ಬೆಳಕು-ಬಳ್ಳಿ

ಎಂಜಲು !

Share Button

ಏನನರ್ಪಿಸಲಿ ದೇವ
ನಾನೆಂಬುದೇ ನಿನ್ನ ಭಾವ!

ಆಘ್ರಾಣಿಪ ಗಂಧವೆಲ್ಲ ಕುಸುಮದೆಂಜಲು
ಬೀಸಿ ಬಹ ತಂಗಾಳಿ ಗಿಡಮರದೆಂಜಲು
ಸವಿರುಚಿಯ ಹಣ್ಣುಹಂಪಲು ಪಕ್ಷಿಯೆಂಜಲು
ಸಮಸ್ತ ಲೋಕವೇ ನೇಸರನ ಕಣ್ಣೆಂಜಲು

ಏನನರ್ಪಿಸಲಿ ದೇವ
ನಿನ್ನೆಂಜಲು ಈ ಜೀವ!

ಸ್ವರ್ಗ ನರಕ ಮನದೆಂಜಲು
ಪುಣ್ಯಪಾಪ ಪುರಾಣದೆಂಜಲು
ತರ್ಕ-ತತ್ತ್ವವೆಲ್ಲ ಬುದ್ಧಿಯೆಂಜಲು
ಪರಮಾತ್ಮನೆಂಬುದೇ ವಿಶ್ವದೆಂಜಲು

ಏನನರ್ಪಿಸಲಿ ದೇವ
ನೀನೇ ನನ್ನಂಥ ಭಕ್ತರೆಂಜಲು!

ಪರಿಶುದ್ಧಿಯೆಂಬುದು ಸುಳ್ಳಿನೆಂಜಲು
ಪವಿತ್ರವೆಂಬುದು ಕಲ್ಪನೆಯೆಂಜಲು
ಎಂಜಲಿರದ ಒಂದೇ ಒಂದು
ಸಿಗದ ಧರೆಯಲಿ ಧ್ಯಾನ ಕೂಡ ಸಂಬುದ್ಧರೆಂಜಲು !

ಏನನರ್ಪಿಸಲಿ ದೇವ
ಕಣ್ಣೀರು ಕೂಡ ಕಣ್ಣಿನೆಂಜಲು

ಮನವೆಂಬುದು ಮಾತಿನೆಂಜಲು
ಮೌನವಂತೂ ಅರಿವೆನೆಂಜಲು
ಒಳಗಣ್ಣ ತೆರೆದು ನೋಡಲು
ಇದು ಕೂಡ ಎಲ್ಲರು ಬಳಸುವ ಭಾಷೆಯೆಂಜಲು !!

(“ನೀರು ಪ್ರಾಣಿಗಳೆಂಜಲು ; ಹಾಲು ಕರುವಿನೆಂಜಲು” ಎಂಬ ಕನಕದಾಸರ ನುಡಿಯಿಂದ ಪ್ರೇರಿತ !)

ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು

9 Comments on “ಎಂಜಲು !

  1. ಕವಿತೆ ತುಂಬಾ ಚನ್ನಾಗಿದೆ❤ ಗುರೂಜಿ

  2. ಅರ್ಥಪೂರ್ಣ ವಾದ ಕವನ..ಮೆಲಕು ಹಾಕುವಂತಿದೆ ಸಾರ್..

  3. ಎಂಜಲಾಗದಿಹುದೆಲ್ಲಿದೆ ಜಗದಿ
    ನೇಸರನ, ಧರೆಯ ಎಂಜಲಲಿ
    ಮಿಂದವರು ನಾವೆಲ್ಲ…
    ಶುದ್ಧವೆಂಬುದಿದೆಯೇ..
    ಶುದ್ಧನಿರುವೆನೆಂಬುದೇ ಭ್ರಮೆಯು.

    ನಿಮ್ಮ ಕವನ ಎಂಜಲಿನ ಒಳಹೊರ
    ಅರ್ಥಗಳು ಹೌದಲ್ಲವೇ ಅನಿಸಿತು

  4. ಶುದ್ಧವೆಂಬುದೇ ಭ್ರಮೆಯು
    ಎಂಜಲಿನ ಒಳಹೊರ ಅರ್ಥಗಳನ್ನು
    ಚಂದದಿ ಹೇಳಿರುವಿರಿ

  5. ಎಂಜಲೆಂಬ ಪದದ ಗೂಡಾರ್ಥ, ನೇರಾರ್ಥಗಳನ್ನೊಳಗೊಂಡು ಮನವನ್ನು ಚಿಂತನೆಗೆ ಹಚ್ಚುವಂತೆ ಮಾಡುವಂತಹ ಕವಿತೆ ಎಂಬ ಭಾವ ಮನದಲ್ಲಿ ಮೂಡಿತು. ಸೊಗಸಾಗಿದೆ.

  6. ಶಬರಿಯ ಎಂಜಲನ್ನು ಸ್ವೀಕರಿಸಿದ ಶ್ರೀರಾಮನ ನೆನಪಿನೊಂದಿಗೆ, ಜೇನುನೊಣದ ಎಂಜಲು ಜೇನಾಗಿ ಪರಮಾತ್ಮನಿಗೆ ಅರ್ಪಿತವಾಗುವುದನ್ನು ನೆನಪಿಸುವ
    ಚಿಂತನಯೋಗ್ಯ ಕವನ.

  7. ಒಬ್ಬ ವಿಜ್ಞಾನಿ
    ಸೌರ‌ಮಂಡಲದ ಮಾಡೆಲ್ ಮಾಡಿದ. ಎಲ್ಲರೂ ಅವನ ಕಲೆಯನ್ನು ಕಂಡು ಹಾಡಿ ಹೊಗಳಿದರು
    ವಿಜ್ಞಾನಿ ಹೇಳಿದ
    ನಾನು ಪ್ರಕೃತಿಯ ನಕಲು ಮಾಡಿದ್ದೇನೆ ಅಷ್ಟೇ

    ನಿಮ್ಮ ಕವನದ ತುಂಬಾ ಇಂತಹ ರೂಪಕಗಳೇ ತುಂಬಿರುವುದು ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *