(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಊರಿಗೆ ಹೊರಡುವ ಮೊದಲು ವರು ಚಿಕ್ಕಮ್ಮನಿಗೆ ಹೇಳಿದಳು. “ಚಿಕ್ಕಮ್ಮ ನಿಮ್ಮದು ಅಳತೆ ಬ್ಲೌಸ್ ಕೊಡಿ. ಸಂಧ್ಯಾ ಆಂಟಿ, ಸತ್ಯಮ್ಮ ಇಬ್ಬರೂ ನಿಮಗೆ ಸೀರೆ ತಂದಿದ್ದಾರೆ. ನಾನು ಬ್ಲೌಸ್‌ಗಳನ್ನು ಹೊಲಿಸಿ ರೆಡಿಮಾಡ್ತೀನಿ.”
“ಹೌದೇನೇ?” ಶೋಭಾ ಖುಷಿಯಿಂದ ಕೇಳಿದರು.
“ನೀನೂ ಇವತ್ತೇ ಹೋಗ್ತಿದ್ದೀಯೇನೆ?” ದೇವಕಿ ಕೇಳಿದಳು.
“ಹೌದು ಅತ್ತೆ. ನಾಳೆ ಕಾಲೇಜ್ ಇದೆಯಲ್ಲಾ………”
“ನಾಗರಾಜನ ಮದುವೆಗೆ ಬರ‍್ತೀಯೋ ಇಲ್ವೋ…?”
“ಮದುವೆ ಭಾನವಾರವಿರೋದ್ರಿಂದ ಖಂಡಿತಾ ಬರ‍್ತೀನಿ.”
“ಏನೋಮ್ಮ ನಿನ್ನನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ” ಜಾನಕಿ ವ್ಯಂಗ್ಯವಾಗಿ ನುಡಿದಳು.
ವರು ಸುಮ್ಮನೆ ನಕ್ಕಳು.
ಅವರು ಅಂದು ಮೈಸೂರು ತಲುಪಿದಾಗ ಏಳು ಗಂಟೆಯಾಗಿತ್ತು.
“ಆಂಟಿ ಶುಕ್ರವಾರ ನನ್ನ ಪ್ರೆಸೆಂಟೇಷನ್ ಇದೆ. ಪ್ರಿಪೇರ್ ಆಗಬೇಕು. ಇನ್ನು ಎರಡು ದಿನ ಎಲ್ಲಿಗೂ ಬರಲ್ಲ.”
“ಹಾಗೇ ಮಾಡು” ಎಂದರು ಚಂದ್ರಾ ಆಂಟಿ.
ವಾರುಣಿಯ ಪ್ರೆಸೆಂಟೇಷನ್ ಎಲ್ಲರಿಗೂ ಇಷ್ಟವಾಯಿತು. ರಾಗಿಣಿ-ಬಾಲಾಜಿ ಕೊಟ್ಟ ಪಾರ್ಟಿ ಅಟೆಂಡ್ ಮಾಡಿದ ಮೇಲೆ ಡಿಪಾರ್ಟ್ಮೆಂಟ್‌ನಲ್ಲಿದ್ದ ರಾಮವರ್ಮನ ಸ್ನೇಹಿತರು ವಾರುಣಿಯ ಬಗ್ಗೆ ಹೆಚ್ಚು ಆಸಕ್ತಿ ತೆಗೆದುಕೊಂಡಿದ್ದರು. ಇತ್ತೀಚೆಗೆ ರಾಮಗೋಪಾಲ್ ಅವಳ ಜೊತೆಯೇ ಊಟ ಮಾಡುತ್ತಿದ್ದ.
“ಮದುವೆಗೆ ನೀವು ಬರಲ್ಲಾಂತ ಆಂಟಿ ಹೇಳಿದರು.”
“ಹೌದೂ ಆರ್‌ಜಿ ನಾನು ಈಗಾಗಲೇ ತುಂಬಾ ವ್ಯರ್ಥವಾಗಿ ಕಾಲ ಕಳೆದಿದ್ದೇನೆ. ಎಂ.ಎ.ಯಲ್ಲಿ ಒಳ್ಳೆಯ ಮಾರ್ಕ್ಸ್ ಗಳಿಸಿದರೆ ಕೆಲಸಕ್ಕೆ ಪ್ರಯತ್ನಿಸಬಹುದಲ್ವಾ?”
“ನೀವು ಕೆಲಸಕ್ಕೆ ಸೇರ‍್ತೀರಾ?”
“ಯಾಕಷ್ಟು ಆಶ್ಚರ್ಯ?”
“ರಾಗಿಣಿ ಮದುವೆಯ ನಂತರ ನೀವೇ ಮುಂದೆ ಒಳ್ಳೆಯ ನ್ಯೂಸ್ ಕೊಡುವವರೂಂತ ಭಾವಿಸಿದ್ದೆ.”
“ಸದ್ಯಕ್ಕೆ ಮದುವೆಯೋಚನೆ ಇಲ್ಲ. ಎಲ್ಲರೂ ನೀವು ಮದುವೆ ಸುದ್ದಿ ಕೊಡ್ತಿರಾಂತ ನಿರೀಕ್ಷಿಸ್ತಿದ್ದಾರೆ.”
“ಯಾಕೆ?”
“ಕಾರಣ ಕೇಳಿ ನಗಬಾರದು.”
“ಖಂಡಿತಾ ಇಲ್ಲ ಹೇಳಿ…”
“ಮಾನಸ ನನ್ನ ಕ್ಲೋಸ್ ಫ್ರೆಂಡ್. ಅವಳಿಗೆ ಮದುವೆ. ಅವಳ ಜಾಗ ರಾಗಿಣಿ ತುಂಬಿದಳು. ಅವಳಿಗೂ ಮದುವೆ ಸೆಟ್ಲ್ ಆಯ್ತು. ಈಗ ನೀವು ನನ್ನ ಜೊತೆ ಕ್ಲೋಸ್ ಆಗಿರುವುದು…… ಅದಕ್ಕೆ………”
“ನಿಮ್ಮ ಲಾಜಿಕ್ ತಮಾಷೆಯಾಗಿದೆ. ಆದರೆ ಹಾಗಾಗಲು ಸಾಧ್ಯವಿಲ್ಲ……”
“ಯಾಕೆ?”
“ನಾವು ಬ್ರಾಹ್ಮಣರಾದರೂ ನಮ್ಮ ತಂದೆ ಒಬ್ಬರೇ ಗೌರ‍್ನಮೆಂಟ್ ಕೆಲಸದಲ್ಲಿರೋದು. ಅವರು ಬೆಂಗಳೂರಿನ ಟ್ರೆಷರಿಯಲ್ಲಿ ಗುಮಾಸ್ತರು. ಅವರು ಅವರ ಸ್ನೇಹಿತರು ಮನೆ ಮಾಡಿಕೊಂಡಿದ್ದಾರೆ. ನಮ್ಮ ಇಬ್ಬರು ದೊಡ್ಡಪ್ಪಂದಿರು ಕೃಷಿಕರು, ಡೈರಿ ಇಟ್ಟಿರುವವರು.”
“ನಿಮ್ಮ ಊರು ಯಾವುದು?”
“ಹಾಸನ ಜಿಲ್ಲೆಯ ಅರಕಲಗೂಡಿನ ಹತ್ತಿರ ಒಂದು ಹಳ್ಳಿ. ತಾವರೆಕಟ್ಟೆ. ಈಗ ತಾರೆಕಟ್ಟೆ ಆಗಿದೆ. ಅಲ್ಲಿ ನಮ್ಮ ತಂದೆಯ ಇಬ್ಬರು ಅಣ್ಣಂದಿರಿದ್ದಾರೆ. ದೊಡ್ಡಣ್ಣ ವ್ಯವಸಾಯ ಮಾಡ್ತಿದಾರೆ. ಬೇಕಾದಷ್ಟು ಭೂಮಿ ಇದೆ. ಅವರ ಮಗ ಕೂಡ ವ್ಯವಸಾಯ ಮಾಡ್ತಿದ್ದಾನೆ. ಅವನಿಗೆ 2 ವರ್ಷದ ಹಿಂದೆ ಮದುವೆಯಾಯ್ತು. ಮಗಳು ಪಿ.ಯು.ಸಿ ಓದುವಾಗಲೇ ಮದುವೆ ಮಾಡಿದರು.”
“ಓಹೋ ನೀವೆಲ್ಲಾ ಅನ್ನದಾತರು.”
“ಎರಡನೆ ದೊಡ್ಡಪ್ಪ ಹಸು, ಎಮ್ಮೆ ಸಾಕಿದ್ದಾರೆ. ತೋಟದ ಮನೆಯಲ್ಲಿ ಅವರು ಅವರ ಹೆಂಡತಿ ಮಕ್ಕಳಿದ್ದಾರೆ. ದೊಡ್ಡ ಮಗನಿಗೆ 26 ವರ್ಷ ಇರಬಹುದು. ಗ್ರಾಜುಯೇಟ್ ಡೈರಿ ಇಟ್ಟಿದ್ದಾನೆ. ಎರಡನೆಯವನಿಗೆ 20 ವರ್ಷ ಪಿ.ಯು.ಸಿ ಆಗತ್ತಲೂ ಅಂಗಡಿ ಇಟ್ಕೊಂಡಿದ್ದಾನೆ. ಡೈರಿ ಇಟ್ಟಿರುವವನ ಮದುವೆ ಆಗುವವರೆಗೂ ನಾನು ಮದುವೆಯಾಗುವ ಹಾಗಿಲ್ಲ.”
“ನಿಮ್ಮ ಓದು ಮುಗಿಯುವ ಹೊತ್ತಿಗೆ ಅವರ ಮದುವೆ ಆಗಿರುತ್ತದೆ ಬಿಡಿ.”
“ನಾನು ಆಶಿಸುವಂತಹ ಹುಡುಗಿ ನನಗೆ ಸಿಗಬೇಕಲ್ಲಾ?”
“ಎಂತಹ ಹುಡುಗಿ ಬೇಕು ನಿಮಗೆ?”
“ನನಗೆ ತುಂಬಾ ಕನಸುಗಳಿವೆ. ಇಂದಿನ ಸಮಾಜದ ಸ್ವಾಸ್ಥ್ಯ ಹಾಳಾಗುವುದಕ್ಕೆ ನಮ್ಮ ಶಿಕ್ಷಣವೂ ಕಾರಣ ಅನ್ನಿಸ್ತಿದೆ. ಆದ್ದರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಒಳ್ಳೆಯ ಸಂಸ್ಕೃತಿ ಕಲಿಸಬೇಕು. ನಮ್ಮ ದೇಶದ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸಬೇಕು ಎನ್ನುವ ಆಸೆ ಇದೆ.”
“ವೆರಿಗುಡ್.”
“ನನಗೆ ಒಂದು ಶಾಲೆ ಆರಂಭಿಸುವ ಯೋಚನೆ ಇದೆ. ಮಕ್ಕಳೊಡನೆ ಮಗುವಾಗಿ ಬೆರೆಯುವಂತಹ ಶಿಕ್ಷಕಿ ಸಾಕು. ಆಕೆ ಡಿಗ್ರಿ ಡಬಲ್ ಡಿಗ್ರಿ ಮಾಡಿರುವ ಅವಶ್ಯಕತೆಯಿಲ್ಲ. ಪ್ರೈಮರಿ ಶಾಲೆಯ ಶಿಕ್ಷಕಿಗೆ ಬೇಕಾದ ವಿದ್ಯಾರ್ಹತೆ ಇದ್ದರೆ ಸಾಕು. ನನ್ನ ಆದರ್ಶಗಳನ್ನು ಬೆಂಬಲಿಸಬೇಕು.”
“ನ್ಯೂಟನ್ ಬಗ್ಗೆ ಕೇಳಿದ್ದೀರಾ?”
“ಗುರುತ್ವಾಕರ್ಷಣೆಯ ನ್ಯೂಟನ್ ತಾನೆ?”
“ಹೌದು ಅದೇ ನ್ಯೂಟನ್. ಅವನ ಹತ್ತಿರ 2-3 ಬೆಕ್ಕುಗಳಿದ್ದವಂತೆ. ತಾಯಿಬೆಕ್ಕು, ಮರಿಬೆಕ್ಕುಗಳು. ನ್ಯೂಟನ್ ತನ್ನ ಕೋಣೆಯ ಬಾಗಿಲು ಹಾಕಿಕೊಂಡು ಕೆಲಸ ಮಾಡುವಾಗ ಅವು ಬಾಗಿಲ ಬಳಿ ಬಂದು ಗಲಾಟೆ ಮಾಡ್ತಿದ್ದವಂತೆ. ಅದಕ್ಕೆ ನ್ಯೂಟನ್ ಒಬ್ಬ ಬಡಗಿಯನ್ನು ಕರೆಸಿ ಬಾಗಿಲಿಗೆ ಒಂದು ದೊಡ್ಡ ರಂಧ್ರ ಒಂದು ಚಿಕ್ಕ ರಂಧ್ರ ಮಾಡೂಂತ ಹೇಳಿದ್ನಂತೆ.”
“ಎರಡು ರಂಧ್ರ ಯಾಕೆ?”
“ದೊಡ್ಡಬೆಕ್ಕು ದೊಡ್ಡದರಲ್ಲಿ ಬರಲಿ, ಚಿಕ್ಕ ಬೆಕ್ಕು ಚಿಕ್ಕದರಲ್ಲಿ ಬರಲೀಂತ………”
“ಚಿಕ್ಕ ಮರಿಗಳು ದೊಡ್ಡದರಲ್ಲೇ ಬರಬಹುದಲ್ಲಾ……..”
“ಹೌದಾ?”
“ತಮಾಷೆ ಮಾಡ್ತಿದ್ದೀರಾ?”
“ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ನಿಮ್ಮ ಆದರ್ಶ ಶಿಕ್ಷಕಿ ಕಮ್ ಸತಿಯ ಬಗ್ಗೆ ಹೇಳಿದಾಗ ಈ ಕಥೆ ಹೇಳಬೇಕು ಅನ್ನಿಸ್ತು.”
“ಯಾಕೆ ಅನ್ನಿಸಿತು?”
“ನೀವೇ ಯೋಚಿಸಿ.”
“ನಂಗೆ ಗೊತ್ತಾಗ್ತಿಲ್ಲ ಪ್ಲೀಸ್ ಹೇಳಿ.”
“ನಾಳೆಯವರೆಗೂ ಟೈಂ ಕೊಡ್ತೀನಿ ಯೋಚಿಸಿಹೇಳಿ.”
ಅವಳು ಮನೆಗೆ ಬಂದು ಚಂದ್ರಾವತಿ ಬಳಿ ರಾಮ್‌ಗೋಪಾಲ್ ವಿಚಾರ ಹೇಳಿ ನಕ್ಕಳು.
“ನೀನು ಯಾಕೆ ಈ ಕಥೆ ಹೇಳಿದೆ?”
“ನೀವೂ ಯೋಚಿಸಿ ತಿಳಿಯತ್ತೆ.”
“ನಾಳೆ ಬರುವಾಗ ಆರ್.ಜಿ.ನ್ನ ಕರ‍್ಕೊಂಡು ಬಾ.”
“ಆಯ್ತು” ಎಂದಳು ವರು.
ಮರುದಿನ ಭೇಟಿಯಾದ ರಾಮ್‌ಗೋಪಾಲ್ ಮುಖ ಪೆಚ್ಚಾಗಿತ್ತು. ಮಧ್ಯಾಹ್ನ ಅವಳ ಜೊತೆ ಊಟಕ್ಕೂ ಬರಲಿಲ್ಲ. ಅವಳೇ ಅವನಿಗೆ ಮೆಸೇಜ್ ಮಾಡಿದಳು. “ನೀವು ಸಾಯಂಕಾಲ ಚಂದ್ರಾ ಆಂಟೀನ್ನ ಭೇಟಿ ಮಾಡಬೇಕಂತೆ. ಅವರು ನಿಮ್ಮ ಪ್ರಶ್ನೆಗೆ ಉತ್ತರ ಹೇಳ್ತಾರಂತೆ.”
ಅವಳು ಅವನಿಗೆ ಕಾಯದೆ ಮನೆ ತಲುಪಿದಳು. ಚಂದ್ರಾವತಿ ಪಕೋಡ ಹಿಟ್ಟು ಕಲಿಸಿಟ್ಟು, ಸಜ್ಜಿಗೆ ಮಾಡಿದ್ದರು. ರಾಮ್‌ಗೋಪಾಲ್ ಬಂದ ತಕ್ಷಣ ಕೇಳಿದ “ಇವರು ಯಾಕೆ ಆ ಕಥೆ ನನ್ನ ಹತ್ರ ಹೇಳಿದರು?”
“ಮೊದಲು ತಿಂಡಿ ತಿನ್ನಿ” ಬಿಸಿಬಿಸಿ ಪಕೋಡ, ಸಜ್ಜಿಗೆ ತಂದಳು ವರು. ಮಲ್ಲಿ ಕಾಫಿ ಬೆರೆಸಲು ಒಳಗೆ ಹೋದಳು.
“ನಿಧಾನವಾಗಿ ತಿನ್ನಿ. ಆಂಟಿಗೂ ಉತ್ತರ ಗೊತ್ತಿಲ್ಲ. ನಾನೇ ಉತ್ತರ ಹೇಳಬೇಕು.”
ತಿಂಡಿ ತಿಂದು ಕಾಫಿ ಕುಡಿದ ನಂತರ ವರು ಕೇಳಿದಳು. “ಶಿಕ್ಷಕರು ಅಂದರೆ ಅವರಿಗೆ ಮೊದಲ ಗುಣ ತಾಳ್ಮೆ ಇರಬೇಕು, ಶ್ರದ್ಧೆ ಇರಬೇಕು, ಕಲಿಸಲು ಆಸಕ್ತಿ ಇರಬೇಕು. ಮಕ್ಕಳನ್ನು ಅರ್ಥ ಮಾಡಿಕೊಳ್ಳುವ ಮಾತೃಹೃದಯವಿರಬೇಕು. ಅವರು ಪ್ರೈಮರಿ ಶಾಲೆಯಲ್ಲಿ ಕಲಿಸಲಿ, ಕಾಲೇಜ್‌ನಲ್ಲಿ ಕಲಿಸಲಿ ಇಷ್ಟು ಗುಣಗಳು ಅತ್ಯಗತ್ಯ.”
“ವೆರಿಗುಡ್ ವರು” ಎಂದರು ಚಂದ್ರಾವತಿ.
“ನಮ್ಮ ತಂದೆ ಹೈಸ್ಕೂಲಿನಲ್ಲಿ ಗಣಿತ ಕಲಿಸ್ತಿದ್ರು. ನಾವು ಪ್ರೈಮರಿಯಲ್ಲಿದ್ದಾಗ ಅವರೇ ಕನ್ನಡ, ವಿಜ್ಞಾನ, ಸಮಾಜ ಪಾಠ ಹೇಳಿಕೊಡುತ್ತಿದ್ದರು. ಯಾಕೆ ಗೊತ್ತಾ? ಕಲಿಸಬೇಕೆಂಬ ಆಸಕ್ತಿ ಇತ್ತು.”
“ಓ.ಕೆ.”
“ನಿಮ್ಮ ಶಾಲೆಗೆ ಡಿಗ್ರಿ ಪಡೆದವರು ಬಂದರೆ ಖಂಡಿತಾ ಬಾಧಕವಲ್ಲ. ಅವರಲ್ಲಿ ಶ್ರದ್ಧೆ, ಉತ್ಸಾಹ, ಆಸಕ್ತಿ, ಮಾತೃಹೃದಯ ಇದ್ದರೆ ಸಾಕು.”
“ನೀವು ಕಥೆ ಯಾಕೆ ಹೇಳಿದ್ರಿ ಅರ್ಥವಾಯ್ತು” ಎಂದ ಜಿ.ಕೆ. ನಗುತ್ತಾ ನಂತರ ಅವರ ತಂದೆಯ ಬಗ್ಗೆ ವಿಚಾರಿಸಿದ.
ಈ ಮಧ್ಯೆ ನಾಗರಾಜನ ಮದುವೆದಿನ ಫಿಕ್ಸ್ ಆಯಿತು. ರಾಗಿಣಿಯ ಮದುವೆಯಾದ 12 ದಿನಕ್ಕೆ ಅವನ ಮದುವೆ. ಆ ಶನಿವಾರ ಅವಳು ಕಾಲೇಜಿನಿಂದ ಬಂದಾಗ ಅವನ ಕಾಲ್ ಬಂತು.
“ಹೇಳು ನಾಗರಾಜ.”
“ನಾಳೆ 10 ಗಂಟೆಗೆ ಸರಸ್ವತಿ ಥಿಯೇಟರ್ ಇತ್ತಲ್ಲಾ ಆ ಜಾಗಕ್ಕೆ ರ‍್ತೀಯಾ?”
“ಯಾಕೆ?”
“ನೀನು ಬಾ ಹೇಳ್ತೀನಿ. ನಿಮ್ಮ ಆಂಟಿಗೆ ಬರೋದು ಲೇಟಾಗತ್ತೆ ಅಂತ ಹೇಳು…..”
“ಓ.ಕೆ.”
“ನಿಮ್ಮ ಆಂಟಿಗೆ ಅತ್ತೆ ಮನೆಗೆ ಹೋಗ್ತಿದ್ದೀನೀಂತ ಹೇಳು. ಆದರೆ ನಮ್ಮಮ್ಮನಿಗೆ, ಸುಮಿಗೆ ಏನೂ ಹೇಳಬೇಡ.”
“ಆಗಲಿ.”
“ಗಾಡಿ ತರಬೇಡ ಆಟೋಲಿ ಬಾ.”
ಅವಳು ಒಪ್ಪಿದಳು. ಚಂದ್ರಾ ಆಂಟಿಗೆ ಅತ್ತೆ ಮನೆಗೆ ಹೋಗುತ್ತಿರುವುದಾಗಿ ಹೇಳಿದಳು.
“ಮದುವೆ ಹತ್ತಿರ ಬಂತಲ್ವಾ? ಸೀರೆ ಗೀರೆ ಆರಿಸುವುದಕ್ಕೆ ಕರೆದಿರಬಹುದು. ಹೋಗಿ ಬಾ.”
“ಆಗಲಿ ಆಂಟಿ” ಎಂದಳು.
ಮರುದಿನ ತಿಂಡಿ ತಿಂದುಕೊಂಡು ಅವಳು ಆಟೋ ಹತ್ತಿದಳು. ನಾಗರಾಜ ಅವಳಿಗೆ ಕಾಯುತ್ತಿದ್ದ.
“ಬಾ ಜ್ಯೂಸ್ ಕುಡಿಯುತ್ತಾ ಮಾತಾಡೋಣ.”
“ಜ್ಯೂಸ್‌ಬೇಡ. ಐಸ್‌ಕ್ರೀಂ ಹೇಳು.”
ನಾಗರಾಜ ಐಸ್‌ಕ್ರೀಂಗೆ ಆರ್ಡರ್ ಮಾಡಿದ.
“ಏನು ವಿಷಯ?”
“ರೇಖಾ ಮನೆಯವರು ನಮ್ಮ ಕಡೆಯವರಿಗೆ ಸೀರೆ, ಪಂಚೆ ತೆಗೆಯಬೇಕಂತೆ. ಸರಸ್ವತಿಪುರಂನಲ್ಲಿ ಅವರ ಪರಿಚಯದವರು ಮನೆಯಲ್ಲೇ ಅಂಗಡಿ ಇಟ್ಟಿದ್ದಾರಂತೆ. ಅಲ್ಲಿಗೆ ನಾವು ಹೋಗಬೇಕು.”
“ಯಾರಿಗೂ ಏನೂ ತೆಗೆಯಲ್ಲ ಅಂತ ಅತ್ತೆ ಹೇಳಿದ್ರು.”
“ರೇಖಾ ತಂದೆ ತುಂಬಾ ಶ್ರೀಮಂತರು ಅನ್ನಿಸತ್ತೆ. ಮಕ್ಕಳ ಮೇಲೆ ಹುಚ್ಚು ವ್ಯಾಮೋಹ. “ಇರೋ ಒಬ್ಬ ಮಗಳಿಗೆ ಇಷ್ಟೂ ಖರ್ಚು ಮಾಡದಿದ್ದರೆ ಹೇಗೆ? ಒಂದು ದಿನದ ಮದುವೆಗೆ ಒಪ್ಪಿದ್ದೇನೆ. ನಾನು ಮಗಳಿಗೆ ಕೊಡುವ ವಿಚಾರಕ್ಕೆ ಅಡ್ಡಿ ಬರಬೇಡಿ” ಅಂದ್ರು. ನಾವೂ ಅವರ ಕಡೆಯವರಿಗೆ ಕೊಡಬೇಕಲ್ವಾ?”
“ಅತ್ತೆ ಏನಂದ್ರು?”
“ಅವರು ಏನಾದರೂ ಕೊಡಲಿ. ನಾವು ಕೊಡೋದು ಬೇಡ” ಅಂದ್ರು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44173
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು

