ಪೌರಾಣಿಕ ಕತೆ

ಕಾವ್ಯ ಭಾಗವತ 88 :ಕೃಷ್ಣಾನುಗ್ರಹ ಪರಿ

Share Button

ದಶಮಸ್ಕಂದ – ಪೂರ್ವಾರ್ಧ – ಅಧ್ಯಾಯ – 6
ಕೃಷ್ಣಾನುಗ್ರಹ ಪರಿ

ಕಂಸವಧೆಯ ನಂತರದಿ
ಸಕಲರನು
ಬಂಧು ಭಾಂದವರು
ಕಂಸನಂತಃಪುರದ ರಾಜಸ್ತ್ರೀಯರು
ಮಾತಾ ಪಿತೃಗಳಾದ ದೇವಕಿ ವಸುದೇವರು
ಸಾಕಿ ಸಲಹಿದ ಯಶೋದೆ ನಂದಗೋಪರು
ಮಧುರಾನಗರಿಯ ಕುಬ್ಜೆಗೆ ನೀಡಿದ ವಾಗ್ದಾನವ ಪೂರೈಸಿದ ಪರಿ

ಅಕ್ರೂರನಿಗೆ ವಚನವಿತ್ತಂತೆ ಭೇಟಿಯಾಗಿ
ಎಲ್ಲರ ಮನದಭೀಷ್ಟೆಯ ಅರಿತು
ಹರಸಿದ ಪರಿ ಅನನ್ಯ

ದೇವಕಿ ವಸುದೇವರು ಕೃಷ್ಣನು
ತಮ್ಮ ಪುತ್ರನೆಂಬ ಭಾವದಿಂದಿಲ್ಲದೆ
ಲೋಕೇಶ್ವರನೆಂಬ ಭಾವನೆಯಲ್ಲಿರುವುದ ಕಂಡು
ಅವರನು
ಅಮ್ಮಾ, ಅಯ್ಯಾ ಎಂದು ಸಂಬೋಧಿಸುತ
ಪುತ್ರನಾಗಿ ಹುಟ್ಟಿದರೂ
ಅವರ ಸೇವೆ ಮಾಡದೆ
ಕಷ್ಟ ಸುಖದಲ್ಲಿ ಭಾಗಿಯಾಗದೆ ಇದ್ದುದಕೆ

ಕ್ಷಮೆಯಾಚಿಸಿದ
ಕೃಷ್ಣನ ಮೋಹಕ ನುಡಿಗಳಿಗೆ ಮನಸೋತು
ಅವ ಜಗದೀಶ್ವರನೆಂಬ ಭಾವವ ಮರೆತು
ಪುತ್ರ ವಾತ್ಸಲ್ಯದಿ ತಬ್ಬಿದ
ವಸುದೇವ ದೇವಕಿಯರ ಆನಂದಕೆ ಎಣೆಯಿಲ್ಲ

ಪ್ರಿಯಮಿತ್ರ ಏಕಾಂತ ಭಕ್ತ ಉದ್ಧವನ
ನಂದಗೋಕುಲಕೆ ಕಳುಹಿಸಿ
ಯಶೋದೆ ನಂದಗೋಪರಿಗೆ
ತನ್ನ ಕ್ಷೇಮ ವಾರ್ತೆಯನರುಹಿಸಿ
ಅವರ ಸಮಾಧಾನಪಡಿಸಿದ ಕೃಷ್ಣ

ಇನ್ನು ಸದಾ ಕೃಷ್ಣ ಧ್ಯಾನಿಸಿ
ಸುಖಿಸುವ ದುಃಖಿಸುವ ಗೋಪಿಕೆಯರಿಗೆ
ಉದ್ಧವ ಅರುಹಿದ ಕೃಷ್ಣ ಸಂದೇಶ ಅನುಪಮ

ಗೋಪಿಕೆಯರಿಗೂ ಕೃಷ್ಣನಿಗೂ
ಎಂದಿಗೂ ವಿಯೋಗ ಉಂಟಾಗಲಾರದು
ಕೃಷ್ಣ ಎಲ್ಲರಲೂ ಯಾವಾಗಲೂ
ಆತ್ಮಭೂತನಾಗಿಹನು
ಮನಸ್ಸು ಬುದ್ಧಿ ಇಂದ್ರಿಯಗಳು
ಶಬ್ಧಾದಿ ವಿಷಯಗಳು ಮತ್ತು ಪ್ರಾಣ
ಎಲ್ಲದರಲೂ ಆಧಾರವಾಗಿ ನಿಮ್ಮಲ್ಲೇ ಇರುವನು
ಉದ್ಧವನರುಹಿದ ಕೃಷ್ಣ ಸಂದೇಶವ ಕೇಳಿ
ಗೋಪಿಯರು ಪ್ರೇಮ ಬಾಷ್ಪವ ಸುರಿಸುತ
ತಮ್ಮಲ್ಲಿ ಉದಿಸಿದ ಶಾಶ್ವತ ಕೃಷ್ಣ
ಅನುರಾಗದಲಿ ಮಿಂದೆದ್ದರು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
 
https://surahonne.com/?p=44913

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *