಸೆಂಬರ್ 3 ರಂದು, ವಿಶ್ವಸಂಸ್ಥೆಯ ವಿಕಲಾಂಗರ ಅಂತರ್‌ರಾಷ್ಟ್ರೀಯ ದಿನ. ಜೊತೆಗೆ ಭಾರತದಲ್ಲೂ ವಿಕಲಚೇತನರ ದಿನ ಆಚರಿಸುತ್ತಾರೆ. ಅಂಗವಿಕಲತೆಯ ಸಮಸ್ಯೆಗಳನ್ನು ಅರಿತು, ಅವರನ್ನು ಉತ್ತೇಜಿಸಿ, ಅವರಿಗೆ ಸಭ್ಯತೆ – ಗೌರವ ನೀಡಿ, ಅವರ ಹಕ್ಕುಗಳನ್ನು ಗೌರವಿಸಿ, ಅವರ ಕಲ್ಯಾಣಕ್ಕಾಗಿ ಪ್ರಯತ್ನಿಸುವುದೇ ಈ ದಿನಾಚರಣೆ ಉದ್ದೇಶ. ವಿಶ್ವದ ಶೇಕಡಾ 15ರಷ್ಟು ಜನಸಂಖ್ಯೆ ಅಥವಾ 1 ಶತಕೋಟಿ ಜನ, ಅಂಗವಿಕಲತೆ ಹೊಂದಿದ್ದಾರೆ. ಇವರು ಎದುರಿಸುವ ಆಹ್ವಾನಗಳನ್ನು ಸಾಮಾನ್ಯ ಜನ ಅರ್ಥ ಮಾಡಿಕೊಳ್ಳಲಾರರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ವಿಕಲಚೇತನರ ಅಚಲ ಪಟ್ಟನ್ನು ಶ್ಲಾಘಿಸಿದ್ದಾರೆ. “ನಾನು ದಿವ್ಯಾಂಗ. ಸೋದರಿಯರು / ಹಾಗೂ ಸೋದರರನ್ನು ಅವರ ಅಚಲ ಪ್ರಯತ್ನಕ್ಕಾಗಿ ಗೌರವವಂದನೆ ಸಲ್ಲಿಸುತ್ತೇನೆ. ನಮ್ಮ ಸದ್ಯದ ಪ್ರಯತ್ನಗಳನ್ನು, ಹೊಸಚೈತನ್ಯದಿಂದ ಮುಂದುವರೆಸಿ, ತಲುಪುವಿಕೆ ಹಾಗೂ ಸಮಾನತೆಗಳು,ಮೆರೆಯುವ ದೇಶವನ್ನು ಸೃಷ್ಟಿಸೋಣ”. ಕೇಂದ್ರ ಸರಕಾರ ವಿಶೇಷ ಚೇತನರ ಕಲ್ಯಾಣಕ್ಕಾಗಿ ಒಂದು ಸಮಿತಿ ಸ್ಥಾಪಿಸುವ ಯೋಜನೆ ಹೊಂದಿದೆ. ಇವರನ್ನು ಬೆಂಬಲಿಸಿ, ಅವರ ಸ್ವ-ಗೌರವ, ಕಲ್ಯಾಣ ಹಾಗೂ ಹಕ್ಕುಗಳನ್ನು ಕಾಯಲು,ಜನರ ಅರ್ಥಮಾಡಿಕೊಳ್ಳುವಿಕೆ ಸುಧಾರಿಸುವದೇ ಈ ದಿನಾಚರಣೆಯ ಉದ್ದೇಶ.

ಹುಟ್ಟಿನಿಂದಲೋ ಅಥವಾ ಜೀವನದಲ್ಲಿ ಎದುರಾದ ದುರಂತ ಸನ್ನಿವೇಶಗಳಿಂದಲೋ ಅಂಗವಿಕಲತೆ ಪಡೆದರೂ, ಪ್ರಪಂಚದಲ್ಲಿ ತಮ್ಮ ಸಾಧನೆಗಳಿಂದ ಸ್ಥಾನ ಪಡೆದಿರುವ ಅನೇಕ ಖ್ಯಾತ ವ್ಯಕ್ತಿತ್ವಗಳನ್ನು ನಾವಿಂದು ನೆನೆಯೋಣ. ಈ ಹಿನ್ನೆಲೆಯಲ್ಲಿ ಹಿಂದಿದ್ದ, ಇಂದಿರುವ ಕೆಲವು ಸಾಧಕರನ್ನುಈಗ ನೆನೆಯೋಣ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಭಾರತೀಯ ದಿವ್ಯಾಂಗರ ಸಾಧನೆ ಕಂಡಾಗ, ದಿಗ್ಭ್ರಮೆಯಾಗುತ್ತದೆ. ಇವರೆಲ್ಲರು ಅಸಾಧ್ಯವಾದುದನ್ನು ಸಾಧ್ಯ ಮಾಡಲು ಇವರು ಹಾಕಿದ ಸತತ ಪ್ರಯತ್ನ ಇವುಗಳು ಸರ್ವಾಂಗ ಭೂಷಿತರಾಗಿದ್ದೂ, ಏನನ್ನೂ ಸಾಧಿಸಲು ಮನಸ್ಸು ಮಾಡದೇ, ಪ್ರಯತ್ನ ಮಾಡದೇ, ಸೋಮಾರಿಯಾಗಿರುವವರಿಗೆ ಈ ಅನುಭವಗಳಿಂದ ಸ್ಫೂರ್ತಿ ಸಿಗಬಹುದೇನೋ!.

50 ವರ್ಷ ದಾಟಿರುವ ಸುಧಾಚಂದ್ರನ್ ಇಂದು ಖ್ಯಾತ ಶಾಸ್ತ್ರೀಯ ನೃತ್ಯ ಹಾಗೂ ಚಲನ ಚಿತ್ರತಾರೆ. ಕೇರಳದಲ್ಲಿ ಈಕೆಯ ಬಾಲ್ಯದಲ್ಲಿ, ಕಾಲಿನ ಹಿಮ್ಮಡಿ ಬಳಿ ಆದ ಚಿಕ್ಕಗಾಯ ನಿರ್ಲಕ್ಷಿಸಿದ ವೈದ್ಯರು, ಅದಕ್ಕೆ ಪಟ್ಟಿ ಹಾಕಿದರು. ಅದು ಮುಂದೆ ಸೋಂಕಾಗಿ, ಬೇರಾವ ದಾರಿಯೂ ಉಳಿಯದೇ, ಆಕೆಯ ಕಾಲು ತೆಗೆದು ಹಾಕಬೇಕಾಯಿತು. ಆಗ ಮರದ ಜೈಪುರ್ ಪಾದ ಹಾಕಿಕೊಂಡು,ಭರತನಾಟ್ಯದಲ್ಲಿ ಅಂತರ್‌ರಾಷ್ಟ್ರೀಯ ಕಲಾವಿದೆಯಾದುದಲ್ಲದೇ, ಭಾರತೀಯ ಚಲನಚಿತ್ರ ಹಾಗೂ ಟಿ.ವಿ.ಯ ಖ್ಯಾತ ತಾರೆಯಾದರು.

ಅಂಧರಾಗಿದ್ದ ರವೀಂದ್ರ ಜೈನ್ ಚಿಕ್ಕಂದಿನಿಂದ ಸಂಗೀತ ಪ್ರಪಂಚ ಹೊಕ್ಕು, 70ರ ದಶಕದ ಜನಪ್ರಿಯ ಚಲನಚಿತ್ರ ಸಂಗೀತ ನಿರ್ದೇಶಕರಾದರು. ಒಮ್ಮೆ ಇವರ ಧ್ವನಿಮುದ್ರಣ ಕಾಲದಲ್ಲಿ ಇವರ ತಂದೆ ತೀರಿಕೊಂಡರೂ, ಧ್ವನಿಮುದ್ರಣ ಮುಗಿಯುವವರೆಗೆ ಇವರು ಆ ಸ್ಥಳ ಬಿಡಲಿಲ್ಲ. ಚಲನಚಿತ್ರದ ಸಂಗೀತ ನಿರ್ದೇಶನದೊಂದಿಗೆ, ಸಂಗೀತದ ಅನೇಕ ಆಲ್ಬಂಗಳನ್ನು ಹೊರತಂದಿದ್ದಾರೆ. ರೈಲಿನ ಅಪಘಾತದಲ್ಲಿ ಮಗುವಿದ್ದಾಗ, ಗಿರೀಶ್‌ ಶರ್ಮಾರವರು ಒಂದು ಕಾಲು ಕಳೆದುಕೊಂಡರು.ಜೀವನದಲ್ಲಿ ಆಕಸ್ಮಿಕವಾಗಿ ಬಿದ್ದ ಈ ಪೆಟ್ಟು ಅವರನ್ನು ನಿರಾಸೆಯ ಮೂಲೆಗೆ ತಳ್ಳಲಿಲ್ಲ. ಬ್ಯಾಡ್‌ಮಿಂಟನ್ ಚಾಂಪಿಯನ್ ಆಗಬೇಕೆಂಬುದು ಅವರ ಕನಸ್ಸಾಗಿತ್ತು. ಅವರಿಗೆ ಇದ್ದುದು ಒಂದೇ ಕಾಲು ಆದರೆ ಅವರು ಅದಕ್ಕೆ ಶಕ್ತಿ ತುಂಬಿದರು. ಚಿಕ್ಕ ಮಗುವಾಗಿದ್ದಾಗಿನಿಂದಲೇ ತನ್ನ ಅಂಗವಿಕಲತೆ ಯಾವುದೇ ರೀತಿ ಅಡ್ಡಿ ಬರದಂತೆ ಇತರ ಸಾಮಾನ್ಯ ಮಕ್ಕಳೊಂದಿಗೆ ಹೊರಾಂಗಣ ಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಒಂಟಿ ಕಾಲಿನಿಂದ ಕಷ್ಟ ಪಡದೇ ಆಡುತ್ತಾ, ಇಡೀ ಬ್ಯಾಡ್‌ಮಿಂಟನ್ ಕೋರ್ಟನಲ್ಲಿ ಜೋರಾಗಿ ಓಡಾಡುತ್ತಿದ್ದರು. ತಮ್ಮ ಆಸಕ್ತಿ, ಶ್ರದ್ಧೆ ಅಪಾರ ಪ್ರಯತ್ನಗಳಿಂದ ಬ್ಯಾಡ್‌ಮಿಂಟನ್ ಪಟುವಾಗಿ, ಇವರು ಮಿಂಚಿದ್ದಾರೆ. ಇಂಥ ಪ್ರತಿಭಾವಂತನ ಬಗ್ಗೆ ನಾವು ಹೆಮ್ಮೆ ಪಡಬೇಡವೇ!.

ಶೇಖರ್‌ನಾಯಕ್ ಅಂಗವಿಕಲತೆಯನ್ನೇ ಅವಕಾಶವನ್ನಾಗಿ ಬದಲಾಯಿಸಿಕೊಂಡವರು. ತಮ್ಮಬಲವಾದ ಆತ್ಮಶಕ್ತಿ ಹಾಗೂ ಶ್ರದ್ಧೆಗಳಿಂದ, 20 ಅಂಧರ ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಆಗಿ, 32 ಶತಕಗಳನ್ನು ಬಾರಿಸಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿ ಈ ಹಂತಕ್ಕೆ ಬಂದರು.ಇವರ ಉತ್ಸಾಹಕ್ಕೆ ನಮ್ಮ ಒಂದು ವಂದನೆ ಸಲ್ಲಿಸೋಣ. ಹೆಚ್. ರಾಮಕೃಷ್ಣ 8 ವರ್ಷದವನಿದ್ದಾಗ ಪೋಲಿಯೋದಿಂದ ಎರಡೂ ಕಾಲುಗಳನ್ನು ಕಳೆದುಕೊಂಡರು. ಸಾಮಾನ್ಯ ಶಾಲೆಯಲ್ಲಿ ಓದಲು ಪ್ರವೇಶ ಸಿಗಲಿಲ್ಲ.ಇದೇ ಕಾರಣದಿಂದ ಕೆಲಸವೂ ಸಿಗಲಿಲ್ಲ. ಜೀವನದ ಪ್ರತಿ ಹೆಜ್ಜೆಯಲ್ಲೂ ಹೋರಾಡಬೇಕಾಯಿತು. 40 ವರ್ಷ ಪತ್ರಿಕಾಕರ್ತರಾಗಿ ದುಡಿದು, ಈಗ ಎಸ್.ಎಸ್.ಟಿ.ವಿ. ಸಂಗೀತ ವಾಹಿನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಸಂಗೀತಗಾರರಾಗಿ ಅನೇಕ ವೇದಿಕೆಗಳಲ್ಲಿ ಮಿಂಚಿ, ಕೃಪಾ ಎಂಬ ಧರ್ಮಾರ್ಥ ಟ್ರಸ್ಟ್ ನಡೆಸುತ್ತಾ ವಿಶೇಷ ಚೇತನರಿಗೆ ನೆರವು ನೀಡುತ್ತಿದ್ದಾರೆ.

ಪ್ರೀತಿ ಶ್ರೀನಿವಾಸನ್ 19 ವರ್ಷದೊಳಗಿನ ತಮಿಳುನಾಡು ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು. ಹಿಂದೆ ಈಜುವಾಗ ನಡೆದ ಅಪಘಾತದಲ್ಲಿ, ಆಕೆಯ ಕೈನ ಕೆಳಗಿನ ಭಾಗ ಪಾರ್ಶ್ವವಾಯುವಿಗೆ ತುತ್ತಾಗಿತ್ತು. ಆದರೂ ಆಕೆ ತನ್ನ ಸಂಘಟನೆಯಿಂದ ಇತರರಿಗೆ ಸ್ಫೂರ್ತಿ ನೀಡುತ್ತಿದ್ದಾಳೆ. ವಿವಿಧ ವಿಕಲಾಂಗತೆಗಳಿಂದ ನೊಂದು ಅಸಹಾಯಕರಾಗಿರುವ ಮಹಿಳೆಯರಿಗೆ ಇವರು ಆಶಾಕಿರಣವಾಗಿದ್ದು, ಇವರೆಲ್ಲ ತಮ್ಮ ಜೀವನದ ಗುರಿ ಸಾಧನೆ ಮಾಡಲು, ಹಾಗೂ ಉತ್ತಮ ಜೀವನ ನಡೆಸಲು ನೆರವು ನೀಡುತ್ತಿದ್ದಾರೆ.

ಸೆಲ್ಫಿಗೆ ಮೊದಲು ನಿಮ್ಮ ಜೀವವಿದೆ. ಸೆಲ್ಫಿಯ ನಂತರವೂ ನೀವು ಜೀವಂತ ಇರಬೇಕು. ಸಾಮಾಜಿಕ ಜಾಲತಾಣಗಳು, ಇವುಗಳ ಸಂಖ್ಯೆಗಿಂತ ನಿಮ್ಮ ಜೀವ ಅಮೂಲ್ಯವಾದದ್ದು. ಇದನ್ನು ನೀವು ಅಲಕ್ಷಿಸಿದರೆ ಅದನ್ನು ಕಳೆದುಕೊಂಡರೆ ನಿಮಗಿಂತ ಮೂರ್ಖರು-ಹುಚ್ಚರು ಬೇರಾರು? ಸೆಲ್ಫಿ ಹುಚ್ಚಿನಲ್ಲಿ ಅಪಘಾತಗಳಿಗೆ ತುತ್ತಾಗಿ, ನಿಮ್ಮ ಮೂಳೆಗಳನ್ನು ಕೈ ಕಾಲನ್ನು ಮುರಿದುಕೊಂಡರೆ, ನಿಮ್ಮ ಜೀವನವಿಡೀ ನೀವು ವಿಕಲಾಂಗರಾಗುತ್ತೀರಿ!ಆಗ ನಿಮ್ಮನ್ನು ನೀವೇ ನಿಮ್ಮ ದುಡುಕಿಗಾಗಿ ಶಪಿಸಿಕೊಳ್ಳುತ್ತೀರಿ. ನಿಮ್ಮ ಮೆದುಳಿಗೆ ಘಾಸಿಯಾದರೆ ಇಡೀ ಜೀವನ, ಹಾಸಿಗೆಯಲ್ಲಿ ಕೋಮಾದಲ್ಲಿರುವಿರಿ! ನನ್ನ ಅತ್ಯಂತ ಪ್ರೀತಿಗೆ ಪಾತ್ರರಾದ ಯುವಜನರೇ, ಎಂದೆಂದೂ,ಈ ಲೇಖನ ಓದಿ, ನಾನು ನಿರಾಶಾವಾದಿ ಎಂದು ಯೋಚಿಸದಿರಿ. ನಿಮ್ಮನ್ನು ಅಂಜಿಸಲು ಇದನ್ನೆಲ್ಲಾ ಹೇಳುತ್ತಿಲ್ಲ. ಇಲ್ಲ ಎಂದೆಂದಿಗೂ ಇಲ್ಲ. ನಾನು ಅಪಾರ ಆಶಾವಾದಿ. ಈ ಸುಂದರ ಭೂಮಿಯ ಮೇಲೆ ಹುಟ್ಟಿದ ಪ್ರತಿಮಾನವನೂ, ಆರೋಗ್ಯವಂತ ಪೂರ್ಣ ಆಯುಸ್ಸನ್ನು ಜೀವಿಸಬೇಕೆಂಬುದು, ನನ್ನ ಆಶಯ. ಸೆಲ್ಫಿಗಾಗಿ ಭಾರೀ ಅಪಾಯಗಳಲ್ಲಿ ಧುಮುಕಿದರೆ, ನೀವು ನೀವಾಗಿ, ಅಪಘಾತಗಳು- ಮರಣವನ್ನು ಆಹ್ವಾನಿಸುತ್ತೀದ್ದೀರಿ. ಆಗ ನಿಮ್ಮದು ಸುಂದರ ಸೆಲ್ಫಿಯ ಕುರೂಪಿ ಹಾಗೂ ಭೀಕರ ಆತ್ಮಹತ್ಯೆ. ದಯವಿಟ್ಟು ಒಮ್ಮೆ ನಿಮ್ಮ ಜೀವನದ ಅಮೂಲ್ಯ ಬೆಲೆ, ಸಂರಕ್ಷಣೆ, ಆರೋಗ್ಯ, ಕೌಟುಂಬಿಕ ಬಂಧ, ಇವುಗಳ ಬಗ್ಗೆ ಚಿಂತಿಸಿ. ನಿಮ್ಮ ಕಣ್ಣುಗಳನ್ನು ಕ್ಷಣಕಾಲ ಮುಚ್ಚಿ, ಯೋಚಿಸಿ. ಇಂಥ ಅಪಾಯಗಳನ್ನು ತೆಗೆದುಕೊಳ್ಳುವ ಮುಂಚೆ, ಇಂಥ ಸನ್ನಿವೇಶಗಳ ಬಗ್ಗೆ ಮೊದಲೇ ಕಲ್ಪಿಸಿಕೊಂಡರೆ, ನೀವು ಇಂಥ ಮೂರ್ಖ ಹೆಜ್ಜೆಗಳನ್ನು ತೆಗೆದುಕೊಳ್ಳುವ ಸಾಹಸವನ್ನು, ನಿಮ್ಮ ಕನಸಿನಲ್ಲೂ ಮಾಡಲಾರಿರಿ !

ಎನ್.ವ್ಹಿ.ರಮೇಶ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *