ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 12

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತನಗೆ ರಜೆ ಮುಗಿಯುವುದರೊಳಗೆ ರೀತಿ ರಿವಾಜಿನಂತೆ ಪೂಜೆ, ಆಚರಣೆಗಳನ್ನು ಪೂರೈಸಿಕೊಂಡಳು. ಮಗಳಿಗೆ ನಾಮಕರಣವೂ ಆಯಿತು. ‘ಮಾನಸಾ’ ಎಂಬ ಹೆಸರನ್ನು ಸಿದ್ಧಾರ್ಥ ಸೂಚಿಸಿದ್ದರಿಂದ ಅದನ್ನೇ ಎಲ್ಲರೂ ಒಪ್ಪಿಕೊಂಡರು. ಎಲ್ಲ ಮುಗಿದು ಒಂದು ಹಂತ ಮುಟ್ಟಿದಾಗ ಭಾರ್ಗವಿಯ ಅಣ್ಣ ಬಾಲಕೃಷ್ಣ “ನೋಡು ಭಾರ್ಗವಿ, ನೀನು ಎರಡೂ ಮಕ್ಕಳನ್ನು ಸುಧಾರಿಸಿಕೊಂಡು ಕೆಲಸಕ್ಕೆ ಹೋಗಿ ಬರುವುದು ಸುಲಭದ ಮಾತಲ್ಲ. ಚಿಕ್ಕ ಮಗುವನ್ನಿಲ್ಲಿ ಬಿಟ್ಟುಹೋಗು. ಹೇಗಿದ್ದರೂ ಮಗು ನಮ್ಮಮ್ಮನಿಗೆ ಹೊಂದಿಕೊಂಡಿದೆ. ಮಗಳ ನೆವದಿಂದಲಾದರೂ ಸಿದ್ಧಾರ್ಥ ಊರಿನಲ್ಲಿ ನಿಲ್ಲಬಹುದು. ಅವರ ಮನೆಯವರಿಗೂ ಸ್ವಲ್ಪವಾದರೂ ನೆಮ್ಮದಿ ದೊರಕುತ್ತದೆ. ಮಗನ ಮೇಲಿನ ಅಸಮಾಧಾನ ಕಡಿಮೆಯಾಗಬಹುದು.” ಎಂದನು. ಅಣ್ಣನ ಹೆಂಡತಿ ದೇವಿಕಾಳೂ ಅದಕ್ಕೆ ಧ್ವನಿಗೂಡಿಸಿದಳು. ಭಾರ್ಗವಿಗೆ ಒಳಗೊಳಗೇ ಸಂತಸವಾಯಿತು. ಅದನ್ನು ತೋರ್ಪಡಿಸಿಕೊಳ್ಳದೆ “ನಿಮಗೇಕೆ ವೃಥಾ ತೊಂದರೆ” ಎಂದಳು.

ಅವಳ ಮಾತಿಗೆ “ತೊಂದರೆ ಏನು ಬಂತು. ಸಿದ್ಧಾರ್ಥರವರ ಬಗ್ಗೆ ಬಾಲು ನನಗೆ ಹೇಳಿದ್ದಾರೆ. ಅಲ್ಲದೆ ಮದುವೆಯಾಗಿ ಬಂದಾಗಿನಿಂದ ನಾನೂ ನೋಡುತ್ತಿದ್ದೇನೆ. ತಾನು ಬೆಳೆಯಲು, ತನ್ನಿಚ್ಛೆ ಪೂರೈಸಿಕೊಳ್ಳಲು ತಮ್ಮ ಮಗನನ್ನು ಏಣಿ ಮಾಡಿಕೊಂಡಿದ್ದಾಳೆ ಸೊಸೆ. ಇವನಿಗೂ ಬುದ್ಧಿಯಿಲ್ಲ. ಎಂಬೆಲ್ಲ ಆಕ್ಷೇಪಣೆಗಳಿಗೆ ವಿರಾಮ ಹಾಕಲು ಇದೊಂದು ಪ್ರಯತ್ನವನ್ನು ಏಕೆ ಮಾಡಬಾರದು. ಅಲ್ಲದೆ ಅತ್ತೆಯವರಿಗೆ ಓಡಾಟದ ಕಷ್ಟ ತಪ್ಪುತ್ತದೆ” ಎಂದು ಹೇಳಿದಳು ಅತ್ತಿಗೆ ದೇವಿಕಾ.

ಅವರಿಬ್ಬರ ಮಾತುಗಳಲ್ಲಿದ್ದ ಸತ್ಯತೆಯು ಭಾರ್ಗವಿಗೆ ಅರ್ಥವಾದರೂ ತನ್ನ ಗಂಡನೆಂಬ ಪ್ರಾಣಿ ಬದಲಾಗುತ್ತಾನೆಯೇ? ಇತ್ತೀಚೆಗೆ ಪೇಟೆಯ ಆಕರ್ಷಣೆ ಹೆಚ್ಚೇ ಆಗುತ್ತಿದೆ. ನನ್ನನ್ನು ಬಲಿಪಶು ಮಾಡುತ್ತಿದ್ದಾರೆ. ಇರಲಿ, ಅಣ್ಣ ಅತ್ತಿಗೆ ಹೇಳಿದಂತೆ ಕೊನೆಯ ಅಸ್ತ್ರ ಪ್ರಯೋಗ ಮಾಡಿ ನೋಡೋಣ. ಸಫಲವಾದರೂ ಆಗಬಹುದು. ಸಿದ್ಧಾರ್ಥನನ್ನು ಒಂದು ಮಾತು ಕೇಳುತ್ತೇನೆಂದು ಮಾತು ಕೊಟ್ಟಳು.

ಸಿದ್ಧಾರ್ಥನು ಮಕ್ಕಳನ್ನು ಎಂದೂ ಉಪೇಕ್ಷೆ ಮಾಡಿರಲಿಲ್ಲವಾದ್ದರಿಂದ ಭಾರ್ಗವಿಯ ಬೇಡಿಕೆಗೆ ನಕಾರ ವ್ಯಕ್ತಪಡಿಸದೆ ಸಕಾರಾತ್ಮಕವಾಗಿ ಸ್ಪಂದಿಸಿದ. ಸರಿ ಭಾರ್ಗವಿ ಕಿರಿಯ ಮಗಳನ್ನು ಅಮ್ಮ ಮತ್ತು ಅತ್ತಿಗೆಯ ಸುಪರ್ದಿಗೆ ಒಪ್ಪಿಸಿ ಹಿರಿಯ ಮಗಳೊಂದಿಗೆ ಮೈಸೂರಿಗೆ ಪ್ರಾಯಾಣ ಬೆಳಸಿದಳು. ಭಾರ್ಗವಿಗೆ ಮನೆಯ ಮಾಲೀಕರೊಡೆನೆ ಅನ್ಯೋನ್ಯತೆ ಮತ್ತು ಹೊಂದಾಣಿಕೆ ಇತ್ತು. ಅದಕ್ಕೆ ಬಲವಾದ ಕಾರಣವೆಂದರೆ ಹೊಸ ಜವಾಬ್ದಾರಿ ವಹಿಸಿಕೊಂಡಮೇಲೆ ಹೊರಗಿನವರಿಗೆ ಮನೆಪಾಠ ನಿಲ್ಲಿಸಿದ್ದರೂ ಅವರ ಮೊಮ್ಮಕ್ಕಳಿಗೆ ಪಾಠ ಹೇಳುತ್ತಿದ್ದಳು. ಎಷ್ಟೇ ಕಷ್ಟವಾದರೂ ಸಮಯ ಹೊಂದಿಸಿಕೊಂಡು ಅವರಿಗೆ ಮಾತ್ರ ಪಾಠ ಹೇಳಿಕೊಡುತ್ತಿದ್ದಳು. ಇದರ ಪರಿಣಾಮವಾಗಿ ಮಕ್ಕಳು ಓದಿನಲ್ಲಿ ಮುಂದಾಗಿದ್ದರು. ಶಾಲೆಯ ಶಿಕ್ಷಕರಿಂದ ಅವರಿಗೆ ತಾರೀಫುಗಳು ದೊರೆಯುತ್ತಿದ್ದವು. ಇದರಿಂದಾಗಿ ಮನೆಯವರಿಗೆ ಭಾರ್ಗವಿಯ ಬಗ್ಗೆ ವಿಪರೀತ ಅಭಿಮಾನ, ಅಕ್ಕರೆ, ವಿಶ್ವಾಸ. ಅವಳು ಕೆಲಸಕ್ಕೆ ಹೋದ ಸಮಯದಲ್ಲಿ ಅವಳ ಹಿರಿಯ ಮಗಳ ಮೇಲ್ವಿಚಾರಣೆಯನ್ನು ತಾವೇ ಮಾಡುತ್ತಿದ್ದರು. ಅವರ ಮನೆಯ ಸದಸ್ಯರಲ್ಲಿ ಒಬ್ಬಳೆನ್ನುವಂತೆ ನೋಡಿಕೊಳ್ಳುತ್ತಿದ್ದರು. ಇದರಿಂದ ಭಾರ್ಗವಿಯು ನಿಶ್ಚಿಂತೆಯಿಂದ ತನ್ನ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಆಯಿತು.

ಇನ್ನು ಭಾರ್ಗವಿಯ ಜೊತೆ ಹುಟ್ಟಿದ್ದ ಇನ್ನಿಬ್ಬರು ಸೋದರಿಯರು ಭಾಗ್ಯ ಮತ್ತು ಭುವನಾರಿಗೆ ಓದುವುದರಲ್ಲಿ ಅಂತಹ ಆಸಕ್ತಿಯಿರಲಿಲ್ಲ. ಹಾಗೂ ಹೀಗೂ ಶಾಲೆಗೆ ಹೋಗುತ್ತಿದ್ದರು. ಪಕ್ಕದೂರಿನ ರೈತಾಪಿ ಕುಟುಂಬವೊಂದರ ಹಿರಿಯರು ತಾವಾಗಿಯೇ ಮುಂದಾಗಿ ತಮ್ಮ ಮಕ್ಕಳಿಬ್ಬರಿಗೆ ಈ ಸೋದರಿಯರನ್ನು ತಂದುಕೊಳ್ಳಲು ಇಷ್ಟಪಟ್ಟರು. ಬಾಲುವೂ ಅದಕ್ಕೆ ಒಪ್ಪಿಗೆ ಸೂಚಿಸಿದ. ಅಂತೂ ಪ್ರಯಾಸವಿಲ್ಲದೆ ಇಬ್ಬರ ಮದುವೆಯೂ ಆಗಿಹೋಯಿತು. ಅವರ ಗಂಡನ ಮನೆಯವರಿಗೆ ಭಾರ್ಗವಿಯ ದಿಟ್ಟತನ, ಸ್ವಾಭಿಮಾನ ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಹೆಣ್ಣುಮಕ್ಕಳಿಗ್ಯಾಕೆ ಇವೆಲ್ಲ ಅನ್ನುವ ಧೋರಣೆ. ಹೀಗಾಗಿ ಭಾರ್ಗವಿಯೊಡನೆ ಅವರ ಮನೆಯವರು ಹೆಚ್ಚು ಸಂಪರ್ಕವನ್ನು ಬೆಳೆಸಿಕೊಳ್ಳಲಿಲ್ಲ. ಹೀಗಾಗಿ ಭಾರ್ಗವಿಗೆ ಭಾಗ್ಯ ಮತ್ತು ಭುವನಾರೊಡನೆ ಒಡನಾಟ ಅಷ್ಟಕ್ಕಷ್ಟೇ ಇತ್ತು. ಬಂದು ಹೋಗುವುದಕ್ಕಿಂತ ಅಕ್ಕ ತಂಗಿಯರೊಡನೆ ಫೋನಿನಲ್ಲಿ ಮಾತುಕತೆ ಮಾತ್ರಕ್ಕೆ ಸೀಮಿತವಾಗಿತ್ತು. ಆದರೆ ಅಣ್ಣ ಬಾಲಕೃಷ್ಣನ ಸಹಕಾರ ಮಾತ್ರ ಮುಂದುವರೆದಿತ್ತು. ಈಗ ಅವನೂ ಸಂಸಾರಿಯಾಗಿದ್ದ. ಆದರೂ ಅತ್ತಿಗೆ ಸದ್ಯ ಭಾರ್ಗವಿಯನ್ನು ಅರ್ಥ ಮಾಡಿಕೊಂಡಿದ್ದಳು. ಮುಂದೆ ಹೇಗೋ? ನನ್ನಿಂದ ಅವರಿಗೆ ಯಾವುದೇ ತೊಂದರೆ ಬರದಿದ್ದರೆ ಸಾಕು. ಸಿದ್ಧಾರ್ಥನಿಗೆ ಊರು, ಮನೆ, ಜಮೀನಿನ ಕಡೆಗೆ ಆಸಕ್ತಿ ಬರುವಂತೆ ಮಾಡೆಂದು ಭಗವಂತನನ್ನು ಬೇಡಿಕೊಳ್ಳುತ್ತಲೇ ತನ್ನ ಕರ್ತವ್ಯಗಳತ್ತ ಗಮನ ಹರಿಸಿದ್ದಳು.

ದಿನಗಳುರುಳುತ್ತಿದ್ದವು, ಭಾರ್ಗವಿಯ ಸೋದರ ಬಾಲುವಿನ ಆಶಯದಂತೆ ಸಿದ್ಧಾರ್ಥನ ಓಡಾಟದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಂತಾಯಿತು. ಮಗಳ ಯೋಗಕ್ಷೇಮವನ್ನು ಅತ್ತೆಯವರ ಮೇಲೇ ಪೂರ್ತಿ ಬಿಡದೆ ತಾನೂ ಗಮನಿಸುತ್ತಿದ್ದ. ತನ್ನ ಮನೆಯಲ್ಲಿನ ಹಿರಿಯರಿಗೆ ಅಸಹನೆ ಇರುವ ಸಂಗತಿ ಸಿದ್ಧಾರ್ಥನಿಗೇನೂ ಹೊಸದಲ್ಲ. ಹೀಗಾಗಿ ಮಗಳನ್ನು ತಂದಿರಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಆಗಾಗ್ಗೆ ತನ್ನ ಜೊತೆಯಲ್ಲಿ ಕರೆದುಕೊಂಡು ಬರುತ್ತಿದ್ದ ಮತ್ತೆ ಅತ್ತೆಯವರ ಬಳಿ ಬಿಡುತ್ತಿದ್ದ. ಮಗುವನ್ನು ಎಷ್ಟುಬೇಕೋ ಅಷ್ಟೇ ಹಚ್ಚಿಕೊಳ್ಳಬೇಕೆಂದು ಪೂರ್ವಾಗ್ರಹ ಹೊಂದಿದ್ದರೂ ಮಗುವಿನ ಮುಗ್ಧ ಮುಖ, ಅದರ ಆಟಪಾಟಗಳನ್ನು ಕಂಡಾಗ ಮೈಮರೆತು ಅದರೊಡನೆ ಮಗ್ನರಾಗಿಬಿಡುತ್ತಿದ್ದರು ಸಿದ್ಧಾರ್ಥನ ತಾಯಿ. ಆತನ ತಂದೆ ಮತ್ತು ಸೋದರಿ ಮಾತ್ರ ಮೊದಲ ಮಗುವನ್ನು ಹಚ್ಚಿಕೊಂಡಷ್ಟು ಕಿರಿಯವಳನ್ನು ರಮಿಸುತ್ತಿರಲಿಲ್ಲ.

ಸಿದ್ಧಾರ್ಥನ ತಾಯಿಗೆ ಮಗು ಅಲ್ಲೇ ತಮ್ಮೊಡನೆ ಇದ್ದರೆ ಆತ ತಂದೆಯ ಜವಾಬ್ದಾರಿಗೆ ಹೆಗಲು ಕೊಡಬಹುದೆಂದು ಆಸೆ ಮನದಲ್ಲಿ ಮೂಡತೊಡಗಿತು. ಊಹುಂ ಅದು ಬರಿಯ ಮರೀಚಿಕೆಯೆಂಬಂತೆ ಅನುಭವವಾಗತೊಡಗಿತು. ಈ ಸಂದರ್ಭದಲ್ಲಿ ಯಾರೂ ಊಹಿಸದಂತಹ ಘಟನೆ ಸಿದ್ಧಾರ್ಥನ ಮನೆಯಲ್ಲಿ ನಡೆದುಹೋಯಿತು. ಆತನ ತಂದೆಗೆ ಬೀದಿಯ ದನವೊಂದು ಅಟ್ಟಿಸಿಕೊಂಡು ಬಂದು ತಿವಿದಿದ್ದೇ ಒಂದು ನೆಪವಾಗಿ ಅವರು ಹಾಸಿಗೆ ಹಿಡಿದರು. ಯಾವ ಮದ್ದಿಗೂ ವಾಸಿಕಾಣದೆ ದಿನಗಳೆದಂತೆ ಕೃಶರಾಗಿ ಕೈಲಾಸವಾಸಿಗಳಾಗಿಬಿಟ್ಟರು. ಅವರ ಕಾರ್ಯಗಳೆಲ್ಲ ಮುಗಿದ ಕೆಲವು ತಿಂಗಳಲ್ಲಿ ಸ್ವಂತ ಸಾಗುವಳಿ ಮಾಡುತ್ತಿದ್ದ ಜಮೀನುಗಳನ್ನು ಗೇಣಿಗೆ ಕೊಡುವ ನಿರ್ಧಾರ ಮಾಡಿದ ಮನೆಯ ಯಜಮಾನನಾಗಿದ್ದ ಸಿದ್ಧಾರ್ಥ. ಈ ಕ್ರಮ ಎರಡೂ ಮನೆಯವರನ್ನು ಬೆಚ್ಚಿಬೀಳಿಸಿತು. ಅದರಲ್ಲೂ ಸಿದ್ಧಾರ್ಥನ ತಾಯಿ ಇದು ಬೇಡವೆಂದು ಮಗನ ಕಾಲು ಹಿಡಿಯುವುದೊಂದು ಬಾಕಿ ಎನ್ನುವಂತೆ ಪರಿಪರಿಯಾಗಿ ಬೇಡಿಕೊಂಡರು. “ಏನಮ್ಮಾ ಆಸ್ತಿಯನ್ನೆಲ್ಲ ಮಾರಿ ಗುಡಿಸಿ ಗುಂಡಾಂತರ ಮಾಡಿಬಿಟ್ಟನೇನೋ ಎನ್ನುವಂತೆ ಆಡುತ್ತಿದ್ದೀರಾ. ಮಕ್ಕಳ ಶಾಲೆಗೆ, ಭಾರ್ಗವಿಯ ಕೆಲಸಕ್ಕೆ ನಗರ ಪ್ರದೇಶದಲ್ಲಿರುವುದೇ ಉತ್ತಮವೆಂದು ಈ ತೀರ್ಮಾನ. ಬೇಕಾದರೆ ನೀವೂ ಅಲ್ಲಿಗೇ ಬಂದುಬಿಡಿ. ಮನೆಯನ್ನು ಯಾರಾದರೂ ನಂಬಿಕಸ್ಥರಿಗೆ ವಹಿಸಿಬಿಡೋಣ. ಮನೆಯನ್ನು ಬಿಟ್ಟುಕೊಡುವುದು ಬೇಡ. ಪಕ್ಕದಲ್ಲಿರುವ ಭಾಗದಲ್ಲಿ ಎಲ್ಲ ಅನುಕೂಲಗಳಿವೆ. ಬೇಕಾದಾಗ ನಾವುಗಳೂ ಬಂದಾಗ ಈ ಭಾಗದಲ್ಲಿದ್ದು ಹೋಗಬಹುದು. ತೊಂದರೆಯಾಗುವುದಿಲ್ಲ. ಮೈಸೂರಿನಲ್ಲೇ ದೊಡ್ಡ ಮನೆಯನ್ನು ಹುಡುಕುತ್ತೇನೆ. ತಂಗಿಯ ಓದಿಗೆ, ಕೆಲಸಕ್ಕೆ ಎಲ್ಲಕ್ಕೂ ಅನುಕೂಲವಾಗುತ್ತೆ” ಎಂದು ಹೇಳಿದ ಸಿದ್ಧಾರ್ಥ.

ಮಗನ ಮಾತನ್ನು ಕೇಳಿದ ಅವನ ತಾಯಿ ಕಮಲಮ್ಮ “ಹೂಂ..ನನ್ನ ಸೊಸೆಯ ಆಸೆ ಪೂರೈಸಲು ಹೊರಟ ಮಗ ಅಂತಾ ಹೆಮ್ಮೆ ಪಟ್ಟುಕೊಂಡಿದ್ದೆ. ಅದು ತಪ್ಪು, ಮುಂದಿನ ಪ್ಲಾನ್ ಹಾಕಿಕೊಂಡೇ ಅಲ್ಲಿ ಕಾಲಿಟ್ಟಿದ್ದೀಯ ಅನ್ನು ಗುಮಾನಿ ಬರುತ್ತಿದೆ. ನಮ್ಮ ವಸ್ತುವೇ ಚಂದಿಲ್ಲ ಅಂದಮೇಲೆ ಆ ಮಗುವಿನ ಮೇಲೆ ಏನು ದೂರೋದು. ಆಕೆ ಮದುವೆಯಾಗುವಾಗಲೇ ಕೇಳಿಕೊಂಡು ಬಂದಿದ್ದಳು. ನಿನಗೆ ಹೆಂಗನ್ನಿಸುತ್ತೋ ಹಾಗೆ ಮಾಡಪ್ಪ. ತಾಳಾನೂ ನಿಂದೇ ತಂಬೂರೀನೂ ನಿಂದೇ. ಆದರೆ ಒಂದು ಮಾತು ಜ್ಞಪ್ತೀಲಿ ಇಟ್ಟಕೋ, ತಲೆತಲಾಂತರದಿಂದ ನಮಗೆ ಒಲಿದು ಬಂದಿದ್ದ ಭೂಮಿ ತಾಯೀನಾ ಪಕ್ಕಕ್ಕೆ ಸರಿಸಿ ದೂರ ಹೋಗ್ತಾ ಇದ್ದೀಯ. ನನ್ನ ಕೊನೇ ಉಸುರಿರೋವರೆಗೂ ಈ ಮನೆ, ಭೂಮಿ ಬಿಟ್ಟು ನಾನು ಎಲ್ಲಿಗೂ ಬರಲ್ಲ.” ಎಂದು ಗದ್ಗದಿತರಾಗಿ ಒಳಕೋಣೆಗೆ ಹೊರಟುಹೋದರು. ಈ ಎಲ್ಲ ಮಾತುಕತೆಗೆ ಮೂಕಸಾಕ್ಷಿ ಆಗಿ ನಿಂತಿದ್ದ ಸಿದ್ಧಾರ್ಥನ ತಂಗಿ ತುಟಿ ಎರಡು ಮಾಡದೆ ತಾಯಿಯನ್ನು ಅನುಸರಿಸಿ ನಡೆದಳು.

ಭಾರ್ಗವಿಯ ಅಣ್ಣ ಬಾಲುವಿಗಂತೂ ತನ್ನ ಗೆಳೆಯನ ನಿರ್ಧಾರ ಕೇಳಿ ನೆಲಕುಸಿದಂತಾಯಿತು. ಕೊನೆಯ ಅಸ್ತ್ರವೆಂಂತೆ ಅವನ ಅಕ್ಕ ಭಾವನವರಿಂದಲೂ ಹೇಳಿಸಿ ನೋಡಿದ. ಊಹುಂ ಯಾವುದಕ್ಕೂ ಅವನ ನಿರ್ಧಾರ ಬದಲಾಗಲಿಲ್ಲ. “ಅದೇನು ನಾನೇನೋ ಮಾಡಬಾರದ್ದು ಮಾಡಲು ಹೊರಟಿದ್ದೇನೆಂದು ಹೇಳುತ್ತಿದ್ದೀರಿ. ಊರಿನ ಕಡೆ ತಲೆ ಹಾಕುವುದಿಲ್ಲ ಎಂದು ಬೊಬ್ಬಿಡುತ್ತಿದ್ದೀರಿ. ಭೂಮಿಯ ಉಳುಮೆ, ಕೃಷಿಕೆಲಸ ನನಗೆ ಹೇಳಿ ಮಾಡಿಸಿದ್ದಲ್ಲ. ಅದನ್ನೇನು ಬಂಜರು ಮಾಡುತ್ತಿಲ್ಲ್ತ. ಅದರಲ್ಲಿ ಪ್ರೀತಿ ಹೊಂದಿರುವವರಿಗೆ ದುಡಿಮೆ ಮಾಡುವವರಿಗೆ ಗೇಣಿಗೆ ಕೊಟ್ಟಿದ್ದೇನೆ. ಕ್ರಯಕ್ಕೆ ಕೊಟ್ಟಿಲ್ಲ. ನನ್ನ ಅಧೀನದಲ್ಲೇ ಇದೆ.” ಎಂದು ಎಲ್ಲರ ಬಾಯಿ ಮುಚ್ಚಿಸಿದ.

ಭಾರ್ಗವಿಗೆ ಇಬ್ಬಗೆಯ ಸಂಕಟ. ತನ್ನ ಮೊರೆಯನ್ನು ಭಗವಂತ ಕೇಳಲಿಲ್ಲವೆಂದ ಮೇಲೆ ಏನು ನಡೆಯಬೇಕಾಗಿದೆಯೋ ನಡೆಯಲಿ. ವಿವರಿಸಿ ಹೇಳಿದರೂ ಅರ್ಥ ಮಾಡಿಕೊಳ್ಳದ ಭೂಪ ತನ್ನ ಗಂಡ. ಒಂದು ವೇಳೆ ಅರ್ಥವಾದರೂ ಕೇಳದಿರುವ ವ್ಯಕ್ತಿ. ಎಂದು ಮೌನ ತಾಳಿದಳು.

ಸಿದ್ಧಾರ್ಥ ಮೈಸೂರಿಗೇ ಇರಲು ಬರುತ್ತಿದ್ದೇನೆಂದು ತೀರ್ಮಾಸಿದ ಮೇಲೆ ಭಾರ್ಗವಿ ತನ್ನೆರಡು ಮಕ್ಕಳೊಂದಿಗೆ ತಾವಿಬ್ಬರೂ ಅದೇ ಔಟ್‌ಹೌಸಿನ ಸಣ್ಣ ಮನೆಯಲ್ಲಿ ಮುಂದುವರೆಯುವುದು ಸಾಧ್ಯವಿಲ್ಲ ಎನ್ನಿಸಿತು. ತನ್ನ ನಿವಾಸವನ್ನು ಬದಲಾಯಿಸಬೇಕೆಂದು ಗುರುತು ಪರಿಚಯ ಇರುವ ಕೆಲವರಿಗೆ ಹೇಳಿ ತಾನೂ ಮನೆಯ ಹುಡುಕಾಟ ಮಾಡಬೇಕೆಂದುಕೊಂಡಳು. ವಿಷಯ ತಿಳಿದ ಅವಳಿದ್ದ ಮನೆಯ ಮಾಲೀಕರ ಹೆಂಡತಿ “ಭಾರ್ಗವಿ ನಾವು ನಮ್ಮವರು ಇತ್ತೀಚೆಗೆ ಕಟ್ಟಿಸಿರುವ ಹೊಸಮನೆಗೆ ಶಿಫ್ಟ್ ಆಗುತ್ತಿದ್ದೇವೆ. ಈ ಮನೆಗೆ ಸಣ್ಣಪುಟ್ಟ ರಿಪೇರಿ, ಬಣ್ಣ ಮಾಡಿಸಿದರೆ ಇನ್ನೂ ಕೆಲವು ವರ್ಷ ನಡೆಯುತ್ತದೆ. ನೀನೇ ಇಲ್ಲಿಗೆ ಬರುವುದಾದರೆ ನಮಗೂ ನೆಮ್ಮದಿ” ಎಂದು ಸಲಹೆ ನೀಡಿದರು. ಅದನ್ನು ಕೇಳಿದ ಭಾರ್ಗವಿಗೆ ಹಾಲು ಕುಡಿದಷ್ಟು ಸಂತೋಷವಾಯಿತು. ಮಕ್ಕಳಿಗೆ ಸ್ಕೂಲು, ಬಸ್ ಸ್ಟಾಪು, ರೈಲ್ವೇಸ್ಟೇಷನ್ ಎಲ್ಲಕ್ಕೂ ಸಮೀಪವಿದೆ. ಮೇಲಾಗಿ ಮೈಸೂರಿಗೆ ಬಂದಾಗಿನಿಂದ ಇಲ್ಲೇ ಇರುವುದರಿಂದ ಚಿರಪರಿಚಿತ ಬಡಾವಣೆ. ಅರಸುತ್ತಿದ್ದ ಬಳ್ಳಿಯೇ ಕಾಲಿಗೆ ಸಿಕ್ಕಿದಂತಾಯಿತು. ತನ್ನ ಸಮ್ಮತಿಯನ್ನು ಸೂಚಿಸಿದಳು. ಈ ಏರ್ಪಾಟು ಸಿದ್ಧಾರ್ಥನಿಗೆ ಅಷ್ಟೊಂದು ಸಮ್ಮತಿಯಾಗದಿದ್ದರೂ ತಾನೇನೂ ಮಾಡಬೇಕಾಗಿಲ್ಲವೆಂದು ಸುಮ್ಮನಾದನು. ಮನೆಯ ಮಾಲೀಕರು ಹೇಳಿದಂತೆ ರಿಪೇರಿ ಬಣ್ಣ ಸುಣ್ಣ ಎಲ್ಲ ಮಾಡಿಸಿದ ನಂತರ ಮಗಳೊಂದಿಗೆ ತಾನು ಬಂದು ತನ್ನ ಕುಟುಂಬವನ್ನು ಸೇರಿಕೊಂಡ. ಮಾತುಕೊಟ್ಟಂತೆ ಊರಿನ ಓಡಾಟವನ್ನು ಮುಂದುವರಿಸಿದ್ದ.

ಕೆಲವು ತಿಂಗಳು ಕಳೆದನಂತರ ತಾನು ಸ್ವಂತವಾಗಿ ಏನಾದರೂ ಮಾಡುತ್ತೇನೆಂಬ ಇಂಗಿತ ವ್ಯಕ್ತಪಡಿಸಿದ ಸಿದ್ಧಾರ್ಥ. ವ್ಯಾಪಾರದ ವಹಿವಾಟಿನ ಬಗ್ಗೆ ಏನೂ ತಿಳಿಯದ ಈ ಮಹಾರಾಯ ಯಾವರೀತಿ ವ್ಯವಹಾರ ನಡೆಸುತ್ತಾನೋ ಎಂದುಕೊಂಡ ಭಾರ್ಗವಿ ಅಂಜುತ್ತಲೇ ಕೇಳಿದಳು. ಅದಕ್ಕೆ “ನಾನು ಹೋಲ್‌ಸೇಲ್ ವ್ಯಾಪಾರ ಮಾಡುತ್ತೇನೆ. ಸಿಟಿಯಲ್ಲಿ ಒಂದು ಮಳಿಗೆ ತೆಗೆದುಕೊಂಡು ದಿನಸಿ ಒಟ್ಟಿಗೆ ತಂದುಹಾಕಿ ಅಂಗಡಿಗಳಿಗೆ ಸಪ್ಲೈ ಮಾಡುತ್ತೇನೆ.” ಎಂದ

“ಅದು ಸರಿ ಅದಕ್ಕೆ ಬಂಡವಾಳ?” ಎಂದು ಕೇಳಿದಳು ಭಾರ್ಗವಿ.
“ಊರಿನಲ್ಲಿರುವ ಜಮೀನಿನಲ್ಲಿ ಒಂದು ಭಾಗವನ್ನು ಬ್ಯಾಂಕಿಗೆ ಅಡಮಾನವಿಟ್ಟು ಸಾಲ ತೆಗೆಯುತ್ತೇನೆ. ಅದನ್ನೇ ಬಂಡವಳವಾಗಿ ಬಳಸಿಕೊಳ್ಳುತ್ತೇನೆ” ಎಂದ.

ಅದನ್ನು ಕೇಳಿ ಭಾರ್ಗವಿ ಹೌಹಾರಿದಳು. ಅಯ್ಯಪ್ಪಾ ! ಈಗಾಗಲೇ ಹತ್ತು ಹಲವು ಆಕ್ಷೇಪಣೆಗಳು ನನ್ನ ಸುತ್ತ ಆವರಿಸಿಕೊಂಡಿವೆ. ಇನ್ನು ಈ ಮನುಷ್ಯ ಹೇಳಿದಂಗೇನಾದರೂ ಮಾಡಲು ಹೋದರೆ ಏನು ಗತಿ ಎಂದು ಆಲೋಚಿಸಿ ಏನೂ ಮಾಡುವುದು ಬೇಡ ಸದ್ಯ ಎಂದು ಮನಸ್ಸಿನಲ್ಲೇ ನಿಶ್ಚಯಿಸಿಕೊಂಡಳು. ಹಾಗೇ ಸಿದ್ಧಾರ್ಥನಿಗೆ ತನ್ನ ಹೆಸರಲ್ಲಿ ಬ್ಯಾಂಕಿನಿಂದ ಪರ್ಸನಲ್ ಲೋನ್ ತೆಗೆದುಕೊಟ್ಟಳು.

ಸರಿ ಹೋಲ್‌ಸೇಲ್ ವ್ಯಾಪಾರವನ್ನು ಸಿಟಿಯಲ್ಲಿ ಮಳಿಗೆ ಬಾಡಿಗೆ ತೆಗೆದುಕೊಂಡು ಪ್ರಾರಂಭಿಸಿಯೇಬಿಟ್ಟ. ದವಸಗಳ ದಾಸ್ತಾನು, ಮೆಣಸಿನಕಾಯಿ, ಹುಣಸೇಹಣ್ಣು, ಬೆಲ್ಲ, ಇತ್ಯಾದಿಗಳನ್ನು ರೈತಾಪಿ ಕುಟುಂಬಗಳಿಂದ ಖರೀದಿಸುತ್ತಿದ್ದ. ಅದೇ ಹಿನ್ನೆಲೆಯಿಂದ ಬಂದವನಾದ್ದರಿಂದ ಏನು ಎತ್ತ ಎನ್ನುವುದರಲ್ಲಿ ಚಾಲಾಕಿತನವಿತ್ತು. ಹೀಗಾಗಿ ವ್ಯಾಪಾರ ಚೆನ್ನಾಗಿಯೇ ಕೈ ಹಿಡಿಯಿತು. ಅದನ್ನು ಕಂಡು ಭಾರ್ಗವಿ ಹಿಗ್ಗಿ ಹೀರೇಕಾಯಾದಳು. ವ್ಯಾಪಾರದ ಸಲುವಾಗಿ ಊರಿಗೂ ಹೋಗಿ ಬರುತ್ತಿದ್ದುದರಿಂದ ಅಲ್ಲಿ ಅತ್ತೆ , ನಾದಿನಿಗೂ ಸ್ವಲ್ಪಮಟ್ಟಿಗೆ ನೆಮ್ಮದಿ ತಂದುಕೊಟ್ಟಿತು. ಆದರೆ ಇವೆಲ್ಲವೂ ಕ್ಷಣಿಕ ಸಂತೋಷ ಎಂದರಿಯಲು ಹೆಚ್ಚುಕಾಲ ಬೇಕಾಗಲಿಲ್ಲ.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=45590

-ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *