(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಪುರಿ ಬುದಯ’ ಎಂಬ ಸಾಂಸ್ಕೃತಿಕ ಹಳ್ಳಿ
07/09/2025 ರ ಮುಂಜಾನೆ ದೂರದಿಂದ ತೇಲಿ ಬಂದ ಸುಶ್ರಾವ್ಯವಾದ ಸಂಗೀತ ನಮ್ಮನ್ನು ಎಚ್ಚರಿಸಿತು. ಫ್ರೆಶ್ ಅಪ್ ಆಗಿ, ಕಾಫಿ ಕುಡಿದು ನಾವು ಕೆಲವರು ವಾಯುವಿಹಾರಕ್ಕೆ ಅಣಿಯಾದೆವು. ಹೋಟೆಲ್ ಅಮರ್ಥದ ಎದುರುಗಡೆ ಇದ್ದ ಕಟ್ಟೆಯಂತಹ ಗುಡಿಯಲ್ಲಿ ಅದಾಗಲೇ ಪೂಜೆ ನೆರವೇರಿಸಿದ ಕುರುಹಾಗಿ ಅಗರಬತ್ತಿ, ಹೂಗಳು ಇದ್ದ ದೊನ್ನೆ ಕಾಣಿಸಿತು. ಬೀದಿಯಲ್ಲಿದ ಮನೆಮನೆಯಲ್ಲಿಯೂ ಪೂಜೆ ಆಗಿತ್ತು ಅಥವಾ ಸಿದ್ಧತೆ ನಡೆಯುತ್ತಿತ್ತು. ಒಂದು ಚೆಂದದ ಹೆಂಚಿನ ಮನೆಯ ಒಡತಿ, ತನ್ನ ಮನೆಯ ಆವರಣದಲ್ಲಿದ್ದ ಗುಡಿಗಳಿಗೆ ಪೂಜೆ ಸಲ್ಲಿಸಿ, ಪಕ್ಕದಲ್ಲಿದ್ದ ಸ್ಮಶಾನದ ಕಡೆಗೆ ಹೊರಟರು. ಆಕೆ ಯಾವುದೋ ಸಮಾಧಿಗೂ ಹೂವಿರಿಸಿ ಬಂದರು. ಇನ್ನೊಂದು ಮನೆಯಾತ, ತನ್ನ ಮನೆ ಮುಂದೆ ಕುಳಿತುಕೊಂಡು ಕೇಳಿ ಬರುತ್ತಿದ್ದ ಹಾಡಿಗೆ ತಲೆದೂಗುತ್ತಾ ತಾನೂ ಗುನುಗುತ್ತಿದ್ದರು. ಆ ಗಲ್ಲಿಯಲ್ಲಿದ್ದ ಮಂದಿರಕ್ಕೆ ಯುವತಿಯರು ‘ಮೊರ ಬಾಗಿನ’ದ ತರ ಮುಚ್ಚಿದ ಬುಟ್ಟಿಯನ್ನು ತಂದರು. ಮನೆಯೊಂದರ ಮುಖ್ಯದ್ವಾರದ ಎರಡೂ ಬದಿ ಎರಡು ಗಣೇಶನ ಮೂರ್ತಿಗಳನ್ನು ದ್ವಾರಪಾಲಕರಂತೆ ನಿಲ್ಲಿಸಿದ್ದರು. ನಮ್ಮನ್ನು ಕಂಡಾ ಒಬ್ಬಿಬ್ಬರು ನಸುನಕ್ಕರು ಹಾಗೂ ಮಾತನಾಡಿಸಿದರು. ಹೀಗೆ ಬಾಲಿಯಲ್ಲಿ ನೆರವೇರುವ ಮನೆ ಮನೆ ಪೂಜೆಯನ್ನು ನೋಡುತ್ತಾ, ಸುಶ್ರಾವ್ಯವಾದ ಆದರೆ ಅರ್ಥವಾಗದ ಸಂಗೀತವನ್ನು ಕೇಳುತ್ತಾ ಸುಮಾರು ಅರ್ಧ ಗಂಟೆ ಸುತ್ತಾಡಿ ಬಂದೆವು.
ರುಚಿಯಾದ ಶ್ಯಾವಿಗೆ ಉಪ್ಪಿಟ್ಟಿನ ಉಪಾಹಾರ ಸೇವಿಸುವಷ್ಟರಲ್ಲಿ ಮಾರ್ಗದರ್ಶಿ ಮುದ್ದಣನ ಆಗಮನವಾಯಿತು. ಅಂದು ನಮ್ಮನ್ನು ಅಲ್ಲೇ ಹತ್ತಿರದ ‘ಪುರಿ ಬುದಯ’ ಎಂಬ ಸಾಂಸ್ಕೃತಿಕ ಹಳ್ಳಿ ಮನೆಗೆ ಕರೆದೊಯ್ಯುತ್ತೇನೆ ಎಂದರು. ಬಾಲಿಯಲ್ಲಿ ಪಿತೃಪ್ರಧಾನವಾದ ಸಾಮಾಜಿಕ ಕಟ್ಟುಪಾಡುಗಳಿವೆ. ಮನೆಯ ಆಸ್ತಿ ಗಂಡು ಮಕ್ಕಳಿಗೆ ಸೇರುತ್ತದೆ. ಹೆಚ್ಚಾಗಿ ಮನೆಯ ಗಂಡು ಮಕ್ಕಳಿಗೆ ಮಗನಿಗೆ ಹಿರಿಯರಿಂದ ಬಂದ ಆಸ್ತಿಯ ಜೊತೆಗೆ ಕುಟುಂಬದ ದೇವರುಗಳ ಪೂಜೆ ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ನಿಭಾಯಿಸಬೇಕಾದ ಕರ್ತವ್ಯವಿರುತ್ತದೆ. ಕನಿಷ್ಟ ಒಬ್ಬ ಮಗ ಹಿರಿಯರ ಜೊತೆಗೆ ಇರಲೇ ಬೇಕೆಂಬ ನಿಯಮವಿದೆ. ಅದರಲ್ಲಿಯೂ, ಕೊನೆಯ ಮಗನಿಗೆ ಆದ್ಯತೆಯಂತೆ. ಹೆಣ್ಣು ಮಕ್ಕಳು ಮದುವೆಯ ನಂತರ ಗಂಡನ ಮನೆಗೆ ಹೋಗುವುದರಿಂದ ಅವರಿಗೆ ಆಸ್ತಿ ಮತ್ತು ಕರ್ತವ್ಯದಲ್ಲಿ ಪಾಲುದಾರಿಕೆ ಇರುವುದಿಲ್ಲ. ಗಂಡು ಮಕ್ಕಳು ಇಲ್ಲದಿದ್ದರೆ ಅಳಿಯನಿಗೆ ಆ ಹಕ್ಕು ಬರುತ್ತದೆ. ಆತ ತನ್ನ ಪತ್ನಿಯ ಕುಟುಂಬದ ವಾರಸುದಾರ ಎಂದು ಅಂಗೀಕೃತವಾದ ಮೇಲೆ ಆತನಿಗೆ ತನ್ನ ಮೂಲಮನೆಯಲ್ಲಿ ಹಕ್ಕು , ಬಾಧ್ಯತೆ ಇರುವುದಿಲ್ಲ.
ನಾವು ಭೇಟಿ ಕೊಟ್ಟ ‘ಪುರಿ ಬುದಯ’ದ ಮುಖ್ಯದ್ವಾರ ದೇವಾಲಯದ ಬಾಗಿಲಿನಂತೆ ಕಲಾತ್ಮಕವಾಗಿ ಇತ್ತು. ಬಾಲಿಯಲ್ಲಿ ಎಲ್ಲೆಲ್ಲೂ ದೇಗುಲಗಳ ಮುಖ್ಯದ್ವಾರಗಳಂತಹ ವಾಸ್ತುಶಿಲ್ಪವನ್ನು ನೋಡಿ, ನಮಗೆ ಮನೆ, ಮಂದಿರ, ಅಂಗಡಿ ಮುಂಗಟ್ಟುಗಳ, ಕಚೇರಿ, ಶಾಲೆಗಳ ಮುಖ್ಯದ್ವಾರಗಳ ವ್ಯತ್ಯಾಸ ತಿಳಿಯದಂತಾಗಿತ್ತು. ಸೊಗಸಾಗಿದ್ದ ಹೆಬ್ಬಾಗಿಲ ಮೂಲಕ ಮನೆಯೆಂಬ ಮಂದಿರ ಹೊಕ್ಕಂತಾಯಿತು. ವಿಶಾಲವಾದ, ಸ್ವಚ್ಚವಾದ ಆವರಣದಲ್ಲಿ ಹಲವಾರು ಚಿಕ್ಕ ದೊಡ್ಡ ಗುಡಿಗಳಿದ್ದುವು. ಅದೊಂದು ಕೂಡುಕುಟುಂಬವಾಗಿದ್ದ ದೊಡ್ಡ ಮನೆ. ಹೆಂಚು ಹೊದಿಸಿದ್ದ ವಿಶಾಲವಾದ ಜಗಲಿಯನ್ನು ಹೊಂದಿತ್ತು. ಇಲ್ಲಿ ಮನೆ ಎಂದರೆ, ಸುತ್ತಲೂ ಕಲಾತ್ಮಕವಾದ ಹಲವಾರು ಕಂಭಗಳುಳ್ಳ ಜಗಲಿ ಒಂದೆಡೆ, ಸ್ವಲ್ಪ ಅಂತರದಲ್ಲಿ ಕಟ್ಟಲಾದ 2-3 ಕೊಠಡಿಗಳು, ಕೇವಲ ಮಾಡು ಇರುವ ತೆರೆದ ಅಡುಗೆ ಮನೆ, ಒಂದೆಡೆ ಆಹಾರ ಧಾನ್ಯ ಸಂಗ್ರಹಿಸಿಡುವ ಅಟ್ಟ, ಸ್ವಲ್ಪ ದೂರದಲ್ಲಿ ಶೌಚಾಲಯ….ಹೀಗೆ ಆವರಣದಲ್ಲಿ ಮನೆಯ ಭಾಗಗಳು ಅಲ್ಲಲ್ಲಿ ಚದುರಿದಂತೆ ಇದ್ದುವು.
ಒಂದೇ ಕಟ್ಟಡದ ‘ಮನೆ’ಯಲ್ಲಿ ವರಾಂಡ, ಹಾಲ್, ಕೆಲವು ಕೋಣೆಗಳು, ಸ್ಟೋರ್ ರೂಮ್, ದೇವರ ಮನೆ , ಅಡುಗೆಮನೆ ಮತ್ತು ಸ್ನಾನಗೃಹ ಇವೆಲ್ಲವನ್ನೂ ಕಟ್ಟಿಕೊಂಡು ಸಮಗ್ರವಾದ ಮನೆಯಲ್ಲಿ ವಾಸಿಸುವ ನಮಗೆ ‘ಬಿಡಿ ಬಿಡಿಯಾಗಿದ್ದ ಮನೆ’ಗಳ ಆವರಣ ಸೋಜಿಗ ಎನಿಸಿತು. ಆವರಣದ ಆರಂಭದಲ್ಲಿಯೇ , ನಾಲ್ಕು ಕಂಭಗಳುಳ್ಳ , ಗೋಡೆ ಇಲ್ಲದ ತೆರೆದ ಅಡುಗೆಮನೆ ಇದೆ. ಯಾಕೆಂದರೆ, ಅಡುಗೆ ಮಾಡುವ ಗೃಹಿಣಿಗೆ ಯಾರು ಬಂದರೆಂದು ಮೊದಲು ಗೊತ್ತಾಗಬೇಕು ಎಂಬ ಉದ್ದೇಶವಂತೆ. ತೀರಾ ವಯಸ್ಸಾದವರು ಮತ್ತು ನವವಿವಾಹಿತರು ಬಿಟ್ಟರೆ ಮಿಕ್ಕ ಎಲ್ಲರೂ ವಿಶಾಲವಾದ ಜಗುಲಿಯಲ್ಲಿ ಮಲಗುತ್ತಿದ್ದರಂತೆ. ಆಗ ಅಪ್ಪಟ ಕೂಡುಕುಟುಂಬದ ಪದ್ಧತಿ ಚಾಲನೆಯಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ, ಕೆಲವು ಕುಟುಂಬಸ್ಥರು ತಮ್ಮ ವಾಸಕ್ಕಾಗಿ ಇಲ್ಲಿಯೇ ೫೦ ಮೀಟರ್ ಆಸುಪಾಸಿನಲ್ಲಿ ಪ್ರತ್ಯೇಕ ಮನೆ/ಕೋಣೆಗಳನ್ನು ಕಟ್ಟಿಕೊಂಡಿದ್ದಾರೆ, ಆದರೆ ಎಲ್ಲರೂ ಕುಟುಂಬ ದೇವರ ಪೂಜೆಗೆ ಮತ್ತು ವಿಶೇಷದಿನಗಳಲ್ಲಿ ಅಲ್ಲಿಗೆ ಬರುತ್ತಾರೆ ಎಂದರು. ಒಟ್ಟಿನಲ್ಲಿ ಸರಳವಾಗಿ, ಸಹಜವಾಗಿ, ಸಂತೋಷವಾಗಿ ಬದುಕುವ ಜನರಿರಿವರು ಅನಿಸಿತು.
ನಾವು ಹೋಗಿದ್ದ ದಿನ ‘ಸರಸ್ವತಿ ಪೂಜೆ’ಯ ವಿಶೇಷ ದಿನವಾಗಿದ್ದ ಕಾರಣ ಆವರಣಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಇದ್ದರು. ಕೆಲವರು ಗುಡಿಗಳಲ್ಲಿ ಪೂಜೆ ಮಾಡುತ್ತಿದ್ದರು. ಇನ್ನು ಕೆಲವರು ತೀರ್ಥ ಪ್ರೋಕ್ಷಣೆ ಮಾಡುತ್ತಿದ್ದರು. ಮತ್ತೂ ಕೆಲವರು ಅನ್ನ/ಮಾಂಸ/ತರಕಾರಿ ಸೇರಿಸಿ ತಯಾರಿಸಿದ ಪಲಾವ್ ನಂತೆ ಕಾಣುವ ಪ್ರಸಾದವನ್ನು ಸೇವಿಸುತ್ತಿದ್ದರು. ಇನ್ನು ಕೆಲವರು ‘ಮೊರದಲ್ಲಿ ‘ಅದೇನೋ ಪ್ರಸಾದ ತರುತ್ತಿದ್ದರು. ಅವರ ಕುಟುಂಬಕ್ಕೆ ಎಕರೆಗಟ್ಟಲೆ ಭತ್ತದ ಗದ್ದೆ ಇದೆ. ಪಕ್ಕದಲ್ಲಿ, ಅವರದ್ದೇ ಆದ ಮರದ ಕುಸುರಿ ಕಲಾವಸ್ತುಗಳನ್ನು ತಯಾರಿಸುವ ಸ್ಥಳವಿದೆ. ಅಲ್ಲಿ ಕುಶಲ ಕರ್ಮಿಗಳು ಸೊಗಸಾದ ಮರದ ಕಲಾಕೃತಿಗಳನ್ನು ತಯಾರಿಸುತ್ತಿದ್ದರು. ಅಲ್ಲಿಗೆ ಹೊಂದಿಕೊಂಡಂತಿದ್ದ ವಿಶಾಲವಾದ ಮಳಿಗೆಯಲ್ಲಿ ನೂರಾರು ಮರದ ಕಲಾತ್ಮಕ ಪೆಟ್ಟಿಗೆಳು, ಮೂರ್ತಿಗಳು, ಹಾರಗಳು ಇತ್ಯಾದಿ ಮಾರಾಟಕ್ಕೆ ಲಭ್ಯವಿದ್ದುವು. ಒಟ್ಟಿನಲ್ಲಿ, ಬಹಳ ಬಾಲಿಯ ಅನುಕೂಲಸ್ಥ ಕುಟುಂಬದ ಮನೆಗೆ ಭೇಟಿ ಕೊಟ್ಟ ಅನುಭವ ನಮ್ಮದಾಯಿತು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44175
ಹೇಮಮಾಲಾ.ಬಿ. ಮೈಸೂರು



