(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅವರಿಬ್ಬರೂ ಅವಳನ್ನು ಮನೆಯಹತ್ತಿರ ಡ್ರಾಪ್ ಮಾಡಿ ಹೊರಟರು. ವರು ಹಾಲ್‌ನಲ್ಲಿ ಕುಳಿತು ಕೇಳಿದಳು.
“ಅಮ್ಮ ಕಾಫಿ ಕೊಡ್ತೀಯಾ?”
“ಯಾಕೆ ನಿನ್ನ ಫ್ರೆಂಡ್ ಮನೆಯಲ್ಲಿ ಕಾಫಿ ಕೊಡಲಿಲ್ವಾ?” ವ್ಯಂಗ್ಯವಾಗಿ ಕೇಳಿದಳು ಜಾನಕಿ.
“ಅರ‍್ಮನೇಲಿ ಜ್ಯೂಸ್ ಕೊಟ್ರು. ಗಂಟಲು ನೋಯ್ತಿದೇಂತ ನಾನು ಜ್ಯೂಸ್ ಬೇಡಾಂತ ಹೇಳಿದೆ” ನಾರ್ಮಲ್ಲಾಗಿ ಉತ್ತರಿಸಿದಳು ವರು.
“ನಿನ್ನ ಫ್ರೆಂಡ್ಸ್, ನಿಮ್ಮಪ್ಪ-ಅಮ್ಮನ ಫ್ರೆಂಡ್ಸ್ಗೆ ಮಾಡಕ್ಕೆ ಕೆಲಸವಿಲ್ವಾ? ಹೇಳದೆ ಕೇಳದೆ ಊಟಕ್ಕೆ ಹಾಜರಾಗ್ತಾರೆ. ಬೆಂಗಳೂರಿನಲ್ಲಿ ಹೋಟೆಲ್‌ಗಳಿಗೆ ಬರವಾ?”
“ಹಾಗೆ ಕೇಳಿ ಅತ್ತಿಗೆ. ನಮಗೆ ಪ್ರೈವೆಸಿನೇ ಇಲ್ಲ. ಸಾಕಾಗಿ ಹೋಗಿದೆ” ಎಂದಳು ದೇವಕಿ.
“ಯಾರ ಬಗ್ಗೆ ಮಾತಾಡ್ತಿದ್ದೀರಾ?” ರಾವ್ ಹೊರಗೆ ಬಂದು ಕೇಳಿದರು.
“ಇನ್ಯಾರ ಬಗ್ಗೆ ಮೊನ್ನೆ ಮೊನ್ನೆ ನೀಲಾ… ಅವರ ಫ್ಯಾಮಿಲಿ ಬಂದಿದ್ರು. ಇವತ್ತು ಇವಳ ಫ್ರೆಂಡ್ಸ್ ಪುನಃ ಆ ನೀಲಾಳ ಮಗ ಬರ‍್ತಾನೆ. ಇವಳ ಫ್ರೆಂಡ್ಸ್ ಹೇಳದೆ ಕೇಳದೆ ವಕ್ರಿಸ್ತಾರೆ” ದೇವಕಿ ಜೋರು ಮಾಡಿದಳು.
ತಂಗಿಯ ಧ್ವನಿ ಕೇಳಿ ಶಿವಶಂಕರ, ಸುಧಾಕರ ಹೊರಗೆ ಬಂದರು.
“ನಾನೊಂದು ಪ್ರಶ್ನೆ ಕೇಳಲಾ?” ವರು ಕೇಳಿದಳು.
“ಕೇಳಮ್ಮ ಮಹಾರಾಣಿ.”
“ಜಾನಕಿ ಚಿಕ್ಕಮ್ಮ ನೀವು ಹಾಲು-ಕಾಫಿಪುಡಿಗೆ ಮಾತ್ರ ದುಡ್ಡು ಕೊಡ್ತಿದ್ದೀರಾ. ದೇವಕಿ ಅತ್ತೆ ನೀವು ತರಕಾರಿ, ಹಣ್ಣು, ಹೂವು ಜವಾಬ್ದಾರಿ ವಹಿಸಿಕೊಂಡಿದ್ದೀರ. ಶಿವಶಂಕರ ಚಿಕ್ಕಪ್ಪ ನೀವು ಹೆಂಡತಿಯನ್ನು ಕತ್ತೆ ದುಡಿತಕ್ಕೆ ಬಿಟ್ಟಿದ್ದೀರ. ವಾಟರ್‌ಬಿಲ್, ಲೈಟ್ ಬಿಲ್ ಕಟ್ತಿದ್ದೀರ ಹೌದು ತಾನೆ?”
“ವರು……..”
“ಅಪ್ಪ ನೀವು ಸುಮ್ಮನಿರಿ. ಈ ಮನೆಯ ಬಾಡಿಗೆ ಕೊಡ್ತಿರೋದು ನಮ್ಮಪ್ಪ. ದಿನಸಿ ಸಾಮಾನು ತರಿಸ್ತಿರೋದು ನಮ್ಮಪ್ಪ. ಬೇಯಿಸ್ತಿರೋದು ನಮ್ಮಮ್ಮ. ಅವರಿಗೆ ಯಾರನ್ನಾದರೂ ಊಟಕ್ಕೆ ಕರೆಯುವ ಹಕ್ಕಿದೆ. ನಿಮಗೆ ಪ್ರೈವೇಸಿ ಬೇಕು ತಾನೆ. ಬೇರೆ ಮನೆಗೆ ಹೋಗಿ.”
“ವರು ಹಾಗೆಲ್ಲಾ ಮಾತಾಡಬೇಡ…..”
“ನೀನು ಸುಮ್ನಿರಮ್ಮ. ಈ ಜನಗಳಿಗೆ ನಾಚಿಕೆ ಆಗಬೇಕು. ತಮ್ಮ-ತಂಗಿ ಜವಾಬ್ದಾರಿ ತೆಗೆದುಕೊಂಡು ಓದಿಸಿದ್ರಲ್ಲಾ ಅದು ನೆನಪಿಲ್ಲ. ಬಿಟ್ಟಿ ಊಟ ಮಾಡ್ತಿರೋವಾಗ ಸಂಕೋಚವಿಲ್ಲ. ಯಾವ ಕೆಲಸಾನೂ ಮಾಡದೆ ಹಾಸ್ಟೆಲ್‌ನಲ್ಲಿ ಇರುವ ತರಹ ಇದ್ದಾರಲ್ಲಾ……… ಅದಕ್ಕೆ ನಾಚಿಕೆಯಿಲ್ಲ…….”
“ಮಾತು ಹದ್ದು ಮೀರ‍್ತಿದೆ” ದೇವಕಿ ಕೂಗಿದಳು.
“ಹದ್ದು ಮೀರಿ ಮಾತಾಡ್ತಿರೋದು ನೀವು. ಈ ತಿಂಗಳು ನೀವು ಮನೆ ಬಾಡಿಗೆ ಕಟ್ಟಿ, ದಿನಸಿ ತಂದು ಹಾಕಿ. ಮುಂದಿನ ತಿಂಗಳು ಸುಧಾಕರ ಚಿಕ್ಕಪ್ಪ ಮನೆ ಬಾಡಿಗೆ ಕಟ್ಟಿ, ದಿನಸಿ ತರ‍್ತಾರೆ. ಅದರ ಮುಂದಿನ ತಿಂಗಳು ಶಿವಶಂಕರ ಚಿಕ್ಕಪ್ಪ ಮನೆ ಬಾಡಿಗೆ ಕಟ್ಟಿ ದಿನಸಿ ತರ‍್ತಾರೆ.”
“ನಾನು ವಾಪಸ್ಸು ಹೋಗುವಾಗ ನಮ್ಮ ಫ್ಯಾಮಿಲೀನ್ನ ಕರೆದುಕೊಂಡು ಹೋಗ್ತೀನಿ. ಅಲ್ಲಿ ನನ್ನ ಫ್ರೆಂಡ್ ರಾಗಿಣಿಮನೆ ಖಾಲಿಯಿದೆ. ಇದಕ್ಕಿಂತ ದೊಡ್ಡ ಮನೆ. ಅಪ್ಪನಿಗೆ ಟ್ಯುಟೋರಿಯಲ್ಸ್ನಲ್ಲಿ ಕೆಲಸ ಕೊಡಿಸ್ತೀನಿ. ನನ್ನ ಎಂ.ಎ. ಮುಗಿಯುತ್ತಿರುವ ಹಾಗೆ ಮೈಸೂರಿನಲ್ಲೇ ಕೆಲಸ ಕೊಡಿಸುವುದಾಗಿ ನಮ್ಮ ಪ್ರೊಫೆಸರ್ ಹೇಳಿದ್ದಾರೆ.”
“ಸುಮ್ಮನೆ ಹೆದರಿಸಬೇಡ ವರು.”
“ಹೆದರಿಸಕ್ಕಲ್ಲ ನಾನು ಹೇಳ್ತಿರೋದು. ಶಂಕರು ಪರೀಕ್ಷೆ ಆಗುವವರೆಗೂ ಮಾನಸ ಮನೆಯಲ್ಲರ‍್ತಾನೆ. ಕಾರ್‌ನಲ್ಲಿ ಶಾಲೆಗೆ ಹೋಗಿ ರ‍್ತಾನೆ. ನಾನೇ ನೀಲಾ ಆಂಟಿಗೆ ಫೋನ್ ಮಾಡಿ ಮನೆ ಖಾಲಿ ಮಾಡಿಸಿಕೊಳ್ಳಿ. ನಾವು ಮೈಸೂರಿನಲ್ಲಿದ್ದೀವಿ” ಅಂತ ಹೇಳ್ತೀನಿ. ನಿಮಗೆ ಅನುಮಾನವಿದ್ದರೆ ಈಗಲೇ ರಾಗಿಣಿ ನಂಬರ್ ಕೊಡ್ತೀನಿ ಫೋನ್ ಮಾಡಿ. ನೀವು ಈ ಮನೆಯಲ್ಲಿ ಇರುವುದಾದರೆ ಒಬ್ಬೊಬ್ಬರು ಒಂದೊAದು ತಿಂಗಳು ಬಾಡಿಗೆ ಕಟ್ಟಬೇಕು. ದಿನಸಿ ತರಿಸಬೇಕು……….”
ಯಾರೂ ಮಾತಾಡಲಿಲ್ಲ.
“ಅಪ್ಪ, ನೀವು ಈ ಸಲ ಬಾಡಿಗೆ ಕಟ್ಟಿ. ಸಾಮಾನು ತರಿಸಿದರೆ ನಾನು ಮನೆ ಬಿಟ್ಟು ಹೋಗ್ತೀನಿ. ಪುನಃ ಈ ಮನೆಗೆ ಕಾಲಿಡಲ್ಲ. ಕೃತಜ್ಞತೆಯಿಲ್ಲದ ನಿಮ್ಮ ತಮ್ಮ-ತಂಗಿಯರು ಬೇಕೋ, ಹೆತ್ತ ಮಗಳು ಬೇಕೋ ನೀವೇ ಡಿಸೈಡ್ ಮಾಡಿ….”
“ನನಗೆ 30ನೇ ತಾರೀಕು ನಿಮ್ಮ ಉತ್ತರ ಬೇಕು. ನಾನು ರಾಗಿಣಿ ಮನೆ ಕ್ಲೀನ್ ಮಾಡಿಸಬೇಕು.”
“ನಿನ್ನದ್ಯಾಕೋ ಅತಿಯಾಯ್ತು. ಇದುವರೆಗೂ ನಿಮ್ಮಪ್ಪ ನಡೆಸ್ತಿರಲಿಲ್ವಾ. ಇವರು ಯಾರೋ ಏನೋ ಅಂದ್ರೂಂತ ಸಿಟ್ಟುಮಾಡಿಕೊಳ್ಳೋದಾ?” ಶಿವಶಂಕರ ಸಮಾಧಾನ ಹೇಳಲು ಪ್ರಯತ್ನಿಸಿದ.
“ಚಿಕ್ಕಪ್ಪ ನೀವು ತುಂಬಾ ಜಾಣರೂಂತ ನನಗೆ ಗೊತ್ತು. ಶೋಭಾ ಚಿಕ್ಕಮ್ಮನಂತಹ ಹೆಂಡತಿ ಸಿಗಲು ಪುಣ್ಯ ಮಾಡಿದ್ರಿ. ನಿಮಗೆ ಹೆಂಡತಿ, ಮಗನಿಗೆ ಖರ್ಚು ಮಾಡಕ್ಕಿಷ್ಟವಿಲ್ಲಾಂತ ನನಗೆ ಗೊತ್ತು. ಹಾಗೇನಾದ್ರೂ ಇದ್ರೆ ಹೇಳಿ ಚಿಕ್ಕಮ್ಮನ್ನ, ಅಲೋಕನ್ನ ನಾನೇ ಕರ‍್ಕೊಂಡು ಹೋಗ್ತೀನಿ. ನೀವು ನೋಡಕ್ಕೆ ಬರಬಾರದು ಅಷ್ಟೆ.”
“ನಾನೆಲ್ಲಿ ಹಾಗಂದೆ? ನಿನ್ನ ಕಂಡಿಷನ್ಸ್ಗೆ ನನ್ನ ಒಪ್ಪಿಗೆ ಇದೆ.”
ವರು ಉಳಿದವರ ಕಡೆ ತಿರುಗಿಯೂ ನೋಡಲಿಲ್ಲ.
ಎಲ್ಲರಿಗೂ ಬಹಳ ಸಿಟ್ಟು ಬಂದಿತ್ತು. ಆದರೆ ವರು ಎದುರಿಗೆ ಮಾತನಾಡಲು ಧೈರ್ಯವಾಗಲಿಲ್ಲ.
ವರು ಸಾಯಂಕಾಲ ಅಲೋಕ, ಶರಣ್ಯಳರನ್ನ ಕರೆದುಕೊಂಡು ಹತ್ತಿರದ ಪಾರ್ಕ್ಗೆ ಹೋದಾಗ ಎಲ್ಲರೂ ಒಟ್ಟಿಗೆ ಸೇರಿ ಅಣ್ಣ-ಅತ್ತಿಗೆಯರನ್ನು ದಬಾಯಿಸಿದರು.
“ನಮಗಿಂತ ಚಿಕ್ಕವಳು ಅವಳು. ನಮ್ಮೆಲ್ಲರನ್ನೂ ಅವಳು ದಬಾಯಿಸ್ತಿದ್ರೆ ನೀವು ಹೇಗೆ ಸುಮ್ಮನಿದ್ರಿ?”
“ನಮ್ಮಿಬ್ಬಗಿಂತ ನೀವೆಲ್ಲರೂ ಚಿಕ್ಕವರು. ನೀವು ಯಾಕೆ ನಮ್ಮನ್ನು ದಬಾಯಿಸಿದ್ರಿ?” ಶಕುಂತಲಾ ಕೇಳಿದರು.
“ನಾವು ದಬಾಯಿಸಲಿಲ್ಲ ಅತ್ತಿಗೆ………..”
“ಕಾಮೆಂಟ್ ಮಾಡಿದ್ರಿ. ಅದೂ ಕೆಟ್ಟದಾಗಿ ಮಾತಾಡಿದ್ರಿ. ನಾನೇನು ನಿಮ್ಮ ಆಸ್ತಿ ಖರ್ಚು ಮಾಡ್ತಿದ್ದೀನಿ ಅನ್ನುವ ಹಾಗೆ ಮಾತಾಡಿದ್ರಿ” ಶಕುಂತಲಾ ಹರಿಹಾಯ್ದರು.
“ಶಕ್ಕು ಇರು ನಾನು ಮಾತಾಡ್ತೀನಿ. ಈಗ ನೀವು ಹೇಳಿ ವರು ಮಾತಾಡಿದ್ರಲ್ಲಿ ಏನು ತಪ್ಪಿದೆ? ಖರ್ಚು ಮಾಡ್ತಿರೋದು ನಾನು, ಬೇಯಿಸಿಹಾಕೋದು ಶಕ್ಕು. ನೀವ್ಯಾಕೆ ಮೂಗು ತೂರಿಸಿದ್ರಿ?”
“ಅಣ್ಣ ನಿಜವಾಗಿ ನೀನು ವರು ಜೊತೆ ಮೈಸೂರಿಗೆ ಹೋಗ್ತೀಯಾ?”
“ನನ್ನ ಮಗಳು ನಮ್ಮ ಯೋಗಕ್ಷೇಮದ ಬಗ್ಗೆ ಯೋಚಿಸ್ತಿದ್ದಾಳೆ. ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾಳೆ. ಅವಳಿಗೆ ಹಣಬಲವಿಲ್ಲದಿದ್ದರೂ ಜನಬಲವಿದೆ. ಎಲ್ಲೂ ಕೆಲಸ ಸಿಗದಿದ್ರೆ ನಾವೇ ಲೋನ್ ತೆಗೆದುಕೊಂಡು ಟ್ಯುಟೋರಿಯಲ್ಸ್ ಶುರು ಮಾಡ್ತೀವಿ.”
“ಲೋನ್ ಯಾಕೆ ತೊಗೋಬೇಕು? ಚಂದ್ರಾವತೀನ್ನ ಕೇಳಿದರೆ ಅವರೇ ಬಡ್ಡಿ ಇಲ್ಲದ ಸಾಲ ಕೊಡ್ತಾರೆ” ಎಂದರು ಶಕುಂತಲಾ.
ಯಾರೊಬ್ಬರೂ ಮಾತಾಡಲಿಲ್ಲ.
ವರು ರಾಗಿಣಿಯನ್ನು ಭೇಟಿ ಮಾಡಲು ಒಂದು ದಿನ ಮೈಸೂರಿಗೆ ಹೋಗಿ ಬಂದಳು. ಮಾನಸಾಳ ಸೀಮಂತ ಕಾರ್ಯಕ್ರಮದಲ್ಲಿ ಓಡಾಡಿದಳು. ಅವಳು 30ನೇ ತಾರೀಕು ಮೈಸೂರಿಗೆ ಹಿಂದಿರುಗುವವಳಿದ್ದಳು.
28ನೇ ತಾರೀಕು ಎಲ್ಲರೂ ಕಾಫಿ ಕುಡಿಯುತ್ತಿದ್ದಾಗ ದೇವಕಿ ಕೇಳಿದಳು “ಅಣ್ಣ ಮನೆ ಬಾಡಿಗೆ 12,000 ರೂ. ಜೊತೆಯಲ್ಲಿ ದಿನಸಿಗೆ ಎಷ್ಟು ಕೊಡಬೇಕು ಹೇಳು.”
“12,000 ಕೊಡು. ಸಾಮಾನಿನ ಲಿಸ್ಟ್ ಕೊಡ್ತೀನಿ. ನೀನು ಆನ್‌ಲೈನ್‌ನಲ್ಲಿ ತರಿಸಿಹಾಕು. ನೀನು ಹಣ ಕೊಡೋದು ನಾಳೆ ಆ ಹಣದಲ್ಲಿ ನಾವೇನೋ ಉಳಿಸಿಕೊಂಡೆವೂAತ ಆಕ್ಷೇಪಣೆ ಮಾಡೋದು ಬೇಡ.”
ದೇವಕಿ ಸೋತ ಧ್ವನಿಯಲ್ಲಿ ‘ಲಿಸ್ಟ್ ಕೊಡಣ್ಣ’ ಎಂದಳು.
ವರೂಗೆ ಮನೆಗೆ ಬಂದೊಡನೆ ವಿಷಯ ತಿಳಿಯಿತು. ಅವಳು ತಂದೆ-ತಾಯಿ ಇಬ್ಬರೇ ಇದ್ದಾಗ ಹೇಳಿದಳು. “ನಿಮಗೆ ನನ್ನ ವರ್ತನೆಯಿಂದ ಬೇಸರವಾಗಿರಬಹುದು. ನಿಮ್ಮ ಒಳ್ಳೆಯತನದಿಂದ ನಮಗೆಲ್ಲಾ ನಷ್ಟವಾಗಿದೆ. ಅಪ್ಪ, ನಾನು ಈ ಪ್ರಶ್ನೆ ಕೇಳಬಾರದು ಆದರೂ ಕೇಳ್ತಿದ್ದೀನಿ. ನಾವು ಮಧ್ಯಮ ವರ್ಗದವರು. ನಮಗೆ ಯಾವ ಆಸ್ತಿ-ಪಾಸ್ತಿನೂ ಇಲ್ಲ. ಶರು ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದಾಳೆ. ನೀವು ಮದುವೆಗೆ ಎಷ್ಟು ದುಡ್ಡು ಇಟ್ಟಿದ್ದೀರಾ?”
“ಬ್ಯಾಂಕ್‌ನಲ್ಲಿ ಸಾಲ ಸಿಗತ್ತಲ್ಲಾ?”
“ಸಾಲ ಸಿಗಲ್ಲ ಅಥವಾ ಅಷ್ಟು ಬಡ್ಡಿ ಕಟ್ಟಿಕೊಂಡು ಜೀವನ ಮಾಡೋದು ತುಂಬಾ ಕಷ್ಟ. ನಮ್ಮ ಹತ್ತಿರ ಅಲ್ಪ ಸ್ವಲ್ಪ ಹಣ ಇದ್ದಿದ್ರೆ ಸಾಕಾಗದೆ ಇರುವ ಹಣ ಸಾಲ ಮಾಡಬಹುದಿತ್ತು. ನೀವು ನಿಮ್ಮ ತಮ್ಮಂದಿರು ಅಕ್ಕ ತಂಗಿಯ ಬಗ್ಗೆ ಮಾತ್ರ ಯೋಚಿಸಿದ್ರಿ ಅಲ್ವಾ? ನಮಗೆ ಒಳ್ಳೆಯ ಭವಿಷ್ಯ ಕೊಡಬೇಕೂಂತ ಅನ್ನಿಸಲಿಲ್ಲವಾ?”
ರಾವ್ ಉತ್ತರಿಸಲಿಲ್ಲ. ಶಕುಂತಲಾ ಮಗಳ ಕೆನ್ನೆಗೆ ಬಾರಿಸಿದರು.
“ನೀನು ಹೊಡೆದೇಂತ ನನಗೆ ಬೇಜಾರಿಲ್ಲಮ್ಮ. ನೀವು ತುಂಬಾ ಒಳ್ಳೆಯವರು ಅನ್ನಿಸಿಕೊಳ್ಳಲು ಹಿಂದೆ ಮುಂದೆ ನೋಡದೆ ಖರ್ಚು ಮಾಡಿದ್ದು ತಪ್ಪು. ಇನ್ನಾದರೂ ಬುದ್ಧಿವಂತರಾಗಿ ನಿನ್ನ ಓರಗಿತ್ತಿಯರು, ನಾದಿನಿ-ಅತ್ತಿಗೆಯರು ಶರು ಮದುವೆ ಸೆಟ್ಲ್ ಆದರೆ ಸಹಾಯ ಮಾಡ್ತಾರೇನಮ್ಮಾ? ನಾನು ಊರಿಗೆ ಹೋದ ತಕ್ಷಣ ನೀವು ಅವರ ಮಾತಿಗೆ ಮರುಳಾಗಿ ಸಾಮಾನು ತರಿಸಿದ್ರೆ, ಬಾಡಿಗೆ…..”
“ಬಾಡಿಗೆ ಕಟ್ಟಿದರೆ ಏನ್ಮಾಡ್ತೀಯಾ?” ಶಕುಂತಲಾ ಧ್ವನಿ ಏರಿಸಿ ಕೇಳಿದರು.
“ನಾನು ಇನ್ಯಾವತ್ತೂ ಈ ಮನೆಗೆ ಕಾಲಿಡಲ್ಲ. ನೀವು ನನ್ನನ್ನು ಕಳೆದುಕೊಳ್ತೀರ.”
“ಏನು ಹೇಳ್ತಾಯಿದ್ದೀಯೆ?”
“ನಿನಗೆ ಕನ್ನಡ ಅರ್ಥವಾಗತ್ತೆ ಅಂದುಕೊಂಡಿದ್ದೇನೆ.”
ರಾವ್-ಶಕುಂತಲಾ ಮುಖಮುಖ ನೋಡಿಕೊಂಡರು. ಆದರೆ ಏನೂ ಮಾತಾಡಲಿಲ್ಲ.
ವಾರುಣಿ ಮೈಸೂರಿಗೆ ಹಿಂದಿರುಗಿದಳು. ಮೂರನೇ ಸೆಮಿಸ್ಟರ್ ಶುರುವಾಯಿತು. ಒಂದು ಸಾಯಂಕಾಲ ಟೀ ಕುಡಿಯುತ್ತಿದ್ದಾಗ ಚಂದ್ರಾವತಿ ಕೇಳಿದರು. “ನಿನ್ನ ಅನುವಾದದ ಕೆಲಸ ಏನಾಯಿತು?”
“ಅವರು ಇನ್ನೂ ಮೆಟೀರಿಯಲ್ ಕಳಿಸಿಲ್ಲ.”
“ನಿನಗೆ ಬಿಡುವಾದಾಗ ಅನುವಾದ ಮಾಡುತ್ತಾ ಕುಳಿತರೆ ಯಾವಾಗ ನಿನ್ನ ಪಾಠಗಳನ್ನು ಓದುತ್ತೀಯ?”
“ಬಿಡುವು ಮಾಡಿಕೊಂಡು ಓದುತ್ತೀನಿ.”
“ಆ ಕೆಲಸ ಬೇಡ ವರು. ನೀನು ಬೇರೆ ಯಾವುದಾದರೂ ಕೆಲಸ ನೋಡು ಬೇಡ ಅನ್ನಲ್ಲ. ಅದು ಆ ದಿನವೇ ಮುಗಿಯಬೇಕು. ಕೆಲಸದ ಭಾರ ನಿನ್ನ ತಲೆ ತಿನ್ನಬಾರದು.”
“ಅಂತಹ ಕೆಲಸ ಸಿಗಬೇಕಲ್ಲಾ ಆಂಟಿ.”
“ಪ್ರಯತ್ನ ಪಡೋಣ. ನೀನು ಈಗ ಒಪ್ಪಿರುವ ಕೆಲಸದಿಂದ ನಿನ್ನ ಬದುಕು ಯಾಂತ್ರಿಕವಾಗಿ ಬಿಡತ್ತೆ. ಹೋಗಲಿ ಆ ಕೆಲಸದಿಂದ ನಿನಗೆ ಕೈ ತುಂಬಾ ಹಣ ಸಿಗುತ್ತದಾ? ಹತ್ತು-ಹದಿನೈದು ಸಾವಿರ ಸಿಕ್ಕರೆ ಅನುಕೂಲ. ಇಲ್ಲದಿದ್ದರೆ ಏನು ಪ್ರಯೋಜನ?”
ವರೂಗೂ ಆಂಟಿ ಹೇಳುತ್ತಿರುವುದು ಸರಿ ಅನ್ನಿಸಿತು. ಒಂದು ವಾರ ಕಳೆಯಿತು. ಅವಳು ಕಾಲೇಜ್‌ನಿಂದ ಬರುವ ವೇಳೆಗೆ ಚಂದ್ರಾ ಆಂಟಿ ಇಬ್ಬರು ಹೆಂಗಸರ ಹತ್ತಿರ ಮಾತಾಡುತ್ತಿದ್ದರು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44514
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು
