ಕಾದಂಬರಿ : ನೋಂಪಿ
ಲೇಖಕರು : ಪದ್ಮಾ ಆನಂದ್ , ಸಾಹಿತ್ಯ ದಾಸೋಹ, ಮೈಸೂರು.
ಪದ್ಮಾ ಆನಂದ್ ಮೈಸೂರಿನ ಸಾಹಿತ್ಯವಲಯಕ್ಕೆ ಸುಪರಿಚಿತರು. ಸಂಘ ಸಂಸ್ಥೆಗಳಲ್ಲಿ ಚಟುವಟಿಕೆಯಿಂದ ಓಡಾಡುತ್ತಾ, ಹದಿಹರೆಯದವರೂ ನಾಚುವಂತೆ ಕೆಲಸ ಮಾಡುವ ಉತ್ಸಾಹದ ಚಿಲುಮೆಯಂತಿರುವವರು. ಮುಖದಲ್ಲೊಂದು ಮಾಸದ ಮುಗುಳ್ನಗುವನ್ನು ಹೊತ್ತು, ತಮ್ಮ ಸನಿಹಕ್ಕೆ ಬಂದವರನ್ನೆಲ್ಲ, ಸ್ನೇಹದ ತೆಕ್ಕೆಯಲ್ಲಿ ಬಳಸಿವ ಸ್ನೇಹಮಯಿ. ಕತೆ ಕವನ, ಪ್ರಬಂಧ, ಅನುಭವ ಹೀಗೆ ನಾನಾ ಪ್ರಕಾರಗಳಲ್ಲಿ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಪದ್ಮಾ ಮೇಡಂ, ನೋಂಪಿ ಎಂಬ ಕಥಾ ಸಂಕಲನವನ್ನು, ಸಾಹಿತ್ಯ ದಾಸೋಹದ 250 ನೇ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡುವ ಹಂಬಲದಿಂದ, ʻವ್ರತʼ ಹಿಡಿದವರಂತೆ, ತರಾತುರಿಯಲ್ಲೇ ಈ ಹೊತ್ತಗೆಯನ್ನು ಪ್ರಕಟಿಸಿದ್ದಾರೆ. ಅಷ್ಟು ಅವಸರದಲ್ಲಿ ಇದನ್ನು ಬಿಡುಗಡೆಗೊಳಿಸಿದರೂ ಸುಂದರವಾಗಿ ಮೂಡಿಬಂದಿರುವ ಈ ಸಂಕಲನ, ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನ್ನದು.
ಪ್ರಸಿದ್ಧ ಕಾದಂಬರಿಗಾರ್ತಿ ಶ್ರೀಮತಿ ಬಿ.ಆರ್. ನಾಗರತ್ನ ಅವರು ಮುನ್ನುಡಿಯ ನಾಂದಿಪದ ಹಾಡಿದರೆ, ಶ್ರೀಯುತ ಆನಂದರು ತಮ್ಮ ಪತ್ನಿಯನ್ನು ಪ್ರೋತ್ಸಾಹಿಸುವ ಮಾತುಗಳನ್ನು ಬರೆದು ಬೆನ್ನು ತಟ್ಟಿದ್ದಾರೆ. ಪದ್ಮಾ ಮೇಡಂ ಈ ಕೃತಿಯನ್ನು ಸುರಹೊನ್ನೆಯ ಶ್ರೀಮತಿ ಹೇಮಮಾಲಾಗೆ ಅರ್ಪಣೆ ಮಾಡಿ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ನೋಂಪಿಯಲ್ಲಿ ಒಟ್ಟು ಹದಿನಾಲ್ಕು ಕತೆಗಳಿದ್ದು ಎಲ್ಲ ಕತೆಗಳೂ ಮನ ಸೆಳೆಯುತ್ತವೆ. ಕತೆಗಳ ಹೆಣಿಗೆ ಕೃತಕವೆನಿಸುವುದಿಲ್ಲ. ಕಾರಣ ಕತೆಗಾರ್ತಿ ಬಹುಶಃ ತಾವು ಕಂಡು ಕೇಳಿದ ಘಟನೆಗಳನ್ನೇ ತಮ್ಮ ಸರಳವಾದ ಭಾಷೆಯಲ್ಲಿ ಕತೆಗಳನ್ನಾಗಿ ಕಟ್ಟಿಕೊಟ್ಟಿದ್ದಾರೆ ಅನಿಸುತ್ತದೆ. ಲೇಖಕರ ಮನಸ್ಸನ್ನು ತಟ್ಟಿದ, ಮೆಚ್ಚಿದ, ನಾಟಿದ, ಮುದಗೊಳಿಸಿದ, ಆರ್ದ್ರಗೊಳಿಸಿದ ಘಟನೆಗಳು ಓದುಗರನ್ನೂ ಆವರಿಸಿಕೊಳ್ಳುತ್ತವೆ. ಓದುಗರು ಕತೆಗಳನ್ನು ಓದುತ್ತಾ ಹೋದಂತೆ, ತಮ್ಮ ಸುತ್ತಲೇ ಸಂಭವಿಸಿದ ಪರಿಸ್ಥಿತಿಗಳೇನೋ ಎಂಬ ಭಾವಕ್ಕೊಳಗಾಗುತ್ತಾರೆ. ಅಷ್ಟು ನೈಜವಾಗಿವೆ ಇಲ್ಲಿಯ ಕತೆಗಳು. ಉದಾಹರಣೆಗೆ ʻಒಲವ ನೋಂಪಿʼ ಕತೆಯನ್ನು ಓದುತ್ತಿದ್ದಂತೆ, ಕಥಾನಾಯಕಿ ಎಲ್ಲಿ ಒಪ್ಪಿಗೆ ಕೊಟ್ಟುಬಿಡುತ್ತಾಳೋ ಎಂಬ ಆತಂಕ ಓದುಗರಿಗರಿಯದಂತೆ ಅವರ ಮನದೊಳಗೆ ಸೃಷ್ಟಿಯಾಗಿಬಿಡುತ್ತದೆ. ಸಮಾಜದ ನಾನಾಮುಖಗಳನ್ನು ಕಂಡ ಅನುಭವ ಲೇಖಕಿಗಿದೆ. ಹಾಗಾಗಿ ಕತೆಯ ಸರಪಳಿಯನ್ನು ನೈಜತೆಯೆಡೆಗೇ ಕೊಂಡೊಯ್ಯುತ್ತಾರೆ. ಅವರು ಘಟನೆಗಳ, ಭವಿಷ್ಯದ ಬಗ್ಗೆ ಆಲೋಚಿಸುವ ಪರಿ ವಾಸ್ತವದ ಬದುಕಿಗೆ ಹತ್ತಿರವಾಗಿದೆ. ಹಾಗಾಗಿ ಕತೆಗಳನ್ನು ಓದುವಾಗ ನಮ್ಮ ಸುತ್ತಲೇ ಎಲ್ಲೋ, ಯಾರ ಮನೆಯಲ್ಲೋ ನಡೆದ ಕತೆಗಳೆಂಬ ಅನುಭವಕ್ಕೆ ಓದುಗ ಒಳಗಾಗುತ್ತಾನೆ.
ಬಹಳ ಸಣ್ಣಪುಟ್ಟ ವಿಷಯಗಳನ್ನೇ ಅಂದವಾಗಿ ನಿರೂಪಿಸಿದ್ದಾರೆ. ಉದಾಹರಣೆಗೆ ನಮ್ಮ ಸಂಸ್ಕೃತಿಯ ಪ್ರತೀಕವಾದ ತುಳಸಿಗಿಡವನ್ನು ಮನೆ ಮುಂದೆ ಹಾಕಲಾಗದುದಕ್ಕೆ ಕಾರಣ ಕೊಡುವ, ಈಗಿನ ಓಡುವ ಲೋಕದ ಹುಡುಗಿ ಚೇತನಾ, ಕ್ರಿಸ್‌ಮಸ್ ಟ್ರೀ ಬೆಳೆದಿರುವುದಕ್ಕೆ ಕೊಡುವ ಕಾರಣವನ್ನು ನಿಜವಾಗಿಯೂ ವಿಶ್ಲೇಷಿಸಬೇಕಾದ್ದೇ. ಇದೊಂದು ಬಹಳ ಸಣ್ಣ ವಿಷಯ. ಇದನ್ನೇ ತಮ್ಮ ನಿರೂಪಣೆಯಲ್ಲಿ ʻಕಟ್ಟುಪಾಡುʼ ಎಂಬ ಕತೆಯನ್ನು ರಚಿಸಿ, ತನ್ಮೂಲಕ ಸಮಾಜಕ್ಕೊಂದು ಧನಾತ್ಮಕ ಸಂದೇಶವನ್ನು ಕೊಡುವ ಪ್ರಯತ್ನದಲ್ಲಿ ಲೇಖಕಿ ಗೆದ್ದಿದ್ದಾರೆ.
ಅಂತಃಕರಣ ಕಲಕುವ ʻಭೀತಿʼ, ಪ್ರೀತಿಯನ್ನೇ ಹಾಸಿ ಹೊದ್ದು ತನ್ನ ಗಂಡನೊಡನೆ ನಡೆಸಿದ ಸಂಸಾರವನ್ನು ಬದಿಗಿಡದ ಹೆಂಡತಿ, ಮರುಮದುವೆಗೆ ಒಪ್ಪದೆ ಒಲವನ್ನೇ ನೋಂಪಿಯಾಗಿ ಆಚರಿಸಿಕೊಳ್ಳುವ ಬಗೆ ಅನನ್ಯ. ಅಸೂಯೆಯೆಂಬುದು ಬಂಧುಗಳನ್ನೇ ಬಿಡದೆ, ಒಂದು ಕೆಟ್ಟ ಘಳಿಗೆಯಲ್ಲಿ ತನ್ನ ಚಾಲಾಕಿತನವನ್ನು ತೋರಿಬಿಡುತ್ತದೆ ಎಂಬುದನ್ನು ಚಾಣಾಕ್ಷತನದಿಂದ ಬಿಂಬಿಸುವ ʻತುಡುಗುʼ, ಅಜ್ಜಿಯ ʻಪ್ರೀತಿಯ ಹಚ್ಚಡʼವನ್ನೇ ನೆನಪಾಗಿ ಹೊದೆಯುವ ಮನವನ್ನು ಆರ್ದ್ರಗೊಳಿಸುವ ʻಅಜ್ಜಿಮನೆʼ, ದತ್ತುಪುತ್ರಿಯಾಗಿಯೂ ತನ್ನ ತಂದೆ ತಾಯಿಯನ್ನು ಕಣ್ರೆಪ್ಪೆಯಂತೆ ಕಾಪಾಡಿಕೊಳ್ಳಲು ನಿರ್ಧರಿಸುವ ಮಗಳು, ʻಬಾಂಧವ್ಯʼ ದ ಪ್ರತೀಕವಾಗಿ ನಿಲ್ಲುತ್ತಾಳೆ. ಆಶಾಕಿರಣ ಇಂದಿನ ತಂದೆತಾಯಿಯರ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.
ಕತೆಗಳನ್ನು ಹುಡುಕಿ ಹೋಗಬೇಕಾಗಿಲ್ಲ, ನಮ್ಮ ಕಣ್ಣಮುಂದಿನ ಘಟನೆಗಳೇ ಹೃದಯದಾಳಕ್ಕಿಳಿವ ಕತೆಗಳಾಗಬಲ್ಲವು ಎಂಬುದನ್ನು ಲೇಖಕಿ ತಮ್ಮ ಕತೆಗಳಲ್ಲಿ ಬಹಳ ಸುಂದರವಾಗಿ ನಿರೂಪಿಸಿದ್ದಾರೆ.
ಯಾವುದೇ ಶಬ್ದಾಡಂಬರಕ್ಕೆ ಬಲಿಯಾಗದೆ, ಸರಳವಾಗಿ ಮತ್ತು ನೈಜವಾಗಿ ಮೂಡಿಬಂದಿರುವ ಕತೆಗಳಿವು. ಮನಸ್ಸಿಗೆ ಹತ್ತಿರವಾಗುತ್ತವೆ. ಕೆಲವು ಕಾಲ ಕಾಡುತ್ತವೆ. ಕತೆಗಳನ್ನು ಓದುತ್ತಿದ್ದರೆ ಅವು ಅಂತರಂಗವನ್ನು ತಟ್ಟಬೇಕು. ಆ ಕೆಲಸವನ್ನು ಇಲ್ಲಿಯ ಕತೆಗಳು ಮಾಡುತ್ತವೆ.
ಪದ್ಮಾ ಆನಂದ್ ಅವರಿಂದ ಇನ್ನೂ ಉತ್ತಮ ರೀತಿಯಲ್ಲಿ ಸಾಹಿತ್ಯಸೇವೆ ಒದಗಿಬರಲಿ. ಜನಜನಿತವಾದ ವಿಷಯಗಳನ್ನೇ ವಿಶೇಷವಾಗಿ ಬರೆಯುವ ಛಾತಿ ಲೇಖಕರಿಗಿದೆ. ದಣಿವರಿಯದ ಅವರ ಬರವಣಿಗೆ ಹೀಗೇ ಮುಂದುವರೆಯಲಿ. ಶುಭವಾಗಲಿ.

-ಬಿ.ಕೆ.ಮೀನಾಕ್ಷಿ, ಮೈಸೂರು.

