(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವಾರುಣಿ ಬಂದ ನಾಲ್ಕು ದಿನಕ್ಕೆ ನೀಲಾಂಬಿಕೆ ಕುಟುಂಬ ಬೆಂಗಳೂರಿಗೆ ಬಂದಿತು. ದೊಡ್ಡ ಹೋಟೆಲ್ಲೊಂದರಲ್ಲಿ ಇಳಿದುಕೊಂಡು ಶಕುಂತಲಾಗೆ ಫೋನ್ ಮಾಡಿದರು. “ನಾವು ದುಬೈನಿಂದ ನೆನ್ನೆ ಬಂದೆವು. ನಾಳೆ ನಿಮ್ಮನೆಗೆ ಬರಬಹುದಾ ಅತ್ತಿಗೆ?”
“ಖಂಡಿತಾ ಬಾಮ್ಮ. ಇದು ನಿನ್ನ ಮನೆ. ನೀನು ಬರುವುದಕ್ಕೆ ಪರ‍್ಮಿಷನ್ ಕೇಳಬೇಕಾ?”
“ನಾನು ನಮ್ಮನೆಯವರು ಮಗಳು, ಅಳಿಯ ಬಂದಿದ್ದೇವೆ. ಅನಿಕೇತ್‌ಗೆ ಪರೀಕ್ಷೆಯಂತೆ. ಅವನು ಬರೋದು ವಾರವಾಗಬಹುದು. ಅವನು ಬರುವುದರಲ್ಲಿ ನಾವು ಅಯೋಧ್ಯ, ಕಾಶಿ, ಗಯಾಗೆ ಹೋಗಿ ಬರ‍್ತೀವಿ.”
“ನಾಳೆ ಊಟಕ್ಕೆ ಬನ್ನಿ. ಏನು ಅಡಿಗೆ ಮಾಡಲಿ ಹೇಳು.”
“ಅತ್ತಿಗೆ ದಯವಿಟ್ಟು ಅನ್ನ, ಸಾರು, ಚಪಾತಿ, ಪಲ್ಯ ಮಾಡಿ ಸಾಕು. ಇನ್ನೇನು ಬೇಡ. ನಿಮ್ಮ ಸಾರು ತಿಂದು ವರ್ಷಗಳಾಗಿವೆ.”
“ಆಗಲಿ ಅನ್ನ, ಸಾರು ಮಾಡ್ತೀನಿ ಬಾ.”
ಮರುದಿನ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಅವರೆಲ್ಲಾ ಬಂದರು. ಅಂಜಲಿ ಅವಳನ್ನಪ್ಪಿ ಹೇಳಿದಳು. “ವರು ಎಷ್ಟು ಚೆನ್ನಾಗಿ ಆಗಿದ್ದೀಯ. ನಿಮ್ಮ ಅಮ್ಮನ ಮುಖದ ಮೇಲಿರುವ ದೈವಿಕ ಕಳೆ ನಿನ್ನ ಮುಖದ ಮೇಲೂ ಇದೆ.”
“ನಿಲ್ಲಿಸಿ ಹೊಗಳಿದ್ದು. ನೀವು ಹೀಗೆ ಹೊಗಳ್ತಿದ್ರೆ ನಾನು ಆಕಾಶಕ್ಕೆ ಹಾರಿ ಬಿಡ್ತೀನಿ. ದಯವಿಟ್ಟು ಭೂಮಿಮೇಲೇ ಇರಲು ಬಿಡಿ ಅಕ್ಕ.”
“ಏನೇ ಅಕ್ಕ ಅಂತಿದ್ದೀಯ?”
“ಅಮ್ಮ ಯಾವಾಗಲೂ ಅಂಜಲಿ ನನ್ನ ದೊಡ್ಡಮಗಳು ಅಂತಿರ‍್ತಾರೆ. ನಾನು ಅವರ ಚಿಕ್ಕ ಮಗಳು. ನೀವು ನನಗೆ ಅಕ್ಕ ತಾನೆ?”
“ಆಯ್ತು” ಎಂದ ಅಂಜಲಿ-ನೀಲಾ ಮುಖ ಮುಖ ನೋಡಿಕೊಂಡಿದ್ದನ್ನು ಶೋಭಾ, ಜಾನಕಿ ಇಬ್ಬರೂ ಗಮನಿಸಿದರು.
ಊಟ ಮಾಡಿ ಒಂದಿಷ್ಟು ಹರಟೆ ಹೊಡೆದು ಅವರೆಲ್ಲಾ ಹೊರಟರು. ಅವರೆಲ್ಲಾ ಹೋದಮೇಲೆ ಜಾನಕಿ ಅತ್ತಿಗೆಯನ್ನು ಕೇಳಿದರು. “ಈ ಸಲ ನಿಮ್ಮ ಫ್ರೆಂಡ್ ಏನೂ ಕೊಡಲಿಲ್ಲವಾ?”
“ನಾವು ಹೋದಾಗಲೇ ಅಷ್ಟು ಕೊಟ್ಟು ಕಳಿಸಿದ್ದಾಳೆ. ಇನ್ನೇನು ಕೊಡಬೇಕು?”
“ವರೂಗೆ ಏನೂ ಕೊಡಲಿಲ್ಲವಲ್ಲಾ……”
“ಅದು ವರೂಗೆ ನೀಲಂಗೆ ಸಂಬಂಧಿಸಿರೋದು. ನೀನು ಯಾಕೆ ತಲೆಕೆಡಿಸಿಕೊಳ್ತೀಯಾ?”
“ನಂಗೇನು ಹುಚ್ಚಾ ತಲೆಕೆಡಿಸಿಕೊಳ್ಳಕ್ಕೆ?”
“ಈ ಮನೆ ಬಿಟ್ಟು ಬೇರೆ ಮನೆಗೆ ಹೋದಾಗ ಬಾಡಿಗೆದಾರದ ಬವಣೆ ನಿನಗೆ ಅರ್ಥವಾಗತ್ತೆ. ಬೆಂಗಳೂರಿನಲ್ಲಿ ಈಗಿನ ಕಾಲದಲ್ಲಿ 12,000ಕ್ಕೆ ಇಂತಹ ಮನೆ ಕೊಡಿಸಿಬಿಡು ನೋಡೋಣ.”
“12,000ರೂ. ಅಷ್ಟೇನಾ?”
“ನಿನಗೆ ಅಷ್ಟೇನಾ ಅನ್ನಿಸಿತು. ಆದರೆ ಪ್ರತಿ ತಿಂಗಳು ಬಾಡಿಗೆ ಕಟ್ಟುವವರಿಗೆ ಆ ಕಷ್ಟ ಅರ್ಥವಾಗೋದು….”
“ನೀವಂತೂ ಪುಣ್ಯ ಮಾಡಿದ್ದೀರ ಬಿಡಿ ಅಕ್ಕ. ನೀಲ, ಅಂಜಲಿ ಇಬ್ಬರಿಗೂ ವರು ತುಂಬಾ ಇಷ್ಟವಾಗಿದ್ದಾಳೇಂತ ಅನ್ನಿಸ್ತಿದೆ. ಅವರು ಕೇಳಿದ್ರೆ ಅವರ ಮಗನಿಗೆ ಕೊಡ್ತೀರಾ?”
“ಯಾಕಾಗಬಾರದು? ನಾನು ಜಾತಿ ಗೀತಿ ನೋಡೋದು ಬೇಡ ಅಂದುಕೊಂಡಿದ್ದೇನೆ. ನಮ್ಮ ಜಾತಿ ಜನ, ರಕ್ತ ಸಂಬಂಧಿಗಳು ನಮಗೆ ಮಾಡ್ತಿರುವ ಸಹಾಯ ನೋಡ್ತಿದ್ದೀನಲ್ಲಾ?” ಶಕುಂತಲಾ ಕೂಗಾಡಿದಾಗ ಜಾನಕಿ ಸುಮ್ಮನಾದಳು.
ರೂಮ್‌ನಲ್ಲಿ ಮಲಗಿದ್ದ ವರು ತಾಯಿ ಹಾಗೂ ಚಿಕ್ಕಮ್ಮನ ನಡುವಿನ ಮಾತುಕತೆ ಕೇಳಿಸಿಕೊಂಡಿದ್ದಳು. ನೀಲಾ ಆಂಟಿ ಬರುತ್ತಾರೆಂದಾಗ ಅವರೆಲ್ಲಿ ತನ್ನನ್ನು ಟೂರ್‌ಗೆ ಕರೆಯುತ್ತಾರೋ ಎಂಬ ಆತಂಕ ಕಾಡಿತ್ತು. ಆದರೆ ಹಾಗಾಗಿರಲಿಲ್ಲ.
ಬೆಂಗಳೂರಿನಲ್ಲಿ ಅವಳಿಗೆ ಮುಖ್ಯವಾದ ಎರಡು ಕೆಲಸಗಳಿದ್ದವು. ಮಾನಸ ತಾಯಿ ಮನೆಯಲ್ಲಿದ್ದಳು. ಅವಳ ಸೀಮಂತ ಕಾರ್ಯಕ್ರಮವಿತ್ತು. ಸೀಮಂತಕ್ಕೆ ಮೊದಲು ಅವಳನ್ನು ಭೇಟಿ ಮಾಡಬೇಕಿತ್ತು.
ಎರಡನೆಯದಾಗಿ ಬೆಂಗಳೂರಿನಲ್ಲಿದ್ದ ಒಂದು ಸಂಸ್ಥೆ ಅನುವಾದಕರನ್ನು ಕರೆದಿತ್ತು. ಇಂಗ್ಲೀಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದ ಮಾಡಬೇಕಿತ್ತು. ಮನೆಯಿಂದಲೇ ಕೆಲಸ ಮಾಡಬಹುದಿತ್ತು. ಅವರು ಇಂಟರ್‌ವ್ಯೂಗೆ ಕರೆದಿದ್ದರು. ಅವಳು ಈ ವಿಚಾರ ಯಾರಿಗೂ ಹೇಳಿರಲಿಲ್ಲ. ಇಂಟರ್‌ವ್ಯೂ ನಂತರ ಹೇಳೋಣವೆಂದುಕೊಂಡು ಸುಮ್ಮನಿದ್ದಳು.
ಮರುದಿನವೇ ಮಾನಸಾಳನ್ನು ನೋಡಲು ಹೋದಳು.
“ಹೇಗಿದ್ದೀಯೇ?”
“ನೀನೇ ನೋಡ್ತಿದ್ದೀಯಲ್ಲಾ?”
“ಅಮ್ಮನ ಕಳೆ ಬಂದು ಬಿಟ್ಟಿದೆ….”
“ಹುಂ. ಬರದೇ ಇರುತ್ತದಾ? ದೇವರು ತಪ್ಪು ಮಾಡಿದ ಕಣೆ.”
“ಏನು ತಪ್ಪು ಮಾಡಿದ?”
“ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಇಟ್ಟುಕೊಂಡು ಮಗೂನ್ನ ಸಾಕುವುದು ಕಷ್ಟ ಕಣೆ. ಅದರ ಬದಲು ಮೂರು ತಿಂಗಳಿಗೇ ಹೆರಿಗೆ ಆಗುವ ಹಾಗಿರಬೇಕಿತ್ತು.”
“ಪ್ರಪಂಚದಲ್ಲಿ ನಿನ್ನ ರೀತಿ ಯೋಚಿಸುವವರು ಯಾರೂ ಇಲ್ಲಾಂತ ಅನ್ನಿಸ್ತಿದೆ.”
“ಯಾಕೆ?”
“ಒಂಭತ್ತು ತಿಂಗಳು ಅಮ್ಮನ ಗರ್ಭದಲ್ಲಿ ಬೆಚ್ಚಗಿರುವ ಮಕ್ಕಳು ತಾಯಿ ತೆಗೆದುಕೊಳ್ಳುವ ಆಹಾರದಿಂದ ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತಾರೆ. ಹೆಚ್ಚು ಆರೋಗ್ಯವಾಗಿರುತ್ತಾರೆ. ತಾಯಿಗೆ ಕಷ್ಟವಾಗತ್ತೆ ನಿಜ. ಆದರೆ ಆ ಮಗುವಿನ ಮುಖ ನೋಡಿದಾಗ ಆಗುವ ಆನಂದವೇ ಬೇರೆ……..”
“ಏನೇ ತುಂಬಾ ಅನುಭವ ಇರುವ ಹಾಗೆ ಮಾತಾಡ್ತೀಯಾ?”
“ಇದಕ್ಕೆ ಅನುಭವ ಬೇಕಿಲ್ಲ ನಮ್ಮಮ್ಮ. ಶೋಭಾ ಚಿಕ್ಕಮ್ಮನ ಬಾಣಂತನ ಮಾಡುವಾಗ ನಾನು ಗಮನಿಸಿದ್ದೆ. ಅಮ್ಮ ಚಿಕ್ಕಮ್ಮನಿಗೆ ಹೀಗೇ ಹೇಳ್ತಿದ್ರು. ನೀನು ಬೇಕಿದ್ದರೆ ನಿಮ್ಮಜ್ಜೀನ್ನ ಕೇಳು………”
“ಆ ವಿಚಾರ ಬಿಡು. ನೀನು ಹೇಗಿದ್ದೀಯಾ?”
“ತುಂಬಾ ಆರಾಮವಾಗಿದ್ದೇನೆ. ನಮ್ಮತ್ತೆ ಮಗನ ಮದುವೆ ಆದ ಮೇಲೆ ಅತ್ತೆ ಬದಲಾಗಿದ್ದಾರೆ. ಸೊಸೆ ಮನೆಯವರು ಶ್ರೀಮಂತರು………”
“ಹೌದಾ?”
ವರು ನಾಗರಾಜ-ರೇಖಾ ಬಗ್ಗೆ ತಂಗಿಯ ಬಗ್ಗೆ ಹೇಳಿದಳು.
“ನಿನ್ನ ತಂಗಿ ನಿನ್ನಷ್ಟು ದಡ್ಡಿಯಲ್ಲಾಂತ ಆಯ್ತು. ನಿಮ್ಮ ಮನೆಯಲ್ಲಿ ಮದುವೆ ಮಾಡಕ್ಕೆ ಸಿದ್ಧರಿದ್ದಾರಾ?”
“ಇನ್ನೇನು ಮಾಡ್ತಾರೆ? ಓದಕ್ಕೂ ಇಷ್ಟವಿಲ್ಲ-ಕೆಲಸ ಮಾಡಕ್ಕೂ ಇಷ್ಟವಿಲ್ಲ. ಮನೇಲಿ ಕೂಡಿಸಿಕೊಂಡು ಏನ್ಮಾಡ್ತಾರೆ? ಅನುಕೂಲವಾದ ಸಂಬಂಧ ಬಂದ್ರೆ ಮದುವೆ ಮಾಡ್ತಾರೆ.”
“ನಿನ್ನ ರಾಜಕುಮಾರ ಹೇಗಿದ್ದಾನೆ?”
“ಯಾವ ರಾಜಕುಮಾರ?”
“ದುಬೈ ರಾಜಕುಮಾರ.”
“ಅವನ್ಯಾಕೆ ನನ್ನ ರಾಜಕುಮಾರ ಆಗ್ತಾನೆ? ಅವನನ್ನು ನಾನು ಇದುವರೆಗೂ ಭೇಟಿ ಮಾಡಿಲ್ಲ………”
“ಪೆದ್ದು ಕಣೆ ನೀನು…….”
“ನನ್ನ ಜೊತೆ ಜಗಳವಾಡಬೇಕೂಂತ ನಿರ್ಧಾರ ಮಾಡಿದ್ರೆ ಹೇಳು. ನಾನು ವಾಪಸ್ಸು ಹೋಗ್ತೀನಿ.”
“ಸಾರಿ ಕಣೆ. ನನಗೆ ನಿಜವಾಗಿ ಯಾರ ಹತ್ತಿರವಾದರೂ ಜಗಳವಾಡಬೇಕು ಅನ್ನಿಸಿದೆ ಕಣೆ……….”
“ಯಾಕೆ?”
“ನಮ್ಮತ್ತೆ ಮನೆಯಲ್ಲಿ ಎಲ್ಲರೂ ನನ್ನನ್ನು ಮಗು ತರಹ ನೋಡಿಕೊಳ್ತಾರೆ. ಅಪ್ಪ ತಪ್ಪಿ ತಪ್ಪು ಮಾಡಿದರೂ ಬೈಯ್ಯಲ್ಲ. ನಾನೇ ಜಗಳವಾಡಬೇಕು. ಅಂತ ನಿಶ್ಚಯಿಸಿದರೂ ಯಾರೂ ಜಗಳವಾಡಲ್ಲ.”
“ಅದಕ್ಕೆ ನನ್ನ ಹತ್ತಿರ ಜಗಳವಾಡಬೇಕಾ?”
“ಸಾರಿ ಕಣೆ. ನೀನು ನನ್ನ ಸೀಮಂತಕ್ಕೆ ಬರಲೇ ಬೇಕು.”
“ಖಂಡಿತಾ ಬರ‍್ತೀನಿ.”
“ಚಂದ್ರಾವತಿ ಆಂಟಿಗೂ ಬರಕ್ಕೆ ಹೇಳಲಾ?”
“ಅವರ ತಂಗಿ ಬರುವ ಪ್ರೋಗ್ರಾಂ ಇದೆ. ಅವರು ಬರ‍್ತಾರೋ ಇಲ್ಲವೋ ತಿಳಿಯದು. ರಜದಲ್ಲಿ ಯಾವಾಗಾದರೂ ನಮ್ಮನೆಗೆ ಬರ‍್ತಾರೆ. ಆಗ ನಾನೇ ಕರದುಕೊಂಡು ಬರ‍್ತೀನಿ.”
“ಹಾಗೇ ಮಾಡು. ನಿಮ್ಮ ತಾಯಿ ಬರಲೇಬೇಕು.”
“ನೀನೊಂದು ಸಲ ಫೋನ್ ಮಾಡು. ಖಂಡಿತಾ ಬರ‍್ತಾರೆ” ಎಂದಳು ವರು.
ಮರುದಿನ ಅವಳು ಮನೆಯಲ್ಲಿ ಯೂನಿವರ್ಸಿಟಿಗೆ ಹೋಗಿ ಬರುತ್ತೇನೆಂದು ಹೇಳಿ ಮೆಜೆಸ್ಟಿಕ್‌ಗೆ ಹೋದಳು. ಆನಂದರಾವ್ ಸರ್ಕಲ್‌ನಲ್ಲಿ ಆಫೀಸ್ ಇತ್ತು. ಅವಳಂತೆ 10-12 ಜನ ಬಂದಿದ್ದರು. ಎಲ್ಲರಿಗೂ ಟೆಸ್ಟ್ ಕೊಟ್ಟರು. 3 ಪ್ಯಾರಾ ಇಂಗ್ಲೀಷ್ ಲೇಖನವನ್ನು ಕನ್ನಡ ಭಾಷೆಗೂ, ಎರಡು ಪ್ಯಾರಾ ಲೇಖನವನ್ನು ಕನ್ನಡದಿಂದ ಇಂಗ್ಲೀಷ್‌ಗೂ ಅನುವಾದ ಮಾಡಬೇಕಿತ್ತು. ಅರ್ಧಗಂಟೆಯಲ್ಲಿ ಷಾರ್ಟ್ ಲಿಸ್ಟ್ ಮಾಡಿ ಇಂಟರ್‌ವ್ಯೂಗೆ ಕರೆದರು. ಅವಳೇನು ಮಾಡುತ್ತಿದ್ದಾಳೆಂದು ತಿಳಿದ ಆ ಸಂಸ್ಥೆಯ ಮುಖ್ಯಸ್ಥರು ಕೇಳಿದರು. “ನಿಮಗೆ ಈ ಕೆಲಸದಿಂದ ಅನುಕೂಲವಾಗಬಹುದು. ನಾವು ಒಂದು ಪೇಜ್‌ಗೆ 50 ರೂ. ಕೊಡ್ತೇವೆ. ಪ್ರತಿವಾರ ಸುಮಾರು 25 ಪುಟ ಕಳಿಸುತ್ತೇವೆ. ನಿಮಗೆ ಅನುವಾದ ಮಾಡಿಕಳಿಸಲು ಆಗುತ್ತದೆಯಾ?”
“ಆಗಬಹುದು ಸರ್. ಲ್ಯಾಪ್‌ಟ್ಯಾಪ್ ಇರುವುದರಿಂದ ರಾತ್ರಿಯೆಲ್ಲಾ ಕೆಲಸ ಮಾಡಬಲ್ಲೆ……. ಮೊದಲು 20 ಪೇಜ್ ಕಳಿಸಿ.”
“ನಮಗೆ ನೀವು ವೇಗವಾಗಿ ಅನುವಾದ ಮಾಡಿ ಕಳುಹಿಸುವುದು ಮುಖ್ಯವಲ್ಲ. ಕರೆಕ್ಟಾಗಿಯೂ ಇರಬೇಕು. ನಮಗೆ ಮುಂದಿನ ತಿಂಗಳು ಮೆಟೀರಿಯಲ್ ಬರುತ್ತದೆ. ಅದುವರೆಗೂ ಯೋಚಿಸಿ ನಿರ್ಧಾರಕ್ಕೆ ಬನ್ನಿ.”
ಅವಳು ಒಪ್ಪಿದಳು. ಅವಳು ಮನೆಗೆ ಬರುವ ವೇಳೆಗೆ ಚಂದ್ರಾವತಿ ಆಂಟಿ, ಶಾರದಾ, ಆರ್.ಜಿ. ಬಂದಿದ್ದರು.
“ಯೂನಿವರ್ಸಿಟಿಗೆ ಯಾಕೆ ಹೋಗಿದ್ರಿ?”
“ಆಮೇಲೆ ಹೇಳ್ತೀನಿ. ನೀವು ಯಾವಾಗ ಬಂದ್ರಿ? ಬರುವ ಮೊದಲು ಯಾಕೆ ಫೋನ್ ಮಾಡಲಿಲ್ಲ?”
“ನೆನ್ನೆ ಸಾಯಂಕಾಲ ಸಂಧ್ಯಾ, ಬಾಲಾಜಿ, ರಾಗಿಣಿ ಕೊಡಗಿಗೆ ಹೊರಟರು. ನನಗೆ ಮಾನಸಾಳನ್ನು ನೋಡಬೇಕೆನ್ನಿಸುತ್ತಿತ್ತು. ಇವನಿಗೆ ಹೇಳಿದೆ. ಇವನು ಇವತ್ತೇ ಹೋಗೋಣಾಂತ ಕರೆದುಕೊಂಡು ಬಂದ.”
“ಓ ನೀವು ಬರಬಹುದೆಂಬ ಕಲ್ಪನೆಯೇ ಇರಲಿಲ್ಲ.”
“ಈಗೇನಾಯ್ತು? ಅಮ್ಮ ಊಟ ಹಾಕಿ ಆಯ್ತು. ಮಾನಸಾಗೆ ಫೋನ್ ಮಾಡಿದ್ದೆ. ಅವಳು ನಾಲ್ಕು ಗಂಟೆಗೆ ಬರಲು ಹೇಳಿದ್ದಾಳೆ. ಹೋಗಿ ಬರೋಣ.”
“ಆಗಲಿ ಆಂಟಿ.”
“ಹೋಗು ಊಟ ಮಾಡಿ ಬಾ.”
ಅವಳು ಒಳಗೆ ಹೋಗಿ ಊಟ ಮಾಡಿದಳು. ತಾಯಿ ಯಾಕೋ ಬೇಸರದಲ್ಲಿರುವಂತೆ ಕಂಡಿತು.
“ಏನಾಯ್ತಮ್ಮ?”
“ನೀನು ಮನು ಮನೆಗೆ ಹೋಗಿ ಬಾ ಮಾತಾಡೋಣ.”
ಅವಳು ಮುಖ ತೊಳೆದು ತಾಯಿಯ ಒಂದು ಕಾಟನ್ ಸೀರೆಯುಟ್ಟು ಹೊರಗೆ ಬಂದಳು.
ಮಾನಸಾ ಮನೆ ಕಡೆ ಕಾರು ಹೊರಟಿತು. ಆರ್.ಜಿ. ರಸ್ತೆಯ ಒಂದು ಬದಿಯಲ್ಲಿ ಕಾರು ನಿಲ್ಲಿಸಿ ಕೇಳಿದ “ಹೇಳಿ ಈಗ ಎಲ್ಲಿಗೆ ಹೋಗಿದ್ರಿ?”
“ಹೇಳಿದ್ನಲ್ಲಾ………”
“ಅದು ಸುಳ್ಳೂಂತ ನಿನಗೂ ಗೊತ್ತು. ನಮಗೂ ಗೊತ್ತು” ಚಂದ್ರ ಆಂಟಿ ಹೇಳಿದರು.
ವರು ಅವರ ಮುಂದೆ ತಾನು ಇಂಟರ್‌ವ್ಯೂಗೆ ಹೋಗಿದ್ದ ವಿಚಾರ ಹೇಳಿದಳು.
“ನೀವೀಗ ಕೆಲಸ ಮಾಡುವ ಅವಶ್ಯಕತೆ ಏನಿದೆ?” ಆರ್.ಜಿ. ಧ್ವನಿ ಏರಿತು.
“ನನಗೆ ದುಡ್ಡು ಬೇಕು. ಅದಕ್ಕೆ ಕೆಲಸ ಮಾಡ್ತೀನಿ ಅದರಲ್ಲೇನು ತಪ್ಪು?” ವರು ಧ್ವನಿಯೂ ಏರಿತು.
“ಆರ್.ಜಿ. ಸುಮ್ಮನಿರು. ಅವಳಿಷ್ಟು ಅವಳ ಕೆಲಸ ಮಾಡ್ತಾಳೆ. ಅದನ್ನು ಕೇಳುವುದಕ್ಕೆ ನಾವು ಯಾರು? ಇನ್ನೂ ಟೈಂ ಇದೆಯಲ್ಲಾ…. ಅವಳು ಯೋಚಿಸಿ ತೀರ್ಮಾನ ತೆಗೆದುಕೊಳ್ತಾಳೆ.”
ಆರ್.ಜಿ. ಸುಮ್ಮನಾದ. ಅವರು ಮಾನಸ ಮನೆ ತಲುಪಿದರು. ಮಾನಸಾ ಅವರಿಗಾಗಿ ಕಾದಿದ್ದಳು. ಮೊದಲೇ “ಚಂದ್ರಾವತಿ ಆಂಟಿ ಜ್ಯೂಸ್ ಅಥವಾ ಕಾಫಿ ಕೊಡಿ. ಈಗ ತಾನೇ ಊಟ ಮಾಡಿದ್ದೇವೆ. ಏನನ್ನೂ ತಿನ್ನುವ ಸ್ಥಿತಿಯಲ್ಲಿಲ್ಲ” ಎಂದು ಹೇಳಿಬಿಟ್ಟರು. ಮಾನಸಾ ತಾಯಿ ಜ್ಯೂಸ್ ಮಾತ್ರ ಕೊಟ್ಟರು.
ನಂತರ ಚಂದ್ರಾವತಿ ಮಾನಸಾಗೆ ಹಸಿರು ಸೀರೆ, ಡ್ರೈಫ್ರೂಟ್ಸ್, ಅವಳಿಗಿಷ್ಟವಾದ ಕೆಲವು ತಿಂಡಿಗಳನ್ನು ವರು ಮೂಲಕ ಕೊಡಿಸಿದರು.
“ಆಂಟಿ ಇದೆಲ್ಲಾ ಯಾಕೆ?”
“ನಿನ್ನ ಪ್ರಶ್ನೆಗೆ ಉತ್ತರವಿಲ್ಲ. ಮಾನಸ ನಿಮ್ಮನ್ನೆಲ್ಲಾ ನಾನು ನನ್ನ ಮಕ್ಕಳೂಂತ ಭಾವಿಸಿದ್ದೇನೆ. ತಾಯಿ ಮಗಳಿಗೆ ಕೊಡುವುದು ತಪ್ಪಾ?”
ಮಾನಸ ಉತ್ತರ ಕೊಡಲಿಲ್ಲ. ಹಾಗೆ ನೋಡಿದರೆ ಅವಳಿಗೆ ಚಂದ್ರಾ ಆಂಟಿ ಜೊತೆ ಅಂತಹ ಒಡನಾಟವಿರಲಿಲ್ಲ. ಆದರೂ ಇಷ್ಟು ಪ್ರೀತಿ ತೋರಿಸುತ್ತಿದ್ದಾರಲ್ಲಾ….. ಅನ್ನಿಸಿತು.
“ತುಂಬಾ ಯೋಚಿಸಿ ತಲೆ ಕೆಡಿಸಿಕೊಳ್ಳಬೇಡ. ನಿನ್ನಿಂದ ನನಗೆ ತುಂಬಾ ಉಪಕಾರವಾಗಿದೆ. ಆದರೆ ಅದು ನಿನಗೆ ಅರ್ಥವಾಗಲ್ಲ.”
“ನಾನು ನಿಮಗೆ ಉಪಕಾರ ಮಾಡಿದ್ದೀನಾ?”
“ಹೌದು. ವರೂಂತ ಹುಡುಗಿ ನನ್ನ ಜೊತೆ ಇರುವಹಾಗೆ ಮಾಡಿದ್ದೀಯ. ನೀನು ಮೈಸೂರು ಬಿಟ್ಟಿದ್ದರಿಂದ ಅವಳು ನಮ್ಮ ಜೊತೆ ಇರುವಂತಾಯ್ತು. “
ನಾನು ನಿಮಗೆ ಥ್ಯಾಂಕ್ಸ್ ಹೇಳಬೇಕು. ನನಗೋಸ್ಕರ ಅವಳು ಮೈಸೂರಿನಲ್ಲಿ ಎಂ.ಎ.ಗೆ ಸೇರಿದ್ದಳು. ನಾನು ಎಂ.ಎ. ಬಿಟ್ಟ ನಂತರ ನೀವು ಅವಳಿಗೆ ಆಶ್ರಯ ಕೊಡದೇ ಇದ್ದಿದ್ರೆ ಅವಳಿಗೆ ತುಂಬಾ ಕಷ್ಟ ಆಗುತ್ತಿತ್ತು. ನಿಮ್ಮಿಂದ ಅವಳು ಇವತ್ತು ನೆಮ್ಮದಿಯಿಂದ ಇದ್ದಾಳೆ. ತುಂಬಾ ಥ್ಯಾಂಕ್ಸ್ ಆಂಟಿ.”
ಕೈಯಲ್ಲಿ ಪೇಪರ್ ಹಿಡಿದುಕೊಂಡು ಕುಳಿತಿದ್ದರೂ ಆರ್.ಜಿ. ಎಲ್ಲರ ಮಾತೂ ಕೇಳಿಸಿಕೊಂಡ. ಹಾಗೆಯೇ ವರು ಮಾನಸ ತಾಯಿಯ ಜೊತೆ, ಅಜ್ಜಿ-ತಾತನ ಜೊತೆ ಮಾತನಾಡುವುದನ್ನು ಗಮನಿಸಿದ. ಎಲ್ಲರೂ ಅವಳನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವಳೂ ಕೂಡ ಮನೆಯವಳಂತೆ ಓಡಾಡುತ್ತಿದ್ದಳು. ಇಂತಹ ಹುಡುಗಿ ನಮ್ಮ ಮನೆಗೆ ಬೇಕು” ಎನ್ನಿಸಿತವನಿಗೆ.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44483
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು

