ಅಪ್ಪಾಜಿ, ನಿಮ್ಮ ಬಗ್ಗೆ ಏನು ಬರೆಯಲಿ? ಬಹಳಷ್ಟು ಸಾರಿ ಪ್ರಯತ್ನಿಸಿದೆ, ಆದರೆ ನಿಮ್ಮ ಬಗ್ಗೆ ಬರೆಯಲು ಆಗಲೇ ಇಲ್ಲ. ಅಮ್ಮನ ಬಗ್ಗೆ ಬರೆಯಲು ಕುಳಿತರೆ ಝುಳುಝುಳು ಎಂದು ನೀರು ಹರಿದಷ್ಟು ಸರಾಗವಾಗಿ ಬರೆದೆ. ಅಮ್ಮನ ಪ್ರೀತಿ ಶೀತಲವಾದ ಬೆಳದಿಂಗಳಿನಂತೆ ಆದರೆ ನಿಮ್ಮ ಪ್ರೀತಿ ಪ್ರಖರವಾದ ಬಿಸಿಲಿನಂತೆ. ಅಲ್ಲಿ ಶಾಖವಿದೆ, ಬೆಳಕಿದೆ ಹಾಗೂ ಶಕ್ತಿಯಿದೆ. ಮಕ್ಕಳ ಬಗ್ಗೆ ಇದ್ದ ಪ್ರೀತಿ, ವಾತ್ಸಲ್ಯ, ಕಾಳಜಿ ಎಲ್ಲವನ್ನೂ ಯಾರಿಗೂ ಕಾಣದ ಹಾಗೆ ತಮ್ಮ ಹೃದಯದಲ್ಲಿರಿಸಿ ಮೇಲೆ ಶಿಸ್ತು, ಗಾಂಭೀರ್ಯದ ಮುಸುಕು ಹೊದಿಸಿದ್ದರು. ನಿಮ್ಮ ಬಗ್ಗೆ ಬರೆಯಲು ಈ ಲೇಖನಿ, ಹಾಳೆ ಸಾಲದು. ನಿಮ್ಮನ್ನು ಶಿಸ್ತಿನ ಸಿಪಾಯಿ ಎಂದು ಕರೆಯಲೇ, ಸ್ವಚ್ಛತೆಯ ಹರಿಕಾರ ಎಂದು ಹೇಳಲೇ, ಶ್ರಮಜೀವಿ ಎನ್ನಲೇ, ತ್ಯಾಗ ಮತ್ತು ಪ್ರೀತಿಯ ಮಹಾ ಸಾಗರ ಎಂದು ಕರೆಯಲೇ ಅಥವಾ ಬಡ ರೋಗಿಗಳ ಆಪದ್ಬಾಂದವ ಎನ್ನಲೇ, ತಿಳಿಯದು. ನನ್ನ ಪಾಲಿಗೆ ನೀವೊಂದು ವಿಶಾಲವಾದ ಸರೋವರ ಇದ್ದಹಾಗೆ, ನನ್ನ ಪುಟ್ಟ ಬೊಗಸೆಯಲ್ಲಿ ಹಿಡಿದಷ್ಟು ಚಿತ್ರಗಳನ್ನು ಇಲ್ಲಿ ಕಟ್ಟಿಕೊಡುತ್ತೇನೆ.
ಆರಡಿ ಎತ್ತರದ ಅಜಾನುಬಾಹು, ಕಲ್ಲಿನಲಿ ಕೆತ್ತಿದ ಶಿಲ್ಪದ ಹಾಗೆ ಮಟ್ಟಸವಾದ ಶರೀರ. ನಸುಗಪ್ಪು ಬಣ್ಣ, ಗಂಭೀರವಾದ ನಿಲುವು. ನೀಳವಾದ ನಾಸಿಕ, ಹರಿತವಾದ ದೃಷ್ಟಿ. ಶಿಸ್ತು, ಸ್ವಚ್ಛತೆ ಹಾಗೂ ನೇರ ನಿಷ್ಠುರ ನುಡಿಗಳ ಒಡೆಯ. ನಮಗೆಲ್ಲಾ ವಿದ್ಯೆ ಕಲಿಸಿ, ಬದುಕಿನಲ್ಲಿ ಎದುರಾಗುವ ಅಡೆ ತಡೆಗಳನ್ನು ಧೈರ್ಯವಾಗಿ ಎದುರಿಸಲು ಕಲಿಸಿದವರು. ತಪ್ಪು ಮಾಡಿದಾಗ ತಿದ್ದಿ ಸರಿಯಾದ ದಾರಿಯಲ್ಲಿ ನಡೆಸಿದವರು. ನಮ್ಮ ಬಂಧು ಬಾಂಧವರ ಕುಟುಂಬಗಳಲ್ಲಿ ಏನಾದರೂ ಮನಸ್ತಾಪ ಉಂಟಾದಾಗ ಮಧ್ಯಸ್ಥಿಕೆ ವಹಿಸಿ ಸಮಧಾನ ಹೇಳುತ್ತಿದ್ದವರು. ಇವರೇ ಸುಮಾರು ಐವತ್ತು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಕಣ್ಣಿನ ಡಾಕ್ಟರ್ ಎಂದೇ ಹೆಸರಾಗಿದ್ದ ಡಾ. ಶಿವನಪ್ಪನವರು. ಇವರೇ ನನ್ನ ಅಪ್ಪಾಜಿ.
ಬೆಳಗಾಗೆದ್ದು ನಮ್ಮನ್ನೆಲ್ಲಾ ಎಬ್ಬಿಸಿ, ಓದಲು ಕೂರಿಸಿ ವಾಕಿಂಗ್ ಸ್ಟಿಕ್ ಹಿಡಿದು ಗೆಳೆಯರೊಂದಿಗೆ ಅಂಕಳೀಮಠದತ್ತ ಇವರ ನಡಿಗೆ. ಅಲ್ಲಿಂದ ಬಂದವರೇ ಊರಿನಲ್ಲಿ ನಡೆದ ಸುದ್ದಿಯನ್ನು ಅಮ್ಮನಿಗೆ ಹೇಳುತ್ತಾ ಪೇಪರ್ ಹಿಡಿದು ಕೂರುವರು. ಇನ್ನು ಸ್ನಾನ ಮಾಡಿ, ದೇವರ ಪೂಜೆಯನ್ನು ಮಾಡಿ, ಇಷ್ಟಲಿಂಗವನ್ನು ಅಂಗೈಲಿ ಹಿಡಿದು ಅವರು ಧ್ಯಾನ ಮಾಡುವುದನ್ನು ನೋಡುತ್ತಲೇ ಬೆಳೆದವರು ನಾವು. ಸೋಮವಾರ ಶಿವನಿಗೆ ಪ್ರಿಯವಾದ ರುದ್ರಪಠಣ, ಶನಿವಾರ ‘ಶನಿದೇವರ ಮಹಾತ್ಮೆ’ ತಪ್ಪದೇ ಓದುವರು. ದೇವರಕೋಣೆಯಲ್ಲಿ ಮಂತ್ರಗಳನ್ನು ಹೇಳುತ್ತಾ ಪೂಜೆ ಸಲ್ಲಿಸಿ, ಪಡಸಾಲೆಯ ಗೋಡೆಗಳ ಮೇಲಿದ್ದ ಬಸವ, ಬುದ್ಧ, ರಾಮಕೃಷ್ಣ ಪರಮಹಂಸರ ಫೋಟೋಗಳಿಗೆಲ್ಲಾ ಹೂ ಮುಡಿಸಿ ಪೂಜೆ ಸಲ್ಲಿಸುವರು. ಅಜ್ಜಿ ತಾತನವರ ಫೋಟೋಗಳ ಮುಂದೆ ಕ್ಷಣಕಾಲ ಧ್ಯಾನದ ಭಂಗಿಯಲ್ಲಿ ನಿಲ್ಲುವರು. ಎಂದೂ ನಾಳೆಗೆಂದು ಹಣದ ಉಳಿತಾಯ ಮಾಡಿದ್ದು ನೆನಪಿಲ್ಲ. ದೇವರಿದ್ದಾನೆ, ಬದುಕಿನಲ್ಲಿ ಎದುರಾಗುವ ಕಷ್ಟಸುಖಗಳಿಗೆ ನೆರವಾಗುತ್ತಾನೆ ಎಂಬ ಅಚಲವಾದ ನಂಬಿಕೆ ಇವರದು. ಕುರುಡು ಸಂಪ್ರದಾಯಗಳು, ಮೂಢ ನಂಬಿಕೆಗಳ ವಿರುದ್ದ ಸಿಡಿದೇಳುತ್ತಿದ್ದರು. ನಮ್ಮ ನಮ್ಮ ಕೆಲಸವನ್ನು ಶ್ರದ್ಧೆ ನಿಷ್ಠೆಯಿಂದ ಮಾಡಿದರೆ ಅದೇ ಕೈಲಾಸ ಎನ್ನುವ ಭಾವ ಅವರಿಗೆ.
ಒಂಭತ್ತು ಗಂಟೆಗೆ ಸರಿಯಾಗಿ ಗರಿಗರಿಯಾದ ಪ್ಯಾಂಟು ಷರ್ಟ್ ಧರಿಸಿ, ಮನೆಯ ಮುಂಬಾಗದಲ್ಲಿದ್ದ ಆಸ್ಪತ್ರೆಯಲ್ಲಿ ಕೂರುವರು. ತಮ್ಮ ಕ್ಲಿನಿಕ್ಕಿಗೆ ಬಂದ ರೋಗಿಗಳನ್ನು ಪರೀಕ್ಷಿಸಿ, ಅವರಿಗೆ ಮಾತ್ರೆ, ಔಷಧಗಳನ್ನು ನೀಡುತ್ತಿದ್ದರು. ನಮ್ಮ ಆಸ್ಪತ್ರೆಯಲ್ಲಿ ಅಂದು ಯಾವುದೇ ಬಗೆಯ ಕನ್ಸಲ್ಟೇಷನ್ ಫೀಸ್ ಇರಲಿಲ್ಲ. ರೋಗಿಗಳು ಬಡವರಾಗಿದ್ದರೆ, ಅವರಿಗೆ ಸ್ಯಾಂಪಲ್ ಬಂದ ಔಷಧಿಗಳನ್ನೂ ಉಚಿತವಾಗಿ ನೀಡುತ್ತಿದ್ದರು. ಪಕ್ಕದಲ್ಲಿದ್ದ ಕೊಠಡಿಯಲ್ಲಿ ಒಂದು ಎತ್ತರವಾದ ಟೇಬಲ್ ಇತ್ತು. ಅಲ್ಲಿದ್ದ ಸ್ಟೂಲ್ ಹತ್ತಿಯೇ ಟೇಬಲ್ ಮೇಲೆ ಮಲಗಬೇಕಾಗಿತ್ತು. ಬಿ.ಪಿ.ನೋಡುವುದು, ಇಂಜೆಕ್ಷನ್ ಕೊಡುವುದು, ಡ್ರಿಪ್ ಹಾಕುವುದು, ಕಣ್ಣಿನ ಆಪರೇಷನ್, ಹೆರಿಗೆ ಮಾಡಿಸುವುದು ಇತ್ಯಾದಿ ವೈದ್ಯಕೀಯ ಚಿಕಿತ್ಸೆ ನೀಡುವ ಸ್ಥಳ ಇದಾಗಿತ್ತು. ಸಾಮಾನ್ಯವಾಗಿ ಅಪ್ಪಾಜಿಗೆ ಅಮ್ಮನೇ ನರ್ಸ್. ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದ ಅಮ್ಮನಿಗೆ ನರ್ಸ್ ತರಬೇತಿಯನ್ನು ನೀಡಿದ್ದರು. ಕೆಲವು ಬಾರಿ ಸಣ್ಣಪುಟ್ಟ ಚಿಕಿತ್ಸೆ ಮಾಡುವಾಗ ನಾವೂ ಕೈಜೋಡಿಸುತ್ತಿದ್ದೆವು. ಮನೆಗೆ ಬಂದರೆ, ಆಸ್ಪತ್ರೆಗೆ ಬಂದ ರೋಗಿಗಳ ಖಾಯಿಲೆಗಳ ಬಗ್ಗೆ, ನಮಗೆ ವಿವರಗಳನ್ನು ಹೇಳುತ್ತಾ, ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನೂ ಹೇಳುತ್ತಿದ್ದರು.
ರೋಗಿಗಳನ್ನು ಆತ್ಮೀಯವಾಗಿ ಮಾತಾಡಿಸುತ್ತಲೇ, ಅವರಿಗೆ ಚಿಕಿತ್ಸೆ ಮಾಡುತ್ತಿದ್ದರು. ಅವರ ವ್ಯವಹಾರ, ವ್ಯಾಪಾರ, ವ್ಯವಸಾಯದ ಬಗ್ಗೆ ಚರ್ಚಿಸುತ್ತಿದ್ದರು. ಹಳ್ಳಿಯಿಂದ ಗಾಡಿ ಕಟ್ಟಿಕೊಂಡು ಬರುವ ಬಡ ರೋಗಿಗಳ ಬಗ್ಗೆ ವಿಶೇಷವಾದ ಕಾಳಜಿ. ರಾತ್ರಿ ಬಂದು ಬಾಗಿಲು ಬಡಿಯುತ್ತಿದ್ದ ರೋಗಿಗಳ ಬಳಿ ಎಂದೂ ಚಿಕಿತ್ಸೆಗೆ ತಕ್ಷಣ ಹಣ ನೀಡಿ ಎಂಬ ಒತ್ತಡ ಹಾಕುತ್ತಿರಲಿಲ್ಲ. ಕೆಲವು ಬಾರಿ ಹಣದ ಬದಲು ಅವರು ಬೆಳೆದ ಜೋಳ, ಈರುಳ್ಳಿ, ಮೆಣಸಿನಕಾಯಿ, ತರಕಾರಿಗಳು ನಮ್ಮ ಮನೆಗೆ ಬಂದು ಬೀಳುತ್ತಿದ್ದವು. ಕಣ್ಣಿನ ವೈದ್ಯರಾಗಿದ್ದ ಮೋದಿಯವರ ಜೊತೆ ಕೈಜೋಡಿಸಿ, ಕ್ಯಾಂಪಿನಲ್ಲಿ ಉಚಿತವಾಗಿ ಸೇವೆ ಮಾಡುತ್ತಿದ್ದರು. ಚಿತ್ರದುರ್ಗದ ಮುರುಘಾಮಠದ ವೈದ್ಯರಾಗಿದ್ದು, ಅಲ್ಲಿಯೂ ಉಚಿತವಾದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು. ಸಾಂಕ್ರಾಮಿಕ ರೋಗಗಳು (ಕಾಲರಾ) ಬಂದಾಗ ತಮ್ಮ ಕ್ಲಿನಿಕ್‌ನಲ್ಲಿಯೇ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನೇಷನ್ ಹಾಕುತ್ತಿದ್ದರು. ಆದರೆ ಅಪ್ಪಾಜಿಯನ್ನು ಹಿಡಿದು ವ್ಯಾಕ್ಸಿನೇಷನ್ ಹಾಕಲು ಇಬ್ಬರು ವೈದ್ಯರು ಬೇಕಾಗಿತ್ತು, ಇಂಜೆಕ್ಷನ್ ಎಂದರೆ ಮಾರುದೂರ ಓಡುತ್ತಿದ್ದರು.
ಅಪ್ಪಾಜಿ ವೃತ್ತಿಯಲ್ಲಿ ವೈದ್ಯರು, ಯಾವ ಸ್ಪೆಷಾಲಿಟಿ ಅಂತ ಕೇಳ್ತೀರಾ? ಅವರು ಮೂಲತಃ ನೇತ್ರತಜ್ಞರು, ಜೊತೆಗೆ ಎಂತಹದೇ ಕ್ಲಿಷ್ಟಕರವಾದ ಹೆರಿಗೆ ಮಾಡಿಸುವುದರಲ್ಲಿ ನಿಪುಣರು, ಹುಳುಕು ಹಲ್ಲುಗಳನ್ನು ಲೀಲಾಜಾಲವಾಗಿ ಕೀಳಬಲ್ಲರು, ಫಿಸಿಶಿಯನ್, ಬಂಜೆತನಕ್ಕೂ ಚಿಕಿತ್ಸೆ ನೀಡುತ್ತಿದ್ದರು. ಅಪ್ಪಾಜಿ ಓದಿದ್ದು ಎಲ್.ಎಮ್.ಪಿ. ಎಂಬ ವೈದ್ಯ ಕೋರ್ಸ್. ಅಂದು ಎಲ್.ಎಮ್.ಪಿ. ಮಾಡಿದವರು ಎಮ್.ಬಿ.ಬಿ.ಎಸ್. ಪದವಿ ಪಡೆಯಲು ಕೇವಲ ಎರಡು ವರ್ಷ ವ್ಯಾಸಂಗ ಮಾಡಬೇಕಾಗಿತ್ತು. ಇವರಿಗೆ ಚೆನ್ನೈನಲ್ಲಿ ಸೀಟೂ ಸಿಕ್ಕಿತ್ತು, ಅದರೆ ದುರದೃಷ್ಟವಶಾತ್ ಅಪ್ಪಾಜಿ ಆ ಕಾಲೇಜಿಗೆ ಕಟ್ಟಬೇಕಾದ ಶುಲ್ಕವನ್ನು ಹೊಂದಿಸಿಕೊಂಡು ಹೋಗುವ ಹೊತ್ತಿಗೆ ಎರಡು ದಿನ ತಡವಾಗಿತ್ತು. ಅವರ ಸೀಟನ್ನು ಬೇರೆಯವರಿಗೆ ನೀಡಲಾಗಿತ್ತು. ಹಾಗಾಗಿ ಅಪ್ಪಾಜಿ ಮನೆಗೆ ಹಿಂದಿರುಗಿ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇರಿ ತಮ್ಮ ವೈದ್ಯವೃತ್ತಿಯನ್ನು ಆರಂಭಿಸಿದರು. ಮುಂದೆ ಹತ್ತು ವರ್ಷ ಕಳೆದ ಬಳಿಕ ನೇತ್ರತಜ್ಞರಾಗಲು ಚೆನ್ನೈನಲ್ಲಿ ಮೂರು ವರ್ಷಗಳ ಕೋರ್ಸನ್ನು ಯಶಸ್ವಿಯಾಗಿ ಮುಗಿಸಿದರು. ಈ ಕೋರ್ಸಿನ ಫೀಸು ಕಟ್ಟಲು ಅಮ್ಮನ ಕೈಲಿದ್ದ ನಾಲ್ಕು ಚಿನ್ನದ ಬಳೆಗಳನ್ನು ಮಾರಾಟ ಮಾಡಬೇಕಾಯಿತಂತೆ. ನಂತರದಲ್ಲಿ ಮಕ್ಕಳ ಓದು ಸುಗಮವಾಗಿ ಸಾಗಲಿ ಎಂದು ಸರ್ಕಾರಿ ನೌಕರಿ ಬಿಟ್ಟು ಚಿತ್ರದುರ್ಗದಲ್ಲಿ ಸ್ವಂತ ಕ್ಲಿನಿಕ್ ಹಾಕಿದರು. ಪ್ರತಿ ಭಾನುವಾರ ಚಳ್ಳಕೆರೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಕಾರಣ ಅಂದು ಸಂತೆಯ ದಿನವಾಗಿದ್ದರಿಂದ ಹೆಚ್ಚು ಜನ ಸೇರುತ್ತಿದ್ದರು. ಹೀಗೆ ಹಗಲೂ ರಾತ್ರಿ ಕುಟುಂಬ ನಿರ್ವಹಣೆ ಮಾಡಲು ದುಡಿಯುತ್ತಿದ್ದರು.
ಅಪ್ಪಾಜಿ ಆಗಾಗ್ಗೆ ತಮ್ಮ ಬಾಲ್ಯದ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ನಮ್ಮ ಬಳಿ ಹೀಗೆ ಹೇಳುತ್ತಿದ್ದರು, ‘ನಾನು ಪ್ರತಿ ಭಾನುವಾರ ನಡೆಯುತ್ತಿದ್ದ ಚಳ್ಳಕೆರೆ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದೆ. ಮುಂಜಾನೆ ಖಾಲಿ ಚೀಲ ಹಿಡಿದು ಹೋಗುತ್ತಿದ್ದೆ, ಹತ್ತಿ, ಸೇಂಗಾ, ಕಡಲೆ, ಹುರುಳಿ, ಮೆಣಸಿನಕಾಯಿ ಇವುಗಳನ್ನು ರೈತರಿಂದ ಕೊಂಡು ನಂತರ ಮಾರುತ್ತಿದ್ದೆ. ಸಂಜೆಯ ವೇಳೆಗೆ, ವ್ಯಾಪಾರದಲ್ಲಿ ಬಂದ ಲಾಭದೊಂದಿಗೆ ಮತ್ತೆ ಖಾಲಿ ಚೀಲ ಹೊತ್ತು ಮನೆಗೆ ಹಿಂತಿರುಗುತ್ತಿದ್ದೆ. ಜೊತೆಗೆ ಟೈಲರಿಂಗ್ ಮಾಡುತ್ತಿದ್ದೆ. ಒಮ್ಮೆ ಶರ್ಟಿನ ಭುಜದ ಭಾಗವನ್ನು ಮರೆತು ಕತ್ತರಿಸಿಬಿಟ್ಟೆ, ನಂತರ ತೇಪೆ ಹಚ್ಚಿದೆ. ಆಗ ಬಂದ ಗಿರಾಕಿಗೆ, ‘ನೋಡಿ, ಇದು ಈಗಿನ ಫ್ಯಾಷನ್’ ಎಂದು ಮನವೊಲಿಸಿದ್ದು ನೆನಪಾಗಿ ಈಗಲೂ ನಗು ಬರುತ್ತದೆ. ಹೀಗೆ ಬಂದ ಹಣದಲ್ಲಿ ಸ್ಕೂಲಿನ ಖರ್ಚು ವೆಚ್ಚ ಸರಿದೂಗಿಸುತ್ತಿದ್ದೆ. ನಾನು ಮತ್ತು ನಮ್ಮಣ್ಣ ಸರತಿಯ ಮೇಲೆ ಒಂದು ವರ್ಷ ಸ್ಕೂಲು ಮತ್ತು ಒಂದು ವರ್ಷ ಕೆಲಸ ಮಾಡಿ ಹೈಸ್ಕೂಲು ವಿದ್ಯಾಭ್ಯಾಸ ಮುಂದುವರೆಸಿದೆವು. ನಂತರ ಜಯದೇವ ಹಾಸ್ಟೆಲ್ಲಿನಲ್ಲಿದ್ದು ಓದು ಮುಂದುವರೆಸಿದೆವು. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳೆಲ್ಲಾ ನುಣ್ಣಗೆ ತಲೆ ಬೋಳಿಸಿ ತಲೆಗೆ ಗಂಧ ಹಚ್ಚಿ, ಗಾಂಧಿ ಟೊಪ್ಪಿ ಹಾಕಿ ಕಾಲೇಜಿಗೆ ಹೋಗಬೇಕಿತ್ತು. ನಾನು ಓದುತ್ತಿದ್ದ ಮೆಡಿಕಲ್ ಕಾಲೇಜಿನಲ್ಲಿ, ನನ್ನ ಸಹಪಾಠಿಗಳು ನನ್ನ ಬೋಳು ತಲೆ ನೋಡಿ ಲೇವಡಿ ಮಾಡುತ್ತಿದ್ದರು. ಒಂದು ತಿಂಗಳು ನಾನು ಕ್ಷೌರಿಕನಿಂದ ಮೆಲ್ಲನೆ ತಪ್ಪಿಸಿಕೊಂಡು ತಲೆಯ ಮೇಲೆ ಬಂದ ಅಲ್ಪಸ್ವಲ್ಪ ಕೂದಲಿನೊಂದಿಗೆ ಕಾಲೇಜಿಗೆ ಹೋದೆ. ಅದನ್ನು ಕಂಡ ಜಯದೇವ ಸ್ವಾಮಿಗಳು ನನ್ನನ್ನು ಕರೆದು ಹೇಳಿದ್ದು, ಇನ್ನೂ ಕಿವಿಗಳಲ್ಲಿ ಗುಂಯ್ ಗುಡುತ್ತಿದೆ, ‘ನೋಡು, ಕ್ರಾಪ್ ಬಿಡೋದ್ರಿಂದ ಅದಕ್ಕೆ ಎಣ್ಣೆ ಬೇಕು, ಬಾಚಣಿಕೆ ಬೇಕು, ಕನ್ನಡಿ ಬೇಕು ಜೊತೆಗೆ ನಿತ್ಯ ಕೂದಲು ಬಾಚಲು ಹತ್ತು ನಿಮಿಷ ಸಮಯ ಬೇಕು. ಕೂದಲನ್ನು ಬೋಳಿಸುವುದರಿಂದ ಯಾವ ಖರ್ಚೂ ಇಲ್ಲ. ನೀನೇ ಹೇಳು ಯಾವುದು ಸರಿ ಎಂದು, ನೀನು ಕ್ರ‍್ರಾಪ್ ಬಿಡುವುದೇ ಸರಿ ಎಂದರೆ, ನಾನೂ ನಿನ್ನ ಹಾಗೆ ಕ್ರಾಪ್ ಬಿಡುತ್ತೇನೆ’ ಎಂದಾಗ ನಾಚಿಕೆಯಿಂದ ತಲೆ ಬಗ್ಗಿಸಿದ್ದೆ.
‘ಶಿವನಪ್ಪನ ರಥ’ ಎಂದು ಹೆಸರು ಹೊತ್ತ ಜೀಪೊಂದು ಅಪ್ಪಾಜಿ ಬಳಿ ಇತ್ತು. ಅದು ಎರಡನೆಯ ಮಹಾಯುದ್ಧ ಸಮಯದಲ್ಲಿ ಬಳಸಿದ್ದ ಜೀಪ್ ಎಂದು ಅಪ್ಪಾಜಿ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಒಮ್ಮೆ ರಾತ್ರಿ ಸಮಯದಲ್ಲಿ ಶ್ರೀಶೈಲಕ್ಕೆ ಹೋಗುವ ಹಾದಿಯಲ್ಲಿ – ಹುಲಿಯೊಂದು ಎದುರಾಯಿತಂತೆ. ಜೀಪ್‌ಗೆ ಬಾಡಿ ಕಟ್ಟಿಸಿರಲಿಲ್ಲ. ಜೀಪ್‌ನಲ್ಲಿ ಕುಳಿತವರಿಗೆ ಮೈಯೆಲ್ಲಾ ನಡುಕ. ಕೆಲಕ್ಷಣಗಳ ಕಾಲ ಇವರನ್ನೇ ದಿಟ್ಟಿಸಿ ನೋಡಿದ ಹುಲಿ ಹಾಗೆಯೇ ಕಾಡಿನಲ್ಲಿ ಮರೆಯಾಯಿತಂತೆ. ಅಲ್ಲಿಂದ ಹಿಂತಿರುಗಿ ಬಂದ ಮೇಲೆ ಸುರಕ್ಷತೆಗಾಗಿ ಜೀಪ್‌ಗೆ ಲೋಹದ ಬಾಡಿ ಕಟ್ಟಿಸಿದರು. ಜೀಪ್‌ನಲ್ಲಿ ಹತ್ತರಿಂದ ಹನ್ನೆರೆಡು ಜನ ಒಬ್ಬರ ಮೇಲೊಬ್ಬರು ಕುಳಿತು ಹೋಗುತ್ತಿದ್ದೆವು. ಅಪ್ಪಾಜಿಯ ಸ್ನೇಹಿತರು ‘ಇದು ಶಿವನಪ್ಪನ ರಥ ಎಂದು ಲೇವಡಿ ಮಾಡುತ್ತಿದ್ದರಂತೆ’ ಜೀಪ್‌ನಿಂದ ಇಳಿಯುತ್ತಿರುವವರ ಸಂಖ್ಯೆಯನ್ನು ಎಣಿಸುತ್ತಾ ಹಾಸ್ಯ ಮಾಡುತ್ತಿದ್ದರಂತೆ. ಅಪ್ಪಾಜಿಗೆ ಪ್ರವಾಸ ಮಾಡುವ ಹವ್ಯಾಸ. ಪ್ರತಿ ಬಾನುವಾರ ಚಿತ್ರದುರ್ಗದ ಕೋಟೆ, ಜೋಗಿಮಟ್ಟಿ, ಚೇಳುಗುಡ್ಡ, ಅಂಕಳೀಮಠ, ಮಾರಿಕಣಿವೆ.. ಹೀಗೆ ನಮ್ಮನ್ನೆಲ್ಲಾ ತಿರುಗಾಡಿಸುತ್ತಿದ್ದರು. ಸ್ಕೂಲಿಗೆ ರಜೆ ಬಂದ ತಕ್ಷಣ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಜೀಪಿನಲ್ಲಿ ನಮ್ಮನ್ನೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಜೊತೆಗೆ, ಪ್ರವಾಸ ಹೋದಾಗ, ನೀರಿನಲ್ಲಿ ಇಳಿದಾಗ ಏನಾದರೂ ಅನಾಹುತ ಸಂಭವಿಸಿದರೆ ಅಂತೆ ನಮಗೆ ಅವರ ಸ್ನೇಹಿತರ ತೋಟದಲ್ಲಿದ್ದ ಕಪಿಲೆ ಭಾವಿಯಲ್ಲಿ ಈಜು ಕಲಿಸಿದ್ದರು. ಪ್ರತಿವರ್ಷ ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಮೆಡಿಕಲ್ ಕಾನ್ಫರೆನ್ಸ್ ಗಳಿಗೆ ತಪ್ಪದೇ ಅಮ್ಮನನ್ನೂ ಕರೆದುಕೊಂಡು ಹೋಗುತ್ತಿದ್ದರು, ಹಾಗೆಯೇ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ನೋಡಿ ಬರುತ್ತಿದ್ದರು. ಇವರ ಮತ್ತೊಂದು ಹವ್ಯಾಸ ‘ಟೆನ್ನಿಸ್’. ಈ ಆಟದಲ್ಲಿ ಹಲವು ಟ್ರೋಫಿಗಳನ್ನೂ ಗೆದ್ದಿದ್ದರು.
ಅಪ್ಪಾಜಿಯರಿಂದ ನಮಗೆಲ್ಲಾ ದೊರೆತ ಅತ್ಯಮೂಲ್ಯವಾದ ಕೊಡುಗೆ ಎಂದರೆ ವಿದ್ಯೆ. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೇ ಬೇಕು, ನಾಳೆ ಬದುಕಿನಲ್ಲಿ ಅವರಿಗೆ ಏನಾದರೂ ತೊಂದರೆಯಾದರೆ, ಕಲಿತ ವಿದ್ಯೆ ಅವರಿಗೆ ಊರುಗೋಲಾದೀತು ಎಂಬ ದೂರದೃಷ್ಟಿ ಅಪ್ಪಾಜಿಗೆ ಐವತ್ತು ದಶಕಗಳ ಹಿಂದೆಯೇ ಇತ್ತು. ರಜೆ ಬಂದ ತಕ್ಷಣ ನಮ್ಮನ್ನು ಹಿಂದಿ, ಸಂಸ್ಕೃತ, ಇಂಗ್ಲಿಷ್ ಗ್ರಾಮರ್ ಕ್ಲಾಸುಗಳಿಗೆ ಸೇರಿಸಿಬಿಡುತ್ತಿದ್ದರು. ಅಷ್ಟೇ ಅಲ್ಲ ಟೈಪ್‌ರೈಟಿಂಗ್, ಶಾರ್ಟ್ಹ್ಯಾಂಡ್ ತರಗತಿಗಳಿಗೂ ಸೇರಿಸುತ್ತಿದ್ದರು. ಹೀಗೆ ನಮ್ಮನ್ನು ಸದಾ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸುತ್ತಿದ್ದರು, ಹೆಣ್ಣುಮಕ್ಕಳು ತವರಿನಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡಿ ಬೆಳೆದರೆ, ಮುಂದೆ ಗಂಡನ ಮನೆಯಲ್ಲಿ ಸುಖವಾಗಿರುವರು ಎಂಬ ಸಿದ್ದಾಂತ ಅವರದು. ಓದು, ಮನೆಗೆಲಸ ಹಾಗೂ ಸಂಜೆ ಹೊತ್ತು ಆಟ ಹೀಗಿತ್ತು ನಮ್ಮ ದಿನಚರಿ. ಸಂಜೆ ಬೀದಿ ದೀಪ ಹಚ್ಚಿದ ತಕ್ಷಣ ಆಟ ನಿಲ್ಲಿಸಿ, ಮನೆಗೆ ಹಿಂದಿರುಗಿ, ಕೈಕಾಲು ಮುಖ ತೊಳೆದು ದೇವರ ಮುಂದೆ ನಿಂತು ಶ್ಲೋಕಗಳನ್ನು ಹೇಳಬೇಕಿತ್ತು. ನಾನು ಹೆಣ್ಣುಮಕ್ಕಳ ಸ್ಥಿತಿ ಗತಿಯ ಬಗ್ಗೆ ಆಗಾಗ್ಗೆ ವಾದ ಮಾಡುತ್ತಿದ್ದೆ. ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದ ಅಪ್ಪಾಜಿ ನನಗೆ ಬುದ್ದಿ ಹೇಳುತ್ತಿದ್ದ ಮಾತುಗಳಿವು, ‘ನೀನು ಲಾಯರ್ ಹಾಗೆ ವಾದ ಮಾಡುತ್ತೀಯಾ, ನೀನು ಹೇಳುವುದೆಲ್ಲಾ ಸರಿ. ಆದರೆ ವಾಸ್ತವ ಬದುಕು ಬೇರೆಯೇ, ಇಂದಿನ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದು ಜಾಣತನ’.
ವೈದ್ಯರಾಗಿದ್ದ ಅಪ್ಪಾಜಿಯವರಿಗೆ ನಮ್ಮ ಆರೋಗ್ಯದ ಬಗ್ಗೆ ಇನ್ನಿಲ್ಲದ ಕಾಳಜಿ. ಹಣ್ಣು, ಸೊಪ್ಪು, ತರಕಾರಿಗಳನ್ನು ಚೆನ್ನಾಗಿ ತಿಂದರೆ ಯಾವುದೇ ರೋಗರುಜಿನಗಳು ಬರುವುದಿಲ್ಲ ಎಂದು ಹೇಳುತ್ತಲೇ ಇದ್ದರು. ಮನೆಯಲ್ಲಿ ಸದಾ ಹಣ್ಣುಗಳ ಗುಡಾಣ ಇರುತ್ತಿತ್ತು. ಮನೆಯ ಬಳಿ ಮಾವಿನ ಹಣ್ಣಿನ ಪುಟ್ಟಿ ಹೊತ್ತು ಮಾರಲು ಬಂದವರ ಹತ್ತಿರ ಒಂದು ಅಥವಾ ಎರಡು ಡಜನ್ ಹಣ್ಣುಗಳನ್ನು ಎಂದೂ ಕೊಳ್ಳುತ್ತಿರಲಿಲ್ಲ, ಬದಲಿಗೆ ಇಡೀ ಪುಟ್ಟಿಯನ್ನು ಖರೀದಿಸುತ್ತಿದ್ದರು. ಮನೆಯಲ್ಲಿ ಸದಾ ಹಾಲು ಕೊಡುವ ಎಮ್ಮೆ ಇರುತ್ತಿತ್ತು. ಬೆಣ್ಣೆ, ತುಪ್ಪ ಎಂದರೆ ಅಪ್ಪಾಜಿಗೆ ತುಸು ಪ್ರೀತಿ ಹೆಚ್ಚೆ. ‘ತುಪ್ಪದ ಕುಡಿಕೆಯಲ್ಲಿರುವ ಸಣ್ಣ ಚಮಚ ತೆಗೆದು, ಹಾಗೇ ತುಪ್ಪ ಬಗ್ಗಿಸು ಬಾಮ್ಮಾ, ನಿಮ್ಮ ಅಮ್ಮನಿಗೆ ತುಪ್ಪ ಬಡಿಸಲು ಬರಲ್ಲ’ ಎಂದು ಮಕ್ಕಳನ್ನು ಕೂಗಿ ಕರೆಯುತ್ತಿದ್ದರು. ‘ಕಾಫಿ, ಟೀ ಎಂದರೆ ಅದು ಒಂದು ದುರಭ್ಯಾಸ, ನಿತ್ಯ ಸ್ವಲ್ಪ ಸ್ವಲ್ಪವೇ ವಿಷ ಸೇವಿಸಿದ ಹಾಗೆಯೇ’ ಎಂದು ಮನೆಗೆ ಬಂದವರ ಮುಂದೆಲ್ಲಾ ಹೇಳುತ್ತಾ, ಅಪ್ಪಾಜಿ ಅವರಿಗೆ ಮುಜುಗರ ಉಂಟು ಮಾಡುತ್ತಿದ್ದ ಪ್ರಸಂಗಗಳೂ ಉಂಟು.
ನಮ್ಮ ಬಂಧು ಬಾಂಧವರಿಗೆಲ್ಲಾ ನಮ್ಮ ಮನೆ ನರ್ಸಿಂಗ್ ಹೋಂ ಇದ್ದಂತೆ. ಅವರಿಗೆ ಖಾಯಿಲೆಯಾದರೆ ವಾರಗಟ್ಟಲೆ ನಮ್ಮ ಮನೆಯಲ್ಲೇ ಮೊಕ್ಕಾಂ. ಇನ್ನು ಹಳ್ಳಿಯಿಂದ ಓದಲು ಬರುವ ನೆಂಟರಿಗೂ ನಮ್ಮ ಮನೆ ಹಾಸ್ಟೆಲ್‌ನಂತೆ. ಎಲ್ಲರನ್ನೂ ತಮ್ಮ ಮಕ್ಕಳಂತೆಯೇ ಸಲಹುತ್ತಿದ್ದರು. ಒಮ್ಮೆ ನಮ್ಮ ಊರಿನ ಪೋಸ್ಟ್ ಆಫೀಸಿಗೆ ವರ್ಗಾವಣೆ ಬಂದ ಪೋಸ್ಟ್ ಮಾಸ್ಟರ್‌ವೊಬ್ಬರು ಅಪ್ಪಾಜಿಯವರ ಬಳಿ ಹೇಳಿದರಂತೆ, ‘ನಾನು ಜಂಗಮ. ನಿತ್ಯ ಎರಡು ಬಾರಿ ಸ್ನಾನ ಮಾಡಿ ಗದ್ದುಗೆ ಕಂಬಳಿಯ ಮೇಲೆ ಕುಳಿತೇ ಊಟ ಮಾಡುವುದು. ಏನು ಮಾಡಲಿ? ತಕ್ಷಣ ಅಪ್ಪಾಜಿ, ‘ನಮ್ಮ ಮನೆಗೆ ಬನ್ನಿ. ಸಂಕೋಚ ಬೇಡ. ಅಂದಿನಿಂದ ಎರಡು ವರ್ಷಗಳ ಕಾಲ ಅವರು ನಿತ್ಯ ಎರಡು ಬಾರಿ ನಮ್ಮ ಮನೆಗೆ ಸ್ನಾನ, ಪೂಜೆ ಹಾಗೂ ಊಟಕ್ಕೆ ಬರುತ್ತಿದ್ದರು. ಇಂತಹ ಘಟನೆಗಳು ಅದೆಷ್ಟೋ.
ಹಿರಿಯ ಮಗಳಾದ ಗಿರಿಜಕ್ಕನ ಮೇಲೆ ವಿಶೇಷ ಪ್ರೀತಿ. ಅವಳೂ ಅಪ್ಪಾಜಿಯ ಗುಣಗಳನ್ನೇ ಮೈಗೂಡಿಸಿಕೊಂಡು ಬೆಳೆದವಳು. ಆಸ್ಪತ್ರೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಅವಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಎರಡನೆಯ ಮಗಳು ನಿರ್ಮಲ ಬಿ.ಎಸ್.ಸಿ. ಪದವಿ ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಎರಡನೆಯ ರ‍್ಯಾಂಕು ಪಡೆದಾಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ. ಅವಳ ಹಠಕ್ಕೆ ಮಣಿದು ಎಮ್.ಎಸ್.ಸಿ. ಮಾಡಲು ಮೈಸೂರಿಗೆ ಕಳುಹಿಸಬೇಕಾಯಿತು. ಅವಳ ಜೊತೆ ಗಿರಿಜಕ್ಕನೂ ಹಠ ಮಾಡಿ ತನ್ನ ಓದನ್ನು ಮುಂದುವರೆಸಿದಳು. ಹೂವಿನ ಜೊತೆ ನಾರೂ ಸ್ವರ್ಗ ಸೇರುವ ಹಾಗೆ ನಾನೂ ಅವರ ಜೊತೆ ಮೈಸೂರಿನ ಮಹಾರಾಣಿ ಕಾಲೇಜಿಗೆ ಸೇರಿದೆ. ಮಗನನ್ನು ಮೆಡಿಕಲ್ ಕಾಲೇಜಿಗೆ ಸೇರಿಸಬೇಕೆಂಬ ಹಂಬಲ, ಆದರೆ ಅವನಿಗೆ ಇಂಜಿನಿಯರಿಂಗ್ ಕಡೆ ಒಲವು. ಕೊನೆಗೆ ಮಗನ ಆಸೆಯೇ ಫಲಿಸಿತ್ತು. ಮಂಜು ಇಂಜನಿಯರಿಂಗ್ ಪದವಿ ಪಡೆಯಲು ಮೈಸೂರಿನ ಎನ್.ಐ.ಇ. ಕಾಲೇಜಿಗೆ ಸೇರಿದ. ನಮ್ಮ ಪುಸ್ತಕಗಳು ಮೈಸೂರಿನಲ್ಲಿ ಸಿಗದೆ ಇದ್ದರೆ, ಅಪ್ಪಾಜಿ ಬೆಂಗಳೂರಿಗೆ ಹೋಗಿ ಎಲ್ಲಾ ಪುಸ್ತಕಗಳನ್ನೂ ಕೊಂಡು ಹೊತ್ತು ತರುತ್ತಿದ್ದರು.
ಅಕ್ಕಂದಿರಿಬ್ಬರೂ ಹಗಲೂ ರಾತ್ರಿ ಓದುತ್ತಿದ್ದರು. ಇಬ್ಬರಿಗೂ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದಲ್ಲಿ ಒಟ್ಟಿಗೇ ಚಿನ್ನದ ಮೆಡಲ್ ದೊರೆತಾಗ ಅಪ್ಪಾಜಿಯ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ತಮ್ಮ ಪರಿಶ್ರಮ, ತ್ಯಾಗಕ್ಕೆ ತಕ್ಕ ಬೆಲೆ ಸಿಕ್ಕಿತೆಂದು ಹಿರಿಹಿರಿ ಹಿಗ್ಗಿದರು. ನಿರ್ಮಲಕ್ಕನ ಗುರುಗಳು, ‘ನಿಮ್ಮ ಮಗಳು ಪ್ರತಿಭಾನ್ವಿತ ವಿದ್ಯಾರ್ಥಿ, ಅವಳು ಸಂಶೋಧನೆ ಮಾಡಲಿ’ ಎಂದು ಹೇಳಿದಾಗ ಮರುಮಾತಿಲ್ಲದೆ ಒಪ್ಪಿದ್ದರು. ಮುಂದೆ ಹಿರಿಯ ಮಗ ಇಂಜಿನಿಯರ್ ಆಗಿ ಧಾರವಾಡದಲ್ಲಿ ಕೆಲಸಕ್ಕೆ ಸೇರಿದ್ದ. ಆಗ ನನ್ನ ಮೂವರು ತಂಗಿಯರು ಧಾರವಾಡದಲ್ಲಿ ತಮ್ಮ ಓದನ್ನು ಮುಂದುವರೆಸಿದರು. ನನ್ನ ತಂಗಿ ಪೂರ್ಣಿಮಾ ಕ್ರೀಡಾರಂಗದಲ್ಲಿ ಹೆಚ್ಚಿನ ಅಸಕ್ತಿ ತೋರಿಸಿದಾಗ, ಪಾಠಪ್ರವಚನಗಳ ಬಗ್ಗೆ ಗಮನ ಇರಲಿ ಎಂದು ಕಿವಿ ಹಿಂಡಿದ್ದರು. ಕೊನೆಯ ಮಗ ಶಿವು, ಅವರಂತೆಯೇ ಕಣ್ಣಿನ ಡಾಕ್ಟರ್ ಆದಾಗ ಅವರಿಗೆ ಸಂತೃಪ್ತಿಯಾಗಿತ್ತು.
ಅಪ್ಪಾಜಿಯವರ ಮಾರ್ಗದರ್ಶನದಲ್ಲಿ ನಾವು ಎಲ್ಲರೂ ಡಬ್ಬಲ್ ಡಿಗ್ರಿ ಪಡೆದೆವು. ಉದ್ಯೋಗಸ್ಥರಾದೆವು. ಎಂಟು ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡಿ ಉದ್ಯೋಗಕ್ಕೆ ಸೇರಿಸಿದ್ದೊಂದು ಅವರ ಸಾಧನೆಯೆಂದೇ ಹೇಳಬಹುದು. ಹೆಣ್ಣುಮಕ್ಕಳಿಗೆ ಶಿಕ್ಷಕವೃತ್ತಿಯೇ ಸರಿ, ಶಾಲಾಕಾಲೇಜುಗಳಲ್ಲಿ ಅವರಿಗೆ ಸುರಕ್ಷಿತ ವಾತಾವರಣ ಇರುತ್ತದೆ. ಮಕ್ಕಳಿಗೆ ರಜೆ ಬಂದಾಗ ಶಿಕ್ಷಕರಿಗೂ ರಜೆ, ಕುಟುಂಬ ಮತ್ತು ಉದ್ಯೋಗ ಎರಡನ್ನೂ ಸರಾಗವಾಗಿ ತೂಗಿಸಿಕೊಂಡು ಹೋಗಲು ಸಾಧ್ಯ ಎಂಬುದು ಅವರ ನಂಬಿಕೆಯಾಗಿತ್ತು.
ಮತ್ತೊಂದು ಸ್ವಾರಸ್ಯಕರ ಸಂಗತಿ ನನ್ನ ಮನದಾಳದಲ್ಲಿ ಉಳಿದು ಬಿಟ್ಟಿದೆ. ಅಪ್ಪಾಜಿಯವರಿಗೆ ‘ಚಿನ್ನ ಎಂದರೆ ಒಂದು ಹಳದಿ ಲೋಹ. ಅದನ್ನು ಕಳ್ಳ ಕದಿಯಬಹುದು, ಆದರೆ ವಿದ್ಯೆ ಯಾರೂ ಕದಿಯಲಾರದ ಆಸ್ತಿ ಎಂದು ಸುಮಾರು ಅರವತ್ತು ವರ್ಷಗಳ ಹಿಂದೆಯೇ ಮನಗಂಡಿದ್ದವರು. ಗಂಡಿನ ಕಡೆಯವರು ಹೆಣ್ಣನ್ನು ನೋಡಲು ಬಂದಾಗ, ‘ಮದುವೆಯ ಸಮಯದಲ್ಲಿ ಗಂಡಿಗೊಂದು ಉಂಗುರ, ಬಟ್ಟೆಗೆಂದು ಒಂದು ಸಾವಿರದ ಒಂದೂ ರೂಗಳನ್ನಷ್ಟೇ ಕೊಡುವುದು. ಉಳಿದಂತೆ ನಾನು ಒಂದು ಗ್ರಾಮ್ ಚಿನ್ನ ಕೊಡುವುದಿಲ್ಲ, ಒಂದು ರೂಪಾಯಿ ವರದಕ್ಷಿಣೆ ಕೊಡುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಿದ್ದರು. ಬಂಧುಬಾಂಧವರು, ‘ನಿನ್ನ ಮಕ್ಕಳಿಗೆ ಈ ಜನ್ಮದಲ್ಲಿ ಮದುವೆಯಾಗಲ್ಲ ಬಿಡು’ ಎಂದು ಹಂಗಿಸುತ್ತಿದ್ದರೂ, ಅಪ್ಪಾಜಿ ನಕ್ಕು ಸುಮ್ಮನಿದ್ದು ಬಿಡುತ್ತಿದ್ದರು. ಕಾಲ ಬದಲಾದ ಹಾಗೆ ಜನರ ಆಲೋಚನೆಗಳೂ ಬದಲಾದವು, ಗಂಡ ಹೆಂಡತಿ ಇಬ್ಬರೂ ದುಡಿದರೆ ಸಂಸಾರ ಸಾಗಿಸುವುದು ಸರಾಗ ಎಂಬ ಭಾವ ಜನರಲ್ಲಿ ಮೂಡತೊಡಗಿತ್ತು. ಡಾಕ್ಟರ್ ಮಕ್ಕಳು ಸುಸಂಸ್ಕೃತರು, ವಿದ್ಯಾವಂತರು, ಜೊತೆಗೆ ಉದ್ಯೋಗ ಮಾಡುತ್ತಿದ್ದಾರೆ ಎಂಬ ಭಾವ ಬೆಳೆದು ಎಲ್ಲರ ಮದುವೆಯೂ ಹೂವೆತ್ತಿದಷ್ಟು ಸುಸೂತ್ರವಾಗಿ ನಡೆದಿತ್ತು.
ಅಮ್ಮ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ನಿಧನರಾದ ಮೇಲೆ ಅಪ್ಪಾಜಿ ಒಂಟಿಯಾದರು. ಬೆಳಗಾಗೆದ್ದವರು, ‘ಶಾರದಾ’, ಅಂತ ಕೂಗುತ್ತಲೇ ಏಳುತ್ತಿದ್ದರು. ಸತಿ ಪತಿಗಳ ನಡುವೆ ಇರುವ ಬಾಂಧವ್ಯ ಅಷ್ಟು ಗಟ್ಟಿಯಾಗಿತ್ತು. ಗಿರಿಜಕ್ಕ ಅವರನ್ನು ತಾಯಿಯಂತೆ ಜೋಪಾನ ಮಾಡಿದಳು. ಅವರಿಗೆ ಬೇಸರವಾಗದಂತೆ ಮಕ್ಕಳು ಅವರನ್ನು ತಮ್ಮ ತಮ್ಮ ಮನೆಗೆ ಕರೆದೊಯ್ದು ಪ್ರೀತಿಯಿಂದ ಶುಶ್ರೂಷೆ ಮಾಡಿದರೂ, ಅವರಿಗೆ ಚಿತ್ರದುರ್ಗದಲ್ಲಿದ್ದ ತಮ್ಮ ಮನೆಯದೇ ಕನವರಿಕೆ. ಕೊನೆಗೆ ಮಗನ ಮನೆಯಲ್ಲಿ ತಮ್ಮ ಕೊನೆಯುಸಿರೆಳೆದರು. 1918 ರಲ್ಲಿ ಹುಟ್ಟಿದ ಅಪ್ಪಾಜಿ 2009 ರಲ್ಲಿ ಅಂದರೆ 91 ವರ್ಷಗಳ ಕಾಲ ಸುದೀರ್ಘ ಬಾಳ್ವೆ ನಡೆಸಿ ಅಮ್ಮನ ಜೊತೆ ಸೇರಲು ಹೊರಟಿದ್ದರು.
ವೈದ್ಯರಾಗಿದ್ದ ಅಪ್ಪಾಜಿ, ಜ್ಞಾನಯೋಗಿಯಾಗಿದ್ದರು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಧಿಸಿದ ಪುಸ್ತಕಗಳನ್ನು ಓದುತ್ತಿದ್ದರು, ಕಾನ್ಫರೆನ್ಸ್ ಗಳಿಗೆ ತಪ್ಪದೇ ಹಾಜರಾಗುತ್ತಿದ್ದರು. ಇವರು ಕರ್ಮಯೋಗಿಯಾಗಿದ್ದರು, ತಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆ, ನಿಷ್ಠೆಯಿಂದ ಮಾಡುತ್ತಿದ್ದರು. ಇವರು ಭಕ್ತಿಯೋಗಿಯೂ ಆಗಿದ್ದರು, ಜಯದೇವ ಸ್ವಾಮಿಗಳ ಆಶ್ರಯದಲ್ಲಿ ವಿದ್ಯೆ ಕಲಿತವರು. ಧಾರವಾಡದ ಮೃತ್ಯುಂಜಯ ಅಪ್ಪನವರ ಶಿಷ್ಯರು, ತುಮಕೂರಿನ ಸಿದ್ದಗಂಗಾಮಠದ ಶ್ರೀ ಶಿವಕುಮಾರ ಸ್ವಾಮಿಗಳ ಸಿದ್ದಾಂತಗಳನ್ನು ಅಕ್ಷರಶಃ ಪಾಲಿಸಿದವರು.

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ




ಲೇಖನದ ಸೊಗಸನ್ನು ವರ್ಣಿಸಲಸದಳ. ನಾವೂ ಬಾಲ್ಯದಿಂದಲೂ ನೋಡಿಕೊಂಡು ಬಂದಿದ್ದ ಅಪ್ಪಾಜಿಯವರ ವ್ಯಕ್ತಿ ಚಿತ್ರಣ ಸೊಗಸಾಗಿ ಮೂಡಿ ಬಂದಿದೆ.
ಲೇಖಕರ ಮನೆಯಲ್ಲಿರುತ್ತಿದ್ದ ಪಟ್ಟದ ತಾತನವರನ್ನು ಕರೆದುಕೊಂಡು ಬರಲು ಅವರ ಮನೆಗೆ ಹೋಗುತ್ತಿದ್ದಾಗ ಅವರ ಮನೆಯ ಆದರಾತಿಥ್ಯದ ಸವಿಯನ್ನು ಅನುಭವಿಸಿದ್ದೇವೆ.
ಒಟ್ಟಾರೆ ಲೇಖನ ನಮ್ಮನ್ನು 50 ವರ್ಷಗಳ ಹಿಂದಕ್ಕೆ ಕರೆದೊಯ್ದಿದೆ. ಸರಳ ಸುಲಲಿತ ಭಾಷೆ ಸರಾಗವಾಗಿ ಓಡಿಸಿಕೊಂಡು ಹೋಗುತ್ತದೆ.
ಲೇಖಕಿಯವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ನಿಮ್ಮ ಪ್ರತಿಕ್ರಿಯೆ ಗೆ ವಂದನೆಗಳು
Excellent tribute to a dear father. Wish many read it and attempt to remember their father’s contribution to their present status. Wish the author heartfelt thanks for this very touching write-up.
Thanks a lot Mohan
Too much of discipline for our Father in law, best tolerated by all sons and daughters which enabled them to settle in life and lead a satisfactory life
I hope our next generation will not follow these bringing up children this way. We salute him for disciplinary life well and peaceful life led by
Thanks for remembering the good old days
ಸುಂದರ ಅತಿ ಸುಂದರ ಒಬ್ಬರ ವ್ಯಕ್ತಿತ್ವ ವನ್ನು ಹೇಗೆ ಕಟ್ಟಿ ಕೊಡಲು ಸಾದ್ಯ.. ಹೇಗೆ ಕಟ್ಟಬಹುದು ಎನ್ನುವಂತಿದೆ ನಿಮ್ಮ ತಂದೆಯವರ ಪರಿಚಯ… ವಂದನೆಗಳು ಗಾಯತ್ರಿ ಮೇಡಂ..
ಸದಾ ನಾನು ಬರೆದ ಲೇಖನಗಳನ್ನು ಓದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ನಿಮಗೆ ಹೃದಯಪೂರ್ವಕ ವಂದನೆಗಳು
ಚೆನ್ನಾಗಿದೆ
ವಂದನೆಗಳು
ಬಹಳ ಒಳ್ಳೆಯ ವ್ಯಕ್ತಿ ಪರಿಚಯ. ಇಂತಹವರ ಮಾರ್ಗದರ್ಶನದಲ್ಲಿ ಬೆಳೆದ ನೀವು ಪುಣ್ಯವಂತರು.
ನೀವು ಸಲ್ಲಿಸಿದ ಪ್ರೇಮಾಂಜಲಿಗಾಗಿ ಅವರ ಆತ್ಮ ಸಂತೃಪ್ತಿ ಹೊಂದಿರುತ್ತದೆ.
ನಿಮ್ಮ ಪ್ರತಿಕ್ರಿಯೆ ಓದಿ ಹೃದಯ ತುಂಬಿ ಬಂತು
ಪೂರ್ಣ ಪ್ರಮಾಣದ ವ್ಯಕ್ತಿತ್ವದ ವ್ಯಕ್ತಿಗಳು ಬಹಳ ಅಪರೂಪ. ಪ್ರೀತಿಯ ಅಪ್ಪಾಜಿಗೆ ಮುದ್ದಿನ ಮಗಳ ಅರ್ಥಪೂರ್ಣ ನುಡಿನಮನ
ತುಂಬು ಹೃದಯದಿಂದ ನನ್ನ ನಮನಗಳನ್ನು ನಿಮ್ಮ ಅಭಿಮಾನದ ಅನಿಸಿಕೆಗಳಿಗೆ ಸಲ್ಲಿಸುತ್ತಿರುವೆ
Tumbaa chennagi barediddeera atte..very very inspiring article
ಆಗಿನ ಮನೆಗಳ ಚಿತ್ರಣ ನಮಗೆ ದೊರೆಯುವುದರ ಜೊತೆಗೆ .ಹಿರಿಯರ ಶಿಸ್ತು ಹಾಗೂ ಧರ್ಮದ ಬಗ್ಗೆ ಅವರಿಗಿದ್ದ ಅಭಿಮಾನ ಭಕ್ತಿ ನಮಗೆ ಕಾಣ ಸಿಗುತ್ತದೆ. ಗಾಯತ್ರಿ ಮೇಡಂ ಅವರ ಬರಹ ಎಂದಿನಂತೆ ಓದಿಸಿಕೊಂಡು ಹೋಗುತ್ತದೆ….ಅವರ ಪೂಜ್ಯ ಅಪ್ಪಾಜಿಯವರ ಚಿತ್ರಣ ಕಣ್ಣು ಮುಂದೆ ಬರುತ್ತದೆ. ಪ್ರತಿಭಾವಂತ ಮಕ್ಕಳು ಅವರ ಅಪ್ಪಾಜಿಯವರ ಆಸೆಯಂತೆ ಓದಿ ಮುಂದೆ ಬಂದಿದ್ದು ಅವರ ಪರಿಶ್ರಮ ಶ್ರದ್ಧೆ ತೋರಿಸುತ್ತದೆ