ಬೆಳಗಿನ ಒಂದು ಸುತ್ತಿನ ಕೆಲಸ ಮುಗಿಸಿದ ವನಜ ಇಳಿದಿದ್ದ ಫ್ರೆಷ್ ಡಿಕಾಕ್ಷನ್ನನ್ನು ಬೆರೆಸಿ ಕಾಫಿಮಾಡಿ ಎರಡು ಲೋಟಗಳಿಗೆ ಬಗ್ಗಿಸಿ ಒಂದು ಚಿಕ್ಕ ಬಟ್ಟಲಲ್ಲಿ ನಾಲ್ಕು ನ್ಯೂಟ್ರಿಚಾಯ್ಸ್ ಮಾರಿ ಬಿಸ್ಕತ್ತುಗಳನ್ನು ಇಟ್ಟುಕೊಂಡು ಹೊರಬಂದು ಗಂಡ ಲೋಕೇಶ್ ಅವರನ್ನು ಎಬ್ಬಿಸಿದರು.
ಏಳ್ರೀ, ನಿಮ್ಮ ಬೆಡ್ ಕಾಫಿ, ನ್ಯೂಸ್ ಪೇಪರ್ ರೆಡಿಯಾಗಿದೆ, ಆಮೇಲೆ ಆರಿಹೋಯ್ತು ಅಂದ್ರೆ ಮತ್ತೆ ನಾನು ಬಿಸಿ ಮಾಡೋಲ್ಲಾ. . . .
ಆಯ್ತು ಮಾರಾಯ್ತಿ, ಎದ್ದಿದೀನಿ, ನೀನು ಕಾಫಿ ತಂದು ಎಬ್ಬಿಸ್ತೀಯಾ ಅಂತಾನೇ ಕಾಯ್ತಾ ಇದ್ದೆ – ಎನ್ನುತ್ತಾ ಮೇಲೆದ್ದು ಲೋಕೇಶ್ ಹೊರಬಂದರು.
ದಂಪತಿಗಳಿಬ್ಬರಿಗೂ ಮಧುಮೇಹ ಜೀವನದ ಅವಿಭಾಜ್ಯ ಅಂಗವಾದ್ದರಿಂದ ಬೆಳಗಿನ ಶುಗರಲೆಸ್ ಕಾಫಿಗೆ ನ್ಯೂಟ್ರಿಚಾಯ್ಸ್ ಜೊತೆಗೊಡುತಿತ್ತು.ಕಾಫಿ ಕುಡಿದು ವೃತ್ತ ಪತ್ರಿಕೆಯ ಮೇಲೆ ಕಣ್ಣು ಹಾಯಿಸುತ್ತಿದ್ದಾಗ ಜಾಗಿಂಗ್ ಹೋಗಿದ್ದ ಮಗ ಸೂರಜ್ ಬೆವರು ಸುರಿಸುತ್ತಾ ಒಳಬಂದವನೇ –
ಅಮ್ಮಾ, ಅಪ್ಪಾ, ನಿಮಗೇನೋ ಹೇಳಬೇಕಿದೆ – ಅಂದ. ನಮ್ಮೊಡನೆ ಮಾತಾಡಲು ಅಪಾಯಿಂಟ್ಮೆಂಟ್ ಅಗತ್ಯವಿಲ್ಲ, ನಿನ್ನ ಮಾತುಗಳನ್ನು ಕೇಳೋಕೆ ನಾವುಗಳು ಸದಾ ಸಿದ್ಧ, ಹೇಳು ಮಗನೆ – ಎಂದರು ವನಜ.
ಮೂರು ದಿನಗಳಿಂದ ಟೆನಷನ್ ತಡಿಯೋಕೆ ಆಗ್ತಾಯಿಲ್ಲ, ಸೀದಾ ಹೇಳಿಬಿಡ್ತೀನಿ, ನಾನು ಕಾರುಣ್ಯಾನ ಪ್ರೀತಿಸುತ್ತಾ ಇದ್ದೀನಿ, ಅವಳನ್ನೇ ಮದುವೆ ಆಗೋದು . . .
ವನಜ, ಲೋಕೇಶ್ ಇಬ್ಬರೂ ಜೋರಾಗಿ ನಗಹತ್ತಿದರು.
ಯಾಕೆ ನಗ್ತಾ ಇದ್ದೀರಾ? ನಾನೇನು ಜೋಕ್ ಮಾಡ್ತಾ ಇಲ್ಲ
ನಗುವನ್ನು ತಹಬದಿಗೆ ತಂದುಕೊಳ್ಳುತ್ತಾ ಹೇಳಿದರು ಲೋಕೇಶ್ –
ಅಬ್ಬಾ, ಯ್ಯಾವತ್ತಿಗೆ ನಮ್ಮ ಮಗ ಬಂದು ಹೇಳ್ತಾನೋ ಅಂತ ಕಾಯ್ತಾ ಇದ್ವು. ನಿಮ್ಮಿಬ್ಬರ ಒಡನಾಟ ನೋಡೇ ನಮಗೆ ಗೊತ್ತಾಗಿತ್ತು. ನಮಗಂತೂ ಯಾವ ಅಭ್ಯಂತರವೂ ಇಲ್ಲ, ನೀನು ಹುಂ ಅಂದ್ರೆ ಇಂದೇ ಪುರೋಹಿತರನ್ನು ಕರೆಸಿ ಮುಹೂರ್ತ ಇಡಿಸೋಣ
ವನಜ – ಒಂದು ಜೊತೆ ಹರಳಿನ ಬಳೆ, ಒಂದು ಜೊತೆ ಚಿನ್ನದ ಬಳೆ, ಒಂದು ಸೆಟ್ ನೆಕ್ಲೇಸ್, ಓಲೆ, ಝುಮುಕಿ, ಆಫ್ ಕೋರ್ಸ್ ಮಾಂಗಲ್ಯದ ಸರ, ಸಧ್ಯಕ್ಕೆ ಇಷ್ಟು ಸಾಕಲ್ವೇನೋ?
ಅಮ್ಮಾ, ಅಪ್ಪಾ ಏನು ಹೇಳ್ತಾ ಇದ್ದೀರಾ?
ಲೋಕೇಶ್ – ಹೌದು ಮಗನೆ, ಓದಿ ಬರೆದು ಕೆಲಸಕ್ಕೆ ಸೇರಿ ಎಲ್ಲಾ ತರಹದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ನೀನು ಚಿಕ್ಕ ವಯಸ್ಸಿನಿಂದ ಕಂಡು ಕೇಳಿದ, ಪಕ್ಕದ ಮನೆಯ ಸುಶೀಲೆ, ಸುಗುಣೆ ಕಾರುಣ್ಯಾಳನ್ನು ಮದುವೆಯಾಗ್ತೀನಿ ಅಂದ್ರೆ, ನಮ್ಮಷ್ಟು ಸಂತೋಷ ಪಡೋರು ಯಾರೂ ಇಲ್ಲ.
ಥ್ಯಾಂಕ್ಯೂ ಸೋ ಮಚ್ ಅಪ್ಪಾ, ಅಮ್ಮಾ – ಎನ್ನುತ್ತಾ ಕಾರುಣ್ಯಳಿಗೆ ಫೋನಾಯಿಸಲು ಓಳಗೋಡಿದ ಸೂರಜ್.
ಕಾಲ್ ಕಟ್ ಮಾಡಿದ ಕಾರುಣ್ಯಾ, ʼಐ ವಿಲ್ ಕಾಲ್ ಯು ಲೇಟರ್ʼ ಎಂದು ಮೆಸೇಜ್ ಕಳುಹಿಸಿದಳು.
ಅವರುಗಳು ನಿರ್ಧರಿಸಿದ್ದರು, ಇಂದು ಬೆಳಗ್ಗೆ ೮-೧೫ ಗಂಟೆಗೆ ಸರಿಯಾಗಿ ಇಬ್ಬರೂ ಒಟ್ಟಿಗೇ ಮನೆಗಳಲ್ಲಿ ವಿಷಯ ತಿಳಿಸೋಣ, ಎಂದು.
ಇಲ್ಲಿ ಈ ಪ್ರತಿಕ್ರಿಯೆಯಾದರೆ ಅಲ್ಲಿ, ಕಾರುಣ್ಯಾ ಮನೆಯಲ್ಲಿ ಬೇರೆಯದೇ ಮಾತುಕತೆ ನಡೆದಿತ್ತು.
ʼನಾವು ಸ್ಮಾರ್ಥರು, ಅವರು ಮುದ್ರೆಯವರು, ಅದ್ಹೇಗೆ ಆಗುತ್ತೆ ಕಾರುಣ್ಯಾ, ನೋಡಿದವರು ಏನಂತಾರೆ, ಅಲ್ಲದೆ ನಮ್ಮ ಅವರ ಪದ್ದತಿಗಳೂ ಬೇರೆ ಬೇರೆ . . . ಕಾರುಣ್ಯಾ ತಾಯಿ ಕಮಲಮ್ಮನವರು ವಿರೋಧಿಸಹತ್ತಿದರು.
ತಂದೆ ಗೋಪಾಲರಾಯರು – ನನ್ನದೇನೂ ಇಲ್ಲಾಮ್ಮ, ನಿಮ್ಮಮ್ಮ ಹೇಗೆ ಹೇಳ್ತಾಳೋ ಹಾಗೆ – ಎಂದರು.
ಕಾರುಣ್ಯಾ – ಯಾವ ಕಾಲದಲ್ಲಿ ಇದೀಯಾಮ್ಮಾ ನೀನು? ನಾನಂತೂ ಸೂರಜ್‌ನನ್ನು ಪ್ರೀತಿ ಮಾಡ್ತಾ ಇದೀನಿ, ನೀವು ಒಪ್ಪಿ ಮದುವೆ ಮಾಡಿಕೊಟ್ರೆ ಖುಷಿಯಾಗಿ ಮಾಡ್ಕೋತೀವಿ, ಇಲ್ಲಾ ಅಂದ್ರೂ ಅತ್ಕೊಂಡು ಅವನನ್ನೇ ಮಾಡ್ಕೋಳ್ಳೋದು ಅಷ್ಟೇ – ಅನ್ನುತ್ತಾ ಮುಖ ಊದಿಸಿಕೊಂಡು ರೂಮಿನೆಡೆ ನಡೆದಳು.
ಈ ಮಾತುಕತೆಗಳು ನಡೆಯುವಾಗಲೇ ಸೂರಜ್ ಫೋನ್ ಬಂದಿದ್ದು, ಕಟ್ ಮಾಡಿ ಮೆಸೇಜ್ ಮಾಡಿದ್ದಳು. ಮನಸ್ಸು ವ್ಯಘ್ರವಾಗಿತ್ತು. ಈ ಅಪ್ಪ ಅಮ್ಮಂದಿರು ಅದ್ಯಾಕೆ ಲವ್ ಮ್ಯಾರೇಜ್ ಅಂದ್ರೆ ವಿರೋಧಿಸಲೇ ಬೇಕು ಅನ್ಕೋತಾರೋ ಕಾಣೆ. ಇಲ್ಲಿ ಅಮ್ಮ ಕೊಂಯ್ಯ್ ಅನ್ನುತ್ತಿದ್ದಾಳೆ, ಅಪ್ಪಾನಾದ್ರೂ ಹೇಳ್ಬೋದಲ್ವಾ, ಅದು ಬಿಟ್ಟು ಎಂದಿನಂತೆ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಬುದ್ಧಿ, ಇಲ್ಲಿ ಈ ರಂಪ ಆಗಿದ್ರೆ, ಅಲ್ಲಿ ಇನ್ನು ಏನೇನು ಗಲಾಟೆಗಳು ಆಗಿರುತ್ವೋ, ಇವರುಗಳು ಬೇಡ ಅನ್ನಲು ಕಾರಣವೇ ಕೊಡಬಾರದೆಂದು ನಾನು, ಸೂರಜ್ ಎಷ್ಟು ಯೋಚನೆ ಮಾಡಿ, ಓದು ಮುಗಿಸಿ ಕೆಲಸಕ್ಕೆ ಸೇರಿ, ಎಜ಼ುಕೇಶನ್ ಲೋನ್ ತೀರಿಸಿ, ಸರಳ ಮದುವೆ ಮತ್ತು ಸಂಸಾರ ಹೂಡಲು ಅಗತ್ಯದ ಹಣವನ್ನು ಕೂಡಿಟ್ಟುಕೊಂಡು ಮನೆಯಲ್ಲಿ ಹೇಳಿದರೂ ವಿರೋಧಿಸುತ್ತಿದ್ದಾರಲ್ಲಾ, ಚಿಕ್ಕ ವಯಸ್ಸಿನಿಂದ ಎರಡೂ ಕುಟುಂಬಗಳು ಒಂದೇ ರಸ್ತೆಯಲ್ಲಿ ವಾಸಿಸುತ್ತಾ ಅನ್ಯೋನ್ಯವಾಗಿದ್ದೇವೆ, ಆದರೂ ಛೇ . . ಎಂದು ಬೇಸರದಿಂದ ತಲೆ ಕೋಡವಿಕೊಳ್ಳುತ್ತಾ ಸೂರಜ್ ಗೆ ಫೂನ್ ಮಾಡಿದಳು.
ಏನಾಯ್ತು ಕಾರುಣ್ಯಾ . . . – ಫೋನ್ ರಿಸೀವ್ ಮಾಡಿದ ಸೂರಜ್ ಕಾತುರದಿಂದ ಕೇಳಿದ.
ಅಮ್ಮಾ ಕೊಂಯ್ಯ್ ಅನ್ನುತ್ತಿದ್ದಾರೆ, ನಿಮ್ಮನೆಯಲ್ಲಿ ಏನಾಯಿತು? – ಬೇಸರದಿಂದಲೇ ಕೇಳಿದಳು ಕಾರುಣ್ಯಾ.
ಬೇಜಾರು ಮಾಡಿಕೊಳ್ಳ ಬೇಡ, ಇದೆಲ್ಲ ಇದದ್ದೇ. ಹ್ಯಾಗೂ ನಾವು ಎದುರಿಸಿ ಒಪ್ಪಿಸಲು ಸಿದ್ಧರಿದ್ದೇವಲ್ಲಾ, ಆದರೂ ಬಿ ಹ್ಯಾಪಿ, ನಾವು ಎಪ್ಪತೈದು ಪರ್ಸೆಂಟ್ ಗೆದಿದ್ದೇವೆ.
ನನಗೆ ಎಪ್ಪತೈದು ಪರ್ಸೆಂಟ್ ಬೇಡಾ ಸೂರಜ್, ನಾನು ತೊಂಭತ್ತೇಳು ಪರ್ಸೆಂಟಿಗಿಂತ ಕಮ್ಮಿ ಎಂದಿಗೂ ಒಪ್ಪಿಕೊಂಡಿಲ್ಲ.
ಚಿಕ್ಕ ವಯಸ್ಸಿನಿಂದ ಎಲ್ಲದರಲ್ಲೂ ಜಾಣೆ, ಬುದ್ಧಿವಂತೆಯಾಗಿದ್ದ ಕಾರುಣ್ಯಾ ಹೇಳುತ್ತಲೇ – ಸ್ಸಾರಿ, ಅಮ್ಮನ ಮಾತಿನಿಂದ ತಲೆಕೆಟ್ಟು ಜೀವನಾನ, ನಾ ಪಡೆದ ಮಾರ್ಕುಗಳೊಂದಿಗೆ ತಾಳೆ ಹಾಕಿಬಿಟ್ಟೆ, ಏನದು ಎಪ್ಪತೈದು ಪರ್ಸೆಂಟ್, ಬಿಡಿಸಿ ಹೇಳು ಸೂರಜ್.
ಸೂರಜ್ ತನ್ನ ಮನೆಯಲ್ಲಿ ನಡೆದ ಮಾತುಕತೆಗಳನ್ನು ವಿಷದವಾಗಿ ತಿಳಿಸಿ, – ಅದರೊಂದಿಗೆ ನಿಮ್ಮ ಅಪ್ಪಂದೂ ಏನು ಅಬ್ಜೆಕ್ಷನ್ ಇಲ್ಲಾ ಅಂದ ಮೇಲೆ ಎಪ್ಪತೈದು ಪರ್ಸೆಂಟ್ ಸಕ್ಸಸ್ ಅಲ್ಲವಾ? ನಿಮ್ಮ ಅಮ್ಮನನ್ನು ಈ ಮೂರು ಜನಾ ಸೇರಿ ಒಪ್ಪಿಸುವಂತೆ ಮಾಡೋಣ, ಡೋಂಟ್ ವರಿ, ಇಂದು ಸಂಜೆ ಎಂದಿನಂತೆ ಸಿಗೋಣ – ಎನ್ನುತ್ತಾ ಫೋನ್ ಇಟ್ಟ.
ಸಂಜೆ ಇಬ್ಬರೂ ಭೇಟಿ ಮಾಡಿ ಒಂದೆರಡು ಗಂಟೆಗಳನ್ನು ಒಟ್ಟಿಗೇ ಕಳೆದು ಹಿಂದಿರುಗಿ ಬಂದಾಗ ಆಶ್ಚರ್ಯ ಕಾದಿತ್ತು.
ಈ ಕಡೆ ವನಜ, ಲೋಕೇಶರು ಸಂಜೆಯಾಗುತ್ತಲೇ ಹಣ್ಣು, ಹೂವು ಸಿಹಿಯೊಂದಿಗೆ ಅದೇ ರಸ್ತೆಯ ಆರನೇ ಮನೆಯಲ್ಲಿ ವಾಸವಿದ್ದ ಕಾರುಣ್ಯಾ ಬಂದವರೇ ವನಜಾ –
ನಾವು ಕನ್ಯಾರ್ಥಿಯಾಗಿ, ನಮ್ಮ ಮಗನಿಗೆ ನಿಮ್ಮ ಮಗಳನ್ನು ಕೊಡಿ ಎಂದು ಕೇಳಲು ಬಂದಿದ್ದೇವೆ ಎಂದರು.
ಇನ್ನೂ ಬೆಳಗಿನ ಘಟನೆಯಿಂದಲೇ ಚೇತರಿಸಿಕೊಂಡಿರದಿದ್ದ ಕಮಲಮ್ಮ, ಧಡೀರ್ ಆಗಿ ಈಗ ಬಂದವರನ್ನು ನೋಡಿ ಏನೂ ಹೇಳಲು ತೋಚದೆ – ಬನ್ನಿ, ಬನ್ನಿ, ಎನ್ನುತ್ತಾ ಪೆಚ್ಚಾಗಿ ಸ್ವಾಗತಿಸಿದರು.
ಗೋಪಾಲರಾಯರೇ ಸಾವರಿಸಿಕೊಂಡು ವಿಷಯಕ್ಕೆ ಬಂದರು –
ನಮ್ಮನೆಯವಳಿಗೆ, ನಮ್ಮ ನಿಮ್ಮ ಒಳಪಂಗಡಗಳಲ್ಲಿ ಭೇದ ಇರುವುದರಿಂದ ಹೊಂದಿಕೊಳ್ಳುವುದು ಕಷ್ಟವಾಗುತ್ತೇನೋ, ನೆಂಟರು ಇಷ್ಟರು ಏನನ್ನುತ್ತಾರೋ ಎಂದು ಚಿಂತೆ ಹಚ್ಚಿಕೊಂಡಿದ್ದಾಳೆ – ಎಂದರು.
ನಿಮ್ಮ ಅಭಿಪ್ರಾಯವೇನು? – ಲೋಕೇಶ್ ಕೇಳಿದರು.
ನನ್ನ ಹೆಂಡತಿ ಹೇಳಿದಂತೆ – ನಗುತ್ತಾ ಹೇಳಿದರು ಗೋಪಾಲರಾಯರು.
ವನಜಾ ಕಮಲಮ್ಮನವರಿಗೆ ಎದುರಾಗಿ ಕುಳಿತು ಹೇಳಿದರು – ಕಮಲಾ, ನಿಮ್ಗೆ ನಮ್ಮ ಸೂರಜನಲ್ಲಿ ಏನಾದರೂ ಕುಂದು ಕೊರತೆಗಳು ಕಾಣಿಸುತ್ತಿದೆಯಾ?
ಛೇ, ಛೇ ಚಿಕ್ಕ ವಯಸ್ಸಿನಿಂದ ನೋಡಿಲ್ಲವೇ? ಜಾಣ, ಬುದ್ಧಿವಂತ, ಒಳ್ಳೆಯ ಹುಡುಗ, ಅಭಿಮಾನ ಅಕ್ಕರೆ ಉಳ್ಳವನು,
ನಮ್ಮ ಮನೆಯಲ್ಲಿ ನಿಮ್ಮ ಮಗಳು ಸುಖವಾಗಿ ಇರುವುದಿಲ್ಲವೆಂಬ ಅನುಮಾನವೇನಾದರೂ ಇದೆಯಾ?
ಖಂಡಿತಾ ಇಲ್ಲ, ನಿಮ್ಮಷ್ಟು ವಿಶಾಲ ಮನಸ್ಸಿನವರನ್ನು ಕಂಡು ನಾನೇ ಎಷ್ಟೋ ಸಲ ಆಶ್ಚರ್ಯ ಪಟ್ಟಿದ್ದೇನೆ
ಮತ್ತೆ ಬಿಡಿ, ಒಳಪಂಗಡ, ಹೊರಪಂಗಡ ಏನಿದೆಲ್ಲಾ? ನಮ್ಮ ಮಕ್ಕಳ ಸಂತೋಷದ ಬಗ್ಗೆ ನಾವು ಯೋಚಿಸಬೇಕಲ್ಲವೇ? ಕಾಣದ ಮನೆಗೆ ಮದುವೆ ಮಾಡಿಕೊಟ್ಟು ನಾಳೆ ಏನಾದರೂ ಕಷ್ಟ ಕಾರ್ಪಣ್ಯಗಳು ಬಂದರೆ ನೆಂಟರು ಇಷ್ಟರು ಯಾರೂ ಬರುವುದಿಲ್ಲ. ನಮ್ಮ ಮಕ್ಕಳದೇನು ಹದಿಹರೆಯದ ಹುಚ್ಚಾಟದ ಪ್ರೀತಿ ಪ್ರೇಮ ಅಲ್ಲ. ಇಬ್ಬರೂ ತಮ್ಮ ತಮ್ಮ ವಯಸ್ಸಿಗನುಗುಣವಾಗಿ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಕರ್ತವ್ಯಗಳನ್ನು ಮುಗಿಸುತ್ತಾ ಜೀವನದಲ್ಲಿ ಎಷ್ಟು ಚೆಂದದಿಂದ ಮುಂದೆ ಸಾಗುತ್ತಿದ್ದಾರೆ. ನಾವುಗಳು ಸಂತೋಷದಿಂದ ಗೊಣಗದೆ ಅವರನ್ನು ಆಶೀರ್ವದಿಸಿ ಬದುಕು ಕಟ್ಟಿಕೊಳ್ಳಲು ಬಿಡೋಣ, ನಿಧಾನಕ್ಕೆ ಯೋಚಿಸಿ, ನಿಜಕ್ಕೂ ಈ ಪ್ರಪೋಸಲ್ ನಿಮಗೆ ಸರಿಯಿಲ್ಲ ಅನ್ನಿಸುತ್ತಾ?
ಒಂದು ಕ್ಷಣ ಸುಮ್ಮನಾದ ಕಮಲಮ್ಮ – ನೀವು ಹೇಳುವುದೂ ಒಂದು ರೀತಿಯಲ್ಲಿ ಸರಿಯಾಗಿಯೇ ಇದೆ, ಬೆಳಗ್ಗೆ ಕಾರುಣ್ಯಾ ಹೇಳಿದ ತಕ್ಷಣ ಹಾಗನಿಸಿದ್ದು ನಿಜ, ನಂತರದಲ್ಲೇ ಮನಸ್ಸು ಡೋಲಾಯಮಾನವಾಗಿತ್ತು, ಈಗಂತೂ ನಿಮ್ಮೊಂದಿಗೆ ಮಾತನಾಡಿದ ಮೇಲೆ . .
ಸರಿ ಬಿಡಿ, ಮುಂದೇನು ಹೇಳುವುದೂ ಬೇಡ, ಬಾಯಿ ಸಿಹಿ ಮಾಡಿಕೊಳ್ಳೋಣ – ಎನ್ನುತ್ತಾ, ತಂದಿದ್ದ ಸಿಹಿಯ ಡಬ್ಬದಿಂದ ಒಂದೊಂದು ಫೇಡಾ ತೆಗೆದು ಎಲ್ಲರಿಗೂ ಕೊಟ್ಟು ತಾವೂ ಒಂದನ್ನು ಬಾಯಿಗೆ ಹಾಕಿಕೊಳ್ಳುತ್ತಾ – ಲೋಕೇಶ್ ರಾತ್ರಿಗೆ ಒಂದೊಂದು ಮಾತ್ರೆ ಜಾಸ್ತಿ – ಎನ್ನುತ್ತಾ ನಕ್ಕರು. ಎಲ್ಲರ ಮೊಗದಲ್ಲೂ ಸಂತಸ ಚಿಮ್ಮಿತು.
ನಾಲ್ಕು ಬೋಂಡಾ ಕರಿದು, ಕಾಫಿ ಮಾಡುತ್ತೇನೆ – ಎನ್ನುತ್ತಾ ಅಡುಗೆ ಮನೆಯತ್ತ ನಡೆದ ಕಮಲಾ ಅವರನ್ನು ವನಜಾ ಹಿಂಬಾಲಿಸಿದರು.
ಇತ್ತ ಗೋಪಾಲ್ ಮತ್ತು ಲೋಕೇಶ್ ಪ್ರಪಂಚದ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಾ ಲೋಕೋದ್ಧಾರದ ಕಾಯಕದಲ್ಲಿ ತೊಡಗಿದರು.
ಕಾರುಣ್ಯಾ ಮನೆಯನ್ನು ದಾಟಿಯೇ ಸೂರಜ್ ಮನೆಯ ಕಡೆ ಹೊರಟವನು ಒಳಗಿನಿಂದ ಅಪ್ಪ ಅಮ್ಮನ ದನಿ, ಜೋರಾದ ನಗೆ ಕೇಳಿಸಿ ಬಗ್ಗಿ ನೋಡಿದರೆ ಅವರ ಚಪ್ಪಲಿಗಳೂ ಕಾಣಿಸಿ, ಕಾರುಣ್ಯಾಳ ಹಿಂದೆಯೇ ಅವನೂ ಒಳ ಬಂದಾಗ, ಕಮಲಮ್ಮ –
ಬರಬೇಕೂ, ಬರಬೇಕೂ ಹೊಸ ಮಧುಮಕ್ಕಳು, ಭಾವೀ ಅಳಿಯಂದಿರು – ಎಂದು ಸ್ವಾಗತಿಸಿದಾಗ ಕವಿದ ಕಾರ್ಮೋಡ ಚದುರಿ ಸಂತಸದ ನಕ್ಷತ್ರಗಳು ಮಿನುಗಿದವು.
ಒಂದು ಶುಭ ಮುಹೂರ್ತದಲ್ಲಿ ಸೂರಜ್ ಕಾರುಣ್ಯಾ ಸತಿಪತಿಗಳಾದರು. ಕಾರುಣ್ಯಾ ಮೊದಲ ರಾತ್ರಿಯೇ ಹೇಳಿದಳು – ಸೂರಜ್ ನನಗೆ ಕನಿಷ್ಟ ಎರಡು ಮಕ್ಕಳು ಬೇಕು, ಮೊದಲ ಮೂರು ವರ್ಷ ಏನೂ ಬೇಡ, ನಂತರ ಎರಡು ವರ್ಷಗಳ ಅವಧಿಯಲ್ಲಿ ಎರಡು ಮಕ್ಕಳು. ಇಬ್ಬರೂ ಒಟ್ಟೊಟ್ಟಿಗೇ ಬೆಳೆದು ಬಿಡುತ್ತಾರೆ. ನನಗೆ ಕುಟುಂಬ ಎಷ್ಟು ಮುಖ್ಯವೋ ನನ್ನ ಕೆರಿಯರ್ ಸಹ ಅಷ್ಟೇ ಮುಖ್ಯ. ನೀನು ಅದಕ್ಕೆ ಒತ್ತಾಸೆಯಾಗಿರಬೇಕು, ಇದೇನು ಮೊದಲ ರಾತ್ರಿಯೇ ನಾಚಿಕೆ ಇಲ್ಲದೆ ಏನೇನೋ ಮಾತನಾಡುತ್ತಿದ್ದಾಳೆ ಎಂದುಕೊಳ್ಳಬೇಡ
ಏ, ಕಮಾನ್ ಡಿಯರ್, ನಿನ್ನ ಬಗ್ಗೆ ನನಗೆ ಗೊತ್ತಿಲ್ಲವೇ, ನೀನು ಎಲ್ಲವನ್ನೂ ಪ್ಲಾನ್ ಮಾಡಿ ಅದರಂತೇ ನಡೆಯುವಂತೆ ನೋಡಿಕೊಳ್ಳುವವಳು. ನೀನು ನನಗೆ ಇಷ್ಟವಾಗಲು ನಿನ್ನಲಿರುವ ಅನೇಕ ಸಕಾರಾತ್ಮಕ ಗುಣಗಳಲ್ಲಿ ಇದೂ ಒಂದು ಮುಖ್ಯ ಗುಣ. ನಾನು ನಿನ್ನಂತೆ ಅಲ್ಲ, ಜೀವನ ಹೇಗೆ ಬರುತ್ತದೋ ಹಾಗೆ ಅದನ್ನು ಸ್ವೀಕರಿಸುತ್ತಾ ಜವಾಬ್ದಾರಿಯುತವಾಗಿ ನಡೆದು ಸಕ್ಸಸ್ ಕಾಣುವುದು. ಸೋ, ನನ್ನದೂ ಈಗ ನಿನ್ನಪ್ಪನಂತೆ, ʼನನ್ನ ಕಾರುಣ್ಯಾ ಹೇಗೆ ಹೇಳುತ್ತಾಳೋ ಹಾಗೇʼ ಪಾಲಿಸಿ. ಇನ್ನೂ ಒಂದು ವಿಷಯ, ನನಗೆ ನಮ್ಮ ಅಪ್ಪ ಅಮ್ಮನಂತೆ ವಿಶಾಲ ಹೃದಯದವರಾಗಿ ಇನ್ನೊಬ್ಬರ ವೈಯುಕ್ತತೆಗೆ ಗೌರವ ಕೊಟ್ಟು ನಡೆದುಕೊಳ್ಳಬೇಕೆಂಬ ಆಸೆ . ಹಾಗಾಗಿ ಅದರ ಮೊದಲ ಫಲಾನುಭವಿ ನೀನೇ. ನಿನ್ನ ಅನ್ನಿಸಿಕೆ ಅಭಿಪ್ರಾಯಗಳಗೆ, ನಿರ್ಧಾರಗಳಿಗೆ ನಾನೆಂದೂ ಅಡ್ಡ ಬರುವುದಿಲ್ಲ, ನನ್ನ ಅಭಿಪ್ರಾಯವನ್ನು ಹೇಳುತ್ತೀನಿ, ಒಪ್ಪಲೇಬೇಕೆಂದು ಖಂಡಿತಾ ಬಲವಂತ ಮಾಡೊಲ್ಲ.
ನನಗೆ ಗೊತ್ತು ಸೂರಜ್, ನಾನೇನೂ ನಾನೇ ಜಾಣೆ, ನನ್ನ ಮಾತೇ ನಡೆಯಬೇಕೂ ಅನ್ನೋಲ್ಲ, ಇಬ್ಬರೂ ಚರ್ಚಿಸಿ ನಿರ್ಧರಿಸೋಣ.
ಓಕೆ ಕಾರುಣ್ಯಾ ಮೇಡಂ, ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದಾಗಿನಿಂದ ಬೇಕಾದಷ್ಟು ಮಾತನಾಡಿದ್ದೇವೆ. ಮುಂದೆ ಕಾರ್ಯಪ್ರವೃತ್ತರಾಗಲು ಇಂದು ಅಗ್ನಿಸಾಕ್ಷಿಯಾಗಿ ಗುರುಹಿರಿಯರು ಸಮ್ಮತಿಸಿದ್ದಾರೆ, ತಾವೀಗ ದಯೆ ತೋರಬೇಕು ಅಷ್ಟೇ . .
ಕಾರುಣ್ಯಾ ಕದಪುಗಳಲ್ಲಿ ನಾಚಿಕೆಯ ರಂಗು ಓಕುಳಿಯಾಡಿತು. ಎದ್ದು ಮೆಲು ನಡಿಗೆಯಲ್ಲಿ ಸೂರಜ್ ಬಳಿ ಬಂದು ಹಗುರಾಗಿ ತಬ್ಬಿ ಅವನ ಎದೆಯಲ್ಲಿ ಮುಖ ಹುದುಗಿಸಿದಳು.
(ಮುಂದುವರಿಯುವುದು)

ಪದ್ಮಾ ಆನಂದ್ , ಮೈಸೂರು

