ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅವಳನ್ನು ಕಳುಹಿಸಿದ ಭಾರ್ಗವಿಗೆ ಅನ್ನಿಸಿತು ಹೌದು ಈ ಮಾತುಗಳನ್ನು ಸುಮನಾಳ ಬಾಯಿಂದ ಕೂಡ ಎಷ್ಟೋಸಾರಿ ಕೇಳಿದ್ದೇನೆ. “ನೋಡು ಭಾರ್ಗವಿ, ನಾವೇನೋ ಯಾರನ್ನೂ ಕಟ್ಟಿಕೊಂಡಿಲ್ಲ, ಯಾವಾಗ ಏನಾದರೂ ನಮಗಾಗಿ ಅಳುವವರಿಲ್ಲ. ಆದರೆ ನಿನ್ನದು ಹಾಗಲ್ಲ, ಸಂಸಾರಸ್ಥೆ ಗಂಡನಿಗಲ್ಲದಿದ್ದರೂ ನಿನ್ನ ಮಕ್ಕಳಿಗಾದರೂ ನಿನ್ನ ಆರೋಗ್ಯದ ಕಡೆ ಗಮನ ಹರಿಸು. ಆಗಿಹೋಗಿದ್ದನ್ನೇ ಅಗಿದೂ ಅಗಿದೂ ಎಷ್ಟು ಕಾಲ ಜಗೀತಿರುತ್ತೀ” ಎಂದು ಹೇಳುತ್ತಿದ್ದಳು ಸುಮನಾ.

ಅರೇ ನನ್ನ ಮರೆವಿಗಿಷ್ಟು, ಅವಳ ತಾಯಿಯನ್ನು ಡಿಸ್ಚಾರ್ಜ್ ಮಾಡಿದರೋ ಅಥವಾ ..ಎಂದುಕೊಂಡು ಸುಮನಾಳಿಗೆ ಫೋನ್ ಮಾಡಿದಳು.
ಅತ್ತಲಿಂದ “ನೆನೆದವರ ಮನದಲ್ಲಿ ಎಂಬಂತೆ ಈಗತಾನೇ ನಿನಗೆ ನಾನೇ ಫೋನ್ ಮಾಡಬೇಕೆಂದಿದ್ದೆ ಭಾರ್ಗವಿ” ಎಂದುತ್ತರ ಬಂತು.
“ಹೌದೇ ಅಮ್ಮನನ್ನು ಡಿಸ್ಚಾರ್ಜ್ ಮಾಡಿದರೇನು? ಏನಾದರೂ ಸಹಾಯ ಬೇಕಿತ್ತೇ?” ಎಂದು ಕೇಳಿದಳು.

“ಡಿಸ್ಚಾರ್ಜ್ ಮಾತೆಲ್ಲಿ ಬಂತು. ಎಲ್ಲ ರೀತಿಯ ಟೆಸ್ಟ್ ಗಳಿಂದ ಬರೆದುಕೊಟ್ಟಿದ್ದಾರೆ ನಿಮಗೇನೂ ಆಗಿಲ್ಲವೆಂದು. ನನ್ನಮ್ಮನ ಸ್ವಭಾವ ಬೇರೆ ಥರ, ಡಾಕ್ಟರ್ ನೋಡಕ್ಕೆಂದು ಬಂದಾಗ ಹೊಸದಾಗಿ ಅದೇನು ಹೇಳಿದ್ದಾರೋ ದೇವರೇ ಬಲ್ಲ. ನಾನು ಇತ್ತೀಚೆಗೆ ಎಲ್ಲ ಟೆಸ್ಟ್ ಗಳನ್ನೂ ಮಾಡಿಸಿದ್ದೇನೆ ರಿಪೋರ್ಟ್ ಪ್ರಕಾರ ಎಲ್ಲವೂ ಸರಿಯಾಗಿದೆ ಎಂದು ಇನ್ನೂ ನಾನು ರಿಪೋರ್ಟ್ ಫೈಲಿಗೆ ಕೈ ಹಾಕಿದ್ದೆ. ಅದಕ್ಕವರು ನೋ..ನೋ ಇನ್ನೇನೊ ಇದ್ದಹಾಗಿದೆ. ಒಂದುದಿನ ಇದ್ದ ಹಾಗೆ ಇನ್ನೊಂದು ದಿನ ಇರುವುದಿಲ್ಲ. ನಿಮ್ಮ ತಾಯಿ ವಯಸ್ಸಾದವರು ಪಾಪ ರಾತ್ರಿ ಕಾಲದಲ್ಲಿ ಅವರಿಗೆ ಆಗಿರುವ ತೊಂದರೆ ಕೇಳಿದರೆ ಯಾವಾಗ ಏನಾದರೂ ಆಗಬಹುದಿತ್ತು. ಸೂಚನೆ ಕೊಟ್ಟಿದ್ದೇನೆ. ಸುಮ್ಮನೆ ಟೆನ್ಷನ್ ಏಕೆ ಮಾಡಿಕೊಳ್ಳುತ್ತೀರ.” ಎಂದು ಸಿಸ್ಟರ್‌ಗೆ ಏನೋ ಬರೆದುಕೊಟ್ಟು ನಡೆದೇ ಬಿಟ್ಟರು. ಇದನ್ನು ಎಷ್ಟು ದಿನದವರೆಗೆ ಎಳೆಯುತ್ತಾರೋ ಗೊತ್ತಿಲ್ಲ.” ಎಂದಳು ಸುಮನಾ. “ಅದು ಬಿಡು ನಿನ್ನ ಸ್ಕೂಲಿನ ಕೆಲಸದ ಬಗ್ಗೆ ಹೇಳು” ಎಂದಳು ಭಾರ್ಗವಿ.

ಇನ್ನೇನು ನಿವೃತ್ತಿಗೆ ಹತ್ತಿರ ಬಂದಿದ್ದೇನಲ್ಲ ಬೇಕಾದಷ್ಟು ರಜೆಗಳಿವೆ ಹಾಕುತ್ತೇನೆ. ಇಲ್ಲಿ ಕಡಿಯೋದು ಅಷ್ಟರಲ್ಲೇ ಇದೆ. ಆದರೆ ಅಲ್ಲಿ ಹೋಗಿ ಕೆಲಸ ಮಾಡಲು ಮನಸ್ಸಿಲ್ಲ ಭಾರ್ಗವಿ. ಅಂದಹಾಗೆ ನಿನ್ನವರು ಊರಿಗೆ ಬಂದಿದ್ದರಾ? ಏಕೆಂದರೆ ನಾನು ಅವರನ್ನು ಇದೇ ನರ್ಸಿಂಗ್‌ಹೋಂನಲ್ಲಿ ನೋಡಿದ ಹಾಗಾಯ್ತು. ಅವರೇನ ಅಲ್ಲವಾ ಅಂತ ಖಾತರಿ ಮಾಡ್ಕೊಳ್ಳೋಕೆ ಕೇಳಿದೆ ಅಷ್ಟೇ. ಏನಾದರೂ ಬೇಕಾದರೆ ಫೋನ್ ಮಾಡುತ್ತೇನೆ. ನನ್ನಮ್ಮ ಕೂಗಿದ ಹಾಗೆ ಆಯ್ತು. ನಾನು ರೂಮಿನ ಹೊರಗಡೆಯಿಂದ ಮಾತನಾಡಿದೆ” ಎಂದು ಕಾಲ್ ಕಟ್ ಮಾಡಿದಳು ಸುಮನಾ.

ಭಾರ್ಗವಿ ನಿನ್ನವರು ಬಂದಿದ್ದರಾ ನಾನು ನರ್ಸಿಂಗ್ ಹೋಮಿನಲ್ಲಿ.. .. ಎಂದು ಕೇಳಿದ ಕೂಡಲೇ ರಾತ್ರಿ ನೋಡಿದರೆ ನಿಂತ ಹೆಜ್ಜೆಯಲ್ಲಿ ಊರಿಗೆ ಹೋಗುತ್ತೇನೆಂದು ಹೋದರು. ಹಾಗಾದರೆ ನರ್ಸಿಂಗ್ ಹೋಂಗೆ ಏಕೆ. ಇತ್ತೀಚೆಗೆ ಇವರ ವ್ಯವಹಾರಗಳೇ ಅರ್ಥವಾಗುತ್ತಿಲ್ಲ. ಏನನ್ನೂ ಹೇಳುವುದಿಲ್ಲ. ಬರೀ ಸುಳ್ಳಿನ ಸರದಾರರಾಗಿದ್ದಾರೆ. ಹೆಚ್ಚು ಪ್ರಶ್ನೆ ಮಾಡುವ ಹಾಗಿಲ್ಲ. ಗರ‍್ರೆನ್ನುತ್ತಾರೆ. ಕೆಲಸದ ಗಿರಿಜಾಳ ಬಾಯಲ್ಲಿಯೂ ಹಲವು ಸಾರಿ ಕೇಳಿದ್ದೇನೆ ಇಲ್ಲಿಯೇ ನೋಡಿದ್ದೇನೆಂದು. ನಮ್ಮ ಮನೆಯ ಮರ್ಯಾದೆ ಮುಚ್ಚಿಕೊಳ್ಳಲು ಅವಳ ಮೇಲೆ ರೇಗಿ ಬಾಯ್ಮುಚ್ಚಿಸಿದ್ದೆ. ಇತ್ತೀಚೆಗಂತೂ ಅವರ ಬಗ್ಗೆ ಚಕಾರವೆತ್ತುತ್ತಿಲ್ಲ. ಹೂಂ ಯಾರಿಗೇನು ಹೇಳಲಿ ನನ್ನ ಹಣೆಬರಹಕ್ಕೆ ಯಾರು ಹೊಣೆ. ನಾನು ತಿಳಿದುಕೊಂಡದ್ದೇ ತಪ್ಪೇ? ಅಥವಾ ಅವರು ನನ್ನ ಟಾರ್ಗೆಟ್ ಮಾಡಿಕೊಂಡು ತಮಗಿಷ್ಟ ಬಂದ ರೀತಿಯಲ್ಲಿ ಬದುಕು ನಡೆಸುತ್ತಿರುವುದು ತಪ್ಪೇ? ಎಲ್ಲವೂ ಗೊಂದಲಮಯವಾಗುತ್ತಿದೆ. ಇದರಿಂದ ನಾನೇನು ಕಳೆದುಕೊಂಡೆ? ಈಗ ನನ್ನ ಪರ ಯಾರಿದ್ದಾರೆ? ಮತ್ತೆ ಭಾರ್ಗವಿಯ ಮನಸ್ಸು ಹಳೆಯ ನೆನಪಿನ ಕಡೆ ಜಾರಿತು.

ಖಾಸಗಿ ಶಾಲೆಯಲ್ಲಿ ಪಾಠಪ್ರವಚನಗಳು ಭಾರ್ಗವಿಗೆ ಹೊರೆಯಾಗಲಿಲ್ಲ. ಮನೆಗೂ ಶಾಲೆಗೂ ನಡೆದುಕೊಂಡೇ ಹೋಗಬಹುದಾದ್ದರಿಂದ ಬಸ್ಸಿಗಾಗಿ ಕಾಯುವ, ದೌಡಾಯಿಸಿ ಹೋಗುವ ಧಾವಂತವಿರಲಿಲ್ಲ. ಶಾಲೆಯ ವಾತಾವರಣ ಮತ್ತು ಮನೆಯ ಪರಿಸರಕ್ಕೆ ಬೇಗನೇ ಹೊಂದಿಕೊಂಡ ಭಾರ್ಗವಿ ತನ್ನ ಮುಂದಿನ ಯೋಜನೆಗಳನ್ನು ಕಾರ್ಯಗತ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸ ತೊಡಗಿದಳು.

ಮೊದಲನೆಯದಾಗಿ ತುಸು ಹೆಚ್ಚಿನ ಖರ್ಚಿಗೆ ಬೇಕಾದ ಹಣಕಾಸು, ಮನೆಪಾಠದ ವಿಷಯದ ಬಗ್ಗೆ ಸುತ್ತಮುತ್ತಲಿನವರ ಅಭಿಪ್ರಾಯ, ಸನ್ನಿವೇಶದ ಬಗ್ಗೆ ಸೂಕ್ಷ್ಮಾವಲೋಕನ ಮಾಡಿದಳು. ಮನೆಯ ಮಾಲೀಕರ ಮೊಮ್ಮಕ್ಕಳು ಹೊರಗಡೆ ಪಾಠಕ್ಕೆಂದು ಹೋಗುವುದನ್ನು ಗಮನಿಸಿದಳು. ಸಮಯ ನೋಡಿ ಆ ಮನೆಯ ಹಿರಿಯರಾದ ಇಂದಿರಮ್ಮನವರ ಮುಂದೆ ಪ್ರಸ್ತಾಪ ಮಾಡಿದಳು. ಅವರು “ಎಂಥಾ ಚಿನ್ನದಂತ ಮಾತನಾಡಿದೆ ತಾಯೀ, ಇಲ್ಲಿ ಯಾರೂ ಮನೆಪಾಠ ಹೇಳಿಕೊಡುವವರಿಲ್ಲ. ನೀನೇ ನೋಡುತ್ತಿದ್ದೀಯಲ್ಲ. ನಮ್ಮ ಹುಡುಗರನ್ನು ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಒಬ್ಬರ ಮನೆಗೆ ಕಳುಹಿಸುತ್ತಿದ್ದೇವೆ. ನಮ್ಮವರಿಗೆ ಅವರನ್ನು ಕರೆದುಕೊಂಡು ಹೋಗು ಬಿಟ್ಟುಬರುವುದು, ಅವರ ಪಾಠ ಮುಗಿಯುವವರೆಗೆ ಅಲ್ಲೇ ಪಾರ್ಕಿನಲ್ಲಿ ಸುತ್ತಾಡುತ್ತಿದ್ದು ಹಿಂದಕ್ಕೆ ಅವರನ್ನು ಕರೆತರುವುದು ಸಾಕಾಗುತ್ತದೆ. ಈಗಿನ ಕಾಲದ ಮಕ್ಕಳು ಬಾಲವಿಲ್ಲದ ಮಂಗಗಳು, ನೀನೇ ಪ್ರಾರಂಭಿಸುತ್ತೇನೆಂದರೆ ಅವರುಗಳ ಜೊತೆಗೆ ಮತ್ತಷ್ಟು ಮಕ್ಕಳನ್ನು ಸೇರಿಸುತ್ತೇನೆ. ಮನೆಯ ಮುಂದಿನ ಅಂಗಳದಲ್ಲಿ ಅಲ್ಲವಾದರೆ ಮೇಲಿನ ಅಂಗಳದಲ್ಲೋ ಪಾಠ ಹೇಳಬಹುದು. ಸ್ವಾಮಿಕಾರ್ಯ ಸ್ವಕಾರ್ಯ ಎರಡೂ ನೆರವೇರುತ್ತೆ. ಹುಡುಗರಿಗೆ ತಿಳಿಸಿ ಏರ್ಪಾಡು ಮಾಡುತ್ತೇನೆ” ಎಂದರು.

ಅವರ ಭರವಸೆ ಬರೀ ಬಾಯಿಮಾತಾಗದೆ ಕಾರ್ಯರೂಪಕ್ಕೆ ತಂದೇಬಿಟ್ಟರು. ಅವರ ಮನೆಯ ಹುಡುಗರ ಜೊತೆಗೆ ಪರಿಚಯಸ್ಥ ಮನೆಯವರ ಹುಡುಗರೂ ಸೇರಿ ಎಂಟ್ಹತ್ತು ಮಕ್ಕಳಾದರು. ಒಂದು ಒಳ್ಳೆಯ ದಿನ ನೋಡಿ ಗಣಪತಿ, ಸರಸ್ವತಿ ಪೂಜೆಗಳನ್ನು ಮಾಡಿ ಮನೆಪಾಠ ಪ್ರಾರಂಭ ಮಾಡಿದಳು ಭಾರ್ಗವಿ. ಅವಳ ನಿರೀಕ್ಷೆಗೂ ಮೀರಿ ಆ ಮನೆಯ ಮಾಲೀಕರು ಅವಳಿಗೆ ಒತ್ತಾಸೆಯಾದರು.

ಶಾಲೆಯ ಕೆಲಸ, ಮನೆಪಾಠ, ಹಾಗೂ ಮನೆಗೆಲಸ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತ ತನ್ನ ಮುಂದಿನ ಗುರಿಯ ಬಗ್ಗೆ ತಯಾರಿ ಮಾಡಿಕೊಳ್ಳುತ್ತಿದ್ದಳು. ಎಲ್ಲ ಕಾರಣಗಳಿಂದ ಊರಿಗೆ ಹೋಗಿ ಬರುವುದು ಅಪರೂಪವಾಗತೊಡಗಿತು. ಇದರ ಜೊತೆಗೆ ಸಿದ್ಧಾರ್ಥನ ಸವಾರಿ ಮೈಸೂರಿಗೆ ಹೆಚ್ಚಾಯಿತೆಂದೇ ಹೇಳಬಹುದು. ತನ್ನಣ್ಣ ಬಾಲಕೃಷ್ಣ ಹೇಳಿದ್ದ ಮಾತುಗಳು ಭಾರ್ಗವಿಗೆ ಆಗಾಗ ನೆನಪಿಗೆ ಬಂದರೂ ಅದನ್ನು ಕಾರ್ಯರೂಪಗೊಳಿಸಲು ಸಾಧ್ಯವಾಗಲೇ ಇಲ್ಲ. ಸಾಮ, ದಾನ, ಭೇದ, ದಂಡ ಯಾವುದೇ ಪ್ರಯೋಗಗಳೂ ಆತನ ಮೇಲೆ ಪ್ರಭಾವ ಬೀರಲೇ ಇಲ್ಲ. ಇದರಿಂದ ಒಳಗೊಳಗೇ ಭಾರ್ಗವಿಗೆ ಅಸಮಾಧಾನ ಆಗತೊಡಗಿತು. ಸಿದ್ಧಾರ್ಥನನ್ನು ಎದುರು ಹಾಕಿಕೊಳ್ಳುವುದು ದುಸ್ಸಾಧ್ಯವಾಯಿತು. ಈ ಮಧ್ಯದಲ್ಲಿ ಭಾರ್ಗವಿ ತಾಯಿಯಾಗುವ ಲಕ್ಷಣಗಳು ಕಂಡುಬಂದವು. ವಿಷಯ ತಿಳಿದ ಎರಡೂ ಮನೆಯವರು ಸಂತಸಪಟ್ಟರು. ಈ ಕಾರಣದಿಂದಲಾದರೂ ತನ್ನ ಕೆಲಸಗಳನ್ನು ಬದಿಗಿಟ್ಟು ಊರಿಗೆ ಬರುತ್ತಾಳೆಂದು ನಿರೀಕ್ಷಿಸಿದರು. ತಮ್ಮ ಮನದಾಳದ ಮಾತುಗಳನ್ನು ಅವಳೆದುರಿಗೆ ಆಡಿಯೂಬಿಟ್ಟರು.

ಊಹುಂ ಇದ್ಯಾವುದಕ್ಕೂ ಭಾರ್ಗವಿ ಬದಲಾಗಲಿಲ್ಲ. ಅದಕ್ಕೆ ಪರ್ಯಾಯವಾಗಿ “ಇಲ್ಲಿ ಎಲ್ಲ ಅನುಕೂಲತೆಗಳೂ ಇವೆ. ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ಇಲ್ಲಿಯೇ ಸ್ವಲ್ಪ ಕಾಲ ಬಂದಿರಿ.” ಎಂದು ಸಲಹೆ ಮಾಡಿದಳು. ಇದರಿಂದ ಅವಳ ಅತ್ತೆ ಮಾವನವರಿಗೆ ಅಸಮಾಧಾನವಾಗಿ ಅವರು ಸುಮ್ಮನಿದ್ದುಬಿಟ್ಟರು. ಆದರೆ ಹೆತ್ತ ಕರುಳು ಕೇಳದೆ ಭಾರ್ಗವಿಯ ತಾಯಿಯೇ ಎಲ್ಲ ಸಿದ್ಧತೆಗಳನ್ನು ಊರಿನಿಂದಲೇ ಮಾಡಿಕೊಂಡು ಮೈಸೂರಿಗೆ ಬಂದು ಮಗಳ ಬಾಣಂತನ ಮಾಡಿದರು. ಹೆಣ್ಣುಮಗು ಜನಿಸಿತು ಯಾರೂ ಅದನ್ನು ತಾತ್ಸಾರವಾಗಿ ಕಾಣದೆ ಪ್ರೀತಿಯಿಂದಲೇ ಬರಮಾಡಿಕೊಂಡರು. ಇದು ಭಾರ್ಗವಿಗೆ ಸಮಾಧಾನ ತಂದಿತು. ಅವಳ ಅತ್ತೆ ಮಾವನವರು ಮುನಿಸು ತೊರೆದು ತಮ್ಮ ಕರುಳ ಕುಡಿಯನ್ನು ನೋಡಿ ಎತ್ತಿ ಮುದ್ದಾಡಿದರು. ಶಾಸ್ತ್ರ ಸಂಪ್ರದಾಯದಂತೆ ನಾಮಕರಣ, ಮನೆದೇವರ ಪೂಜೆ ಇತ್ಯಾದಿಗಳು ನಡೆದಾಗಷ್ಟೇ ಊರಿಗೆ ತೆರಳಿ ಭಾರ್ಗವಿ ಮತ್ತೆ ಮೈಸೂರಿಗೆ ಹಿಂದಿರುಗಿದಳು.

ಆಕೆಯ ಕಾರ್ಯಬಾಹುಳ್ಯತೆಯನ್ನು ಕಣ್ಣಾರೆ ಕಾಣುತ್ತಿದ್ದ ಸಿದ್ಧಾರ್ಥ ಪುಟ್ಟ ಮಗುವನ್ನು ಊರಿಗೇ ಕರೆದುಕೊಂಡು ಹೋಗಿ ಪಾಲನೆಯ ಜವಾಬ್ದಾರಿಯನ್ನು ತಂದೆತಾಯಿಗಳಿಗೆ ಕೊಟ್ಟ. ಮಗಳು ಮಾಲಿನಿ ಬೆಳೆಯುತ್ತ ಎರಡೂ ಮನೆಗಳಿಗೆ ಎಡತಾಕುತ್ತ ಆಗಾಗ ಅಪರೂಪಕ್ಕೆ ಆಗಮಿಸುತ್ತಿದ್ದ ಅಮ್ಮನ ಪ್ರೀತಿಯನ್ನು ದಕ್ಕಿಸಿಕೊಳ್ಳುತ್ತಿತ್ತು. ಹೀಗೇ ಮೂರುವರ್ಷಗಳು ಕಳೆದೇ ಹೋದವು. ಮನೆಯಲ್ಲಿದ್ದ ಅಜ್ಜಿಯರಿಂದ ಕಥಾಕಾಲಕ್ಷೇಪ, ಜೊತೆಗೆ ಸುಸಂಸ್ಕೃತ ನಡವಳಿಕೆ, ಮಾವನ ಅಕ್ಕರೆ ಇವೆಲ್ಲವನ್ನೂ ಚಿಕ್ಕಂದಿನಲ್ಲಿ ಪಡೆದುಕೊಂಡು ಮುಂದಿನ ಬದುಕಿಗೆ ಒಳ್ಳೆಯ ಅಡಿಪಾಯ ಹೊಂದಿತೆನ್ನಬಹುದು.

ಭಾರ್ಗವಿ ಹಿಡಿದ ಕೆಲಸವನ್ನು ಬಿಡದೆ ಪಟ್ಟುಹಿಡಿದು ಸಾಧಿಸಿ ಲೋಕಸೇವಾ ಅಯೋಗದ ಕೆ.ಇ.ಎಸ್. ಸ್ಪರ್ಧಾ ಪರೀಕ್ಷೆೆಯನ್ನು ನಿರೀಕ್ಷೆಗೂ ಮೀರಿದ ಒಳ್ಳೆಯ ಫಲಿತಾಂಶ ಪಡೆದು ಪೂರ್ಣಗೊಳಿಸಿದಳು. ಇದರಿಂದಾಗಿ ಅವಳಿಗೆ ನೇರನೇಮಕಾತಿಯಲ್ಲಿ ಸರ್ಕಾರಿ ಹೈಸ್ಕೂಲೊಂದರ ಮುಖ್ಯೋಪಾಧ್ಯಾಯಿನಿಯ ಹುದ್ದೆ ದೊರೆಯಿತು. ಅವಳಿಗಿಂತಲೂ ಹೆಚ್ಚು ಸಂತಸಪಟ್ಟವನೆಂದರೆ ಸಿದ್ಧಾರ್ಥ. ತಾನೆಣಿಸಿದ್ದಕ್ಕಿಂತ ಬೇಗನೇ ತನ್ನ ಪತ್ನಿ ಸಾಧನೆಗೈದಿದ್ದಾಳೆ. ಮಿಗಿಲಾಗಿ ಇನ್ನೂ ಹೆಚ್ಚಿನ ಸಂಬಳ ಸಿಗುತ್ತದೆ. ಇದಕ್ಕೆಲ್ಲ ತಾನೇ ಕಾರಣಕರ್ತನೆಂದು ಅಹಮಿಕೆಯು ಅವನ ತಲೆಗೇರಿತು.

ಮಗಳನ್ನು ಶಾಲೆಗೆ ಸೇರಿಸುವ ಸಮಯ ಬರುತ್ತಿದ್ದಂತೆ ಮಾಲಿನಿಯನ್ನು ಮೈಸೂರಿಗೆ ಕರೆತಂದಳು. ಎಲ್ಲವೂ ಒಂದು ಹಂತಕ್ಕೆ ಬರುವಷ್ಟರಲ್ಲಿ ಭಾರ್ಗವಿ ಮತ್ತೆ ತಾಯಿಯಾಗುವ ಸರದಿ ಒದಗಿಬಂತು. ಇದರಿಂದ ಸ್ವಲ್ಪ ಕಸಿವಿಸಿ ಆಯಿತು. ಒಂದೇ ಮಗುವೇ ಸಾಕಾಗಿತ್ತು. ಹೆಚ್ಚಿನ ಜವಾಬ್ದಾರಿಗಳ ನಡುವೆ ಮತ್ತೊಂದು ಮಗುವಿನ ಹೊರೆ ಎಂದು ಸಿದ್ಧಾರ್ಥನೊಡನೆ ಹಂಚಿಕೊಂಡಾಗ ಅವನು “ಛೇ..ಬಿಡ್ತು ಅನ್ನು ‘ಒಂದು ಕಣ್ಣು ಕಣ್ಣಲ್ಲ, ಒಂದು ಮಗು ಮಗುವಲ್ಲ’ ಎಂದು ಹಿರಿಯರು ಹೇಳಿಲ್ವ. ನಮಗೆ ಎರಡು ಮಕ್ಕಳನ್ನು ಸಾಕಲಾರದಷ್ಟು ಬಡತನವೇ? ನಮಗೇನು ಕಡಿಮೆಯಾಗಿದೆ” ಎಂದು ಬಾಯಿ ಮುಚ್ಚಿಸಿದನು.

ಯಥಾಪ್ರಕಾರ ಊರಿನಲ್ಲಿ ಎರಡೂ ಮನೆಯವರು ಸಂತೋಷ ಪಟ್ಟರು. ಶುಭಕೋರಿದರು. ಆದರೆ ಸಿದ್ಧಾರ್ಥನ ಮನೆಯಲ್ಲಿ ಅವನ ತಾಯಿಯ ಮನಸ್ಸಿನಲ್ಲಿ ಕೋಲಾಹಲವೇ ಪ್ರಾರಂಭವಾಗಿತ್ತು. ಮೊದಲುಮೊದಲು ಸೊಸೆಯ ವಿದ್ಯಾಭ್ಯಾಸ ಸಾಧನೆಗಳ ಬಗ್ಗೆ ಮೆಚ್ಚುಗೆಯ ಮಾತನಾಡುತ್ತ ತಮ್ಮ ಗಂಡನಿಗೆ ಸಮಾಧಾನ ಹೇಳುತ್ತಿದ್ದವರು ಇತ್ತೀಚೆಗೆ ಮಗನು ಜಮೀನಿನ ಕೆಲಸಗಳತ್ತ ಗಮನ ಕೊಡದೆ ಎಲ್ಲವನ್ನೂ ತಂದೆಯ ಹೆಗಲಿಗೇ ಒರಗಿಸಿ ಸೊಸೆಯ ಹಿಂದೆಮುಂದೆ ಸುತ್ತುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಮೇಲಾಗಿ ಮನೆಯಲ್ಲಿ ಇನ್ನೊಬ್ಬ ಮಗಳು ಮದುವೆಯ ವಯಸ್ಸಿಗೆ ಬಂದು ನಿಂತಿದ್ದರೂ ತಂಗಿಯ ಬಗ್ಗೆ ಯಾವ ಪ್ರಯತ್ನವನ್ನೂ ಮಾಡದೆ ಚಿಂತೆಯಿಲ್ಲದಂತಿರುವ ಸಿದ್ಧಾರ್ಥನ ಬಗ್ಗೆ ಮತ್ತಷ್ಟು ಚಿಂತೆಗೆ ಕಾರಣವಾಗಿತ್ತು. ಅವನ ತಂದೆಯಂತೂ ನಿರಾಸೆಯಿಂದ ಯಾವುದೇ ಪ್ರತಿಕ್ರಿಯೆ ತೋರದೆ ನಿರ್ಲಿಪ್ತತೆಯಿಂದ ಇದ್ದುಬಿಟ್ಟಿದ್ದರು. ಈ ವಿಷಯವಾಗಿ ತಾಯಿಯೊಡನೆ ಆಗಾಗ ಸಿದ್ಧಾರ್ಥನ ಜಟಾಪಟಿ ನಡೆಯುತ್ತಿತ್ತು. ಆಗ ಅವನು “ಅಪ್ಪನ ಕೈಲಾಗದಿದ್ದರೆ ಜಮೀನನ್ನು ಗೇಣಿಗೆ ಕೊಟ್ಟು ಬಿಡೋಣ. ತಂಗಿಯ ಮದುವೆಗೇನು ಅವಸರ. ಅವಳು ಇನ್ನೂ ಓದುತ್ತಿದ್ದಾಳೆ. ಅದು ಮುಗಿಯಲಿ ಮುಂದೆ ನೋಡೋಣ” ಎಂದು ಹಾರಿಕೆಯ ಉತ್ತರವಿತ್ತು ನುಣುಚಿಕೊಳ್ಳುತ್ತಿದ್ದ.

ಈ ವಿದ್ಯಮಾನಗಳನ್ನು ತಿಳಿಯದ ಭಾರ್ಗವಿ ತನ್ನ ಜವಾಬ್ದಾರಿಗಳ ಕಡೆಗೆ ಗಮನ ಕೇಂದ್ರೀಕರಿಸಿ ಮುನ್ನಡೆಯುತ್ತಿದ್ದಳು. ಭಾರ್ಗವಿಯ ತಂದೆಯ ಮನೆಯಲ್ಲಿ ಅವಳ ಅಣ್ಣ ಬಾಲಕೃಷ್ಣನಿಗೆ ವಿವಾಹವಾಗಿ ಅತ್ತಿಗೆ ದೇವಿಕಾ ಬಂದಾಗಿತ್ತು. ಆಕೆಯೂ ವಿದ್ಯಾವಂತೆ ಮಾತ್ರವಲ್ಲ ಕೃಷಿ ಕುಟುಂಬದಿಂದ ಬಂದಿದ್ದ ಹೆಣ್ಣುಮಗಳು. ವ್ಯವಸಾಯ, ವ್ಯವಹಾರ ಎರಡನ್ನೂ ನಿಭಾಯಿಸುವ ಚಾಕಚಕ್ಯತೆಯನ್ನು ಹೊಂದಿದ್ದಳು. ಸಹಜವಾಗಿಯೇ ಮನೆಯ ಸೂತ್ರದಾರಳಾದಳು. ಹೀಗಾಗಿ ಭಾರ್ಗವಿಯ ತಾಯಿ ನೆಪವೊಡ್ಡುತ್ತ ಊರಿಗೂ ಮೈಸೂರಿಗೂ ಓಡಾಡುವುದು ಹೆಚ್ಚಾಯಿತು.

ತಾಯಿ ಬಂದು ಹೊಗುವುದರಿಂದ ಭಾರ್ಗವಿಗೆ ಅನುಕೂಲವೇ, ಆದರೆ ಅವರ ವಿಪರೀತವಾದ ಮಡಿಹುಡಿ ಆಚಾರಗಳು, ಮನೆಯ ಮಾಲೀಕರ ಜೊತೆ ಅನಾವಶ್ಯಕ ಮಾತುಕತೆಗಳು, ತಮಗೆ ಸಂಬಂಧಪಡದ ವಿಷಯಗಳಿಗೆ ತಲೆಹಾಕುವುದು ಇರಿಸುಮುರುಸುಗಳನ್ನುಂಟು ಮಾಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಿದ್ಧಾರ್ಥ ಇಲ್ಲಿ ಇರಲಿಕ್ಕಾಗುವುದಿಲ್ಲವೆಂಬ ನೆಪವೊಡ್ಡಿ ಹೆಚ್ಚಾಗಿ ತನ್ನ ಗೆಳೆಯರ ಮನೆಗಳಲ್ಲಿಯೇ ಠಿಕಾಣಿ ಹೂಡುವುದು ತಲೆನೋವಾಗಿ ಪರಿಣಮಿಸಿತ್ತು. ಈ ಸಂಕಟ ತೊಳಲಾಟಗಳ ನಡುವೆ ಎರಡನೆಯ ಮಗಳ ಆಗಮನವಾಯಿತು. “ಅಯ್ಯೋ ಭಾರ್ಗವಿ, ಇದೂ ಹೆಣ್ಣಾಯಿತಲ್ಲೇ ಮತ್ತೆ ಗಂಡಿಗಾಗಿ ಕಾಯಬೇಕಾಗುತ್ತೇನೋ, ನಿಮ್ಮ ಮಾವನ ಮನೆಯಲ್ಲಿ ಒಬ್ಬನೇ ಮಗ, ನಿನ್ನ ಗಂಡ. ಅವರುಗಳು ಏನೆನ್ನುತ್ತಾರೋ” ಎಂದು ಪೇಚಾಡಿಕೊಂಡರು ಭಾರ್ಗವಿಯ ತಾಯಿ. ಮನದಲ್ಲಿ ಭಾರ್ಗವಿ ನಮ್ಮ ಮನೆಯಲ್ಲಿ ಎಷ್ಟು ಮಂದಿಯಿದ್ದಾರೋ ಎಂದುಕೊಂಡರೂ ತಾಯಿಯ ಮುಂದೆ ಹೇಳಲಿಲ್ಲ. ಅವರಂದುಕೊಂಡಂತೆ ಸಿದ್ಧಾರ್ಥನ ಮನೆಯ ಹಿರಿಯರಿಗೆ ನಿರಾಸೆಯಾಯಿತು. ಹೊರಗೆ ತೋರ್ಪಡಿಸಿಕೊಳ್ಳಲಿಲ್ಲ. ಅದಕ್ಕೆ ಸಿದ್ಧಾರ್ಥನೂ ಹೊರತಾಗಿರಲಿಲ್ಲ. ಮೇಲೆ ಮಾತ್ರ ಮಕ್ಕಳೆಲ್ಲ ಒಂದೇ. ಹೆಣ್ಣಾದರೇನು ಗಂಡಾದರೇನು ಎಂದು ತನ್ನ ಹೆಂಡತಿ ಭಾರ್ಗವಿಗೆ ಸಮಾಧಾನ ಹೇಳಿದನು. ಭಾರ್ಗವಿ ಮಾತ್ರ ಯಾರೊಬ್ಬರ ಹೇಳಿಕೆಗೂ ಯಾವುದೇ ಪ್ರತಿಕ್ರಿಯೆ ತೋರದೆ ಮೌನವಾಗಿದ್ದುಬಿಟ್ಟಳು.

(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  :  https://surahonne.com/?p=45585

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *