70ರ ಹರೆಯದ ಸ್ನೇಹಿತರು ತಮ್ಮ 52 ವರ್ಷಗಳ ಸ್ನೇಹದ ಸವಿ ಸವಿಯಲು ಸ್ನೇಹ ಮಿಲನ ಕಾರ್ಯಕ್ರಮದಡಿಯಲ್ಲಿ ಪ್ರತಿ ವರ್ಷ ತಮ್ಮ ಬಾಳ ಸಂಗಾತಿಗಳೊಂದಿಗೆ ಹೊರ ಸಂಚಾರ ಹೋಗುವ ಪರಿಪಾಠವಿದೆ. ಈ ಸ್ನೇಹ ಮಿಲನದ ನೆಪದಲ್ಲಿ ಹಿರಿಯೂರಿನಲ್ಲಿ ನಮ್ಮ ಸಹಪಾಠಿ ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಅಡಿಕೆ ಮತ್ತು ತೆಂಗಿನ ತೋಟ ನೋಡಲು ಹೊರಟೆವು. ಹಾಗೇ ಹತ್ತಿರವಿರುವ ಮಾರಿ ಕಣಿವೆಗೂ ಸಹ ಭೇಟಿ ಕೊಡುವ ಯೋಜನೆ ಹಾಕಿದೆವು.
ಅದರಂತೆ 30 ಜನ ಸ್ನೇಹಿತರು ಹೊರಟು, ದಾರಿಯಲ್ಲಿ ಕ್ಯಾತ್ಸಂದ್ರದ ಬಳಿಯ ನಂಜುಂಡೇಶ್ವರ ಹೋಟೆಲ್ ನಲ್ಲಿ ತಟ್ಟೆ ಇಡ್ಲಿ ಸವಿದು, ಸ್ನೇಹಿತರ ನೂತನ ಅಡಿಕೆ ತೋಟ ತಲುಪಿದೆವು. ಸುಮಾರು 12 ಎಕರೆ ಜಾಗದಲ್ಲಿ ಅಡಿಕೆ, ತೆಂಗು ಅಭಿವೃದ್ಧಿ ಪಡಿಸಿದ್ದಾರೆ. ಇಳುವರಿ ಬರಲು ಇನ್ನೂ ಮೂರು ನಾಲ್ಕು ವರ್ಷ ಬೇಕಾಗಿದೆ. ಆದರೆ ನಾವೆಲ್ಲರೂ ಕೃಷಿ ಪದವೀಧರರಾಗಿರುವುದರಿಂದ, ಮರೆತು ಹೋದ (ಬ್ಯಾಂಕಿನಲ್ಲಿ ನೌಕರಿ ಮಾಡಿದ್ದುದರಿಂದ) ನಮ್ಮ ಕೃಷಿ ಜ್ಞಾನ ನವೀಕರಿಸಿಕೊಂಡು, ಕಾಲೇಜು ದಿನಗಳ ತುಂಟಾಟಗಳನ್ನು ಮೆಲುಕು ಹಾಕುತ್ತಾ, ಮೇಷ್ಟರುಗಳನ್ನು ಅಣಕಿಸುತ್ತಾ, ಪೂರಾ ತೋಟದಲ್ಲಿ ಒಂದು ಸುತ್ತು ಹಾಕಿ, ಸ್ನೇಹಿತರು ಅತ್ಯಂತ ಪ್ರೀತಿ ಅಭಿಮಾನದಿಂದ ಹಾಕಿಸಿದ ಬಾಳೆ ಎಲೆಯ ಹೋಳಿಗೆ ಊಟ ಸವಿದು, ಎಲ್ಲರೂ ಒಬ್ಬರನ್ನು ಒಬ್ಬರು ಸನ್ಮಾನಿಸಿಕೊಂಡು ಸಂಭ್ರಮಿಸಿಕೊಂಡೆವು. ನಮ್ಮ ಈ ಗುಂಪಿನಲ್ಲಿ ಕೆಲವು ಸ್ನೇಹಿತರು ತಮ್ಮ ಬಾಳಸಂಗಾತಿಗಳನ್ನು ಕರೆತಂದಿದ್ದರಿಂದ ನಮ್ಮ ಸಂಭ್ರಮಕ್ಕೆ ವಿಶೇಷ ಮೆರುಗು ಸಿಕ್ಕಿತ್ತು .
ಅಲ್ಲಿಂದ 35 ಕಿಲೋಮೀಟರ್ ದೂರದ ವಿ ವಿ ಸಾಗರ (ಮಾರಿ ಕಣಿವೆ) ಕ್ಕೆ ಹೊರಟೆವು. ಒಂದು ಗಂಟೆ ಪ್ರಯಾಣ. ಹಾದಿಯ ಎರಡೂ ಬದಿಯಲ್ಲಿ ಹಸಿರಿನಿಂದ ಅಡಿಕೆ ಮತ್ತು ತೆಂಗಿನ ತೋಟಗಳು ಕಂಗೊಳಿಸುತ್ತಿದ್ದವು. ಎಲ್ಲರೂ ಹಿರಿಯ ನಾಗರಿಕರಾಗಿದ್ದರಿಂದ ನಮ್ಮ ಬಸ್ಸನ್ನು ಮೇಲೆ ಪ್ರವಾಸಿ ಮಂದಿರದ ಹತ್ತಿರವೇ ತೆಗೆದುಕೊಂಡು ಹೋದರು. ನಮ್ಮ ಗುಂಪಿನಲ್ಲಿದ್ದ ನಮ್ಮ ಸಹಪಾಠಿ ಅಣ್ಣಯ್ಯನವರ (ಇವರು ನಿವೃತ್ತ IFS ಅಧಿಕಾರಿಯಾಗಿದ್ದು, CADA ಅಡ್ಮಿನಿಸ್ಟ್ರೇಟರ್ ಆಗಿದ್ದರು) ನೆರವಿನಿಂದ ಪ್ರವಾಸೀ ಮಂದಿರದಲ್ಲಿ ಕಾಯ್ದಿರಿಸಿದ ರೂಂ ಗಳಲ್ಲಿ ಸ್ವಲ್ಪ ವಿಶ್ರಮಿಸಿ, ಅಲ್ಲೇ ಮಂಡಕ್ಕಿ ಒಗ್ಗರಣೆ (ಅದೊಂದು ಸ್ಥಳೀಯ ಖಾದ್ಯ) ಬಜ್ಜಿ , ಟೀ, ಕಾಫಿ, ಗಳನ್ನು ಸವಿದು,ಅಣೆಕಟ್ಟಿನ ಬಳಿ ಹೋದೆವು.
ಒಂದು ಕಡೆ ಕಣ್ಣಿಗೆ ಕಾಣುವಷ್ಟು ದೂರ ಸಾಗರೋಪಾದಿಯಲ್ಲಿ ನಿಂತ ನೀರು, ಇನ್ನೊಂದು ಕಡೆ ಕಣ್ಣಿಗೆ ಕಾಣುವಷ್ಟು ದೂರ ಹಸಿರಿನಿಂದ ಕಂಗೊಳಿಸುತ್ತಿದ್ದ ಅಡಿಕೆ ಮತ್ತು ತೆಂಗಿನ ತೋಟಗಳು, ಮಧ್ಯದಲ್ಲಿ ಅಲ್ಲಿನ ಅಧಿದೇವತೆ ಮಾರಮ್ಮನ ದೇವಸ್ಥಾನ. ಇಂತಹ ಸ್ವರ್ಗ ಸದೃಶ ನಿಸರ್ಗ ಸೌಂದರ್ಯದ ಮಧ್ಯದಲ್ಲಿ ಸುಮಾರು 100 ಮೆಟ್ಟಿಲು ಕೆಳಗಡೆ ಇಳಿದು, ಅಲ್ಲಿದ್ದ ಸುಂದರ ಕಲ್ಲು ಮಂಟಪದ ಬಳಿ ಬಂದೆವು. ಆಗ 70 ರ ದಶಕದ ನಾಗರಹಾವು ಚಿತ್ರದ ಅಲಮೇಲು (ನಟಿ ಆರತಿ)ರವರ ಕರ್ಪೂರದ ಗೊಂಬೆ ನಾನು…… ಹಾಡು ನೆನಪಾಗಿ (ಈ ಹಾಡಿನ ಕೆಲವು ಭಾಗ ಚಿತ್ರೀಕರಿಸಿದ ಜಾಗ), ಚಿತ್ರದುರ್ಗವನ್ನು ಪ್ರವಾಸ್ಯೋದ್ಯಮ ಭೂಪಠದಲ್ಲಿ ವಿಶೇಷ ಸ್ಥಾನಕ್ಕೇರಿಸಿದ ನಾಗರಹಾವು ಚಿತ್ರದ ಖ್ಯಾತ ಚಲನ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಲ್, ಜೊತೆಯಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಖ್ಯಾತ ನಟರಾದ ವಿಷ್ಣುವರ್ಧನ್, ಅಂಬರೀಷ್ ನೆನಪಾದರು. ಅಣೆಕಟ್ಟಿನ ಒಂದು ಬದಿಯಿಂದ ನಿಧಾನವಾಗಿ ನಡೆಯುತ್ತಾ ಬೇಕಾದಷ್ಟು ಫೋಟೋ ಸೆಲ್ಫಿಗಳನ್ನು ತೆಗೆಯುತ್ತಾ ಅಣೆಕಟ್ಟಿನ ಇನ್ನೊಂದು ಬದಿ ತಲುಪಿದೆವು . ಅಣೆಕಟ್ಟೆಯ ಎರಡೂ ಬದಿಯಲ್ಲಿ ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ಆಕರ್ಷಕವಾದ ಕಲ್ಲು ಮಂಟಪ ಗಳಿದ್ದು ಆ ಎರಡೂ ಮಂಟಪಗಳ ಮಧ್ಯೆ ಗ್ರಾನೈಟ್‌ನಿಂದ ಕಟ್ಟಿರುವ ಆಕರ್ಷಕ ಮೇಲ್ಸೇತುವೆ ಇದೆ. ಎಲ್ಲರೂ ವಯಸ್ಸಾಗಿರುವವರಾಗಿದ್ದರಿಂದ ಆಯಾಸವಾಗದಿರಲೆಂದು ಬಸ್ಸನ್ನು ಅಲ್ಲಿಗೇ ಹತ್ತಿರದ ಜಾಗದಲ್ಲಿ ( ಕೃಪೆ : ನಮ್ಮ ಅಣ್ಣಯ್ಯ) ತಂದು ನಿಲ್ಲಿಸಿದ್ದರು. ಇಲ್ಲದಿದ್ದರೆ ಸುಮಾರು 200 ಮೆಟ್ಟಿಲು ಇಳಿಯಬೇಕಾಗುತ್ತಿತ್ತು. ಮೊಣಕಾಲು ನೋವು ಎನ್ನುತ್ತಿದ್ದವರೆಲ್ಲ, ಗುಂಪಿನಲ್ಲಿ, ಉತ್ಸಾಹದಿಂದ, ತಮ್ಮ ನೋವನ್ನೆಲ್ಲ ಮರೆತು ಆನಂದಿಸಿ ಸಂತೋಷಪಟ್ಟರು.
ಆಗ ಅಲ್ಲಿದ್ದ ಸೂಚನಾ ಫಲಕಗಳ ಮುಖೇನ, ಸ್ಥಳೀಯರು ಮತ್ತು ನಮ್ಮ ಆತ್ಮೀಯ ಸ್ನೇಹಿತೆ ಗೂಗಲಮ್ಮ ನವರ ನೆರವಿನಿಂದ ಮಾರಿ ಕಣಿವೆಯ ಬಗ್ಗೆ ಕೆಲವು ಉಪಯುಕ್ತ ಮಾಹಿತಿ ಪಡೆದೆವು.
ಚಿಕ್ಕಮಗಳೂರು ಸಮೀಪದ ಚಂದ್ರದ್ರೋಣ ಪರ್ವತದಲ್ಲಿ ಹುಟ್ಟುವ ವೇದಾ ನದಿ ಮುಂದೆ, ಕಡೂರು ಬಳಿ ಆವತಿ ನದಿ ಸೇರಿ, ವೇದಾವತಿಯಾಗುತ್ತದೆ. ಹೊಸದುರ್ಗ, ಹಿರಿಯೂರು ಚಳ್ಳಕೆರೆ, ತಾಲೂಕುಗಳಲ್ಲಿ ಹರಿಯುತ್ತಾ ಹೋಗಿ ತುಂಗಭದ್ರಾ ನದಿಯನ್ನು ಸೇರುವ ವೇದಾವತಿ ನದಿಗೆ ಅಡ್ಡಲಾಗಿ ಹೊಸದುರ್ಗ ಮತ್ತು ಹಿರಿಯೂರು ಮಧ್ಯೆ ಇರುವ ಬೆಟ್ಟಗಳ ಕಣಿವೆಯಲ್ಲಿ ಹರಿಯುವ ಜಾಗದಲ್ಲಿ ಅಣೆಕಟ್ಟು ಕಟ್ಟುವ ಯೋಜನೆಯನ್ನು, ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ಅಂದರೆ 1803 ರಲ್ಲಿ ಸ್ಕಾಟಿಷ್ ಸಸ್ಯ ಶಾಸ್ತ್ರಜ್ಞ .ಫ್ರಾನ್ಸಿಸ್ ಬುಷನನ್ ರವರು ಮೊಟ್ಟ ಮೊದಲ ಬಾರಿಗೆ ಈ ಸ್ಥಳ ಗುರುತಿಸಿ ಅಣೆಕಟ್ಟು ಕಟ್ಟಲು ಸೂಕ್ತ ಜಾಗ ಎಂದು ಆಗಿನ ಬ್ರಿಟಿಷ್ ಸರ್ಕಾರ ಮತ್ತು ಮೈಸೂರು ಸಂಸ್ಥಾನಕ್ಕೆ ಸಲಹೆ ಕೊಟ್ಟಿದ್ದರು. ಆದರೆ ಯಾರೂ ಇತ್ತ ಕಡೆ ಗಮನ ಕೊಡಲಿಲ್ಲ. ತೊಂಭತ್ತು ನಾಲ್ಕು ವರ್ಷಗಳ ನಂತರ ಮೈಸೂರು ಸಂಸ್ಥಾನದ ಹತ್ತನೇ ಚಾಮರಾಜ ಒಡೆಯರ್ ರವರ ಅಕಾಲಿಕ, ಆಕಸ್ಮಿಕ ಮರಣದ ನಂತರ, ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದುದರಿಂದ, ರೀಜೆಂಟ್ ಆಗಿ ಅಧಿಕಾರ ಸ್ವೀಕರಿಸಿ, ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಜನೋಪಯೋಗಿ ಯೋಜನೆಗಳನ್ನು ಕಾರ್ಯಗತಗೊಳಿಸಿದ, ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನರವರು, ಆಗಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ರವರ ನೆರವಿನೊಂದಿಗೆ ಈ ಯೋಜನೆಯ ಬಗ್ಗೆ ಗಂಭೀರವಾಗಿ ಸಮಾಲೋಚಿಸಿ, ಬರಗಾಲದ ಬೆಂಗಾಡಾದ ಚಿತ್ರದುರ್ಗ ಜಿಲ್ಲೆಯ ರೈತರಿಗೆ ನೀರಾವರಿ ಅನುಕೂಲ ಕಲ್ಪಿಸುವ ಸದುದ್ದೇಶದಿಂದ, ಸುಮಾರು 45 ಲಕ್ಷ ರೂ ಗಳ ಅಂದಾಜು ವೆಚ್ಚದಲ್ಲಿ,ಈ ಅಣೆಕಟ್ಟನ್ನು ನಿರ್ಮಿಸುವ ತೀರ್ಮಾನ ಮಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ಅವರು ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆಯ ರೂವಾರಿ ರಾಜಮಾತೆ ಕೆಂಪನಂಜಮ್ಮಣ್ಣಿ – ವಾಣೀ ವಿಲಾಸ ಸನ್ನಿಧಾನವಾಗಿದ್ದರಿಂದ ಇದನ್ನು ವಾಣಿ ವಿಲಾಸ ಸಾಗರ ಎಂದು ನಾಮಕರಣ ವಾಯಿತು. ಈ ಕಣಿವೆಯ ಮಧ್ಯ ಭಾಗದಲ್ಲಿ ಸ್ಥಳೀಯ ಶಕ್ತಿ ದೇವತೆ ಮಾರಿಕಾಂಬ (ಮಾರಮ್ಮ) ದೇವಸ್ಥಾನ ವಿರುವುದರಿಂದ ಸ್ಥಳೀಯರು ಮಾರಿ ಕಣಿವೆ ಎಂದು ಕರೆಯುತ್ತಾರೆ.
1898ರಲ್ಲಿ ಕಾಮಗಾರಿ ಆರಂಭ ಮಾಡಿ, 1907 ರಲ್ಲಿ ಮುಕ್ತಾಯಗೊಂಡ ಈ ಯೋಜನೆ ಹಲವು ವಿಶಿಷ್ಟತೆಗಳನ್ನು ಹೊಂದಿದೆ. ಇದು ಆಗಿನ ಕಾಲಕ್ಕೆ, ಏಷ್ಯಾದಲ್ಲೇ ಅತಿ ದೊಡ್ಡ ಮಾನವ ನಿರ್ಮಿತ, ನೀರಾವರಿಗಾಗಿ ನಿರ್ಮಿಸಿದ, ಜಲಾಶಯ ಎಂದು ಖ್ಯಾತಿ ಪಡೆದಿತ್ತು. ಅಲ್ಲದೇ , ಇದನ್ನು ಕಟ್ಟಿದ ಇಂಜಿನಿಯರ್‌ಗಳ ತಂಡದ ನಾಯಕ ಶ್ರೀ ಸಿ.ಟಿ ದಲಾಲ್ ಎನ್ನುವ ಅಧೀಕ್ಷಕ ಅಭಿಯಂತರ(ಎಸ್ ಈ) ಹಾಗೂ ತಂಡದ ಎಲ್ಲಾ ಸದಸ್ಯರೂ ಕೇವಲ ಎಲ್ ಸಿ ಈ ಮಟ್ಟದ ವಿದ್ಯಾರ್ಹತೆ ಉಳ್ಳ ಇಂಜಿನಿಯರುಗಳು. ಅಂದರೆ ಡಿಪ್ಲೋಮಾ ಮಟ್ಟದ ವಿದ್ಯಾರ್ಹತೆ ಉಳ್ಳವರೂ ಅಲ್ಲ. ಈ ಅಣೆಕಟ್ಟನ್ನು ಸಿಮೆಂಟ್ ಉಪಯೋಗಿಸದೆ ಕೇವಲ ಗಾರೆ ಮತ್ತು ಸುಣ್ಣ ಕಲ್ಲಿನಿಂದ ಕಟ್ಟಲಾಗಿದ್ದು, ಇಂದಿಗೂ ಸುಭದ್ರವಾಗಿದ್ದು, ಯಾವುದೇ ಅನಾಹುತ ಆಗದಿರುವುದು, ಈ ತಂಡದ ಬುದ್ಧಿ ಕೌಶಲ್ಯದ ದ್ಯೋತಕವಾಗಿದೆ. ಅಲ್ಲದೆ ಈ ಅಣೆಕಟ್ಟು ಮೈಸೂರಿನ ಕನ್ನಂಬಾಡಿ ಕಟ್ಟೆಯ ನಿರ್ಮಾಣಕ್ಕೆ ನೀಲ ನಕ್ಷೆಯಾಗಿ ಬಳಸಿಕೊಳ್ಳಲಾಗಿದೆ. ಜಲಾಶಯದಲ್ಲಿ ಶೇಖರಣೆಯಾದ ನೀರು ವೈಮಾನಿಕ ವೀಕ್ಷಣೆ ಮಾಡಿದಾಗ, ನಮ್ಮ ದೇಶದ ಭೂಪಠದಂತೆ ಕಾಣುವುದು ಒಂದು ವಿಶೇಷ.
45 ಅಡಿ ಎತ್ತರ, 1330ಅಡಿ ಉದ್ದ, ಇರುವ ಈ ಅಣೆಕಟ್ಟು 30 tmc ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ವಿದ್ದು, ಹಿರಿಯೂರು ತಾಲ್ಲೂಕಿನ 30000 ಎಕರೆ ಕೃಷಿ ಭೂಮಿಗೆ ನೀರಿನ ಆಸರೆಯಾಗಿದ್ದು ಸಾವಿರಾರು ರೈತರು ಇದರಿಂದ ಲಾಭ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿದ್ದಾರೆ. ಯೋಜನೆ ಪೂರ್ಣವಾದ ಮೇಲೆ ತೆಂಗು, ಅಡಿಕೆ ಬತ್ತ ಜೊತೆಗೆ ಕಬ್ಬನ್ನು ಹಿರಿಯೂರು ತಾಲ್ಲೂಕಿನ 30000 ಎಕರೆ ಪ್ರದೇಶದಲ್ಲಿ ಬೆಳೆದು, ಸಾವಿರಾರು ರೈತರು ತಮ್ಮ ಆರ್ಥಿಕ ಅಭಿವೃದ್ದಿ ಮಾಡಿಕೊಂಡರು. ಹಿರಿಯೂರಿನಲ್ಲಿ ಒಂದು ಸಹಕಾರಿ ಸಕ್ಕರೆ ಕಾರ್ಖಾನೆ ಸಹ ಪ್ರಾರಂಭವಾಗಿ ಹಲವಾರು ವರ್ಷಗಳವರೆಗೆ ಸಾವಿರಾರು ರೈತರು ಬೆಳೆದ ಕಬ್ಬನ್ನು ಕೊಂಡು ಸಕ್ಕರೆ ತಯಾರಿಸಲಾಗುತ್ತಿತ್ತು. ಜೊತೆಯಲ್ಲಿ ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡಿತ್ತು. ಆದರೆ ದುರಾಡಳಿತ ಮತ್ತು ದೋಷಪೂರಿತ ಆಡಳಿತದಿಂದ ಇತ್ತೀಚೆಗೆ ಆ ಕಾರ್ಖಾನೆ ಮುಚ್ಚಿ ಹೋಯಿತು. ಸುಮಾರು 90 ವರ್ಷಗಳ ನಂತರ 2022 ರಲ್ಲಿ ಈ ಜಲಾಶಯ ತುಂಬಿ ಹಿರಿಯೂರಿನ ರೈತರಿಗೆ ಹರ್ಷತಂದಿದೆ. ಅಂತರ್ಜಲದ ಮಟ್ಟ ಗಣನೀಯವಾಗಿ ಹೆಚ್ಚಿ, ತಾಲೂಕಿನ ಕೊಳವೆ ಭಾವಿಗಳಲ್ಲಿ ನೀರಿನ ಮಟ್ಟ ಮೇಲೇರಿದೆ. ಆದ್ದರಿಂದ ಕೃಷಿ ಭೂಮಿಯ ಬೆಲೆ ಹಿರಿಯೂರು ತಾಲೂಕಿನಲ್ಲಿ ಹಲವಾರು ಪಟ್ಟು ಹೆಚ್ಚಿದೆ. ಈ ಜಲಾಶಯದಿಂದ ಚಿತ್ರದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ನಗರ, ಮತ್ತು ಸಮೀಪದ ಡಿ ಆರ್‌ಡಿ ಓ, ಐ ಐಎಸ್‌ಸಿ ಕೇಂದ್ರಗಳಿಗೆ ಕುಡಿಯುವ ನೀರಿನ ಪೂರೈಕೆ ಸಹ ಆಗುತ್ತಿದೆ. ಹಿಂದಿನ ಸರ್ಕಾರ ಇಲ್ಲಿ ಪ್ರವಾಸೋದ್ಯಮ ಅಭಿವೃಧ್ಧಿಪಡಿಸುವ ಉದ್ದೇಶದಿಂದ, ಜಲಾಶಯದ ಹಿನ್ನೀರಿನಲ್ಲಿ ಸಾಹಸೀ ಕ್ರೀಡೆಗಳು, ದೋಣಿ ವಿಹಾರ, ಜಲಕ್ರೀಡೆಗಳು, ಕಯಾಕಿಂಗ್, ಜೆಟ್‌ಸ್ಕೀಯಿಂಗ್, ಬನಾನ ಬೋಟ್‌ರೈಡ್‌ನಂತಹ ಆಧುನಿಕ ಮನರಂಜನಾ ಚಟುವಟಿಕೆ ಗಳನ್ನು ಅಳವಡಿಸುವ ಯೋಜನೆ ಇದೆ. ಅಲ್ಲದೆ ಹಿರಿಯೂರು ಸಮೀಪದ ಬೇವಿನಹಳ್ಳಿ ಯಿಂದ ಹೊಸ ದುರ್ಗ ಸಮೀಪದ ಎಸ್. ಜಿ. ಹಳ್ಳಿ ಯ ಮಧ್ಯೆ ಸೇತುವೆ ನಿರ್ಮಾಣ ಕಾರ್ಯ ಸಹ ಕೈಗೆತ್ತಿ ಕೊಳ್ಳಾಲಾಗಿದೆ. ಈ ಸೇತುವೆಯಾದಲ್ಲಿ, ಇದೊಂದು ಚಿತ್ರದುರ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ವಾಗುವುದಲ್ಲದೆ, ಹಿರಿಯೂರು ಮತ್ತು ಹೊಸದುರ್ಗ ಮಧ್ಯೆ ಪ್ರಯಾಣ ದೂರ ಮತ್ತು ಸಮಯ ಕಡಿಮೆ ಆಗಲಿದೆ. ಈಗಾಗಲೇ ಹಿರಿಯೂರು ಮತ್ತು ಮಾರಿಕಣಿವೆ ಮಧ್ಯೆ ಬೆಂಗಳೂರಿನ ವಂಡರ್‌ಲಾ ಮಾದರಿಯ ಫಂಡೂಸ್ ವಾಟರ್‌ಪಾರ್ಕ್ ಅಸ್ಥಿತ್ವದಲ್ಲಿದ್ದು ದೂರದೂರುಗಳಿಂದ ಪ್ರವಾಸಿಗಳನ್ನು ಆಕರ್ಷಿಸುತ್ತಾ ಪ್ರಮುಖ ಮನರಂಜನಾ ಕೇಂದ್ರ ವಾಗಿದೆ.
ಕಾಮಗಾರಿ ನಡೆಯುವಾಗ ಹಲವಾರು ಸಮಸ್ಯೆಗಳು,ಅಡ್ಡಿ ಆತಂಕಗಳು ಎದುರಾಗಿವೆ. ಮೊದಲನೆಯದಾಗಿ ಪ್ಲೇಗ್ ಖಾಯಿಲೆಯಿಂದ, ಕಾರ್ಮಿಕರು ಕೆಲಸವನ್ನು ಅರ್ಧಕ್ಕೆ ಬಿಟ್ಟು ಊರು ಬಿಟ್ಟು ಹೋಗುತ್ತಾರೆ. ಆಗ ತಮಿಳು ನಾಡಿನಿಂದ ಕಾರ್ಮಿಕರನ್ನು ಕರೆಸಿ ಕಾಮಗಾರಿಯನ್ನು ಪೂರೈಸಲಾಗುತ್ತದೆ. ಆದ್ದರಿಂದ ಹಿರಿಯೂರಿನಲ್ಲಿ ತಮಿಳರ ಜನಸಂಖ್ಯೆ ಗಣನೀಯವಾಗಿದೆ.
ಎರಡನೇಯದಾಗಿ, ನೀರಿನ ರಭಸಕ್ಕೆ ಅಣೆಕಟ್ಟೆಯ ಕಟ್ಟಡ ಕೆಲಸ ಸ್ಥಗಿತಗೊಳ್ಳುತ್ತದೆ. ಆಗ ರಾಜ ವಂಶಸ್ಥರ ಕನಸಿನಲ್ಲಿ, ಸ್ಥಳೀಯ ಅಧಿದೇವತೆ ಮಾರಿಕಾಂಬ ದೇವಿಯ ಮೊರೆ ಹೋಗಲು ಸೂಚಿಸಲಾಗಿ, ರಾಜವಂಶಸ್ಥರು ದೇವಿಯ ಪೂಜೆ ಮಾಡಿ, ಅಲ್ಲಿ ಒಂದು ದೇವಸ್ಥಾನ ಕಟ್ಟಿಸುತ್ತಾರೆ. ಅವರ ಭಕ್ತಿಗೆ ಮೆಚ್ಚಿ ದೇವಿ ತನ್ನ ಕಾಲಿನಿಂದ ಪ್ರವಾಹವನ್ನು ತಡೆಹಿಡಿದು ಕಾಮಗಾರಿ ಮುಂದುವರೆಸಲು ಅನುವು ಮಾಡಿ ಕೊಡುತ್ತಾಳೆ ಎನ್ನುವ ದಂತ ಕಥೆ ಚಾಲ್ತಿಯಲ್ಲಿದೆ.
ಮೂರನೆಯದಾಗಿ, ಅಣೆಕಟ್ಟೆಗೆ ನರಬಲಿ ಕೊಡಬೇಕೆನ್ನುವ ನಂಬಿಕೆ ಸ್ಥಳೀಯರಲ್ಲಿ ಹುಟ್ಟಿ, ಅದಕ್ಕಾಗಿ ಪ್ರಬಲವಾದ ಒತ್ತಡ ಬರುತ್ತದೆ. ಇಂತಹ ಮೌಢ್ಯ ನಂಬಿಕೆಗಳಿಗೆ ಸೊಪ್ಪು ಹಾಕದ ಮೈಸೂರು ಆಡಳಿತ ಕೆಲ ಕಾಲ ಕಾಮಗಾರಿಯನ್ನು ನಿಲ್ಲಿಸಿ ಬಿಡುತ್ತದೆ. ಅಣೆಕಟ್ಟೆಯಿಂದ ಪ್ರಯೋಜನವಾಗದ ರೈತರು ನರಬಲಿ ಕೊಡುವವರೆಗೂ ಕಾಮಗಾರಿ ಪ್ರಾರಂಭಿಸಬಾರದೆಂದೂ, ಪ್ರಯೋಜನವಾಗುವ ರೈತರು ಪ್ರಾರಂಭಿಸಬೇಕೆಂದು ಒತ್ತಾಯಿಸುತ್ತಾರೆ. ಇಕ್ಕಟ್ಟಿನಲ್ಲಿ ಸಿಕ್ಕ ಸರ್ಕಾರ ಕಾಮಗಾರಿ ನಿಲ್ಲಿಸಿ, ಜನರ ಮನ ಒಲಿಕೆ ಕಾರ್ಯದಲ್ಲಿ ತೊಡಗುತ್ತದೆ. ಆ ಸಮಯದಲ್ಲಿ ಒಬ್ಬ ವ್ಯಕ್ತಿ ಅರ್ಧ ಕಟ್ಟಿದ ಗೋಡೆಯ ಮೇಲಿನಿಂದ ಬಿದ್ದು ಪ್ರಾಣ ಬಿಡುತ್ತಾನೆ. ಅದನ್ನೇ ನರ ಬಲಿ ಎಂದು ಸ್ಥಳೀಯ ಅಧಿಕಾರಿಗಳು ಸುದ್ದಿ ಹಬ್ಬಿಸಿ, ಕಾಮಗಾರಿಯನ್ನು ಮುಂದುವರೆಸುತ್ತಾರೆ. ಈ ಯೋಜನೆಯ ಅನುಷ್ಥಾನದ ಮಯದಲ್ಲಿ ಹಣದ ಕೊರತೆ ನೀಗಲು, ರಾಜಮಾತೆ ತನ್ನ ಒಡವೆಗಳನ್ನು ಅಡಮಾನು ಮಾಡಿದ್ದರೆಂದು ಗಾಳಿ ಸುದ್ದಿ ಇದೆ. ಆದರೆ ಇದಕ್ಕೆ ಪೂರಕವಾಗಿ ಯಾವುದೇ ದಾಖಾಲೆಗಳು ಸಿಕ್ಕಿಲ್ಲ. ಇನ್ನೊಂದು ಸುದ್ದಿ ಈ ಯೊಜನೆಯಲ್ಲಿ ಸರ್ ಎಂ ವಿ ಯವರ ಪಾತ್ರ. ಇದರ ನಿರ್ಮಾಣದಲ್ಲಿ ಸರ್ ಎಂ ವಿ ಯವರ ಪಾತ್ರವಿರುವುದಿಲ್ಲ. ಆದರೆ ನಂತರ ನೀರಾವರಿ ಅಭಿವೃಧ್ಧಿಯಲ್ಲಿ ಅವರ ಯೋಗದಾನ ಬಹಳಷ್ಟಿದೆ.
ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಅನೇಕ ಸಾವು ನೋವುಗಳು ಸಂಭವಿಸುತ್ತವೆ. ಅನೇಕರ ತ್ಯಾಗ ಬಲಿದಾನ ಇದೆ. ಈ ಯೋಜನೆಯ ಫಲಾನುಭವಿಗಳಾದ ಹಿರಿಯೂರು ತಾಲ್ಲೂಕಿನ ರೈತರು ಈ ಅನಾಮಿಕ ವ್ಯಕ್ತಿಗಳ ಪ್ರಾಣ ತ್ಯಾಗ ಮತ್ತು ದಿಟ್ಟ ಹೆಜ್ಜೆ ಇಟ್ಟ ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ಮೈಸೂರು ಸಂಸ್ಥಾನದ ಆಡಳಿತ ವರ್ಗಕ್ಕೆ ಚಿರಋಣಿಯಾಗಿರಬೇಕಾಗಿರುತ್ತದೆ.

ಟಿ ವಿ ಬಿ ರಾಜನ್, ಬೆಂಗಳೂರು

