ಈ ನೆಲದಲ್ಲಿ ಕುಡಿಯುವ ನೀರಿಲ್ಲ, ಉಣ್ಣುವ ಅನ್ನವಿಲ್ಲ, ಉಡುವ ಬಟ್ಟೆಯಿಲ್ಲ – ಅರೆ ಇದೆಂತಹ ನಾಡು ಅಂತೀರಾ? ನೀರು, ಆಹಾರ, ಬಟ್ಟೆ ಎಲ್ಲವನ್ನೂ ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಲೇ ಬೆಳೆದು ನಿಂತಿರುವ ಅತ್ಯಾಧುನಿಕ ಸೌಕರ್ಯಗಳುಳ್ಳ ಪ್ರಮುಖ ಜಾಗತಿಕ ಆರ್ಥಿಕ ಕೇಂದ್ರ ಸಿಂಗಪೂರ್. ಇದು ಆಗ್ನೇಯ ಏಷ್ಯಾದಲ್ಲಿರುವ ಮಲೇಶಿಯಾದ ದಕ್ಷಿಣ ತುದಿಯಲ್ಲಿದೆ. ಸಿಂಗಪೂರ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಪುಟ್ಟ ದ್ವೀಪ ರಾಷ್ಟ್ರ. ಈ ಅದ್ಭುತ ನಾಡನ್ನು ನೋಡಲು ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೆ. ಹೊರದೇಶದ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದ್ದ ಪತಿರಾಯರೂ ಸಿಂಗಪೂರ್ ಪ್ರವಾಸಕ್ಕೆ ಹೊರಟಿದ್ದು ನನ್ನಲ್ಲಿ ಉಲ್ಲಾಸ ಮೂಡಿಸಿತ್ತು. ಅಂತೂ ಇಂತೂ ಆ ಸುಂಸದರ್ಭ ನಮಗೆ ಒದಗಿದ್ದು ಶಿವಮೊಗ್ಗಾದ ‘ವಿವೇಕ್ ಟ್ರಾವಲ್ಸ್’ ನವರ ಮೂಲಕ. 2026, ಜನವರಿ 15ರಿಂದ 25ರವರೆಗೆ ಈ ಪ್ರವಾಸಿ ಸಂಸ್ಥೆಯವರು ಆಯೋಜಿಸಿದ್ದ ‘ಸಿಂಗಪೂರ್, ಮಲೇಶಿಯಾ, ಥೈಲ್ಯಾಂಡ್’ ಪ್ರವಾಸದಲ್ಲಿ ನಾವು ಪಾಲ್ಗೊಂಡೆವು. ಭಾರತಿ, ರಮೇಶ್ ದಂಪತಿಗಳು, ಸಾವಿತ್ರಿ, ಮೋಹನ್‌ಭಟ್ ದಂಪತಿಗಳು ಶಿವಮೊಗ್ಗಾದಲ್ಲಿ ಜೊತೆಯಾದರೆ, ದಾವಣಗೆರೆಯಿಂದ ಆಗಮಿಸಿದ ಜೋಶಿ ದಂಪತಿಗಳು ಚಿತ್ರದುರ್ಗದಲ್ಲಿ ನಮ್ಮ ಜೊತೆ ಸೇರಿದರು. ಬೆಂಗಳೂರಿನಲ್ಲಿ ಶಾಂತಿ ನಟರಾಜ್ ದಂಪತಿಗಳು ನಮ್ಮ ಪ್ರವಾಸ ತಂಡಕ್ಕೆ ಸೇರ್ಪಡೆಯಾದರು. ಈ ಪ್ರವಾಸಿ ಸಂಸ್ಥೆಯ ಮಾಲೀಕರಾದ ಅಚ್ಯುತ್ ಹೆಬ್ಬಾರ್‌ರವರು ಹತ್ತು ಜನರಿದ್ದ ನಮ್ಮ ಪ್ರವಾಸಿ ತಂಡದ ಜೊತೆ ಬಂದದ್ದು ಹಾಲಿನ ಜೊತೆ ಜೇನು ಬೆರೆತ ಹಾಗಿತ್ತು.
ಬೆಂಗಳೂರಿನಿಂದ ರಾತ್ರಿ 1.00 ಗಂಟೆಗೆ ಹೊರಟಿದ್ದ ‘ಥಾಯ್ ಏರ್‌ವೇಸ್’ನಲ್ಲಿ ಪಯಣಿಸಿ, ಬ್ಯಾಂಕಾಕ್ ಮೂಲಕ ದಿನಾಂಕ 26 ರ ಮಧ್ಯಾಹ್ನ ಸಿಂಗಪೂರ್ ತಲುಪಿದೆವು. ಇಲ್ಲಿನ ‘ಚಾಂಗ್ ವಿಮಾನ ನಿಲ್ದಾಣ’ ವಿಶ್ವದರ್ಜೆಯ ವಿಮಾನ ನಿಲ್ದಾಣ ಎಂದೇ ಹೆಸರಾಗಿದೆ. ಸಿಂಗಪೂರ್ ಎಂಬ ಹೆಸರಿನ ಅರ್ಥ ಕೇಳಿದಾಗ ನಮಗೆಲ್ಲಾ ಖುಷಿಯೋ ಖುಷಿ. ನಮ್ಮ ದೇವಭಾಷೆ ಸಂಸ್ಕೃತದ ಪದಗಳಾದ ‘ಸಿಂಗ ಮತ್ತು ಪುರ’ಗಳಿಂದ ಉತ್ಪತ್ತಿಯಾದ ಹೆಸರು, ‘ಸಿಂಗ’ ಎಂದರೆ ‘ಸಿಂಹ’ ಹಾಗೂ ‘ಪುರ’ ಎಂದರೆ ನಾಡು. ನಾವು ವಿಮಾನ ನಿಲ್ದಾಣದಿಂದ, ಅಂದಿನ ನಮ್ಮ ತಂಗುದಾಣ ಹೋಟೆಲ್ ‘ಬಾಸ್’ನತ್ತ ಸಾಗುವಾಗ, ನಮ್ಮ ತಂಡದ ಮ್ಯಾನೇಜರ್ ಹೆಬ್ಬಾರ್‌ರವರು ಈ ದ್ವೀಪರಾಷ್ಟ್ರದ ವಿವರಣೆ ನೀಡಿದರು –‘ಸಿಂಗಪೂರ್ ನಮ್ಮ ಬೆಂಗಳೂರಿನಷ್ಟೇ ದೊಡ್ಡದಿದ್ದು, ಈ ನಾಡಿನ ಜನಸಂಖ್ಯೆ ಕೇವಲ ಆರು ಮಿಲಿಯನ್. ನಮ್ಮ ಬೆಂಗಳೂರಿವ ಜನಸಂಖ್ಯೆ ಎಂಟು ಮಿಲಿಯನ್‌ಗಿಂತ ಹೆಚ್ಚಿದೆ, ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 1965, ಅಗಸ್ಟ್ 9 ರಂದು ಸ್ವತಂತ್ರ ರಾಷ್ಟ್ರವಾದ ಸಿಂಗಪೂರ್, ಮೊದಲು ನಮ್ಮ ದೇಶದ ಹಾಗೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿಯೂ ತಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಿರಂತರವಾಗಿ ನಡೆದಿತ್ತು. ಈ ನಾಡು 1963ರಲ್ಲಿ ಸ್ವಾತಂತ್ರ್ಯ ಪಡೆದಾಗ, ಸಿಂಗಪೂರ್ ದ್ವೀಪವನ್ನು ಮಲೇಷಿಯಾದೊಂದಿಗೆ ಸೇರ್ಪಡೆ ಮಾಡಲಾಯಿತು. ಆದರೆ ಹಲವಾರು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಅರಾಜಕತೆಗಳಲ್ಲಿ ಮುಳುಗಿದ್ದ ರಾಷ್ಟ್ರ ಎರಡೇ ವರ್ಷಗಳಲ್ಲಿ ಇಬ್ಬಾಗವಾಯಿತು.
ಹೀಗೆ ಮಲೇಶಿಯಾದಿಂದ ವಿಭಜನೆಯಾದ ಪುಟ್ಟ ದ್ವೀಪ ಸಿಂಗಪೂರ್ ಹಲವಾರು ಸಂಕಷ್ಠಗಳನ್ನು ಎದುರಿಸಬೇಕಾಯಿತು. ಕುಡಿಯುವ ನೀರು, ಆಹಾರ ಇತ್ಯಾದಿ ಮೂಲಭೂತ ಸೌಕರ್ಯಗಳಿಗೆ ಮಲೇಶಿಯಾವನ್ನು ಅವಲಂಬಿಸಬೇಕಾಯಿತು. ಯಾವ ಪ್ರಾಕೃತಿಕ ಸಂಪನ್ಮೂಲಗಳನ್ನೂ ಹೊಂದದೆ ಕೇವಲ ವಾಯುಯಾನ, ಸಾಗರಯಾನ, ವಾಣಿಜ್ಯ ವ್ಯವಹಾರಗಳ ಮೇಲೆ ಸಧೃಢ ರಾಷ್ಟ್ರವನ್ನು ಕಟ್ಟಿದ ಕೀರ್ತಿ ಸಿಂಗಪೂರ್‌ನ ಪ್ರಪ್ರಥಮ ಪ್ರಧಾನಮಂತ್ರಿ ‘ಲೀ ಕುವಾನ್ ಯೂ’ರವರಿಗೆ ಸಲ್ಲುವುದು. ಇವರು ಸ್ವಾತಂತ್ರ್ಯ ಪೂರ್ವದಲ್ಲಿಯೂ ಅಂದರೆ 1959 ರಿಂದ ಈ ನಾಡಿನ ಚುಕ್ಕಾಣಿ ಹಿಡಿದವರು. ಸ್ವಾತಂತ್ರ್ಯಾನಂತರ 1965 ರಿಂದ 1990 ರವರೆಗೆ ತಮ್ಮ ಅತ್ಯದ್ಭುತ ಯೋಜನೆಗಳಿಂದ ಸಿಂಗಪೂರ್ ದೇಶವನ್ನು ವಿಶ್ವದ ಉನ್ನತ ದರ್ಜೆಯ ರಾಷ್ಟ್ರವನ್ನಾಗಿ ರೂಪಿಸಿದರು. ಇಂದು ಸಿಂಗಪೂರ್ ವನಸಿರಿಯ ಮಧ್ಯೆ ಕಂಗೊಳಿಸುವ ನಾಡಾಗಿ ‘ಉದ್ಯಾನ ನಗರಿ’ ಎಂದೇ ಹೆಸರಾಗಿ, ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಎಲ್ಲೆಲ್ಲಿಯೂ ಹಚ್ಚ ಹಸಿರಿನಿಂದ ಕಂಗೊಳಿಸುವ ಪರಿಸರ, ಸ್ವಚ್ಛತೆಯನ್ನು ಪಠಿಸುವ ನಾಡು ಹಾಗೂ ಶಿಸ್ತು ಮತ್ತು ಸುರಕ್ಷತೆಗೆ ಆದ್ಯತೆ ನೀಡಿರುವ ರಾಷ್ಟ್ರವಿದು. ಇಲ್ಲಿ ನೆಲಸಿರುವ ವಿವಿಧ ಜನಾಂಗಗಳು – ಚೀನೀಯರು, ಮಲಯ್, ಹಿಂದೂಗಳು ಹಾಗೂ ಯುರೇಷಿಯನ್ನರು ಸಾಮರಸ್ಯದಿಂದ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ನಾಡು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿದ್ದು, ಸರ್ವ ಧರ್ಮಗಳನ್ನೂ ಸಮಾನವಾಗಿ ಕಾಣುವ ಸಂಸ್ಕೃತಿ, ಸರ್ವರನ್ನೂ ಸಮಾನವಾಗಿ ಗೌರವಿಸುವ ಸಮಾಜವನ್ನೂ ಕಟ್ಟಿಕೊಂಡಿದೆ. ಈ ನಾಡಿನ ರಾಷ್ಟ್ರೀಯ ಅಧಿಕೃತ ಭಾಷೆಗಳು ನಾಲ್ಕು – ಇಂಗ್ಲಿಷ್, ಮ್ಯಾಂಡರಿನ್, ಮಲಯ್ ಹಾಗೂ ತಮಿಳು. ಆದರೆ ಹೆಚ್ಚು ಜನ ಮಾತಾಡುವುದು ಇಂಗ್ಲಿಷ್‌ನಲ್ಲಿಯೇ, ಹಾಗಾಗಿ ಇದನ್ನು ಸಿಂಗ್ಲಿಷ್ ಎಂದೇ ಕರೆಯುತ್ತಾರೆ. ಇಲ್ಲಿ ಕಾಣುವ ಕೌಟುಂಬಿಕ ಸಾಮರಸ್ಯ, ಮಾನವೀಯ ಮೌಲ್ಯಗಳು ಹಾಗೂ ರಾಷ್ಟ್ರಭಕ್ತಿ ಅನುಕರಣೀಯ.’ ಈ ಪುಟ್ಟ ರಾಷ್ಟ್ರದ ಪ್ರಗತಿಯನ್ನು ಆಲಿಸುತ್ತಾ ನಮ್ಮ ಹೋಟೆಲ್ ತಲುಪಿದೆವು. ಹೊಟ್ಟೆ ತಾಳ ಹಾಕುತ್ತಿತ್ತು, ಊಟ ಮಾಡಲು ‘ಲಿಟಲ್ ಇಂಡಿಯಾ’ ಎಂದೇ ಕರೆಯಲ್ಪಡುವ ಸ್ಥಳದಲ್ಲಿರುವ ಶರವಣ ಹೋಟೆಲ್‌ಗೆ ದೌಡಾಯಿಸಿದೆವು. ದೂರದ ನಾಡಿನಲ್ಲಿ ನಮ್ಮ ತಮಿಳು ನಾಡಿನ ಸೊಗಡಿನ ಭೋಜನವನ್ನು ಸವಿದು ತೃಪ್ತರಾದೆವು.
ಈ ರಾಷ್ಟ್ರದ ಆಕರ್ಷಣೀಯ ಪ್ರವಾಸಿ ತಾಣಗಳನ್ನು ಕಾಣಲು ಎಲ್ಲರೂ ಕಾತರರಾಗಿದ್ದೆವು. ನಮ್ಮ ವಾಹನದಲ್ಲಿ ಕುಳಿತು ಹೊರಟವರಿಗೆ ಕಂಡದ್ದು ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ಹಸಿರು ಹೊದ್ದ ಗಿಡ ಮರಗಳು, ಹಸಿರಿನ ಮಧ್ಯೆ ಎದ್ದು ನಿಂತಿರುವ ಬಹುಮಹಡೀ ಕಟ್ಟಡಗಳು. ಸಿಂಗಪೂರ್‌ನ ರಾಷ್ಟ್ರೀಯ ಲಾಂಛನ ‘ಮರ್‌ಲಯನ್’ ಹಲವೆಡೆ ರಾರಾಜಿಸುತ್ತಿತ್ತು, ಮೀನಿನ ಆಕಾರದ ಒಡಲು ಹಾಗೂ ಸಿಂಹದ ಶಿರವನ್ನು ಹೊಂದಿರುವ ಈ ಲಾಂಛನದ ಅರ್ಥ ಹೀಗಿದೆ – ಹಿಂದಿನಿಂದಲೂ ಇಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮವಾಗಿದ್ದುದರಿಂದ ಮೀನಿನ ಆಕಾರದ ಒಡಲು, ಹಾಗೂ ತನ್ನ ನಾಮಧೇಯವಾದ ಸಿಂಗಾಪುರದ ಸಂಕೇತವಾದ ‘ಸಿಂಹದ ಶಿರ’. ಈ ನಾಡಿನ ಪೌರಾಣಿಕ ರೂಪಕವು ತನ್ನ ಮೂಲ ಕಸುಬಾದ ಮೀನುಗಾರಿಕೆಯನ್ನೂ ಬಿಂಬಿಸುತ್ತಾ ಸಿಂಹದ ಶೌರ್ಯದ ಪ್ರತೀಕವಾಗಿ ನಿಂತಿದೆ. ಮೀನುಗಾರಿಕೆಯಲ್ಲಿ ನಿರತವಾಗಿದ್ದ ಒಂದು ಪುಟ್ಟ ರಾಷ್ಟ್ರ ಇಂದು ಜಗತ್ತಿಗೇ ಸವಾಲು ಹಾಕುವಂತೆ ಅತ್ಯಾಧುನಿಕ ವಾಣಿಜ್ಯ ಕೇಂದ್ರವಾಗಿರುವುದನ್ನೂ ಈ ಲಾಂಛನ ಪ್ರತಿಬಿಂಬಿಸುತ್ತಿದೆ.
ಸಿಂಗಪೂರ್‌ನಲ್ಲಿ ಪಾರಂಪರಿಕ ಮೌಲ್ಯಗಳೊಂದಿಗೆ ಮೇಳೈಸಿರುವುದು ಅತ್ಯಾಧುನಿಕ ತಂತ್ರಜ್ಞಾನ, ಒಂದೆಡೆ ಸಾಂಪ್ರದಾಯಿಕ ಮಾರುಕಟ್ಟೆಗಳಿದ್ದರೆ ಇನ್ನೊಂದೆಡೆ ವೈಭವೋಪೇತ ಮಾಲ್‌ಗಳೂ ರಾರಾಜಿಸುತ್ತಿವೆ. ಒಂದೆಡೆ ಜಾಗತಿಕ ಕೇಂದ್ರಗಳಿದ್ದರೆ ಮತ್ತೊಂದೆಡೆ ಸ್ಥಳೀಯ ಪರಿಸರವನ್ನು ಬಿಂಬಿಸುವ ಸಂಸ್ಥೆಗಳೂ ಇವೆ. ಇಂದು ಸಿಂಗಪೂರ್ ‘ಸ್ಮಾರ್ಟ್ ನೇಷನ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮಗೆ ಮೊದಲು ಕಂಡದ್ದು ‘ಸಿಂಗಪೂರ್ ಫ್ಲೈಯರ್ ’. ಇದು 165 ಮೀಟರ್ ಎತ್ತರವಿರುವ ಜಯಂಟ್ ವೀಲ್. ಇಲ್ಲಿ 28 ಹವಾನಿಯಂತ್ರಿತ ಕೇಬಲ್ ಕಾರ್‌ಗಳಿದ್ದು, ಪ್ರತಿಯೊಂದರಲ್ಲೂ 28 ಜನರು ಕೂರಬಹುದಾಗಿದೆ. ನಿಧಾನವಾಗಿ ಚಲಿಸುವ ಈ ಫ್ಲೈಯರಿನಿಂದ ಇಡೀ ನಾಡನ್ನು ಕಣ್ತುಂಬಿ ಕೊಳ್ಳಬಹುದು, ಜೊತೆಗೇ ನೆರೆಯ ರಾಷ್ಟ್ರಗಳಾದ ಮಲೇಶಿಯಾ ಹಾಗೂ ಇಂಡೋನೇಶಿಯಾಗಳ ಪಕ್ಷಿ ನೋಟವೂ ಲಭ್ಯ. ಒಂದು ಸುತ್ತು ಬರಲು 30 ನಿಮಿಷ ತೆಗೆದುಕೊಳ್ಳುವ ಈ ಫ್ಲೈಯರ್ ನಲ್ಲಿ ಕುಳಿತು ಶಾಂಪೇನ್ ಹೀರುತ್ತಾ ಭೋಜನವನ್ನು ಸವಿಯುವ ಸೌಲಭ್ಯವೂ ಇದೆ.
ಸಿಂಗಪೂರ್‌ನಲ್ಲಿ ನಾವು ನೋಡಲಿರುವ ಪ್ರವಾಸಿ ತಾಣಗಳ ಬಗ್ಗೆ ಹೆಬ್ಬಾರ್‌ರವರು ಸಂಕ್ಷಿಪ್ತವಾಗಿ ಮಾಹಿತಿಯನ್ನೂ ನೀಡಿದರು- ‘ಗಾರ್ಡನ್ ಬೈ ದ ಬೆ’, ‘ಮರೀನಾ ಬೆ ಸ್ಯಾಂಡ್ಸ್’, ‘ಸೆಂಟೋಸಾ ದ್ವೀಪ’, ‘ಯುನಿವರ್ಸಲ್ ಸ್ಟುಡಿಯೋ’, ‘ಬಟಾನಿಕಲ್ ಗಾರ್ಡನ್’ ಮತ್ತು ‘ಸಿಂಗಪೂರ್ ಝೂ’. ಅಂದು ನಾವು ಹೊರಟಿದ್ದು ‘ಗಾರ್ಡನ್ ಬೈ ದ ಬೆ’, ಸಾಗರದ ಕೊಲ್ಲಿಯ ಬಳಿ ನಿರ್ಮಿಸಲಾಗಿರುವ ಹೂತೋಟ. ಸುಮರು 250 ಎಕರೆ ವಿಸ್ತೀರ್ಣದಲ್ಲಿ ರೂಪುಗೊಂಡಿರುವ ಈ ಅದ್ಭುತವಾದ ತೋಟದಲ್ಲಿ ಏನುಂಟು ಏನಿಲ್ಲ ಎಂಬುದುನ್ನು ನಾವೆಲ್ಲಾ ಚರ್ಚಿಸಿದೆವು. ವಿಶ್ವದ ಮೂಲೆಮೂಲೆಗಳಿಂದ ಆಯ್ದು ತಂದ ಸುಮಾರು 2,20,000 ಸಾವಿರ ಸಸ್ಯಗಳು ನಸುನಗುತ್ತಾ ನಮ್ಮನ್ನು ಸ್ವಾಗತಿಸಿದ್ದವು. ಮರಳುಗಾಡಿನಲ್ಲಿ ಬೆಳೆಯುವ ಹಲವು ಬಗೆಯ ಕ್ಯಾಕ್ಟಸ್‌ಗಳು, ಉಷ್ಣವಲಯದಲ್ಲಿ ಬೆಳೆಯುವ ಸುಗಂಧಭರಿತ ಗಿಡ ಬಳ್ಳಿಗಳು, ದಟ್ಟವಾದ ಅರಣ್ಯಗಳಲ್ಲಿ ಹರಡಿರುವ ಕೀಟಭಕ್ಷಕ ಸಸ್ಯಗಳೂ ಇದ್ದವು. ತೋಟಗಾರಿಕೆಯ ಕೌಶಲ್ಯಪೂರ್ಣವಾದ ಈ ತೋಟದ ರಚನೆ ಅತ್ಯದ್ಭುತವಾಗಿದೆ. ಪ್ರವಾಸಿಗರ ಹರ್ಷೋದ್ಗಾರ ಎಲ್ಲೆಲ್ಲಿಯೂ ಪ್ರತಿಧ್ವನಿಸುತ್ತಿತ್ತು. ನಾಲ್ಕಾರು ಥೀಮ್ ಪಾರ್ಕ್ ಗಳಿದ್ದು ಸಿಂಗಪೂರ್‌ನ ಇತಿಹಾಸವನ್ನು ಬಿಂಬಿಸುತ್ತಿದ್ದವು. ಒಂದೆಡೆ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಸರೋವರಗಳನ್ನು ನಿರ್ಮಿಸಲಾಗಿದೆ. ತೋಟದಲ್ಲಿ ಉತ್ಪಾದನೆಯಾದ ಕಸದಿಂದಲೂ ವಿದ್ಯುಚ್ಛಕ್ತಿಯನ್ನು ತಯಾರಿಸುವ ನೈಪುಣ್ಯತೆ ಇವರದು.
ಮುಂದೆ ಇದ್ದ ‘ಕ್ಲೌಡ್ ಫಾರೆಸ್ಟ್’ ನಮ್ಮನ್ನು ಒಂದು ಮಾಯಾಲೋಕಕ್ಕೆ ಕರೆದೊಯ್ದಿತ್ತು. ಎತ್ತರವಾದ ಬಂಡೆಗಲ್ಲುಗಳು, ಮೇಲಿನಿಂದ ಧುಮ್ಮಿಕ್ಕುತ್ತಿದ್ದ ಜಲಪಾತ, ಮಧ್ಯೆ ವೈವಿಧ್ಯಮಯವಾದ ಸಸ್ಯಗಳನ್ನು ಬೆಳೆಸಿದ್ದ ಬೃಹತ್ತಾದ ಗಾಜಿನ ಮನೆ. ಇವುಗಳ ಮಧ್ಯೆ ಜೀವಂತ ಡೈನಾಸರ್‌ಗಳಂತೆ ಭಾಸವಾಗುತ್ತಿದ್ದ ಹಲವು ಬಗೆಯ ಡೈನಾಸರ್‌ಗಳ ಆಕೃತಿಗಳು ಅತ್ತಿಂದಿತ್ತ ಇತ್ತಿಂದತ್ತ ತಲೆಯಾಡಿಸುತ್ತಾ, ದೊಡ್ಡದಾಗಿ ಬಾಯಿ ತೆಗೆದು ಘರ್ಜಿಸುತ್ತಾ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ್ದವು. ಈ ಮಾನವ ನಿರ್ಮಿತ ಕೃತಕ ಅರಣ್ಯದಲ್ಲಿ ದೊಡ್ಡದಾದ ಚಪ್ಪರಗಳನ್ನು ಹಾಕಿ, ಬಿಸಿಯಾದ ಗಾಳಿಯನ್ನು ತಂಪಾಗಿಸಲು, ಸೂರ್ಯನ ಬಿಸಿಲಿನಿಂದ ಉತ್ಪಾದಿಸಿದ ವಿದ್ಯುಚ್ಛಕ್ತಿಯನ್ನು ಬಳಸಿರುವುದನ್ನು ಕಂಡು ವಿಸ್ಮಯವಾಯಿತು. ಈ ಪರಿಸರ ಸ್ನೇಹಿ ಉದ್ಯಾನವನ ಪ್ರವಾಸಿಗರಿಗೆ ಮನರಂಜನೆಯನ್ನಷ್ಟೇ ಅಲ್ಲದೆ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಬೇಕಾದ ತಂತ್ರಜ್ಞಾನವನ್ನೂ ನೀಡುತ್ತಿದೆ.
ಈ ಉದ್ಯಾನವನದಲ್ಲಿ ನಮಗೆಲ್ಲಾ ಬೆರಗು ಹುಟ್ಟಿಸಿದ್ದ ಮತ್ತೊಂದು ಅದ್ಭುತ ‘ಸೂಪರ್ ಟ್ರೀಸ್’. ಎತ್ತರವಾದ ಮರದ ಆಕೃತಿಯುದ್ದಕ್ಕೂ ಬೆಳೆಸಿದ ವರ್ಟಿಕಲ್ ಗಾರ್ಡನ್. ಪುಟ್ಟ ಪುಟ್ಟ ಹೂಕುಂಡಗಳನ್ನು ಜೋಡಿಸಿದ್ದ ಈ ಲೋಹದ ಆಕೃತಿ ಒಂದು ದೊಡ್ಡ ವೃಕ್ಷದಂತೆಯೇ ಗೋಚರಿಸುತ್ತಿತ್ತು. ಇಲ್ಲಿ ಫರ್ನ್ ಸಸ್ಯಗಳು, ಬಗೆ ಬಗೆಯ ಹೂಗಿಡಗಳು, ಆರ್ಕಿಡ್ಸ್ ಹೂ ಬಳ್ಳಿಗಳು ಬೆಳೆಸಲಾಗಿದ್ದು ಲೋಹದ ವೃಕ್ಷವು ಆಕರ್ಷಣೀಯವಾಗಿತ್ತು. ಈ ಸೂಪರ್ ಟ್ರೀಸ್‌ನಲ್ಲಿ ಆಧುನಿಕ ತಂತ್ರಜ್ಞಾನದ ಕೈಚಳಕವೂ ಸೇರಿತ್ತು, ಈ ಲೋಹದ ಆಕೃತಿಯ ತುಂಬೆಲ್ಲಾ ಸೋಲಾರ್ ಪ್ಯಾನೆಲ್‌ಗಳನ್ನು ಜೋಡಿಸಲಾಗಿತ್ತು. ಈ ಪ್ಯಾನಲ್‌ಗಳಿಂದ ಉತ್ಪಾದನೆಯಾದ ವಿದ್ಯತ್‌ಚ್ಛಕ್ತಿಯಿಂದ ಸುಂದರವಾದ ‘ಲೈಟ್ ಶೋ’ವನ್ನು ಆಯೋಜಿಸಲಾಗಿತ್ತು. ನಾವೆಲ್ಲಾ ‘ಲೈಟ್ ಶೋ’ ನೋಡಲು ಕಾಯುತ್ತಾ ಕುಳಿತೆವು. ಇದ್ದಕ್ಕಿದಂತೆಯೇ ಮಳೆ ಸುರಿಯಲಾರಂಭಿಸಿತು, ಮಧ್ಯಾಹ್ನ ಉರಿ ಬಿಸಿಲಿನಿಂದ ಬಳಲಿದ್ದ ಪ್ರವಾಸಿಗರು ಈಗ ಮಳೆಯ ಸಿಂಚನದಿಂದ ಉಲ್ಲಸಿತರಾದರು. ಇದು ಸಿಂಗಪೂರ್‌ನ ಹವಾಮಾನ ವೈಚಿತ್ರ, ವರ್ಷವಿಡೀ ಮಳೆ ಸುರಿಯುವ ಈ ನಾಡು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವುದು. ಮಳೆ ಬಂದುದರಿಂದ ಒಂದು ಶೋ ರದ್ದಾಗಿತ್ತು, ಹಾಗಾಗಿ ಜನರ ಸಂಖ್ಯೆಯೂ ಹೆಚ್ಚಾಗಿತ್ತು. 7.30 ಗಂಟೆಗೆ ಸರಿಯಾಗಿ ಲೈಟ್ ಶೋ ಆರಂಭವಾಯಿತು. ಇಂಪಾದ ಸಂಗೀತದೊಂದಿಗೆ ರಂಗುರಂಗಿನ ಬೆಳಕಿನ ಚಿತ್ತಾರಗಳು ಈ ಸೂಪರ್ ಟ್ರೀಸ್‌ನಲ್ಲಿ ಮೂಡುತ್ತಿದ್ದವು. ಇಲ್ಲಿ ಹದಿನೆಂಟು ವೃಕ್ಷಗಳು ಇದ್ದು ಇಪ್ಪತೈದು ಮೀಟರ್ ಎತ್ತರದಿಂದ ಐವತ್ತು ಮೀಟರ್ ಎತ್ತರವಿದೆ. ಐವತ್ತು ಮೀಟರ್ ಎತ್ತರದ ವೃಕ್ಷಗಳ ಮಧ್ಯೆ ಸ್ಕೈವಾಕ್ ಗಾಗಿ ಒಂದು ಸೇತುವೆಯನ್ನು ಹೆಣೆಯಲಾಗಿದ್ದು, ಅಲ್ಲಿಂದ ಇಡೀ ಉದ್ಯಾನವನದ ವಿಹಂಗಮ ನೋಟವನ್ನು ಸವಿಯಬಹುದು. ಈ ನಾಡು ಕಂಡ ಮಹಾನ್ ಚೇತನ ‘ಲೀ’ಯವರ ಕನಸಿನ ಉದ್ಯಾನವಾಗಿದ್ದು, ಸಿಂಗಪೂರ್‌ನ್ನು ಹಸಿರಿನಿಂದ ಕಂಗೊಳಿಸುವ ‘ತೋಟದ ಮಧ್ಯೆ ಇರುವ ನಗರವೆಂದು’ ಬಿಂಬಿಸಲಾಗಿದೆ.
ಸುಂದರವಾಗಿ ರಚಿಸಲ್ಪಟ್ಟಿರುವ ಉದ್ಯಾನವನವನ್ನು ನೋಡುತ್ತಾ ಮುಂದೆ ಸಾಗಿದವರಿಗೆ ಕಾಲ ಸರಿದದ್ದೇ ತಿಳಿಯಲಿಲ್ಲ. ಪಾರ್ಕಿನಲ್ಲಿ ನಡೆದೂ ನಡೆದೂ ಕಾಲುಗಳು ಪದ ಹೇಳುತ್ತಿದ್ದರೂ, ಇನ್ನೂ ನೋಡುವ ಆಸೆ, ಅವರ ತಾಂತ್ರ‍್ರಿಕ ಕೌಶಲದ ಜೊತೆ ಜೊತೆಗೇ ಕಂಗೊಳಿಸುವ ವನಸಿರಿ ಸಿಂಗಪೂರ್‌ಗೆ ಕಿರೀಟವಿಟ್ಟಂತೆ ತೋರುತ್ತಿದ್ದವು. ನಮ್ಮ ತಂಡದ ನಾಯಕರು ನಮ್ಮೆಲ್ಲರನ್ನೂ ಒಟ್ಟುಗೂಡಿಸಿ ಹೊಟೇಲ್ ಆನಂದ ಭವನಕ್ಕೆ ಕರೆದೊಯ್ದರು. ಎಲ್ಲರೂ ‘ಗಾರ್ಡನ್ ಬೈ ದ ಬೆ’ ಯನ್ನು ಹಾಡಿ ಹೊಗಳುತ್ತಾ ಊಟ ಮಾಡಿದರು. ಪ್ರಕೃತಿಯೊಡನೆ ಹಾಸುಹೊಕ್ಕಾಗಿರುವ ನಗರಾಭಿವೃದ್ಧಿ, ಸಸ್ಯ ಸಂಪತ್ತಿನ ಮಧ್ಯೆ ಕಂಗೊಳಿಸುವ ಅತ್ಯಾಧುನಿಕ ನಗರ ನಮಗೆಲ್ಲಾ ಮೋಡಿ ಹಾಕಿತ್ತು. ಸ್ವಚ್ಛತೆಗೇ ಇರುವ ಆದ್ಯತೆ, ಶಿಸ್ತನ್ನು ಮೈಗೂಡಿಸಿಕೊಂಡಿರುವ ಜನತೆಯನ್ನು ಅಚ್ಚರಿಯಿಂದ ಕಣ್ಣರಳಿಸಿ ನೋಡಿದೆವು. ಅಭಿವೃದ್ಧಿ ಪಥದತ್ತ ಸಾಗುವಾಗ ಪರಿಸರ ಸಂರಕ್ಷಣೆಯನ್ನೂ ಕಾಳಜಿಯಿಂದ ನಿರ್ವಹಿಸುತ್ತಿರುವ ಸಿಂಗಪೂರ್‌ನ ಸರ್ಕಾರಕ್ಕೆ ನಮ್ಮ ಹೃದಯಪೂರ್ವಕ ಅಭಿನಂದನೆಗಳನ್ನು ಅರ್ಪಿಸಿದೆವು.
(ಮುಂದುವರೆಯುವುದು)

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ


