ಇತ್ತೀಚೆಗೆ ಸಾಮಾಜಿಕ ಮಾಧ್ಯಮಜಾಲಗಳ ಹಾವಳಿಯಿಂದ ಜನರಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಆಕ್ಷೇಪಣೆಗಳನ್ನು ನಿವಾರಿಸಿಕೊಳ್ಳಲು ಹಲವಾರು ಸಾಹಿತ್ಯಿಕ ಸಂಘಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯಪ್ರವೃತ್ತವಾಗುತ್ತಿವೆ. ಅಂತಹದೊಂದು ಮೈಸೂರಿನ ‘ಸಿರಿಗನ್ನಡ ಓದುಗರ ಒಕ್ಕೂಟ’. ಪ್ರಸಿದ್ಧ ಕನ್ನಡ ಕಾದಂಬರಿಗಾರ್ತಿ ಶ್ರೀಮತಿ ಆರ‍್ಯಾಂಬ ಪಟ್ಟಾಭಿ ಅವರ ಅಮೃತ ಹಸ್ತದಿಂದ ದಿನಂಕ 9-11-2015ರಂದು ಇದು ಉದ್ಘಾಟನೆಯಗಿ ನಿರಂತರವಾಗಿ, ನಿರಾತಂಕವಾಗಿ ನಡೆದುಕೊಂಡು ಬಂದು ಇದೀಗ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಹನ್ನೊಂದನೆಯ ವರ್ಷಕ್ಕೆ ಕಾಲಿಟ್ಟಿದೆ.
ಈ ವೇದಿಕೆಯ ರೂವಾರಿಗಳು ಶ್ರೀಮತಿ ಪೂರ್ಣಿಮಾ ಸುರೇಶ್ ಹಾಗೂ ಡಾ. ಶ್ರೀಮತಿ ವಿಜಯಾಹರನ್. ಇದರ ಹಿಂದಿರುವ ಪ್ರೇರಕ, ಪೋಷಕ, ಪ್ರೋತ್ಸಾಹಕ ವ್ಯಕ್ತಿ ಶ್ರೀಮತಿ ಸವಿತಾ ರಂಗ. ಇವರು ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಕುಶಲ ಕಲೆಗಳನ್ನು ಕಲಿಸಿಕೊಡುವ ಕಲಾಕೇಂದ್ರ “ಹಾಬೀ ಪ್ಲೇಸ್” ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ. ಇದೇ ಅಂಗಳದಲ್ಲಿ ‘ಸಿರಿಗನ್ನಡ ಓದುಗರ ಒಕ್ಕೂಟ’ವು ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.
ಪ್ರಾರಂಭವಾದಾಗ ಸಮಾನ ಮನಸ್ಕರೊಡಗೂಡಿ ಸ್ಥಾಪಿಸಿದ ಈ ಒಕ್ಕೂಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಸದಸ್ಯೆಯರಿದ್ದರು. ಈಗ ಸದಸ್ಯೆಯರ ಸಂಖ್ಯೆ ಐವತ್ತರ ಆಸುಪಾಸು ಆಗಿದೆ. ಇದರಲ್ಲಿ ಬೇರೆ ಸಂಘಗಳಲ್ಲಿರುವಂತೆ ಅದ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಎಂದೇನೂ ಇಲ್ಲ. ಇಲ್ಲಿ ಎಲ್ಲರೂ ಪ್ರಮುಖರೇ. ಎಲ್ಲರ ಅಭಿಪ್ರಾಯಕ್ಕೂ ಮನ್ನಣೆಯಿದೆ. ಭಿನ್ನಾಭಿಪ್ರಾಯಕ್ಕೆ ಆಸ್ಪದವಿಲ್ಲ. ಮುಖ್ಯವಾಗಿ ಅವಕಾಶವಿಲ್ಲ. ಇದರಲ್ಲಿರುವ ಸದಸ್ಯೆಯರು ಮೂವತ್ತರ ಹರೆಯದಿಂದ ತೊಂಬತ್ತರ ಹರೆಯದವರೆಗೆ ಇದ್ದಾರೆ. ಹಿರಿಯ ಚೇತನಗಳ ಉತ್ಸಾಹ ಹದಿಹರೆಯದವರನ್ನೂ ನಾಚಿಸುವಂತಿದೆ. ಇಲ್ಲಿರುವ ಸದಸ್ಯೆಯರಲ್ಲಿ ಯದ್ಯೋಗಸ್ಥ ಮಹಿಳೆಯರು, ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವವರು, ಬರಹಗಾರರು, ಉನ್ನತ ಹುದ್ದೆಯನ್ನಲಂಕರಿಸಿ ನಿವೃತ್ತರಾದವರು, ಸ್ವಯಂನಿವೃತ್ತಿ ಪಡೆದವರು, ಕೌಟುಂಬಿಕ ಜವಾಬಾಬ್ದಾರಿಗಳ ಜೊತೆಗೇ ಇತರ ಹವ್ಯಾಸಗಳನ್ನು ಬೆಳೆಸಿಕೊಂಡವರು ಇದ್ದಾರೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತ “ಮನಸ್ಸಿದ್ದರೆ ಮಾರ್ಗ” ಎಂಬಂತೆ ಒಕ್ಕೂಟವು ಮುನ್ನಡೆದಿದೆ.
“ತಿಂಗಳಿಗೊಂದು ಓದು” ಇಲ್ಲಿನ ಧ್ಯೇಯವಾಕ್ಯ. ಒಂದು ತಿಂಗಳ ಮುಂಚೆಯೇ ಒಂದು ಪುಸ್ತಕವನ್ನು ಆಯ್ಕೆ ಮಾಡಲಾಗುತ್ತದೆ. ಅದನ್ನು ಸದಸ್ಯೆಯರು ಇಷ್ಟಪಟ್ಟರೆ ಬಹಳಷ್ಟು ಸಾರಿ ಆಯೋಜಕರೇ ಅದನ್ನು ಒದಗಿಸುತ್ತಾರೆ. ಓದುವ ಹವ್ಯಾಸದ ಜೊತೆಗೆ ಕೊಡು ಕೊಳ್ಳುವಿಕೆಯ ಪ್ರಕ್ರಿಯೆಯು ಸೇರಿ ಬರಹಗಾರರನ್ನೂ ಪ್ರೋತ್ಸಾಹಿಸಿದಂತಾಗುತ್ತದೆ.
ಶನಿವಾರ, ಬಾನುವರ, ಹಬ್ಬಹರಿದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಂದು ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗುತ್ತದೆ. ಆ ದಿನ ಬೆಳಗ್ಗೆ 10-30ಕ್ಕೆ ಅಥವಾ 11-00ಕ್ಕೆ ಪ್ರಾರಂಭವಾದ ಮಾತುಕತೆ ಸುಮಾರು ಮಧ್ಯಾನ್ಹ 1-30ಕ್ಕೆ ಮುಕ್ತಾಯವಾಗುತ್ತದೆ. ಆ ಪುಸ್ತಕವನ್ನು ಓದಿದ ಸದಸ್ಯೆಯರ ಅಭಿಪ್ರಾಯ, ಅನಿಸಿಕೆಗಳನ್ನು ಮಂಡಿಸಲು ಐದರಿಂದ ಆರು ನಿಮಿಷದ ಕಾಲಾವಧಿ ನೀಡಲಾಗುತ್ತದೆ. ಇದು ಅವರೆಷ್ಟು ಮಟ್ಟಿಗೆ ಕೃತಿಯನ್ನು ಆಮೂಲಾಗ್ರವಾಗಿ ಓದಿದ್ದಾರೆಂಬುದಕ್ಕೆ ಸಾಕ್ಷಿಯಾಗುತ್ತದೆ. ಪುಸ್ತಕದಲ್ಲಿ ಕಥೆ, ಸನ್ನಿವೇಶ, ಪಾತ್ರಗಳು, ಭಾಷಾಶೈಲಿ, ವರ್ಣನೆ, ಸಾಮಾಜಿಕ ಸಂದೇಶ, ಅವರಿಗೆ ಮೆಚ್ಚುಗೆಯಾದ ಅಂಶಗಳೇನು? ಇತ್ಯಾದಿಗಳನ್ನು ತಮ್ಮ ಮಾತುಗಳಲ್ಲಿ ಹೇಳಬೇಕು. ಅದಕ್ಕಾಗಿ ಖಂಡಿತವಾಗಿ ಪುಸ್ತಕವನ್ನು ಏಕಾಗ್ರತೆಯಿಂದ ಓದಲೇಬೇಕಾಗುತ್ತದೆ. ಇದು ವಿಮರ್ಶೆಯಾಗಲೀ, ಅಥವಾ ವಿಷಯದ ಪರ ವಿರೋಧ ಚರ್ಚೆಯಾಗಲೀ ಅಲ್ಲ. ಇದರಿಂದ ಓದುಗರಿಗೆ ಭಾಷಾಸಂಪತ್ತು, ಪರಿಜ್ಞಾನ, ಏಕಾಗ್ರತೆ ಹೆಚ್ಚಾಗುತ್ತದೆ. ಹಾಗೇ ಬರಹಗಾರರಿಗೆ ಓದುಗರು ಸಾಮಾನ್ಯವಾಗಿ ಯಾವಯಾವ ಅಂಶಗಳನ್ನು ಗಮನಿಸುತ್ತಾರೆ? ಹೇಗೆ ಪ್ರತಿಕ್ರಯಿಸುತ್ತಾರೆ? ಎಂಬುದರ ಅರಿವುಂಟಾಗಿ ತಮ್ಮ ಬರಹಗಳನ್ನು ಅದೇ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ.
ಎಲ್ಲ ಸದಸ್ಯೆಯರು ಕನ್ನಡ ಬಲ್ಲವರೇ ಆದರೂ ನಮ್ಮ ಭಾಷೆಯ ಹಿರಿಯ ಕವಿಗಳು, ಭಾಷೆಯ ಬೆಳವಣಿಗೆ ಎಂಬ ಹೆಚ್ಚಿನ ತಿಳಿವಳಿಕೆಯನ್ನು ನೀಡುವ ಸಲುವಾಗಿ ಪುಸ್ತಕದ ಚರ್ಚೆಯ ಮೊದಲು ಸ್ವಲ್ಪ ಹೊತ್ತು ಇಂತಹ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ. ಯಾರು ಯಾವ ಕವಿಯ ಬಗ್ಗೆ, ಅಥವಾ ಕಾವ್ಯದ ಬಗ್ಗೆ ಮಾತನಾಡುತ್ತಾರೆಂಬ ಮಾಹಿತಿಯನ್ನೂ ಒಂದು ತಿಂಗಳು ಮೊದಲೇ ನಿಗದಿಪಡಿಸಲಾಗುತ್ತದೆ. ಅವರು ಆ ವಿಷಯದ ಬಗ್ಗೆ ಅಧ್ಯಯನ ಮಾಡಿ ಬಂದಿರುತ್ತಾರೆ. ಓದಿನ ಜೊತೆಗೆ ಭಾಷೆಯ ಬಗ್ಗೆ ಅರಿವು ಮೂಡಿಸುವ ಕೆಲಸವೂ ಉಪಯುಕ್ತವಾಗಿದೆ.
ಓದುಗರ ಒಕ್ಕೂಟದಲ್ಲಿ ಏಕತಾನತೆಯನ್ನು ತಪ್ಪಿಸುವ ಸಲುವಾಗಿ ವರ್ಷಕ್ಕೊಮ್ಮೆ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಸ್ಫರ್ಧೆ ನಡೆಸಿ ನವೆಂಬರ್ ತಿಂಗಳ ರಾಜ್ಯೋತ್ಸವದ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಆ ದಿನದಂದು ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಯಾರಾದರೂ ಲೇಖಕರು ತಮ್ಮ ಪುಸ್ತಕವನ್ನು ಬಿಡುಗಡೆ ಮಾಡುವವರಿದ್ದರೆ ಅವರಿಗೆ ಅಂದು ಅವಕಾಶ ನೀಡಲಾಗುತ್ತದೆ. ವಿಶೇಷ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುತ್ತದೆ. ಈ ಸಹೃದಯತೆಗೆ ಈ ಒಕ್ಕೂಟ ವೇದಿಕೆಯಾಗಿದೆ.
ಫೆಬ್ರವರಿ ತಿಂಗಳಲ್ಲಿ ಪುಸ್ತಕ ದಿನಾಚರಣೆಯ ಸಲುವಾಗಿ ಸದಸ್ಯೆಯರು ತಮ್ಮಲ್ಲಿನ ಪುಸ್ತಕಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಹೊಸದೊಂದು ಪುಸ್ತಕ ಓದುವ ಅವಕಾಶ ಪಡೆದುಕೊಳ್ಳುತ್ತಾರೆ. ವರ್ಷದಲ್ಲಿ ಒಂದು ಬಾರಿ ಒಂದು ದಿನದ ಹೊರಸಂಚಾರ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತದೆ. ಬೆಳಗ್ಗೆ ಹೊರಟು ಸಂಜೆಗೆ ಹಿಂದಿರುಗಬಹುದಾದ ಸ್ಥಳಗಳಿಗೆ ಒಟ್ಟಾಗಿ ಸದಸ್ಯೆಯರು ಕೂಡಿ ಹೋಗಿ ಬರುವ ಪರಿಪಾಠ ಇದೆ. ತಮ್ಮ ಜಂಝಡಗಳನ್ನು ಮರೆತು ಒಂದು ದಿನ ಸಂತೋಷವಾಗಿ ಆಟಪಾಟಗಳಲ್ಲಿ ತೊಡಗಿ, ಮನರಂಜನೆಯ ಮಾತುಕತೆಯಾಡಿ, ಜೊತೆಗೂಡಿ ಭೋಜನ ಮಾಡಿ ಕಾಲಕಳೆಯುವುದು ಇದರ ಉದ್ದೇಶವಾಗಿದೆ. ಈ ಒಕ್ಕೂಟದಲ್ಲಿ, ನಾನೂ ಒಬ್ಬ ಸಕ್ರಿಯ ಸದಸ್ಯೆ ಎನ್ನಲು ಹೆಮ್ಮೆಯಾಗುತ್ತಿದೆ.
ಈ ಒಕ್ಕೂಟದ ಸದಸ್ಯತ್ವ ಶುಲ್ಕ ವರ್ಷವೊಂದಕ್ಕೆ ಒಂದು ಸಾವಿರ ರೂಪಾಯಿಗಳು. ಅದರಲ್ಲಿ ಕಾರ್ಯಕ್ರಮ ನಡೆಸುವ ಆವರಣದ ಸ್ವಚ್ಛತೆ ಮಾಡಿಕೊಡುವ, ಆಸನಗಳ ವ್ಯವಸ್ಥೆ ಮಾಡುವ, ಹಾಗೂ ರಾಜ್ಯೋತ್ಸವದಂಥ ವಿಶೇಷ ದಿನಗಳಲ್ಲಿನೀಡುವ ಸಹಕಾರಕ್ಕೆ ಇಲ್ಲಿನ ಹಾಬೀಪ್ಲೇಸಿನ ಸಿಬ್ಬಂದಿ ಮತ್ತು ಪೋಷಕರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಇಂಥದ್ದೊಂದು ಕ್ರಿಯಾಶೀಲವಾದ ಒಕ್ಕೂಟ ಸ್ಥಾಪನೆ ಮಾಡಿದ ಹಿರಿಯರು ಮತ್ತು ಇದಕ್ಕೆ ಪೋಷಕರಾಗಿ ನಿಂತಿರುವ ಶ್ರೀಮತಿ ಸವಿತಾ ರಂಗಾರವರಿಗೆ ಧನ್ಯವಾದಗಳು ಸಲ್ಲುತ್ತವೆ. ಯಾವುದೇ ಪ್ರಚಾರವನ್ನೂ ಬಯಸದೆ ಮುನ್ನಡೆದಿರುವ ಈ ಒಕ್ಕೂಟದ ಉದ್ದೇಶಗಳು ಇತರರಿಗೆ ಸ್ಫೂರ್ತಿದಾಯಕವಾಗುವಂತೆ ನಡೆಸುತ್ತಿರುವ ಎಲ್ಲರಿಗೂ ಧನ್ಯವಾದಗಳು. ಇದು ಹೀಗೆ ನಿರಂತರವಾಗಿ ಮುನ್ನಡೆಯಲೆಂದು ಶುಭ ಹಾರೈಸುತ್ತೇನೆ.
-ಬಿ.ಆರ್.ನಾಗರತ್ನ, ಮೈಸೂರು.

