(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಯೂನಿವರ್ಸಲ್ ಸ್ಟುಡಿಯೋಸ್
ಲೈಟ್, ಕ್ಯಾಮೆರಾ, ಆಕ್ಷನ್.. ಕಟ್, ಕಟ್ ಅಥವಾ ಪ್ಯಾಕ್ ಅಪ್ – ಈ ಪದಗಳು ಸ್ಟುಡಿಯೋ ಎಂದ ತಕ್ಷಣ ನೆನಪಾಗುವುದಲ್ಲವೇ? ನಾನು ಅಮೆರಿಕಾಕ್ಕೆ ಹೋದಾಗ ಲಾಸ್ ಏಂಜಲಿಸ್‌ನಲ್ಲಿರುವ ‘ಯೂನಿವರ್ಸಲ್ ಸ್ಟುಡಿಯೋಸ್’ ನೋಡಿದ್ದೆ. ಹೈದರಾಬಾದ್ ನಲ್ಲಿರುವ ‘ರಾಮೋಜಿ ಫಿಲ್ಮ್ ಸಿಟಿ’ ನೊಡಿದ್ದೆ. ಈ ಸ್ಟುಡಿಯೋ ಹೇಗಿರಬಹುದು ಎಂಬ ಕುತೂಹಲ ನನ್ನದು. ಪ್ರವಾಸೋದ್ಯಮವನ್ನು ಪ್ರೊತ್ಸಾಹಿಸಲು, ಸಿಂಗಪೂರ್‌ನಂತಹ ಪುಟ್ಟ ದೇಶಗಳು ಎಷ್ಟೊಂದು ಬಗೆಬಗೆಯ ಮನರಂಜನಾ ಕೇಂದ್ರಗಳನ್ನು ನಿರ್ಮಿಸಿದೆಯಲ್ಲಾ ಎಂದು ಅಚ್ಚರಿಯಾಗಿತ್ತು. ನಮ್ಮ ದೇಶದಲ್ಲಿ ರುದ್ರ ರಮಣೀಯವಾದ ಪ್ರಕೃತಿ ಇದೆ, ಪ್ರಾಚೀನ ನಾಗರೀಕತೆಯ ಬಿಂಬವಾಗಿ ನಿಲ್ಲುವ ಸ್ಮಾರಕಗಳಿವೆ, ಅದ್ಭುತವಾದ ಶಿಲ್ಪಕಲೆಯ ಬೀಡಾದ ದೇಗುಲಗಳಿವೆ, ಬೌದ್ಧ ವಿಹಾರಗಳಿವೆ, ಆದರೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನೂ ಅಂಬೆಗಾಲಿಡುವ ಹಂತದಲ್ಲಿದ್ದೇವೆಯಲ್ಲಾ ಎಂಬ ಬೇಸರವಾಗಿತ್ತು.
ಇಂದು ಸಿಂಗಪೂರ್ ಪ್ರವಾಸದ ಎರಡನೆಯ ದಿನ. ನಮ್ಮ ಮ್ಯಾನೇಜರ್ ಎಲ್ಲರೂ ಸರಿಯಾದ ಸಮಯಕ್ಕೆ ಹೊರಡುವುದು ಎಂದು ಪದೇ ಪದೇ ಹೇಳುತ್ತಲೇ ಇದ್ದರು. ನೀವು ಸಮಯಕ್ಕೆ ಸರಿಯಾಗಿ ಹೊರಡದಿದ್ದರೆ ಪ್ರವಾಸಿ ತಾಣಗಳನ್ನು ನೋಡಲು ಅವರು ಗೊತ್ತು ಮಾಡಿದ್ದ ವಾಹನ ಕಾಯುವುದೇ ಇಲ್ಲ. ಆದರೂ ನಾವು ಹೆಬ್ಬಾರ್‌ರವರು ನೀಡಿದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಒಂಭತ್ತು ಗಂಟೆಗೆ ಸರಿಯಾಗಿ ವಾಹನ ಬಂದಿದೆ ಎಂದು ಕರೆ ಬಂದಾಗ ರೆಡಿಯಾಗಿದ್ದ ನಾವು ಆರು ಜನ ವಾಹನವನ್ನೇರಿದೆವು. ಆದರೆ ನಮ್ಮ ತಂಡದ ನಾಲ್ಕುಜನ ಇನ್ನೂ ಬಂದಿರಲಿಲ್ಲ, ಮ್ಯಾನೇಜರ್ ಅವರಿಗೆ ಕರೆ ಮಾಡಿ, ವಾಹನದಿಂದ ಕೆಳಗಿಳಿದು ಅವರಿಗಾಗಿ ಕಾಯುತ್ತಾ ನಿಂತರು. ವಾಹನ ಚಾಲಕ ಹತ್ತು ನಿಮಿಷ ಕಾದಿರಬಹುದು. ‘ಕ್ಷಮೆ ಇರಲಿ, ನಾನು ಹೊರಟೆ’ ಎಂದು ವಾಹನವನ್ನು ಚಾಲೂ ಮಾಡಿದ. ನಾವು ಗಾಬರಿಯಿಂದ ನಮ್ಮ ಮ್ಯಾನೇಜರ್‌ಗಾಗಿ ಸುತ್ತಮುತ್ತ ನೋಡಿದೆವು, ಅವರು ಕಾಣಿಸಲಿಲ್ಲ, ಹಾಗಾಗಿ ಅಲ್ಲಿಯೇ ವಾಹನ ಇಳಿಯುವುದು ಸೂಕ್ತವೆಂದು ನಿರ್ಧರಿಸಿದೆವು. ಮತ್ತೆ ಐದು ನಿಮಿಷ ಆಯಿತು, ನಮ್ಮ ತಂಡದ ಸದಸ್ಯರು ಓಡೋಡುತ್ತಾ ಬಂದರು. ಅಷ್ಟೊತ್ತಿಗೆ ನಮಗಾಗಿ ಗೊತ್ತು ಮಾಡಿದ್ದ ವಾಹನ ಹೊರಟು ಹೋಗಿತ್ತು. ಹೆಬ್ಬಾರ್‌ರವರಿಗೆ ತಲೆನೋವು, ಆ ವಾಹನಕ್ಕೂ ಹಣ ಪಾವತಿ ಮಾಡಬೇಕು ಜೊತೆಗೆ ಅಂದಿನ ತಿರುಗಾಟಕ್ಕೆ ಮತ್ತೊಂದು ವಾಹನವನ್ನು ಬುಕ್ ಮಾಡಬೇಕಿತ್ತು. ನಾವು ಅರ್ಧ ಗಂಟೆ ಅಲ್ಲಿಯೇ ಕಾಯಬೇಕಾಯಿತು. ಈ ನಾಡಿನ ಜನರ ಶಿಸ್ತು, ಸಮಯ ಪರಿಪಾಲನೆ, ಟ್ರಾಫಿಕ್ ಕಾನೂನುಗಳನ್ನು ಪಾಲಿಸುವ ಪರಿ ಕಂಡು ಅಚ್ಚರಿಯ ಜೊತೆ ಮೆಚ್ಚುಗೆಯೂ ಆಯಿತು. ಅದಕ್ಕೇ ಅಲ್ಲವೇ ನಮ್ಮ ಸಮಯ ಪರಿಪಾಲನೆಯನ್ನು ಕಂಡವರು, ‘ಇಂಡಿಯನ್ ಸ್ಟಾಂಡರ್ಡ್ ಅಫ್ ಟೈಮ್’ ಎಂದು ಕುಹಕವಾಡುವುದು. ಅಂದಿನಿಂದ ಎಲ್ಲರೂ ಹತ್ತು ನಿಮಿಷ ಮುಂಚಿತವಾಗಿಯೇ ಹೊರಡುತ್ತಿದ್ದರು. ಲೇಟಾಗಿ ಬಂದವರು ನೀಡಿದ ಕಾರಣ, ‘ನಾವು ಮೊದಲಬಾರಿಗೆ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್’ನ ದಶಾವತಾರ ಕಂಡವರು. ಇಡ್ಲಿ, ದೋಸೆ, ಉಪ್ಪಿಟ್ಟುಗಳಿಗಾಗಿ ಹುಡುಕಾಡಿ ಸೋತು, ಕೊನೆಗೆ ಎರಡು ಬ್ರೆಡ್ ಚೂರುಗಳನ್ನು ಕಾಫಿಯೊಂದಿಗೆ ನುಂಗಿದೆವು. ಕಾಫಿ ಮೇಕರ್‌ನಲ್ಲಿ ಕಾಫಿ ಮಾಡಲು ಗೊತ್ತಾಗದೆ ಯಾರ ಬಳಿಯೋ ಕೇಳಿ ಮಾಡಿಸಿ, ಕುಡಿದು ಬರುವ ಹೊತ್ತಿಗೆ ಲೇಟ್ ಆಯಿತು.’
ಪ್ರವೇಶ ದ್ವಾರದಲ್ಲಿ ‘ಯೂನಿವರ್ಸಲ್ ಸ್ಟುಡಿಯೋಸ್’ ಎಂಬ ಫಲಕವನ್ನು ಹೊತ್ತ ಗೋಲಾಕಾರದ ಪೃಥ್ವಿ ನಿಧಾನವಾಗಿ ಚಲಿಸುತ್ತಾ ಪ್ರವಾಸಿಗರನ್ನು ಆಹ್ವಾನಿಸುತ್ತಿತ್ತು. ನಮ್ಮ ಗೈಡ್ ಹೆಬ್ಬಾರ್‌ರವರು ಆ ಸ್ಥಳದ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು, ‘ಇದು ಸೌತ್ ಈಸ್ಟ್ ಏಶ್ಯಾದ ಮೊಟ್ಟ ಮೊದಲ ಹಾಗೂ ಏಕೈಕ ‘ಥೀಮ್ ಪಾರ್ಕ್ ಸ್ಟುಡಿಯೋ’ ಇಲ್ಲಿ ಏಳು ವಿಭಾಗಗಳಿದ್ದು ಸುಮಾರು ಇಪ್ಪತ್ತು ಬಗೆಯ ರೈಡ್‌ಗಳಿವೆ. ನಮ್ಮ ಪ್ರವಾಸದ ವೇಳಾಪಟ್ಟಿಯ ಪ್ರಕಾರ ನಾವು ನಾಳೆ ಇಲ್ಲಿಗೆ ಬರಬೇಕಾಗಿತ್ತು, ಆದರೆ ನಾಳೆ ಭಾನುವಾರವಾದ್ದರಿಂದ ತುಂಬಾ ರಷ್ ಇರುವುದು. ಒಂದೊಂದು ಸ್ಥಳದಲ್ಲೂ ಅರ್ಧ, ಮುಕ್ಕಾಲು ಘಂಟೆ ಕ್ಯೂನಲ್ಲಿ ನಿಲ್ಲಬೇಕಾಗುವುದು. ಹಾಗಾಗಿ ಇಂದೇ ನಿಮ್ಮನ್ನು ಇಲ್ಲಿಗೆ ಕರೆ ತಂದಿದ್ದೇನೆ. ಇಡೀ ದಿನ ಇಲ್ಲಿ ಸುತ್ತಾಡಬೇಕಾಗುವುದು, ಮೊಬೈಲ್ ಮತ್ತು ಪರ್ಸ್ ಮಾತ್ರ ನಿಮ್ಮ ಜೊತೆ ಇರಲಿ. ನೀರಿನ ಬಾಟಲ್ ಬೇಡ. ಇಲ್ಲಿ ಎಲ್ಲೆಡೆ ಕುಡಿಯುವ ನೀರು ಇಟ್ಟಿರುತ್ತಾರೆ.’ ಇವರ ಸೂಚನೆಗಳನ್ನು ಕೇಳುತ್ತಾ ಯೂನಿವರ್ಸಲ್ ಸ್ಟುಡಿಯೋಸ್ ಒಳ ಹೊಕ್ಕೆವು. ಅಲ್ಲಿದ್ದ ಸೂಚನಾ ಫಲಕದ ಮೇಲೆ ಅಲ್ಲಿರುವ ಮುಖ್ಯವಾದ ಏಳು ವಿಭಾಗಗಳ ಹೆಸರುಗಳನ್ನು ಬರೆದಿದ್ದರು – ‘ಹಾಲಿವುಡ್’, ‘ನ್ಯೂಯಾರ್ಕ್’, ‘ಸೈ ಫೈ ಸಿಟಿ’, ‘ಏನ್ಷಿಯೆಂಟ್ ಈಜಿಪ್ಟ್’, ‘ದ ಲಾಸ್ಟ್ ವರ್ಲ್ಡ್ ’, ‘ಫಾರ್ ಫಾರ್ ಅವೆ’ ಹಾಗೂ ‘ಮಿನಿಯನ್ ಲ್ಯಾಂಡ್’.
ಈ ಸ್ಥಳದಲ್ಲಿ ಸಾಕಷ್ಟು ಜನ ಸೇರಿದ್ದರು. ನಮ್ಮ ಗೈಡ್ ಸಲಹೆಯಂತೆ ರಷ್ ಇಲ್ಲದ ಶೋಗಳನ್ನು ಮೊದಲು ನೋಡಿದೆವು. ಹಾಲಿವುಡ್ ಎಂಬ ಫಲಕ ಆಯಸ್ಕಾಂತದಂತೆ ನಮ್ಮನ್ನು ಸೆಳೆದಿತ್ತು. ಅಮೆರಿಕಾದ ಲಾಸ್ ಏಂಜಲಿಸ್‌ನ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗಿದೆವು. ‘ನ್ಯೂ ಯಾರ್ಕ್’ಎಂಬ ಫಲಕ ಹೊತ್ತ ಸಭಾಂಗಣದಲ್ಲಿ ಒಂದು ಶೋ ನಡೆಯುತ್ತಿತ್ತು. ನಾವು ಸರತಿ ಸಾಲಿನಲ್ಲಿ ನಿಂತು ಒಳಗಡೆ ಹೊದೆವು. ಸಿನೆಮಾದ ದೃಶ್ಯಗಳನ್ನು ಚಿತ್ರೀಕರಿಸುವ ಕೌಶಲವನ್ನು ತೋರಿಸುತ್ತಿದ್ದರು. – ಲೈಟ್, ಕ್ಯಾಮೆರಾ, ಆಕ್ಷನ್.. ಬರ‍್ರನೆ ಬೀಸುವ ಸುಂಟರಗಾಳಿ, ಗುಡುಗು, ಸಿಡಿಲು, ಮಿಂಚು ಜೊತೆಗೇ ಜೋರಾಗಿ ಸುರಿಯುವ ಮಳೆ’ ನಾವು ಬೆಕ್ಕಸ ಬೆರಗಾಗಿ ನೋಡಿದೆವು. ನಾವು ಆ ಚಂಡಮಾರುತದಲ್ಲಿ ಸಿಕ್ಕಿಕೊಂಡ ಅನುಭವ, ಗುಡುಗು ಸಿಡಿಲಿಗೆ ಬೆಚ್ಚಿ ಬಿದ್ದ ಹಾಗೆ, ಬೆಂಕಿಯ ಶಾಖದಲ್ಲಿ ಬೆಂದು, ಮಳೆಯಲ್ಲಿ ತೊಯ್ದ ನಮಗೆ ಈ ಆಧುನಿಕ ತಂತ್ರಜ್ಞಾನ ಅಚ್ಚರಿ ಹುಟ್ಟಿಸಿತ್ತು.
