ಬೊಗಸೆಬಿಂಬ

ಮೌನವೇ ಮಹಾಕಾವ್ಯ !

Share Button

(ಶ್ರೀ ರಮಣರ ಸರಳ ವಿರಳ ಪಥವನ್ನು ಕುರಿತು)

ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಮಾತಿನ ಬೋಧನೆ ಹಲವರದು, ಇನ್ನು ಹಲವರದು ಆರ್ಷೇಯ ಪರಂಪರೆಯ ಸತ್ಕೃತಿಗಳ ಮಾರ್ಗ. ಆದರೆ ಕೆಲವೇ ಮಹಾತ್ಮರದು ತಮ್ಮ ಬದುಕನ್ನೇ ಉಪದೇಶವನ್ನಾಗಿ ರೂಪಿಸುವಂಥವರು. ಅಂತಹ ಅಪೂರ್ವ ಋಷಿಗಳಲ್ಲಿ ಶ್ರೀ ರಮಣ ಮಹರ್ಷಿಗಳದು ಮೊದಲ ಶ್ರೇಣಿ. ಅವರ ಜೀವನವು ನದಿಯಂತೆ ನಿಶ್ಶಬ್ದವಾಗಿ ಹರಿದರೂ, ಅದರ ಆಳದಲ್ಲಿ ಅಸೀಮ ಜ್ಞಾನಸಂಪನ್ನತೆಯು ಅಡಗಿತ್ತು. ತಮಿಳುನಾಡಿನ ಸಣ್ಣ ಊರಾದ ತಿರುಚುಳಿಯಲ್ಲಿ 1879ರಲ್ಲಿ ಜನಿಸಿದ ವೆಂಕಟರಮಣ ಎಂಬುವವ ಸಾಮಾನ್ಯ ಬಾಲಕ. ಆದರೆ ಅವನಿಗಾಗಿ ಒಂದು ಮಹಾನ್ ತಿರುವು ಕಾಯುತ್ತಿತ್ತು. ಹದಿನಾರನೇ ವಯಸ್ಸಿನ ಆ ಮೌನ ಕ್ಷಣದಲ್ಲಿ, ಮರಣದ ಅನುಭವವು ಅವನನ್ನು ಆವರಿಸಿತು. ‘ಈ ದೇಹವು ನಶಿಸಿದರೆ, ನಾನು ಯಾರು?’ ಎಂಬ ಪ್ರಶ್ನೆ ಅವನ ಹೃದಯಾಂತರಾಳದಲಿ ಮಿಂಚಿನಂತೆ ಹೊಳೆಯಿತು. ಆ ಕ್ಷಣದಿಂದಲೇ ಅವನು ಹೊರಗಿನ ಲೋಕದಿಂದ ಒಳಗಿನ ಆತ್ಮದತ್ತ ಅಂದರೆ ಅಂತರ್ಯಾತ್ರೆ ಆರಂಭಿಸಿದ. ಈ ಆಂತರಿಕ ಕರೆಗೆ ಸ್ಪಂದಿಸಿ, ಅವನು ಅರುಣಾಚಲ ಪರ್ವತಕ್ಕೆ ಬಂದನು. ಆ ಪರ್ವತವು ಅವನಿಗೆ ಕೇವಲ ಭೌಗೋಳಿಕ ಸ್ಥಳವಲ್ಲ, ಅದು ಆತ್ಮಸಾಕ್ಷಾತ್ಕಾರದ ನಿಶ್ಚಲ ಸಾನ್ನಿಧ್ಯವಾಗಿತ್ತು. ಗುಹೆಗಳ ಮೌನದಲ್ಲಿ ಅವನು ತನ್ನನ್ನು ತಾನೇ ಅರಿಯಲು ತೊಡಗಿದ. ಮಾತುಗಳು ಅಲ್ಲಿ ಅನಾವಶ್ಯಕವಾಗಿದ್ದವು; ಮೌನವೇ ಅವನ ಭಾಷೆಯಾಗಿತ್ತು. ಮೌನವನ್ನು ಆಧ್ಯಾತ್ಮಿಕ ಪರಿಭಾಷೆಯನ್ನಾಗಿಸಿದ ಸಾಧನೆ ಈತನದಾಯಿತು.

ಕಾಲಕ್ರಮೇಣ, ಅವನ ಸುತ್ತಲೂ ಜನರು ಸೇರುತ್ತಿದ್ದರು. ಅವರು ಉಪನ್ಯಾಸಗಳನ್ನು ಕೇಳಲು ಬಂದವರಲ್ಲ; ಶಾಂತಿಯನ್ನು ಅನುಭವಿಸಲು ಬಂದವರು. ಮಹರ್ಷಿಗಳ ಸಾನ್ನಿಧ್ಯದಲ್ಲಿ ಕುಳಿತವರ ಮನಸ್ಸುಗಳು ನಿಧಾನವಾಗಿ ಶಾಂತವಾಗುತ್ತವೆ. ಅವರ ದೃಷ್ಟಿ, ಅವರ ಮೌನ, ಅವರ ಸಾನ್ನಿಧ್ಯ—ಇವೆಲ್ಲವೂ ಒಟ್ಟಾಗಿ ಒಂದು ಮಹಾನ್ ಮೌನದ ಉಪದೇಶವಾಗುತ್ತಿತ್ತು. ನಮ್ಮ ವಚನಕಾರರಾದ ಶಿವಶರಣರಂತೆ, ಅನುಭಾವಕ್ಕೆ ಆದ್ಯತೆ ನೀಡಿದ್ದ ರಮಣರು, ತಮ್ಮ ದೇಹವನ್ನು ನಿರ್ಲಕ್ಷಿಸಿ, ತಪಸ್ಸನ್ನಾಚರಿಸಿದವರು. ರಮಣ ಮಹರ್ಷಿಗಳ ಉಪದೇಶದ ಹೃದಯ ‘ನಾನು ಯಾರು?’ ಎಂಬ ಪ್ರಶ್ನೆಯಲ್ಲಿತ್ತು. ಈ ಪ್ರಶ್ನೆಯು ಬದುಕಿನ ಅಂತರಂಗವನ್ನು ಅನಾವರಣಗೊಳಿಸುವ ಕೀಲಿಕೈ. ಮನಸ್ಸು ಹೊರಗಿನ ಲೋಕದಲ್ಲಿ ತೇಲುತ್ತಿದ್ದರೆ, ಅದು ಅಶಾಂತವಾಗುತ್ತದೆ. ಆದರೆ ಅದನ್ನು ತನ್ನ ಮೂಲದತ್ತ ತಿರುಗಿಸಿದಾಗ, ಅದು ಶಾಂತಿಯ ಸಮುದ್ರದಲ್ಲಿ ಲೀನವಾಗುತ್ತದೆ. ಅವರು ಹೇಳಿದಂತೆ, ಅಹಂಕಾರವೇ ಎಲ್ಲಾ ಬಂಧನಗಳ ಮೂಲ. ‘ನಾನು’ ಎಂಬ ಭಾವನೆಗೆ ಅಂಟಿಕೊಂಡಿರುವ ಅಹಂಕಾರವು ಮನುಷ್ಯನನ್ನು ದುಃಖದ ಚಕ್ರದಲ್ಲಿ ಬಂಧಿಸುತ್ತದೆ. ಈ ‘ನಾನತ್ವ’ ವನ್ನು ಪರಿಶೀಲಿಸಿದಾಗ, ಅದು ಕೇವಲ ಭ್ರಮೆ ಎಂಬುದು ಗೋಚರಿಸುತ್ತದೆ. ಆಗ ಉಳಿಯುವುದು ಶುದ್ಧ ಆತ್ಮಸ್ವರೂಪ—ಅದು ನಿಶ್ಶಬ್ದ, ಅನಂತ ಮತ್ತು ಆನಂದಮಯ. ಅವರ ಜೀವನವು ಒಂದು ಕಾವ್ಯದಂತೆ ಸರಳವಾಗಿತ್ತು. ಅವರು ಮಹಾನ್ ಗುರುವಾಗಿದ್ದರೂ, ತಮ್ಮನ್ನು ಎಂದಿಗೂ ವಿಭಿನ್ನವಾಗಿ ನೋಡಲಿಲ್ಲ. ಭಕ್ತರೊಂದಿಗೆ ಸರಳವಾಗಿ ನಡೆದುಕೊಂಡರು, ಅವರೊಂದಿಗೆ ಊಟ ಮಾಡಿದರು, ಆಶ್ರಮದ ಕೆಲಸಗಳಲ್ಲಿ ಪಾಲ್ಗೊಂಡರು. ಈ ಸರಳತೆಯಲ್ಲೇ ಅವರ ಮಹತ್ವ ಅಡಗಿತ್ತು. ಎಂಥ ಜ್ಞಾನಿಗಳನ್ನೂ ಈ ನಾನತ್ವದ ಅಹಂ ಕಾಡಿಸದೇ ಬಿಟ್ಟಿಲ್ಲ, ನಮ್ಮ ವೇದ ಪುರಾಣದ ಕತೆಗಳಲ್ಲಿ ಬರುವ ಹಲವರು ಈ ಕೆಟಗರಿಯವರು. ಭಕ್ತಿಮಾರ್ಗವು ಅಹಮನ್ನು ನಿರಸನಗೊಳಿಸಿದರೆ, ಜ್ಞಾನಮಾರ್ಗವು ಅಹಮನ್ನು ವಿಜೃಂಭಿಸಿ ಬಿಡುತ್ತದೆ. ಅಹಮಿನಿಂದಲೇ ಇಂಥ ಜ್ಞಾನಿಗಳು ಅಧಃಪತನ ಹೊಂದುತ್ತಾರೆ. ‘ಎಲ್ಲವನೂ ತಿಳಿದೆ’ ಎಂಬುದೇ ಜ್ಞಾನದ ಅಹಂಕಾರ. ಆದರೆ ರಮಣರದು ವಿಭಿನ್ನ ಮಾರ್ಗ. ಇದೇ ಅಹಮನ್ನು ಆತ್ಮಶೋಧನೆಗೆ ಬಳಸಬಹುದೆಂಬುದನ್ನು ತೋರಿಸಿಕೊಟ್ಟ ಮಹಾತ್ಮರು. ಈ ನಾನು ಎಂಬುದು ಎಲ್ಲಿಂದ ಬಂದಿದೆ? ಅದರ ಮೂಲವಾವುದು? ಎಂಬುದರ ಪರೀಕ್ಷೆಯು ಅಂತಿಮವಾಗಿ ಬ್ರಹ್ಮವನ್ನು ಸಾಕ್ಷಾತ್ಕರಿಸಿ ಕೊಡುತ್ತದೆಂದು ಬೋಧಿಸಿದವರು. ರಾಮಕೃಷ್ಣ ಪರಮಹಂಸರ ನಂತರ ಕಾಣಿಸಿಕೊಂಡ ನಿಜದ ಅವಧೂತರಾಗಿ ರಮಣರು ತಮ್ಮ ವಿಶಿಷ್ಟವಾದ ಮೌನದ ಮಾತಿನಿಂದ ಪ್ರಪಂಚದಾದ್ಯಂತ ಅನುಯಾಯಿಗಳನ್ನು ಪಡೆದರು. ಭಾರತವು ಪುಣ್ಯಭೂಮಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿತು.

‘ರಮಣರ ಸನ್ನಿಧಿಯಲ್ಲಿ’ ಎಂಬ ಕೃತಿ, ಈ ಮೌನ ಮಹರ್ಷಿಯ ಜೀವನದ ಸುಗಂಧವನ್ನು ನಮ್ಮೊಳಗೆ ಹರಡುತ್ತದೆ. ಭಕ್ತರು ಅನುಭವಿಸಿದ ಚಿಕ್ಕಪುಟ್ಟ ಆದರೆ ಮಹತ್ತಾದ ಘಟನೆಗಳು, ಸಂಭಾಷಣೆಗಳು, ಮೌನದ ಕ್ಷಣಗಳು—ಇವೆಲ್ಲವೂ ಈ ಕೃತಿಯಲ್ಲಿ ಜೀವಂತವಾಗಿವೆ. ಮಹರ್ಷಿಗಳು ದೊಡ್ಡ ಮಾತುಗಳಿಲ್ಲದೆ, ಪುಟ್ಟ ಸೂಚನೆಗಳ ಮೂಲಕವೇ ಜೀವನದ ಮಹತ್ವವನ್ನು ಬೋಧಿಸಿದುದು ಇಲ್ಲಿ ಸ್ಪಷ್ಟವಾಗುತ್ತದೆ. ಅವರ ಕುರಿತು ಅನೇಕ ಗ್ರಂಥಗಳು ರಚಿತವಾಗಿವೆ. ಕನ್ನಡದಲ್ಲಿಯೂ, ಇಂಗ್ಲಿಷಿಲ್ಲಿಯೂ ಅವರ ಉಪದೇಶಗಳು ಹರಡಿವೆ. Who Am I?, Talks with Sri Ramana Maharshi, Be As You Are ಮುಂತಾದ ಕೃತಿಗಳು ಅವರ ಜ್ಞಾನವನ್ನು ವಿಶ್ವದಾದ್ಯಂತ ಪರಿಚಯಿಸಿವೆ. ಇವುಗಳಲ್ಲಿ ಒಂದೇ ಸಂದೇಶ ಪುನಃ ಪುನಃ ಕೇಳುತ್ತದೆ—ಸತ್ಯವನ್ನು ಹುಡುಕಬೇಡಿ; ನೀವು ಸ್ವತಃ ಸತ್ಯವೇ ಆಗಿದ್ದೀರಿ. ಇಂದಿನ ವೇಗದ, ಗದ್ದಲದ ಜಗತ್ತಿನಲ್ಲಿ, ರಮಣ ಮಹರ್ಷಿಗಳ ಮೌನ ಸಂದೇಶ ಇನ್ನಷ್ಟು ತುರ್ತಾದುದು. ಅವರು ನಮಗೆ ಹೇಳುವುದೇನೆಂದರೆ: ಶಾಂತಿಯನ್ನು ಹೊರಗೆ ಹುಡುಕಬೇಡಿ; ಅದು ನಿಮ್ಮೊಳಗೇ ಇದೆ. ಅದನ್ನು ಕಂಡುಕೊಳ್ಳಲು, ಕೇವಲ ಒಂದು ಪ್ರಶ್ನೆ ಸಾಕು: ‘ನಾನು ಯಾರು?’ ಈ ಪ್ರಶ್ನೆ ಉತ್ತರವನ್ನು ಬೇಡುವುದಿಲ್ಲ; ಅದು ಅನುಭವವನ್ನು ಉಂಟುಮಾಡುತ್ತದೆ. ಆ ಅನುಭವವೇ ಆತ್ಮಜ್ಞಾನ. ಇದೇ ನಿಜವಾದ ಮುಕ್ತಿ ಅಂದರೆ ಎಲ್ಲದರಿಂದ ಬಿಡುಗಡೆ. ಕನ್ನಡದಲ್ಲಿ ರಮಣರನ್ನು ಕುರಿತ ಪುಸ್ತಕಗಳು: ರಮಣರ ಸನ್ನಿಧಿಯಲ್ಲಿ – ಆಶ್ರಮ ಅನುಭವಗಳ ಸಂಕಲನ, ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ – ಜೀವನ ಮತ್ತು ಉಪದೇಶಗಳ ಪರಿಚಯ ಮತ್ತು ನಾನು ಯಾರು? – ಅವರ ಮೂಲ ಉಪದೇಶದ ಕನ್ನಡ ಅನುವಾದ. ಇಂಗ್ಲಿಷಿನಲ್ಲಿ: ನಾನು ಯಾರು? ಎಂಬುದಿವರ ಆತ್ಮ ವಿಚಾರದ ಮೂಲ ಗ್ರಂಥ, ರಮಣರೊಂದಿಗೆ ಮಾತುಕತೆ ಎಂಬುದು ಭಕ್ತರೊಂದಿಗೆ ನಡೆದ ಸಂಭಾಷಣೆಗಳು, ಹೇಗಿದ್ದೀಯೋ ಹಾಗೇ ಇರು– ಅವರ ಉಪದೇಶಗಳ ಸರಳ ಸಂಗ್ರಹ ಹಾಗೂ ರಮಣರ ಉಪದೇಶ ಸಾರ– ಪ್ರಶ್ನೋತ್ತರ ರೂಪದ ಉಪದೇಶಗಳು. ಆತ್ಮ ವಿಚಾರವೇ ಮೋಕ್ಷದ ಸರಳ ಮಾರ್ಗ, ಮೌನವೇ ಶ್ರೇಷ್ಠ ಉಪದೇಶ, ಮಾತಿಗಿಂತ ಮೌನವೇ ಅಧ್ಯಾತ್ಮಕ್ಕೆ ಕದ, ಇದಕಾಗಿ ಅನುಸರಿಸಬೇಕಾದುದು ಸರಳ ಜೀವನ ಇದೇ ರಮಣರ ಮೂಲೋಪದೇಶ.

ಆದರೆ ಅವರ ಈ ಮಾರ್ಗವನ್ನು ಇತರ ಸಮಕಾಲೀನ ದಾರ್ಶನಿಕರು ವಿಭಿನ್ನ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಾರೆ. ವಿಶೇಷವಾಗಿ ಜಿದ್ದು ಕೃಷ್ಣಮೂರ್ತಿ, ಓಶೋ ರಜನೀಶ್ ಮತ್ತು ಜಗ್ಗಿ ವಾಸುದೇವ್ ಅವರ ಅಭಿಪ್ರಾಯಗಳು ಈ ವಿಷಯದಲ್ಲಿ ಗಮನಾರ್ಹವಾದವು. ಮೊದಲನೆಯದಾಗಿ ಜಿದ್ದು ಕೃಷ್ಣಮೂರ್ತಿಯವರ ದೃಷ್ಟಿಯನ್ನು ಪರಿಶೀಲಿಸಿದರೆ, ಅವರು ಸಂಪೂರ್ಣವಾಗಿ ಸಂಪ್ರದಾಯಾತೀತ ದಾರ್ಶನಿಕರು. ‘ಸತ್ಯವು ಮಾರ್ಗರಹಿತ ಗಮ್ಯ’ ಎಂಬ ಅವರ ನಿಲುವು, ಯಾವುದೇ ಗುರು ಅಥವಾ ವಿಧಾನವನ್ನು ಅನುಸರಿಸುವುದನ್ನು ಪ್ರಶ್ನಿಸುತ್ತದೆ. ಈ ದೃಷ್ಟಿಯಿಂದ ಅವರು ರಮಣ ಮಹರ್ಷಿಗಳನ್ನು ಒಬ್ಬ ಸಾಕ್ಷಾತ್ಕಾರ ಹೊಂದಿದವರು ಎಂದು ಪರಿಗಣಿಸಿದರೂ, ಅವರ ಮಾರ್ಗವನ್ನು ಒಂದು ‘ಸಾಧನಾ ವಿಧಾನ’ವಾಗಿ ಸ್ವೀಕರಿಸುವುದಿಲ್ಲ. ಜಿದ್ದು ಪ್ರಕಾರ, ಯಾವುದೇ ವಿಧಾನವು ಮನಸ್ಸಿನ ನಿರ್ಮಿತಿಯಾಗಿದ್ದು, ಅದು ನಿಜವಾದ ಸ್ವಾತಂತ್ರ‍್ಯಕ್ಕೆ ಅಡ್ಡಿಯಾಗಬಹುದು. ಆದರೆ ಇದರಿಂದ ಅವರು ರಮಣ ಮಹರ್ಷಿಗಳನ್ನು ತಿರಸ್ಕರಿಸುತ್ತಾರೆ ಎಂದರ್ಥವಲ್ಲ. ಬದಲಾಗಿ, ಅವರ ದೃಷ್ಟಿಯಲ್ಲಿ ಆತ್ಮೋನ್ನತಿಯು ಸ್ವತಂತ್ರ ಪರಿಶೀಲನೆಯ ಮೂಲಕವೇ ದೊರೆಯಬೇಕು. ಮಹರ್ಷಿಗಳ ‘ಆತ್ಮ ವಿಚಾರ’ ಮತ್ತು ಕೃಷ್ಣಮೂರ್ತಿಯ ‘ಜಾಗೃತಿ’ ನಡುವೆ ಸೂಕ್ಷ್ಮ ಸಾಮ್ಯವಿದ್ದರೂ, ವಿಧಾನ ಮತ್ತು ದೃಷ್ಟಿಯಲ್ಲಿ ವ್ಯತ್ಯಾಸ ಸ್ಪಷ್ಟವಾಗಿದೆ.

ಇದಕ್ಕೆ ವಿರುದ್ಧವಾಗಿ, ಓಶೋ ರಜನೀಶ್ ಅವರ ದೃಷ್ಟಿಯಲ್ಲಿ ರಮಣರು ಅತ್ಯಂತ ಶುದ್ಧ ಜ್ಞಾನಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಓಶೋ ಅವರು ರಮಣರನ್ನು ‘ಮೌನದ ಬುದ್ಧ’ ಎಂದು ಕರೆದಿದ್ದು, ಅವರ ಸಾನ್ನಿಧ್ಯದಲ್ಲೇ ಜ್ಞಾನ ಹರಡುತ್ತಿತ್ತು ಎಂದು ಹೇಳಿದ್ದಾರೆ. ಅವರ ಪ್ರಕಾರ, ಮಹರ್ಷಿಗಳ ಉಪದೇಶವು ಮಾತಿನ ಮೂಲಕವಲ್ಲ, ಅನುಭವದ ಮೂಲಕ ವ್ಯಕ್ತವಾಗುತ್ತದೆ. ಓಶೋ ಪ್ರಕಾರ ಆತ್ಮ ವಿಚಾರವನ್ನು ಅತ್ಯಂತ ಶಕ್ತಿಯುತ ಧ್ಯಾನ ವಿಧಾನವೆಂದು ಒಪ್ಪಿಕೊಂಡರೂ, ಅದನ್ನು ಎಲ್ಲರೂ ಸುಲಭವಾಗಿ ಅನುಸರಿಸಲು ಸಾಧ್ಯವಿಲ್ಲ ಎಂದು ಸೂಚಿಸುತ್ತಾರೆ. ಅವರ ದೃಷ್ಟಿಯಲ್ಲಿ, ಮಹರ್ಷಿಗಳ ಮಾರ್ಗವು ಅತ್ಯಂತ ಸೂಕ್ಷ್ಮ ದದ್ದು; ಅದು ಆಂತರಿಕವಾಗಿ ಸಿದ್ಧರಾಗಿರುವವರಿಗೆ ಮಾತ್ರ ಸ್ಪಷ್ಟವಾಗುತ್ತದೆ. ಮೂರನೆಯದಾಗಿ ಜಗ್ಗಿ ವಾಸುದೇವ್ (ಸದ್ಗುರು) ಅವರ ದೃಷ್ಟಿಯನ್ನು ಗಮನಿಸಿದರೆ, ಅವರು ಮಹರ್ಷಿಗಳನ್ನು ಅತ್ಯಂತ ಗೌರವದಿಂದ ಉಲ್ಲೇಖಿಸುತ್ತಾರೆ. ಅವರ ತಪಸ್ಸಿನ ತೀವ್ರತೆ, ಮೌನದ ಆಳ ಮತ್ತು ಆತ್ಮಜ್ಞಾನವನ್ನು ಸದ್ಗುರು ಪ್ರಶಂಸಿಸುತ್ತಾರೆ. ನಾನು ಯಾರು? ಎಂಬ ಪ್ರಶ್ನೆಯನ್ನು ಜನಪ್ರಿಯಗೊಳಿಸಿದ ಮಹಾನ್ ಯೋಗಿ ರಮಣರು ಎಂದು ಅವರು ಒಪ್ಪುತ್ತಾರೆ. ಆದರೆ ಸದ್ಗುರು ಇಲ್ಲೊಂದು ಅಂಶವನ್ನು ನೆನಪಿಸುತ್ತಾರೆ. ಅವರ ಪ್ರಕಾರ, ರಮಣ ಮಹರ್ಷಿಗಳ ಮಾರ್ಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ಅದು ನಿಷ್ಕ್ರಿಯತೆಯಾಗಿ ಪರಿಣಮಿಸಬಹುದು. ಆದ್ದರಿಂದ, ಆತ್ಮಜ್ಞಾನಕ್ಕಾಗಿ ಕ್ರಮಬದ್ಧ ಸಾಧನೆ, ಶಿಸ್ತಿನ ಜೀವನ ಮತ್ತು ಮಾರ್ಗದರ್ಶನ ಅಗತ್ಯವೆಂದು ಅವರು ಹೇಳುತ್ತಾರೆ. ಈ ಮೂರು ದೃಷ್ಟಿಕೋನಗಳನ್ನು ಒಟ್ಟಾಗಿ ನೋಡಿದಾಗ, ಕೃಷ್ಣಮೂರ್ತಿಯವರು ಅದನ್ನು ‘ವಿಧಾನವಿಲ್ಲದ ಜಾಗೃತಿ’ಯ ದೃಷ್ಟಿಯಿಂದ ನೋಡುವರು; ಓಶೋ ಅದನ್ನು ‘ಮೌನದ ಜ್ಞಾನ’ವೆಂದು ಕೊಂಡಾಡುವರು; ಸದ್ಗುರು ಅದನ್ನು ‘ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಬೇಕಾದ ಮಾರ್ಗ’ವೆಂದು ವಿವರಿಸುವರು. ಈ ಎಲ್ಲದರ ಮಧ್ಯೆ, ಮಹರ್ಷಿಗಳ ಮೂಲ ಸಂದೇಶ ಮಾತ್ರ ಒಂದೇ—ಸ್ವತಃ ತನ್ನೊಳಗೆ ಪ್ರವೇಶಿಸಿ, ಆತ್ಮವನ್ನು ಅರಿಯುವುದು. ಅಂತಿಮವಾಗಿ, ಈ ತುಲನಾತ್ಮಕ ಅಧ್ಯಯನವು ನಮಗೆ ಒಂದು ಮಹತ್ವದ ಸತ್ಯವನ್ನು ತಿಳಿಸುತ್ತದೆ. ಆಧ್ಯಾತ್ಮಿಕ ಜ್ಞಾನವು ಒಂದೇ ಆಗಿದ್ದರೂ, ಅದನ್ನು ಅನುಭವಿಸುವ ಮತ್ತು ವಿವರಿಸುವ ಮಾರ್ಗಗಳು ವಿಭಿನ್ನವಾಗಿರುತ್ತವೆ. ಇವೆಲ್ಲವೂ ಒಂದೇ ಶಿಖರವನ್ನು ತಲಪುವ ವಿಭಿನ್ನ ಮಾರ್ಗಗಳು.

ರಮಣರದು ಪ್ರಶ್ನೋತ್ತರ ಮಾರ್ಗ ಎಂಬುದಕಿಂತಲೂ ನಮ್ಮೊಳಗೆ ಅರಿವನ್ನು ಮೂಡಿಸುವ ಪ್ರಶ್ನಾಮಾರ್ಗ! ಎಂದರೇನೇ ಸರಿಹೋದೀತು. ಪ್ರಶ್ನೆಗಳನ್ನು ಕೇಳಿದವರಿಗೆ ಪ್ರತಿಪ್ರಶ್ನೆಯಲ್ಲೇ ಉತ್ತರಿಸುವ ಇವರ ಈ ವಿಧಾನವು ಅನನ್ಯವಾದುದು. ಪ್ರಾಚೀನ ಕಾಲದ ಜೆ಼ನ್ ತತ್ತ್ವಜ್ಞಾನಿಗಳು ಇದನ್ನು ಅನುಸರಿಸುತ್ತಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನೀವು ನನ್ನಲ್ಲಿ ಕೇಳುವ ಪ್ರಶ್ನೆಗಳನ್ನು ನನಗಲ್ಲ; ನಿಮ್ಮೊಳಗೆ ಕೇಳಿಕೊಳ್ಳಬೇಕು ಎಂಬುದೇ ಇವರ ಕಣ್ತೆರೆಸುವ ವಿಧಾನವಾಗಿತ್ತು. ರಮಣರು ಮತ್ತು ಶಿಷ್ಯರೊಬ್ಬರ ಸಂಭಾಷಣಾ ಧಾಟಿಯೊಂದು ಹೀಗಿದೆ:

ಶಿಷ್ಯರು: ದೇವರನ್ನು ತಾವು ನೋಡಿದ್ದೀರಾ?
ರಮಣರು: ದೇವರನ್ನು ನೋಡಲು ಏಕೆ ಬಯಸುತ್ತೀರಿ?

ಶಿ: ನಾನೂ ಅವನನ್ನು ಕಾಣಲು ಬಯಸುತ್ತೇನೆ. ತಾವು ದೇವರನ್ನು ಕಂಡಿದ್ದರೆ, ಅದಕ್ಕಾಗಿ ಸಹಾಯ ಮಾಡಿ.
ರ: ‘ನಾನು ದೇವರನ್ನು ಕಾಣ ಬಯಸುತ್ತೇನೆ’ ಎನ್ನುತ್ತೀರಿ. ನೀವು ಯಾರು ಎಂಬುದನ್ನು ಮೊದಲು ಹೇಳಿ.

ಶಿ: ನನ್ನ ಹೆಸರು ಚಾರುದತ್ತಶರ್ಮ.
ರ: ಅದು ನಿಮ್ಮ ಹೆಸರು. ನೀವು ಯಾರು?

ಶಿ: ನಾನು ಶರ್ಮ ಎಂದು ಮೊದಲೇ ಹೇಳಿದ್ದೇನೆ. ನಾನು ಬ್ರಾಹ್ಮಣ.
ರ: ಅದು ನಿಮ್ಮ ಜಾತಿ ಅಷ್ಟೇ. ಆದರೆ ನೀವು ಯಾರು?

ಶಿ: ನಾನು ಕಾಲೇಜಿನಲ್ಲಿ ಉಪನ್ಯಾಸಕ.
ರ: ಅದು ನಿಮ್ಮ ಉದ್ಯೋಗ, ಆದರೆ ನೀವು ಯಾರು?

ಶಿ: ನಾನೊಬ್ಬ ಮನುಷ್ಯ.
ರ: ಅದು ನಿಮ್ಮ ಜನ್ಮವಾಯಿತು. ಆದರೆ ನೀವು ಯಾರು?

ಶಿ: ನಾನು ಗಂಡಸು.
ರ: ಅದು ನಿಮ್ಮ ಲಿಂಗವಾಯಿತಷ್ಟೆ. ದೇವರನ್ನು ನೋಡಲು ಬಯಸುತ್ತಿರುವುದು ಯಾರು ಎಂದು ತಿಳಿಯ ಬಯಸುತ್ತೇನೆ.

ಶಿ: ನಿಮ್ಮ ಪ್ರಕಾರ, ನನ್ನನ್ನೇ ನಾನು ತಿಳಿದಿಲ್ಲ ಎಂಬಂತೆ ತೋರುತ್ತಿದೆ.
ರ: ನಿಮ್ಮನ್ನೇ ನೀವು ತಿಳಿಯದೆ, ದೇವರನ್ನು ತಿಳಿಯಲು ಹೇಗೆ ಸಾಧ್ಯ? ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ನೀವು ಯಾರು, ದೇವರನ್ನು ತಿಳಿಯಬಯಸುವವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕಲ್ಲವೇ? (‘ರಮಣರೊಂದಿಗೆ ಮಾತುಕತೆ’ ಕೃತಿಯಿಂದ ಆಯ್ದದ್ದು)

ಶ್ರೀ ರಮಣ ಮಹರ್ಷಿ

ರಮಣರು ಆಧುನಿಕ ಭಾರತೀಯ ಆಧ್ಯಾತ್ಮಿಕ ಹಾಗೂ ಅನುಭಾವ ಪರಂಪರೆಯ ವಿಶಾಲದಾಕಾಶದಲಿ ನಿತ್ಯ ಬೆಳಗುವ ಧ್ರುವತಾರೆ. ಇವರಷ್ಟು ಸರಳ ಸಂನ್ಯಾಸಿಯು ಜಗತ್ತಿನಲ್ಲೇ ಬೇರಿಲ್ಲ. ತಮ್ಮನ್ನು ಸಂತರೆಂದು ಕರೆದುಕೊಳ್ಳಲೂ ಇಷ್ಟಪಡದಷ್ಟು ಸರಳಾತಿ ಸರಳರು. ತಮ್ಮ ಕೈಯೊಳಗಿನ ಗಂಟು ವ್ರಣವಾಗಿ ಅದು ಅರ್ಬುದಕ್ಕೆ ತಿರುಗಿದಾಗಲೂ ಅವರಿಗೆ ತಮ್ಮ ಶರೀರದ ಮೇಲೆ ಕಿಂಚಿತ್ತೂ ವ್ಯಾಮೋಹ ಪಡದೇ ‘ಈ ದೇಹ ಹೋಗುವಂಥದು; ಇರುವಂಥದಲ್ಲ; ನೀವೇಕೆ ಇಷ್ಟೊಂದು ಕಾಳಜಿ ಮಾಡುವಿರಿ?ʼ ಎಂದು ತಮ್ಮ ಅನುಯಾಯೀ ಬಕುತರಿಗೆ ಪ್ರಶ್ನೆ ಹಾಕಿದವರು. ಪುಟ್ಟ ಹುಡುಗನಾಗಿದ್ದಾಗಲೇ ಮನೆ ಬಿಟ್ಟು ಬೆಟ್ಟ ಗುಡ್ಡ ಅಲೆದು ಗುಹೆಯಲ್ಲಿ ತಪೋನಿರತರಾದ ವೇಳೆಯಲ್ಲಿ ಹೆತ್ತ ತಾಯಿಯು ಬಂದು ಪರಿಪರಿಯಾಗಿ ಕೇಳಿಕೊಂಡರೂ ಮನೆಗೆ ಮರಳದೇ ಇದೇ ನನ್ನ ಮನೆಯೆಂದು ಇದ್ದುಬಿಟ್ಟವರು. ಕೊನೆಗಾಲದಲ್ಲಿ ಸ್ವತಃ ಅವರ ತಾಯಿಯು ರಮಣಾಶ್ರಮಕ್ಕೆ ಬಂದು ಮಗನಿಂದಲೇ ಶಿಷ್ಯತ್ವವನ್ನು ಪಡೆದರು. ಕಡು ಲೌಕಿಕರಾದ ನಾವೀಗ ಅತಿಯಾದ ಭೋಗಲಾಲಸೆಗೆ ಬಿದ್ದು, ದೇಹವನ್ನೇ ಪರಮಸತ್ಯವೆಂದು ನಂಬಿ, ಸಿಂಗರಿಸಿಕೊಂಡು ಅಲೆಯುವಾಗ ರಮಣರನ್ನು ನೆನಪಿಸಿಕೊಳ್ಳಬೇಕು. ನಿಜಕೂ ನಾವ್ಯಾರೆಂದು ಪ್ರಶ್ನಿಸಿಕೊಳ್ಳಬೇಕು. ‘ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ, ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ, ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ, ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ- ಪೂಜಿಸು ನಮ್ಮ ಕೂಡಲಸಂಗಮದೇವನ.’ ಎಂದು ಬಸವಣ್ಣನವರು ತಮ್ಮೊಂದು ವಚನದಲ್ಲಿ ಎಚ್ಚರಿಸುವಂತೆ, ನಿತ್ಯಸತ್ಯವನ್ನು ಆರಾಧಿಸಬೇಕು. ಆ ಮೂಲಕ ದೈವನಂಬುಗೆಯ ಅಗಾಧವೃಕ್ಷವನ್ನು ಅಪ್ಪಿಕೊಂಡಿಹ ನೀತಿಮೌಲ್ಯಗಳೆಂಬ ಸಸ್ಯಾದಿ ತರುಲತೆಗಳನ್ನು ಮನಗಂಡು ಪಾಲಿಸಬೇಕು. ನಾನೊಬ್ಬ ಒಳ್ಳೆಯವನಾದರೆ ಲೋಕದಲ್ಲಿ ಒಬ್ಬ ಕೆಟ್ಟಮನುಷ್ಯ ಇಲ್ಲವಾದನೆಂಬ ಭಾವದಲ್ಲಿ ಬದುಕಬೇಕು. ಮೌನವೇ ಮಹಾಕಾವ್ಯದಂತೆ ಬದುಕಿ ಮೌನವನ್ನು ಆಧ್ಯಾತ್ಮಿಕ ಪಥದ ಸಾಧನೋಪಕರಣವನ್ನಾಗಿಸಿ ಕೊಟ್ಟ ರಮಣರು ಎಂದಿಗಿಂತ ಇಂದು ಅತ್ಯಂತ ಪ್ರಸ್ತುತ. ‘Do not engage the mind much in the affairs of the world’ ಮನವು ಲೌಕಿಕದಲೇ ಹೆಚ್ಚು ತೊಡಗದಂತಿರಲಿ ಎಂಬುದಿವರ ಎಚ್ಚರದ ಮಾತು. ‘How should we treat others?’  ಎಂಬ ಸಂದರ್ಶಕರೊಬ್ಬರ ಪ್ರಶ್ನೆಗೆ ರಮಣರ ಮಾರ್ಮಿಕ ಉತ್ತರ ಹೀಗಿದೆ: ‘There are no others!’ ಇದು ಏಕಕಾಲಕೆ ನಮ್ಮ ಅರಿವಿನ ಮಿತಿ ಮತ್ತು ಸಂಕುಚಿತ ದೃಷ್ಟಿಯನ್ನು ಅರ್ಥ ಮಾಡಿಸುವ ಎಚ್ಚರಿಕೆಯ ಉಪದೇಶ.

ರಮಣರ ಆಶ್ರಮವಿರುವ ತಮಿಳುನಾಡಿನ ತಿರುವಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿ ಶಿವಕ್ಷೇತ್ರವಿದೆ. ಇಲ್ಲಿನ ಅರುಣಾಚಲೇಶ್ವರ ದೇಗುಲವು ಪಂಚಭೂತ ಸ್ಥಳಗಳ ಪೈಕಿ ಅಗ್ನಿಯನ್ನು ಪ್ರತಿನಿಧಿಸುವಂಥದು. ಸಾವಿರಾರು ವರುಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಪ್ರತಿ ಹುಣ್ಣಿಮೆಯಂದು ಭಕ್ತಾದಿಗಳ ಹದಿನಾಲ್ಕು ಕಿಲೋಮೀಟರುಗಳ ಗಿರಿ ಪ್ರದಕ್ಷಿಣೆಗೆ ಮತ್ತು ಕಾರ್ತೀಕ ದೀಪಂ ಉತ್ಸವಕ್ಕೆ ಹೆಸರುವಾಸಿ. ಚೋಳ, ಪಲ್ಲವ ಮತ್ತು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ಈ ಸ್ಥಳದಲ್ಲೇ ಪವಿತ್ರ ರಮಣ ಮಹಾಋಷಿಗಳ ಆಶ್ರಮವಿದೆ. ಬೆಂಗಳೂರಿನಿಂದ ಸುಮಾರು ಇನ್ನೂರು ಕಿಲೋಮೀಟರುಗಳ ದೂರದಲ್ಲಿದ್ದು, ನಿಜಕೂ ಇಲ್ಲಿಗೆ ಹೋಗಿ ಬರುವುದು ಜೀವ ಜೀವನದ ಧನ್ಯತೆಯೇ ಆಗಿದೆ.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *