ಮತ್ತೆ ಪುಟ್ಟ ಹುಡುಗಿಯಾಗಿ ಬಾಲ್ಯದ ಬೀದಿಯಲ್ಲಿ ನಿನ್ನ ಕೈ ಹಿಡಿದು ಸಂಚರಿಸುವ ಹಂಬಲ,
ಮತ್ತೆ ಹಳೆಯ ದಿನಗಳ ಹಾದಿಯಲ್ಲಿ ಮರಳಿ ಹೊದಿಯುವ ಆಸೆ ನಿನ್ನ ಮಮತೆಯ ಸೆರಗಿನ ನೆರಳ.
ಆರಿಸೋಣ ಬಾ ಕಳೆದ ಸುಂದರ ದಿನಗಳ ನೆನಪಿನ ಪಾರಿಜಾತ,
ನನ್ನ ಪಾಲಿಗೆ ಈ ಕ್ಷಣಗಳ ಒಳಗಿವೆ ಮನ ಮಿಡಿಯುವ ಮಧುರ ಸಂಗೀತ.
ನಿಜ, ಎಲ್ಲ ಗೋಜಲು ಗೋಜಲು ಕಳೆದು ಹೋದ ಆ ದಿನಗಳು,
ಆದರೂ ಮರೆತಿಲ್ಲ ಹೃದಯ ನೀ ಉಣಿಸಿದ ಪ್ರೀತಿಯ ಅರಳಿವೆ ನೋಡು ಮತ್ತೆ ವಾತ್ಸಲ್ಯದ ಹೂಗಳು.
ಮಂದಿ ಹಲವರಿದ್ದರೂ ಆಸರೆಯಾಗಲಿಲ್ಲ ಭಾವನೆಗಳ ದೋಣಿಗೆ ನಿನ್ನಂತೆ ಯಾರೂ,
ಹೆಮ್ಮರವಾಗಿ ಬೆಳೆದಿತ್ತು ಅರಿವಿಲ್ಲದೆಯೇ ನೀ ಬಿತ್ತಿದ್ದ ಪ್ರೀತಿ -ಮಮತೆಯ ಬೇರು.
ಜಗತ್ತಿನ ಸ್ವಾರ್ಥದ ಅಬ್ಬರಕ್ಕೆ ಸಿಲುಕಿ ನಲುಗದಿರಲಿ ಈ ಪ್ರೀತಿ ತುಂಬಿದ ಹೂಗಳು,
ನಿನ್ನ ನಗುವಿನ ಅಲೆಯಲ್ಲಿದೆ ಮನದ ಕತ್ತಲನ್ನು ದೂರವಾಗಿಸೋ ಹುಣ್ಣಿಮೆಯ ಹಾಲ್ಬೆಳದಿಂಗಳು.
ಇತ್ತೀಚೆಗೆ ತವರಿನಂಗಳ ಎಂಬ ಪದದಲ್ಲೂ ತುಂಬಿಹುದೊಂದು ಕಂಪು,
ಅಲ್ಲಿ ನೀನಿರೆ ಪ್ರತಿ ಕ್ಷಣದಲ್ಲೂ ತಂಗಾಳಿಯ ತಂಪು.
ಖಾಲಿಯಾಗಿದ್ದ ನನ್ನ ಜಗತ್ತಲ್ಲಿ ಚೈತ್ರದ ಸಂಭ್ರಮದಂತೆ ನಿನ್ನಾಗಮನ,
ನೀ ಬಂದ ಮೇಲೆ ಒಮ್ಮೆಯೂ ನೋವ ಕಂಡಿಲ್ಲ ನನ್ನೀ ಮನ.

-ನಯನ ಬಜಕೂಡ್ಲು


ಸುಂದರವಾದ ಭಾವನೆಗಳ ಕಾವ್ಯಾಭಿನಂದನೆ ಸೊಗಸಾಗಿ ಮೂಡಿ ಬಂದಿದೆ.
ಧನ್ಯವಾದಗಳು ಮೇಡಂ
ನೆನಪುಗಳು ಮಧುರ.. ಅರ್ಥ ಪೂರ್ಣ ವಾದ ಕವನ.. ಸೊಗಸಾಗಿದೆ… ನಯನ ಮೇಡಂ
ಧನ್ಯವಾದಗಳು ಮೇಡಂ
ಅಮ್ಮನ ನೆನಪನ್ನು ಆಪ್ತವಾಗಿ ಚಿತ್ರಿಸಿರುವ ಕವನ ಎಲ್ಲರ ಮನಮುಟ್ಟುವಂತಿದೆ ವಂದನೆಗಳು ನಯನ
ಧನ್ಯವಾದಗಳು ಮೇಡಂ
ನವಿರಾದ ಸುಂದರ ಭಾವವನ್ನು ಹೊತ್ತ ಚಂದದ ಕವನ.