ಇಲ್ಲಿಂದ ಹೊರಬಂದಾಗ ನಮ್ಮ ಮುಂದೆ ಪ್ರಾಚೀನ ನಾಗರೀಕತೆಯಾದ ಈಜಿಪ್ಟ್ ದೇಶ ತನ್ನ ಪ್ರಮುಖವಾದ ಸ್ಮಾರಕಗಳನ್ನು ಪ್ರದರ್ಶಿಸುತ್ತಾ ನಿಂತಿತ್ತು. ಬೃಹದಾಕಾರದ ಶ್ವಾನದ ಮುಖವುಳ್ಳ ಇಜಿಪ್ಷಿಯನ್ ಯೋಧರು, ಎತ್ತರವಾದ ಪಿರಮಿಡ್‌ಗಳು, ಸಿಂಹದ ದೇಹ ಹಾಗೂ ಹೆಣ್ಣಿನ ಶಿರವುಳ್ಳ ಸ್ಫಿಂಕ್ಸ್ ವಿಗ್ರಹಗಳನ್ನು ನೋಡುತ್ತಾ ಒಳಹೊಕ್ಕವರಿಗೆ ಒಂದು ಶಾಕ್ ಕಾದಿತ್ತು. ಅಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ರಿವೆಂಜ್ ಆಫ್ ದ ಮಮ್ಮಿ’ ಎಂಬ ರೈಡ್‌ನಲ್ಲಿ – ಕಡು ಕತ್ತಲಲ್ಲಿ ಅತಿ ವೇಗವಾಗಿ ಓಡುತ್ತಿದ್ದ ರೋಲರ್ ಕೋಸ್ಟರ್‌ಗಳಲ್ಲಿ ಸವಾರಿ ಮಾಡುತ್ತಿದ್ದವರು ನಿಜವಾದ ಹೀರೋಗಳೇ ಸರಿ. ಇವರ ಮಾತಿನಲ್ಲಿ ಇವರಿಗಾದ ಅನುಭವವನ್ನು ಕೇಳೋಣ ಬನ್ನಿ – ‘ಗಾಡಾಂಧಕಾರದಲ್ಲಿ ಗುಯ್.. ಎಂದು ಸದ್ದು ಮಾಡುತ್ತಾ ಹಾರಾಡುತ್ತಿದ್ದ ಜೀರುಂಡೆಗಳು, ಪುಟಿಯುತ್ತಿದ್ದ ಬೆಂಕಿಯ ಚೆಂಡುಗಳು, ತಮ್ಮ ಶಸ್ತ್ರಾಸ್ತ್ರಗಳನ್ನು ಹೊತ್ತು ಆಕ್ರಮಣ ಮಾಡಲು ಸಜ್ಜಾಗಿದ್ದ ಯೋಧ ಮಮ್ಮಿಗಳು, ಮನದಲ್ಲಿ ಭಯ ಮೂಡಿಸುತ್ತಿದ್ದ ಭೂತ ಬಂಗಲೆ’, ಇದನ್ನೆಲ್ಲಾ ಕೇಳುತ್ತಾ ನಾನು ನನ್ನವರ ಕೈ ಗಟ್ಟಿಯಾಗಿ ಹಿಡಿದು ಹೊರನಡೆದಿದ್ದೆ. ಹೊರ ನಿಂತಿದ್ದ ಸೈನಿಕರಿಗೆ ಇತ್ತು ಮಾನವನ ದೇಹಕ್ಕೆ ಶ್ವಾನದ ಮುಖ, ಇದರ ಸಂಕೇತ ಏನಿರಬಹುದು ಎಂದು ಗೂಗಲಣ್ಣನನ್ನು ಕೇಳಿದಾಗ ಬಂದ ಉತ್ತರ, ‘ಶ್ವಾನವು ಎಚ್ಚರಿಕೆಯಿಂದ ಕಣ್ಣಿಟ್ಟು ಕಾಯುವುದರಿಂದ, ಇದನ್ನು ರಕ್ಷಣೆಯ ಸಂಕೇತವಾಗಿ ಬಳಸಲಾಗಿದೆ.’ ಮರಣ ಹೊಂದಿದವರನ್ನು, ಅವರ ಸಮಾಧಿಗಳನ್ನು ಹಾಗೂ ಸಾವಿನ ನಂತರದ ಜೀವನವನ್ನೂ ಕಾಯುವ ಪ್ರಾಣಿಯ ತಲೆಯನ್ನು ಈ ಯೋಧರಿಗೆ ಜೋಡಿಸಲಾಗಿದೆ. ಹಾಗೆಯೇ ‘ಸಿಂಹದ ದೇಹ ಹಾಗೂ ಹೆಣ್ಣಿನ ಶಿರವುಳ್ಳ ಸ್ಫಿಂಕ್ಸ್’ ಯಾವುದರ ಸಂಕೇತ ಎಂದಾಗ ಬಂದ ಉತ್ತರ, ‘ದಯೆ, ಕರುಣೆ, ಹಾಗೂ ಉದಾರತೆಯ ಸಂಕೇತವೇ ಸ್ಫಿಂಕ್ಸ್. ಇಜಿಪ್ಷಿಯನ್ ದೊರೆಗಳು ತಮ್ಮ ಸಮಾಧಿಗಳನ್ನು ಪಿರಮಿಡ್ ಆಕಾರದಲ್ಲಿ ಕಟ್ಟುತ್ತಿದ್ದಾದರೂ ಏಕೆ, ಏಕೆಂದರೆ ‘ಅವರಿಗೆ ಪುನರ್ ಜನ್ಮದ ಬಗ್ಗೆ ನಂಬಿಕೆ ಇತ್ತು. ತಾವು ಮರಣ ಹೊಂದಿದ ನಂತರ ಆಕಾಶದಲ್ಲಿರುವ ‘ರಾ’ ಅಂದರೆ ಸೂರ್ಯ ದೇವನನ್ನು ಸೇರಲು ಎತ್ತರವಾದ ಪಿರಮಿಡ್ ನಿರ್ಮಿಸುತ್ತಿದ್ದರು. ಇಲ್ಲಿದ್ದ ಮೆಟ್ಟಿಲುಗಳನ್ನು ಏರುತ್ತಾ ಮರಣ ಹೊಂದಿದ ಅರಸರ ಆತ್ಮಗಳು ದೇವರನ್ನು ಸೇರುತ್ತಿದ್ದವು ಎಂಬ ನಂಬಿಕೆ. ಇದು ಸೂರ್ಯ ಕಿರಣವು ಮೇಲಿನಿಂದ ಕೆಳಗೆ ಹರಡುತ್ತಾ ಬಂದ ಹಾಗೆ ಕಾಣುವ ಆಕೃತಿಯಲ್ಲವೇ?
ಈಗ ನಾವು ‘ದ ಲಾಸ್ಟ್ ವರ್ಲ್ಡ್ ’ ಮುಂದೆ ನಿಂತಿದ್ದೆವು. ಎಲ್ಲರಿಗೂ ಪರಿಚಿತವಾದ ಸ್ಥಳ. ಇಲ್ಲಿ ಹಸಿರು ಬಣ್ಣದ ಒಂದು ಪುಟಾಣಿ ಡೈನಾಸರ್‌ನನ್ನು ‘ಬೇಬಿ ಕಿಯೋ’ ಎಂದು ಕರೆಯುತ್ತಾ, ಒಂದು ಟ್ರಕ್‌ನಲ್ಲಿ ಕೂರಿಸಿ, ಅದನ್ನು ಮಾತಾಡಿಸುತ್ತಿದ್ದ, ಆಟ ಆಡಿಸುತ್ತಿದ್ದ ವ್ಯಕ್ತಿಯೊಬ್ಬ. ಅದು ತಲೆ ಆಡಿಸುತ್ತಾ ಅವನು ಹೇಳಿದ ಹಾಗೆ ಮಾಡುತ್ತಿತ್ತು. ನಾವು ಇದು ಜೀವಂತ ಡೈನಾಸರ್ ಇರಬಹುದೇ ಎಂಬ ಭ್ರಮೆಯಲ್ಲಿ ಹತ್ತಿರ ಹೋದರೆ ಅದು ಒಂದು ಚಲಿಸುವ ಮಾಡೆಲ್ ಅಷ್ಟೇ. ಅಲ್ಲಿಯೇ ಡೈನಾಸರ್‌ಗಳ ಮೊಟ್ಟೆಯನ್ನೂ ಪ್ರದರ್ಶಿಸಿದ್ದರು. ಇಲ್ಲಿರುವ, ‘ಜುರಾಸಿಕ್ ಪಾರ್ಕ್ ರ‍್ಯಾಪಿಡ್ಸ್ ಅಡ್ವೆಂಚರ್’ ರೈಡ್ ಚೆಂದದ ಅನುಭವ ನೀಡುವ ಸವಾರಿ. ನೀರಿನಲ್ಲಿ ತೇಲುತ್ತಾ ಹೋಗುವ ಗುಂಡಾಗಿದ್ದ ದೋಣಿ, ಅದು ತಿರುಗುತ್ತಾ ತಿರುಗುತ್ತಾ ಮುಂದೆ ಸಾಗಿದ ಹಾಗೆ ಕಂಡದ್ದು – ಅಕ್ಕಪಕ್ಕದಲ್ಲಿ ಹಚ್ಚ ಹಸಿರು ಗಿಡ ಮರಗಳು, ಆ ಮರಗಿಡಗಳ ಮರೆಯಲ್ಲಿ ನಿಂತು ನಮ್ಮನ್ನು ದಿಟ್ಟಿಸುತ್ತಿರುವ ಬಗೆ ಬಗೆಯ ಡೈನಾಸರ್‌ಗಳನ್ನು ನೋಡುತ್ತಾ ಸಾಗುವಾಗ ಒಂದು ಮರಿ ಪಿಚಕ್ಕೆಂದು ನೀರನ್ನು ನಮ್ಮ ಮೇಲೆ ಉಗುಳಿತ್ತು. ಗಾಬರಿಯಾಗದಿರಿ, ಇದು ಕೇವಲ ಡೈನಾಸರ್‌ನ ಬಾಯಿಗೆ ಜೋಡಿಸಿದ ನೀರಿನ ಪೈಪಿನಿಂದ ಚಿಮ್ಮಿದ ನೀರು ಅಷ್ಟೆ. ಭಾರತಿ ರಮೇಶ್‌ರವರಂತೂ ಡೈನಾಸರ್ ಪ್ರಿಯನಾದ ತಮ್ಮ ಮೊಮ್ಮಗ ಅಗಸ್ತ್ಯನನ್ನು ಪ್ರತಿಕ್ಷಣ ನೆನಪಿಸಿಕೊಳ್ಳುತ್ತಿದ್ದರು. ಆಕಾಶದಲ್ಲಿ ಹಾರುವ, ನೀರಿನಲ್ಲಿ ಈಜುವ, ನೆಲದ ಮೇಲೆ ಓಡುವ ಡೈನಾಸರ್‌ಗಳ ಜೊತೆಗೇ ಆನೆಗಳ ಜೊತೆ ಪೈಪೋಟಿ ಮಾಡುವಂತಿರುವ ಭಾರೀ ಗಾತ್ರದ ಡೈನಾಸರ್‌ಗಳು ಇದ್ದವು. ಇವುಗಳಲ್ಲಿ ಸಸ್ಯಾಹಾರಿಗಳೂ ಇದ್ದವು, ಶಾಖಾಹಾರಿಗಳೂ ಇದ್ದವು.
‘ಕ್ಯಾನೊಪಿ ಫ್ಲೈಯರ್ ’ ಎಂಬ ಸವಾರಿ ಮಕ್ಕಳಿಗೆ ಪ್ರಿಯ. ಟೆರಾನೊಡಾನ್ಸ್ ಎಂಬ ಹೆಸರಿನ ಪಕ್ಷಿಯ ಆಕಾರದ ಯಂತ್ರದ ಮೇಲೆ ಕುಳಿತು ಮಕ್ಕಳ ಹಾರಾಟ. ಇಲ್ಲಿ ಅವರು ಸಮಸ್ತ ಡೈನಾಸರ್ ಜಗತ್ತನ್ನೆ ವೀಕ್ಷಿಸಬಹುದಿತ್ತು. ಇಡೀ ಭೂಮಂಡಲವನ್ನೇ ಆಕ್ರಮಿಸಿಕೊಂಡಿದ್ದ ಈ ಡೈನಾಸರ್‌ಗಳ ಕುಲವೇ ಇದ್ದಕ್ಕಿದ್ದಂತೆ ಅದೃಶ್ಯವಾದ ಕಾರಣ ಏನಿರಬಹುದು? ವಿಜ್ಞಾನಿಗಳು ಹಲವು ಬಗೆಯ ಸಿದ್ದಾಂತಗಳನ್ನು ಮಂಡಿಸುತ್ತಾರೆ. ಇರಲಿ, ಇಂದು ಇಡೀ ವಿಶ್ವವನ್ನು ಆಳುತ್ತಿರುವ ಮನುಜರೂ ಒಂದು ದಿನ ಹೀಗೆ ಕಾಣೆಯಾಗಬಹುದೇ ಎಂಬ ಆಲೋಚನೆ ನನ್ನ ಮನದಲ್ಲಿ. ಅಣ್ವಸ್ತ್ರಗಳನ್ನು ಕೈಲಿ ಹಿಡಿದು ಮುನ್ನುಗ್ಗುತ್ತಿರುವ ಮಾನವನಿಗೆ ಕೆಲವೇ ಕ್ಷಣಗಳಲ್ಲಿ ಇಡೀ ಮನುಕುಲವನ್ನು ಧ್ವಂಸ ಮಾಡುವ ಶಕ್ತಿ ತನ್ನ ಮುಷ್ಠಿಯಲ್ಲಿಯೇ ಇದೆ ಅಲ್ಲವೇ?
ಮುಂದಿನದು ‘ಸ್ಕೈಫೈ ಸಿಟಿ’ ಇಲ್ಲಿ ಮಾನವನ ಅತ್ಯಾಧುನಿಕ ಅನ್ವೇಷಣೆಗಳ ಪ್ರಾತ್ಯಕ್ಷಿಕೆಯ ಜೊತೆಗೇ ಎದೆ ಝಲ್ಲೆನ್ನಿಸುವ ‘ಬ್ಯಾಟಲ್‌ಸ್ಟಾರ್ ಗ್ಯಾಲೆಕ್ಟಿಕಾ’ ಎಂಬ ರೋಲರ್ ಕೋಸ್ಟರ್ – ಇಲ್ಲಿರುವುದು ಹ್ಯೂಮನ್ ಮತ್ತು ಸಿಲಾನ್ ಎಂಬ ಎರಡು ರೋಲರ್‌ಗಳು. ಅಬ್ಬಾ, ಹ್ಯೂಮನ್ ರೋಲರ್ ಅತ್ಯಂತ ವೇಗವಾಗಿ ಚಲಿಸುತ್ತಿದ್ದರೆ, ಸಿಲಾನ್‌ನಲ್ಲಿ ಕುಳಿತವರು ಐದು ಬಾರಿ ತಲೆಕೆಳಗಾಗಿ ಚಲಿಸುವ ದೃಶ್ಯ ಕಂಡು ಬೆಚ್ಚಿ ಬಿದ್ದೆವು. ಈ ರೋಲರ್ ಕೋಸ್ಟರ್‌ನಲ್ಲಿ ಹತ್ತಿದ್ದವರ ಚೀರಾಟ ಕೇಳಿಯೇ ಗಾಬರಿಯಾದೆವು. ಇಲ್ಲೊಂದು ಯುದ್ಧದ ಕುರಿತಾಗಿ 3 ಡಿ ಶೋ ಸಹ ಇತ್ತು. ನಾವು 45 ನಿಮಿಷಗಳ ಕಾಲ ಕ್ಯೂ ನಿಂತೆವು. ಇನ್ನೇನು ನಮ್ಮ ಸರತಿ ಬಂತು ಎನ್ನುವ ಹೊತ್ತಿಗೆ ಅದೇನೋ ತಾಂತ್ರಿಕ ದೋಷ ಎಂದು ಶೋ ನಿಲ್ಲಿಸಿದರು. ನಾವು ಪೆಚ್ಚಾಗಿ ಅಲ್ಲಿಂದ ಮುಂದೆ ಹೊರಟೆವು.
ಮುಂದಿನದು ‘ಟ್ರಾನ್ಸ್ ಫಾರ್ಮರ್’ ವಿಭಾಗ. ಇಲ್ಲೊಂದು ಸ್ಪೇಸ್‌ಶಿಪ್ ಇತ್ತು. ಇಲ್ಲಿರುವ ರೈಡ್ ಅಂತೂ ಭಯಾನಕವಾಗಿತ್ತು. ಸರ‍್ರನೆ ಮೇಲೇರುವ ಬಂಡಿಗಳು, ಒಂದೆರೆಡು ಕ್ಷಣ ಬಿಟ್ಟು ಇದ್ದಕ್ಕಿದ್ದಂತೆ ಧೊಪ್ಪೆಂದು ಕೆಳಗೆ ಜಾರುವ ಬಂಡಿಗಳು. ರಕ್ತದೊತ್ತಡ ಏರುವುದಂತೂ ಖಂಡಿತ ಎಂದು ಮಾತಾಡಿಕೊಳ್ಳುತ್ತಾ ಮುಂದ ಸಾಗಿದೆವು.
‘ಫಾರ್ ಫಾರ್ ಅವೆ’ ವಿಭಾಗದ ಮುಂದೆ ಸುಂದರವಾದ ರಾಜಕುವರಿ ‘ಫಿಯೋನಾ’ ನಿಂತಿದ್ದಳು. ಎಲ್ಲರೂ ನಾ ಮುಂದೆ ತಾ ಮುಂದೆ ಎಂದು ರಾಜಕುವರಿಯ ಜೊತೆ ಫೋಟೋ ತೆಗೆಸಿಕೊಳ್ಳಲು ಮುನ್ನುಗ್ಗುತ್ತಿದ್ದರು. ನಾವೂ ಕ್ಯೂನಲ್ಲಿ ನಿಂತು ರಾಜಕುವರಿಯ ಜೊತೆ ಫೋಟೋ ತೆಗೆಸಿಕೊಂಡೆವು. ಅಲ್ಲಿ 4 ಡಿ ಅಡ್ವೆಂಚರ್ ಸಿನೆಮಾದ ಮುಖ್ಯ ಪಾತ್ರಗಳಾದ ‘ಫಿಯೋನಾ ಮತ್ತು ಶ್ರೆಕ್’ ಚಿತ್ರದ ಕೆಲವು ಬಾಗಗಳನ್ನು ಪ್ರದರ್ಶಿಸುತ್ತಿದ್ದರು. ರಾಜಕುವರಿಯನ್ನು ಬಲವಂತವಾಗಿ ಹೊತ್ತೊಯ್ದ ರಕ್ಕಸ, ಅವಳನ್ನು ಕಾಣದೇ ಪರಿತಪಿಸುವ ಅವಳ ಪ್ರಿಯತಮ, ಕೊನೆಗೆ ದೈತ್ಯಾಕಾರದ ‘ಆಗರ್’ ಬಂದು ಈ ಪ್ರೀತಿಸುವ ಜೋಡಿಯನ್ನು ಒಂದುಗೂಡಿಸುವ ಕಥೆ. ಈ ಕಥೆಯಲ್ಲಿ ಬರುವ ಮಾತಾಡುವ ಕತ್ತೆ ಹಾಗೂ ಎಲ್ಲಾ ಪಾತ್ರಗಳೂ ನಮ್ಮ ಮಧ್ಯೆ ತೇಲುತ್ತಾ ಬಂದ ಹಾಗೆ ತೋರುವ 4 ಡಿ ಸಿನೆಮಾ ಅಲ್ಲರನ್ನೂ ರಂಜಿಸಿತ್ತು. ಜೊತೆಗೆ ಬೀಸುವ ಬಿರುಗಾಳಿ, ಚಿಮ್ಮುವ ನೀರಿನ ತುಂತುರು ಮನಸ್ಸಿಗೆ ಮುದ ನೀಡಿದೆವು.
ಮುಂದಿನ ತಾಣ ಎಲ್ಲರ ಮೆಚ್ಚುಗೆಗೆ ಪಾತ್ರವಾದ ‘ಮಿನಿಯನ್ ವರ್ಲ್ಡ್ ’ ಅಲ್ಲಿನ ಪಾತ್ರಗಳ ಜೊತೆಗೂಡಿ ಪ್ರೇಕ್ಷಕರು ಹಾಡುತ್ತಾ ಕುಣಿಯುತ್ತಾ ನಲಿದಾಡುತ್ತಿದ್ದರು. ಮಕ್ಕಳು, ತರುಣರು, ಹಿರಿಯರು ಎಲ್ಲರೂ ಸೇರಿ ನಕ್ಕು ನಲಿಯುವ ತಾಣ ಇದು. ಮಕ್ಕಳು ಕಿರುತೆರೆಯ ಕಾರ್ಟೂನ್‌ಗಳಲ್ಲಿ ನೋಡಿ ಮೆಚ್ಚಿದ ಪೆದ್ದು ಪೆದ್ದಾಗಿ ಆಡುವ ಮಿನಿಯನ್‌ಗಳು ವೇದಿಕೆಯ ಮೇಲೆ ನಿಂತು ಜನಪ್ರಿಯವಾಗಿದ್ದ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದವು. ಮಕ್ಕಳು ಅವರ ಜೊತೆ ಸೇರಿ ಹಾಡಿದರು, ಕುಣಿದರು.
ಇಷ್ಟಲ್ಲಾ ಸವಾರಿಗಳಿದ್ದ ಮೇಲೆ ‘ವಾಟರ್ ವರ್ಲ್ಡ್’ ಇಲ್ಲದಿದ್ದರೆ ಹೇಗೆ? ನಾವು ಅಲ್ಲಿದ್ದ ಸರತಿ ಸಾಲಿನಲ್ಲಿ ನಿಂತೆವು, ಅಲ್ಲಿ ರೈನ್ ಕೋಟುಗಳನ್ನು ಮಾರಲು ಇಟ್ಟಿದ್ದರು. ಬಿಸಿಲಿನ ಬೇಗೆಯಲ್ಲಿ ಬಳಲಿದ್ದ ನಾವು ಅದನ್ನು ಕೊಳ್ಳಲಿಲ್ಲ, ಒಳಗೆ ಹೋದಾಗ ಖುಷಿ ಖುಷಿಯಿಂದ ಚಿಮ್ಮುವ ನೀರಿಗೆ ಮೈಯೊಡ್ಡಿ ತೊಯ್ದು ತೊಪ್ಪೆಯಾದೆವು. ಹೊರಗೆ ಬಂದಾಗ ಸಾವಿತ್ರಿ ಒಂದು ಕ್ಯಾಬಿನ್‌ನಲ್ಲಿ ನಿಂತು ಅಲ್ಲಿ ಬರುತ್ತಿದ್ದ ಬಿಸಿಗಾಳಿಯಲ್ಲಿ ಒದ್ದೆಯಾದ ಬಟ್ಟೆ ಒಣಗಿಸಿಕೊಳ್ಳುತ್ತಿದ್ದರು. ನಾವೂ ಆ ಕ್ಯಾಬಿನ್ ಬಳಿ ಹೋದಾಗ ಅಲ್ಲಿ ತೂಗು ಹಾಕಿದ್ದ ಫಲಕವನ್ನು ಓದಿ ಎಂದು ಗೈಡ್ ಎಚ್ಚರಿಕೆ ನೀಡಿದರು, ‘ಇಲ್ಲಿ ನಿಲ್ಲಲು ಐದು ಡಾಲರ್ ದರ’. ಐದು ಡಾಲರ್ ಎಂದರೆ 365ರೂಗಳು, ಛೇ. ಛೇ, ಬಿಸಿಲಿಗೆ ನಿಂತರೆ ಐದು ನಿಮಿಷದಲ್ಲಿ ಬಟ್ಟೆ ಒಣಗುವುದು ಎಂದು ಗೊಣಗುತ್ತಾ ಹೊರಬಂದೆವು.
ಭರಪೂರ ಮನರಂಜನೆಯ ಕೇಂದ್ರವಾದ ‘ಯೂನಿವರ್ಸಲ್ ಸ್ಟುಡಿಯೋಸ್’ನಲ್ಲಿ ಏನುಂಟು ಏನಿಲ್ಲ – ಮಕ್ಕಳಿಗೆಂದೇ ಇರುವ ಸವಾರಿಗಳು, ಹದಿಹರೆಯದವರಿಗಾಗಿ ಸಾಹಸಮಯ ಕ್ರೀಡೆಗಳು, ಹಿರಿಯರಿಗಾಗಿ ಸಂಸ್ಕೃತಿಯನ್ನು ಬಿಂಬಿಸುವ ರೈಡ್‌ಗಳು, ಅಂತೂ ಎಲ್ಲರನ್ನೂ ರಂಜಿಸುವ ಕ್ರೀಡೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದವು.
(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45065

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ


